ಗುರುವಾರ , ಅಕ್ಟೋಬರ್ 6, 2022
26 °C
ಸಾಹಿತಿಯನ್ನು ಹಣಿಯಬೇಕೆಂಬ ಹವಣಿಕೆಯೇ ಓದುವ ವ್ಯವಸಾಯದ ಉದ್ದೇಶವಾದರೆ...

ವಿಶ್ಲೇಷಣೆ: ಬದಲಾದ ಕಾಲದಲ್ಲಿ ಓದುಗ–ಸಾಹಿತ್ಯ

ಡಾ. ಟಿ.ಎನ್‌. ವಾಸುದೇವಮೂರ್ತಿ Updated:

ಅಕ್ಷರ ಗಾತ್ರ : | |

ಇಂದು ನಾವು ಬಳಸುತ್ತಿರುವ ಭಾಷೆಯನ್ನು ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ಸ್ತ್ರೀವಾದ ಮುಂತಾದ ಪ್ರಸ್ಥಾನಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಭಾಷೆಯ ಹಲವು ಲೋಪಗಳು ಹೊಸದಾಗಿ ಗೋಚರಿಸತೊಡಗುತ್ತವೆ. ಭಾಷೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದ ಅಗತ್ಯವಿದೆ ಎಂದೆನಿಸುತ್ತದೆ. ನಾವು ಸುಮ್ಮನೆ, ‘ಮನುಷ್ಯನಾದವನು...’ ಎಂಬ ಪದಗುಚ್ಛ
ವನ್ನು ಪ್ರಯೋಗಿಸಿದರೂ ಅದು ದಿಕ್ಕು ತಪ್ಪಿಸುವ ಪ್ರಯೋಗವೆಂದು ಸಾಬೀತಾಗುತ್ತದೆ. ಏಕೆಂದರೆ ಆ ಪದಗುಚ್ಛ ಪುಲ್ಲಿಂಗವಾಚಿಯಾಗಿದೆ. ‘ಹಾಗಿದ್ದರೆ ಮನುಷ್ಯತ್ವವೆಂಬುದು ಹೆಣ್ಣನ್ನು ಒಳಗೊಳ್ಳುವುದಿಲ್ಲವೇ’ ಎಂಬ ಪ್ರಶ್ನೆ ಹುಟ್ಟಿಸುತ್ತದೆ.

ಒಂದು ಕುತೂಹಲಕರ ನಿದರ್ಶನ ನೀಡುವುದಾದರೆ, ಪಿ. ಲಂಕೇಶರ ‘ಗಿಳಿಯು ಪಂಜರದೊಳಿಲ್ಲ’ ಎಂಬ ನಾಟಕದ ಮೊದಲ ಆವೃತ್ತಿಯು 1970ರ ದಶಕದಲ್ಲಿ ಪ್ರಕಟಗೊಂಡಿತ್ತು. ಆ ನಾಟಕದಲ್ಲಿ ಒಬ್ಬ ಕ್ಷೌರಿಕನ ಪಾತ್ರ ಬರುತ್ತದೆ. ನಾಯಕ ಪಾತ್ರಕ್ಕೆ ಆ ಕ್ಷೌರಿಕನ ಹೆಸರು ಗೊತ್ತಿರುವುದಿಲ್ಲ. ಆದಕಾರಣ ಕ್ಷೌರಿಕ ವೃತ್ತಿಯವನಿಗೆ ಅಚ್ಚಗನ್ನಡದಲ್ಲಿ ಬಳಸುವ ಪದದಿಂದಲೇ ನಾಟಕ ದುದ್ದಕ್ಕೂ ಅವನನ್ನು ನಾಯಕ ಪಾತ್ರ ಸಂಬೋಧಿಸು ತ್ತಿರುತ್ತದೆ. ಆದರೆ ಇಂದು ಲಭ್ಯವಿರುವ ಆ ನಾಟಕದ ಪರಿಷ್ಕೃತ ಆವೃತ್ತಿಯಲ್ಲಿ ಆ ಹಳೆಯ ಅಚ್ಚಗನ್ನಡ ಪದವನ್ನು ಪೂರ್ತಿಯಾಗಿ ತೆಗೆದುಹಾಕಲಾಗಿದೆ. ಅದರ ಬದಲಿಗೆ (ಅದು ಸಾಮಾಜಿಕವಾಗಿ ನಿಂದನೀಯವಾದ ಪದವೆಂಬ ಕಾರಣಕ್ಕೆ) ‘ಕ್ಷೌರಿಕ’ನೆಂಬ ಸಂಸ್ಕೃತ ಪದವನ್ನು ಹೊಸದಾಗಿ ಬಳಸಲಾಗಿದೆ.

ಒಂದು ಜೀವಂತ ಭಾಷೆಯಲ್ಲಿ ಕಾಲಕಾಲಕ್ಕೆ ಪದಗಳಲ್ಲಿ ಅರ್ಥವ್ಯತ್ಯಾಸವಾಗುವುದು ಸಾಮಾನ್ಯ. ಕೆಲವು ಪದಗಳು ಉತ್ತಮಾರ್ಥ ಪಡೆದುಕೊಳ್ಳುತ್ತವೆ. ಉದಾಹರಣೆಗೆ ಇಂಗ್ಲಿಷಿನ ‘Fame’ ಎಂಬ ಪದಕ್ಕೆ ಹಿಂದಿನ ಕಾಲದಲ್ಲಿ ‘ವದಂತಿ’ ‘ಜನವಾರ್ತೆ’ ಮುಂತಾದ ಅರ್ಥಗಳಿದ್ದವು. ಇಂದು ಅದೇ ಪದಕ್ಕೆ ‘ಕೀರ್ತಿ’ ‘ಪ್ರಸಿದ್ಧಿ’ ಎಂಬಿತ್ಯಾದಿ ಅರ್ಥಗಳು ಹೆಚ್ಚು ಪ್ರಚಲಿತಕ್ಕೆ ಬಂದಿವೆ. ಅದೇ ರೀತಿ, ‘Knight’ ಎಂದರೆ ಸೇವಕನೆಂಬ ಅರ್ಥವಿತ್ತು. ಮುಂದೆ ‘Knighthood’ ಎಂಬುದು ಒಂದು ಪ್ರಶಸ್ತಿಯ ಹೆಸರಾಯಿತು. ಕಾಲಾಂತರದಲ್ಲಿ ಪದಗಳು ನೀಚಾರ್ಥವನ್ನು ಹೊಂದುವುದೂ ಉಂಟು. 

ಅಲ್ಲದೆ ಕಾಲಕಾಲಕ್ಕೆ ಓದುಗ ವರ್ಗದ ನಿಲುವು, ಧೋರಣೆ, ತಿಳಿವಳಿಕೆಗಳೂ ಬದಲಾಗುತ್ತಿರುತ್ತವೆ. ಭಾಷಾ ವಿಜ್ಞಾನದ ದೃಷ್ಟಿಯಿಂದ ನೋಡಿದಾಗ ‘ಗಿಳಿಯು ಪಂಜರದೊಳಿಲ್ಲ’ ನಾಟಕದಲ್ಲಿ ಮಾಡಿರುವ ಪರಿಷ್ಕರಣೆ ಸ್ವಾಗತಾರ್ಹವೇ ಸರಿ. ಆದರೆ ಸಂಸ್ಕೃತದ ಬಳಕೆಯ ಮಾತ್ರದಿಂದ ಒಂದು ಪದ ಮತ್ತು ಅದು ಸೂಚಿಸುವ ಅರ್ಥ ತನಗೆ ಅಂಟಿದ ನೀಚಾರ್ಥದಿಂದ ಹೇಗೆ ಬಿಡುಗಡೆ ಹೊಂದುತ್ತದೆ ಎಂಬುದು ಅರ್ಥವಾಗದ ವಿಷಯವಾಗಿದೆ. ಇರಲಿ, ಆ ಚರ್ಚೆ ಭಾಷಾವಿಜ್ಞಾನಿಗಳಿಗೆ ಬಿಟ್ಟದ್ದು.

ಒಟ್ಟಿನಲ್ಲಿ ಇಂದಿನ ಸಾಮಾಜಿಕ ವರ್ಗ ಅಥವಾ ಓದುಗ ವರ್ಗವು ಸಾಮಾಜಿಕ ಸೂಕ್ಷ್ಮತೆ ಬೆಳೆಸಿಕೊಂಡಿದೆ, ಭಾಷಾ ಬಳಕೆಯ ಹಿಂದಿನ ಸಾಂಸ್ಕೃತಿಕ ಪರಿವೇಷವನ್ನು, ಜಾತಿರಾಜಕಾರಣವನ್ನು ಅರ್ಥ ಮಾಡಿಕೊಳ್ಳಬಲ್ಲ ವರ್ಗವಾಗಿದೆ. ಓದುಗ ವರ್ಗದ ಈ ಸ್ಥಿತ್ಯಂತರವನ್ನು ಆಧರಿಸಿ ಪಶ್ಚಿಮದಲ್ಲಿ ‘ರೀಡರ್ಸ್‌ ರೆಸ್ಪಾನ್ಸ್‌ ಥಿಯರಿ’ ಎಂಬ ಓದುಗ ಕೇಂದ್ರಿತವಾದ ಒಂದು ಹೊಸ ಸಾಹಿತ್ಯ ಸಿದ್ಧಾಂತವೇ ಹುಟ್ಟಿಕೊಂಡಿದೆ. ಫ್ರೆಂಚ್‌ ಸಾಹಿತ್ಯ ಚಿಂತಕ ರೋಲಂಡ್ ಬಾರ್ತ್ಸ್‌‌ ತನ್ನ ‘ದಿ ಡೆತ್‌ ಆಫ್‌ ದಿ ಆಥರ್‌’ ಎಂಬ ಪ್ರಬಂಧದಲ್ಲಿ ಈ ಕುರಿತು ವಿಶದವಾಗಿ ಚರ್ಚಿಸಿದ್ದಾರೆ.

ಹೊಸ ಸಾಹಿತ್ಯಿಕ, ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳು ಸಾಹಿತ್ಯ ವಿಮರ್ಶೆ, ಸಾಮಾಜಿಕ ವಿಶ್ಲೇಷಣೆಗಳ ದಿಕ್ಕನ್ನು ಬದಲಾಯಿಸುವುದರ ಜೊತೆಗೆ ಸಾಹಿತ್ಯ ಮತ್ತು ಸಮಾಜದಲ್ಲಿನ ವಿಕೃತಿಗಳನ್ನೂ ಹೊಸದಾಗಿ ಅನಾವರಣ ಮಾಡುತ್ತಿವೆ. ಅದೇ ರೀತಿ ಹೊಸ ‘ಓದುಗ ಸ್ಪಂದನ ಸಿದ್ಧಾಂತ’ವು ಸಾಹಿತ್ಯದ ಪೊಳ್ಳುತನ, ಪೂರ್ವಗ್ರಹಗಳನ್ನು ಬಯಲು ಮಾಡುತ್ತಿದೆ.

ಈ ಬದಲಾದ ಕಾಲಮಾನದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಅತಿಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ. ಹಿಂದೆ ತೀರ್ಥಂಕರರು ಸಮವಸರಣ ಮಂಟಪದಲ್ಲಿ ವಿರಾಜಮಾನರಾಗಿಯೋ, ಗೋರಕ್ಷ, ಆದಿಶಂಕರ, ರಾಮಾನುಜಾದಿಗಳು ದೇಶದುದ್ದಗಲಕ್ಕೂ ಸಂಚರಿಸುತ್ತಲೋ, ಬಸವಾದಿ ಶರಣರು ಅನುಭವ ಮಂಟಪದಲ್ಲಿ ಆಸೀನರಾಗಿಯೋ ತಮ್ಮ ಅಂತರಂಗದ ಅರಿವನ್ನು ಅಭಿವ್ಯಕ್ತಿಸುತ್ತಿದ್ದರು, ಮುಮುಕ್ಷುಗಳೊಂದಿಗೆ ಸಂವಾದಿಸುತ್ತಿದ್ದರು. ಇಂತಹ ಸನ್ನಿವೇಶಗಳಲ್ಲಿ
ಯಾರೊಬ್ಬರೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಾನಿ ಮಾಡುತ್ತಿರಲಿಲ್ಲ. ಏನು ನುಡಿಯಬೇಕು ಮತ್ತು ಏನು ನುಡಿಯಬಾರದು ಎಂದು ಅವರನ್ನು ನಿರ್ಬಂಧಿಸುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ.

ಸಾಹಿತಿಯ ಅಭಿವ್ಯಕ್ತಿಯ ಆಶಯವು ತನ್ನಂತೆಯೇ ಯೋಚಿಸುವ, ತನ್ನಂತೆಯೇ ಭಾವಿಸುವ ಅಸಂಖ್ಯ ಓದುಗರೊಂದಿಗೆ ಸಂವಹಿಸಬೇಕೆಂಬುದಾಗಿರುತ್ತದೆ. ಓದುಗರ ಆಶಯವೂ ತನ್ನ ಬುದ್ಧಿ-ಭಾವಗಳು ಸಾಹಿತ್ಯ ಕೃತಿಯ ಮೂಲಕ ಪೂರ್ಣಾಭಿವ್ಯಕ್ತಿ ಪಡೆದುಕೊಳ್ಳಬೇಕು ಎಂಬುದಾಗಿರುತ್ತದೆ. ಆದರೆ ಬದಲಾದ ಕಾಲಮಾನದಲ್ಲಿ ಸಾಹಿತಿ-ಓದುಗರ ನಡುವಿನ ಸಂಬಂಧದ ಆಶಯ ಇಷ್ಟು ಸರಳವಾದುದಾಗಿರುವುದಿಲ್ಲ.

ಒಬ್ಬ ಸಾಹಿತಿಯನ್ನು ಹಣಿಯಬೇಕೆಂಬ ಹವಣಿಕೆಯೇ ಓದುವ ವ್ಯವಸಾಯದ ಉದ್ದೇಶವಾಗಿಬಿಟ್ಟಾಗ ಅಂತಹ ಸನ್ನಿವೇಶದಲ್ಲಿ ಚರ್ಚೆ ಸಾಧ್ಯವಾಗುವುದಿಲ್ಲ.
ಅಂತಹ ಸಾಹಿತ್ಯ ಚರ್ಚೆ ಕೆಸರೆರಚಾಟವಾಗುತ್ತದೆ. ಈ ಬದಲಾದ ಕಾಲಮಾನದಲ್ಲಿ ಸಾಹಿತಿಗಳು ಜಾತಿ, ಧರ್ಮ, ಸಿದ್ಧಾಂತಗಳ ಹೆಸರಿನಲ್ಲಿ ಗುಂಪುಗಳಾಗಿ ಚದುರಿ ಹೋಗಿದ್ದಾರೆ. ಪ್ರತಿಯೊಂದು ಗುಂಪೂ ತನ್ನನ್ನು ಬೇರೆಯ ಗುಂಪಿನವರು ಸಹಾನುಭೂತಿಯಿಂದ ನೋಡಲಿ ಎಂದು ನಿರೀಕ್ಷಿಸುತ್ತಿದೆ. ಈ ನಿರೀಕ್ಷೆ ತಪ್ಪಲ್ಲ (ಜಗತ್ತಿನ ಯಾವುದೇ ಯಶಸ್ವೀ ಕ್ರಾಂತಿ ಅನ್ಯರ ಸಹಾಯ, ಸಹಾನುಭೂತಿಗಳಿಂದ ಸಾರ್ಥಕಗೊಂಡ ಉದಾಹರಣೆ ಇಲ್ಲವೆಂಬುದು ಇವರಿಗೆ ಅನ್ವಯಿಸದ ಮಾತು).

ಆದರೆ ನಿರೀಕ್ಷೆ ಕೈಗೂಡದೇ ಹೋದಾಗ ಉಂಟಾಗುವ ಹತಾಶೆ ಇದೆಯಲ್ಲ, ಅದು ತನಗೆ ಸಹಾನುಭೂತಿ ತೋರಿಸದ ಆ ಮತ್ತೊಂದು ಗುಂಪನ್ನು ನಿಕೃಷ್ಟವಾಗಿ ಬಿಂಬಿಸತೊಡಗುತ್ತದೆ, ವ್ಯಕ್ತಿನಿಂದನೆ, ಜಾತಿ ನಿಂದನೆಯ ಮಟ್ಟಕ್ಕೆ ವ್ಯಕ್ತಿಯನ್ನು ಇಳಿಸುತ್ತದೆ. ಸಾಹಿತ್ಯ ವಲಯದ ಈ ಹತಾಶೆಯು ಕ್ರಮೇಣ ಸಾಹಿತಿಯ– ಓದುಗನ ಸೂಕ್ಷ್ಮತೆಯನ್ನು ಸರ್ವನಾಶ ಮಾಡುತ್ತದೆ. ಆ ಸೂಕ್ಷ್ಮತೆಯನ್ನು ಕಳೆದುಕೊಂಡವರು ಒಬ್ಬ ಸಾಹಿತಿಯು ಒಂದು ಪಂಥ ಅಥವಾ ಸಿದ್ಧಾಂತದ ಅಮೂಲ್ಯ ಸಂಗತಿಗಳನ್ನು ಶ್ಲಾಘಿಸಿದ ಮಾತ್ರಕ್ಕೆ ಅವನನ್ನು ಖಳನಂತೆ ಕಾಣತೊಡಗುವರು.

ತನ್ನೊಂದಿಗೆ ಸಮಾಜದಲ್ಲಿ ಸಹಬಾಳ್ವೆ ಮಾಡುತ್ತಿರುವವರನ್ನೆಲ್ಲ ಖಳರಂತೆ ಕಾಣತೊಡಗಿದಾಗ, ಖಳರಂತೆ ಹೊರಜಗತ್ತಿಗೆ ಬಿಂಬಿಸತೊಡಗಿದಾಗ ಸಂವಾದ ಹಾಗಿರಲಿ, ಬದುಕಲಾದರೂ ಹೇಗೆ
ಸಾಧ್ಯವಾಗುತ್ತದೆ? ವೃಥಾ ಖಳರಂತೆ ಏಕೆ ಬಿಂಬಿತರಾಗಬೇಕೆಂದು ಇಂದು ಅದೆಷ್ಟೋ ಹಿರಿಯ ಸಾಹಿತಿಗಳು ಮೌನದ ಗೂಡಿನಲ್ಲಿ ಅವಿತುಬಿಟ್ಟಿದ್ದಾರೆ. ತಮ್ಮಿಷ್ಟದ ಹೊಸ ತಲೆಮಾರಿನ ಸಾಹಿತಿಗಳನ್ನು ಖಾಸಗಿಯಾಗಿ ಪ್ರಶಂಸಿಸುತ್ತ, ಬಹಿರಂಗದಲ್ಲಿ ಅವರ ಬಗ್ಗೆ ಮಗುಮ್ಮಾಗಿ ಇದ್ದುಬಿಡುವ ನಾಜೂಕುತನ ಬೆಳೆಸಿಕೊಂಡಿದ್ದಾರೆ. ನಮ್ಮೊಳಗಿನ ಅಸಹನೆ, ಅಸೂಕ್ಷ್ಮತೆಗಳು ನಮ್ಮನ್ನು ಕೆಡಿಸುವುದರ ಜೊತೆಗೆ ಅನ್ಯರನ್ನೂ ವಿಷಮ ರೀತಿಯಲ್ಲಿ ಪ್ರಭಾವಿಸುವುದು, ಅನ್ಯರು ಮುಖವಾಡ ತೊಡುವಂತೆ ಮಾಡುವುದು ಯಾವುದೇ ಸಾಂಸ್ಕೃತಿಕ ಲೋಕಕ್ಕೆ ಶ್ರೇಯಸ್ಕರವಲ್ಲ.    

ಸಾಹಿತಿ ಕೇಂದ್ರಿತವಾದ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಪರಿಕಲ್ಪನೆ ಇಂದು ‘ಸ್ವತಂತ್ರವಾಗಿ ಅಭಿವ್ಯಕ್ತಿ ಸುವ ಸಾಹಿತಿಯ ಮಾತುಗಳಿಗೆ ಓದುಗರಾದ ನಾವು ಕಿವಿಗೊಡಲೇಬೇಕೇ?’ ಎಂಬ ಓದುಗನ ಹಕ್ಕಿನ ಪ್ರಶ್ನೆಗೂ ಜನ್ಮ ನೀಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ನಿರ್ಧರಿಸುವವರು ಓದುಗರು. ಓದುಗರಾದವರು ತಮಗೆ ಪಥ್ಯವೆನಿಸದ ಸಾಹಿತಿಗಳಿಗೆ ಕಿವಿಗೊಡದೆ ಹೋದರೆ, ಅವರ ಬಗ್ಗೆ ನಿರ್ಲಕ್ಷ್ಯಭಾವ ತಳೆದರೆ ಅಷ್ಟು ಸಾಲದೇ? ಪಥ್ಯವಾದುದನ್ನು ಸ್ವೀಕರಿಸುವುದರಿಂದ, ಅಪಥ್ಯ ವಾದುದನ್ನು ಸ್ವೀಕರಿಸದೇ ಗೌರವಿಸಿ ಸುಮ್ಮನಾಗುವುದ
ರಿಂದ ಸಾಹಿತ್ಯ ವಲಯ ಆರೋಗ್ಯಪೂರ್ಣವಾಗುತ್ತದೆ. ಎಲ್ಲರಿಗೂ ಗೊತ್ತೇ ಇರುವ ಕಶ್ಮಲವನ್ನು ಪುನಃ ಕಶ್ಮಲವೆಂದು ವಿಶ್ಲೇಷಿಸಿ ವಿವರಿಸುವುದು ಸದಭಿರುಚಿಯ ವಿಮರ್ಶೆಯಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು