ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ. ಸಂದೀಪ್ ಶಾಸ್ತ್ರಿ ಬರಹ: ಚುನಾವಣೆಗೆ ವರ್ಷ ಮೊದಲು...

ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಎಎಪಿಗೆ ಸಾಧ್ಯವೇ?
Last Updated 10 ಏಪ್ರಿಲ್ 2022, 20:24 IST
ಅಕ್ಷರ ಗಾತ್ರ

ನಾವು ಒಂದು ವರ್ಷದ ನಂತರದಲ್ಲಿ, ರಾಜ್ಯ ವಿಧಾನಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಡೆಯುವ ತುರುಸಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇರಲಿದ್ದೇವೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚುನಾವಣೆಗೆ ಅಗತ್ಯವಿರುವ ತಂತ್ರಗಾರಿಕೆಗಳು ಹಾಗೂ ಸಿದ್ಧತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ನಿರ್ದಿಷ್ಟ ಪರಿಪ್ರ್ಯೇಕ್ಷದಲ್ಲಿ ಇಟ್ಟು ನೋಡೋಣ.

ಸರಿಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ (1985ರ ನಂತರ) ರಾಜ್ಯದ ಮತದಾರರು ಆಡಳಿತದಲ್ಲಿ ಇದ್ದ ಪಕ್ಷಕ್ಕೆ ಮತ್ತೆ ಸ್ಪಷ್ಟ ಬಹುಮತವನ್ನು ನೀಡಿಲ್ಲ. 2004 ಹಾಗೂ 2018ರ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಕೆಲವರು ಈ ವಾದವನ್ನು ಪ್ರಶ್ನಿಸಬಹುದು. 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚಿಸಿದವು. 1999ರಿಂದ 2004ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿಗೆ ಬಹುಮತ ಸಿಗಲಿಲ್ಲ. ಅತಿದೊಡ್ಡ ಪಕ್ಷದ ಸ್ಥಾನವೂ ಅದಕ್ಕೆ ಸಿಗಲಿಲ್ಲ. ಆದರೆ, ಚುನಾವಣೆಯ ನಂತರ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಮರಳಿತು.

ಇದೇ ಬಗೆಯ ಪರಿಸ್ಥಿತಿ 2018ರ ಚುನಾವಣೆಯ ನಂತರವೂ ಸೃಷ್ಟಿಯಾಯಿತು. ಆಗ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಸದನದಲ್ಲಿ ಬಹುಮತ ಸಾಬೀತು ಮಾಡಲು ಸಾಧ್ಯವಾಗದ ಕಾರಣ ಬಿಜೆಪಿ ನೇತೃತ್ವದ ಸರ್ಕಾರ ಉರುಳಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಮೈತ್ರಿ ಸರ್ಕಾರ ರಚಿಸಿದವು. ಇಂದಿನ ವಿಧಾನಸಭೆಯ ಹಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಇನ್ನೊಂದು ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವುದು ಚುನಾಯಿತ ಪ್ರತಿನಿಧಿಗಳು ಯಾವ ಪಕ್ಷಕ್ಕೆ ಸೇರಿದವರು ಎಂಬುದರ ಹಿಂದೆ ಎಷ್ಟೆಲ್ಲ ಸಂಕೀರ್ಣತೆಗಳು ಇವೆ ಎನ್ನುವುದನ್ನು ಹೇಳುತ್ತದೆ. 2023ರಲ್ಲಿ ಕೂಡ 2004 ಹಾಗೂ 2018ರಲ್ಲಿ ಆಗಿದ್ದು ಮರುಕಳಿಸುತ್ತ
ದೆಯೇ ಎಂಬುದು ರಾಜಕೀಯ ಊಹೆಗೆ ಸಂಬಂಧಿಸಿದ ವಿಚಾರ.

ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾಲು ದಾರರು ಯಾರಾಗಿರುತ್ತಾರೆ? ಬಿಜೆಪಿ ಮತ್ತು ಕಾಂಗ್ರೆಸ್ ಪ್ರಮುಖ ಎದುರಾಳಿಗಳಾಗಿ, ಜೆಡಿಎಸ್‌ ಮೂರನೆಯ ಸ್ಪರ್ಧಿ ಆಗಿರುತ್ತದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಯಶಸ್ಸು ಕಂಡಿರುವ ಎಎಪಿ ಕರ್ನಾಟಕದಲ್ಲಿ ಅಸ್ತಿತ್ವ ದಾಖಲಿಸುವ ಯತ್ನದಲ್ಲಿದೆ. ಪ್ರಮುಖ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಏನಿರುತ್ತದೆ ಎಂಬುದನ್ನು ಗಮನಿಸು ವುದು ಕೂಡ ಇಲ್ಲಿ ಮುಖ್ಯ.

ಆಡಳಿತ ಪಕ್ಷ ಬಿಜೆಪಿಯು ತನ್ನ ಕೆಲಸಗಳಿಗೆ ಅನುಮೋದನೆ ನೀಡಿ, ಇನ್ನೊಂದು ಅವಧಿಗೆ ಅವಕಾಶ ಕೊಡಿ ಎಂದು ಜನರ ಮುಂದೆ ತೆರಳಲಿದೆ. ಕರ್ನಾಟಕ ದಲ್ಲಿ ಕಾಂಗ್ರೆಸ್ಸಿಗೆ ಸವಾಲು ಒಡ್ಡುವಲ್ಲಿ ಬಿಜೆಪಿ ಯಶಸ್ಸು ಕಂಡಿದೆ, ತನ್ನ ಕೆಲಸಗಳನ್ನು ಸಮರ್ಥಿಸಿಕೊಳ್ಳುವಲ್ಲಿ ಸೀಮಿತ ಯಶಸ್ಸನ್ನೂ ಕಂಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಛಾಯೆ ಪಕ್ಷದಲ್ಲಿ ಸ್ಪಷ್ಟ ವಾಗಿ ಕಾಣಿಸುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಯಡಿಯೂರಪ್ಪ ಅವರು, 2023ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ತಮ್ಮ ರಾಜಕೀಯ ಗುರಿ ಎಂದಿದ್ದರು.

ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷ ಮತ್ತು ಸರ್ಕಾರದ ಮೇಲೆ ತಮ್ಮ ರಾಜಕೀಯ ಅಸ್ತಿತ್ವ ಹಾಗೂ ನಿಯಂತ್ರಣವನ್ನು ಇನ್ನಷ್ಟೇ ಗಟ್ಟಿ ಮಾಡಿಕೊಳ್ಳಬೇಕಿದೆ. ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳನ್ನು ಮತದಾರರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂಬು ದರ ಆಧಾರದಲ್ಲಿ ಆಡಳಿತಾರೂಢ ಪಕ್ಷಗಳು ಜನಾದೇಶ ಪಡೆಯುತ್ತವೆ. ಉತ್ತರಪ್ರದೇಶ ಮತ್ತು ಮಣಿಪುರದಲ್ಲಿನ ಫಲಿತಾಂಶ ಇದಕ್ಕೆ ಒಂದು ಉದಾಹರಣೆ. ಹಾಗೆಯೇ, ಉತ್ತರಾಖಂಡ ಮತ್ತು ಗೋವಾದಲ್ಲಿ ಆದಂತೆ ರಾಜ್ಯ ಸರ್ಕಾರಗಳ ಕುರಿತಾಗಿನ ಅತೃಪ್ತಿಯನ್ನು ಕೇಂದ್ರ ಸರ್ಕಾರದ ಸಾಧನೆ ತೋರಿಸಿ (ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ) ಮೆತ್ತಗಾಗಿಸಲೂ ಸಾಧ್ಯ ವಿದೆ. ಬಿಜೆಪಿಯು ಮೊದಲ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತದೆಯೋ ಎರಡನೆಯ ದಾರಿಯನ್ನೋ ಎಂಬುದು ಕುತೂಹಲಕರ.

ಮೊದಲ ಹಾದಿ ಆಯ್ಕೆ ಮಾಡಿಕೊಳ್ಳುತ್ತದೆ ಎಂದಾ ದರೆ, ಮುಂದಿನ ತಿಂಗಳುಗಳಲ್ಲಿ ಸರ್ಕಾರದ ಕೆಲಸಗಳ ಪ್ರಯೋಜನ ಜನರಿಗೆ ತಲುಪುವುದು ಅನುಭವಕ್ಕೆ ಬರುತ್ತದೆ. ಪಕ್ಷದಲ್ಲಿ ಕಾರ್ಯತಂತ್ರ ರೂಪಿಸುವವರು ಚುನಾವಣಾ ಅಜೆಂಡಾವನ್ನು ಅಭಿವೃದ್ಧಿಯಿಂದ ಜಾತಿ ಮತ್ತು ಧರ್ಮ ಆಧಾರಿತ ಧ್ರುವೀಕರಣದ ಕಡೆ ತಿರುಗಿಸಲು ಬಯಸುವರೇ ಎಂಬುದನ್ನು ಕೂಡ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ.

ಕಾಂಗ್ರೆಸ್ಸಿಗೆ ಇದು ಅಸ್ತಿತ್ವದ ಹೋರಾಟವಾಗಲಿದೆ. ಈಚೆಗೆ ಕೊನೆಗೊಂಡ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಂತರದಲ್ಲಿ ಸ್ಪಷ್ಟವಾದಂತಿರುವ ಪಕ್ಷದ ಕುಸಿತವನ್ನು ತಡೆಯುವುದಕ್ಕಾಗಿನ ಹೋರಾಟ ಇದಾಗಿರ ಲಿದೆ. ಪಕ್ಷದ ‍ಪುನರುತ್ಥಾನಕ್ಕೆ ಕರ್ನಾಟಕವು ಪ್ರಮುಖವಾಗಲಿದೆ. ಇಲ್ಲಿ ಮೂರು ಅಂಶಗಳು ಮುಖ್ಯವಾಗಿವೆ. ಚುನಾವಣೆ ವೇಳೆ ಪಕ್ಷವು ಎಷ್ಟು ಪರಿಣಾಮಕಾರಿಯಾಗಿ ತನ್ನ ಅಜೆಂಡಾವನ್ನು ಜನರ ಮುಂದಿಡಲಿದೆ ಎಂಬುದು ಮುಖ್ಯ. ಇದುವರೆಗೆ ಪಕ್ಷವು ರಾಜ್ಯ ಮಟ್ಟದಲ್ಲಿ ಸಾರ್ವಜನಿಕ ಚರ್ಚೆಗಳು ನಡೆದಾಗ ಅದಕ್ಕೆ ಪ್ರತಿಕ್ರಿಯೆ ಮಾತ್ರ ನೀಡುತ್ತಿದೆಯೇ ವಿನಾ ತಾನೇ ಮುಂದಾಗಿ ಒಂದು ಚರ್ಚೆಯನ್ನು ಹುಟ್ಟುಹಾಕಿಲ್ಲ. ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ಸಿಗೆ ಆಡಳಿತಾರೂಢ ಪಕ್ಷದ ಸಾಧನೆಯ ಮೇಲೆ ಗಮನ ನೀಡಲು ಸಾಧ್ಯವಿದೆಯೇ?

ಎರಡನೆಯದಾಗಿ, ಪಕ್ಷವು ತನ್ನ ನಾಯಕರ ಮಟ್ಟದಲ್ಲಿ ತೋರಿಸಿರುವ ಒಗ್ಗಟ್ಟನ್ನು ಉಳಿಸಿ
ಕೊಳ್ಳಲಿದೆಯೇ? ಈ ಒಗ್ಗಟ್ಟು ಪಕ್ಷದ ಎಲ್ಲ ಹಂತಗಳಿಗೆ ತಲುಪಬೇಕಿದೆ. ಪ್ರಮುಖ ವಿಚಾರಗಳ ಬಗ್ಗೆ ಪಕ್ಷವು ಒಂದಾಗಿ ಕಾರ್ಯತಂತ್ರ ಹೆಣೆಯಬೇಕಾಗುತ್ತದೆ, ಅದರ ಬಗ್ಗೆ ಒಂದೇ ದನಿಯಲ್ಲಿ ಮಾತನಾಡಬೇಕಾಗುತ್ತದೆ. ಮೂರನೆಯ ಅಂಶವೆಂದರೆ, ಪಕ್ಷದೊಳಗೆ ರಾಷ್ಟ್ರಮಟ್ಟ ದಲ್ಲಿ ನಿರ್ಮಾಣವಾಗಿರುವ ಅನಿಶ್ಚಿತ ಸ್ಥಿತಿಯು ಬೇಗನೆ ಬಗೆಹರಿದು, ದೃಢ ಹಾಗೂ ನಿರ್ಣಾಯಕ ನಾಯಕತ್ವ ಅಲ್ಲಿ ಮೂಡಲಿದೆಯೇ? ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಬಲವಾದ ಪ್ರಚಾರ ನಡೆಸಬೇಕು ಎಂದಾದರೆ ಇದು ಮುಖ್ಯವಾಗುತ್ತದೆ.

ಜೆಡಿಎಸ್‌ ಪಕ್ಷಕ್ಕೆ ತನ್ನ ಚುನಾವಣಾ ಕಾರ್ಯತಂತ್ರ ಏನಿರಬೇಕು ಎಂಬ ವಿಚಾರವಾಗಿ ಸ್ಪಷ್ಟತೆ ಇದ್ದಂತಿಲ್ಲ. ಪಕ್ಷವು ತನ್ನ ನಾಯಕರನ್ನು ಕಳೆದುಕೊಳ್ಳುತ್ತಿದೆ, ನಾಯಕರು ಕಾಂಗ್ರೆಸ್ ಅಥವಾ ಬಿಜೆಪಿ ಕಡೆ ಸಾಗುತ್ತಿದ್ದಾರೆ (ಕೆಲವರು ಎಎಪಿ ಕಡೆಗೂ ಹೆಜ್ಜೆ ಹಾಕಬಹುದು). ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಇರಲಿ ಎಂಬುದು ಜೆಡಿಎಸ್‌ನ ಆಸೆ ಇದ್ದಿರಬಹುದು. ಆಗ ಜೆಡಿಎಸ್‌ಗೆ ಕಿಂಗ್‌ಮೇಕರ್ ಪಾತ್ರ ನಿಭಾಯಿಸಲು ಸಾಧ್ಯವಾಗುತ್ತದೆ.

ರಾಜಕೀಯದ ದಿಗಂತದಲ್ಲಿ ಮೂಡುತ್ತಿರುವ ನಾಲ್ಕನೆಯ ಪಕ್ಷದ ಕಡೆ ಈಗ ಗಮನ ಹರಿಸೋಣ. ಅದು ಆಮ್ ಆದ್ಮಿ ಪಕ್ಷ. ಪಂಜಾಬ್‌ನಲ್ಲಿ ಸಿಕ್ಕ ಯಶಸ್ಸಿನಿಂದ ಉತ್ತೇಜಿತವಾಗಿರುವ ಎಎಪಿ, ಅದೇ ರೀತಿ ಕರ್ನಾಟಕ ದಲ್ಲಿಯೂ ಯಶಸ್ಸು ಕಾಣಬಹುದು ಎಂಬ ನಿರೀಕ್ಷೆ ಯಲ್ಲಿದೆ. ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷವು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ನಗರದಲ್ಲಿ ಬಿಜೆಪಿ ನಂತರ ತಮ್ಮ ಪಕ್ಷವೇ ಮತದಾರರ ನೆಚ್ಚಿನ ಆಯ್ಕೆ ಎಂಬು ದನ್ನು ಸಮೀಕ್ಷೆಯೊಂದು ಹೇಳಿದೆ ಎಂದು ಎಎಪಿ ನಾಯಕರು ಹೇಳುತ್ತಿದ್ದಾರೆ.

ಎಎಪಿ ಪಂಜಾಬ್‌ನಲ್ಲಿ ಗೆದ್ದಿದ್ದಕ್ಕೆ ಕಾರಣ ಎಂಟು ವರ್ಷ ತಳಮಟ್ಟದಲ್ಲಿ ನಡೆಸಿದ ಕೆಲಸಗಳು ಎಂಬುದನ್ನು ಮರೆಯಬಾರದು. 2014ರಲ್ಲಿ ಎಎಪಿ ಪಕ್ಷದಿಂದ ಸ್ಪರ್ಧಿಸಿ, ಲೋಕಸಭೆ ಪ್ರವೇಶಿಸಿದ ಮೊದಲ ನಾಲ್ಕು ಜನ ಪಂಜಾಬ್‌ನವರು ಎಂಬುದನ್ನೂ ಗಮನಿಸಬೇಕು. ಪಂಜಾಬ್‌ನಲ್ಲಿ 2017ರ ವಿಧಾನಸಭಾ ಚುನಾವಣೆ ವೇಳೆ ಪಕ್ಷವು ಜನರ ಗಮನ ಸೆಳೆದಿತ್ತು. ಕರ್ನಾಟಕದಲ್ಲಿ ಇಂತಹ ಬೆಳವಣಿಗೆಗಳು ಕಂಡುಬಂದಿವೆಯೇ? ಪಂಜಾಬ್‌ನಲ್ಲಿ (ಮತ್ತು ದೆಹಲಿಯಲ್ಲಿ) ಕಂಡ ಯಶಸ್ಸನ್ನು ಮಾತ್ರವೇ ಆಧರಿಸಿ ಕರ್ನಾಟಕದಲ್ಲಿಯೂ ಯಶಸ್ಸು ಪಡೆಯುವ ಭರವಸೆ ಯನ್ನು ಅವರು ಇರಿಸಿಕೊಳ್ಳಬಹುದೇ? ರಾಜ್ಯದಲ್ಲಿ ಅವರಿಗೆ ಕೆಲವು ನಾಯಕರು ಇದ್ದಾರಾದರೂ, ಅವರು ನಾಗರಿಕರ ಪರ ಕೆಲಸಗಳಲ್ಲಿ ತೊಡಗಿಸಿಕೊಂಡಿ ದ್ದಾರಾದರೂ, ರಾಜ್ಯದ ರಾಜಕೀಯದಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಲು ಅಷ್ಟು ಸಾಕಾಗುತ್ತದೆಯೇ?

ಮುಂದಿನ ಒಂದು ವರ್ಷದಲ್ಲಿ ಇವೆಲ್ಲ ಅಂಶಗಳು ಪ್ರಧಾನವಾಗಿ ಗೋಚರಿಸಲಿವೆ. ಕರ್ನಾಟಕದ ರಾಜಕೀಯ ದಲ್ಲಿ ಇದು ಆಕರ್ಷಕ ಕಾಲಘಟ್ಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT