ಮಂಗಳವಾರ, ಜನವರಿ 31, 2023
19 °C
ನೈಸರ್ಗಿಕ ಪರಿಸರ, ಪಾರಂಪರಿಕ ಜೀವನವಿಧಾನ ನಷ್ಟವಾದಂತೆಲ್ಲ ಬದುಕು-–ಭಾಷೆ ಬರಡೇ ಸರಿ!

ವಿಶ್ಲೇಷಣೆ: ಇಳೆ ತಂಪಿರದೆ ಭಾಷೆ ಅರಳೀತು ಹೇಗೆ?

ಡಾ. ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ಕನ್ನಡ ಸಾಹಿತ್ಯ ಸಮ್ಮೇಳನದ ಹೊಣೆ ಹೊತ್ತ ಹಾವೇರಿಯೆಡೆಗೆ ಈಗ ಎಲ್ಲರ ಚಿತ್ತ. ಕನಕ- ಸರ್ವಜ್ಞರ ನೆಲದ ಈ ಜಿಲ್ಲೆ, ಪಕ್ಕದ ಮಲೆನಾಡಿಗರಿಗಂತೂ ಸಮೃದ್ಧ ಒಳನಾಡಿನ ಪ್ರತೀಕ. ಹಾವೇರಿ ಜಾನುವಾರು ಜಾತ್ರೆಯಿಂದ ತಂದ ಸಶಕ್ತ ಎತ್ತುಗಳೇ ಇಲ್ಲಿನ ಹೊಲಗಳನ್ನು ಈವರೆಗೂ ಉತ್ತಿದ್ದು, ಅಲ್ಲಿಂದ ಬಂದ ಎಮ್ಮೆಗಳೇ ಇಲ್ಲಿನ ಮನೆಗಳಲ್ಲಿ ಹಾಲು- ಮೊಸರು ಸ್ರವಿಸಿದ್ದು. ಬ್ಯಾಡಗಿ ಕೆಂಪುಮೆಣಸಿನ ಸಾರು, ಸವಣೂರು ವೀಳ್ಯದೆಲೆ, ಹಾನಗಲ್ ತರಕಾರಿ– ಇವನ್ನೆಲ್ಲ ಬಳಸದ ಉತ್ತರ ಕನ್ನಡದ ಮಲೆನಾಡ ಮನೆಗಳೇ ಇರಲಿಕ್ಕಿಲ್ಲ. ಅಲ್ಲಿನ ಗೀಗೀಪದ, ಸುಡುಗಾಡು ಸಿದ್ಧರ ಜಾದೂ, ಕಂಪನಿ ನಾಟಕಗಳು- ಇವೆಲ್ಲವೂ ಜನಮಾನಸದ ಭಾವಕೋಶದ ಭಾಗವೇ ಆಗಿವೆ!

ವಿಭಿನ್ನ ಪರಿಸರದ ಸಮುದಾಯಗಳು ಎಷ್ಟೋ ಕಾಲದಿಂದ ಬೆರೆತು ಎರಕಗೊಂಡಿರುವ ವಿಶಿಷ್ಟ ಗ್ರಾಮೀಣ ಸಂಸ್ಕೃತಿಯೊಂದರ ತುಣುಕು ಇದು. ಹಾವೇರಿ ಸೀಮೆಯ ಅದೆಷ್ಟೋ ಊರು, ಜನ, ಮಾತು, ಬೆಳೆಗಳ ಹೆಸರುಗಳೆಲ್ಲ ಮಲೆನಾಡಿನ ಆಡುಮಾತಿನಲ್ಲಿ ಬೆಸೆದುಹೋಗಿವೆ. ಸಮಾಜವೇ ಪೋಷಿಸಿಕೊಂಡ ಕರುಳಬಳ್ಳಿ ಸಂಬಂಧವಿದು. ಸಾಹಿತ್ಯ ಸಮ್ಮೇಳನದ ನೊಗ ಹೊತ್ತ ಹಾವೇರಿಯನ್ನು ಮತ್ತೊಮ್ಮೆ ಸುತ್ತಿಬರಬೇಕೆಂದು ಇತ್ತೀಚೆಗೆ ನನಗನಿಸಿದ್ದು, ಎಳವೆಯಿಂದಲೂ ಭಾವ ಜಗತ್ತನ್ನು ಪೋಷಿಸುತ್ತಿರುವ ಈ ಭಾಷೆ- ಬದುಕುಗಳೇ ಇರಬೇಕು!

ಫಲವತ್ತಾದ ಕಪ್ಪುಮಣ್ಣಿರುವ ಮಧ್ಯಕರ್ನಾಟಕದ ಸಮೃದ್ಧ ನೆಲವಾದ ಹಾವೇರಿ ಜಿಲ್ಲೆಯಾದ್ಯಂತ ಈಗ ಓಡಾಡಿದರೆ ತೋರುವುದೇನು? ಕಣ್ಮರೆಯಾದ ಕಾನು, ಬರಿದಾದ ಗೋಮಾಳ, ಕಾಣೆಯಾಗುತ್ತಿರುವ ಕೆರೆ-ಕಟ್ಟೆಗಳು, ಒಣಗಿದ ಹಳ್ಳ-ಕಾಲುವೆಗಳು! ನೀರಿಲ್ಲವೆಂದು ಕೊಳವೆಬಾವಿ ತೋಡುತ್ತಿರುವ ರೈತರು. ಭತ್ತ, ಜೋಳ, ಮೆಣಸು, ಶೇಂಗಾ, ಸೂರ್ಯಕಾಂತಿ, ಸಿರಿಧಾನ್ಯ, ತರಕಾರಿಗಳು ನಳನಳಿಸುತ್ತಿದ್ದ ಹೊಲಗಳನ್ನೆಲ್ಲ ವಾಣಿಜ್ಯಬೆಳೆ ಕಬ್ಬು, ಅಡಿಕೆಗಳು ಭಕ್ಷಿಸುತ್ತಿರುವುದು. ‘ಈ ವರ್ಷ ಯಾವ ತಳಿ ಭತ್ತ ಬಿತ್ತಿದ್ರಿ?’ ಎಂದು ಕೇಳಿದರೆ, ‘ಗೊತ್ತಿಲ್ರಿ, ಅಪ್ಪಾರ ಕೇಳಬೇಕ್ರಿ’ ಎಂದು ಮುಂದೆ ಸಾಗುವ ಯುವಕ! ಯುವಜನರು ನಗರಮುಖಿಗಳಾದಂತೆ, ಹೊಲ ಕ್ಕಿಳಿಯಲೇಬೇಕಾದ ವೃದ್ಧರು-ಮಹಿಳೆಯರು. ಊರ ಹೊರಗಿನ ಪ್ರಕೃತಿ ಹಾಗೂ ಕೇರಿಯೊಳಗಣ ಸಂಸ್ಕೃತಿ ಎರಡೂ ಎಷ್ಟು ವೇಗವಾಗಿ ಬದಲಾಗುತ್ತಿವೆ! ಕೇವಲ ಎರಡು-ಮೂರು ದಶಕಗಳಲ್ಲಾದ ಭಾರಿ ಪಲ್ಲಟಗಳಿವು.

ಇದನ್ನೇ ವಿವರವಾಗಿ ಅರ್ಥಮಾಡಿಕೊಳ್ಳಲು, ಶಿಗ್ಗಾವಿ-ಹಾನಗಲ್‌-ಹಿರೇಕೆರೂರು ಸೀಮೆಗಳ ಜಲಾನಯನ ಪ್ರದೇಶಗಳನ್ನು ಪ್ರಾತಿನಿಧಿಕವಾಗಿ ಪರಿಶೀಲಿಸಬಹುದು. ಊರಹೊರಗಿನ ಗುಡ್ಡದ ಕಾಡೆಲ್ಲ ಅಕೇಶಿಯಾ ಮರದ ನೆಡುತೋಪು ಅಥವಾ ಭೂದಾಹದ ಬಲಾಢ್ಯರ ಒತ್ತುವರಿಗೆ ಬಲಿಯಾಗುತ್ತಿದೆ. ಹಸಿರುನೆಲೆಯಿಲ್ಲವಾಗಿ ವನ್ಯಜೀವಿ ಪ್ರಭೇದಗಳೆಲ್ಲ ಮಾಯವಾಗುತ್ತಿವೆ. ಮನುಷ್ಯನ ಪರಿಸರಕ್ಕೆ  ಯಶಸ್ವಿಯಾಗಿ ಹೊಂದಿಕೊಂಡ ಮಂಗ, ಹಂದಿಗಳಂಥವು ಮಾತ್ರ ವಿಪರೀತ ವೃದ್ಧಿಯಾಗಿ, ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿದೆ. ನೀಲಗಿರಿ ಮರಗಳ ಕೈಗಾರಿಕಾ ನೆಡುತೋಪುಗಳು ಹಾಗೂ ತಗ್ಗು, ದಿನ್ನೆಗಳನ್ನೆಲ್ಲ ಬಯಲಾಗಿಸುತ್ತಿರುವ ಜೆಸಿಬಿ ಯಂತ್ರಗಳು ಗೋಮಾಳಗಳನ್ನೂ ಬರಿದಾಗಿಸುತ್ತಿವೆ. ಲಾಗಾಯ್ತಿನಿಂದ ಬೇಸಾಯದ ಜೊತೆ ಗ್ರಾಮೀಣರ ಬದುಕು ಪೊರೆದಿದ್ದ ಎಮ್ಮೆ, ಆಕಳು, ಕುರಿಗಳ ಹೈನುಗಾರಿಕೆ ಹಸಿರುಮೇವಿಲ್ಲದೆ ಬಸವಳಿಯುತ್ತಿದೆ!

ಇದರ ಪರಿಣಾಮ ಅಷ್ಟಕ್ಕೇ ನಿಲ್ಲುವುದೇ? ಜಲಾನಯನ ಪ್ರದೇಶವೊಂದರ ಮೇಲ್ಭಾಗದ ಕಾನು, ಗೋಮಾಳಗಳ ಹಸಿರುಹೊದಿಕೆ ನಾಶವಾದಂತೆಲ್ಲ, ಮಳೆಗಾಲದಲ್ಲಿ ಮೇಲ್ಮಣ್ಣು ಸವೆತ ಹೆಚ್ಚಾಗತೊಡಗಿತು. ಸಣ್ಣಮಳೆಗೂ ನೀರು ಕಾಲುವೆ, ಹಳ್ಳಗಳಲ್ಲಿ ನೆರೆಯಾಗಿ ತಗ್ಗಿನ ಕೆರೆಗಳಲ್ಲಿ ಹೂಳು ತುಂಬತೊಡಗಿತು. ಸಣ್ಣ ನೀರಾವರಿ ಹಾಗೂ ಪಂಚಾಯತ್‌ ಇಲಾಖೆಗಳು ಕೆರೆಯ ಮಾಲೀಕರೆಂದು ಸರ್ಕಾರ ಹೇಳಿದಮೇಲೆ, ಈವರೆಗೂ ಕೆರೆ-ಕಟ್ಟೆಗಳನ್ನು ನಿರ್ವಹಿಸುತ್ತಿದ್ದ ಗ್ರಾಮೀಣರು ತಮ್ಮ ಸಾಮೂಹಿಕ ಜವಾಬ್ದಾರಿ ಮರೆತರು. ಊರ ಜನರನ್ನು ಒಳಗೊಂಡ ಸಶಕ್ತ ‘ನಿರ್ವಹಣಾ ಸಮಿತಿ’ಗಳನ್ನು ರಚಿಸಿ ಕೆರೆಗಳನ್ನು ನಿರ್ವಹಿಸಲು ಸರ್ಕಾರವೂ ವಿಫಲವಾಯಿತು. ಹೀಗಾಗಿ, ಕೆರೆಯ ತಳದಲ್ಲಿ ಹೂಳು ತುಂಬಿದರೆ, ಕೆರೆಯಂಚೆಲ್ಲ ಒತ್ತುವರಿಯಾಯಿತು. ಊರಿನ ಕೊಳಚೆ ಸೇರಿದ್ದರಿಂದ ಕೆರೆ ನೀರು ಕಲುಷಿತವಾಗತೊಡಗಿತು. ಅದನ್ನಾಧರಿಸಿದ್ದ ಏಡಿ, ಕಪ್ಪೆ, ಹಾವು, ಮೀನುಗಳಂಥ ಜಲಚರ ವೈವಿಧ್ಯ ಕುಸಿಯತೊಡಗಿತು. ಕೃಷಿ-ಜಾನುವಾರುಗಳನ್ನು ಈವರೆಗೂ ಪೋಷಿಸಿದ್ದ ಜಲಾನಯನ ಪ್ರದೇಶ
ಗಳೆಲ್ಲ ಛಿದ್ರವಾಗುತ್ತಿರುವ ಬಗೆಯಿದು!

ಇದು ಹಾವೇರಿಯ ಕಥೆ ಮಾತ್ರವಲ್ಲ. ನಾಡಿನೆಲ್ಲೆಡೆ ಕಾಣಸಿಗುವ, ವೇಗವಾಗಿ ಬದಲಾಗುತ್ತಿರುವ ಗ್ರಾಮೀಣ ಪರಿಸರದ ಚಿತ್ರ. ನಿಸರ್ಗ ನಾಶ ಹೆಚ್ಚಿದಂತೆ, ಆ ಸಮೃದ್ಧ ಪ್ರಕೃತಿಗೆ ಅಂಟಿಕೊಂಡು ಬದುಕು ಕಟ್ಟಿಕೊಂಡಿದ್ದ ಗ್ರಾಮೀಣ ಸಮುದಾಯಗಳೆಲ್ಲ ತಮ್ಮ ಸಹಜ ಜೀವನಶೈಲಿ ಹಾಗೂ ಜೀವನೋಪಾಯಗಳನ್ನು ಕಳೆದುಕೊಳ್ಳುತ್ತಿವೆ. ಕೃಷಿಕರು, ಹೈನುಗಾರರು, ಮೀನುಗಾರರು, ಕುಶಲ
ಕರ್ಮಿಗಳು, ಕೂಲಿಕಾರರು- ಇವರೆಲ್ಲರ ಜೀವನದಲ್ಲೂ ಈ ಬದಲಾವಣೆಯ ಸ್ಫೋಟವಾಗುತ್ತಿದೆ!

ಪರಿಸರ ಹಾಗೂ ಜನಜೀವನದಲ್ಲಾಗುವ ಈ ಬಗೆಯ ಹಠಾತ್ ಬದಲಾವಣೆಯು ಭಾಷೆಯನ್ನು ಪ್ರಭಾವಿಸುವ ಬಗೆ ಹೇಗೆ? ಭಾಷಾಶಾಸ್ತ್ರಜ್ಞರು ಸದಾ ಕುತೂಹಲದಿಂದ ಅಭ್ಯಸಿಸುವ ಪ್ರಶ್ನೆಯಿದು. ಕಾಡು-ಗೋಮಾಳ, ಕೆರೆ-ಕಟ್ಟೆ, ಪಾರಂಪರಿಕ ಬೇಸಾಯ, ಕಸುಬುಗಳೆಲ್ಲ ಶಿಥಿಲವಾದಂತೆಲ್ಲ, ಅವನ್ನೆಲ್ಲ ಈವರೆಗೂ ನಿರೂಪಿಸುತ್ತಿದ್ದ ಧ್ವನಿ, ಶಬ್ದ, ನುಡಿಗಟ್ಟು, ಗಾದೆಮಾತು, ಜನಪದಹಾಡು ಎಲ್ಲವೂ ಮಾಯವಾಗತೊಡಗುತ್ತವೆ. ಜೊತೆಯಾಗಿ ಬಿತ್ತುವ, ತೂರುವ ರೂಢಿಗಳೇ ಮಾಯವಾದರೆ, ಗದ್ದೆಗಳಲ್ಲಿ ಸುಗ್ಗಿಹಾಡು ಹೇಗೆ ಅನುರಣಿಸೀತು? ಕೆಂಪುಮೆಣಸಿನ ಬೇಸಾಯ ಅರಿಯದವಗೆ ‘ಕಡ್ಡಿಕರೆ’ ಹಾಗೂ ‘ಡಬ್ಬಿಮೆಣಸಿನ’ ವ್ಯತ್ಯಾಸ ಹೇಗೆ ತಿಳಿಯಬೇಕು? ಬೇಸಾಯದ ಋತುಚಕ್ರ ಮರೆತವಗೆ ಶೀಗೆಹುಣ್ಣಿಮೆ ಅಥವಾ ಎತ್ತಿನ ಅಮಾವಾಸ್ಯೆಯ ವೈಶಿಷ್ಟ್ಯ ಅರಿವಾದೀತೇ? ಕೊಳವೆಬಾವಿ ನೀರೇ ಜಲಮೂಲವಾದಾಗ, ಕೆರೆಯಲ್ಲಿ ಮೀನು ಹಿಡಿಯುವ ಗ್ರಾಮಸ್ಥರ ಕೆರೆಬೇಟೆ ಕ್ರೀಡೆ ಉಳಿದೀತಾದರೂ ಹೇಗೆ? ಕಾಡಲ್ಲಿ ಜೇನುಸಂಕುಲ ನಾಶವಾದರೆ, ಆ ಜೇನುತುಪ್ಪ ಸಂಗ್ರಹಿಸುವ ಕುಶಲಿಗಳ ನುಡಿಗಟ್ಟುಗಳನ್ನು ಇನ್ನಾರು ನುಡಿದಾರು?

ಭೌತಿಕ ಪರಿಸರ, ಅದರೊಳಗಣ ಜೈವಿಕ ಪ್ರಕೃತಿ ಹಾಗೂ ಅವನ್ನು ಅವಲಂಬಿಸಿದ ಜನಜೀವನ- ಇವು ಬದಲಾದಂತೆಲ್ಲ, ಅವನ್ನು ಪ್ರತಿನಿಧಿಸುವ ಭಾಷಾದ್ರವ್ಯಗಳೂ ಕಣ್ಮರೆಯಾಗುತ್ತವೆ. ನಮ್ಮ ನಾಡಿನ ಗ್ರಾಮ್ಯ ಪರಿಸರದಲ್ಲೂ ಈ ಪಲ್ಲಟವಾಗುತ್ತಿದ್ದು, ಕನ್ನಡ ಭಾಷೆಯನ್ನು ರೂಪಿಸಿರುವ ಅದರೊಡಲಿನ ಪ್ರಾದೇಶಿಕ ವೈವಿಧ್ಯಗಳೆಲ್ಲ ನೇಪಥ್ಯಕ್ಕೆ ಸರಿಯುತ್ತಿವೆ. ಅನನ್ಯವಾದ ಈ ದೇಸಿತನ ಕಳೆದುಹೋದಂತೆ, ನಷ್ಟವಾಗುವುದು ಭಾಷೆಗೆ ಮಾತ್ರವಲ್ಲ.

ಭಾಷೆಯೊಂದು ತನ್ನ ಸಂವಹನದ ಕಾರ್ಯದೊಟ್ಟಿಗೆ, ಆ ಪರಿಸರದಲ್ಲಿ ಜ್ಞಾನಸೃಷ್ಟಿಯನ್ನೂ ಮಾಡುತ್ತಿರುತ್ತದೆ ಎನ್ನುತ್ತಾರೆ ಭಾಷಾಶಾಸ್ತ್ರಜ್ಞರು ಹಾಗೂ ಮಿದುಳುತಜ್ಞರು. ಅಂದರೆ, ಭಾಷೆಯೊಂದರ ಅಂಗಾಂಶಗಳು ನಾಶವಾಗ ತೊಡಗಿದರೆ, ಅವು ಸೃಜಿಸುತ್ತಿದ್ದ ಜ್ಞಾನಸಂಪತ್ತು ಕುಸಿದು ಮುಂದಿನ ತಲೆಮಾರು ಅದರಿಂದ ವಂಚಿತವಾಗುತ್ತದೆ!

ಇಲ್ಲೊಂದು ಸಂಗತಿ ಗಮನಿಸಬೇಕು. ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಮೂರು ದಶಕಗಳಿಂದ ಜೀವಪ್ರಭೇದಗಳು ವ್ಯಾಪಕವಾಗಿ ನಾಶವಾಗುತ್ತಿವೆ. ಪ್ರಾಗೈತಿಹಾಸದಲ್ಲೇ ಆರನೇ ದೊಡ್ಡ ‘ಸಾಮೂಹಿಕ ಅಳಿವಿನ’ ಕಾಲಘಟ್ಟದಲ್ಲಿಂದು ನಾವಿದ್ದೇವೆ ಎಂದು ವಿಜ್ಞಾನಿಗಳು ಸಾರುತ್ತಿರುವುದು ಈ ಕಾರಣಕ್ಕಾಗಿ. ಕೌತುಕದ ವಿಷಯವೆಂದರೆ, ಈ ಬಗೆಯ ವಿದ್ಯಮಾನ ಸಮಾನಾಂತರವಾಗಿ ಜಾಗತಿಕ ಭಾಷಾಲೋಕದಲ್ಲೂ ಘಟಿಸುತ್ತಿದೆ! ಯುನೆಸ್ಕೊದ ಇತ್ತೀಚಿನ ಅಧ್ಯಯನದಂತೆ, ಪ್ರಪಂಚದಲ್ಲಿನ ಏಳು ಸಾವಿರಕ್ಕೂ ಮಿಕ್ಕ ಭಾಷೆಗಳಲ್ಲಿ ಸುಮಾರು ಅರ್ಧದಷ್ಟು ಅಳಿವಿನಂಚಿಗೆ ಜಾರುತ್ತಿವೆ. ಜೈವಿಕ ತಳಿಸಂಪತ್ತು ಕರಗಿದಂತೆ, ಮಾನವಸಮಾಜದ ಅಮೂಲ್ಯ ಕಾಣ್ಕೆಗಳಾದ ಭಾಷಾ ಪ್ರಕಾರಗಳೂ ಕಣ್ಮರೆ ಯಾಗುತ್ತಿವೆ! ಕನ್ನಡದ ಸಂದರ್ಭದಲ್ಲೂ ಇದು ನಿಜ.

ಮೇಲ್ನೋಟದಲ್ಲಿ ಕನ್ನಡ ಸಶಕ್ತವೆನ್ನಿಸಿದರೂ, ಅದರ ಅಂತಃಸತ್ವವಾದ ಧ್ವನಿ, ಶಬ್ದ, ನುಡಿಗಟ್ಟು, ಹಾಡುಗಳ ಪ್ರಾದೇಶಿಕ ವೈವಿಧ್ಯವು ವೇಗವಾಗಿ ಕರಗುತ್ತಿದೆ. ಆಮಟ್ಟಿಗೆ ಭಾಷೆ ಸೊರಗುತ್ತಿದೆ!

ಭಾಷೆ- ಸಂಸ್ಕೃತಿಗಳು ಅರಳಲು ಬಾಳು ಬೆಳಗಬೇಕು. ಅದಕ್ಕೆ ಇಳೆಯು ಹಸಿರಾಗಿರಬೇಕು. ಸರ್ವಜ್ಞ-ಕನಕರ ಮಾತು, ಹಾಡುಗಳಲ್ಲೂ ಇದು ಢಾಳಾಗಿ ಪ್ರತಿಫಲಿಸಿದೆ. ವರ್ತಮಾನದ ಇಂಥ ಸವಾಲುಗಳನ್ನೆಲ್ಲ ಗುರುತಿಸಿ ಚಿಂತಿಸಲು ಪ್ರೇರೇಪಿಸಿದರೆ, ಸಾಹಿತ್ಯ ಸಮ್ಮೇಳನದ ಔಚಿತ್ಯ ಹೆಚ್ಚೀತು. ಹಾವೇರಿ ನೆಲದಿಂದ ಅಂಥ ವಿವೇಕವು ಮಾರ್ದನಿಸಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು