ಗುರುವಾರ , ಜೂನ್ 24, 2021
23 °C

ನಿರ್ವಾತ ಸೃಷ್ಟಿಸಿದ ನ್ಯಾ.ಶಾಂತನಗೌಡರ ಅಗಲಿಕೆ

ರವಿ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಉನ್ನತ ಗುರಿ, ಅದನ್ನು ತಲುಪಲು ಅಗತ್ಯವಾದ ಶ್ರದ್ಧೆ, ಪರಿಶ್ರಮ ಇವೆಲ್ಲುವಗಳ ಮೂರ್ತ ರೂಪದಂತಿದ್ದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ ಅಕಾಲಿಕ ಸಾವು ನ್ಯಾಯಾಂಗ ಕ್ಷೇತ್ರದಲ್ಲಿ ಒಂದು ದೊಡ್ಡ ನಿರ್ವಾತ ಸೃಷ್ಟಿಸಿದೆ.

ದೇಶದ ಅತ್ಯಂತ ಉನ್ನತ ಹುದ್ದೆಗೇರಿದರೂ ಒಂದಿನಿತು ಗರ್ವ, ದೊಡ್ಡಿಸ್ತಿಕೆ ತಲೆಗೇರಿಸಿಕೊಳ್ಳದ ಅತ್ಯಂತ ಸರಳ ವ್ಯಕ್ತಿಯಾಗಿದ್ದರು ಮೋಹನ್ ಶಾಂತಗೌಡರ ಅವರು. ಅತ್ಯಂತ ಕಡಿಮೆ ಅವಧಿಯಲ್ಲಿ ನ್ಯಾಯಾಂಗದ ಉನ್ನತ ಹುದ್ದೆ ಅಲಂಕರಿಸಿದ ವಿರಳಾತಿ ವಿರಳರಲ್ಲಿ ಅವರೂ ಒಬ್ಬರು. ಅದಕ್ಕಿಂತ ವಿಶೇಷವೆಂದರೆ ಕಿತ್ತೂರು ಕರ್ನಾಟಕ ಭಾಗದಿಂದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ವ್ಯಕ್ತಿ.

ಓದಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್‌ ನಿಧನ

ಅವರಿಗೂ ಧಾರವಾಡಕ್ಕೂ ಬಿಡಿಸಲಾರದ ನಂಟು. ಬದುಕು ರೂಪಿಸಿದ ನೆಲದ ಬಗ್ಗೆ ಅಪರಿಮಿತ ಪ್ರೀತಿ. ಸಮಯ ಸಿಕ್ಕಾಗೊಮ್ಮೆ, ಕಾರಣಗಳನ್ನು ಹುಡುಕಿಕೊಂಡು ಧಾರವಾಡಕ್ಕೆ ಬರುತ್ತಿದ್ದ ಅವರು, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ಹಿರಿ, ಕಿರಿಯರೆನ್ನದೆ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತ, ವಕೀಲಿ ವೃತ್ತಿ ಆರಂಭಿಸಿದಾಗ ಜತೆಗಿದ್ದ ಗೆಳೆಯರನ್ನು ಹೆಸರಿಡಿದು ಕರೆಯುತ್ತ, ನಗುತ್ತ, ನಗಿಸುತ್ತ ಸುಪ್ರಿಂ ಕೋರ್ಟ ನ್ಯಾಯಮೂರ್ತಿಗಳಾದ ಮೇಲೂ ತಲೆಯನ್ನು ಹೆಗಲ ಮೇಲೆ ಇರಿಸಿಕೊಂಡ ಅಪರೂಪದ ವ್ಯಕ್ತಿ ಅವರಾಗಿದ್ದರು.

ಧಾರವಾಡದಲ್ಲಿಯೇ ವಕೀಲಿ ವೃತ್ತಿ ಆರಂಭಿಸಿದ ಅವರು, ಹಿರಿಯ ವಕೀಲರಾಗಿದ್ದ ಐ.ಜಿ.ಹಿರೇಗೌಡರ ಅವರ ಬಳಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅಲ್ಲಿ ಕೇವಲ ವೃತ್ತಿ ಕೌಶಲ ಮಾತ್ರ ಕಲಿಯಲಿಲ್ಲ. ಹಿರೇಗೌಡರ ವಕೀಲರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಉನ್ನತ ಮೌಲ್ಯಗಳು, ಆದರ್ಶಗಳನ್ನು ಚಾಚೂ ತಪ್ಪದೇ ತಮ್ಮ ವೃತ್ತಿ ಜೀವನದಲ್ಲೂ ಅಳವಡಿಸಿಕೊಂಡು ಮಾದರಿಯಾದವರು ಮೋಹನ್ ಶಾಂತನಗೌಡರ ಅವರು.

ನ್ಯಾಯಾಂಗ ಕ್ಷೇತ್ರದಲ್ಲಿ ಸಾಧನೆ ಸಾಧ್ಯವಾಗಬೇಕಾದರೆ ಆಳವಾದ ಅಧ್ಯಯನ, ಕಾನೂನು ಜನಪರವಾಗಿರಬೇಕು. ನಾವು ನೀಡುವ ಸೇವೆ, ಬರೆಯುವ ತೀರ್ಪುಗಳು ಜನರ ಬದುಕನ್ನು ಇನ್ನಷ್ಟು ಸುಂದರಗೊಳಿಸುವಂತಿರಬೇಕು ಎಂದು ಧಾರವಾಡಕ್ಕೆ ಬಂದಾಗೊಮೆ ಈ ಭಾಗದ ವಕೀಲರಿಗೆ ಕಿವಿ ಮಾತು ಹೇಳುತ್ತಿದ್ದರು.

ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಹಾವೇರಿ ಜಿಲ್ಲೆಯ ಚಿಕ್ಕೇರೂರು ಗ್ರಾಮದಲ್ಲಿ ಹುಟ್ಟಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾನೂನು ಶಿಕ್ಷಣ ಪಡೆದು, ಆರಂಭಿಕ ವೃತ್ತಿ ಜೀವನವನ್ನೂ ಧಾರವಾಡದಲ್ಲಿಯೇ ಆರಂಭಿಸಿ, ಮುಂದೆ ಕರ್ನಾಟಕ ಹೈಕೋರ್ಟ ನ್ಯಾಯಮೂರ್ತಿಯಾಗಿ, ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ, ಸುಪ್ರಿಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೇರಿದ ಪಯಣ, ಪಟ್ಟ ಪರಿಶ್ರಮ ಸಣ್ಣದೇನಲ್ಲ.

ಉದಾರ ಮನಸ್ಸು, ಸಾಮಾಜಿಕ ಕಳಕಳಿ, ತಾನು ಮಾತ್ರ ಬೆಳೆದರೆ ಸಾಲದು, ತನ್ನೊಂದಿಗೆ ಇರುವವರನ್ನು ತನ್ನೊಂದಿಗೆ ಕರೆದೊಯ್ಯಬೇಕು, ಬೆಳೆಸಬೇಕು ಎನ್ನುವ ಹೃದಯವಂತಿಕೆ ಅವರನ್ನು ಇನ್ನಷ್ಟು ದೊಡ್ಡವರನ್ನಾಗಿಸಿತ್ತು. ಅವರು ಸುಪ್ರಿಂ ಕೋರ್ಟ ನ್ಯಾಯಮೂರ್ತಿಗಳಾದ ನಂತರ ಧಾರವಾಡ ಜಿಲ್ಲೆಯ ಮೂರ‍್ನಾಲ್ಕು ವಕೀಲರು ನ್ಯಾಯಮೂರ್ತಿಗಳಾಗಿ ನೇಮಕವಾಗಲು ಸಾಧ್ಯವಾಯಿತು ಎನ್ನುವುದು ಅತಿಶಯೋಕ್ತಿಯಲ್ಲ ಎಂದು ನ್ಯಾಯವಾದಿ ಬಸವಪ್ರಭು ಹೊಸಕೇರಿ ನೆನಪಿಸಿಕೊಂಡರು.

ಇನ್ನಷ್ಟು ಕೊಡಬೇಕು ಎನ್ನುವ ತುಡಿತವಿದ್ದಾಗಲೇ, ಅವರಿಂದ ಇನ್ನಷ್ಟು ಪಡೆದುಕೊಳ್ಳಬೇಕು ಎನ್ನುವ ನಿರೀಕ್ಷೆ ನ್ಯಾಯಾಂಗ ಕ್ಷೇತ್ರಕ್ಕಿದ್ದಾಗಲೇ ಕಾಲನ ಕರೆಗೆ ಓಗೊಟ್ಟು ದೂರವಾದರೂ ಮಾದರಿ ಬದುಕೊಂದನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ ನ್ಯಾಯಮೂರ್ತಿ ಮೋಹನ್ ಶಾಂತಗೌಡರ ಅವರು. ಅಂಥವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು