ಗುರುವಾರ , ಡಿಸೆಂಬರ್ 1, 2022
20 °C
ಸದ್ಯದ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಮುಂದೆ ಇರುವುದು ಎರಡೇ ಮಾರ್ಗ

ವಿಶ್ಲೇಷಣೆ: ರಾಹುಲ್‌ ಮತ್ತು ರಾಜಕೀಯ ತಂತ್ರಗಾರಿಕೆ

ದಿನೇಶ್ ಅಮಿನ್ ಮಟ್ಟು Updated:

ಅಕ್ಷರ ಗಾತ್ರ : | |

ರಾಜಕಾರಣದಲ್ಲಿದ್ದು ರಾಜಕಾರಣಿಯಾಗಲು ನಿರಾಕರಿಸುತ್ತಿರುವುದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಜವಾದ ಸಮಸ್ಯೆ. ಇದು, ಕಳೆದ 18 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಅವರು ಎದುರಿಸಿಕೊಂಡು ಬರುತ್ತಿರುವ ಆಂತರಿಕ ಸಂಘರ್ಷವೂ ಹೌದು. ರಾಜಕಾರಣದಲ್ಲಿ ರಾಜಕಾರಣಿಗಳಿಗಷ್ಟೇ ಜಾಗ, ಸಂತ-ಸನ್ಯಾಸಿಗಳಿಗಲ್ಲ ಎನ್ನುವ ಸರಳ ಸತ್ಯ ಅವರಿಗಿನ್ನೂ ಅರ್ಥವಾದಂತಿಲ್ಲ.

ಮಹಾತ್ಮ ಗಾಂಧೀಜಿಯೂ ಸಂತರಾಗಿರಲಿಲ್ಲ, ಅವರು ಈ ದೇಶ ಕಂಡ ಅತ್ಯಂತ ಚಾಣಾಕ್ಷ ರಾಜಕಾರಣಿಯಾಗಿದ್ದರು. ಸುಭಾಷ್ ಚಂದ್ರ ಬೋಸ್ ಅವರಿಂದ ಹಿಡಿದು ಬಾಬಾಸಾಹೇಬ್ ಅಂಬೇಡ್ಕರ್‌ ಅವರವರೆಗೆ ತಮ್ಮ ಎಲ್ಲ ಪ್ರತಿಸ್ಪರ್ಧಿಗಳನ್ನೂ ಗಾಂಧೀಜಿ ರಾಜಕಾರಣಿಯಾಗಿಯೇ ಎದುರಿಸಿ ಪಕ್ಕಕ್ಕೆ ಸರಿಸಿದ್ದರು. ಅವರ ಅಹಿಂಸಾ ಹೋರಾಟವೂ ಶಸ್ತ್ರಪ್ರಯೋಗ ಮಾಡದೆ ಎದುರಾಳಿಯನ್ನು ನಿಶ್ಶಸ್ತ್ರಗೊಳಿಸುವ ರಾಜಕೀಯ ತಂತ್ರವಾಗಿತ್ತು.

ಅಧಿಕಾರ ಬೇಡ ಎನ್ನುವವರು ಮೊದಲು ಅದನ್ನು ಗಳಿಸಬೇಕಾಗುತ್ತದೆ. ಕೈಯಲ್ಲಿ ಇಲ್ಲದ ಅಧಿಕಾರವನ್ನು ತ್ಯಾಗ ಮಾಡಲು ಬರುವುದಿಲ್ಲ ಎನ್ನುವ ಸರಳ ಸತ್ಯವನ್ನು ತಮ್ಮ ತಾಯಿಯಿಂದಾದರೂ ರಾಹುಲ್ ಕಲಿಯಬೇಕಿತ್ತು. ‘ಸೋನಿಯಾ ಲಾವೋ ಕಾಂಗ್ರೆಸ್ ಬಚಾವೋ’ ಎಂದು ಮನೆ ಎದುರು ಉರುಳು ಸೇವೆ ಮಾಡಿ ತಮ್ಮನ್ನು ರಾಜಕೀಯಕ್ಕೆ ಎಳೆದು ತಂದಿದ್ದ ಇದೇ ಪವಾರ್-ಸಂಗ್ಮಾತಾರೀಕ್ ಗ್ಯಾಂಗ್ ‘ನೀವೊಬ್ಬರು ವಿದೇಶಿ’ ಎಂದು ಜರಿದಾಗ ಸೋನಿಯಾ ಗಾಂಧಿ ಕುಸಿದುಹೋಗಿದ್ದರಂತೆ. ಆಗಲೂ ‘ಸಾಕಮ್ಮಾ ರಾಜಕೀಯ, ರಾಜೀನಾಮೆ ಎಸೆದುಬಿಡು’ ಎಂದು ರಾಜೀನಾಮೆ ಬರೆಸಿದ್ದು ಇದೇ ರಾಹುಲ್ ಮತ್ತು ಪ್ರಿಯಾಂಕಾ.

ಸೋನಿಯಾ ಗಾಂಧಿಯವರ ಯೋಜನೆಯೇ ಬೇರೆಯಾಗಿತ್ತು. ಆ ಹೊತ್ತಿನಲ್ಲಿ ಅವರು ಕೈಗೊಂಡಿದ್ದ ನಿರ್ಧಾರವು ಮಹಾಭಾರತದಲ್ಲಿ ದ್ರೌಪದಿ ತೆಗೆದುಕೊಂಡ ನಿರ್ಧಾರವಾಗಿತ್ತು. ತನ್ನವರಿಂದಲೇ ಅವಮಾನಿತರಾದ ಆ ದಿನದಿಂದ 2004ರ ಲೋಕಸಭಾ ಚುನಾವಣೆಯ ಫಲಿತಾಂಶದ ದಿನದವರೆಗಿನ ನಾಲ್ಕು ವರ್ಷಗಳ ಕಾಲ ಸೋನಿಯಾ ಗಾಂಧಿ ನಡೆಸಿದ್ದ ಹೋರಾಟದಲ್ಲಿ ಸೇಡಿನ ಜ್ವಾಲೆ, ಸ್ವಾಭಿಮಾನದ ಸಂಘರ್ಷ ಮತ್ತು ರಾಜಕೀಯ ಎಲ್ಲವೂ ಇದ್ದವು. ಕೊನೆಗೂ ಕೈಗೆ ಬಂದ ಅಧಿಕಾರವನ್ನು ತ್ಯಾಗ ಮಾಡಿ ಅವರು ನಾಯಕಿಯಾದರು. ಆ ಬಲದಿಂದಲೇ ಇಂದಿಗೂ ಅವರು ನಾಯಕಿಯಾಗಿಯೇ ಉಳಿದಿದ್ದಾರೆ. ಒಂದೊಮ್ಮೆ ಆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದರೆ? ದೇಶದ ಜನ ಮಾತ್ರವಲ್ಲ ಕಾಂಗ್ರೆಸ್ಸಿಗರೂ ಸೋನಿಯಾ ಅವರನ್ನು ಮರೆತುಬಿಟ್ಟು ವರ್ಷಗಳೇ ಆಗಿರುತ್ತಿದ್ದವು.

ರಾಹುಲ್ ಆಗಾಗ ನೆನಪು ಮಾಡಿಕೊಳ್ಳುವ ಅವರ ಅಜ್ಜಿ ಇಂದಿರಾ ಗಾಂಧಿಯವರೂ ಇದೇ ರೀತಿ ರಾಜಕೀಯ ಅಸ್ತಿತ್ವದ ಸಂಘರ್ಷವನ್ನು ಎದುರಿಸಿ ಗೆದ್ದವರು. ಕಾಮರಾಜ್ ನಾಡಾರ್ ಅವರಿಂದ ಹಿಡಿದು ಎಸ್.ನಿಜಲಿಂಗಪ್ಪನವರವರೆಗೆ ಪಕ್ಷದ ಘಟಾನುಘಟಿ ನಾಯಕರು ತಿರುಗಿಬಿದ್ದಾಗ ಇಂದಿರಾ ಗಾಂಧಿ ಉತ್ತರ ಕೊಟ್ಟದ್ದು 1971ರ ಚುನಾವಣೆಯ ಫಲಿತಾಂಶದ ಮೂಲಕ. ಕಾಂಗ್ರೆಸ್ ಪಕ್ಷದ ಇಬ್ಬರೂ ನಾಯಕಿಯರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೇ ತಮ್ಮ ರಾಜಕೀಯ ಅಸ್ತಿತ್ವದ ಹೋರಾಟವನ್ನು ನಡೆಸಿದ್ದರು ಎನ್ನುವುದನ್ನು ರಾಹುಲ್ ಮರೆತಂತಿದೆ. ಪಕ್ಷದ ಅಧ್ಯಕ್ಷರಾಗಲು ನಿರಾಕರಿಸುವವರನ್ನು ಯಾರೂ ತ್ಯಾಗಮಯಿ ಎನ್ನುವುದಿಲ್ಲ, ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸುತ್ತಿರುವ ಪುಕ್ಕಲ ಎನ್ನುತ್ತಾರೆ ಅಷ್ಟೆ. ತ್ಯಾಗಮಯಿ ಅನಿಸಿಕೊಳ್ಳಬೇಕಾದರೆ ಮೊದಲು ಪಕ್ಷವನ್ನು ಅಧಿಕಾರಕ್ಕೆ ತಂದು ನಂತರ ಅಧಿಕಾರವನ್ನು ನಿರಾಕರಿಸಬೇಕಾಗುತ್ತದೆ.

ತಮ್ಮ ಅಜ್ಜಿ ಮತ್ತು ತಂದೆಯ ಸಾವು, ತಾಯಿ ಎದುರಿಸಿದ ಅವಮಾನ ಹಾಗೂ ನಂಬಿದವರ ಆತ್ಮಘಾತುಕತನವನ್ನು ಕಂಡು ಬೆಳೆದ ರಾಹುಲ್ ಅವರಲ್ಲಿ ಅಧಿಕಾರದ ಬಗ್ಗೆ ವೈರಾಗ್ಯ ಇದ್ದ ಹಾಗಿದೆ. ಅಧಿಕಾರದಿಂದ ದೂರ ಇರಬೇಕು ಎನ್ನುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ಅವರು ಸಕ್ರಿಯ ರಾಜಕೀಯ ಪ್ರವೇಶದ ದಿನದಿಂದಲೇ ಕೈಗೊಂಡಿರುವಂತೆ ಕಾಣುತ್ತಿದೆ. ಹಾಗಿಲ್ಲದಿದ್ದರೆ 2004ರಲ್ಲಿಯೇ ಅವರು ಮನಮೋಹನ್ ಸಿಂಗ್ ನೇತೃತ್ವದ ಸಂಪುಟ ಸೇರಿಕೊಳ್ಳಬಹುದಿತ್ತು. ಆ ಕಾಲದಲ್ಲಿ ಸಚಿವರಾಗಲು ನಿರಾಕರಿಸಿದ ರಾಹುಲ್ ಉತ್ತರಪ್ರದೇಶದಲ್ಲಿ ಪಕ್ಷ ಕಟ್ಟಲು ಹೊರಟುಬಿಟ್ಟಿದ್ದರು.

2004ರಲ್ಲಿ ಲೋಕಸಭಾ ಸದಸ್ಯರಾದ ದಿನದಿಂದ ಇಲ್ಲಿಯವರೆಗೆ ರಾಹುಲ್ ಆವೇಶದಿಂದ, ಅಜ್ಞಾನದಿಂದ ಹಲವು ಬಾರಿ ಆಡಬಾರದ ಮಾತುಗಳನ್ನು ಆಡಿದ್ದಾರೆ. ಆದರೆ ಎಂದು ಕೂಡಾ ‘ನಾನು ಪ್ರಧಾನಮಂತ್ರಿಯಾದರೆ...’ ಎಂದು ತಪ್ಪಿಯೂ ಹೇಳಿಲ್ಲ. 2013ರಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡಾಗ ರಾಹುಲ್ ಅವರು ‘ಅಧಿಕಾರ ಎಂದರೆ ವಿಷ’ ಎಂದು ಹೇಳಿ ಎಲ್ಲರನ್ನೂ ಚಕಿತಗೊಳಿಸಿದ್ದರು.

ಅಧಿಕಾರ ಮತ್ತು ಜವಾಬ್ದಾರಿಯ ನಡುವೆ ತೆಳ್ಳನೆಯ, ಆದರೆ ಸ್ಪಷ್ಟವಾದ ಗೆರೆ ಇದೆ. ಯಾವುದೇ ರಾಜಕೀಯ ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರ ಅಲ್ಲ, ಅದೊಂದು ಜವಾಬ್ದಾರಿ ಎನ್ನುವುದು ರಾಹುಲ್ ಅವರಿಗೆ ಮನವರಿಕೆಯಾದಂತಿಲ್ಲ. ಹಾಗೆ ನೋಡಿದರೆ ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ ಮಂತ್ರಿ- ಪ್ರಧಾನಮಂತ್ರಿಯ ಸ್ಥಾನವೂ ಸೇವೆ ಮಾಡುವ ಅವಕಾಶವೇ ವಿನಾ ಅಧಿಕಾರದ ಕುರ್ಚಿಯಲ್ಲ (ಇದನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ನಾಟಕೀಯವಾಗಿ ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಂಡದ್ದು).

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಗುರುತು ಅವುಗಳ ಸಿದ್ಧಾಂತಗಳು. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ಹಿಡಿದು ನಿಲ್ಲಿಸಿ ‘ನಿಮ್ಮ ಸಿದ್ಧಾಂತ ಏನು’ ಎಂದು ಕೇಳಿದರೆ ಆತ ಥಟ್ಟನೆ ‘ಹಿಂದುತ್ವ ನಮ್ಮ ಸಿದ್ಧಾಂತ’ ಎಂದು ಹೇಳಿಬಿಡುತ್ತಾನೆ. ಇದನ್ನೇ ಆ ಪಕ್ಷದ ವರಿಷ್ಠರು ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಎಂದು ಹೇಳಬಹುದು. ಇದೇ ರೀತಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ಸಿದ್ಧಾಂತದ ಬಗ್ಗೆ ಪ್ರಶ್ನಿಸಿದರೆ ಆತ ತಡವರಿಸುತ್ತಾನೆ. ಈ ಗೊಂದಲ ಆ ಪಕ್ಷದ ನಾಯಕರಲ್ಲಿಯೂ ಇದೆ. ಈ ಪ್ರಶ್ನೆಗೆ ‘ಸಂವಿಧಾನದ ಆಶಯಗಳೇ ನಮ್ಮ ಸಿದ್ಧಾಂತ’ ಎಂಬ ಸರಳವಾದ ಉತ್ತರ ಇದೆ ಎಂದು ಅವರಿಗೂ ತಿಳಿದಿಲ್ಲ.

ಬಿಜೆಪಿಯ ಸಿದ್ಧಾಂತವನ್ನು ಒಪ್ಪದೆ ಇದ್ದವರು ಕೂಡಾ ಅದೊಂದು ಸೈದ್ಧಾಂತಿಕ ಪಕ್ಷ ಎನ್ನುವುದನ್ನು ಒಪ್ಪುತ್ತಾರೆ. ಒಂದು ಸೈದ್ಧಾಂತಿಕ  ಪಕ್ಷವನ್ನು ಇನ್ನೊಂದು ಸೈದ್ಧಾಂತಿಕ ಪಕ್ಷ ಮಾತ್ರ ಎದುರಿಸಲು ಸಾಧ್ಯ. ಸೈದ್ಧಾಂತಿಕ ಪಕ್ಷಕ್ಕೆ ಕಾರ್ಯಕರ್ತರ ಕ್ಯಾಡರ್ ಇರುತ್ತದೆ. ಲೀಡರ್ ಹೇಳಿದ್ದನ್ನು ಕ್ಯಾಡರ್ ಅನುಕರಿಸುತ್ತದೆ. ನರೇಂದ್ರ ಮೋದಿಯವರು ‘ತಟ್ಟೆ ಬಡಿಯಿರಿ’ ಎಂದು ಹೇಳಿದರೆ ಬಿಜೆಪಿ ಕಾರ್ಯಕರ್ತರು ಬಡಿಯುತ್ತಾರೆ.

ನೋಟು ರದ್ದತಿ ವಿರೋಧಿಸಿ ರಾಹುಲ್ ಎಟಿಎಂ ಎದುರು ಕ್ಯೂನಲ್ಲಿ ನಿಂತಾಗ ಕಾಂಗ್ರೆಸ್ ನಾಯಕರು ಅದರಲ್ಲಿ ಒಳ್ಳೆಯದೆಷ್ಟು, ಕೆಟ್ಟದ್ದೆಷ್ಟು ಎಂದು ಚರ್ಚಿಸುತ್ತಾ ಕೂತಿದ್ದರು. ರಾಹುಲ್ ರೀತಿಯಲ್ಲಿಯೇ ಆರ್‌ಎಸ್ಎಸ್ ಅನ್ನು ನೇರವಾಗಿ, ಸ್ಪಷ್ಟವಾಗಿ, ದಿಟ್ಟತನದಿಂದ ವಿರೋಧಿಸುವ ಎಷ್ಟು ನಾಯಕರು ಕಾಂಗ್ರೆಸ್ಸಿನಲ್ಲಿದ್ದಾರೆ? ಕಾಂಗ್ರೆಸ್ ಪಕ್ಷಕ್ಕೆ ಈಗ ತುರ್ತಾಗಿ ಬೇಕಾಗಿರುವುದು ನಾಯಕತ್ವ ಮಾತ್ರವಲ್ಲ, ಅದು ಸೈದ್ಧಾಂತಿಕ ನಾಯಕತ್ವ. ಆ ನಾಯಕತ್ವ ನೀಡುವ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಇರುವುದು ರಾಹುಲ್ ಅವರಿಗೆ ಮಾತ್ರ.

ಪಕ್ಷದ ಅಧ್ಯಕ್ಷರಾಗಲು ರಾಹುಲ್ ಹಿಂದೇಟು ಹಾಕಲು ವಂಶಪರಂಪರೆಯ ಆರೋಪದ ಭಯವೂ ಕಾರಣ ಎನ್ನುವುದು ಸತ್ಯ. ವಂಶಪರಂಪರೆ ಎನ್ನುವುದು ಭಾರತದ ಸಮಕಾಲೀನ ರಾಜಕಾರಣದ ಅವಿಭಾಜ್ಯ ಅಂಗವಾಗಿ ಹೋಗಿದೆ. ವಂಶಪರಂಪರೆ ಎನ್ನುವುದು ಕಳಂಕ ಎಂಬ ನಿಯಮವನ್ನು ಪ್ರಧಾನಮಂತ್ರಿ ಹುದ್ದೆಗೆ ಮಾತ್ರ ಅನ್ವಯಿಸಿದರೆ ಖಂಡಿತ ಕಾಂಗ್ರೆಸ್ ಪಕ್ಷವನ್ನು ಅಪರಾಧಿಯ ಕಟಕಟೆಯಲ್ಲಿ ನಿಲ್ಲಿಸಲೇಬೇಕಾಗುತ್ತದೆ. ಅದನ್ನು ಮಂತ್ರಿ-ಮುಖ್ಯಮಂತ್ರಿ ಪದವಿಗಳೆಲ್ಲದಕ್ಕೂ ಅನ್ವಯಿಸುವುದಾದರೆ, ಕಮ್ಯುನಿಸ್ಟರನ್ನು ಹೊರತುಪಡಿಸಿ ದೇಶದ ಯಾವ ಪಕ್ಷವೂ ಅಪರಾಧಿಯ ಕಟಕಟೆಯಿಂದ ಹೊರಗುಳಿಯಲು ಸಾಧ್ಯ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ವಂಶಪರಂಪರೆಯ ಬಲದಿಂದ ಬಹುಮಾನವಾಗಿ ಪಡೆಯುವುದಷ್ಟೇ ತಪ್ಪು, ಚುನಾವಣೆಯ ಮೂಲಕ ಗಳಿಸಿಕೊಳ್ಳುವುದು ತಪ್ಪಲ್ಲ ಎನ್ನುವಷ್ಟರಮಟ್ಟಿಗೆ ದೇಶದ ಮತದಾರರು ಮತ್ತು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ.

ವಂಶಪರಂಪರೆಯ ಭಾರವನ್ನು ಕೆಳಗಿಳಿಸಿಕೊಳ್ಳಲು ರಾಹುಲ್ ಎಷ್ಟೇ ಪ್ರಯತ್ನಪಟ್ಟರೂ ರಕ್ತಕ್ಕೆ ಅಂಟಿಕೊಂಡ ಸಂಬಂಧದಿಂದ ಮುಕ್ತಿ ಸಿಗಲಾರದು. ಈ ಸ್ಥಿತಿಯಲ್ಲಿ ರಾಹುಲ್ ಮುಂದೆ ಇರುವುದು ಎರಡೇ ಮಾರ್ಗ. ಮೊದಲನೆಯದು, ವಂಶಪರಂಪರೆಯ ಭಾರದ ಜೊತೆಯಲ್ಲಿಯೇ ಪಕ್ಷದ ನಾಯಕತ್ವದ ಜವಾಬ್ದಾರಿ ಒಪ್ಪಿಕೊಳ್ಳುವುದು, ಎರಡನೆಯದು, ಪಕ್ಷದಿಂದಲೇ ನಿರ್ಗಮಿಸಿ ವಂಶಪರಂಪರೆಯ ಭಾರದಿಂದ ಶಾಶ್ವತವಾಗಿ ಮುಕ್ತಿ ಪಡೆಯುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು