ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ತಂತ್ರಜ್ಞಾನ ದೈತ್ಯರ ಹೊಸ ಅಂಗಳ

ಮೆಟಾವರ್ಸ್: ತಂತ್ರಜ್ಞಾನ ವಲಯದಲ್ಲಿ ಹೊಸ ಕನಸು ಬಿತ್ತಿರುವ ವಾಸ್ತವೋಪಮ ಜಗತ್ತು
Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಉದ್ಯಮದ ವಲಯದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವ ಪದಗಳ ಸಾಲಿನಲ್ಲಿ ಮೆಟಾವರ್ಸ್ ಕೂಡ ಒಂದು. ಮೆಟಾವರ್ಸ್ ಅಂದರೆ ಹಲವು ಅರ್ಥಗಳು ಇವೆ. ಕಲ್ಪನೆಗಳನ್ನು ಹೇಗೆಲ್ಲ ಬೆಳೆಸಿಕೊಳ್ಳಬಹುದೋ ಹಾಗೆಲ್ಲ ವಿಕಾಸಗೊಳ್ಳುವ ವಾಸ್ತವೋಪಮ ಜಗತ್ತು ಇದಾಗಿರಬಹುದು. ಅಥವಾ ಇದು ವಾಣಿಜ್ಯ ಉದ್ದೇಶದ ಸಭೆಗಳನ್ನು ಮನೆಗಳಲ್ಲಿ ಇದ್ದುಕೊಂಡೇ ಆಯೋಜಿಸುವ ವೇದಿಕೆಯೂ ಆಗಿರಬಹುದು. ಈ ಪರಿಕಲ್ಪನೆಯ ಹಿಂದೆ ಬಿದ್ದಿರುವ ತಂತ್ರಜ್ಞಾನ ವಲಯದ ದೈತ್ಯ ಕಂಪನಿಗಳ ಪಾಲಿಗೆ ಇದು ಇಂದ್ರಿಯಗ್ರಾಹ್ಯವಾದ, ರಾಶಿಗಟ್ಟಲೆ ಹಣ ಮಾಡಿಕೊಳ್ಳುವ ಒಂದು ಅವಕಾಶ ಆಗಿರಬಹುದು.

ಮೊಬೈಲ್ ಕಂಪ್ಯೂಟಿಂಗ್‌ನಲ್ಲಿ ಆದ ಬೆಳವಣಿಗೆಯ ನೆರವಿನಿಂದ ಕೋಟ್ಯಂತರ ರೂಪಾಯಿಗಳನ್ನು ತಂತ್ರಜ್ಞಾನ ಕ್ಷೇತ್ರದ ದೈತ್ಯರು ಸಂಪಾದಿಸಿದರು. ಮೆಟಾವರ್ಸ್‌ (ವಾಸ್ತವೋಪಮ ಜಗತ್ತು) ಬಾಗಿಲುಗಳ ಮೇಲೆ ನಿಯಂತ್ರಣ ಸಾಧಿಸಿದರೆ ಹೊಸ ವಹಿವಾಟೊಂದರ ಕೇಂದ್ರ ಸ್ಥಾನದಲ್ಲಿ ನಿಂತಂತೆ ಆಗುತ್ತದೆ ಎಂದು ತಂತ್ರಜ್ಞಾನ ವಲಯದ ಪ್ರಭಾವಿಗಳು ನಂಬಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆಯೊಂದು ಬರಲಿ ಎಂದು ಹದಿನೈದು ವರ್ಷ ಕಾಯುವುದು ಉದ್ಯಮದ ಪಾಲಿಗೆ ದೀರ್ಘ ಅವಧಿಯಾಗುತ್ತದೆ. ಕೃತಕ ಬುದ್ಧಿಮತ್ತೆಯ ಮುಂದುವರಿದ ಹಂತಗಳು ಮತ್ತು ಕ್ವಾಂಟಂ ಕಂಪ್ಯೂಟಿಂಗ್, ಉದ್ಯಮದ ಕೇಂದ್ರ ಸ್ಥಾನಕ್ಕೆ ಬಂದಿರುತ್ತವೆ ಎಂದು ಹಲವರು ಭಾವಿಸಿದ್ದರು. ಆದರೆ, ಹಾಗೆ ಆಗುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಕ್ರಿಪ್ಟೊಕರೆನ್ಸಿಗಳ ಹಿಂದಿರುವ ತಂತ್ರಜ್ಞಾನ, ವಿಕೇಂದ್ರೀಕೃತ ಕಂಪ್ಯೂಟಿಂಗ್‌ ಬಗ್ಗೆ ಭರವಸೆ ಇದೆಯಾದರೂ ಇವು ಮುಖ್ಯವಾಹಿನಿಯ ಭಾಗವಾಗುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ತಂತ್ರಜ್ಞಾನ ಕಂಪನಿಗಳು, ಗ್ರಾಹಕರಿಗೆ ವಾಸ್ತವೋಪಮ ವಿಶ್ವವನ್ನು ಪ್ರವೇಶಿಸಲು ಅನುವು ಮಾಡಿಕೊಡುವ ಸಾಧನಗಳನ್ನು ಮಾರಾಟ ಮಾಡಿ, ವಾಸ್ತವೋಪಮ ಜಗತ್ತಿನಲ್ಲಿ ಗ್ರಾಹಕರು ಪಡೆಯುವ ಅನುಭವವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹವಣಿಕೆಯಲ್ಲಿ ಇವೆ.

ಮಾರ್ಕ್‌ ಝುಕರ್‌ಬರ್ಗ್‌ ಅವರಿಗೆ ಮೆಟಾವರ್ಸ್ ಬಗ್ಗೆ ಅದೆಷ್ಟು ರೋಮಾಂಚನವೆಂದರೆ ಅವರು ತಮ್ಮ ಕಂಪನಿ ಫೇಸ್‌ಬುಕ್‌ನ ಹೆಸರನ್ನು ಈಚೆಗೆ ಮೆಟಾ ಎಂದು ಬದಲಿಸಿದ್ದಾರೆ. ಗೂಗಲ್ ಕಂಪನಿಯು ಮೆಟಾವರ್ಸ್‌ಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಗಮನದಲ್ಲಿ ಇರಿಸಿಕೊಂಡು ಕೆಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದೆ. ಮೊಬೈಲ್‌ ಲೋಕದಲ್ಲಿನ ಬೆಳವಣಿಗೆಯಿಂದ ಬಹುದೊಡ್ಡ ಪ್ರಯೋಜನ ಪಡೆದ ಆ್ಯಪಲ್ ಕಂಪನಿಯು ಮೆಟಾವರ್ಸ್‌ಗಾಗಿ ತನ್ನದೇ ಆದ ಸಾಧನಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ‘ಮೆಟಾವರ್ಸ್‌ನ ಕಾಲ ಹತ್ತಿರವಾಗುತ್ತಿದೆ ಎಂಬುದನ್ನು ಬಹುತೇಕ ಕಂಪನಿಗಳು ಮನಗಂಡಿವೆ. ಆದರೆ ಈ ತಂತ್ರಜ್ಞಾನದ ವಾಸ್ತವಕ್ಕಿಂತಲೂ ಅದರ ಸುತ್ತಲಿನ ಸಂಕಥನವು ತುಸು ಮುಂದಕ್ಕೆ ಹೆಜ್ಜೆ ಇರಿಸಿದೆ’ ಎಂದು ಹೂಡಿಕೆದಾರ (ವೆಂಚರ್ ಕ್ಯಾಪಿಟಲಿಸ್ಟ್), ಬರಹಗಾರ ಮ್ಯಾಥ್ಯೂ ಬಾಲ್ ಹೇಳುತ್ತಾರೆ. ಒಂದು ಅಂದಾಜಿನ ಪ್ರಕಾರ, ಮೆಟಾವರ್ಸ್ ತಂತ್ರಜ್ಞಾನದ– ಗೇಮ್ಸ್‌, ವಾಸ್ತವೋಪಮ ಹೆಡ್‌ಸೆಟ್‌ಗಳು ಮತ್ತು ಇತರ ಆನ್‌ಲೈನ್‌ ಸೇವೆಗಳಿಗೆ ಸಂಬಂಧಿಸಿದ ಸಲಕರಣೆಗಳು– ಮಾರುಕಟ್ಟೆಯು 2020ರಲ್ಲಿ ₹ 3.62 ಲಕ್ಷ ಕೋಟಿಯನ್ನು ದಾಟಿದೆ. ಈ ಮಾರುಕಟ್ಟೆಯು ಪ್ರತಿವರ್ಷವೂ ಶೇಕಡ 40ಕ್ಕಿಂತ ಹೆಚ್ಚಿನ ಪ್ರಮಾಣದ ಬೆಳವಣಿಗೆಯನ್ನು ಕಾಣಲಿದೆ.

ಇದು ಇಂಟರ್ನೆಟ್‌ನ ವಿಕಾಸದ ಹಂತ. ಮೈಕ್ರೊಸಾಫ್ಟ್‌ನಂತಹ ಕಂಪನಿಗಳು ಇಂತಹ ವಿಕಾಸದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಯಸುತ್ತವೆ ಎಂದು ಅಲೆಕ್ಸ್ ಕಿಪ್‌ಮನ್ ತಿಳಿಸಿದರು. ಇವರು ಮೈಕ್ರೊಸಾಫ್ಟ್‌ ಕಂಪನಿಯಲ್ಲಿ ದಶಕಕ್ಕೂ ಹೆಚ್ಚಿನ ಅವಧಿಯಿಂದ ಇಂತಹ ತಂತ್ರಜ್ಞಾನಗಳ ನಿರ್ವಹಣೆಯ ಅನುಭವ ಹೊಂದಿದ್ದಾರೆ. ಫೇಸ್‌ಬುಕ್‌ನಂತಹ ಕಂಪನಿಗಳು ತಮ್ಮ ಗಮನವನ್ನು ಮೆಟಾವರ್ಸ್‌ ಕಡೆ ಹರಿಸುವುದರಿಂದ, ಫೇಸ್‌ಬುಕ್‌ನಲ್ಲಿನ ವಸ್ತು–ವಿಷಯಗಳ ನಿಯಂತ್ರಣ, ಸುಳ್ಳು ಮಾಹಿತಿ ತಡೆಯುವ ಸಮಸ್ಯೆಗಳಲ್ಲದೆ ಬೇರೆ ಕಡೆಯೂ ಗಮನ ಹರಿಸಲು ಸಾಧ್ಯವಾಗುತ್ತದೆ. ಕಾನೂನು ಜಾರಿ ಸಂಸ್ಥೆಗಳು ಈ ಕಂಪನಿಗಳ ವಿರುದ್ಧ ಏಕಸ್ವಾಮ್ಯದ ಆರೋಪ ಹೊರಿಸುವ ಪ್ರಮೇಯವೂ ಇರುವುದಿಲ್ಲ. ಆದರೆ, ಮೆಟಾವರ್ಸ್‌ನಲ್ಲಿ ಖಾಸಗಿತನದ ಸುರಕ್ಷತೆಯಂತಹ ವಿಷಯಗಳ ಮೇಲೆ ಗಮನ ಇರಿಸಬೇಕಾದ ಸಂದರ್ಭ ಎದುರಾಗಬಹುದು.

ಮೆಟಾವರ್ಸ್ ಎಂಬುದು ಹೊಸ ಪರಿಕಲ್ಪನೆಯೇನೂ ಅಲ್ಲ. ವಿಜ್ಞಾನ ಕಾದಂಬರಿಕಾರ ನೀಲ್ ಸ್ಟೀಫನ್‌ಸನ್‌ ಅವರು 1992ರಲ್ಲಿ ಈ ಪದವನ್ನು ಮೊದಲಿಗೆ ಬಳಸಿದ್ದರು. ಈ ಪರಿಕಲ್ಪನೆಯನ್ನು ವಿಡಿಯೊ ಗೇಮ್ ಕಂಪನಿಗಳು ಹೆಚ್ಚಾಗಿ ಬಳಸುತ್ತಿವೆ. ಹಲವರು ಸೇರಿ ಏಕಕಾಲದಲ್ಲಿ ಆಡಬಹುದಾದ ಆನ್‌ಲೈನ್‌ ಆಟಗಳು ಈಚಿನ ದಿನಗಳಲ್ಲಿ ಡಿಜಿಟಲ್ ಜಗತ್ತಿನ ಮಾದರಿಯಲ್ಲಿ ಕೆಲಸ ಮಾಡಿವೆ. ಇಲ್ಲಿ ಬೇರೆ ಬೇರೆ ಕಡೆಗಳ ಜನ ಒಂದೆಡೆ ಸೇರಬಹುದು, ಮಾತುಕತೆ ನಡೆಸಬಹುದು. 2014ರಲ್ಲಿ ಫೇಸ್‌ಬುಕ್‌ ಕಂಪನಿಯು ₹ 14 ಸಾವಿರ ಕೋಟಿ ಪಾವತಿಸಿ ಅಕ್ಯುಲಸ್ ಕಂಪನಿಯನ್ನು ಖರೀದಿಸಿತು. ಈ ನವೋದ್ಯಮ ಕಂಪನಿಯು ವಾಸ್ತವೋಪಮ ಹೆಡ್‌ಸೆಟ್‌ಗಳನ್ನು ತಯಾರಿಸುತ್ತಿತ್ತು. ನೀವು ಒಂದು ಡಿಜಿಟಲ್ ಜಗತ್ತಿನಲ್ಲಿ ಇದ್ದೀರಿ ಎಂಬ ಭ್ರಮೆಯನ್ನು ಮೂಡಿಸುವ ಕನ್ನಡಕಗಳನ್ನು ಸಿದ್ಧಪಡಿಸುತ್ತಿತ್ತು. ಕಂಪ್ಯೂಟಿಂಗ್ ಜಗತ್ತಿನಲ್ಲಿ ಭವಿಷ್ಯದ ವೇದಿಕೆ ವಾಸ್ತವೋಪಮ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು ಎಂದುಝುಕರ್‌ಬರ್ಗ್‌ ಆಗಲೇ ಹೇಳಲು ಆರಂಭಿಸಿದ್ದರು. ಆನ್‌ಲೈನ್‌ ಜಗತ್ತಿನ ಆಟಗಳಿಗಿಂತಲೂ ಹೆಚ್ಚು ವ್ಯಾಪಕವಾಗಿ ಮೆಟಾವರ್ಸ್‌ ನಮ್ಮ ಬದುಕನ್ನು ಆವರಿಸಲಿದೆ ಎಂಬುದು ಝುಕರ್‌ಬರ್ಗ್‌ ಹೇಳಿಕೆ. ಉತ್ಪನ್ನಗಳ ಖರೀದಿಗೆ, ಸೇವೆಗಳ ಬಳಕೆಗೆ ಮೆಟಾವರ್ಸ್‌ ಹೊಸ ವೇದಿಕೆಗಳನ್ನು ಕಲ್ಪಿಸಿಕೊಡಲಿದೆ. ಕುಟುಂಬದ ಸದಸ್ಯರ ಜೊತೆ, ಸ್ನೇಹಿತರ ಜೊತೆ ಮಾತುಕತೆ ನಡೆಸಲು ಹಾಗೂ ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸಲು ಹೊಸ ಮಾರ್ಗಗಳನ್ನು ರೂಪಿಸಿಕೊಡಲಿದೆ.

ಅತ್ಯಂತ ಜನಪ್ರಿಯವಾದ, ಗ್ರಾಹಕ ಸ್ನೇಹಿ ಆಗಿರುವ ಸಾಧನಗಳನ್ನು ತಯಾರಿಸುವಲ್ಲಿ ಹೆಸರು ಮಾಡಿರುವ ಆ್ಯಪಲ್ ಕಂಪನಿಯು ಮೆಟಾವರ್ಸ್‌ಗೆ ಅಗತ್ಯವಿರುವ ಹೆಡ್‌ಸೆಟ್‌ಗಳಲ್ಲಿ ಸುಧಾರಣೆ ತರುವ ಕೆಲಸ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ. ಆದರೆ ಈ ಕುರಿತು ಮಾಹಿತಿ ನೀಡಲು ಆ್ಯಪಲ್ ನಿರಾಕರಿಸಿದೆ. ಮೆಟಾವರ್ಸ್‌ ಅನ್ನು ಅನುಭವಿಸಲು ಅಗತ್ಯವಿರುವ ಹಗುರವಾದ ಕನ್ನಡಕಗಳ ಲಭ್ಯತೆಯನ್ನು ಆಧರಿಸಿ, ಝುಕರ್‌ಬರ್ಗ್‌ ಅವರ ಕನಸು ನನಸಾಗುತ್ತದೆ ಎಂಬುದು ತಜ್ಞರ ಅಂಬೋಣ. ಈ ಕನ್ನಡಕಗಳು ತಮ್ಮ ಮೂಲಕ ಕಾಣಿಸುವ ನಿಜ ಜಗತ್ತಿನ ಮೇಲೊಂದು ಪರದೆಯನ್ನು ಸೃಷ್ಟಿಸಿ, ಅಲ್ಲಿ ಡಿಜಿಟಲ್ ಜಗತ್ತಿನ ವಿದ್ಯಮಾನಗಳನ್ನು ತೋರಿಸಬಲ್ಲವು.

ಇಂತಹ ಕನ್ನಡಕ ಧರಿಸಿ ಬೀದಿಗಳಲ್ಲಿ ನಡೆದುಕೊಂಡು ಹೋಗುವ ಜನ, ತಮ್ಮ ಕಣ್ಣೆದುರು ಸದಾ ಇರುವ ಡಿಜಿಟಲ್ ಪರದೆಯೊಂದರ ಮೂಲಕ ಕ್ರೀಡೆಯೊಂದರ ವಿವರಗಳನ್ನು ಗಮನಿಸಬಲ್ಲರು. ತಮ್ಮ ಪಕ್ಕದಲ್ಲಿ ಇರುವವರ ಜೊತೆ, ಪಕ್ಕದಲ್ಲಿ ಇಲ್ಲದವರ ಜೊತೆ ಒಂದೇ ಬಾರಿಗೆ ಮೆಟಾವರ್ಸ್ ಮೂಲಕ ಸಭೆ ನಡೆಸಬಲ್ಲರು. ಇಂತಹ ಕನ್ನಡಕಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಗಳ ಸಾಲಿಗೆ ಗೂಗಲ್ ಕೂಡ ಸೇರಿದೆ. ಕಳೆದ ವರ್ಷದಲ್ಲಿ ಗೂಗಲ್ ಕಂಪನಿಯು ನಾರ್ತ್‌ ಎಂಬ ನವೋದ್ಯಮವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಈ ನಾರ್ತ್‌ ಕಂಪನಿಯು ಸ್ಮಾರ್ಟ್‌ಗ್ಲಾಸ್‌ಗೆ ಸಂಬಂಧಿಸಿದ ಹಲವು ಹಕ್ಕುಸ್ವಾಮ್ಯಗಳನ್ನು ತನ್ನದಾಗಿಸಿಕೊಂಡಿದೆ. ಈ ಸ್ಮಾರ್ಟ್‌ಗ್ಲಾಸ್‌ಗಳು ತಮ್ಮನ್ನು ಧರಿಸಿದವರ ಕಣ್ಣಮುಂದೆ ಡಿಜಿಟಲ್ ಚಿತ್ರಗಳನ್ನು ಮೂಡಿಸುತ್ತವೆ.

‘ನಾವು ಅದ್ಭುತ ಉತ್ಪನ್ನಗಳನ್ನು ಸಿದ್ಧಪಡಿಸಬಹುದು. ಹಾಗೆ ಮಾಡುವಲ್ಲಿ ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ಯಾವ ಸಮಸ್ಯೆಯೂ ಇಲ್ಲ. ಇಲ್ಲಿ ವಾಣಿಜ್ಯ ವಹಿವಾಟಿನ ಮಾದರಿಗಳಿಗೆ ಸಂಬಂಧಿಸಿದಂತೆಯೂ ಸಮಸ್ಯೆ ಇಲ್ಲ. ಇಂತಹ ಉಪಕರಣಗಳನ್ನು ಬಳಸಲಿಕ್ಕೆ ಒಂದು ದಾರಿಯನ್ನು ಕಂಡುಕೊಳ್ಳುವುದು ದೊಡ್ಡ ಸಂಗತಿಯಲ್ಲ. ಆದರೆ ಇಲ್ಲಿ, ದತ್ತಾಂಶ ಸೋರಿಕೆ ಆದರೆ ಮುಂದೇನಾಗುತ್ತದೆ ಎಂಬುದೇ ಬಹುದೊಡ್ಡ ಪ್ರಶ್ನೆ’ ಎಂದು ಇಂಟೆಲ್ ಕಂಪನಿಯಲ್ಲಿ ವಾಸ್ತವೋಪಮ ಯೋಜನೆಯೊಂದರಲ್ಲಿ ಕೆಲಸ ಮಾಡಿರುವ ಜೆರ್‍ರಿ ಬಟಿಸ್ಟಾ ಹೇಳುತ್ತಾರೆ.

ದಿ ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT