ಶನಿವಾರ, ಡಿಸೆಂಬರ್ 5, 2020
24 °C
ಶಾಲಾ– ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಹೇಗೆ?

ವಿಶ್ಲೇಷಣೆ | ಆರೋಗ್ಯದ ಎಚ್ಚರ ಮತ್ತು ಕಲಿಕಾ ಪ್ರಕ್ರಿಯೆ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

prajavani

ಶಾಲೆ–ಕಾಲೇಜುಗಳನ್ನು ತೆರೆಯುವುದರ ಕಡೆಗೆ ಬಹುತೇಕ ಎಲ್ಲರೂ ಚಿಂತಿಸುತ್ತಿರುವ ಈ ಹೊತ್ತಿನಲ್ಲಿ, ಮಕ್ಕಳು ಮತ್ತೆ ಕಲಿಕೆಗೆ ಸನ್ನದ್ಧಗೊಳ್ಳುವುದು ಹೇಗೆ ಎನ್ನುವುದು ಪ್ರಮುಖ ವಿಷಯವಾಗಿದೆ. ಕೊರೊನಾ ಭೀತಿ ಪೂರ್ತಿ ನಿವಾರಣೆಯಾಗಿಲ್ಲ. ಆ ಭೀತಿಯನ್ನು ಭಯಪಡಬಾರದ, ಆದರೆ ಸದಾ ಜಾಗೃತವಾಗಿ ಇರಲೇಬೇಕಾದ ಒಂದು ಮನಃಸ್ಥಿತಿಯಾಗಿ ಮಕ್ಕಳಲ್ಲಿ ರೂಪಿಸುವುದು ಸವಾಲಿನ ಕೆಲಸ. ಮೊದಲು ಪಾಲಕರು ಮತ್ತು ಶಿಕ್ಷಕರು ನಿರ್ಭೀತವಾದ, ಆದರೆ ಸದಾ ಜಾಗೃತವಾದ ಮನಃಸ್ಥಿತಿಯಲ್ಲಿ ತಮ್ಮನ್ನು ತಾವು ನೆಲೆಗೊಳಿಸಿಕೊಳ್ಳಬೇಕು.

ಸ್ಯಾನಿಟೈಸರ್ ಇರುತ್ತದೆ. ಅದನ್ನು ಹೇಗೆ ಬಳಸಬೇಕು ಎಂಬ ಮಾರ್ಗಸೂಚಿಯೂ ಇರುತ್ತದೆ. ಆದರೆ ಮಕ್ಕಳು ಒಟ್ಟು ಸೇರಿದಾಗ ಆ ಮಾರ್ಗಸೂಚಿಯು ದೈನಂದಿನ ರೂಢಿಯಾಗಿ ಮಾರ್ಪಡುವುದು ಸುಲಭದ ಕೆಲಸವಲ್ಲ. ನಮ್ಮ ರೂಢಿಗತ ವಿವರಣಾ ಪದ್ಧತಿಯು ‘ಹೀಗೆ ಮಾಡಬೇಕು, ಹೀಗೆ ಮಾಡಬಾರದು’ ಎಂಬ ನಿರ್ದೇಶನಗಳಷ್ಟೇ ಆಗಿರುತ್ತದೆ. ಇಂತಹ ನಿರ್ದೇಶನಗಳ ಉಲ್ಲಂಘನೆಯೂ ನಿರಂತರವಾಗಿ ಆಗುತ್ತಿರುತ್ತದೆ. ಉಲ್ಲಂಘನೆಯು ಶಿಕ್ಷಕರಿಗೊ, ಪಾಲಕರಿಗೊ ಕಣ್ಣಿಗೆ ಕಂಡಾಗ ‘ಹೀಗೆ ಮಾಡಬಾರದು’ ಎನ್ನುವುದು ಮಾಮೂಲಿ ಪದ್ಧತಿ.

ಆದರೆ, ಪ್ರಸ್ತುತ ಸನ್ನಿವೇಶವನ್ನು ಈ ಮಾದರಿಯಲ್ಲಿ ನಿರ್ವಹಿಸಲಾಗದು. ನಿರ್ದೇಶನವನ್ನು ಪಾಲಿಸಲೇಬೇಕಾದ ಅವಶ್ಯಕತೆ ಇದೆ. ಇದಾಗಬೇಕಾದರೆ ಮೊದಲು ಮಕ್ಕಳಿಗೆ ಯಾವುದನ್ನು ಯಾಕೆ ಮಾಡಬೇಕು, ಯಾಕೆ ಮಾಡಬಾರದು ಎಂಬ ವಿವರಣೆ ನೀಡಿ, ಅದನ್ನು ಮಕ್ಕಳು ಅರ್ಥ ಮಾಡಿಕೊಂಡು ಸ್ಪಂದಿಸುವ ಹಾಗೆ ಆಗಬೇಕು. ಅಷ್ಟೆಲ್ಲ ವಿವರಣೆಯನ್ನು ನೀಡಿದ ನಂತರ ಆಯಾ ಶಾಲಾ ಸನ್ನಿವೇಶಕ್ಕೆ ಅನುಗುಣವಾಗಿ ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎನ್ನುವ ನಿಖರವಾದ ಮಾರ್ಗದರ್ಶಿ ಸೂತ್ರಗಳನ್ನು ನೀಡಬೇಕು. ಅದಕ್ಕೆ ತಕ್ಕಂತೆ ಮಕ್ಕಳು ವರ್ತಿಸುತ್ತಾರೆಯೇ ಎಂಬುದನ್ನು ನಿರಂತರ ಅವಲೋಕನ ಮಾಡುತ್ತಾ ಪರಿಶೀಲಿಸಬೇಕಾಗುತ್ತದೆ. ಒಂದು ಹದಿನೈದು ದಿನಗಳ ಕಾಲ ಈ ರೀತಿಯ ಪರಿಶೀಲನೆಯನ್ನು ಮಾಡುತ್ತಾ ಹೋದರೆ ಒಂದು ತಿಂಗಳಿನಲ್ಲಿ ಮಕ್ಕಳ ದೈನಂದಿನ ಚಟುವಟಿಕೆಗಳನ್ನು ಎಚ್ಚರದ ನಡವಳಿಕೆಯಾಗಿ ರೂಢಿಸಲು ಬರುತ್ತದೆ.

ಆರೋಗ್ಯದ ಎಚ್ಚರ ಒಂದು ಭಾಗವಾದರೆ, ಕಲಿಕೆಗೆ ಮಕ್ಕಳನ್ನು ಸನ್ನದ್ಧಗೊಳಿಸುವುದು ಇನ್ನೊಂದು ಭಾಗ. ಕಲಿಕೆ ಒಂದು ನಿರಂತರವಾದ ಪ್ರಕ್ರಿಯೆ ಎಂಬುದು ಕಲಿಕೆಯ ತತ್ವ. ಶಾಲೆ–ಕಾಲೇಜು ಇಲ್ಲದೆ ಇದ್ದಾಗಲೂ ಮಕ್ಕಳು ಕಲಿತಿರುತ್ತಾರೆ. ಆದರೆ ಅದು ಪಠ್ಯದ ಕಲಿಕೆಯೇ ಆಗಿರುವುದಿಲ್ಲ ಮತ್ತು ಎಲ್ಲರೂ ಒಂದೇ ವಿಷಯವನ್ನು ಒಂದೇ ರೀತಿ ಕಲಿತಿರುವುದಿಲ್ಲ. ಆಗ ಪಠ್ಯಕೇಂದ್ರಿತವಲ್ಲದ ಕಲಿಕೆಯನ್ನು ಪಠ್ಯಕ್ಕೆ ಪೂರಕವಾಗಿ ಹೊಂದಿಸಿಕೊಳ್ಳಬೇಕೇ? ಹೊಂದಿಸಿಕೊಳ್ಳುವುದಿದ್ದರೆ ಹೇಗೆ ಎಂಬ ಪ್ರಶ್ನೆಗಳಿರುತ್ತವೆ. ‌ ನಿಜವಾಗಿ ಪಠ್ಯದ್ದಲ್ಲದ ಕಲಿಕಾ ಅನುಭವ
ಗಳನ್ನು ಪಠ್ಯಕ್ಕೆ ಹೊಂದಿಸಿಕೊಳ್ಳುವುದು ಪಠ್ಯ ಕಲಿಕೆ‌ಯನ್ನು ಚೇತೋಹಾರಿಯಾಗಿಯೂ ಪರಿಣಾಮಕಾರಿಯಾಗಿಯೂ ಮಾಡುತ್ತದೆ. ಆದರೆ ವಿದ್ಯಾರ್ಥಿಗಳ ಭಿನ್ನ ಕಲಿಕಾ ಅನುಭವಗಳನ್ನು ಸಾಮಾನ್ಯೀಕರಿಸಿ ಪರಿಗಣಿಸಲಾಗದು. ಆಗ ಭಿನ್ನ ಕಲಿಕಾನುಭವಗಳ ನಡುವೆ ಇರುವ ಸಾಮಾನ್ಯ ಅನುಭವಗಳನ್ನು ಗ್ರಹಿಸಿ ಪಠ್ಯಕ್ಕೆ ಹೊಂದಿಸಿಕೊಳ್ಳುವ ಸಾಮರ್ಥ್ಯ ಶಿಕ್ಷಕರಿಗೆ ಇರಬೇಕಾಗುತ್ತದೆ.

ಪಠ್ಯ ಕಲಿಕೆಯ ವಿಚಾರಕ್ಕೆ ಬಂದಾಗಲೂ ಆನ್‌ಲೈನ್‌ ತರಗತಿಗಳಿಗೆ ಎಲ್ಲ ವಿದ್ಯಾರ್ಥಿಗಳೂ ಒಂದೇ ರೀತಿ ಹಾಜರಾಗಿ ಸ್ವೀಕರಿಸಿರುವುದಿಲ್ಲ. ತರಗತಿಯಲ್ಲಾದರೆ ಎಲ್ಲ ವಿದ್ಯಾರ್ಥಿಗಳನ್ನೂ ಸಾಮಾನ್ಯ ಕಲಿಕಾ ಲಯದಲ್ಲಿಡುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ಶಿಕ್ಷಕರ ಪ್ರತ್ಯಕ್ಷ ಒಡನಾಟವಿಲ್ಲದ ಆನ್‌ಲೈನ್‌ ತರಗತಿಯಲ್ಲಿ ಇದು ಸಾಧ್ಯವಾಗಿರುವುದಿಲ್ಲ. ಅಲ್ಲಿ ಮಾಹಿತಿಯ ವರ್ಗಾವಣೆ ನಡೆದಿರುತ್ತದೆಯೇ ಹೊರತು ವಿದ್ಯಾರ್ಥಿಗಳ ನಿರ್ವಹಣೆಯಲ್ಲ. ಆನ್‌ಲೈನ್‌ ತರಗತಿಗಳು ಕಲಿಕೆಯನ್ನು ಸಾಧಿಸಿವೆ ಎನ್ನುವುದಕ್ಕಿಂತ ಕಲಿಕೆಯೊಂದಿಗಿನ ಸಂಪರ್ಕವನ್ನು ಉಳಿಸಿವೆ ಎನ್ನಬಹುದು. ಹಾಗಿರುವಾಗ ತರಗತಿಯಲ್ಲಿ ಕಲಿಕೆಯನ್ನು ಎಲ್ಲಿಂದ ಪ್ರಾರಂಭಿಸಬೇಕು? ಆನ್‌ಲೈನ್‌ನಲ್ಲಿ ಮುಗಿಸಿದ ಪಾಠಗಳನ್ನೂ ತರಗತಿ ಕಲಿಕೆಗೆ ಪರಿಗಣಿಸಬೇಕೇ? ಅಥವಾ ಮುಂದಿನ ಪಾಠಗಳ ನಿರ್ವಹಣೆಗೆ ಪೂರಕವಾಗುವಲ್ಲಿ ಮಾತ್ರ ಆನ್‌ಲೈನ್‌ನಲ್ಲಿ ಮುಗಿಸಿದ ಪಾಠಗಳ ವಿಚಾರವನ್ನು ಸಾಪೇಕ್ಷವಾಗಿ ತೆಗೆದುಕೊಳ್ಳಬೇಕೇ ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಾಗುತ್ತದೆ.

ಮಕ್ಕಳು ಶಾಲಾ ಕಾಲೇಜುಗಳಿಂದ ಹೊರಗಿದ್ದಾಗ ತಮ್ಮದೇ ಆದ ದಿನಚರಿಯನ್ನು ರೂಪಿಸಿಕೊಂಡು ಅದಕ್ಕೆ ಹೊಂದಿಕೊಂಡಿರುತ್ತಾರೆ. ಅದನ್ನೆಲ್ಲ ಮತ್ತೆ ಶಾಲೆ–ಕಾಲೇಜಿನ ಸಹಜ ದಿನಚರಿಗೆ ಒಗ್ಗಿಸಿಕೊಳ್ಳಬೇಕು. ಹೇಗೆ ಆ ಕೆಲಸವನ್ನು ಸಾಧಿಸಬೇಕು? ಅದಕ್ಕಿರುವ ವಿಧಾನಗಳೇನು? ಶಾಲೆಯ ಆಸಕ್ತಿ ಕಳೆದುಕೊಂಡವರಲ್ಲಿ ಮತ್ತೆ ಆಸಕ್ತಿಯನ್ನು ಮೊಳೆಯಿಸುವುದು ಹೇಗೆ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

ದೀರ್ಘಾವಧಿಯ ಶಾಲೆರಹಿತ ಅವಧಿಯಲ್ಲಿ ಒಂದಷ್ಟು ವಿದ್ಯಾರ್ಥಿಗಳು ಹಣ ಗಳಿಕೆಯ ಮಾರ್ಗೋಪಾಯ ಕಂಡುಕೊಂಡಿರುವ ವರದಿಯಾಗಿದೆ. ಹಣ ಬೇಕಾದವರು ಕೃಷಿಯೊ, ಕೃಷಿಗೆ ಪೂರಕವಾದದ್ದೊ ಏನಾದರೂ ಮಾಡಿ ಗಳಿಕೆಗೆ ಯತ್ನಿಸುವುದು ಸ್ವಾಭಾವಿಕ. ಆದರೆ ವೃತ್ತಿಯ ಹಂಬಲ ಹದಿಹರೆಯದ ಸಹಜ ಲಕ್ಷಣವೂ ಹೌದು. ಈ ವಿಧಾನದಲ್ಲಿ ಹಣ ಸಿಗುತ್ತದೆ ಎಂದು ಅನಿಸಿದ ಮೇಲೆ ಅದರ ಕಡೆಗೆ ಆಸಕ್ತಿ ಜಾಸ್ತಿ ಇರುತ್ತದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಈ ಪ್ರವೃತ್ತಿಯಿಂದ ಶಿಕ್ಷಣದ ಕಡೆಗೆ ಸೆಳೆದು ತರಬೇಕಾಗಿದೆ. ಮೊದಲನೆಯದಾಗಿ, ಪಾಲಕರು ಇದಕ್ಕೆ ಅವಕಾಶ ಮಾಡಿಕೊಡಬಾರದಿತ್ತು. ಈಗ ಅದನ್ನು ಹೇಳುವುದರಿಂದ ಉಪಯೋಗವಿಲ್ಲ. ಆದರೆ ಇನ್ನು ವಿದ್ಯಾರ್ಥಿಗಳನ್ನು ‘ಗಳಿಕೆ’ಯ ಪ್ರವೃತ್ತಿಯಿಂದ ‘ಕಲಿಕೆ’ಯ ಪ್ರವೃತ್ತಿಯ ಕಡೆಗೆ ತರುವುದರಲ್ಲಿ ಶಿಕ್ಷಕರ ಪಾತ್ರಕ್ಕಿಂತ ಪಾಲಕರ ಪಾತ್ರವೇ ಹಿರಿದಾಗಿದೆ. ಅದನ್ನು ಪಾಲಕರು ಹೇಗೆ ಮಾಡಬೇಕು ಎಂಬ ಬಗ್ಗೆ ಪಾಲಕರಿಗೆ ತರಬೇತು ಆಗಬೇಕು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ನೀಡಿದ ರೀತಿಯ ತರಬೇತಿಯನ್ನು ಶಾಲಾ ಕಾಲೇಜಿನ ಹಂತದಲ್ಲಿ ಪಾಲಕರಿಗೆ ನೀಡಬೇಕಾಗುತ್ತದೆ.

ಮೊಬೈಲ್ ಬಳಕೆಯ ವಿಚಾರ ಒಂದು ಸಮಸ್ಯೆಯಾಗಿದೆ. ಕೊರೊನಾ ಬರುವ ಮೊದಲು ಮಕ್ಕಳಿಗೆ ಮೊಬೈಲ್ ಬಳಸಬೇಡಿ ಎಂದೊ, ಕಡಿಮೆ ಮಾಡಿ ಎಂದೊ ನಿಷೇಧಾತ್ಮಕವಾಗಿ ಹೇಳುತ್ತಿದ್ದವರೆಲ್ಲರೂ ಕೊರೊನಾ ಬಂದ ನಂತರ, ಮೊಬೈಲ್ ಬಳಸಿ ಎನ್ನತೊಡಗ
ಬೇಕಾಯಿತು. ಮಕ್ಕಳ ಮೊಬೈಲ್ ಬಳಕೆ ಕೇವಲ ಪಾಠಕ್ಕೆ ಸೀಮಿತವಾಗಿರುತ್ತದೆ ಎಂದು ಯಾರೂ ಭಾವಿಸಲು ಸಾಧ್ಯವಿಲ್ಲ. ಆದರೆ ಮೊಬೈಲ್‌ನ ಮೋಹಕತೆಯಿಂದ ಮಕ್ಕಳನ್ನು ಹೊರಗೆ ತರಬೇಕು. ಇದು ಸಾಧ್ಯವಾಗಬೇಕಾದರೆ ಮಕ್ಕಳ ನಿರ್ವಹಣೆ ಹೆಚ್ಚು ದಕ್ಷತೆಯಿಂದ ಕೂಡಿರಬೇಕು. ಅವರಿಗೆ ಮನರಂಜನಾ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಸೃಜನಶೀಲ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಶಾರೀರಿಕ ಚಟುವಟಿಕೆಗಳಾದ ಕ್ರೀಡೆ, ವ್ಯಾಯಾಮಗಳನ್ನು ಹೆಚ್ಚಿಸಬೇಕು. ಒಟ್ಟಿನಲ್ಲಿ ಅವರು ವಿವಿಧ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವಂತಾಗಬೇಕು. ಆಗ ನಿಧಾನವಾಗಿ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಇದರ ಜೊತೆಗೆ ಮೊಬೈಲ್ ಅನ್ನು ಕಲಿಕೆಗೆ ಪೂರಕವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಕುರಿತೂ ಒಂದಷ್ಟು ಕೌಶಲಗಳನ್ನು ಮಕ್ಕಳಲ್ಲಿ ರೂಢಿಸಬೇಕಾಗುತ್ತದೆ.

ಶಾಲೆ ಪ್ರಾರಂಭದೊಂದಿಗೆ ಹಲವು ಚಟುವಟಿಕೆಗಳು ಗರಿಗೆದರುತ್ತವೆ. ಜೆರಾಕ್ಸ್ ಯಂತ್ರಗಳು ಕೆಲಸ ಶುರು ಮಾಡುತ್ತವೆ. ಸ್ಟೇಷನರಿ ಅಂಗಡಿಗಳು ವೇಗ ಪಡೆಯುತ್ತವೆ. ಐಸ್ ಕ್ಯಾಂಡಿ ಬರಲು ಶುರುವಾಗುತ್ತದೆ. ಇದನ್ನೆಲ್ಲ ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಆಯಾ ಶಾಲಾ ಕಾಲೇಜಿನ ಹಂತದಲ್ಲಿ ಯೋಜನೆಯನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗುತ್ತದೆ.

ಈ ಯಾವ ಸಂಗತಿಗಳೂ ರಾಜ್ಯದಾದ್ಯಂತ ಏಕರೂಪಿಯಾಗಿರುವುದಿಲ್ಲ. ಪ್ರತಿಯೊಂದು ಸಂಸ್ಥೆಯಲ್ಲೂ ಅದು ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಆದ್ದರಿಂದ ಶಾಲೆ–ಕಾಲೇಜುಗಳ ಮಟ್ಟದಲ್ಲೇ ಇದನ್ನೆಲ್ಲ ಪರಿಶೀಲಿಸಿ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಅಂದರೆ ಪಾಲಕರು ಮತ್ತು ಶಿಕ್ಷಕರ ಸಮನ್ವಯದಲ್ಲಿ ಅಂತಹದ್ದೊಂದು ವ್ಯವಸ್ಥೆ ನಿರ್ಮಾಣವಾಗಬೇಕು.


ಅರವಿಂದ ಚೊಕ್ಕಾಡಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.