ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷಮಿಸಿ! ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ

ಜಾತೀಯತೆಯೆಂಬ ಅಪ್ಪಟ ದೇಸಿ ಗ್ರಹಣ ಹಿಡಿದಿದೆ ಹಿಂದೂ ಧರ್ಮ ಎಂಬ ಪ್ರಖರ ಸೂರ್ಯನಿಗೆ!
Last Updated 20 ಜೂನ್ 2018, 17:58 IST
ಅಕ್ಷರ ಗಾತ್ರ

ಹಿಂದುತ್ವದ ಪರಿಕಲ್ಪನೆಯನ್ನು ಮೊದಲು ಜಾರಿಗೆ ತಂದವರು ವೀರ್‍ ಸಾವರ್ಕರ್. ಸರಿಸುಮಾರು ನೂರು ವರ್ಷಕ್ಕೂ ಹಿಂದೆ ಜಾರಿಗೆ ಬಂತು ಹಿಂದುತ್ವ. ಮೂಲತಃ ಇದೊಂದು ರಾಜಕೀಯ ಪರಿಕಲ್ಪನೆ. ಮುಸ್ಲಿಂ ಲೀಗ್‌ಗೂ ಕುರಾನಿಗೂ ಹೇಗೆ ನೇರ ಸಂಬಂಧವಿಲ್ಲವೋ ಹಾಗೆಯೇ ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ನೇರ ಸಂಬಂಧವಿಲ್ಲ. ಹೇಗೆ, ವಿವಿಧ ಪಂಗಡಗಳಲ್ಲಿ ಹಾಗೂ ವಿವಿಧ ಜಾತಿ–ಜನಾಂಗಗಳಲ್ಲಿ ಚದುರಿಹೋಗಿದ್ದ ಮುಸಲ್ಮಾನರನ್ನು ಮುಸ್ಲಿಂ ಲೀಗ್ ರಾಜಕೀಯವಾಗಿ ಸಂಘಟಿಸಿತೋ ಹಾಗೆಯೇ ಹಿಂದುತ್ವವೂ ಸಹ, ಭಾರತೀಯ ಜನತಾ ಪಕ್ಷವೆಂಬ ರಾಜಕೀಯ ಪಕ್ಷದ ಅಡಿಯಲ್ಲಿ ಹಿಂದೂಗಳನ್ನು ಸಂಘಟಿಸುತ್ತಿದೆ. ಸಂಘಟಿಸುವುದು ಸುಲಭವಲ್ಲ. ಭಾರತದ ಪ್ರಜೆಗಳ ನಡುವೆಯೇ ತಾರತಮ್ಯ ಎಣಿಸಬೇಕಾಗುತ್ತದೆ ಹಾಗೆ ಸಂಘಟಿಸಲು. ಎಣಿಸಿ ‘ಇತರರನ್ನು’ ಸೃಷ್ಟಿಸಬೇಕಾಗುತ್ತದೆ ‘ನಮ್ಮವರನ್ನು’ ಸಂಘಟಿಸಲಿಕ್ಕಾಗಿ.

ಕಾಫಿರರನ್ನು ಸೃಷ್ಟಿ ಮಾಡಿ, ಹೇಗೆ ಮುಸ್ಲಿಂ ಲೀಗ್ ಮುಸಲ್ಮಾನರನ್ನು ಒಂದುಗೂಡಿಸಿತೋ ಹಾಗೆಯೇ ಭಾಜಪ ಸಹ ಇತರರನ್ನು ಸೃಷ್ಟಿ ಮಾಡಿ ಹಿಂದೂಗಳನ್ನು ಸಂಘಟಿಸುತ್ತಿದೆ. ಇತರರು ಎಂದರೆ ಒಂದು ರೀತಿಯ ಭೂತವಿದ್ದಂತೆ, ಒಂದು ಅವ್ಯಕ್ತ ಹೆದರಿಕೆ. ಹೆದರಿಕೆಯನ್ನು ಮುಂದು ಮಾಡದೆ ಹಿಂದೂಗಳನ್ನು ರಾಜಕೀಯವಾಗಿ ಸಂಘಟಿಸುವುದು ಸಾಧ್ಯವಿಲ್ಲ. ಉದಾಹರಣೆಗೆ ಹೇಳುತ್ತೇನೆ ಕೇಳಿ; ಲಂಡನ್ನಿನಲ್ಲಿ ತಲೆಮರೆಸಿಕೊಂಡಿರುವ ಕೋಟ್ಯಧೀಶ ಕಳ್ಳ ನೀರವ್‍ ಮೋದಿಗೂ ಕರ್ನಾಟಕದ ಒಬ್ಬ ದರಿದ್ರ ಕಾಡುಕುರುಬನಿಗೂ ಸಂಬಂಧವಿದೆ ಎಂದು ಹೇಗೆ ಸಾಧಿಸುತ್ತೀರಿ? ಸಾಧಿಸುತ್ತದೆ ಹಿಂದುತ್ವ. ಇದೇ ಹಿಂದುತ್ವದ ಮಿತಿ. ಇರಲಿ.

ಇತರರೆಂದರೆ ಯಾರು? ಭರತಖಂಡದಿಂದಾಚೆ ಹುಟ್ಟಿದ ಧರ್ಮಗಳು ಇತರೆ ಧರ್ಮಗಳು ಹಾಗೂ ಅವನ್ನು ಪಾಲಿಸುವ ಭಾರತೀಯ ಪ್ರಜೆಗಳು ಇತರೆಯವರು ಎನ್ನುತ್ತದೆ ಹಿಂದುತ್ವ. ಈ ಪ್ರಕಾರವಾಗಿ ಜೈನರು, ಬೌದ್ಧರು, ಸಿಖ್ಖರು, ಲಿಂಗಾಯತರು, ಕಬೀರಪಂಥಿಗಳು, ಬುಡಕಟ್ಟು ಜನಾಂಗಗಳು, ಅಸ್ಪೃಶ್ಯರು ಎಲ್ಲರೂ ನಮ್ಮವರು. ಭಾರತೀಯ ಮುಸಲ್ಮಾನರು, ಭಾರತೀಯ ಪಾರಸಿಕರು, ಭಾರತೀಯ ಇಸಾಯಿಗಳು ಇತರರು. ಇತರರ ಪಟ್ಟಿ ಕ್ರಮೇಣ ಬೆಳೆಯುತ್ತ ಹೋಯಿತು. ಕಮ್ಯುನಿಸ್ಟರು, ವಿಚಾರವಾದಿಗಳು, ಹಲವು ವಿಜ್ಞಾನಿಗಳು ಸಹ ಸೇರಿಸಲ್ಪಟ್ಟರು ಈ ಪಟ್ಟಿಗೆ. ಇತ್ತೀಚೆಗೆ ಕಾಂಗ್ರೆಸ್ ಕೂಡ ಸೇರಿದೆ ಇತರರ ಪಟ್ಟಿಗೆ. ಏಕೆಂದು ಕೇಳಿದರೆ, ಅವರ ವಿಚಾರಗಳು ಪಶ್ಚಿಮದಲ್ಲಿ ಹುಟ್ಟಿದವು ಎಂದೋ, ಆ ಪಕ್ಷದ ಈ ಹಿಂದಿನ ಅಧ್ಯಕ್ಷರು ಇಟಲಿಯಲ್ಲಿ ಹುಟ್ಟಿದರು ಎಂದೋ ಉತ್ತರಗಳು ಸಿಗುತ್ತವೆ ನಮಗೆ.

ಹಿಂದುತ್ವವೆಂದರೆ ಹಿಂದೂಗಳ ಧಾರ್ಮಿಕ ಸಂಘಟನೆಯೇ ಆಗಿದೆ ಎಂದು ಅನೇಕ ಮಠಾಧಿಪತಿಗಳು ತಿಳಿಯುತ್ತಾರೆ. ಹಾಗೆ ತಿಳಿದು ಹುಮ್ಮಸ್ಸಿನಿಂದ ಹಿಂದುತ್ವದೊಟ್ಟಿಗೆ ಕೈಜೋಡಿಸುತ್ತಾರೆ. ಕೆಲವು ಸಂತರು ಹಾಗೂ ಸನ್ಯಾಸಿಗಳು ಹಿಂದುತ್ವದ ಉಗ್ರರೂಪ ಕಂಡು ಈಗೀಗ ಚಿಂತಿತರಾಗಿದ್ದಾರೆ. ಆದರೆ ಅನೇಕರು ಈಗಲೂ ಹಿಂದುತ್ವದೊಟ್ಟಿಗೆ ಕೈಜೋಡಿಸುತ್ತಿದ್ದಾರೆ. ಇರಲಿ.

ಹಿಂದೂ ಪ್ರಜೆಗಳನ್ನು ಧಾರ್ಮಿಕವಾಗಿ ಸಂಘಟಿಸುವುದು ತಪ್ಪಲ್ಲ. ಆದರೆ ‘ಇತರರನ್ನು’ ರಾಜಕೀಯವಾಗಿ ದೂರ ಇಡುವುದು ತಪ್ಪು. ಜರ್ಮನಿಯ ಹಿಟ್ಲರ್ ಹೀಗೆ ಮಾಡಿದ. ಹಾಗೂ ಭೀಕರ ರಕ್ತಪಾತಕ್ಕೆ ಕಾರಣನಾದ. ಅಥವಾ ಆನಂತರದಲ್ಲಿ ಮುಸಲ್ಮಾನ ಉಗ್ರಗಾಮಿಗಳು ಹೀಗೆ ಮಾಡಿದರು. ಇತರರೆಂಬ ಹಣೆಪಟ್ಟಿ ಅಂಟಿಸಿ, ಹಿಟ್ಲರ್, ಅರವತ್ತು ಲಕ್ಷ ಯಹೂದಿಗಳು, ಕಮ್ಯುನಿಸ್ಟರು, ಸಾಮಾಜಿಕ ಕಾರ್ಯಕರ್ತರು, ಲೇಖಕರು, ಕಲಾವಿದರನ್ನು ಕೊಲೆಗೈದ. ಭಾರತದಲ್ಲಿಯೂ ಸಹ ಇತರರ ಮೇಲಿನ ಸಿಟ್ಟನ್ನು ತಕ್ಷಣದ ರಾಜಕೀಯ ಲಾಭಕ್ಕಾಗಿ ಬೆಳೆಸುತ್ತಲೇ ಹೋದರೆ ಅಂತಹ ಪರಿಸ್ಥಿತಿ ಮರುಕಳಿಸಲಾರದು ಎಂದು ಹೇಳಲಿಕ್ಕೆ ಬಾರದು.

ಜರ್ಮನಿಯಲ್ಲಿ ನರಮೇಧ ಮೇಲೆದ್ದು ಬರಲಿಕ್ಕೆ ಎರಡು ಪ್ರಬಲ ಕಾರಣಗಳಿದ್ದವು. ಒಂದು ನಾಜಿವಾದ. ಮತ್ತೊಂದು ಯಂತ್ರನಾಗರಿಕತೆ ಅಥವಾ ಯುದ್ಧೋದ್ಯಮ. ಜರ್ಮನಿಯ ಅಂದಿನ ಕೈಗಾರಿಕೋದ್ಯಮಿಗಳು ಯುದ್ಧ ಹಾಗೂ ನರಮೇಧದಲ್ಲಿ ಲಾಭ ಕಂಡರು. ತಮ್ಮ ಕೈಗಳನ್ನು ಹೊಲಸು ಮಾಡಿಕೊಳ್ಳದೆ, ಹಿಟ್ಲರನ ಕೈಗಳಿಂದ ಕೊಲೆ ಮಾಡಿಸಿ, ದುಡ್ಡು ಮಾಡಿದರು. ಅದೃಷ್ಟವಶಾತ್ ಭಾರತದ ಪರಿಸ್ಥಿತಿ ಕೊಂಚ ಭಿನ್ನವಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಾಗಲೀ, ಸಂಘಪರಿವಾರ ಎಂಬ ಹೆಸರಿನ ಅದರ ನೂರಾರು ಸಹಸಂಘಟನೆಗಳಲ್ಲಾಗಲೀ ಅಥವಾ ಭಾಜಪದಲ್ಲಾಗಲೀ ಯಂತ್ರನಾಗರಿಕತೆಯ ಬಗ್ಗೆ ಪೂರ್ಣ ಸಹಮತವಿಲ್ಲ. ಅನೇಕರು, ಸಾಕಷ್ಟು ಪ್ರಾಮಾಣಿಕವಾಗಿಯೇ, ಯಂತ್ರ ನಾಗರಿಕತೆಯನ್ನು ವಿರೋಧಿಸುತ್ತಾರೆ. ಪರಿಸರ, ಪ್ರಕೃತಿ ಹಾಗೂ ಗ್ರಾಮವ್ಯವಸ್ಥೆಯ ಪರವಾಗಿದ್ದಾರೆ ಅನೇಕರು.

ಇದು, ಮತ್ತು ಇಂತಹದ್ದೇ ಆದ ಇನ್ನೂ ಅನೇಕ ಕಾರಣಗಳಿಗಾಗಿ ಹಿಂದುತ್ವವಾದಿಗಳ ನಡುವೆ, ನಿಧಾನವಾಗಿ ಆದರೆ ನಿಖರವಾಗಿ ಎರಡು ಬಣಗಳು ಮೂಡುತ್ತಿವೆ. ಒಂದನ್ನು ನಾನು ಮೋದಿವಾದ ಎಂದು ಕರೆಯಲು ಬಯಸುತ್ತೇನೆ. ಅದು ಉಗ್ರಹಿಂದುತ್ವವಾದ. ಮತ್ತೊಂದು ಬಣವನ್ನು ಸೌಮ್ಯಹಿಂದುತ್ವವಾದ ಎಂದು ಕರೆಯಲು ಬಯಸುತ್ತೇನೆ. ಮೋದಿವಾದ ನಾಜಿವಾದಕ್ಕೆ ಹತ್ತಿರವಿದೆ. ನಾಜಿವಾದದ ಎರಡೂ ಆಯಾಮಗಳಿವೆ ಮೋದಿವಾದಕ್ಕೆ. ಇತ್ತ ಯಂತ್ರನಾಗರಿಕತೆಯ ಬೆಂಬಲವೂ ಇದೆ ಮೋದಿವಾದಕ್ಕೆ. ಅತ್ತ ಉಗ್ರ ಹಿಂದುತ್ವವಾದಿಯೂ ಆಗಿದೆ ಅದು. ಮೋದಿವಾದ ದೊಟ್ಟಿಗೆ ಕೈಜೋಡಿಸಿ ದುಡ್ಡು ಮಾಡಲು ಆಸಕ್ತರಾದ ಉದ್ಯಮಿಗಳ ಒಂದು ದಂಡೇ ಇದೆ ಮೋದೀಜಿಯವರೊಟ್ಟಿಗೆ. ತಮ್ಮ ಕೈಗಳನ್ನು ಹೊಲಸು ಮಾಡಿಕೊಳ್ಳದೆ ಇತರರು ಆಡುವ ರಕ್ತದೋಕುಳಿಯಿಂದ ದುಡ್ಡು ಮಾಡಬಯಸುತ್ತಾರೆ ಈ ಉದ್ದಿಮೆಪತಿಗಳು. ಇತ್ತ ಉಗ್ರವಾಗಿ ಕುಣಿದಾಡಬಲ್ಲ ‘ಗೆಸ್ಟಪೊ’ ಮಾದರಿಯ ಗ್ಯಾಂಗು ಕೂಡ ಮೋದೀಜಿಯವರ ಜೊತೆಗಿದೆ. ಉಗ್ರಹಿಂದುತ್ವವು ನಮ್ಮ ನಡುವೆ ಹೇಗೆ ಬೇರೂರತೊಡಗಿದೆ ಎಂಬುದಕ್ಕೆ ಒಂದು ಉದಾಹರಣೆ ನೀಡಿ ಈ ಚರ್ಚೆ ಮುಂದುವರಿಸುತ್ತೇನೆ.

ಇದು ಕನ್ನಡದ್ದೇ ಉದಾಹರಣೆ. ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರದಿಂದ ಬಸನಗೌಡ ಪಾಟೀಲ ಯತ್ನಾಳ್ ಎಂಬ ಜನಪ್ರತಿನಿಧಿಯೊಬ್ಬರು ಆಯ್ಕೆಯಾದರು. ಅವರು, ‘ನಾನು ಹಿಂದೂ! ಹಾಗಾಗಿ ಮುಸಲ್ಮಾನ ಪ್ರಜೆಗಳನ್ನು ಸಲಹುವುದಿಲ್ಲ!’ ಎಂದು ಹೇಳಿಕೆ ನೀಡಿದರು. ಈ ದೇಶದ ಅದೃಷ್ಟವೆಂದರೆ ಹೇಳಿಕೆಯನ್ನು ವ್ಯಾಪಕವಾಗಿ ಖಂಡಿಸಲಾಯಿತು. ಇರಲಿ. ಯತ್ನಾಳರು ವೈಯಕ್ತಿಕವಾಗಿ ಬಸವತತ್ವದ ಅನುಯಾಯಿಗಳು. ಅತ್ತ ತಾತ್ವಿಕವಾಗಿ ಅವರೊಬ್ಬ ಹಿಂದುತ್ವವಾದಿಯಾದ್ದರಿಂದ ರಾಮತತ್ವದ ಅನುಯಾಯಿಗಳು. ಯತ್ನಾಳರು ರಾಮತತ್ವ ಹಾಗೂ ಬಸವತತ್ವ ಎರಡನ್ನೂ ದುರ್ಬಳಕೆ ಮಾಡಿದ್ದಾರೆ. ಬಸವತತ್ವ ದಿಂದಲೇ ಚರ್ಚೆ ಶುರುಮಾಡುತ್ತೇನೆ.

ಬಸವತತ್ವಕ್ಕೆ ಮುಸಲ್ಮಾನರು ಹೊಸಬರೇನಲ್ಲ. ಮಧ್ಯಯುಗದಲ್ಲಿ ಮುಸಲ್ಮಾನರು ಆಳರಸರಾಗಿದ್ದ ಕಾಲದಿಂದಲೂ ಉತ್ತರ ಕರ್ನಾಟಕದ ಶರಣರು ಮುಸಲ್ಮಾನರೊಟ್ಟಿಗೆ ಸಹಬಾಳ್ವೆ ಮಾಡಿಕೊಂಡು ಬಂದಿದ್ದಾರೆ, ಸುಲ್ತಾನ ಕೆಟ್ಟವನಾಗಿದ್ದ ಸಂದರ್ಭಗಳಲ್ಲಿ ಸುಲ್ತಾನನಿಂದಾಗಿ ಸಾಕಷ್ಟು ಕಿರಿಕಿರಿ ಅನುಭವಿಸಿದ್ದಾರೆ ಕೂಡ. ಇದು ಈ ಸಂಬಂಧದ ಒಂದು ಮುಖವಾದರೆ, ಅತ್ತ ಕಾಯಕಜೀವಿಗಳಾಗಿ ಶರಣರು ಹಾಗೂ ಮುಸಲ್ಮಾನರು ಇಬ್ಬರೂ ಸಂತೋಷದಿಂದ ಸಹಬಾಳ್ವೆ ಮಾಡಿಕೊಂಡು ಬಂದಿದ್ದಾರೆ. ಉತ್ತರ ಕರ್ನಾಟಕದ ಒಬ್ಬ ರೈತ, ಅವನು ಸಾಬನೇ ಶರಣನೇ ಎಂದು ಹೇಳಲಿಕ್ಕೇ ಬರುವುದಿಲ್ಲ. ಅಷ್ಟರಮಟ್ಟಿಗೆ ಬೆರೆತುಹೋಗಿದ್ದಾರೆ ಅವರು.

ಇಸ್ಲಾಂ ಹಾಗೂ ಬಸವತತ್ವ ಕಾಯಕತತ್ವಗಳಾಗಿ ಪರಸ್ಪರರನ್ನು ಆಕರ್ಷಿಸಿವೆ ಹಾಗೂ ಪ್ರಭಾವಿಸಿವೆ. ಸಾವಳಗಿ ಶಿವಲಿಂಗನಿರಲಿ, ಕೊಡೇಕಲ್ಲಿನ ಬಸವನಿರಲಿ, ಸೂಫಿ-ಬಸವತತ್ವ ಸಮನ್ವಯದ ಸಂಕೇತಗಳು. ಅಲ್ಲಮನೇ ಅಲ್ಲಾಹು ಅಲ್ಲಾಹುವೇ ಅಲ್ಲಮ ಎಂದು ನಂಬುವ ಜನರು ಇಂದಿಗೂ ಆ ಭಾಗದಲ್ಲಿ ದಂಡಿಯಾಗಿದ್ದಾರೆ.

ಈಗ ಕಾಲ ಬದಲಾಗಿದೆ. ಪಾತ್ರಗಳು ಬದಲಾಗಿವೆ. ಬಿಜಾಪುರ ವಿಜಯಪುರ ಆಯಿತು. ಬಸವತತ್ವ ಅನುಯಾಯಿ ಯತ್ನಾಳರು ವಿಜಯಪುರದ ಸುಲ್ತಾನರಾದರು. ಶರಣ ಯತ್ನಾಳರು ಮಧ್ಯಯುಗದ ಸೂಫಿಸಂತರು ಮಾಡಿದ್ದನ್ನೇ ತಾವೂ ಮಾಡಬಹುದಿತ್ತು. ಹಿಂದಿನ ಸೂಫಿ ಸಂತರು ಸುಲ್ತಾನನ ಕೆಂಗಣ್ಣನ್ನೂ ಲೆಕ್ಕಿಸದೆ ಶರಣರೊಟ್ಟಿಗೆ ಸಂಗ ಮಾಡಿದ್ದರು. ಆದರೆ ಯತ್ನಾಳರು ಕೆಟ್ಟಸುಲ್ತಾನನಂತೆ ಆಡಿದ್ದಾರೆ. ಅವರ ಸಹೋದ್ಯೋಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೂ ಸಹ ಕಾಯಕ ಪರಂಪರೆಯ ಸನ್ಯಾಸಿ ಎಂದು ಕೇಳಿದ್ದೇನೆ. ಅವರೂ ಕೆಟ್ಟ ಸುಲ್ತಾನನಂತೆ ಆಡುತ್ತಿದ್ದಾರೆ. ಇವು ಉಗ್ರಹಿಂದುತ್ವದ ಎರಡು ಮಾದರಿಗಳು. ಭಾರತ ದೇಶವು ಮತ್ತೊಮ್ಮೆ ತುಂಡಾದರೂ ಪರವಾಗಿಲ್ಲ, ಮತ್ತೊಮ್ಮೆ ಮತೀಯ ಗಲಭೆಗಳು ಇಲ್ಲಿ ನಡೆದರೂ ಪರವಾಗಿಲ್ಲ, ಚುನಾವಣೆಗಳಲ್ಲಿ ಸೀಟು ಗೆದ್ದರೆ ಸಾಕು ಎನ್ನುತ್ತದೆ ಉಗ್ರಹಿಂದುತ್ವ. ಬಸವತತ್ವವು ಹಿಂದೂ ಧರ್ಮವನ್ನು ಸಂಘಟಿಸಲಿಲ್ಲ ಅಥವಾ ವಿಘಟಿಸಲೂ ಇಲ್ಲ. ಕಾಯಕ ಜೀವಿಗಳನ್ನು ಸಂಘಟಿಸಿತು ಅದು. ಜೊತೆಗೆ, ಹಿಂದೂ ಧರ್ಮದ ವಿಮರ್ಶೆ ಮಾಡಿತು. ಇಸ್ಲಾಂ ಕೂಡ ಭಾರತದ ಕಾಯಕಜೀವಿಗಳನ್ನು ಸಂಘಟಿಸಿತು. ಭಾರತೀಯ ಇಸ್ಲಾಮಿನ ಆರಂಭಿಕ ಘಟ್ಟದಲ್ಲಿ ಹಲವು ಶೂದ್ರವೃತ್ತಿಗಳ ಜನರು ಸ್ವಇಚ್ಛೆಯಿಂದಲೇ ಆ ಧರ್ಮವನ್ನು ಸ್ವೀಕರಿಸಿದರು. ಜಾತಿ ಪದ್ಧತಿಯಿಂದ ರೋಸಿಹೋದ ಅಂಬೇಡ್ಕರ್, ಹಿಂದೂ ಧರ್ಮವನ್ನು ತ್ಯಜಿಸಿದಂತೆಯೇ ಅವರೂ ಮಾಡಿದರು.

ಬಲವಂತದ ಮತಾಂತರಗಳು ಕೂಡಾ ನಡೆದಿವೆ ಮಧ್ಯಯುಗದಲ್ಲಿ. ಅದು ನಡೆದದ್ದು ನಂತರದಲ್ಲಿ. ಪ್ರಭುತ್ವದ ಬೆಂಬಲ ಪಡೆದು ಮುಸಲ್ಮಾನ ದೊರೆಗಳು ನಡೆಸಿದ ಅಮಾನುಷ ಕೃತ್ಯಗಳು ಅವು. ಬಲವಂತದ ಮತಾಂತರವನ್ನು ಭಾರತದ ಕಾನೂನು ಬೆಂಬಲಿಸುವುದಿಲ್ಲ. ಭಾರತೀಯ ನಾಗರಿಕರೂ ಬೆಂಬಲಿಸುವುದಿಲ್ಲ.

ಹಿಂದೂ ಧರ್ಮವು ಗ್ರಹಣ ಹಿಡಿದ ಸೂರ್ಯನಂತಿದೆ. ಗ್ರಹಣ ಬಿಡಿಸಿ ಅದು ಪ್ರಖರವಾಗಿ ಬೆಳಗುವಂತೆ ಮಾಡಬೇಕಿದೆ ನಾವು. ಆದರೆ ಹಿಂದೂ ಧರ್ಮಕ್ಕೆ ಹಿಡಿದಿರುವುದು ಮುಸಲ್ಮಾನ ಗ್ರಹಣವಲ್ಲ ಅಥವಾ ಕ್ರೈಸ್ತ ಗ್ರಹಣವೂ ಅಲ್ಲ. ಜಾತೀಯತೆಯೆಂಬ ಅಪ್ಪಟ ದೇಸಿ ಗ್ರಹಣ ಹಿಡಿದಿದೆ ಹಿಂದೂಧರ್ಮ ಎಂಬ ಪ್ರಖರ ಸೂರ್ಯನಿಗೆ! ಬಸವತತ್ವದ ಅನುಯಾಯಿ ಯತ್ನಾಳರಿಗೆ ಇದು ಸುಲಭದಲ್ಲಿ ಅರ್ಥವಾಗಬೇಕಿತ್ತು. ಏಕೆಂದರೆ ಬಸವತತ್ವದ ಸಾರವೇ ಇದು. ಜಾತೀಯತೆಯನ್ನು ಧಿಕ್ಕರಿಸಿದ ಬಸವ, ನಾನಕ ಕಬೀರ ಅಥವಾ ರವಿದಾಸ ಪರಂಪರೆಗಳು ಹಿಂದೂ ಧರ್ಮಕ್ಕೆ ಹಿಡಿದಿರುವ ಜಾತಿ ಗ್ರಹಣವನ್ನು ಬಿಡಿಸಲು ಹೆಣಗಿದ ಪರಂಪರೆಗಳೇ ಸರಿ. ಹಾಗೆಂದೇ ಯತ್ನಾಳರ ನಿಲುವು ಅಕ್ಷಮ್ಯ ಅಪರಾಧವಾಗಿದೆ.

ಈಗ ರಾಮತತ್ವಕ್ಕೆ ಬರೋಣ. ರಾಮತತ್ವವು ಮೂಲತಃ ಒಂದು ಆಡಳಿತತತ್ವ. ರಾಮರಾಜ್ಯವೆಂಬುದು ನೈತಿಕ ಆಡಳಿತಕ್ಕೊಂದು ಪ್ರಣಾಳಿಕೆ. ರಾಮಾಯಣದಲ್ಲಿ ಬರುವ ಅಗಸನ ಪ್ರಕರಣವನ್ನೇ ತೆಗೆದುಕೊಳ್ಳಿ. ಅಗಸ ಕುಡಿದು ತಪ್ಪು ಮಾಡಿದ. ಮಡದಿಯನ್ನು ಬಡಿದು ತಪ್ಪು ಮಾಡಿದ. ರಾಜನ ಬಗ್ಗೆ ಹಾಗೂ ರಾಣಿಯ ಬಗ್ಗೆ ಸಲ್ಲದ ಮಾತನ್ನಾಡಿ ತಪ್ಪು ಮಾಡಿದ. ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ರಾಷ್ಟ್ರದ್ರೋಹ ಮಾಡಿದ ಅಗಸ. ಆದರೆ ರಾಮ ಆತನನ್ನು ದಂಡಿಸಲಿಲ್ಲ. ತನ್ನನ್ನು ಹಾಗೂ ತನ್ನ ಪತ್ನಿಯನ್ನು ದಂಡಿಸಿಕೊಂಡ. ತಾನು ನೋಯುವ ಮೂಲಕ ಇತರರ ಹೃದಯ ಪರಿವರ್ತನೆ ಮಾಡಿದ ರಾಮ.

ಹಿಂದುತ್ವವು ಮೃದುವಾಗಬೇಕು. ನಿಜಕ್ಕೂ ರಾಮತತ್ವದ ಅನುಯಾಯಿಯಾದರೆ ಅದು ಇತರರ ಹೃದಯ ಪರಿವರ್ತನೆ ಮಾಡುವ ಮೂಲಕ ಇತರರನ್ನು ನಮ್ಮವರನ್ನಾಗಿಸಬೇಕು. ಅದುವೆ ಧರ್ಮಮಾರ್ಗ! ಭಾರತದ ಬಹುಸಂಖ್ಯಾತ ಮುಸಲ್ಮಾನರು, ಬಹುಸಂಖ್ಯಾತ ಹಿಂದೂಗಳು, ಬಹುಸಂಖ್ಯಾತ ಕ್ರೈಸ್ತರು ಕಾಯಕಜೀವಿಗಳು. ಅವರೆಲ್ಲರೂ ಅಷ್ಟಿಷ್ಟು ಕುಡಿಯುತ್ತ, ಅಷ್ಟಿಷ್ಟು ಬಡಿಯುತ್ತ, ಅಲ್ಲಲ್ಲಿ ಲಂಚ ಕೊಡುತ್ತ, ಚಾಪೆಯ ಕೆಳಗೆ ನುಸುಳುತ್ತ, ಹೇಗೋ ಜೀವಿಸುತ್ತಿರುವ ಅಗಸರು. ಉಗ್ರಹಿಂದುತ್ವವು ಅವರನ್ನೆಲ್ಲ ಇತರರನ್ನಾಗಿ ಮಾಡುತ್ತಿದೆ. ಅವರೆಲ್ಲರೂ ಪರಸ್ಪರ ದ್ವೇಷಿಸುವಂತೆ ಪ್ರಚೋದಿಸುತ್ತಿದೆ. ಆಡಳಿತ ಪಕ್ಷವೊಂದು ಹೀಗೆ ಮಾಡಲಾದೀತೆ?

ಈ ಎಲ್ಲ ಕಾರಣಗಳಿಗಾಗಿ ಉಗ್ರ ಹಿಂದುತ್ವವನ್ನು ತಿರಸ್ಕರಿಸಬೇಕಿದೆ ನಾವು. ಮೃದು ಹಿಂದುತ್ವವಾದಿಗಳನ್ನು ಮುಖ್ಯವಾಹಿನಿಗೆ ತರಬೇಕಿದೆ. ಅವರು ಹೇಳುತ್ತಿರುವ ಮಾತಿನಲ್ಲಿ ಒಂದೊಮ್ಮೆ ಸತ್ಯವಿದ್ದರೆ ಸ್ವೀಕರಿಸಬೇಕಿದೆ ನಾವು. ಅವರೊಟ್ಟಿಗೆ ನಾವೂ ಸಹ, ಕೊಂಚ ಬದಲಾಗಬೇಕಿದೆ. ಭಾರತವು ಭಾರತವಾಗಿ ಉಳಿಯಲಿಕ್ಕಿರುವ ಮಾರ್ಗ ಇದೊಂದೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT