ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ದ್ವೇಷ ಬಿತ್ತುವ ಭಾಷೆಗೆ ಮದ್ದುಂಟೆ?

ನ್ಯಾಯಾಂಗ, ಸುದ್ದಿ ನಿಯಂತ್ರಣ ಪ್ರಾಧಿಕಾರವು ದ್ವೇಷ ಭಾಷೆಗೆ ಕೊನೆ ಹಾಡುವ ಹಾದಿಯನ್ನಂತೂ ತೆರೆದಿವೆ
Last Updated 31 ಅಕ್ಟೋಬರ್ 2022, 9:08 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಹಾಗೂ ಕೆ.ಎಂ. ಜೋಸೆಫ್ ಅವರ ಪೀಠದೆದುರು ವಕೀಲ ಕಪಿಲ್ ಸಿಬಲ್ ಅವರು ಕಳೆದ ವಾರ ದ್ವೇಷ ಭಾಷಣದ ತುಣುಕುಗಳನ್ನು ಓದುತ್ತಿದ್ದಾಗ, ‘ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ಬಂದು ನಿಂತಿದ್ದೇವೆ?’ ಎಂಬ ವಿಷಾದದ ನಿಟ್ಟುಸಿರು ನ್ಯಾಯಮೂರ್ತಿ ಜೋಸೆಫ್ ಅವರ ಬಾಯಿಂದ ಹೊರಬಿತ್ತು. ‘ದ್ವೇಷ ಭಾಷಣ ಮಾಡುವವರ ವಿರುದ್ಧ ಯಾರೂ ದೂರು ನೀಡದಿದ್ದರೂ ಪೊಲೀಸರೇ ಪ್ರಕರಣ ದಾಖಲಿಸಬೇಕು; ಇಲ್ಲದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಪೀಠವು ದೆಹಲಿ, ಉತ್ತರಪ್ರದೇಶ, ಉತ್ತರಾಖಂಡದ ಪೊಲೀಸರಿಗೆ ಆದೇಶ ನೀಡಿತು. ‘ದ್ವೇಷ ಭಾಷಣಗಳ ಈ ಹಿಂದಿನ ಪ್ರಕರಣಗಳ ಕುರಿತಂತೆ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಕೊಡಿ’ ಎಂದು ಪೀಠ ಈ ಮೂರೂ ರಾಜ್ಯಗಳಿಗೆ ಹೇಳಿತು.

ಸುಪ್ರೀಂ ಕೋರ್ಟ್‌ ಆದೇಶ ಬಂದ ಐದಾರು ದಿನ ಗಳಲ್ಲೇ, ಉತ್ತರಪ್ರದೇಶದ ರಾಂಪುರದ ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್ ಅವರು 2019ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ವಿರುದ್ಧ ಮಾಡಿದ್ದ ದ್ವೇಷ ಭಾಷಣಕ್ಕಾಗಿ ರಾಂಪುರ ಕೋರ್ಟು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153ಎ, 505 ಹಾಗೂ 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 125ರ ಅಡಿ ಈ ಶಿಕ್ಷೆ ವಿಧಿಸಲಾಯಿತು. ಖಾನ್ ಶಾಸಕತ್ವ ರದ್ದಾಯಿತು. ಇಂಥ ಶಿಕ್ಷೆ ಇತರ ನಾಯಕರಿಗೂ ವಿಸ್ತರಿಸುವಂತಾದರೆ ಆಚಾರವಿಲ್ಲದ ನಾಲಗೆಗಳು ಹಿಂಜರಿಯಬಹುದೇನೋ.

ರಾಂಪುರದ ತೀರ್ಪು ಬಂದ ದಿನವೇ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿಯು (ಎನ್‌ಬಿಡಿಎಸ್‌ಎ) ‘ನ್ಯೂಸ್ 18 ಇಂಡಿಯಾ’ ಹಿಂದಿ ಸುದ್ದಿವಾಹಿನಿಗೆ ₹ 50,000 ದಂಡ ವಿಧಿಸಿತು. ಕರ್ನಾಟಕದ ಹಿಜಾಬ್ ಪ್ರಕರಣಕ್ಕೂ ಅಲ್ ಕೈದಾ ಸಂಘಟನೆಗೂ ನಂಟು ಕಲ್ಪಿಸುವಂತಹ ಚರ್ಚೆಯನ್ನು ಈ ವಾಹಿನಿ ಪ್ರಸಾರ ಮಾಡಿ, ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡಿದೆ ಎಂಬ ದೂರು ಸಲ್ಲಿಕೆಯಾಗಿತ್ತು.

2020ರಲ್ಲಿ ಸುದ್ದಿವಾಹಿನಿಗಳ ದ್ವೇಷ ಭಾಷಣಗಳ ಬಗ್ಗೆ ಹರಿಹಾಯ್ದಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನ್ಯೂಸ್ ಬ್ರಾಡ್‌ಕಾಸ್ಟರ್ಸ್‌
ಅಸೋಸಿಯೇಷನ್‌ ಅನ್ನು ಛೇಡಿಸುತ್ತಾ ‘ನಿಮ್ಮದು ಹಲ್ಲಿಲ್ಲದ ಸಂಸ್ಥೆ’ ಎಂದಿದ್ದರು. ನಂತರ ದಲ್ಲಿ ಅದೇ ಅಸೋಸಿಯೇಷನ್‌ ರೂಪಿಸಿದ
ಎನ್‌ಬಿಡಿಎಸ್‌ಎಯು ಕೆಲವು ವಾಹಿನಿಗಳಿಗೆ ಛೀಮಾರಿ ಹಾಕಿ, ದಂಡ ವಿಧಿಸಿತ್ತು. ಇಂಥ ದೂರುಗಳನ್ನು ಸಾರ್ವಜನಿಕರು ಕೂಡ ನೀಡಬಹುದಾದ ಸಾಧ್ಯತೆಯನ್ನು ಎನ್‌ಬಿಡಿಎಸ್‌ಎ ಕ್ರಮಗಳು ತೆರೆದಿಟ್ಟಿವೆ. ಆದರೆ ಇಂಥ ಕೆಲವೇ ನಡೆಗಳು ದ್ವೇಷಭಾಷೆಯನ್ನೇ ಉಸಿರಾಡುತ್ತಿರುವ
ವಿಕೃತರಿಗೆ ಕಡಿವಾಣ ಹಾಕಬಲ್ಲವೇ? ರಾಜಕೀಯ ಲಾಭಕ್ಕಾಗಿ ಕೋಮು ಧ್ರುವೀಕರಣ ಮಾಡಿ, ಕೋಮು ದ್ವೇಷಕ್ಕೆ ಕುಮ್ಮಕ್ಕು ಕೊಡುತ್ತಿರುವ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಕೊಟ್ಟಿರುವ ನಿರ್ದೇಶನ ಕರ್ನಾಟಕಕ್ಕೂ ಅನ್ವಯವಾಗುವ ಕಾಲ ಹತ್ತಿರದಲ್ಲಿದೆಯೇ?

ಈಚಿನ ವರ್ಷಗಳಲ್ಲಿ ದೇಶದಲ್ಲಿ ದ್ವೇಷ ಭಾಷಣ ವಿಕಾರಿಗಳು ಹೆಚ್ಚುತ್ತಿರುವುದಕ್ಕೆ ಕಾರಣ ಮಾನಸಿಕ ಕಾಯಿಲೆ, ಬಿಟ್ಟಿ ಪ್ರಚಾರ, ಹಣಬಲ ಮತ್ತು ಕುರುಡು ದ್ವೇಷ. ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಹೆಚ್ಚುತ್ತಿ
ರುವುದರ ಹಿಂದೆ ಮತೀಯ ಶಕ್ತಿಗಳ, ಸರ್ಕಾರಗಳ ಹಾಗೂ ರಾಜಕೀಯ ಪಕ್ಷಗಳ ಕುಮ್ಮಕ್ಕಿರುವುದು ಎಲ್ಲರಿಗೂ ಗೊತ್ತಿದೆ. ಇದನ್ನೆಲ್ಲ ಆನಂದಿಸುವ ಧೂರ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಬೆರಳೆಣಿಕೆಯಷ್ಟು ದುರುಳರಿಂದ ಸಜ್ಜನರಿಗೂ ಹಬ್ಬುತ್ತಿರುವ ಈ ಮನೋರೋಗಕ್ಕೆ ಕೋರ್ಟುಗಳು ಮಾತ್ರವೇ ಚಿಕಿತ್ಸೆ ನೀಡಬಲ್ಲವೇ?

ಇವತ್ತು ದ್ವೇಷ ಭಾಷೆಯ ವಾಚಾಳಿ ಮನಸ್ಸು ಕುಟುಂಬ, ಶಾಲೆ, ದೇವರು, ಧರ್ಮ, ವಿಚಾರ ಯಾವುದರಿಂದಲೂ ಸದ್ಬುದ್ಧಿ ಪಡೆಯದಂಥ ಸ್ಥಿತಿ ತಲುಪಿದೆ. ರಾಜಕೀಯ- ಧರ್ಮಗಳ ನೈತಿಕವಲ್ಲದ ನಂಟು ಜನರ ಮನಸ್ಸನ್ನು ರಾಡಿಯೆಬ್ಬಿಸಿ, ಹಾದಿಬೀದಿಗಳಲ್ಲಿ ವಿನಾಕಾರಣ ಜನರು ಜಗಳಕ್ಕಿಳಿಯುವ ಸ್ಥಿತಿ ಸೃಷ್ಟಿಯಾಗಿದೆ. ರಾಜಕಾರಣಿಗಳು ಚುನಾವಣೆಗಾದರೂ ಜನರೆದುರು ಬರಬೇಕಾಗುವುದರಿಂದ, ಒಳಗೊಳಗೇ ದ್ವೇಷದ ಕಿಡಿ ಹೊತ್ತಿಸಿ, ಮೆಲ್ಲಗೆ ಹಿಂದೆ ಸರಿಯುತ್ತಾರೆ; ಬೆಂಕಿ ಹಬ್ಬಿಸಿ ಸಿಕ್ಕಿ ಬೀಳುವವರು ಅವರ ಹುಂಬ ಅನುಯಾಯಿಗಳು. ‘ಸರ್ಕಾರದ ಬೆಂಬಲವಿದೆ’ ಎಂದು ದುಡುಕುವ ಇಂಥವರ ಠೇಂಕಾರಕ್ಕೆ ಸುಪ್ರೀಂ ಕೋರ್ಟ್ ಪರಿಣಾಮಕಾರಿ ಮದ್ದನ್ನೇ ಅರೆಯಲೆತ್ನಿಸಿದೆ.

ಸ್ವಾತಂತ್ರ್ಯಪೂರ್ವದಲ್ಲಿ, ಭಾರತ ವಿಭಜನೆಯ ಕಾಲದಲ್ಲಿ, ಲಂಗುಲಗಾಮಿಲ್ಲದ ವಸಾಹತು ಆಡಳಿತದಲ್ಲಿ ಕೋಮು ದ್ವೇಷ ಭಾಷಣ ಮಾಡುತ್ತಿದ್ದವರಿಗೆ ಅಷ್ಟಿಷ್ಟು ಕಾರಣಗಳಿದ್ದವು. ಹಲವು ವರ್ಷ ಬ್ರಿಟಿಷ್ ಶತ್ರುವಿನ ವಿರುದ್ಧ ಸಿಟ್ಟಿನ, ಸಕಾರಣವಾದ ದ್ವೇಷದ ಭಾಷಣ ಮಾಡಿ ರೂಢಿಯಾಗಿದ್ದ ಅನೇಕ ನಾಯಕರು ವಿಭಜನೆಯ ಘಟ್ಟದಲ್ಲಿ ಹಿಂದೂ, ಮುಸ್ಲಿಂ ಎಂದು ಒಡೆದುಹೋದರು; ಬ್ರಿಟಿಷರ ವಿರುದ್ಧ ಕಾರುತ್ತಿದ್ದ ಬೆಂಕಿಯನ್ನೇ ಪರಸ್ಪರರ ವಿರುದ್ಧ ಕಾರಿಕೊಳ್ಳತೊಡಗಿದರು. ವಿಭಜನೆಯ ಪರವಾಗಿದ್ದ ಮುಸ್ಲಿಂ ನಾಯಕರು, ವಿಭಜನೆಗೆ ವಿರೋಧವಾಗಿದ್ದ ಹಿಂದೂ ನಾಯಕರ ವಿರುದ್ಧವಷ್ಟೇ ಅಲ್ಲ, ಮೌಲಾನಾ ಆಜಾದ್ ಥರದ ಹಿರಿಯ ಮುಸ್ಲಿಂ ನಾಯಕರ ವಿರುದ್ಧವೂ ಹೀನ ಭಾಷೆ ಬಳಸುತ್ತಿದ್ದರು. ಭಾರತ ವಿಭಜನೆಯ ಕಾಲದ ಹತ್ಯಾಕಾಂಡಗಳ ನಂತರದ ವರ್ಷಗಳಲ್ಲಿ ಈ ದ್ವೇಷಭಾಷೆ ಮರುಕಳಿಸುತ್ತಿದ್ದುದಕ್ಕೆ ಎರಡೂ ಸಮುದಾಯಗಳು ಹಿಂಸೆಯನ್ನು ಹತ್ತಿರದಿಂದ ನೋಡಿದ್ದು ಕೂಡ ಕಾರಣವಾಗಿತ್ತು.

ಆ ಘಟ್ಟದಲ್ಲಿ ದೇಶ ಕಟ್ಟುವ ಹೊಣೆ ಹೊತ್ತ ನೆಹರೂಯುಗದ ರಾಜಕಾರಣಿಗಳು, ಸಾಮಾಜಿಕ ನಾಯಕರು, ಧರ್ಮಗುರುಗಳು ಹಾಗೂ ಪೊಲೀಸರು ಆ ದ್ವೇಷವನ್ನು ತಹಬಂದಿಗೆ ತಂದರು. ಉದಾರವಾದಿ ಪ್ರಧಾನಿ ನೆಹರೂ ಅವರಿಂದ ಹಿಡಿದು ವಿರೋಧ ಪಕ್ಷಗಳ ನಾಯಕರವರೆಗೂ ಬಹುತೇಕರು ದೇಶದ ಏಕತೆಯನ್ನೇ ಗುರಿಯಾಗಿಟ್ಟುಕೊಂಡು ಮಾತಾಡುತ್ತಿದ್ದರು; ನಿತ್ಯದ ಜನಜೀವನದಲ್ಲಿ ದ್ವೇಷಭಾಷೆ ಹಬ್ಬದಂತೆ ನೋಡಿ
ಕೊಳ್ಳುತ್ತಿದ್ದರು. ಸಾರ್ವಜನಿಕವಾಗಿಯಾದರೂ ಒಡಕಿನ ಭಾಷೆ ಬಳಸದೆ, ಮರ್ಯಾದೆಯಿಂದ ಮಾತಾಡಬೇಕೆಂಬ ಮೇಲ್ಪಂಕ್ತಿ ಹಾಕಿಕೊಟ್ಟರು. ಅಂದು ಕೂಡ ಕೋಮು ಸಂಘಟನೆಗಳು ಒಳಗೊಳಗೇ ದ್ವೇಷ ಭಾಷೆಯನ್ನು ಬಿತ್ತುತ್ತಿದ್ದರೂ, ಸಾರ್ವಜನಿಕವಾಗಿ ನಿರ್ಲಜ್ಜವಾಗಿ ಮಾತಾಡುವುದು ಕಷ್ಟವಿತ್ತು. ಸಾಮಾಜಿಕ ಕ್ರಾಂತಿಯ ಗುರಿ ಹೊತ್ತು ಉಗ್ರ ಭಾಷೆ ಬಳಸುತ್ತಿದ್ದ ನಾಯಕರು ಕೂಡ ದ್ವೇಷ ಭಾಷಣಕ್ಕೆ ತಿರುಗುತ್ತಿರಲಿಲ್ಲ. ಚುನಾವಣೆಯ ಕಾಲದಲ್ಲಿ ಉಛಾಯಿಸಿ ಮಾತಾಡುತ್ತಿದ್ದ ರಾಜಕಾರಣಿಗಳ ನಾಲಗೆಯೂ ದಕ್ಷ ಚುನಾವಣಾ ಆಯೋಗದ ಹದ್ದುಬಸ್ತಿ ನಿಂದಾಗಿ ಹತೋಟಿಯಲ್ಲಿತ್ತು.

ಇವೆಲ್ಲದರ ಜೊತೆಗೆ, ದೇಶದ ಸಾಹಿತ್ಯ ವಲಯ ಹಾಗೂ ಸಾಂಸ್ಕೃತಿಕ ವಲಯವು ಎಲ್ಲ ಸಮುದಾಯ
ಗಳನ್ನೂ ಬೆಸೆಯುವ ಭಾಷೆಯನ್ನೇ ಬಳಸುತ್ತಿದ್ದವು. ಶಾಲೆ, ಕಾಲೇಜುಗಳು ಬಹುಮಟ್ಟಿಗೆ ಸಾಮರಸ್ಯದ ವಾತಾವರಣವನ್ನೇ ಬೆಳೆಸುತ್ತಿದ್ದವು. ಮಧ್ಯಮ ವರ್ಗಗಳಲ್ಲಿ ಜಾತೀಯತೆ, ಅಸ್ಪೃಶ್ಯತೆಯು ಇದ್ದವಾದರೂ ಕೋಮು ದ್ವೇಷ ತೀರಾ ಕೆರಳಿರಲಿಲ್ಲ. ಜಾತಿಪೀಡಿತ ಹಳ್ಳಿಗಳಲ್ಲೂ ವಿಭಿನ್ನ ಧಾರ್ಮಿಕ ಸಮುದಾಯಗಳು ಒಟ್ಟಿಗೇ ಬದುಕುತ್ತಿದ್ದವು. ಕುಟುಂಬ, ಕಚೇರಿ, ರಾಜಕಾರಣ, ಪತ್ರಿಕೋದ್ಯಮ, ಸಾರ್ವಜನಿಕ ವಲಯಗಳಲ್ಲಿ ದ್ವೇಷ ಭಾಷೆಗೆ ಹೆಚ್ಚಿನ ಮನ್ನಣೆ ಇರಲಿಲ್ಲ. ಊರಿನಲ್ಲಿ ಮರ್ಯಾದೆಯಿಂದ ಬಾಳಬೇಕೆಂಬ ಕನಿಷ್ಠ ಲಜ್ಜೆ, ಒತ್ತಡ ಹಾಗೂ ಅನಿವಾರ್ಯವು ಕೂಡ ದ್ವೇಷಭಾಷಿಕರಿಗಿತ್ತು.

ಸ್ವಾತಂತ್ರ್ಯಾನಂತರ ಸ್ವಾತಂತ್ರ್ಯ ಚಳವಳಿಯ ಕಾಲದ ಒಳಿತಿನ ಭಾವವನ್ನು ಮತ್ತೆ ಹಬ್ಬಿಸಿ, ಮನಸ್ಸುಗಳನ್ನು ಒಗ್ಗೂಡಿಸಿದ ಭಾರತದಲ್ಲಿ ಈಗ ವಿಭಜನೆಯ ಕಾಲದಂಥ ಒಡಕನ್ನು ಯಾಕೆ, ಯಾರು, ವಿನಾಕಾರಣವಾಗಿ ಹುಟ್ಟು ಹಾಕುತ್ತಿದ್ದಾರೆ? ಯಾರು ಅದರ ಲಾಭ ಪಡೆಯಲೆತ್ನಿಸು
ತ್ತಿದ್ದಾರೆ? ಈ ಸತ್ಯ ಸಮಾಜಕ್ಕೆ ಅರಿವಾದಾಗ, ಮತದಾರರು ಎಚ್ಚರವಾಗತೊಡಗಿದಾಗ ದ್ವೇಷ ಭಾಷೆಗೆ ಕಡಿವಾಣ ಬೀಳುತ್ತದೆ. ಕೋಮುವಾದಕ್ಕೆ ಸರ್ಕಾರಗಳ ಬೆಂಬಲ ನಿಂತ ತಕ್ಷಣ ದ್ವೇಷದ ದನಿ ಅಡಗುತ್ತದೆ. ಕೋರ್ಟುಗಳ ಕ್ಷಿಪ್ರ ಮಧ್ಯಪ್ರವೇಶವೂ ಪರಿಸ್ಥಿತಿಯನ್ನು ಹತೋಟಿಯಲ್ಲಿ ಇಡಬಲ್ಲದು. ಅಷ್ಟೇ ಮುಖ್ಯವಾಗಿ, ‘ಮನೆಯೇ ಮೊದಲ ಪಾಠಶಾಲೆ’ಯಾಗಿ, ಅಮ್ಮ, ಅಕ್ಕ, ತಂಗಿ, ಪತ್ನಿ... ಈ ‘ತಾಯಿ ಸಂಕುಲ’ವು ಈ ದ್ವೇಷಭಾಷಿಕರ ಮಿದುಳು, ನಾಲಗೆಗಳನ್ನು ತಿದ್ದಬೇಕಾಗಿರುವುದು ಕೂಡ ಅತ್ಯಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT