ಜಹಜು ಒಂದು ಜಗತ್ತು ಹಲವು

ಬುಧವಾರ, ಜೂನ್ 19, 2019
26 °C

ಜಹಜು ಒಂದು ಜಗತ್ತು ಹಲವು

Published:
Updated:
Prajavani

ಅಂದು ಮುಂಬೈ ಇಂಟರ್‌ನ್ಯಾಷನಲ್ ಕ್ರೂಸ್‌ ಟರ್ಮಿನಲ್‌ ಗೇಟ್ ತಲುಪಿದಾಗ ಮಧ್ಯಾಹ್ನವಾಗಿತ್ತು. ಸೆಕ್ಯುರಿಟಿ ಚೆಕ್ ಮುಗಿಸಿ, ಕೈಯಲ್ಲಿ ಟ್ರಾವೆಲ್ ಟಿಕೆಟ್ ಹಿಡಿದು ಬಂದರಿನ ಒಳಗಡೆ ಹೋದರೆ, ಎದುರಿಗೆ ಬೃಹದಾಕಾರದ ಹಡಗೊಂದು ಲಂಗರ್ ಹಾಕಿ ನಿಂತಿತ್ತು. ಒಂದೇ ನೋಟಕ್ಕೆ ನಿಲುಕದಷ್ಟು ದೊಡ್ಡದಾದ ಹಡಗಿನ ಪೂರ್ಣ ಚಿತ್ರವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಆಗ, ಪಕ್ಕದಲ್ಲೇ ನಿಂತಿದ್ದ ನಮ್ಮ ತಂಡದ ಮಾರ್ಗದರ್ಶಿ ನಿಖಿತಾ, ‘ಇದೇ ನಾವು ಪ್ರಯಾಣಿಸುವ ಹಡಗು, ಬನ್ನಿ ಒಳಗೆ ಹೋಗೋಣ. ಆಮೇಲೆ ಇದರ ಚಿತ್ರ ಸಿಗುತ್ತದೆ’ ಎಂದರು. ಅವರ ಮಾತು, ನನ್ನ ಮನದೊಳಗಿನ ಅಚ್ಚರಿಯ ಮೂಟೆಗೆ, ಇನ್ನಷ್ಟು ಕುತೂಹಲಗಳನ್ನು ತುಂಬಿಸಿತು.

ನಿಖಿತಾರೊಂದಿಗೆ ನಾವೆಲ್ಲ ಪುಟ್ಟ ಬಾಗಿಲಿನೊಂದಿಗೆ ಹಡಗು ಪ್ರವೇಶಿಸಿದಾಗ, ಮೊದಲು ಕಂಡಿದ್ದು ಜಗಮಗಿಸುವ ದೀಪಗಳು, ಮಿನುಗುವ ವಿಶಾಲವಾದ ಹಜಾರ, ಸಣ್ಣದಾಗಿ ಗುನುಗುವ ಸಂಗೀತ, ಸುಂದರ ಲಾಂಜ್, ಕುಳಿತುಕೊಳ್ಳಲು ಐಶಾರಾಮಿ ಕುರ್ಚಿಗಳು. ಇವೆಲ್ಲ ಒಂದು ರೀತಿ ಸ್ಟಾರ್ ಹೋಟೆಲ್‌ನಂತೆ ಕಾಣುತ್ತಿತ್ತು. ಎಲ್ಲವನ್ನೂ ನೋಡುತ್ತಾ ವೆಲ್‌ಕಮ್‌ ಡ್ರಿಂಕ್ ಹೀರಿ ನಮಗೆ ಕಾಯ್ದಿರಿಸಿದ್ದ ರೂಮ್‌ನತ್ತ ಹೊರಟಾಗ, ಪಕ್ಕದಲ್ಲಿದ್ದ ಹೌಸ್ ಕೀಪರ್, ‘ಲಿಫ್ಟ್‌ನಲ್ಲಿ ಹೋಗಬಹುದು’ ಎಂದರು.

‘ಹಡಗಿನಲ್ಲೂ ಲಿಫ್ಟಾ’ - ಮನದಲ್ಲಿ ಮೂಡಿದ ಪ್ರಶ್ನೆಯ ಬಿಂಬ, ಮುಖದಲ್ಲಿ ಪ್ರತಿಫಲಿಸಿತು. ಅದನ್ನು ಅರ್ಥ ಮಾಡಿಕೊಂಡ ಅವರು, ‘ಹೌದು, ಸರ್. ಇದರಲ್ಲಿ 14 ಫ್ಲೋರ್‌ಗಳಿವೆ, ಅದಕ್ಕೆ ಲಿಫ್ಟ್‌ನಲ್ಲೇ ಹೋಗಬೇಕು’ ಎಂದ. ಅವನ ಮಾತು ಕೇಳಿ, ‘ಇದೇನು ಹಡಗೋ, ಸಾಗರದ ಮೇಲೆ ತೇಲುವ ಸ್ಟಾರ್ ಹೋಟೆಲ್ಲೋ..’ ಎನ್ನಿಸಿತು. ಅಷ್ಟು ಹೊತ್ತಿಗೆ ನನ್ನ ಕೊಠಡಿಯಿರುವ 10ನೇ ಡೆಕ್ ಬಂತು. ಲಿಫ್ಟ್ ಇಳಿದು, ರೂಮ್ ಹುಡುಕಿದೆ. ಕಾರ್ಡ್ ತೋರಿಸಿ ಲಾಕ್ ತೆರೆದು, ಒಳಗೆ ಕಾಲಿಟ್ಟರೆ ಸ್ಟಾರ್ ಹೋಟೆಲ್ ಸೂಟ್ ರೂಮ್ ಹೊಕ್ಕಂತಾಯಿತು. ಮೆತ್ತನೆಯ ಹಾಸಿಗೆ, ಎಸಿ, ಟಿವಿ, ಇಂಟರ್‌ಕಾಮ್, ಹೈಟೆಕ್ ಟಾಯ್ಲೆಟ್ - ಬಾತ್‌ರೂಮ್, ಮಿನಿ ಫ್ರಿಜ್, ಮನಸ್ಸಿಗೆ ಹಿತವೆನಿಸುವ ಅಂದವಾದ ವಿನ್ಯಾಸ. ಪರದೆ ಸರಿಸಿದರೆ ಕಡಲಿನ ಅಲೆಗಳು ಕಾಣುವ ಬಾಲ್ಕನಿ.. ಇವೆಲ್ಲವನ್ನು ನೋಡುತ್ತಾ ನೋಡುತ್ತಾ, ನಾನು ಹಡಗಿನ ಒಳಗಿದ್ದೀನಿ ಎನ್ನುವುದೇ ಮರೆತು ಹೋಯಿತು.

ಐಷಾರಾಮಿ ‘ಕಾರ್ನಿಕ’

ಅಂದ ಹಾಗೆ, ಇಷ್ಟೆಲ್ಲ ಐಶಾರಾಮಿ ಸೌಲಭ್ಯಗಳಿರುವ ಹಡಗಿನ ಹೆಸರು ಕಾರ್ನಿಕ. ಮುಂಬೈನ ಜಲೇಶ್ ಶಿಪ್ಪಿಂಗ್ ಕಂಪನಿ ಮಾಲೀಕತ್ವದ ಈ ಹಡಗಿಗೆ ‘ಭಾರತದ ಮೊದಲ ಐಷಾರಾಮಿ ಪ್ರಯಾಣಿಕರ ಹಡಗು’ ಎಂಬ ಹೆಗ್ಗಳಿಕೆಯೂ ಇದೆ. ಏಪ್ರಿಲ್ ತಿಂಗಳಲ್ಲಿ ಈ ಹಡಗಿನ ಚೊಚ್ಚಲ ಯಾನ ಆರಂಭವಾಯಿತು. ಅದಕ್ಕೂ ಮುನ್ನ ಏಪ್ರಿಲ್ 19ರಂದು ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಕಂಪನಿ ಈ ಹೊಸ ಹಡಗಿಗೆ ‘ನಾಮಕರಣ’ ಶಾಸ್ತ್ರ ಏರ್ಪಡಿಸಿತ್ತು. ಅದೇ ದಿನ ಮೊದಲ ಪಯಣದ ಉದ್ಘಾಟನಾ ಸಮಾರಂಭವನ್ನೂ ಅದ್ಧೂರಿಯಾಗಿ ಆಯೋಜಿಸಿತ್ತು. ವಿಶ್ವಸುಂದರಿ ಸುಷ್ಮಿತಾ ಸೇನ್, ಖ್ಯಾತ ಬಾಕ್ಸಿಂಗ್ ಪಟು ಮೇರಿಕೋಂ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ‘ಕಾರ್ನಿಕ’ ಎಂದು ಹೆಸರಿಟ್ಟಾಯಿತು. ಉದ್ಘಾಟನೆಯ ಭಾಗವಾಗಿ ‘ಮುಂಬೈ- ಹೈ ಸೀ - ಮುಂಬೈ(Mumbai-High Sea- Mumbai)’ ಮಾರ್ಗದಲ್ಲಿ 180 ರಿಂದ 200 ಕಿ.ಮೀ ನಷ್ಟು ದೂರದ ಒಂದು ಹಗಲು ಎರಡು ರಾತ್ರಿ ಪಯಣದ ಈ ‘ಪ್ಯಾಕೆಜ್ ಪ್ರವಾಸ’ದಲ್ಲಿ ಅಪರೂಪದ ಅನುಭವಗಳು ನಮ್ಮದಾದವು. 

ಹಡಗಿನಲ್ಲಿ ಏನುಂಟು ಏನಿಲ್ಲ!

‘ಹಡಗು ಒಂದು ಊರಿನಷ್ಟು ದೊಡ್ಡದಾಗಿರುತ್ತಂತೆ ಕಣ್ರೋ’ ಎಂದು ಚಿಕ್ಕವರಿದ್ದಾಗ ಯಾರೋ ಹೇಳಿದ್ದನ್ನು ಕೇಳಿಸಿಕೊಂಡು ಮೆಲುಕು ಹಾಕುತ್ತಿದ್ದೆವು.  ಈ ಕಾರ್ನಿಕ ಎಂಬ ಸುಸಜ್ಜಿತ ಹಡಗಿನಲ್ಲಿ ಪಯಣಿಸುತ್ತಾ, ಒಳಾಂಗಣವನ್ನು ಒಂದು ಸುತ್ತು‌ ಹಾಕಿದಾಗ, ಅದು ಅಕ್ಷರಶಃ ನಿಜ ಎನ್ನಿಸಿತು.

14 ಡೆಕ್‌ಗಳಿರುವ ಈ ಕಾರ್ನಿಕ ಹಡಗಿನ ಒಂದೊಂದು ಡೆಕ್‌ನಲ್ಲಿ ಒಂದೊಂದು ಅಂಕಣವಿದೆ. ಕೆಳಫ್ಲೋರ್‌ನಲ್ಲಿ ವೈದ್ಯಕೀಯ ನೆರವು, ನಡು ಫ್ಲೋರ್‌ಗಳಲ್ಲಿ ಸಭಾಂಗಣಗಳು, ಅದರ‌ ಮೇಲಿನ ಡೆಕ್‌ನಲ್ಲಿ ಜಿಮ್, ಸ್ಪಾ, ಕ್ಯಾಸಿನೊ, ಮಕ್ಕಳಿಗಾಗಿ ಮನರಂಜನೆ(ಗೇಮ್), ಇವುಗಳ ನಡುವೆ ಶೆಫ್‌ ಕೋರ್ಟ್ ಎಂಬ ಫುಡ್‌ಕೋರ್ಟ್ ಇದೆ. ಡೆಕ್ 12ರಲ್ಲಿ ಓಪನ್ ಫುಡ್‌ಕೋರ್ಟ್‌ ಇದೆ. ಇಲ್ಲಿ, ಜೈನ್ ಫುಡ್‌, ಸೀ ಫುಡ್, ಡೆಸರ್ಟ್ ಫುಡ್, ಸ್ಟ್ರೀಟ್ ಫುಡ್ ಸೇರಿದಂತೆ ಹನ್ನೊಂದು ಬಗೆಯ ಆಹಾರ ಪೂರೈಸುವ ವಿಭಾಗಗಳಿವೆ. ವಿವಿಧ ಫ್ಲೋರ್‌ಗಳಲ್ಲಿ ಜೆಬಿ ಬಾರ್, ಪೂಲ್‌ಬಾರ್, ಓಯಸಿಸ್ ಬಾರ್.. ಹೀಗೆ ಹಲವು ರೀತಿಯ ಬಾರ್‌ಗಳೂ ಇವೆ.

ಪಯಣಿಗ ಸ್ನೇಹಿ ಸೌಲಭ್ಯಗಳು

ಫುಡ್‌ಕೋರ್ಟ್‌ಗೆ ಹೊಂದಿಕೊಂಡಂತೆ ವಿಶಾಲ ರಂಗಮಂದಿರವಿದೆ. ಇದನ್ನು ‘ದಿ ಡೂಮ್’ ಎನ್ನುತ್ತಾರೆ. ಇಲ್ಲಿ ಬೃಹತ್ ಸಿನಿಮಾ ಪರದೆ, ಸುತ್ತಲೂ ಬಣ್ಣ ಬಣ್ಣದ ಬೆಳಕು ‌ಚೆಲ್ಲುವ ಲೈಟ್ ಕಂಬಗಳು,  ಸಂಗೀತ, ನೃತ್ಯ‌ ಪ್ರೇಮಿಗಳ ಎದೆಬಡಿತ‌ ಹೆಚ್ಚಿಸುವ ಸ್ಪೀಕರ್‌ಗಳನ್ನು‌ ಅಳವಡಿಸಿದ್ದಾರೆ. ಈ ಪ್ರಾಂಗಣದಲ್ಲಿ ಎರಡು ಸ್ವಿಮ್ಮಿಂಗ್ ಪೂಲ್‌ಗಳಿವೆ. ಪೂಲ್‌ಗಳ ನಡುವೆ ಮಕ್ಕಳಿಗಾಗಿ ವಾಟರ್ ಷವರ್ ಜೋಡಿಸಿದ್ದಾರೆ.

ಮನರಂಜನೆಯ ರಸದೌತಣ

ಈ‌ ಹಡಗಿನ ಪಯಣಿಗರನ್ನು ಸದಾ ಸಂತಸದಿಂದಿಡಲು ಆಯೋಜಕರು ದಿನ ಪೂರ್ತಿ ವಿವಿಧ ಚಟುವಟಿಕೆಗಳನ್ನು ಯೋಜಿಸಲಾಗುತ್ತಾರೆ. ಅದು ಎಲ್ಲ ವಯೋ‌ಮಾನದವರಿಗೂ ಅನ್ವಯವಾಗುವಂತಹ ಕಾರ್ಯಕ್ರಮ ಗಳನ್ನು ರೂಪಿಸುತ್ತಾರೆ. ಮಕ್ಕಳಿಗೆ ಆಟವಾಡಿಸುವ ಮತ್ತು ಸಾಹಸ ಕಲೆ ತರಬೇತಿ ನೀಡುವ ತಂಡವೇ ಅಲ್ಲಿದೆ. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಾರ್ಯಕ್ರಮಗಳು. ಯುವ ಸಮೂಹಕ್ಕೆ ವಿಶೇಷ ಕಾರ್ಯಕ್ರಮಗಳಿರುತ್ತವೆ.

ನಮ್ಮ ಪ್ರವಾಸದಲ್ಲಿ ನಿತ್ಯ 40ಕ್ಕೂ ಹೆಚ್ಚು ಕಾರ್ಯಕ್ರಮ ಗಳಿರುತ್ತಿದ್ದವು. ತಡರಾತ್ರಿವರೆಗೂ ಡಾನ್ಸ್‌, ಮ್ಯೂಸಿಕ್ ಕಾರ್ಯಕ್ರಮಗಳಿ ರುವುದರಿಂದ ನಿತ್ಯದ ಎಲ್ಲ ಕಾರ್ಯಕ್ರಮಗಳು ಮಧ್ಯಾಹ್ನದ‌ ನಂತರ ಆರಂಭವಾಗುತ್ತಿದ್ದವು. ಈ ಕಾರ್ಯಕ್ರಮಗಳ ಪಟ್ಟಿ ಪ್ರತಿದಿನ ಬೆಳಿಗ್ಗೆ ಕಾಫಿಯೊಂದಿಗೆ ನಿಮ್ಮ ರೂಮ್ ಸೇರುತ್ತಿತ್ತು. ಪಟ್ಟಿ ನೋಡಿ, ನಮಗೆ ಇಷ್ಟವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆವು.

ಏಕಾಂತ ಬಯಸುವವರಿಗೆ..

ಸುಮಾರು 2 ಸಾವಿರ ಪ್ರಯಾಣಿಕರು ಒಟ್ಟಿಗೆ ಈ ಹಡಗಿನಲ್ಲಿ ಪ್ರಯಾಣಿಸಬಹುದು. ಇಷ್ಟೂ ಪ್ರಯಾಣಿಕರೊಂದಿಗೆ ಹಡಗಿನ‌ ಸಿಬ್ಬಂದಿ‌ ಸದಾ‌‌ ನಗುಮೊಗದೊಂದಿಗೆ ವರ್ತಿಸುತ್ತಾರೆ. ಭಾಷೆ ಬಾರದಿದ್ದರೂ ಎಲ್ಲೂ ಕಿಂಚಿತ್ತೂ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತಾರೆ‌. ಏಕಾಂತ ಬಯಸುವವರಿಗೆ, ಬದುಕಿನ ಖಾಸಗಿ ಕ್ಷಣಗಳನ್ನು ಖುಷಿಯಾಗಿ ಕಳೆಯುವವರಿಗೆ ಈ ನೌಕಾಯಾನ ಅದ್ಭುತವಾಗಿದೆ. ಕುಟುಂಬ ಸಹಿತ ಪ್ರಯಾಣಿಸುವವರಿಗೆ, ಸಮೂಹ ಪ್ರಯಾಣಿಕರೂ ಅದ್ಭುತವಾಗಿ ಎಂಜಾಯ್ ಮಾಡಬಹುದು. ಹಡಗಿನಲ್ಲಿ ಶಾಪಿಂಗ್ ಮಾಡಲು ಅಂಗಡಿಗಳಿವೆ. ನೌಕಾಯಾನದ ನೆನಪಿಗಾಗಿ ವಸ್ತುಗಳನ್ನು ಖರೀದಿಸಬಹುದು. ಎಲ್ಲ ಡಾಲರ್ ಲೆಕ್ಕದಲ್ಲಿ ವ್ಯವಹಾರ.

ಸಾವಧಾನದ ಪಯಣ..

ಈ‌ ಪಯಣದಲ್ಲಿ ಹಡಗು ನಿಧಾನವಾಗಿ ಚಲಿಸುತ್ತದೆ. ಗಮ್ಯ ತಲುಪುವವರೆಗೂ ಎಲ್ಲೂ ನಿಲುಗಡೆಯೇ ಇಲ್ಲ. ಜತೆಗೆ, ಮೊಬೈಲ್‌ ನೆಟ್‌ವರ್ಕ್ ಸಿಗೋದು ಕಷ್ಟ(ರಿಸೆಪ್ಷನ್‌ನಿಂದ ಪಾಸ್‌ವರ್ಡ್, ಐಡಿ ಪಡೆದರೆ, ಅಲ್ಲಲ್ಲೇ ವೈ ಫೈ ಸಿಗುತ್ತದೆ. ಅದೂ ಅಸ್ಪಷ್ಟ). ಹೀಗಾಗಿ‌ ಹೊರಗಿನವರ‌ ಕಿರಿಕಿರಿ ಇಲ್ಲ. ಏಕಾಂತಕ್ಕೆ ಭಂಗವಿಲ್ಲ. ನಮ್ಮ ಹಡಗು 11 ಕಿ ಮೀ ವೇಗದಲ್ಲಿ ಚಲಿಸುತ್ತಿತ್ತು. ನನಗಂತೂ ಇಡೀ ನೌಕಾಯಾನ ಮಗುವನ್ನು ತೊಟ್ಟಿಲಲ್ಲಿ ತೂಗಿದಂತಹ ಅನುಭವವಾಯಿತು.

ಸುರಕ್ಷತೆ, ಪರಿಸರ ಸ್ನೇಹಿ ಕಾರ್ನಿಕ ಹಡಗಿನ ವಿಶೇಷವೆಂದರೆ ‘ಪರಿಸರ ಸ್ನೇಹಿ’ ಪಯಣ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದು. ಹಡಗಿನಲ್ಲಿ ಎಲ್ಲೆಡೆಯೂ ಸ್ವಚ್ಛತೆ ಕಾಪಾಡುತ್ತಾರೆ. ಅಲ್ಲಲ್ಲೇ ಕೈ ತೊಳೆದುಕೊಳ್ಳಲು ಸ್ಯಾನಿಟೈಸರ್ಸ್ ಇಟ್ಟಿದ್ದಾರೆ. ಟಾಯ್ಲೆಟ್- ಬಾತ್‌ರೂಮ್ ಬಳಸುವವರಿಗೆ ಮಿತ ನೀರು ಬಳಕೆ ಸೂಚಿಸುವ ಜತೆಗೆ, ಜಲಚರಗಳಿಗೆ ಹಾನಿಯಾಗುವ ಯಾವುದೇ ರಾಸಾಯನಿಕ ಮತ್ತು ಡಿಟರ್ಜೆಂಟ್‌ಗಳನ್ನು ಬಳಸದಂತೆ ಸೂಚನೆ ನೀಡುತ್ತಾರೆ. ಪ್ರತಿ ದಿನ ಸಂಜೆ ಪ್ರಯಾಣಿಕರ ಸುರಕ್ಷತೆಗಾಗಿ ಸುರಕ್ಷತಾ ಕ್ರಮಗಳ ಅಣಕು ಪ್ರದರ್ಶನ ಮಾಡಿಸುತ್ತಾರೆ.

ಇಷ್ಟೆಲ್ಲ ಕೇಳಿದ ಮೇಲೆ, ನಿಮಗೂ ಕಾರ್ನಿಕ ಹಡಗಿನಲ್ಲಿ ಹೋಗಬೇಕನ್ನಿಸುತ್ತಿದೆಯೇ? ಹೆಚ್ಚಿನ ಮಾಹಿತಿಗಾಗಿ ಈ ವೆಬ್ ತಾಣ
https://jaleshcruises.com ಕ್ಕೆ ಭೇಟಿ ನೀಡಿ.

(ಲೇಖಕರು ಕಂಪನಿಯ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !