ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನೂರು ಮತದ ಹೊಟ್ಟ ತೂರಿ...

ಪೀಠಸ್ಥರನ್ನು ಒಪ್ಪಿಕೊಂಡ ನಾವು, ಅವರ ಮಿತಿಗಳ ಕುರಿತು ಎಚ್ಚರಗೊಳ್ಳಲೇಬೇಕು
Last Updated 30 ಸೆಪ್ಟೆಂಬರ್ 2022, 1:34 IST
ಅಕ್ಷರ ಗಾತ್ರ

ಭಾರತ ತನ್ನ ಸಂತ ಪರಂಪರೆಯ ಅನನ್ಯತೆಯಿಂದ ಸದಾ ವಿಶ್ವದಲ್ಲಿ ಪ್ರಕಾಶಿಸಿದೆ. ನಮ್ಮ ದಾರ್ಶನಿಕ ಪರಂಪರೆಗಳು ಕಟ್ಟಿದ ಅರಿವಿನ ಸ್ವರೂಪವು ಗಹನವಾದುದು. ಸದಾ ಸಂವಾದ ಪರಂಪರೆಯ ಕೂಸುಗಳು ನಾವು. ಇದನ್ನು ಇನ್ನೊಂದು ಬಗೆಯಲ್ಲಿ ಗುರು–ಶಿಷ್ಯ ಪರಂಪರೆ ಎನ್ನಬಹುದು. ‘ನಿಗುರಾ ನ ರಹಿಬಾ’ ಎಂಬ ಮಾತೊಂದಿದೆ. ಅಂದರೆ ಗುರುವಿಲ್ಲದೆ ಇರಬಾರದು ಎಂದರ್ಥ.

ಡಾ. ಗೀತಾ ವಸಂತ
ಡಾ. ಗೀತಾ ವಸಂತ

ನಮ್ಮ ಪ್ರಾಚೀನ ಋಷಿ ಪರಂಪರೆಯನ್ನೇ ತೆಗೆದು ಕೊಂಡರೆ, ತಮ್ಮೊಳಗೆ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ತಪಸ್ವಿಗಳ ಘನವಾದ ಅರಿವಿನ ಮಾರ್ಗವೊಂದು ಬಿಚ್ಚಿಕೊಳ್ಳುತ್ತದೆ. ಅವರು ತಾವು ಕಂಡುಂಡ ಸತ್ಯವನ್ನು ಸ್ಥಾವರಗೊಳಿಸದೆ ಸದಾ ಅನ್ವೇಷಣೆಯ ಮಾರ್ಗವನ್ನು ತೆರೆದಿಟ್ಟರು. ಮುಂದೆ ರಾಜಪ್ರಭುತ್ವಗಳು ಅಂಕುರಿಸಿದಾಗಲೂ ಭೌತಿಕ, ನೈತಿಕ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಇವರಿದ್ದರು. ನಿಸರ್ಗದ ನಡುವೆ, ಪರ್ವತ– ಕಣಿವೆಗಳ ಗಾಢ ಮೌನದಲ್ಲಿ ವಿಶ್ವರಹಸ್ಯ ವನ್ನು ತಮ್ಮ ಪ್ರಜ್ಞೆಯ ಮೂಲಕ ಕಂಡ ದಾರ್ಶನಿಕರು ಇವರು. ಪ್ರಜ್ಞೆಯನ್ನು ಸೂಕ್ಷ್ಮವಾಗಿ ಪರಿವರ್ತಿಸಿಕೊಂಡ ಈ ತಪಸ್ವಿಗಳು ಇಂದ್ರಿಯಗಳ ಮಿತಿಯನ್ನು ಮೀರಿ ನಿಂತ ಜ್ಞಾನಿಗಳು. ಕಾಲಕ್ರಮದಲ್ಲಿ ಇವರನ್ನು ಲೌಕಿಕ ಬದುಕಿನ ಮಾರ್ಗದರ್ಶಕರನ್ನಾಗಿಯೂ ಜನಸಮೂಹವು ಸ್ವೀಕರಿಸಿತು. ಸಾಮಾಜಿಕ ಬದುಕಿನಲ್ಲಿ ಬೆರೆತ ಸಂತರು ಲೋಕಕಾರುಣ್ಯದ ದ್ಯೋತಕಗಳಂತೆ ಬದುಕಿದರು.

ಅನೇಕ ಸಂತರು, ಸಾಧಕರು, ದೇಸಿ ಗುರುಪಂಥಗಳು ಭಾರತೀಯರ ಬದುಕಿನ ನೆಲೆಯನ್ನು ರೂಪಿಸಿವೆ. ಮತೀಯ ಮಿತಿಯನ್ನು ಮೀರಿ, ವರ್ಣಾಶ್ರಮಗಳಿಗೆ ಅತೀತವಾಗಿ, ನಿಸರ್ಗ ವಿವೇಕವನ್ನು ಒಳಗೊಂಡು ಬೆಳೆದ ಗುರುಪಂಥಗಳಿವು. ಇಂದಿಗೂ ಸ್ಥಳೀಯ ಸಂಸ್ಕೃತಿಯ ಒಳಧಾರೆಯಾಗಿ ಇವು ಉಸಿರಾಡುತ್ತಲೇ ಇವೆ. ಅಧಿಕಾರವು ಎಂದು ಎಲ್ಲವನ್ನೂ ರೂಪಿಸಲು ತೊಡಗಿತೋ ಆಗ ಮಠೀಯ ವ್ಯವಸ್ಥೆಯೊಂದು ತಲೆದೋರಿತು. ಧರ್ಮವನ್ನು ಮತೀಯ ವ್ಯವಸ್ಥೆಯೊಳಗೆ ಕುಬ್ಜಗೊಳಿಸಲಾಯಿತು. ಧರ್ಮವು ಅಧಿಕಾರಕೇಂದ್ರ
ವಾಗಿ, ತತ್ವದರ್ಶನಗಳು ದಿಗ್ವಿಜಯದ ವಿಷಯಗಳಾದವು. ತಾತ್ವಿಕ ಸಂಘರ್ಷಗಳು ಭೌತಿಕ ನೆಲೆಯಲ್ಲೂ ವಿಸ್ತರಿಸುತ್ತಾ ಹಿಂಸೆಗಿಳಿದವು. ದಾರ್ಶನಿಕ ಸಂಘರ್ಷವು ಪ್ರಭುತ್ವಗಳ ಬೆಂಬಲದಿಂದ ಯುದ್ಧೋನ್ಮಾದದಲ್ಲಿ ಕಾಣಿಸಿಕೊಂಡಿದ್ದು ಇತಿಹಾಸ.

ಅಧಿಕಾರವು ಸದಾ ತರಬೇತಿಗೊಂಡ ಮನುಷ್ಯರನ್ನು ಬಯಸುತ್ತದೆ. ಉದಾಹರಣೆಗೆ, ಸೈನ್ಯ, ಪೊಲೀಸ್‌. ಅಲ್ಲಿ ಅಂತರಂಗದ ಒಳ ಎಚ್ಚರಕ್ಕಿಂತ ನಿರ್ದಿಷ್ಟ ಉದ್ದೇಶ ವೊಂದನ್ನು ಈಡೇರಿಸುವ ಹೋರಾಟದ ಮನೋಭಾವ ಮುಖ್ಯವಾಗುತ್ತದೆ. ಧರ್ಮ ಕೂಡ ಇಂಥ ಉದ್ದೇಶಗಳ ಗುರಿ ತಲುಪುವ ಕ್ರೀಡೆಯಾದಾಗ ಅಲ್ಲಿ ಆತ್ಮಶೋಧದ ನಿರಂತರ ಕ್ರಿಯೆ ನಿಂತುಹೋಗುತ್ತದೆ. ದಾರಿಗಳನ್ನು ಹುಡುಕುವ ಬಹುತ್ವದ ಸೃಜನಶೀಲತೆಯ ಬದಲು ಶಾಸ್ತ್ರಗಳು ಅಂತಿಮ ವಾಕ್ಯಗಳನ್ನು ಮೊಳಗಿಸುತ್ತವೆ. ಧರ್ಮಧ್ವಜವನ್ನು ನೆಡುವುದು ಗೆಲುವಿನ ಉನ್ಮಾದವಾಗುತ್ತದೆ. ಧರ್ಮಕ್ಕೆ ಯುದ್ಧದ ಪರಿಭಾಷೆ ಅಂಟಿಕೊಳ್ಳು ತ್ತದೆ. ಅಂತರಂಗ ಶುದ್ಧಿಯ ‘ಸ್ವಧರ್ಮ’ ಅಳಿದುಹೋಗಿ, ಸಮೂಹದ ಸೂಕ್ಷ್ಮಧ್ವನಿಗಳು ನಾಶವಾಗಿ, ಮತೀಯವಾದ ಕರ್ಮಠ ನೀತಿ ಸಂಹಿತೆಗಳು ಜಾರಿಯಾಗುತ್ತವೆ. ಕುವೆಂಪು ಅವರು ‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಎಂದು ಕರೆ ಕೊಟ್ಟಿದ್ದು ಇದೇ ದೃಷ್ಟಿಕೋನದಲ್ಲಿ. ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ಧಿಯನ್ನು ಸಾಧಿಸಲು ಅನುವಾಗುವ ಜೀವನಕ್ರಮವೊಂದನ್ನು ಶೋಧಿಸಹೊರಟ ಅನೇಕ ಮತಧರ್ಮಗಳು ಕೊನೆಯಲ್ಲಿ ಅಧಿಕಾರಕೇಂದ್ರಗಳಾಗಿ ಹೊಮ್ಮಿವೆ.

ಹನ್ನೆರಡನೆಯ ಶತಮಾನದ ಶರಣ ಚಳವಳಿಯು ಸಾಂಸ್ಥಿಕ ಧರ್ಮವನ್ನು ನಿರಾಕರಿಸಿ ನಡೆದ ಆಧ್ಯಾತ್ಮಿಕ ಅರಿವಿನ ಸ್ಫೋಟ. ‘ದೇಹವೇ ದೇಗುಲ’ ಎಂಬುದು ಸಾಧನಾ ಪಂಥಗಳ ಸಂಕೇತ. ಧರ್ಮದ ಅಧಿಕಾರವನ್ನು ನಿರಾಕರಿಸಿ ಸ್ವ ಅರಿವಿನಲ್ಲಿ ಅರಳುವ ಸ್ವಾಭಿಮಾನದ ನಡೆ. ನಡೆಗೆಟ್ಟ ನಾವು ಸ್ವಶೋಧದ ಬದಲು ಸ್ವಹಿತಾಸಕ್ತಿಗಳಿಗೆ ಅಧ್ಯಾತ್ಮದ ಮುಸುಕು ಹಾಕಿದ್ದೇವೆ.

ವರ್ತಮಾನದ ಮಠೀಯ ವ್ಯವಸ್ಥೆಯನ್ನು ನೋಡುವಾಗ ಈ ಸಂತ ಪರಂಪರೆಯ ಅಣಕವೊಂದು ಅಭಿನಯಿಸಲ್ಪಡುತ್ತಿರುವಂತೆ ಭಾಸವಾಗುತ್ತದೆ. ಧಾರ್ಮಿಕ ಚಿಹ್ನೆಗಳು, ಲಾಂಛನಗಳು, ವಸ್ತ್ರಸಂಹಿತೆಗಳು ಢಾಳಾಗಿ ಕಾಣುತ್ತಿವೆ. ಅರಿವು ಮರೆಯಾಗಿ ಕುರುಹುಗಳೇ ವಿಜೃಂಭಿಸುತ್ತಿವೆ. ಮಠಗಳು ತಮ್ಮ ಜಾತಿ ಅಸ್ಮಿತೆಗಳನ್ನು ಶಕ್ತಿ ರಾಜಕಾರಣದ ಕೇಂದ್ರವನ್ನಾಗಿಸುವ ಕಮ್ಮಟಗಳಾಗಿ ತೋರುತ್ತಿವೆ. ಜಾತಿಪ್ರಜ್ಞೆಯನ್ನು ಬಡಿದೆಬ್ಬಿಸುವ ಮಠಮಾನ್ಯಗಳ ಅಗತ್ಯ ಈ ಕಾಲಕ್ಕೆ ಇದೆಯಾ ಎಂಬುದು ಈ ಸಂದರ್ಭದಲ್ಲಿ ಏಳುತ್ತಿರುವ ಪ್ರಶ್ನೆ.

ಮಠಗಳು ಜನಸಾಮಾನ್ಯರಿಗೆ ನೈತಿಕ ಮಾರ್ಗದರ್ಶನ ಮಾಡಲು, ಒಳಗಿನ ಆಧ್ಯಾತ್ಮಿಕ ಸತ್ವವನ್ನು ಎಚ್ಚರಿಸಲು ಜಾಗೃತ ಸ್ಥಳಗಳಾಗಿದ್ದವು. ಆದರೆ ಇಂದು ಅಧಿಕಾರಪೀಡಿತ ಮನಃಸ್ಥಿತಿಗಳಿಂದಲೇ ಸುತ್ತುವರಿದ ಮಠಮಾನ್ಯಗಳು ಅಧಿಕಾರದಿಂದ ಉದ್ಭವಿಸುವ ಕೇಡುಗಳನ್ನೂ ಸೃಷ್ಟಿಸುವ ಕೇಂದ್ರಗಳಾಗಿವೆ. ಧರ್ಮದ ಅಧಿಕಾರಕ್ಕೆ ಪುರುಷಾಧಿಕಾರವೂ ಬೆರೆತಾಗ ಅದು ಹಲ್ಲು, ಉಗುರುಗಳನ್ನು ಬೆಳೆಸಿಕೊಂಡುಬಿಡುತ್ತದೆ. ತನ್ನ ಇಂದ್ರಿಯಾಸಕ್ತಿಗಳಿಗೆ ಅಮಾಯಕರನ್ನು ಬಳಸಿಕೊಂಡು ದನಿಯಡಗಿಸುತ್ತದೆ. ಅದಕ್ಕೆ ಪ್ರಭುತ್ವಗಳು ಬೆಂಬಲ ನೀಡುತ್ತವೆ. ಇಂತಹ ವ್ಯವಸ್ಥೆಗಳಿಂದ ನಮ್ಮ ಪುಟ್ಟ ಗೌರಿಯರುಗಾಸಿಗೊಂಡಿರುವುದೂ ಇದೆ.

ಲೈಂಗಿಕ ದೌರ್ಜನ್ಯವನ್ನು ಭಯದಿಂದ ಸಹಿಸಿಕೊಳ್ಳು ವುದು ಹಾಗೂ ನಂತರ ಉಸಿರೆತ್ತದೆ ಮೌನವಾಗುವುದು ಹೆಣ್ಣಿನ ಇತಿಹಾಸದ ಕರಾಳ ಸತ್ಯ. ಅನೇಕ ಎಳೆ ಹುಡುಗಿಯರ ಬದುಕಲ್ಲೂ ಇಂಥ ಕರಾಳ ಕಥೆಗಳು ಒಡಲ ಕೆಂಡದಂತೆ ಸುಡುತ್ತಿರುತ್ತವೆ. ಕುಟುಂಬದೊಳಗೆ, ಶಾಲೆಗಳಲ್ಲಿ, ಹಾಸ್ಟೆಲ್ಲುಗಳಲ್ಲಿ, ಈ ಸ್ವರವಿಲ್ಲದ ಗುಬ್ಬಚ್ಚಿಗಳು ಮೌನದ ವಶವಾಗುತ್ತ ಬದುಕಿಡೀ ವಿಚಿತ್ರ ಕೀಳರಿಮೆಯಲ್ಲಿ ನರಳಬೇಕಾಗುತ್ತದೆ. ಇದಕ್ಕೆ ಕಾರಣರಾದವರು ಮಾತ್ರ ತಮ್ಮ ಅಧಿಕಾರಬಲದಿಂದ ಮತ್ತೆ ಪುಟಿದೇಳುತ್ತಾರೆ.

ಬೆರಳೆಣಿಕೆಯ ಕೆಲವರನ್ನು ಬಿಟ್ಟು ಇಂದಿನ ಬಹುತೇಕ ಮಠಾಧೀಶರು ಸಂತರಲ್ಲ, ಸಾಧಕರೂ ಅಲ್ಲ. ಅವರು ಲೌಕಿಕ ಶಕ್ತಿಕೇಂದ್ರವೊಂದರ ವಕ್ತಾರರು ಅಷ್ಟೇ. ತಮ್ಮ ತಮ್ಮ ತನು ಮನಗಳನ್ನೇ ಸಂತೈಸಿಕೊಳ್ಳಲಾರದವರು ಇನ್ನಾರಿಗೆ ಗುರುವಾಗಿ ಮಾರ್ಗದರ್ಶನ ಮಾಡಿಯಾರು? ಧರ್ಮಗುರುಗಳಿಗೆ ಸಂತರ ಕರುಣೆ ಹಾಗೂ ಸೈರಣೆಗಳಿದ್ದಾಗ ಮಾತ್ರ ಸರ್ವೋದಯದ ನೆಲೆಯಲ್ಲಿ ಅವರು ಸಮೂಹದ ಮನಸ್ಸುಗಳನ್ನು ಕಟ್ಟಬಲ್ಲರು. ಇಲ್ಲವಾದರೆ ಅವರು ಮಠದೊಳಗಣ ಬೆಕ್ಕುಗಳಾಗಿ ಮಾತ್ರ ಉಳಿಯುತ್ತಾರೆ.

ಆಧ್ಯಾತ್ಮಿಕ ಮನೋಭಾವವು ಪ್ರಜ್ಞೆಯ ವಿಕಾಸದಿಂದ ಸಂಭವಿಸುವಂತಹುದು. ಅದು ಪಟ್ಟ ಕಟ್ಟುವ ವಂಶಾಧಿಕಾರವೋ ರಾಜ್ಯಾಧಿಕಾರವೋ ಅಲ್ಲ. ಅದು ಒತ್ತಾಯದ ಮಾಘಸ್ನಾನವೂ ಅಲ್ಲ. ಮನುಷ್ಯಮಾತ್ರದವರೇ ಆದ ಪೀಠಸ್ಥರು ತಮ್ಮ ಛದ್ಮವೇಷಗಳ ಅಡಿಯಲ್ಲಿರುವ ಮನುಷ್ಯತ್ವವನ್ನು ಆಗಾಗ ಆತ್ಮಸಾಕ್ಷಿಯ ಬೆಳಕಿನಲ್ಲಿ ಶುಚಿಗೊಳಿಸಿಕೊಳ್ಳುವುದು ಅತ್ಯಗತ್ಯ. ಅವರನ್ನು ಒಪ್ಪಿಕೊಂಡ ನಾವೂ ಅವರ ಮಿತಿಗಳ ಕುರಿತು ಎಚ್ಚರಗೊಳ್ಳಲೇಬೇಕು. ಆದ್ದರಿಂದ, ಕುವೆಂಪು ಹೇಳುವಂತೆ ನಮಗೆ ಬೇಕಾದುದು ನಮ್ಮ ಆತ್ಮದ ಹಸಿವನ್ನು ನೀಗಿಸುವ ಅಧ್ಯಾತ್ಮವೇ ವಿನಾ ಅಧಿಕಾರಪೀಡಿತ ಮತಧರ್ಮವಲ್ಲ. ಇದಕ್ಕಾಗಿ ನಾವು ‘ಕ್ರಿಟಿಕಲ್ ಇನ್‌ಸೈಡರ್‌’ಗಳಾಗದೇ ವಿಧಿಯಿಲ್ಲ. ಎಲ್ಲ ಜಾತಿ, ಮತಧರ್ಮಗಳ ಒಳಗೂ ಇರಬಹುದಾದ ಕೊಳೆತು ನಾರುವ ಇಂಥ ಮನಃಸ್ಥಿತಿಯನ್ನು ಮುಚ್ಚಿಟ್ಟಷ್ಟೂ ಬಲಿಯಾಗುವುದು ನಾವೇ ಅಥವಾ ನಮ್ಮ ಮಕ್ಕಳೇ. ನಾವೇ ಕಟ್ಟಿಕೊಂಡ ವ್ಯವಸ್ಥೆಗಳು ನಮ್ಮ ಕತ್ತು ಹಿಸುಕುವಾಗ ಅವುಗಳನ್ನು ನಿರಾಕರಿಸುವುದು ಕೂಡ ನಮ್ಮ ವಿವೇಕದ ನಡೆಯಾಗುತ್ತದೆ. ನಮಗೀಗ ಬೇಕಿರುವುದು ಸ್ಥಾವರಗೊಂಡ ಮತಧರ್ಮವೂ ಅಲ್ಲ ಮಠಧರ್ಮವೂ ಅಲ್ಲ. ಅಂತರಂಗವನ್ನು ಶುದ್ಧಿಗೊಳಿಸುವ ಸ್ವಧರ್ಮ ನಮಗೆ ಬೇಕು. ಸಾಮಾಜಿಕ ನೈತಿಕತೆಯನ್ನು ಕಾಪಿಟ್ಟುಕೊಳ್ಳುವ ಸಂವಿಧಾನಬದ್ಧವಾದ ರಾಷ್ಟ್ರ ಧರ್ಮವೂ ನಮಗೆ ಬೇಕು.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT