ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಅಜಯ್‌, ಆನೆ ಮತ್ತು ಕಾಡು

Last Updated 20 ನವೆಂಬರ್ 2020, 21:28 IST
ಅಕ್ಷರ ಗಾತ್ರ

ಎರಡು ವರ್ಷಗಳ ಹಿಂದಿನ ಘಟನೆ. ಚತ್ತೀಸ್‌ಗಢನಲ್ಲಿ ಆನೆಗಳ ದಾಳಿ ವಿಪರೀತವಾಯಿತು. ರೈತರ ಹೊಲ ಗದ್ದೆಗಳು, ಬುಡಕಟ್ಟು ಜನಾಂಗದವರ ಗುಡಿಸಲುಗಳ ಚಾವಣಿಗಳು ನಾಶವಾಗ ತೊಡಗಿದವು. ಜನರ ಸಾವು ನೋವು
ಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಯಿತು. ಜನ ಕಂಗಾಲಾದರು. ಸಮಸ್ಯೆಯ ಪರಿಹಾರಕ್ಕೆ ಸರ್ಕಾರ ಪ್ರಾಮಾಣಿಕವಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿತು. ಆದರೆ, ಪರಿಸ್ಥಿತಿ ಬದಲಾಗಲಿಲ್ಲ.

ಆನಂತರ ಅಲ್ಲಿಯ ಸರ್ಕಾರ ಮತ್ತುಅರಣ್ಯ ಇಲಾಖೆ ಅಜಯ್‌ ದೇಸಾಯಿ ಅವರ ನೆರವು ಕೋರಿತು. ಆನೆಗಳ ಒಡನಾಟವನ್ನು ಚೆನ್ನಾಗಿ ಬಲ್ಲ ಅವರಿಗೆ ಸಮಸ್ಯೆಯ ಮೂಲ ಏನೆಂದು ಅರ್ಥವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಕೇವಲ ಇಪ್ಪತ್ತು ದಿನಗಳಲ್ಲಿ ಅವರು ಸರ್ಕಾರಕ್ಕೆ ವರದಿ ನೀಡಿದರು. ವಾಸ್ತವವಾಗಿ ಆನೆಗಳ ಸಮಸ್ಯೆಗೆ ಚತ್ತೀಸ್‌ಗಢ ರಾಜ್ಯ ಕಾರಣವಾಗಿರಲಿಲ್ಲ. ಪಕ್ಕದ ಒರಿಸ್ಸಾ ರಾಜ್ಯದ ಕಾಡಿನಲ್ಲಿ ಓಡಾಡಿಕೊಂಡಿದ್ದ ಆನೆಗಳೆಲ್ಲಾ ಇಲ್ಲಿಗೆ ವಲಸೆ ಬಂದಿದ್ದವು. ಅವು ತವರಿಗೆ ವಾಪಾಸಾಗುವ ಸೂಚನೆಗಳನ್ನೂ ತೋರಲಿಲ್ಲ. ಒರಿಸ್ಸಾ ಕಾಡಿನ ಮಧ್ಯೆ ಆರಂಭಿಸಿದ್ದ ಬೃಹತ್‌ ಗಣಿ ಉದ್ಯಮದಿಂದ ಭುಗಿಲೆದ್ದ ದೂಳು ಕಾಡನ್ನೆಲ್ಲಾ ಆಕ್ರಮಿಸಿತ್ತು. ಚಿಗುರಿದ ಹುಲ್ಲು, ಎಲೆ, ಹರಿಯುವ ಝರಿಗಳಲ್ಲಿ ದೂಳಿನ ಪದರ ದಟ್ಟವಾಗಿ ಕುಳಿತಿತ್ತು. ಆನೆಗಳಿಗೆ ಅಲ್ಲಿ ಬದುಕುವ ವಾತಾವರಣವೇ ಮಾಯವಾಗಿತ್ತು. ನೆರೆ ರಾಜ್ಯದ ಅನಾಹುತ ಚತ್ತೀಸ್‌ಗಢಕ್ಕೆ ಕಂಟಕವಾಗಿತ್ತು.

ಸಮಸ್ಯೆಯ ಈ ಸ್ವರೂಪವನ್ನು ಅರ್ಥಮಾಡಿಕೊಳ್ಳಲಾಗದ ಸರ್ಕಾರ, ಕೋಟಿಗಟ್ಟಲೆ ಹಣ ಸುರಿದು ಆನೆಗಳನ್ನು ಹಿಮ್ಮೆಟ್ಟಿಸಲು, ನಿಯಂತ್ರಿಸಲು ಪ್ರಯತ್ನಿಸಿ ಸೋತಿತ್ತು. ಅಜಯ್‌ ಅವರ ವರದಿಯ ಬಳಿಕ ಚತ್ತೀಸ್‌ಗಢ ಮೌನವಾಗಿದೆ. ಸರ್ಕಾರ ನಿರುತ್ತರವಾಗಿ ಕುಳಿತಿದೆ.

ಇಂತಹ ನೂರಾರು ಜಟಿಲ ಸಮಸ್ಯೆಗಳಿಗೆ ಉತ್ತರ ಹುಡುಕುತ್ತಾ ಇಡೀ ಏಷ್ಯಾ ಖಂಡದ ಕಾಡುಗಳ ಉಳಿವಿಗೆ, ಜೀವಜಾಲಗಳ ಸಂರಕ್ಷಣೆಗೆ ಅಜಯ್‌ ನೀಡಿರುವ ಕೊಡುಗೆ ಅನನ್ಯವಾದದು.

ಈ ಮೇಲಿನ ಘಟನೆಯನ್ನು ಪ್ರಸ್ತಾಪಿಸಿದ ಕಾರಣವಿಷ್ಟೆ. ಅಜಯ್‌ ಕೇವಲ ಮತ್ತೊಬ್ಬ ವಿಜ್ಞಾನಿ ಆಗಿರಲಿಲ್ಲ. ಆನೆಗಳ ಜಾಡುಹಿಡಿದು ಹತ್ತಾರು ವರ್ಷಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದು ನಮಗೆ ನೆನಪಿದೆ. ಕಾಲ್ನಡಿಗೆಯಲ್ಲಿ ಮುಂಜಾನೆ ಆರಕ್ಕೆ ಹೊರಟು ಅವರು ಹಿಂದಿರುಗುತ್ತಿದ್ದದ್ದೇ ರಾತ್ರಿ ಏಳಕ್ಕೆ. ಕೇವಲ ಡಾಕ್ಟರೇಟ್‌ ಪದವಿಗೆ ಬೇಕಿರುವ ಸಾಮಗ್ರಿಗಳನ್ನು, ಅಂಕಿಅಂಶಗಳನ್ನು ದಾಖಲಿಸಿಕೊಂಡು ಮನೆಗೆ ಮರಳುವ ಜಾಯಮಾನ ಅವರದಾಗಿರಲಿಲ್ಲ. ಆನೆಗಳೊಂದಿಗೆ ಸುತ್ತುತ್ತಾ, ಆನೆಗಳ ಕುಟುಂಬದಲ್ಲಿ ಒಬ್ಬರಾಗಿಬಿಡುತ್ತಿದ್ದರು. ಹಾಗಾಗಿ, ಆನೆಗಳ ಸಂಕೀರ್ಣ ಸಮಾಜದ ಹೃದಯ ಮಿಡಿತವನ್ನು ಬಲ್ಲವರಾಗಿದ್ದರು.

ಇದರಿಂದ ಅಜಯ್‌, ವಿಜ್ಞಾನಿ–ಚಿಂತಕರ ಸಾಲಿಗೆ ಸೇರಿದ ಅಪರೂಪದ ವ್ಯಕ್ತಿ. ಆ ಚಿಂತನೆಗಳಿಗೆ ಅವರ ಓದಿನ ಅಗಾಧತೆ, ಕಾಡಿನ ಮಣ್ಣಿನ ವಾಸನೆ, ವಿಷಯಗಳ ವಿಶ್ಲೇಷಣೆಯ ಕೌಶಲ್ಯ ನೆರವಿಗೆ ಬಂದಿರಬಹುದು. ಇತಿಹಾಸ, ಖಗೋಳವಿಜ್ಞಾನ, ತತ್ವವಿಜ್ಞಾನ, ಭಾಷಾವಿಜ್ಞಾನ, ಮಾನವ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನಗಳಲ್ಲಿ ಅವರಿಗಿದ್ದ ಜ್ಞಾನ ಮತ್ತು ಕುತೂಹಲ ಅಗಾಧವಾದದ್ದು. ಇದರಿಂದಾಗಿ ಅವರ ಚಿಂತನೆಯೇ ವಿಭಿನ್ನವಾಗಿರುತ್ತಿತ್ತೆಂಬುದು ವಿಶೇಷ.

ಕಾಡಿನ ಸಂರಕ್ಷಣೆ ಎಂದರೆ ಕೇವಲ ಕಾನೂನು ಕಟ್ಟಳೆಗಳಿಂದ ಕಾಡನ್ನು ರಕ್ಷಿಸುವುದಲ್ಲ ಎಂದು ಅವರು ನಂಬಿದ್ದರು.ಅಜಯ್‌ ಅವರ ಜೀವಪರಿಸರದ ಒಟ್ಟಾರೆ ಜ್ಞಾನವೇ ವಿಶೇಷವಾಗಿತ್ತು.ಕಾಡಿನ ಆದಿವಾಸಿಗಳ ಮತ್ತು ಕಾಡಿನಂಚಿನ ರೈತರ ಒಳಿತನ್ನು ಸೇರಿಸಿಕೊಂಡೇ ಸಂರಕ್ಷಣೆಯ ಬಗ್ಗೆ ಯೋಚಿಸುತ್ತಿದುದು ಅವರ ವೈಶಿಷ್ಟ್ಯ. ಹಾಗಾಗಿ, ಇವೆಲ್ಲವೂ ಒಗ್ಗೂಡಿಸಿ ಮಾಡುವ ಸಂರಕ್ಷಣೆಗೆ ಮಾತ್ರ ಅರ್ಥವಿರುತ್ತದೆ ಎಂಬುದು ಅವರ ನಿಲುವಾಗಿತ್ತು.

ಇದಲ್ಲದೇ ಆನೆಗಳು ಬದುಕುವ ಗೃಹ ವಲಯಗಳ ಬಗ್ಗೆ ಸುದೀರ್ಘವಾಗಿ ಅಧ್ಯಯಿಸಿ ಪರಿಸರ ಸಂರಕ್ಷಣೆಗೆ ಹೊಸ ದೃಷ್ಟಿಕೋನವನ್ನು ಕಂಡುಕೊಂಡಿದ್ದರು. 1991 ರಲ್ಲೇ ಕಾಡಿನಿಂದ ಮತ್ತೊಂದು ಕಾಡಿಗೆ ಅವಶ್ಯವಿರುವ ಸಂಪರ್ಕಗಳು ತುಂಡಾಗಿರುವ ವಿಷಯವನ್ನು ಪ್ರಕಟಿಸಿದ್ದರು. ಇಪ್ಪತ್ತೈದು ವರ್ಷಗಳ ಬಳಿಕ ಈ ಕಾರಿಡಾರ್‌ ವಿಷಯ ಚರ್ಚೆಗೆ ಬಂದಿದೆ. ಮುಂದೆ ಎದುರಾಗುವ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸುವುದು ಅವರ ವಿಶೇಷತೆ.

ಇತ್ತೀಚಿನ ವರ್ಷಗಳಲ್ಲಿ, ಕಾಡನ್ನು ಆವರಿಸುತ್ತಿರುವ ವಿದೇಶಿ ಕಳೆಗಳು ಇಡೀಜೀವಪರಿಸರದ ಮೇಲೆ ಬೀರಬಹು
ದಾದ ಪರಿಣಾಮಗಳ ಬಗ್ಗೆ ಚಿಂತಿತರಾಗಿದ್ದರು. ಸದಾ ಹೊಸ ಹೊಸ ಆಲೋಚನೆಗಳಲ್ಲಿ, ಹೊಸ ಹೊಸ ಚಿಂತನೆಗಳಲ್ಲಿ ಕಳೆದುಹೋಗುತ್ತಿದ್ದ ಅಜಯ್‌ಗೆ ನೀನೇಕೆ ಪಿಎಚ್‌.ಡಿ ಪೂರ್ಣಗೊಳಿಸಲು ಆಸಕ್ತಿ ತೋರಲಿಲ್ಲ ಎಂದು ಪ್ರಶ್ನಿಸಿದಾಗ ನಗುತ್ತಾ‘ಜೀವ ಜಗತ್ತಿನ ಆಳ ಅಗಲ ಮತ್ತು ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಉತ್ತರಕ್ಕಿಂತ ಪ್ರಶ್ನೆಗಳ ಸರಮಾಲೆಯೇ ಮುಂದೆ ನಿಲ್ಲುತ್ತದೆ. ಉತ್ತರಗಳ ಹುಡುಕಾಟದಲ್ಲಿ ಹೆಚ್ಚಿನ ಸವಾಲಿದೆ.ಪಿಎಚ್‌.ಡಿ ಎಂಬ ಜೀವವಿಲ್ಲದ ಹಾಳೆಯ ಮೇಲೆ ನನಗೆ ಒಲವಿಲ್ಲ. ನಾನು ಕೆನಲ್‌ ಕ್ಲಬ್‌ನ ಸದಸ್ಯನಾಗಿರುವ ಬದಲು ತೆರೆದ ರಸ್ತೆಯಲ್ಲಿ ನಿಂತು ಗಟ್ಟಿಯಾಗಿ, ಸಾರ್ವಜನಿಕವಾಗಿಬೊಗಳುತ್ತೇನೆ’ ಎಂದಿದ್ದು ನೆನಪಿಗೆ ಬರುತ್ತಿದೆ.

ಇದೇನೇ ಇರಲಿ, ಅಜಯ್‌ ಅವರ ನಿರ್ಗಮನ ಇಡೀ ಆನೆ ಸಂಕುಲಕ್ಕೇ ಆದ ಅಪಾರ ನಷ್ಟವೆಂಬುದು ವನ್ಯಜೀವಿ ವಲಯದವರ ನಂಬಿಕೆ.

ಅವರ ಸರಳತೆಗೆ, ವಿನಯವಂತಿಕೆಗೆ, ಸಜ್ಜನಿಕೆಗೆ ಮತ್ತು ಅವರ ಅಪಾರ ಜ್ಞಾನಕ್ಕೆ ನಾನು ಶರಣಾಗಿದ್ದೆ. ಅವರು ವಿಜ್ಞಾನ ಮತ್ತು ಕಾಡಿನ ನಿರ್ವಹಣೆಯ ವಿಷಯಗಳಲ್ಲಿ ಇಲಾಖೆಗೆ ಬಹುದೊಡ್ಡ ಆಸ್ತಿಯಾಗಿದ್ದರು.
-ಮನೋಜ್‌ಕುಮಾರ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ನನ್ನ ವೃತ್ತಿ ಜೀವನದಲ್ಲಿ ಕಂಡ ಅತ್ಯಂತ ಪ್ರತಿಭಾವಂತ ವಿಜ್ಞಾನಿ. ಆತ ಸಮಾಜದ ಸ್ಥಾನಮಾನಗಳಿಗೆ ಎಂದೂ ಲೆಕ್ಕಿಸಿರಲಿಲ್ಲ. ಇದೆಲ್ಲಕ್ಕಿಂತ ಮಹಾನ್‌ ಮಾನವತಾವಾದಿ.
-ಜೆಸ್ಟೀಸ್‌ ಜೋಶ್ವ, ನಿರ್ದೇಶಕರು ಮತ್ತು ಪ್ರಧಾನ ವಿಜ್ಞಾನಿ, ಗುಜರಾತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT