ಕಾವೇರಿ ಕೊಳವೆಯಲ್ಲಿ ಕೊಳಚೆ ನೀರು

ಭಾನುವಾರ, ಏಪ್ರಿಲ್ 21, 2019
26 °C

ಕಾವೇರಿ ಕೊಳವೆಯಲ್ಲಿ ಕೊಳಚೆ ನೀರು

Published:
Updated:

ಬೆಂಗಳೂರು: ಬಾಣಸವಾಡಿ ಸಮೀಪದ ಒಎಂಬಿಆರ್‌ ಬಡಾವಣೆಯ ಕಾವೇರಿ ನೀರು ಪೂರೈಕೆಯ ಕೊಳವೆಗಳಲ್ಲಿ 20 ದಿನಗಳಿಂದ ಕೊಳಚೆ ಮಿಶ್ರಿತ ನೀರು ಸರಬರಾಜು ಆಗುತ್ತಿದೆ. 

ಸರಿಸುಮಾರು 500 ಮನೆಗಳಿಗೆ ಕಲುಷಿತ ನೀರು ಸರಬರಾಜು ಆಗುತ್ತಿದ್ದರೂ, ನೀರಿನ ಕೊಳವೆ ಎಲ್ಲಿ ಒಡೆದಿದೆ ಎಂದು ಕಂಡುಹಿಡಿದು, ಅದನ್ನು ಸರಿಪಡಿಸಲು ಜಲಮಂಡಳಿಗೆ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಈ ಸಮಸ್ಯೆ ತಲೆದೊರಿದ ಬಳಿಕ ಟ್ಯಾಂಕರ್‌ಗಳ ಮೂಲಕ ಉಚಿತ ನೀರು ಪೂರೈಕೆಗೆ ಮಂಡಳಿ ವ್ಯವಸ್ಥೆ ಮಾಡಿದೆ. ಅದು ಸಹ ಎಲ್ಲ ಮನೆಗಳಿಗೆ ತಲುಪುತ್ತಿಲ್ಲ ಎಂಬುದು ಜನರ ಆರೋಪ.

ಕೊಳಚೆ ನೀರು ಎಲ್ಲಿಂದ ಸೇರುತ್ತಿದೆ ಎಂದು ಕಂಡುಹಿಡಿಯಲು ಮಂಡಳಿಯ ಸಿಬ್ಬಂದಿ 22 ಕಡೆ ನೆಲ ಅಗೆದಿದ್ದಾರೆ. ಆದರೆ, ಕಲುಷಿತ ನೀರು ಕೊಳವೆಗೆ ಸೇರುವ ಜಾಗ ಗುರುತಿಸಲಾಗಿಲ್ಲ. 

ಇದರಿಂದಾಗಿ ನೀರಿನ ಕೊರತೆ ಉಂಟಾಗಿದ್ದು, ಪ್ರದೇಶದ ವಾಸಿಗಳು ದುಬಾರಿಯಾಗಿರುವ ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ. ‘ಆಡಳಿತ ವ್ಯವಸ್ಥೆ ಪ್ರದೇಶದ ಮೂಲಸೌಕರ್ಯಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿರುವ ಸ್ಥಳೀಯರು ಈ ಬಾರಿಯ ಚುನಾವಣೆಯಲ್ಲಿ ಮತದಾನವನ್ನೇ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.  

‘ನಾಲ್ಕು ವಾರಗಳ ಹಿಂದಿನಿಂದಲೂ ವಾಸನೆಯುಕ್ತ ಕಲುಷಿತ ನೀರು ಬರುತ್ತಿದ್ದುದ್ದನ್ನು ಸ್ಥಳೀಯರು ಗಮನಿಸಿದ್ದರು’ ಎಂದು 2–ಡಿ ಅಡ್ಡರಸ್ತೆಯ ನಿವಾಸಿ ಅಂಟೊನಿ ನಿರ್ಮಲ್‌ ರಾಜ್‌ ತಿಳಿಸಿದರು.

‘ಕಲುಷಿತ ನೀರಿನಿಂದ ವಾಸನೆ ಸೂಸುತ್ತಿರುವ ಸಂಪ್‌ ಹಾಗೂ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಶುಚಿಗೊಳಿಸಲು ಈಗ ದುಡ್ಡು ಖರ್ಚು ಮಾಡಬೇಕಿದೆ’ ಎಂದರು ಸ್ಥಳೀಯರಾದ ಅಮಿತ್‌ ನಿಗ್ಲಿ.  

‘ಸಮಸ್ಯೆ ಗಮನಕ್ಕೆ ಬಂದಿದೆ. ಅದನ್ನು ತಕ್ಷಣ ಪರಿಹರಿಸುತ್ತೇವೆ. ಬಳಿಕ ಕೊಳವೆ ಮಾರ್ಗವನ್ನು ಶುಚಿಗೊಳಿಸುತ್ತೇವೆ’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಚಲಪತಿ ತಿಳಿಸಿದರು. 

ಪ್ರದೇಶದ ಕೆಲವು ಮನೆಗಳಿಗೆ ಮಂಗಳವಾರ ಸಂಜೆಯ ಹೊತ್ತಿಗೆ ಎಂದಿನಂತೆ ನೀರು ಸರಬರಾಜು ಆರಂಭವಾಯಿತು.

* ಸಮಸ್ಯೆಯನ್ನು ಜಲಮಂಡಳಿ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ಇದ್ದಾರೆ ಎಂಬ ಉತ್ತರ ಬರುತ್ತಿದೆ.

-ಎ.ಕೋದಂಡ ರೆಡ್ಡಿ, ಪಾಲಿಕೆ ಸದಸ್ಯ, ಬಾಣಸವಾಡಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !