ಮಂಗಳವಾರ, ಡಿಸೆಂಬರ್ 6, 2022
21 °C
ಸಮಗ್ರ ದೃಷ್ಟಿಕೋನವಿಲ್ಲದೆ ನಿರ್ಮಿಸುವ ಪ್ರತಿಮೆಗಳಿಂದ ಆಗುವ ಆಭಾಸಗಳಿಗೆ ಯಾರು ಹೊಣೆ?

ವಿಶ್ಲೇಷಣೆ | ಪ್ರತಿಮಾ ನಾಟಕ ಮತ್ತು ಸೌಂದರ್ಯಪ್ರಜ್ಞೆ

ಎಂ.ಎಸ್. ಶ್ರೀರಾಮ್ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಅವರು ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಇತ್ತೀಚೆಗೆ ಅನಾವರಣ ಗೊಳಿಸಿದರು. ಎತ್ತರಕ್ಕೆ ನಿಂತಿರುವ ಬೃಹತ್‌ ಪ್ರತಿಮೆ ಸುಂದರವಾಗಿಯೂ ಭವ್ಯವಾಗಿಯೂ ನಮಗೆ ಕಾಣುತ್ತದೆ. ಪಕ್ಕದಲ್ಲಿ ಕುಬ್ಜವಾಗಿ ಕಾಣುವ ವಿಮಾನ ನಿಲ್ದಾಣದ ಕಟ್ಟಡವಿದೆ. ಸೌಂದರ್ಯಶಾಸ್ತ್ರದ ದೃಷ್ಟಿಯಿಂದ, ಪ್ರತಿಮೆಯ ಎತ್ತರಕ್ಕೂ ವಿಮಾನ ನಿಲ್ದಾಣದ ಎತ್ತರಕ್ಕೂ ಸಮತೋಲನ ಇಲ್ಲವಾದ್ದರಿಂದ ಅದು ಪ್ರಮಾಣ ತಪ್ಪಿರುವಂತೆ ಕಾಣಿಸುತ್ತದೆ. ನಮ್ಮ ನಗರವನ್ನು ನಾವು ಸುಂದರವಾಗಿಸುವ ಭರದಲ್ಲಿ ಪ್ರತಿಮೆಯ ಗಾತ್ರದ ಬಗೆಗಷ್ಟೇ ಗಮನಹರಿಸಿ, ಒಟ್ಟಾರೆ ಸೌಂದರ್ಯವನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ದುರಂತ. ಇಂತಹ ನಡೆ ನಮ್ಮ ಪರಂಪರೆಗೂ ಗೌರವವನ್ನು ನೀಡುವುದಿಲ್ಲ.

ಕ್ಯುಬೆಕ್ ನಗರವನ್ನು ‘ಹೆರಿಟೇಜ್ ನಗರ’ವೆಂದು ಅಲ್ಲಿನ ಸ್ಥಳೀಯ ಸರ್ಕಾರ ಘೋಷಿಸಿದೆ. ಹೀಗಾಗಿ, ಆ ನಗರದಲ್ಲಿರುವ ಮೆಕ್‌ಡೊನಾಲ್ಡ್ಸ್ ಸರಣಿಯ ಮಳಿಗೆ ತನ್ನ ಅಸ್ತಿತ್ವವನ್ನು ಘೋಷಿಸುವ ಬಂಗಾರದ ಕಮಾನನ್ನು (ಗೋಲ್ಡನ್ ಆರ್ಚ್‌) ಬಿಟ್ಟುಕೊಟ್ಟು, ಆ ನಗರದ ಸಂಸ್ಕೃತಿಗೆ ತಕ್ಕಂತಹ ಸಣ್ಣ ನಾಮಫಲಕವನ್ನು ಹಾಕಿಕೊಂಡಿದೆ. ಜೈಪುರದ ಹವಾಮಹಲಿನ ಆಜುಬಾಜಿ ನಲ್ಲೂ ಪರಂಪರೆಗೆ ತಕ್ಕಂತೆ ಅಲ್ಲಿನ ಅಂಗಡಿಗಳೆಲ್ಲಾ ಹೊರ ಆವರಣದಲ್ಲಿ, ಜೈಪುರ ನಗರದ ಬಣ್ಣವೆಂದೇ ಪರಿಗಣಿಸುವ ಲಘು ರೋಜಾ ಬಣ್ಣದ ಗೋಡೆ ಮತ್ತು ನಿಯಮಿತವಾದ ವಿಸ್ತೀರ್ಣದ ಫಲಕಗಳನ್ನೇ ಹಾಕಬೇಕು.

ಒಂದು ವ್ಯಾಪಾರದ ಸಂಕೇತವಾಗಲೀ ಬಣ್ಣಗಳಾಗಲೀ ನಗರದ ಸೌಂದರ್ಯದ ಮೇಲೆ ಸವಾರಿ ಮಾಡುವುದು ಸರಿಯಲ್ಲ. ವ್ಯಾಪಾರ ವ್ಯವಹಾರಗಳು ನಗರದ ಸೌಂದರ್ಯದಲ್ಲಿ ಅಡಕವಾಗಿರಬೇಕೇ ವಿನಾ ನಗರವೇ ಒಂದು ವ್ಯಾಪಾರದ ಜಾಹೀರಾತಿನಲ್ಲಿ ಮುಳುಗಬಾರದು.

ಬೆಂಗಳೂರಿನ ಜಯನಗರದಲ್ಲಿ ಐದು ರಸ್ತೆಗಳು ಸೇರುವೆಡೆ ಇರುವ ಪಾದಚಾರಿ ಮೇಲ್ಸೇತುವೆಗೆ ‘ದ.ರಾ.ಬೇಂದ್ರೆ ಮೇಲ್ಸೇತುವೆ’ ಎಂದು ಹೆಸರಿಡಲಾಗಿದೆ. ಆ ಟ್ರಾಫಿಕ್ ಜಂಕ್ಷನ್ನಿನ ಒಂದು ಬದಿಯಲ್ಲಿ ಬೇಂದ್ರೆಯವರ ಒಂದು ಸಣ್ಣ ಪ್ರತಿಮೆಯಿದೆ. ಗಾತ್ರ ಮತ್ತು ಬಣ್ಣದ ಕಾರಣದಿಂದ ಅದು ಯಾರಿಗೂ ಕಾಣದಂತೆ ನಗಣ್ಯವಾಗಿದೆ. ಮೇಲ್ಸೇತುವೆಯ ಎರಡೂ ಬದಿಗಳಲ್ಲಿ ಜಾಹೀರಾತಿನ ಫಲಕಗಳ ಗಾತ್ರ ಎಷ್ಟಿದೆಯೆಂದರೆ, ಈಗ ಅದನ್ನು ಬೇಂದ್ರೆ ಮೇಲ್ಸೇತುವೆ ಎನ್ನಬೇಕೋ ಯಾವುದೋ ಆಭರಣ ವ್ಯಾಪಾರಿಯ ಮೇಲ್ಸೇತುವೆ ಎಂದು ಕರೆಯಬೇಕೋ ತಿಳಿಯದಾಗಿದೆ.

ಆ ಸ್ಥಳವನ್ನು ಆಕ್ರಮಿಸಿಕೊಳ್ಳುವ ಹಕ್ಕನ್ನು ಆಭರಣ ವ್ಯಾಪಾರಿಗೇ ಬಿಟ್ಟುಕೊಟ್ಟು, ಅದರ ದೇಖರೇಖಿಯ ಉಸ್ತುವಾರಿಯನ್ನು ವಹಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಹಾಗೆ ಮಾಡಿದಾಗ ಬೇಂದ್ರೆಯವರನ್ನು ಅಲ್ಲಿಗೆ ಎಳೆದು ತರಬೇಕಿತ್ತೇ ಎನ್ನುವುದು ಪ್ರಶ್ನೆ. ವ್ಯಾಪಾರವೂ ಆಗಬೇಕು, ಸಾಹಿತ್ಯ, ಸಂಸ್ಕೃತಿಯೂ ಉಳಿಯಬೇಕು ಎನ್ನುವುದು ದ್ವಂದ್ವ ನಿಲುವು. ಹಿಂದೆ ಸೌತ್ ಎಂಡ್ ಸರ್ಕಲ್ ಎಂದು ಕರೆಯುತ್ತಿದ್ದ ಜಾಗವನ್ನು ತೀನಂಶ್ರೀ ವೃತ್ತ ಎಂದು ಮರುನಾಮಕರಣ ಮಾಡಿ ವರ್ಷಗಳೇ ಆದವು. ಆದರೂ ಈಗಲೂ ಮೆಟ್ರೊ ನಿಲ್ದಾಣದ ಹೆಸರಾಗಲಿ, ಬಸ್ಸಿನ ಫಲಕಗಳಲ್ಲಾಗಲಿ, ಜನಮನದಲ್ಲಾಗಲಿ ಹೊಸ ಹೆಸರು ಸ್ಥಾಯಿಯಾಗಿಲ್ಲ. ತೀನಂಶ್ರೀ ಅವರ ಎದೆಮಟ್ಟದ ಸಣ್ಣ ಪುತ್ಥಳಿಯನ್ನು ಆ ಸ್ಥಳದಲ್ಲಿರುವ ಗ್ರಂಥಾಲಯದ ಆಚೆಬದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ದಟ್ಟ ಮರದ ನೆರಳಿರುವ ಆ ಜಾಗದಲ್ಲಿ ಪುತ್ಥಳಿ ಎದ್ದು ಕಾಣುತ್ತಿರಲಿಲ್ಲ. ಕಾಲಕ್ರಮೇಣ, ಡಾ. ರಾಜ್‌ಕುಮಾರ್ ಅವರ ಬಂಗಾರದ ಬಣ್ಣದ ದೊಡ್ಡ ಪುತ್ಥಳಿಯನ್ನು ಮತ್ತೊಂದು ಬದಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ವಲ್ಪ ಈಚೆಬದಿಯಲ್ಲಿ ದಿವಂಗತ ಎಚ್.ಎನ್.ಅನಂತಕುಮಾರ್ ಅವರ ಉತ್ಸಾಹದಿಂದ ‘ಅಂಬರ ಚುಂಬನ’ ಎಂಬ ಆಧುನಿಕ ಗಡಿಯಾರವನ್ನು ಅಳವಡಿಸಲಾಯಿತು. ಅದಕ್ಕೂ ರಾಜ್‌ಕುಮಾರ್ ಅವರ ಪುತ್ಥಳಿಗೂ ಅದರ ಹಿಂದಿರುವ ಮಕ್ಕಳ ಉದ್ಯಾನಕ್ಕೂ ಯಾವುದೇ ರೀತಿಯ ತಿಮ್ಯಾಟಿಕ್ ಸಂಬಂಧವಿಲ್ಲ. ಈ ಎಲ್ಲದರ ಮೇಲೆ ಮೆಟ್ರೊದ ಮೇಲ್ಸೇತುವೆಯೂ ತನ್ನ ಯಾನವನ್ನು ಮುಂದುವರಿಸಿದೆ.

ಈ ವೃತ್ತದ ಸೌಂದರ್ಯನಾಶ ಇಷ್ಟಕ್ಕೇ ಸಾಕು ಎಂದುಕೊಳ್ಳುವ ವೇಳೆಗೆ ತೀನಂಶ್ರೀ ಅವರ ಪುತ್ಥಳಿಯ ಮುಂದೆ ‘ದಕ್ಷಿಣ ಕೇಸರಿ’ ಎನ್ನುವ ದೊಡ್ಡ ಗಾತ್ರದ ಒಂದು ಸಿಂಹದ ಪುತ್ಥಳಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಈಗ ತೀನಂಶ್ರೀ ಅವರನ್ನು ನಾವು ಈ ಸಿಂಹದ ಹಿಂಭಾಗದ ಕತ್ತಲಿನಲ್ಲಿ ಹುಡುಕಿ ನೋಡಬೇಕಾಗಿದೆ. ಈ ದಕ್ಷಿಣ ಕೇಸರಿ ಸಿಂಹ ನಮ್ಮ ಸಂಸ್ಕೃತಿಗೆ ಮಹತ್ವ ದ್ದೇನನ್ನೋ ನೀಡಿರಲೇಬೇಕು. ಇಲ್ಲವಾದರೆ ಇದೇ ಸಿಂಹದ ಮತ್ತೊಂದು ಪುತ್ಥಳಿ ಆರ್ಮುಗಂ ವೃತ್ತದ ಹೊರ ಬದಿಯಲ್ಲೂ ಇರುತ್ತಿರಲಿಲ್ಲ. ಆರ್ಮುಗಂ ಅವರಿಗೂ ಈ ಪುತ್ಥಳಿಗೂ ಏನು ಸಂಬಂಧವೋ ತಿಳಿಯದಾಗಿದೆ.

ಕೆ.ಎಸ್.ನರಸಿಂಹಸ್ವಾಮಿ ಅವರ ಎದೆಮಟ್ಟದ ಪುತ್ಥಳಿಯನ್ನು ಒಂದು ವಿಚಿತ್ರ ಸ್ಥಳದಲ್ಲಿ– ಎಂ.ಎನ್.ಕೃಷ್ಣರಾವ್ ಪಾರ್ಕಿನ ಬಳಿಯಿರುವ ಕೆನರಾ ಬ್ಯಾಂಕಿನ ಅಧ್ಯಕ್ಷರ ಮನೆ ಬದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಂತಹ ಯೋಚನೆ ಯಾರಿಗೆ ಬಂತು, ನರಸಿಂಹ ಸ್ವಾಮಿಯವರ ಹೆಸರಿನ ರಸ್ತೆ ಮತ್ತೆಲ್ಲೋ ಇರುವಾಗ ಈ ಪುತ್ಥಳಿ ಇಲ್ಲೇಕೆ, ಉದ್ಯಾನದಲ್ಲಿ ಕೃಷ್ಣರಾಯರ ಪುತ್ಥಳಿ ಯಾಕೆ ಇರಬಾರದಿತ್ತು ಎಂಬಂಥ ಪ್ರಶ್ನೆಗಳನ್ನು ನಾವು ಕೇಳಬೇಕು. ಇಂತಹ ಯಾವ ಯೋಚನೆಗಳನ್ನೂ ಮಾಡದೇ ಇದ್ದಾಗ ಆಗುವ ಸೌಂದರ್ಯ ನಾಶ ನಮಗೆ ಇಲ್ಲಿ ಎದ್ದು ಕಾಣುತ್ತದೆ. ಒಂದು ರೀತಿಯಲ್ಲಿ ತುಸು ಸಮರ್ಪಕವಾದ ಜಾಗದಲ್ಲಿರುವ ಪುತ್ಥಳಿಯೆಂದರೆ, ಬಹುಶಃ ಎಚ್.ನರಸಿಂಹಯ್ಯನವರದ್ದು ಅನಿಸುತ್ತದೆ. ನ್ಯಾಷನಲ್ ಕಾಲೇಜಿನೊಂದಿಗೆ ದಶಕಗಳ ಕಾಲದ ಒಡನಾಟವಷ್ಟೇ ಅಲ್ಲ, ಅಲ್ಲಿಯೇ ವಾಸ್ತವ್ಯವಿದ್ದ ಎಚ್.ಎನ್. ಅವರ ಪುತ್ಥಳಿ ಆ ಜಾಗದಲ್ಲಿರುವುದು ಸಮರ್ಪಕವೇ. ಆದರೆ ಅದು ಯಾರಿಗೂ ಕಾಣದಂತೆ ಒಂದು ಮೂಲೆಯಲ್ಲಿದೆ. ನಗರವನ್ನು ಕಟ್ಟುವವರು ರಸ್ತೆಗಳಿಗೆ, ಉದ್ಯಾನಗಳಿಗೆ, ಕಟ್ಟಡಗಳಿಗೆ ನಾಮಕರಣ ಮಾಡುವಾಗ, ಹಿರಿಯರನ್ನು, ಸಂಸ್ಕೃತಿಯನ್ನು, ಚರಿತ್ರೆಯನ್ನು ಗೌರವಿಸುವಾಗ ಅದೊಂದು ಪರಿಪಾಟ ಎಂದಾಗದೆ ಸಮಗ್ರ ದೃಷ್ಟಿ ಕೋನವನ್ನು ಇಟ್ಟುಕೊಂಡರೆ, ನಮ್ಮ ಸಂಸ್ಕೃತಿಯನ್ನು ಸಂಭ್ರಮಿಸುತ್ತಲೇ ಒಂದು ಸುಂದರ ಹಾಗೂ ಆಧುನಿಕ ನಗರವನ್ನು ಕಟ್ಟಲು ಸಾಧ್ಯ. ಅದಿಲ್ಲದೆ, ಬಂಗಾರದ ಬಣ್ಣ ಚೆನ್ನಾಗಿರುತ್ತದೆ, ದೊಡ್ಡ ಗಾತ್ರದ ಪ್ರತಿಮೆ ಚೆಂದ, ಸಿಕ್ಕ ಜಾಗದಲ್ಲಿ ಇದನ್ನು ಸ್ಥಾಪಿಸಿಬಿಡೋಣ ಎನ್ನುತ್ತಾ ಹೊರಟರೆ ಆಗುವ ಆಭಾಸಗಳನ್ನು ನಾವೀಗ ಕಾಣುತ್ತಿದ್ದೇವೆ.

ಹೈದರಾಬಾದಿನ ಟ್ಯಾಂಕ್ ಬಂಡ್ ಮೇಲಿನ ರಸ್ತೆಯಲ್ಲಿ ಅಖಂಡ ಆಂಧ್ರಪ್ರದೇಶಕ್ಕೆ ಕೊಡುಗೆಗಳನ್ನು ನೀಡಿದವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಸರಿಯಾದ ಅನುಪಾತ, ಒಂದು ರೀತಿಯ ಸಮಾನತೆ, ಅವರ ಚಾರಿತ್ರಿಕ ಮಹತ್ವವನ್ನು ವಿವರಿಸುವ ಫಲಕ– ಎಲ್ಲವೂ ಒಂದು ಹದವನ್ನು ಮೈಗೂಡಿಸಿಕೊಂಡಿವೆ. ಆಂಧ್ರಪ್ರದೇಶ ಇಬ್ಭಾಗವಾದಾಗ ತೆಲಂಗಾಣದ ಕೆಲ ಮಂದಿ ಇದನ್ನೂ ಆಂಧ್ರ ಮತ್ತು ತೆಲಂಗಾಣಕ್ಕೆ ಕೊಡುಗೆ ನೀಡಿದವರನ್ನಾಗಿ ವಿಭಜಿಸಲು ನೋಡಿದರು. ಆದರೆ ಅದೃಷ್ಟವಶಾತ್‌ ಆ ಪ್ರಯತ್ನ ಅಲ್ಲಿಗೇ ನಿಂತಿದೆ. ‍ನಗರವು ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದೆ. ವಿಭಜಿತ ಆಂಧ್ರದ ವಿಶಾಖಪಟ್ಟಣದಲ್ಲಿ ಬೀಚ್ ರೋಡಿನ ಮೇಲೆ ಹೀಗೇ ಪುತ್ಥಳಿಗಳನ್ನು ಸ್ಥಾಪಿಸಿದ್ದಾರೆ. ಅವು ಒಂದೊಂದೂ ಒಂದೊಂದು ಅಳತೆಯಲ್ಲಿ, ಕೆಲವು ನಿಂತು, ಕೆಲವು ಕುಳಿತು, ಕೆಲವು ಇಡೀ ದೇಹದೊಂದಿಗೆ, ಕೆಲವು ಎದೆ ಮಟ್ಟದಲ್ಲಿ ಇರುವುದರಿಂದ ವಿಕಾರವಾಗಿ ಕಾಣಿಸುತ್ತವೆ. ಸಂಸ್ಕೃತಿಯನ್ನು ಹೇಗೆ ಸಂಭ್ರಮಿಸಬಹುದು ಮತ್ತು ಹೇಗೆ ಹದಗೆಡಿಸಬಹುದು ಎನ್ನುವುದಕ್ಕೆ ಹೈದರಾಬಾದ್‌, ವಿಶಾಖಪಟ್ಟಣದ ನಮೂನೆಗಳನ್ನು ನೋಡಬಹುದು.

ಬೆಂಗಳೂರನ್ನು ಸುಂದರವಾಗಿಸಲು ಬೇಕಾದದ್ದು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸುವ ಭಾರಿ ಪ್ರತಿಮೆಗಳಲ್ಲ. ಬದಲಿಗೆ ಸರಿಯಾದ ಪರಿಮಾಣದ, ಸೌಂದರ್ಯಶಾಸ್ತ್ರಕ್ಕೆ ಹೊಂದುವ, ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಸಂಭ್ರಮಿಸುವ, ಗೌರವಿಸುವ ಪ್ರತೀಕಗಳು. ಅವು ನಮ್ಮ ಕೈವಶ ಆಗಬಹುದೇ? ಯಾರಾದರೂ ದಕ್ಷಿಣ ಕೇಸರಿಯ ಸಿಂಹಗಳಿಗೇ ಒಂದು ಉದ್ಯಾನವನ್ನು ಮಾಡಿ ತೀನಂಶ್ರೀ ಅವರ ಪುತ್ಥಳಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಬಹುದೇ? ಬೇಂದ್ರೆಯವರ ಮೇಲ್ಸೇತುವೆಯು ಆಭರಣ ವ್ಯಾಪಾರಮಯವಾಗದೇ ಬೇಂದ್ರೆಮಯ ಆಗಬಹುದೇ?– ಈ ಪ್ರಶ್ನೆಗಳನ್ನೂ ನಾವು ಕೇಳಬೇಕಾಗಿದೆ.

ಹೆಚ್ಚಿನ ಕವಿಗಳು ತಮ್ಮ ಬಡತನವನ್ನು ಸಂಭ್ರಮಿಸುತ್ತಲೇ ಗೌರವವನ್ನು ಕಾಪಾಡಿಕೊಳ್ಳುತ್ತ ಬದುಕನ್ನು ಸವೆಸಿದವರು. ಅವರ ಮರಣದ ನಂತರ ಆ ನೆನಪುಗಳನ್ನು ಮಾರಾಟ ಮಾಡದೇ, ಗೌಣಗೊಳಿಸದೇ ಇರುವುದು ಅಸಾಧ್ಯವೇ? ಏನಿಲ್ಲವೆಂದರೂ ಮೃತರನ್ನು ಅವರಪಾಡಿಗೆ ಬಿಟ್ಟುಬಿಟ್ಟರೂ ಸಾಕು. ಒಂದು ಸಿಂಹದ ಹಿಂಬದಿಯಲ್ಲಿ ಗೌಣವಾಗುವ ಪುತ್ಥಳಿಯಾಗಿಸಿಕೊಳ್ಳುವ ಕರ್ಮ ಯಾರಿಗೂ ಬರದಿರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು