ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓರಿಯಂಟಲ್’

ವಿನ್ಯಾಸದ ಹೊಸ ಭಾಷ್ಯ
Last Updated 12 ಮೇ 2016, 19:54 IST
ಅಕ್ಷರ ಗಾತ್ರ

ಪೂರ್ವ ಏಷ್ಯಾ ಮೂಲದ ಪುರಾತನ ವಿನ್ಯಾಸದ ಕೆಲವು ಅಂಶಗಳು ಇಂದಿಗೂ ಚಾಲ್ತಿಯಲ್ಲಿವೆ. ಅವೇ ‘ಓರಿಯಂಟಲ್ ಡಿಸೈನ್’ ಎಂಬ ಪರಿಕಲ್ಪನೆಯಲ್ಲಿ ಮೆರುಗು ಪಡೆದುಕೊಳ್ಳುತ್ತಿವೆ. ತಮ್ಮ ಮನೆಗೆ ವಿಶೇಷ ಲುಕ್ ಕೊಡಲು ಹಂಬಲಿಸುವವರಿಗೆ ಇದು ವಿನೂತನ ಪ್ರಯೋಗವಾಗಿಯೂ ಕಾಣುತ್ತಿದೆ. ಈ ಓರಿಯಂಟಲ್ ವಿನ್ಯಾಸದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

ವಿಶ್ರಾಂತಿ ನೀಡುವಂಥ, ನೆಮ್ಮದಿ ಆವರಿಸುವಂಥ ಪ್ರಶಾಂತ ಸ್ಥಳದಲ್ಲಿ ನಾವಿರಬೇಕು ಎಂದು ಅನ್ನಿಸುವುದು ಸಹಜವೇ. ಆದರೆ ನಾವಿರುವ ಮನೆಯನ್ನೇ ಹಾಗೆ ಅನ್ನಿಸುವಂತೆ ಮಾಡಿಕೊಳ್ಳುವುದೂ ನಮ್ಮ ಕೈಯಲ್ಲೇ ಇದೆ. 

ಇತ್ತೀಚೆಗೆ ‘ಓರಿಯಂಟಲ್’ (ಪೌರಸ್ತ್ಯ), ಈ ರೀತಿ ಭಾವ ತರುವ ವಿನ್ಯಾಸವಾಗಿ ಪ್ರಸಿದ್ಧಿ ಹೊಂದುತ್ತಿದೆ. ಓರಿಯಂಟಲ್ ಮೂಲತಃ ಜಪಾನ್, ಚೀನಾ ದೇಶದ ವಿನ್ಯಾಸ ಶೈಲಿ ಎನ್ನಬಹುದು. ಅಂದ ಹಾಗೆ ಇದು ತೀರಾ ಇತ್ತೀಚಿನ ಪರಿಕಲ್ಪನೆಏನಲ್ಲ. ಬ್ರಿಟಿಷರ ಕಾಲದಿಂದಲೇ ಭಾರತೀಯ ಮನೆಗಳಲ್ಲಿ ಈ ವಿನ್ಯಾಸ ಪ್ರಸಿದ್ಧಿ ಪಡೆದಿತ್ತು. 

ಮನೆಯ ವಿನ್ಯಾಸ ಪ್ರಕೃತಿಯೊಂದಿಗೆ ಮಿಳಿತವಾಗಬೇಕು ಎನ್ನುವುದು ಓರಿಯಂಟಲ್ ವಿನ್ಯಾಸದ ಮೂಲ ಮಂತ್ರ. ಆದ್ದರಿಂದ  ವಿನ್ಯಾಸ ಆದಷ್ಟು ನೈಸರ್ಗಿಕವಾಗಿರಬೇಕು. ಕಿಟಕಿಗಳಿಗೆ ಬಿದಿರಿನ ಪರದೆಗಳು, ಕತ್ತಾಳೆ ಗಿಡದಿಂದ ತಯಾರಿಸಿದ ನೆಲ ಹಾಸುಗಳು, ಮರದ ಫ್ಲೋರಿಂಗ್, ಕಲ್ಲಿನ ಅಲಂಕಾರ ಪರಿಕರಗಳು ಇವುಗಳ ಬಳಕೆ ಓರಿಯಂಟಲ್ ವಿನ್ಯಾಸದ ಪ್ರಮುಖ ಅಂಶವಾಗುತ್ತವೆ.

ತುಂಬಾ ದೊಡ್ಡ ದೊಡ್ಡ ಪೀಠೋಪಕರಣಗಳ ಬದಲು ತೆಳು ಗೆರೆಗಳು ಅಥವಾ ಕೆತ್ತನೆಗಳನ್ನು ಒಳಗೊಂಡ ಸಣ್ಣ ಪುಟ್ಟ ಪೀಠೋಪಕರಣಗಳು ಈ ವಿನ್ಯಾಸದ ಮತ್ತೊಂದು ಅಂಶ. ಪೀಠೋಪಕರಣಗಳ ಎತ್ತರವೂ ಕಡಿಮೆಯಿರಬೇಕು.

ಈ ವಿನ್ಯಾಸದಲ್ಲಿ ಮನೆಗೆ ಉಪಯೋಗಿಸುವ ಬಣ್ಣದ ಪಾತ್ರವೂ ಮುಖ್ಯ ಎನ್ನುತ್ತಾರೆ ಯುನಿಶೈರ್‌ನ ವಾಸ್ತು ವಿನ್ಯಾಸಕರಾದ ಟೀನಾ ಶ್ರೀಚಾಂದ್ ಮೆಂಡಾ.
ಅವರ ಪ್ರಕಾರ, ‘ವಿನ್ಯಾಸದಲ್ಲಿ ಬಣ್ಣ ಮುಖ್ಯ.

ಮನೆಗೆ ಮಧ್ಯಮ ವರ್ಗದ ಬಣ್ಣಗಳ ಬಳಕೆ ಸ್ಪಂದನಶೀಲ ಹಾಗೂ ಶ್ರೀಮಂತ ನೋಟ ನೀಡುತ್ತದೆ. ಮನೆ ಶಾಂತವಾಗಿರುವ ಜೊತೆ ಪ್ರಕೃತಿ ಜೊತೆ ಬೆರೆಯಬೇಕು. ಅದು ಚೆಲ್ಲಾಪಿಲ್ಲಿ ಎನಿಸಬಾರದು. ಪ್ರಶಾಂತ ವಾತಾವರಣ ಸೃಷ್ಟಿಸಲು ವಿನ್ಯಾಸ
ಪೂರಕವಾಗಿರಬೇಕು’.

ನಿರಾಳ ವಾತಾವರಣಕ್ಕೆ ಅಗತ್ಯವಾದ  ಬಣ್ಣಗಳ ಆಯ್ಕೆ ಮಾಡುವ ಬಗ್ಗೆ ಕಾಸಾ ಇಂಟೀರಿಯೊದ ಸಂಸ್ಥಾಪಕ ಸಾಗರ್ ದತ್ತ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ...

‘ಮಧ್ಯಮ ರೀತಿ ಬಣ್ಣಗಳನ್ನು ಬಳಸುವುದು ಒಳ್ಳೆಯದು. ಚೇತೋಹಾರಿ ತಿಳಿ ಬಣ್ಣಗಳನ್ನು, ಅಂದರೆ ಕ್ರೀಮ್, ತಿಳಿ ನೀಲಿ ಮತ್ತು ಬೂದು ಬಣ್ಣದೊಂದಿಗೆ ಚೆರ್ರಿಯ ತಿಳಿ ಗುಲಾಬಿ, ತಿಳಿ ಕೆಂಪು ಮತ್ತು ತಿಳಿ ನೇರಳೆ ಬಣ್ಣ ಬಳಸುವುದು ಓರಿಯಂಟಲ್‌ ವಿನ್ಯಾಸದ ಶೈಲಿ. ಇದರೊಂದಿಗೆ ಬೋಲ್ಡ್ ಎನಿಸುವ ಬಣ್ಣಗಳನ್ನೂ ಬಳಸುತ್ತಾರೆ. ಉದಾಹರಣೆಗೆ– ಕೆಂಪು ಬಣ್ಣವನ್ನು ಶುಭ ಸೂಚಕವಾಗಿ ಬಳಸುತ್ತಾರೆ’.

ಪೂರ್ಣ ಮನೆಯನ್ನು ಪೌರಸ್ತ್ಯ ವಿನ್ಯಾಸ ಮಾಡುವ ಬದಲು ಕೆಲವೇ ಅಂಶಗಳನ್ನೂ ಅಳವಡಿಸಿಕೊಳ್ಳಬಹುದು.  ಅದಕ್ಕೆ ಸಾಕಷ್ಟು ಆಯ್ಕೆಗಳೂ ಇವೆ. ಪೇಪರ್‌ ಲಾಟೀನುಗಳು, ಜಪಾನೀ ಅಥವಾ ಬಾಲಿನೀ ಶೈಲಿಯ ಕ್ಯಾಂಡಲ್ ಸ್ಟ್ಯಾಂಡ್‌ಗಳು, ರೇಷ್ಮೆಯ ಅಂಚಿನ ಭಿತ್ತಿ ಚಿತ್ರಗಳು, ಪೇಪರ್‌ ಲ್ಯಾಂಪ್ ಶೇಡ್‌ಗಳನ್ನು ಬಳಸಬಹುದು. ಇವುಗಳ ಜೊತೆ ಚಿಕ್ಕ ಪುಟ್ಟ ಕೆತ್ತನೆಗಳ ಟೇಬಲ್‌ಗಳು, ಸೈಡ್‌ ಬೋರ್ಡ್‌ಗಳು, ಅಲ್ಮೆರಾಗಳನ್ನು ಇಡಬಹುದು.

ಚೀನಾ ಶೈಲಿಯ ವಾಸ್‌ಗಳು, ಬಣ್ಣ ಲೇಪಿತ ಫ್ಯಾನ್‌ಗಳು, ಚೀನಾ ಲಾಟೀನುಗಳು, ಜಪಾನೀ ಟೀ ಸೆಟ್‌, ಶೋಜಿ ಸ್ಕ್ರೀನ್‌ಗಳು ವಿನ್ಯಾಸಕ್ಕೆ ಹೇಳಿ ಮಾಡಿಸಿದವು. ಮನೆಗೆ ಅಗಲ ಬಾಗಿಲುಗಳ ಬದಲು ಪಾರದರ್ಶಕ ಸ್ಲೈಡಿಂಗ್ ಗೋಡೆಗಳನ್ನು ನಿರ್ಮಿಸುವುದು ವಿನ್ಯಾಸದ ಅಂಶವಾಗಿದೆ.

ಈಗಂತೂ ಏಷ್ಯನ್ ಥೀಮ್‌ಗಳೆಂಬ ಹಣೆಪಟ್ಟಿಯಲ್ಲೇ ಸಾಕಷ್ಟು ಪೀಠೋಪಕರಣಗಳು ಲಭ್ಯವಿವೆ ಎನ್ನುತ್ತಾರೆ ಹಾರ್ಡ್‌ವೇರ್ ರಿನೈಸನ್ಸ್‌ನ ಸಂಸ್ಥಾಪಕರಾದ ಅನಘಾ ದಾಂಡೇಕರ್.

‘ಚೈನೋಸೆರಿ’ (ಚೀನಾದ, ಅದರಲ್ಲೂ 18ನೇ ಶತಮಾನದಲ್ಲಿ ಪಾಶ್ಚಾತ್ಯ ಕಲೆ, ವಿನ್ಯಾಸ, ವಾಸ್ತುಶಿಲ್ಪವನ್ನು ಹೊಂದಿದ ಅಂಶಗಳು) ಭಿತ್ತಿ ಚಿತ್ರಗಳೂ ಈ ಶೈಲಿ ಬಿಂಬಿಸಬಲ್ಲವು’ ಎಂದು ಉದಾಹರಿಸುತ್ತಾರೆ ಹೌಸ್‌ ಆಫ್‌ ಡಿಸೈನ್‌ ಎಲ್‌ಎಲ್‌ಪಿಯ ಪ್ರಮುಖ ವಿನ್ಯಾಸಗಾರ ಪಾರುಲ್ ಮಹಾಜನ್.

ಮನೆಯಲ್ಲಿ ಉತ್ಸಾಹ ಮೂಡಿಸುವ ಇನ್ನೂಂದು ಪ್ರಮುಖ ವಿಷಯ ಎಂದರೆ ಬೆಳಕು ಹಾಗೂ ಸ್ಥಳದ ಲಭ್ಯತೆ. ಇದರೊಂದಿಗೆ  ಓರಿಯಂಟಲ್ ಶೈಲಿಯ ಮತ್ತೊಂದು ವಿಭಾಗ, ನೀರಿನ ಕುರಿತೂ ಹೇಳಬೇಕು. ಮೊದಲೇ ಹೇಳಿದಂತೆ ವಿನ್ಯಾಸ ನೈಸರ್ಗಿಕ ಅಂಶಗಳನ್ನು ಒಳಗೊಂಡಿರಬೇಕಾದ್ದರಿಂದ ಇದರಲ್ಲಿ ನೀರು ಕೂಡ ಸೇರುತ್ತದೆ.

ಈ ವಿನ್ಯಾಸದಲ್ಲಿ ಫೆಂಗ್‌ಶ್ಯು ಪಾಲೂ ಇದೆ. ಫೆಂಗ್‌ಶ್ಯು ಪ್ರಕಾರ ಹರಿಯುವ ನೀರಿನ ಶಬ್ದ ಪ್ರಶಾಂತ ಹಾಗೂ ಧನಾತ್ಮಕ ವಾತಾವರಣ ಸೃಷ್ಟಿಸಬಲ್ಲದು. ಆದ್ದರಿಂದ ಒಳಾಂಗಣ  ಗಾರ್ಡನ್ ಅಥವಾ ಮನೆಯೊಳಗೆ ನೀರಿನ ಚಿಲುಮೆ ಸೃಷ್ಟಿಸುವುದು ವಿನ್ಯಾಸ ಹಾಗೂ ನೆಮ್ಮದಿ ಎರಡೂ ದೃಷ್ಟಿಯಿಂದ ಉತ್ತಮ.

ಇತ್ತೀಚೆಗೆ ಫೆಂಗ್‌ಶ್ಯೂ ವಿನ್ಯಾಸವಾಗಿ ಮನೆಯೊಳಗೆ ಬುದ್ಧನ ಪ್ರತಿಮೆ ಇಡುವುದೂ ಚಾಲ್ತಿಯಲ್ಲಿದೆ. ಇದನ್ನೂ ಅನುಸರಿಸಬಹುದು. ಈಗ ಓರಿಯಂಟಲ್ ಛಾಪು ಹೊಂದಿರುವ ಬೆಡ್‌ಶೀಟ್‌ಗಳು, ದಿಂಬಿನ ಕವರ್‌ಗಳು, ಮೆತ್ತೆಗಳು, ಕರ್ಟೇನ್‌ಗಳು, ಟವೆಲ್‌, ರಗ್, ಕುಶನ್‌ಗಳು, ಫುಟಾನ್ (ನೆಲಹಾಸು)ಗಳೂ ಲಭ್ಯವಿವೆ.

ಇಂಥ ಸುಲಭ ದಾರಿಗಳನ್ನು ಅನುಸರಿಸಿದರೆ ಜೇಬಿಗೆ ಕತ್ತರಿ ಹಾಕದೇ ಒತ್ತಡವನ್ನು  ಗಡಿಪಾರು ಮಾಡಬಲ್ಲ ವಾತಾವರಣವನ್ನು ಮನೆಯಲ್ಲಿ ಮೂಡಿಸಿಕೊಳ್ಳಲು ಸಾಧ್ಯವಿದೆ. ಜೊತೆಗೆ ವಿಶೇಷ ವಿನ್ಯಾಸ ಮಾಡಿಸಿದ ಖುಷಿಯೂ ತುಂಬಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT