ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಗಂಗೆಯಲ್ಲಿ ತೇಲಿಬಂದ ಶವ, ಅಸ್ಮಿತೆಯ ರಾಜಕಾರಣ

ರಾಜಕೀಯ ಅಧಿಕಾರ, ಆರ್ಥಿಕ– ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳಲ್ಲಿನ ಅಸಮತೋಲನ ಬೃಹತ್‌ ಸಮಸ್ಯೆ ಸೃಷ್ಟಿಸಬಲ್ಲದು
Last Updated 24 ಮೇ 2021, 19:33 IST
ಅಕ್ಷರ ಗಾತ್ರ

ಕೋವಿಡ್‌ಪೀಡಿತ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳ ಮೂಲಕ ಹರಿಯುವ ಗಂಗಾ ಮತ್ತು ಯಮುನಾ ನದಿಗಳಲ್ಲಿ ತೇಲಿಬಂದ ಶವಗಳ ಚಿತ್ರಗಳು ಸಾಂಕ್ರಾಮಿಕದ ಕಾಲಘಟ್ಟದಲ್ಲಿ ತೆಗೆದವಾದರೂ ಬಹುಕಾಲ ನೆನಪಿನಲ್ಲಿ ಉಳಿದುಕೊಳ್ಳಲಿವೆ.

ಭಾರತದಲ್ಲಿರುವ ನಮಗೆ ಈ ಚಿತ್ರಗಳು ಬೇರೆಯದೇ ಆದ ಸಂದೇಶವೊಂದನ್ನು ನೀಡುತ್ತಿವೆ. ಇವು ಲಕ್ಷಾಂತರ ಜನರನ್ನು ಆಪೋಶನ ತೆಗೆದುಕೊಳ್ಳುವ, ಒಮ್ಮೆ ಬಂದು ಹೋಗುವ ಸಾಂಕ್ರಾಮಿಕದ ಅಲೆಯ ಕಥೆಯನ್ನು ಮಾತ್ರ ಹೇಳುತ್ತಿಲ್ಲ. ಈ ಚಿತ್ರಗಳು ಕೆಟ್ಟ ಆಡಳಿತದ, ಅಭಿವೃದ್ಧಿ ಇಲ್ಲದಿರುವ, ಕೊಳಕು ರಾಜಕಾರಣದ ಮತ್ತು ಭಯ ಹುಟ್ಟಿಸುವಂತಹ ಪ್ರಾದೇಶಿಕ ಅಸಮತೋಲನದ ಶಾಶ್ವತ ದುರಂತದ ವಿವರಗಳನ್ನೂ ನೀಡುತ್ತಿವೆ.

ಮಹಾನ್ ನದಿಗಳು ಹರಿದು ಹೋಗುವುದು ಉತ್ತರ ಪ್ರದೇಶ ಮತ್ತು ಬಿಹಾರದ ಮೂಲಕವಷ್ಟೇ ಅಲ್ಲ. ಗಂಗಾ, ಯಮುನಾ ಮಾತ್ರವಲ್ಲದೆ ಬ್ರಹ್ಮಪುತ್ರ, ಕೃಷ್ಣಾ, ಕಾವೇರಿ, ಗೋದಾವರಿ, ನರ್ಮದಾ ಮತ್ತು ಇನ್ನೂ ಅನೇಕ ನದಿಗಳು ಹಲವು ರಾಜ್ಯಗಳ ಮೂಲಕ ಹರಿದುಹೋಗುತ್ತವೆ. ಕೋವಿಡ್‌ಗೆ ಬಲಿಯಾದವರ ಶವಗಳು ಆ ನದಿಗಳಲ್ಲಿ ಏಕೆ ಕಾಣಿಸುತ್ತಿಲ್ಲ?

ಇದರಲ್ಲಿ ನದಿಗಳದ್ದೇನೂ ತಪ್ಪಿಲ್ಲ. ನಮ್ಮ ದೇಶದ ಎಲ್ಲ ನದಿಗಳನ್ನೂ ದೇವತೆಗಳೆಂದು ಪೂಜಿಸಲಾಗು
ತ್ತದೆ. ಬೇರೆ ನದಿಗಳು ಹರಿಯುವ ರಾಜ್ಯಗಳು, ಪ್ರದೇಶಗಳಲ್ಲೆಲ್ಲ ಇದೇ ರೀತಿಯ ಧಾರ್ಮಿಕ ನಂಬಿಕೆಗಳೇ ಇವೆ. ಧರ್ಮ ಅಲ್ಲದಿದ್ದರೆ, ಈ ರೀತಿ ಆಗಿದ್ದಕ್ಕೂ ಬೇರೆ ಬೇರೆ ಪ್ರದೇಶಗಳಿಗೂ ಸಂಬಂಧ ಇದೆಯೇ? ಹಾಗೇನೂ ಇಲ್ಲ.

ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಹರಿಯುವ ಪಂಜಾಬ್‌ನಲ್ಲಿ ಇಂತಹ ಚಿತ್ರಗಳು ನಮಗೆ ಕಾಣುವುದಿಲ್ಲ. ಇಡೀ ದೇಶದಲ್ಲಿ ಕೋವಿಡ್‌ನಿಂದಾಗಿ ಮರಣಹೊಂದಿದವರ ಶೇಕಡಾವಾರು ಪ್ರಮಾಣ ಪಂಜಾಬ್‌ನಲ್ಲಿ ಹೆಚ್ಚಿಗಿದ್ದರೂ, ಅಲ್ಲಿನ ನದಿಗಳಲ್ಲಿ ಹೀಗೆ ಶವಗಳು ತೇಲಿಬಂದಿಲ್ಲ.

ಭಾಷೆ ಅಥವಾ ಸಂಸ್ಕೃತಿಗೂ ಇದಕ್ಕೂ ಏನಾದರೂ ಸಂಬಂಧವಿದೆಯೇ? ಅಧಿಕಾರದಲ್ಲಿ ಇರುವವರಿಗೆ ಹೇಳಲು ಇನ್ಯಾವ ನೆಪಗಳೂ ಕಾಣದಿದ್ದಾಗ, ಅವರು ಜನರ ಕಡೆ ಬೊಟ್ಟು ಮಾಡುವುದಿದೆ. ತಮ್ಮ ಪ್ರೀತಿಪಾತ್ರರ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಸಂಗ್ರಹಿಸಲು ಆಗದೆ, ಹೂಳಲು ಜಾಗ ಗೊತ್ತುಮಾಡಲು ಆಗದೆ, ಪೂಜಾರಿಯ ಶುಲ್ಕ ನೀಡಲು ಆಗದೆ ಅವುಗಳನ್ನು ನದಿಗೆ ಎಸೆಯುತ್ತಿರು
ವುದು ಏಕೆ? ಕೆಲವು ರಾಜ್ಯಗಳ ಜನ ಮಾತ್ರ ಏಕೆ ಇಷ್ಟೊಂದು ಬಡವರಾಗಿದ್ದಾರೆ, ಹತಾಶರಾಗಿದ್ದಾರೆ, ಭರವಸೆ ಕಳೆದುಕೊಂಡಿದ್ದಾರೆ?

ಮೇಲಿನ ಸಾಲುಗಳಲ್ಲಿ ನಾವು ಜನಾಂಗೀಯತೆ, ಪ್ರಾದೇಶಿಕತೆ, ಧರ್ಮ, ಸಂಪ್ರದಾಯ, ಜನಸಮೂಹ ಸೇರಿದಂತೆ ಹಲವು ಕಾರಣಗಳನ್ನು ಅಲ್ಲಗಳೆದಿದ್ದೇವೆ. ಇನ್ನುಳಿದಿರುವುದು ರಾಜಕಾರಣ ಮತ್ತು ಆರ್ಥಿಕತೆ ಮಾತ್ರ. ರಾಜಕಾರಣವನ್ನು ಮೊದಲಿಗೆ, ಆರ್ಥಿಕತೆಯನ್ನು ನಂತರದಲ್ಲಿ ಹೆಸರಿಸಿರುವುದು ಉದ್ದೇಶಪೂರ್ವಕವಾಗಿದೆ. ಏಕೆಂದರೆ, ಒಳ್ಳೆಯ ಹಾಗೂ ಕೆಟ್ಟ ಆರ್ಥಿಕ ಪರಿಣಾಮಗಳ ಮೂಲ ಇರುವುದು ರಾಜಕಾರಣದಲ್ಲಿ.

ಇದು ನಮ್ಮನ್ನು ಕರೆದೊಯ್ಯುವುದು ‘ಚುನಾವಣಾ ರಾಜಕಾರಣ’ ಎನ್ನುವ ತೀರಾ ಪರಿಚಿತ ಸ್ಥಳಕ್ಕೆ. ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನಷ್ಟೇ ಅಲ್ಲದೆ, ಹಿಂದಿ ನಾಡಿನ ನಾಲ್ಕೂ ರಾಜ್ಯಗಳತ್ತ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳತ್ತಲೂ ಗಮನ ಹರಿಸೋಣ. ಉತ್ತರಾಖಂಡ, ಛತ್ತೀಸಗಡ ಮತ್ತು ಜಾರ್ಖಂಡ್ ರಾಜ್ಯಗಳ ರಚನೆ ಆಗುವ ಮೊದಲಿದ್ದ ಈ ಪ್ರದೇಶವನ್ನು ಸಮಗ್ರವಾಗಿ ನೋಡೋಣ. ಈ ಪ್ರದೇಶದಲ್ಲಿ ಆರ್ಥಿಕವಾಗಿ ಸಮಾನ ಅಂಶಗಳಿವೆ. ಇಲ್ಲಿ ತಲಾವಾರು ಆದಾಯವು 1,500 ಅಮೆರಿಕನ್ ಡಾಲರ್‌ಗಿಂತ (₹ 1.09 ಲಕ್ಷ) ಕಡಿಮೆ. ರಾಷ್ಟ್ರೀಯ ತಲಾವಾರು ಆದಾಯವಾದ 2,100 ಅಮೆರಿಕನ್ ಡಾಲರ್‌ಗಿಂತ (₹ 1.53 ಲಕ್ಷ) ಇದು ಬಹಳ ಕಡಿಮೆ.

ಹಿಂದೂ ಧರ್ಮದ ಅತ್ಯಂತ ಪವಿತ್ರ ಪುರಾತನ ಯಾತ್ರಾಸ್ಥಳಗಳಲ್ಲಿ ಹೆಚ್ಚಿನವು ಇಲ್ಲಿವೆ. ಈ ಪ್ರದೇಶವು ಈಗ ಹಿಂದುತ್ವ ರಾಜಕಾರಣದ ತವರುಮನೆಯಾಗಿರಬಹುದು. ಆದರೆ, 1989ರವರೆಗೆ ಇದು ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. 1989ರವರೆಗೆ ಈ ಪ್ರದೇಶವನ್ನು ಕಾಂಗ್ರೆಸ್ ಆಳಿದ್ದರೆ, 2014ರ ನಂತರದಲ್ಲಿ ಬಿಜೆಪಿ ಆ ಕೆಲಸ ಮಾಡುತ್ತಿದೆ.

ತಮ್ಮ ಪಕ್ಷಗಳಲ್ಲಿ ಪ್ರಭಾವಿ ನಾಯಕರೂ, ದೇಶದ ಪ್ರಧಾನಿಯೂ ಆಗಿದ್ದ ಎಲ್ಲರೂ ಉತ್ತರಪ್ರದೇಶ
ದವರು: ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ವಾಜಪೇಯಿ ಅವರನ್ನು ಹೆಸರಿಸಬಹುದು. ಈಗ ನರೇಂದ್ರ ಮೋದಿ ಅವರೂ ಅಲ್ಲಿನವರೇ. ಅವರು ವಡೋದರಾದಿಂದ ವಾರಾಣಸಿಗೆ ಬಂದವರು. ಕೆಲವು ಸ್ಪಷ್ಟ ಕಾರಣಗಳಿಗಾಗಿ ನಾವು ಇಲ್ಲಿ ಮೊರಾರ್ಜಿ ದೇಸಾಯಿ, ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಹೆಸರನ್ನು ಸೇರಿಸುತ್ತಿಲ್ಲ.

ದೇಶವನ್ನು ಯಾರು ಆಳಬೇಕು ಎಂಬುದನ್ನು ಹಿಂದಿ ನಾಡು ತೀರ್ಮಾನಿಸುತ್ತದೆ. ಹೀಗಿದ್ದರೂ, ಈ ನಾಡು ಅತ್ಯಂತ ಬಡತನದ, ತೀರಾ ಅಸ್ತವ್ಯಸ್ತ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಹಾಗೂ ಇಡೀ ದೇಶದ ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳ ಸರಾಸರಿ ಮಟ್ಟವನ್ನು ಕೆಳಮಟ್ಟಕ್ಕೆ ತರುವಷ್ಟು ಕಡಿಮೆ ಮಟ್ಟದ ಸಾಮಾಜಿಕ ಸೂಚ್ಯಂಕಗಳನ್ನು ಹೊಂದಿರುವ ಪ್ರದೇಶವೂ ಹೌದು.

ಹಿಂದಿ ನಾಡಿನ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳನ್ನು ಒಟ್ಟಾಗಿ ‘ಬಿಮಾರು ರಾಜ್ಯಗಳು’ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಅತಿಹೆಚ್ಚಿನ ತಲಾವಾರು ಆದಾಯ ಹೊಂದಿರುವ 20 ರಾಜ್ಯಗಳ ಪಟ್ಟಿಯಲ್ಲಿ ಈ ನಾಲ್ಕು ರಾಜ್ಯಗಳು ಇಲ್ಲ. 21ನೆಯ ಸ್ಥಾನದಲ್ಲಿ ರಾಜಸ್ಥಾನ ಇದೆ. ಮಧ್ಯಪ್ರದೇಶ (26), ಉತ್ತರಪ್ರದೇಶ (31), ಬಿಹಾರ (32) ನಂತರದ ಸ್ಥಾನಗಳಲ್ಲಿ ಬರುತ್ತವೆ. ಹೀಗಿದ್ದರೂ, ಜನಸಂಖ್ಯೆ ಹೆಚ್ಚಳದ ಪಟ್ಟಿಯಲ್ಲಿ ಈ ರಾಜ್ಯಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ.

ವಿಂಧ್ಯಪರ್ವತಗಳ ದಕ್ಷಿಣದಲ್ಲಿ ಚಿತ್ರಣ ಸಂಪೂರ್ಣ ಬದಲಾಗಿರುತ್ತದೆ. ಗೋವಾ, ತೆಲಂಗಾಣ, ಕರ್ನಾಟಕ, ಕೇರಳ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ತಲಾವಾರು ಆದಾಯದ ರಾಷ್ಟ್ರೀಯ ಪಟ್ಟಿಯಲ್ಲಿ 1ನೆಯ ಸ್ಥಾನ, 6ರಿಂದ 12ರವರೆಗಿನ ಸ್ಥಾನ ಪಡೆದಿವೆ. ಮಹಾರಾಷ್ಟ್ರ 12ನೆಯ ಸ್ಥಾನದಲ್ಲಿ, ಆಂಧ್ರ ಪ್ರದೇಶ 17ನೆಯ ಸ್ಥಾನದಲ್ಲಿ ಇವೆ. ವಿಂಧ್ಯಪರ್ವತದ ದಕ್ಷಿಣಕ್ಕೆ ಇರುವ ಎಲ್ಲ ರಾಜ್ಯಗಳೂ 20ರೊಳಗಿನ ಸ್ಥಾನ ಪಡೆದಿವೆ. ಹೀಗಿದ್ದರೂ, ದೇಶವನ್ನು ಆಳುವವರು ಯಾರು ಎಂಬುದನ್ನು ನಿರ್ಧರಿಸುವ ಶಕ್ತಿ ಈ ಭಾಗಕ್ಕೆ ಇಲ್ಲ.

ಇದನ್ನು ನಾವು ರಾಜಕಾರಣದ ಸಂದರ್ಭದಲ್ಲಿ ಗ್ರಹಿಸೋಣ. ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ ನಾಲ್ಕು ‘ಬಿಮಾರು’ ರಾಜ್ಯಗಳಲ್ಲಿನ ಒಟ್ಟು ಕ್ಷೇತ್ರಗಳ ಸಂಖ್ಯೆ 204. ಈ ಸ್ಥಾನಗಳಲ್ಲಿ ದೊಡ್ಡ ಪ್ರಮಾಣದ ಗೆಲುವು ಕಾಣುವ ಪಕ್ಷಕ್ಕೆ ದೆಹಲಿಯಲ್ಲಿ ಅಧಿಕಾರ ಖಚಿತ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಗೆ, 1984ರವರೆಗೆ ಕಾಂಗ್ರೆಸ್‌ಗೆ ಇದು ಸಾಧ್ಯವಾಗಿತ್ತು.

ಪುಟ್ಟದಾದ ಪುದುಚೇರಿ, ಲಕ್ಷದ್ವೀಪ ಮತ್ತು ಅಂಡಮಾನ್‌ನಲ್ಲಿನ ಸ್ಥಾನಗಳು ಹಾಗೂ ವಿಂಧ್ಯಪರ್ವತದ ದಕ್ಷಿಣಕ್ಕೆ ಇರುವ ರಾಜ್ಯಗಳಲ್ಲಿನ ಲೋಕಸಭಾ ಸ್ಥಾನಗಳ ಒಟ್ಟು ಸಂಖ್ಯೆ 185. ಸುಮ್ಮನೆ ಹೋಲಿಕೆ ಮಾಡಲೆಂದು, ಈ ಸಾಲಿಗೆ ಒಡಿಶಾ ರಾಜ್ಯವನ್ನೂ ಸೇರಿಸೋಣ. ಆಗ ಲೋಕಸಭಾ ಸ್ಥಾನಗಳ ಒಟ್ಟು ಸಂಖ್ಯೆ 205 ಆಗುತ್ತದೆ. ಒಂದಿಷ್ಟು ಸಾಮಾನ್ಯ ಗುಣಧರ್ಮಗಳನ್ನು ಹಂಚಿ ಕೊಂಡಿರುವ ಈ ಎಲ್ಲ ರಾಜ್ಯಗಳಲ್ಲಿನ ಲೋಕಸಭಾ ಕ್ಷೇತ್ರ ಗಳನ್ನು ಗೆದ್ದು, ದೇಶ ಆಳಲು ಅಗತ್ಯವಿರುವ ಸಂಖ್ಯಾ
ಬಲವನ್ನು ಒಗ್ಗೂಡಿಸಿಕೊಳ್ಳುವ ಆಸೆಯನ್ನು ಯಾರಾದರೂ ಹೊಂದಲು ಸಾಧ್ಯವೇ? ಇದು ಇಂದು ಅಸಾಧ್ಯದ ಮಾತು.

ರಾಜಕಾರಣ ಹಾಗೂ ರಾಜಕೀಯ ಆಯ್ಕೆಗಳಲ್ಲಿ ಬಹಳ ಹೆಚ್ಚಿನ ಸಾಮ್ಯತೆ ಹೊಂದಿರುವ ರಾಜ್ಯಗಳು ದೇಶವನ್ನು ಆಳುತ್ತಿದ್ದರೂ, ಗುಣಮಟ್ಟದ ಜೀವನದ ಅಳತೆಪಟ್ಟಿಯ ತಳಭಾಗದಲ್ಲಿ ಇವೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಪರಿಸ್ಥಿತಿ ಹೀಗೇ ಇತ್ತು. ಬಿಜೆಪಿ ಆಡಳಿತದ ಅವಧಿಯಲ್ಲಿಯೂ ಪರಿಸ್ಥಿತಿ ಅದೇ ರೀತಿ ಮುಂದುವರಿದಿದೆ. ಧರ್ಮ, ಜಾತಿ, ರಾಷ್ಟ್ರೀಯತೆಯ ಹೆಸರಿನಲ್ಲಿ ಜನ ಅಧಿಕಾರ ಕೊಟ್ಟರೆ, ಹಾಗೆ ಅಧಿಕಾರ ಕೊಟ್ಟ ಜನ ಸಾಂಕ್ರಾಮಿಕದ 12 ತಿಂಗಳ ಅವಧಿಯಲ್ಲಿ ಎರಡು ಬಾರಿ ಊರಿನ ಕಡೆ ದೌಡಾಯಿಸಬೇಕಾದ, ತಮ್ಮವರ ಘನತೆಯ ಅಂತ್ಯಸಂಸ್ಕಾರಕ್ಕೂ ದುಡ್ಡು ಇಲ್ಲದಂತಹ, ಶವವನ್ನು ನದಿಗೆ ಎಸೆಯಬೇಕಾದಂತಹ ಪರಿಸ್ಥಿತಿಯನ್ನು ತಂದಿರಿಸಲಾಗಿದೆ.

ಶೇಖರ್ ಗುಪ್ತ
ಶೇಖರ್ ಗುಪ್ತ

ವಿಂಧ್ಯಪರ್ವತದಿಂದ ದಕ್ಷಿಣಕ್ಕೆ ಬಹುತೇಕ ರಾಜ್ಯ ಗಳಲ್ಲಿ ಅಲ್ಲಿನದೇ ಆದ ರಾಜಕಾರಣ ಇದೆ, ಪ್ರಾದೇಶಿಕ ನಾಯಕರು ಅಲ್ಲಿ ಒಂದು ಹಂತದ ಮಟ್ಟಿಗಿನ ಒಳ್ಳೆಯ ಆಡಳಿತ ನೀಡಿದ್ದಾರೆ. ಇಲ್ಲಿನ ಜನ ತಮ್ಮ ಕುಟುಂಬದ ಸದಸ್ಯರ ಶವಗಳನ್ನು ನದಿಗೆ ಎಸೆಯಬೇಕಾದ ಪರಿಸ್ಥಿತಿ ಇಲ್ಲ. ಇಲ್ಲಿನ ಕೆಲವು ನಾಯಕರು ಭ್ರಷ್ಟರಾಗಿರಬಹುದು. ಆದರೆ, ಅವರು ಆಡಳಿತವನ್ನು ಉತ್ತಮವಾಗಿ ನೀಡುತ್ತಾರೆ. ಏಕೆಂದರೆ, ಇಲ್ಲಿನ ಮತದಾರರು ಅಸ್ಮಿತೆಯನ್ನು ಮಾತ್ರ ಆಧರಿಸಿ ಮತ ನೀಡಿರುವುದಿಲ್ಲ; ಸಾಧನೆ ನೋಡಿ ಮತ ಚಲಾಯಿಸಿರುತ್ತಾರೆ. ನೆನಪಿಡಿ, ನಾನು ಅಸ್ಮಿತೆಯನ್ನು ‘ಮಾತ್ರವೇ’ ನೋಡಿ ಮತ ಹಾಕುವುದಿಲ್ಲ ಎಂದು ಹೇಳಿದ್ದೇನೆ.

ದಕ್ಷಿಣದ ರಾಜ್ಯಗಳಲ್ಲಿ ತಮ್ಮದೇ ಆದ ರಾಜಕಾರಣ ಇರುವ ಕಾರಣ, ಅವು ದೆಹಲಿಯಲ್ಲಿ ಪರಿಗಣನೆಗೆ ಬರುವುದು ಕಡಿಮೆ. ಮೋದಿ ನೇತೃತ್ವದ ಸಂಪುಟವನ್ನು ಗಮನಿಸುವುದಾದರೆ, ದಕ್ಷಿಣದ ರಾಜ್ಯಗಳ ಹಿರಿಯ ಸದಸ್ಯರೆಲ್ಲ ರಾಜ್ಯಸಭೆಯವರು. ಇವರು ತಮ್ಮ ರಾಜ್ಯಗಳ ರಾಜಕಾರಣದಲ್ಲಿ ಭದ್ರ ನೆಲೆ ಹೊಂದಿರುವವರಲ್ಲ.

ದೇಶದಲ್ಲಿ ಅತ್ಯಂತ ಕಡಿಮೆ ವೇಗದಲ್ಲಿ ಜನಸಂಖ್ಯೆಯ ಬೆಳವಣಿಗೆ ಕಾಣುತ್ತಿರುವ, ಆರು ಅತ್ಯುತ್ತಮ ರಾಜ್ಯಗಳು ಈ ಪ್ರದೇಶದಲ್ಲಿ ಇವೆ. 1951ರಲ್ಲಿ ರಾಜ್ಯಗಳ ಅಂದಿನ ಜನಸಂಖ್ಯೆಯನ್ನು ಆಧರಿಸಿ ಲೋಕಸಭೆಯ ಸಂಖ್ಯಾಬಲ ವನ್ನು ತೀರ್ಮಾನಿಸಲಾಯಿತು. ಆ ಅಂತರ ಈಗ ಬೃಹತ್ ಆಗಿ ಬೆಳೆದಿದೆ. 1951ರಲ್ಲಿ ಉತ್ತರಪ್ರದೇಶದ (ಉತ್ತರಾಖಂಡ ಸೇರಿ) ಜನಸಂಖ್ಯೆಯು ತಮಿಳುನಾಡಿನ ಅಂದಿನ ಜನಸಂಖ್ಯೆಯ ಎರಡರಷ್ಟು ಇತ್ತು. ಉತ್ತರ ಪ್ರದೇಶಕ್ಕೆ ತಮಿಳುನಾಡಿಗಿಂತ ಎರಡು ಪಟ್ಟು ಹೆಚ್ಚಿನ ಲೋಕಸಭಾ ಸ್ಥಾನಗಳು ದೊರೆತವು. ಇಂದು ಜನಸಂಖ್ಯೆಯು ಮೂರುಪಟ್ಟು ಹೆಚ್ಚಾಗಿದೆ. 1951ರಲ್ಲಿ ಬಿಹಾರದ (ಜಾರ್ಖಂಡ್ ಸೇರಿ) ಜನಸಂಖ್ಯೆಯು ಕೇರಳದ ಜನಸಂಖ್ಯೆಯ ಎರಡು ಪಟ್ಟಿಗಿಂತ ತುಸು ಹೆಚ್ಚಿತ್ತು. ಬಿಹಾರಕ್ಕೆ ಆಗ 54 ಸ್ಥಾನಗಳು, ಕೇರಳಕ್ಕೆ 20 ಸ್ಥಾನಗಳನ್ನು ನೀಡಲಾಯಿತು. ಇಂದು ಬಿಹಾರದ ಜನಸಂಖ್ಯೆಯು ಕೇರಳದ ಜನಸಂಖ್ಯೆಯ ನಾಲ್ಕು ಪಟ್ಟಿಗಿಂತಲೂ ಜಾಸ್ತಿ ಇದೆ.

ಸಮಸ್ಯಾತ್ಮಕವಾದ ವಿಚಾರಗಳನ್ನು ಎದುರಿಸುವುದನ್ನೇ ಮುಂದಕ್ಕೆ ಹಾಕುವ ಕೆಲಸವನ್ನು ನಾವು ಮಾಡಿ ಕೊಂಡು ಬಂದಿದ್ದೇವೆ. 2001–02ರಲ್ಲಿ ಸಂವಿಧಾನ ತಿದ್ದುಪಡಿಯು ಸಂಸತ್ತಿನಲ್ಲಿನ ಸದಸ್ಯರ ಸಂಖ್ಯೆ ಹಾಗೂ ರಾಜ್ಯವಾರು ಹಂಚಿಕೆಗೆ ವಿರಾಮ ನೀಡಿತು. 2026ರ ನಂತರ ನಡೆಯುವ ಮೊದಲ ಜನಗಣತಿಯ ನಂತರ ಸಂಖ್ಯಾಬಲದ ವಿಚಾರ ಮತ್ತೆ ಚರ್ಚೆಗೆ ಬರುತ್ತದೆ. 2031ರಲ್ಲಿ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ರಾಜ್ಯಗಳಿಗೆ ಸಿಗುವ ಸಂಖ್ಯಾಬಲ ಎಷ್ಟಿರಬಹುದು ಎಂಬುದನ್ನು ನೀವು ಅಂದಾಜಿಸಬಹುದು. ಕೆಟ್ಟ ಆಡಳಿತ ಅಂದರೆ ಹೆಚ್ಚಿನ ಜನಸಂಖ್ಯೆ, ಅಂದರೆ ಅಧಿಕಾರ ಎನ್ನುವುದಾದರೆ ಭಾರತವು ದೊಡ್ಡ ಸುಳಿಯೊಂದರತ್ತ ಸಾಗುತ್ತಿದೆ ಎನ್ನಬೇಕು. ಗಂಗಾ ಮತ್ತು ಯಮುನಾ ನದಿಗಳಲ್ಲಿ ತೇಲಿಬಂದ ಶವಗಳು ಅಪಾಯದ ಮುನ್ಸೂಚನೆ ನೀಡುವಂಥವು– ಭೀತಿ ಹುಟ್ಟಿಸುವಂತಹ ಮೌನದೊಂದಿಗೆ ಎಚ್ಚರಿಕೆ ನೀಡುವಂಥವು.

ಲೇಖಕ: ‘ದಿ ಪ್ರಿಂಟ್‌’ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT