ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | 2 ತಿಂಗಳಲ್ಲಿ 6 ಕ್ಷಿಪಣಿ ಪರೀಕ್ಷೆ

Last Updated 31 ಅಕ್ಟೋಬರ್ 2020, 10:45 IST
ಅಕ್ಷರ ಗಾತ್ರ

ಆಧುನಿಕ ಯುದ್ಧತಂತ್ರದಲ್ಲಿ ಕ್ಷಿಪಣಿಗಳು ದೇಶವೊಂದರ ಭದ್ರತೆಗೆ ಅನಿವಾರ್ಯ. ಯುದ್ಧವೊಂದು ನಿಜವಾಗಿಯೂ ನಡೆಯಬೇಕೆ ಎಂಬ ಪ್ರಶ್ನೆಯಿಂದ ಹಿಡಿದು ಎದುರಾಳಿಯ ಮೇಲೆ ಎಂಥ ಬಲ ಪ್ರಯೋಗಿಸಿದರೆ ಅದನ್ನು ಶೀಘ್ರಕೊನೆಗೊಳಿಸಲು ಸಾಧ್ಯ ಎಂಬ ಪ್ರಶ್ನೆಯವರೆಗೆ ಸಂಘರ್ಷದ ಭವಿಷ್ಯವನ್ನು ಕ್ಷಿಪಣಿಗಳು ನಿರ್ಧರಿಸಬಲ್ಲವು. ಹೀಗಾಗಿಯೇ ಜಗತ್ತಿನ ಬಹುತೇಕ ಎಲ್ಲ ದೇಶಗಳು ಅತ್ಯಾಧುನಿಕ ಕ್ಷಿಪಣಿಗಳನ್ನು ತಮ್ಮ ಬತ್ತಳಿಕೆಯಲ್ಲಿರಿಸಿಕೊಳ್ಳಲು ಹಾತೊರೆಯುತ್ತಿವೆ.

ಅತ್ತ ಪಾಕಿಸ್ತಾನ, ಇತ್ತ ಚೀನಾದಿಂದ ಗಡಿಯನ್ನು ರಕ್ಷಿಸಿಕೊಳ್ಳಬೇಕಾದ ಸವಾಲು ಎದುರಿಸುತ್ತಿರುವ ಭಾರತದ ವಿಷಯದಲ್ಲಿಯೂ ಇದು ನಿಜ. ಪೂರ್ವ ಲಡಾಖ್‌ನ ಚೀನಾ ಗಡಿಯಲ್ಲಿ ಸಂಘರ್ಷ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿಭಾರತವು ಈಚೆಗೆ ನಡೆಸಿದ ಆರು ಪ್ರಮುಖ ಕ್ಷಿಪಣಿ ಪರೀಕ್ಷೆಗಳು ಮಹತ್ವ ಪಡೆದುಕೊಂಡಿವೆ.

ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...

ಯುದ್ಧ ವಿಮಾನದಿಂದ ಬ್ರಹ್ಮೋಸ್

ಬ್ರಹ್ಮೋಸ್ ಕ್ಷಿಪಣಿಯನ್ನು ವಿಮಾನಗಳಿಂದಲೂ ಉಡಾವಣೆ ಮಾಡುವ ಸಾಧ್ಯತೆಯನ್ನುನಿನ್ನೆಯಷ್ಟೇ (ಅ.30) ಭಾರತ ಪರೀಕ್ಷಿಸಿತು.ಹಡಗೊಂದನ್ನು ಗುರಿಯಾಗಿಸಿ ಹಾರಿಬಿಟ್ಟಿದ್ದ ಕ್ಷಿಪಣಿಯು ತನ್ನ ಗುರಿಗೆ ನಿಖರವಾಗಿ ಅಪ್ಪಳಿಸಿತು. ತಂಜಾವೂರಿನ ಟೈಗರ್‌ಶಾರ್ಕ್ಸ್‌ ಸ್ಕ್ವಾರ್ಡನ್‌ಗೆ ಸೇರಿದ್ದ ಸುಖೋಯ್ ಫೈಟರ್‌ಜೆಟ್ ಯುದ್ಧವಿಮಾನವನ್ನುಈ ಪರೀಕ್ಷೆಗೆ ಬಳಸಿಕೊಳ್ಳಲಾಯಿತು.

ಕಳೆದ ವರ್ಷ ಮೇ ತಿಂಗಳಲ್ಲಿ ಭಾರತೀಯ ವಾಯುಪಡೆಯು ಸುಖೋಯ್ ಯುದ್ಧವಿಮಾನಗಳಿಂದ ಹಾರಿಬಿಡುವ ಬ್ರಹ್ಮೋಸ್ ಕ್ಷಿಪಣಿಯ ವೈಮಾನಿಕ ಅವತರಣಿಕೆಯನ್ನು ಮೊದಲ ಬಾರಿಗೆ ಪರೀಕ್ಷಿಸಿತ್ತು. ಬ್ರಹ್ಮೋಸ್‌ ಕ್ಷಿಪಣಿಯು ವಾಯುಪಡೆಗೆ ಹೊಸ ಬಲ ತಂದುಕೊಟ್ಟಿದೆ. ಸಂಘರ್ಷ ನಡೆಯುತ್ತಿರುವ ಸ್ಥಳಕ್ಕೆಬಹುದೂರದಿಂದಲೇ ವೈರಿಗಳ ಮೇಲೆ ಆಕ್ರಮಣ ಮಾಡಲು ಬ್ರಹ್ಮೋಸ್ ಅವಕಾಶ ಕಲ್ಪಿಸಿದೆ. ಭೂಮಿ ಮತ್ತು ಸಾಗರದಲ್ಲಿರುವ ದೂರದ ಗುರಿಗಳನ್ನೂ ಬ್ರಹ್ಮೋಸ್‌ ಎಂಥದ್ದೇ ಹವಾಮಾನದಲ್ಲಿ ನಿಖರವಾಗಿ ಅಪ್ಪಳಿಸಬಲ್ಲದು.

ವಾಯುಪಡೆಯ 40 ಯುದ್ಧವಿಮಾನಿಗಳಿಗೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್‌ ಮಿಸೈಲ್‌ಗಳನ್ನು ಅಳವಡಿಸಲು ವಾಯುಪಡೆ ಕಾರ್ಯತತ್ಪರವಾಗಿದೆ.

ಹೈಪರ್‌ಸಾನಿಕ್ ಟೆಕ್ನಾಲಜಿ ಡೆಮಾಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ)

ದೇಶೀಯವಾಗಿ ಅಭಿವೃದ್ಧಿಪಡಿಸಿದ ಎಚ್‌ಎಸ್‌ಟಿಡಿವಿ ವಾಹನವನ್ನು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯು (ಡಿಆರ್‌ಡಿಒ) ಸೆಪ್ಟೆಂಬರ್‌ 7ರಂದು ಪರೀಕ್ಷಿಸಿತ್ತು. ಮಾನವರಹಿತ ಸ್ಕ್ರಾಮ್‌ಜೆಟ್ (ಗಾಳಿ ಹಾದುಹೋಗಬಲ್ಲ ಎಂಜಿನ್ ಹೊಂದಿರುವ ವೈಮಾನಿಕ ಸಾಧನ) ತಂತ್ರಜ್ಞಾನದ ಈ ವೈಮಾನಿಕ ಸಾಧನವು ಕೇವಲ 20 ಸೆಕೆಂಡ್‌ಗಳಲ್ಲಿ 32.5 ಕಿ.ಮೀ. ಎತ್ತರಕ್ಕೆ ಏರಬಲ್ಲದು. ಈ ಸಾಧನವನ್ನು ದೂರಗಾಮಿ ಕ್ಷಿಪಣಿಗಳ ಉಡಾವಣೆಗೆ ಬಳಸುವುದರ ಜೊತೆಗೆ, ಕಡಿಮೆ ಖರ್ಚಿನಲ್ಲಿ ಉಪಗ್ರಹ ಉಡಾವಣೆಗೂ ಬಳಸಬಹುದಾಗಿದೆ.

ಆಂಟಿ ಟ್ಯಾಂಕ್‌ ಗೈಡೆಡ್ ಮಿಸೈಲ್ (ಎಟಿಜಿಎಂ)

ಸೆಪ್ಟೆಂಬರ್ 23ರಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಲೇಸರ್ ನಿರ್ದೇಶಿತ ಎಟಿಜಿಎಂ ಕ್ಷಿಪಣಿಯನ್ನು ಅರ್ಜುನ್‌ ಟ್ಯಾಂಕ್‌ ಮೂಲಕ ಪರೀಕ್ಷಿಸಿತ್ತು. ಗುರುತಿಸಿದ ಗುರಿಯನ್ನು ಲೇಸರ್‌ ಕಿರಣಗಳ ಮೂಲಕ ಲಾಕ್‌ ಮಾಡಿಕೊಂಡು ಬೆನ್ನಟ್ಟಿಹೋಗುವುದು ಈ ಕ್ಷಿಪಣಿಯ ವೈಶಿಷ್ಟ್ಯ. ಸ್ಫೋಟಕಗಳಿಂದ ರಕ್ಷಣೆಗಾಗಿ ಎರಾ (ಎಕ್ಸ್‌ಪ್ಲೋಸಿವ್ ರಿಯಾಕ್ಟಿವ್ ಆರ್ಮೋರ್) ತಂತ್ರಜ್ಞಾನ ಬಳಸುವ ವಾಹನಗಳನ್ನು ನಾಶಪಡಿಸಲೆಂದು ಈ ಕ್ಷಿಪಣಿಯು ಹೀಟ್‌ (ಹೈ ಎಕ್ಸ್‌ಪ್ಲೋಸಿವ್ ಆಂಟಿ ಟ್ಯಾಂಕ್) ವಾರ್‌ಹೆಡ್‌ ತಂತ್ರ ಬಳಸುತ್ತದೆ.

ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್‌ ಕ್ಷಿಪಣಿ

ವಿಸ್ತರಿತ ಸಾಮರ್ಥ್ಯದ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯನ್ನು ಭಾರತವು ಸೆಪ್ಟೆಂಬರ್ 30ರಂದು 2ನೇ ಬಾರಿಗೆ ಪರೀಕ್ಷೆ ನಡೆಸಿತು. 400 ಕಿ.ಮೀ.ಗಿಂತಲೂ ದೂರದಲ್ಲಿರುವ ಗುರಿಗಳನ್ನು ಇದು ನಾಶಪಡಿಸಬಲ್ಲದು. ಈ ಕ್ಷಿಪಣಿಯನ್ನು ವಿಮಾನಗಳಿಂದಲೂ ಉಡಾವಣೆ ಮಾಡಲು ಸಾಧ್ಯವಿರುವ ತಂತ್ರಜ್ಞಾನ ಮತ್ತು ಉಪಕರಣಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಬ್ರಹ್ಮೋಸ್ ಎಂಬ ಪದವು ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮಾಸ್ಕೊ ನದಿಗಳನ್ನು ಧ್ವನಿಸುತ್ತದೆ. 2001ರ ಜೂನ್ 21ರಂದು ಮೊದಲ ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ ನಡೆದಿತ್ತು. ಭಾರತ ಮತ್ತು ರಷ್ಯಾಗಳು ಜತೆಗೂಡಿ 600 ಕಿ.ಮೀ. ಸಾಮರ್ಥ್ಯದ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ.

ಸೂಪರ್ ಸಾನಿಕ್ ಮಿಸೈಲ್ ಅಸಿಸ್ಟೆಡ್ ರಿಲೀಸ್ ಆಫ್ ಟಾರ್ಪೆಡೊ (ಸ್ಮಾರ್ಟ್)

ಅಕ್ಟೋಬರ್ 5ರಂದು ಡಿಆರ್‌ಡಿಒ ಸ್ಮಾರ್ಟ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮಾಡಿತು. ಸಬ್‌ಮರೀನ್‌ ಯುದ್ಧತಂತ್ರಗಳಿಗೆ ಇದು ಗಮನಾರ್ಹ ಶಕ್ತಿ ತುಂಬಲಿದೆ. ಟಾರ್ಪೆಡೊ (ನೀರಿನಲ್ಲಿ ಚಲಿಸುವ ಕ್ಷಿಪಣಿ) ಒಂದರ ಗುರಿ ತಲುಪುವ ಸಾಮರ್ಥ್ಯಕ್ಕಿಂತಲೂ ದೂರದಿಂದ ಇದನ್ನು ಉಡಾಯಿಸಬಹುದಾಗಿದೆ.

ರಾಡಾರ್ ನಿಗ್ರಹ'ರುದ್ರಮ್'

ಅಕ್ಟೋಬರ್ 9ರಂದು ಡಿಆರ್‌ಡಿಒ ಆಂಟಿ ರೇಡಿಯೇಶನ್ (ರಾಡಾರ್ ನಿಗ್ರಹ) ಕ್ಷಿಪಣಿ ರುದ್ರಮ್ ಉಡಾವಣೆ ಮಾಡಿತು. ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು ಎಸ್‌ಯು-30 ಎಂಕೆ1 ಫೈಟರ್‌ ವಿಮಾನದಿಂದ ಉಡಾಯಿಸಲಾಯಿತು. ಆಗಸದಿಂದ ಭೂಮಿಗೆ ಅಪ್ಪಳಿಸುವ ಈ ಕ್ಷಿಪಣಿಯ ಗರಿಷ್ಠ ಸಾಮರ್ಥ್ಯವು ಉಡಾವಣೆ ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಜಿಪಿಎಸ್ ನ್ಯಾವಿಗೇಶನ್ ಮೂಲಕ ಗುರಿಯತ್ತ ಧಾವಿಸುತ್ತದೆ. ಇದು ವೈರಿ ದೇಶಗಳ ವಾಯುರಕ್ಷಣಾ ವ್ಯವಸ್ಥೆಯನ್ನು ನಾಶಪಡಿಬಲ್ಲದು. ಭಾರತವು ಅಭಿವೃದ್ಧಿಪಡಿಸಿದ ಮೊದಲ ಸೀಡ್ (ಸಪ್ರೆಶನ್ ಆಫ್ ಎನಿಮಿ ಏರ್ ಡಿಫೆನ್ಸಸ್‌) ಕ್ಷಿಪಣಿಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT