ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಇಳಾ ಭಟ್: ಮಂದುವರಿದ ಯಾನ

ಅಪಾರ ಒಳನೋಟಗಳಿದ್ದ ಈ ಗಾಂಧಿವಾದಿ, ಸರಳವಾದ ನಿಲುವಿನಿಂದಲೇ ವ್ಯಾಪಕ ಪ್ರಭಾವ ಬೀರಿದವರು
Last Updated 6 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಇಳಾ ಭಟ್ ಅವರು ಇತ್ತೀಚೆಗೆ ತೀರಿಕೊಂಡ ಸುದ್ದಿ ತಿಳಿದಾಗ ಒಂದು ಕ್ಷಣದ ಮಟ್ಟಿಗೆ ನನಗೆ ಏನೂ ತೋಚಲಿಲ್ಲ. ನಮ್ಮ ನಡುವೆ ನೈತಿಕತೆಯನ್ನು ಬಿಂಬಿಸುತ್ತಾ ನಿಂತ ಒಂದು ತಲೆಮಾರು ಕ್ರಮೇಣ ನಮ್ಮನ್ನಗಲಿ ಹೋಗುತ್ತಿದೆ. ಒಟ್ಟಾರೆ, ಕರ್ಕಶವಾಗುತ್ತಿರುವ ಭಾಷೆ, ಘನತೆರಹಿತ ವರ್ತನೆಯು ಮೇಲುಗೈ ಸಾಧಿಸುತ್ತಿರುವ ಈ ಸಂದರ್ಭದಲ್ಲಿ, ವಿನಾಕಾರಣ ಒಪ್ಪಂದಕ್ಕೆ, ರಾಜಿಗೆ ಒಪ್ಪದ ಗಾಂಧಿವಾದಿಗಳ ಸೈದ್ಧಾಂತಿಕ ನಿಲುವು, ಪ್ರಾಮಾಣಿಕತೆ, ಹಟ, ಶಾಂತಿ, ಸದ್ಭಾವನೆ ಮತ್ತು ಘನತೆಯ ಪ್ರತೀಕವಾಗಿ ನಮ್ಮ ಸಾಕ್ಷಿಪ್ರಜ್ಞೆಯಂತಿದ್ದವರು ನಮ್ಮನ್ನು ಅಗಲಿ ಹೋಗುತ್ತಿರುವುದು ಅತೀವ ದುಃಖದ ಸಂಗತಿ.

ಮೃದುಭಾಷಿಯಾಗಿದ್ದ ಇಳಾ ತಮ್ಮ ಜೀವನವನ್ನು ಬಡ ಮಹಿಳೆಯರ ಸಬಲೀಕರಣಕ್ಕೆ ಮುಡಿಪಾಗಿಟ್ಟಿದ್ದರು. 70ರ ದಶಕದಲ್ಲಿ ಅವರು ಸ್ಥಾಪಿಸಿದ ಸ್ವ-ಉದ್ಯೋಗಿ ಮಹಿಳಾ ಸಂಘ (ಸೆಲ್ಫ್ ಎಂಪ್ಲಾಯ್ಡ್ ವಿಮೆನ್ಸ್ ಅಸೋಸಿಯೇಷನ್– ಸೇವಾ) ಆಗಿನ ಕಾಲಕ್ಕೆ ಒಂದು ಕ್ರಾಂತಿಕಾರಿ ಸಂಘಟನೆಯಾಗಿತ್ತು. ಕ್ರಾಂತಿಕಾರಿ ಎನ್ನುವ ಪದವನ್ನು ಭಿನ್ನ ರೀತಿಯಲ್ಲಿ ಅರ್ಥೈಸಬೇಕು. ಬಡವರ ಸಂಘಟನೆಗೆ ಕ್ರಾಂತಿಕಾರಿ ಪದ ಅಂಟಿದಾಗ ಅದು ಧರಣಿ, ಸತ್ಯಾಗ್ರಹ, ಪ್ರತಿಭಟನೆಯ ಚಿತ್ರಣವನ್ನು ಕೊಡುತ್ತದೆ. ಆದರೆ ಗಾಂಧಿವಾದವನ್ನು ಮೈಗೂಡಿಸಿಕೊಂಡವರ ಕ್ರಾಂತಿ ಬಾಹ್ಯವಾಗಿ ಕಾಣುವುದಿಲ್ಲ. ಅದು ಅಂತರಂಗದಲ್ಲಿಯೇ ಕೆಲಸ ಮಾಡಿ ಸಾಫಲ್ಯವನ್ನು ಪಡೆಯುತ್ತದೆ. ಸತ್ಯದ ಶೋಧನೆಯನ್ನು ಅಂತರಂಗದಲ್ಲಿಯೇ ನಡೆಸಿದ ಮಹಾತ್ಮ ಗಾಂಧಿಯವರ ವಿಚಾರ ವಾದ ಇದ್ದದ್ದು ಶಾಂತಿ, ಸೌಜನ್ಯ, ಆತ್ಮಗೌರವ, ಸ್ವಾವ ಲಂಬನೆ, ಸತ್ಯ ಮತ್ತು ನ್ಯಾಯದ ಪರವಾಗಿ ರಾಜಿಯಿಲ್ಲದೇ ನಿಲ್ಲುವುದರಲ್ಲಿತ್ತು. ಇಳಾ ಅವರು ಗಾಂಧಿಯ ಆತ್ಮವನ್ನು ಮೈಗೂಡಿಸಿಕೊಂಡಂತೆ ಇದ್ದರು.

‘ಸೇವಾ’ ಸಂಸ್ಥೆಯನ್ನು ಅವರು ಒಂದು ಕಾರ್ಮಿಕ ಸಂಘವಾಗಿ ನೋಂದಾಯಿಸಿದ್ದು ಕ್ರಾಂತಿಕಾರಿ ನಡೆಯಾಗಿತ್ತು. ಸಾಮಾನ್ಯವಾಗಿ ಸಂಘಟಿತ ಕ್ಷೇತ್ರದ ಉದ್ಯಮಗಳಲ್ಲಿ ತಮ್ಮ ಹಕ್ಕು, ಸವಲತ್ತುಗಳನ್ನು ಪಡೆಯಲು ಕಾರ್ಮಿಕರು ಒಟ್ಟಾಗಿ ಕಾರ್ಮಿಕ ಸಂಘವನ್ನು ರಚಿಸಿಕೊಂಡಿರುತ್ತಾರೆ. ಆದರೆ ‘ಸೇವಾ’ ಸಂಸ್ಥೆಯು ಸ್ವ-ಉದ್ಯೋಗಿಗಳನ್ನು ಒಳಗೊಂಡಿದ್ದರಿಂದ ಅಲ್ಲಿ ತಮ್ಮ ಹಕ್ಕುಗಳನ್ನು ಒತ್ತಾಯಿಸಿ ಕೇಳಲು ಅವಕಾಶವಿರ ಲಿಲ್ಲ. ಹೀಗಾಗಿ ಈ ಸಂಘವನ್ನು ನೋಂದಾಯಿಸಲು ಹೋದಾಗ, ‘ಇದರಿಂದ ಪ್ರಯೋಜನವೇನು? ನಿಮ್ಮ ಹಕ್ಕುಗಳಿಗಾಗಿ ಯಾರೊಂದಿಗೆ ಹೋರಾಡುವಿರಿ?’ ಎಂದು ನೋಂದಣಾಧಿಕಾರಿ ಕೇಳಿದ್ದು ಸಹಜವಾ ಗಿಯೇ ಇತ್ತು. ಆದರೆ ಇಳಾ ಅವರ ಮನಸ್ಸಿನಲ್ಲಿ ಇದ್ದದ್ದೇ ಬೇರೆ. ಸ್ವ-ಉದ್ಯೋಗಿ ಮಹಿಳೆಯರು ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಾರೆ. ಹಳೇ ಪೇಪರ್‌, ತ್ಯಾಜ್ಯದ ಮರುಬಳಕೆ ಕಾರ್ಯದಲ್ಲಿ ತೊಡಗುತ್ತಾರೆ. ತರಕಾರಿ ಮಾರುತ್ತಾರೆ. ಬಟ್ಟೆ ಹೊಲೆಯುತ್ತಾರೆ. ಈ ಎಲ್ಲವನ್ನೂ ಮಾಡಲು ಸ್ಥಳಾವಕಾಶ ಬೇಕು. ಅಧಿಕಾರಾರೂಢರಿಂದ ಅಥವಾ ಇತರ ಶಕ್ತಿಗಳಿಂದ ಅವರ ಕೆಲಸಕ್ಕೆ ತೊಂದರೆ ಉಂಟಾಗಬಾರದು. ಅವರಿಗೆ ಒಂದು ಗುರುತು ಪತ್ರ, ಒಂದು ಅಸ್ತಿತ್ವ, ಒಂದು ಸಂಘಟನೆ ಬೇಕು. ಹೀಗಾಗಿ, ಇಂತಹದ್ದೊಂದು ಸಂಘದ ಅವಶ್ಯಕತೆ ಇತ್ತು.

ಒಂದು ಮಟ್ಟದಲ್ಲಿ ದೈನಂದಿನ ಉದ್ಯೋಗವನ್ನು ಸುಗಮಗೊಳಿಸುವ ಕೆಲಸ ಮಾಡಿದ್ದಾಯಿತು. ಮುಂದೆ? ಸಂಘಟಿತ ಕ್ಷೇತ್ರದ ಉದ್ಯೋಗಿಗಳಿಗೆ ಏನೇನೆಲ್ಲಾ ಸಿಗ ಬಹುದೋ ಅವೆಲ್ಲವೂ ಅಸಂಘಟಿತ ಕ್ಷೇತ್ರದ ಹೆಣ್ಣು ಮಕ್ಕಳಿಗೂ ಸಿಗುವಂತಾಗಬೇಕು. ಉಳಿತಾಯದ ಹಣ ವನ್ನು ಭವಿಷ್ಯಕ್ಕಾಗಿ ಭದ್ರವಾಗಿ ಕಾಪಿಡಲು, ಉದ್ಯೋಗಕ್ಕೆ ಪೂರಕವಾದ ಆರ್ಥಿಕ ಸಂಪನ್ಮೂಲಗಳನ್ನು ಕಲೆಹಾಕಲು ಮತ್ತು ಸಾಲ ಪಡೆಯಲು ತಮ್ಮದೇ ಒಂದು ಸಹಕಾರಿ ಬ್ಯಾಂಕನ್ನು ಸ್ಥಾಪಿಸಿದರು. ಮೈಕ್ರೊಫೈನಾನ್ಸ್ ಎನ್ನುವ ಪದವು ಬಳಕೆಗೆ ಬರುವುದಕ್ಕೆ ಮುನ್ನವೇ, ಸ್ವಸಹಾಯ ಗುಂಪುಗಳು ಅಸ್ತಿತ್ವಕ್ಕೆ ಬರುವ ಮೊದಲೇ ಆಕೆ ಮಹಿಳೆಯರ ಸಂಘಟನೆಯ ಬಲದ ಮೇಲೆ ಇಂತಹ ದ್ದೊಂದು ಸಾಧನೆ ಮಾಡಿದ್ದರು. ಮಹಿಳೆಯರು ಮತ್ತು ಅವರ ಕುಟುಂಬದವರ ಆರೋಗ್ಯ ವಿಮೆಗಾಗಿ ‘ವಿಮೋ ಸೇವಾ’ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದರು.

ಇಳಾ ಅವರು ಹುಟ್ಟುಹಾಕಿದ ಅನೇಕ ಸಂಸ್ಥೆಗಳಿಗೆ ‘ಸೇವಾ’ದ ಹೆಸರಿದ್ದರೂ ಕಾರ್ಮಿಕರ ಸಂಘ ಮೂಲ ಬೇರಾಗಿತ್ತು. ಅಲ್ಲಿಂದ ಹೊಮ್ಮಿದ ಅನೇಕ ಬಿಳಲುಗಳು ಮಹಿಳೆಯರ ಸಶಕ್ತೀಕರಣಕ್ಕಾಗಿ ಕೆಲಸ ಮಾಡುತ್ತ ಹೊಸ ಬೇರುಗಳನ್ನು ಬೆಳೆಸಿಕೊಂಡವು. ಒಂದೊಂದು ಸಂಸ್ಥೆಗೂ ಒಬ್ಬ ವಿದ್ಯಾವಂತ ಮಹಿಳಾ ಪ್ರಮುಖರನ್ನು ನೇಮಿಸ ಲಾಯಿತು. ಆ ಸಂಸ್ಥೆಯು ಸಕ್ರಿಯವಾಗಿ ನಡೆಯತೊಡಗಿದ ಕಾಲಕ್ಕೆ ಅದರ ದೈನಂದಿನ ನಿರ್ವಹಣೆಯಿಂದ ಇಳಾ ದೂರವಾಗುತ್ತಿದ್ದರು. ಹೀಗಾಗಿಯೇ ಈ ಎಲ್ಲ ಸಂಸ್ಥೆಗಳಲ್ಲಿ ಆಕೆ ಮಾರ್ಗದರ್ಶಕರಾಗಿದ್ದರೂ ಅವುಗಳ ಕಾರ್ಯಚಟು ವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಬೆಳೆಸಿದ ಸಂಸ್ಥೆಯನ್ನು ಬಿಟ್ಟುಕೊಡುವುದು ಯಾವುದೇ ನಾಯಕರಿಗೆ ಸುಲಭವಾದ ಸಂಗತಿಯಲ್ಲ. ಆದರೆ ಇಳಾ ಅವರಿಗೆ ಒಂದು ರೀತಿಯ ನಿರ್ಲಿಪ್ತತೆಯಿತ್ತು. ಹೀಗಾಗಿ ತಾವು ಕಟ್ಟಿದ ಒಂದೊಂದು ಸಂಸ್ಥೆಗೂ ನಾಯಕರನ್ನು ಹುಡುಕಿ, ಅವರಿಗೆ ಸಂಸ್ಥೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು.

ಇಳಾ ಅವರ ಕೆಲಸದಲ್ಲಿ ನಮಗೆ ಎರಡು ಪ್ರಮಖ ಲಕ್ಷಣಗಳು ಕಾಣುತ್ತಿದ್ದವು. ಮೊದಲನೆಯದು, ಬಡ ಮಹಿಳೆಯರನ್ನು ಕೇಂದ್ರವಾಗುಳ್ಳ ಕೆಲಸ. ಹಣಕ್ಕಿಂತ ಜನ ಮುಖ್ಯ ಎನ್ನುವುದನ್ನು ಅರಿತ ಅವರು ಈ ಕೆಲಸ ವನ್ನು ಸಹಕಾರಿ ಸಂಸ್ಥೆಗಳ ಮೂಲಕ ಮಾಡಿದರು. ಎರಡನೆಯದು, ಮಹಿಳಾ ಸಶಕ್ತೀಕರಣದ ಬಗ್ಗೆ ಅವರು ಸೆಮಿನಾರುಗಳಲ್ಲಿ ಪಾಲ್ಗೊಂಡು ಭಾಷಣ ಮಾಡುತ್ತಿರಲಿಲ್ಲ. ಬದಲಿಗೆ, ಬಡ ಮಹಿಳೆಯರ ಸಬಲೀಕರಣಕ್ಕಾಗಿ ತಮ್ಮ ಅಷ್ಟೂ ಚೈತನ್ಯವನ್ನು ಧಾರೆಯೆರೆದಿದ್ದರು. ಹೀಗಾಗಿ ಅವರ ಕೆಲಸದಲ್ಲಿ ಸ್ಪಷ್ಟತೆಯಿತ್ತು.

ಇಳಾ ಅವರ ಬಗ್ಗೆ ನನಗಿರುವ ನೆನಪುಗಳಲ್ಲಿ ಅತ್ಯಂತ ಪ್ರಿಯವಾದದ್ದೆಂದರೆ, ನಮ್ಮ ವಿದ್ಯಾರ್ಥಿಗಳೊಂದಿಗೆ ನಡೆದ ಪ್ರಶ್ನೋತ್ತರದಲ್ಲಿ ಆಕೆ ಕೊಟ್ಟ ಒಂದು ಜವಾಬು. ಯುವ ವಿದ್ಯಾರ್ಥಿನಿಯೊಬ್ಬಳು ‘ನಿಮ್ಮ ಜೀವನದ ಗುರಿ ಏನಿತ್ತು? ಅದರಲ್ಲಿ ಎಷ್ಟನ್ನು ಸಾಧಿಸಿದ್ದೀರಿ?’ ಎಂದು ಕೇಳಿದ ಪ್ರಶ್ನೆಗೆ ಇಳಾ ‘ಯಾವ ಗುರಿಯೂ ಇರಲಿಲ್ಲ. ಸಮಸ್ಯೆಗಳು ಕಂಡವು, ಅವನ್ನು ಪರಿಹರಿಸಲು ಕೆಲಸ ಮಾಡಿದೆವು. ಅವು ಪರಿಹಾರವಾಗುವ ವೇಳೆಗೆ ಹೊಸ ಸಮಸ್ಯೆಗಳು ಕಂಡವು. ಹೀಗಾಗಿ, ಗುರಿ ಎನ್ನುವುದಿಲ್ಲ. ಅದೊಂದು ಪ್ರಯಾಣವಷ್ಟೇ’ ಅಂದಿದ್ದರು. ಆ ಪಯಣವನ್ನು ಆಕೆ ನಿರಂತರವಾಗಿ ಮುಂದುವರಿಸಿದ್ದರು.

ಅವರ ಕೆಲಸವು ಒಂದು ನೆಲೆಯಲ್ಲಿ, ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಸ್ವಯಂ ಪರಿಹಾರ ಕಂಡುಕೊಳ್ಳಬೇಕೆನ್ನುವ ಗುರಿಯೊಂದಿಗೆ ಸ್ವಾಯತ್ತ ಸಂಸ್ಥೆಗಳನ್ನು ಕಟ್ಟುವತ್ತ ಗಮನ ಕೇಂದ್ರೀಕರಿಸಿದಂತೆ ಕಾಣುತ್ತದೆ. ಆದರೆ ಮತ್ತೊಂದು ನೆಲೆಯಲ್ಲಿ, ಈ ಸಮಸ್ಯೆಗಳೆಲ್ಲಕ್ಕೂ ಸಾಂಸ್ಥಿಕ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕಾದರೆ ಅದು ಸರ್ಕಾರದಿಂದಲೇ ಸಾಧ್ಯ ಎನ್ನುವ ನಂಬಿಕೆಯೂ ಅವರಲ್ಲಿ ಇದ್ದಂತಿತ್ತು. ಹೀಗಾಗಿಯೇ ಯೋಜನಾ ಆಯೋಗ, ರಾಜ್ಯಸಭೆ, ರಿಸರ್ವ್ ಬ್ಯಾಂಕಿನ ಕೇಂದ್ರೀಯ ಆಡಳಿತ ಮಂಡಳಿಯಲ್ಲಿ ತಮಗಿದ್ದ ಸ್ಥಾನಗಳನ್ನು ಬಳಸಿಕೊಂಡು ತಮ್ಮ ಕ್ಷೇತ್ರದ ಮಹಿಳೆಯರ ಪರವಾಗಿ ಉತ್ತಮ ನೀತಿಗಳನ್ನು ರೂಪಿಸುವಲ್ಲಿಯೂ ಅವರು ಶ್ರಮಿಸಿದರು.

ಯಾವ ಕೆಲಸ ಮಾಡಬೇಕು, ಯಾವುದನ್ನು ಬಿಟ್ಟು ಕೊಡಬೇಕು, ಎಲ್ಲಿ ಸರ್ಕಾರದೊಂದಿಗೆ ಸೇರಿ ಕೆಲಸ ಮಾಡಬೇಕು, ಯಾವಾಗ ವಿರೋಧಿಸಿ ಪ್ರತಿಭಟಿಸಬೇಕು ಎಂಬುದೆಲ್ಲವನ್ನೂ ಸೂಕ್ಷ್ಮವಾಗಿ ಅರಿತಿದ್ದ ಇಳಾ ಅಪಾರ ಒಳನೋಟಗಳಿದ್ದವರು. ತಮ್ಮ ನಂಬಿಕೆಗೆ ಅನುಸಾರವಾಗಿ ತಮ್ಮ ಪಾಡಿಗೆ ಕೆಲಸ ಮಾಡಿದವರು. ಅಂತಹ ಸರಳವಾದ ನಿಲುವಿನಿಂದಲೇ ಎಷ್ಟು ವ್ಯಾಪಕವಾದ ಪ್ರಭಾವವನ್ನು ಬೀರಿದ್ದರು ಎನ್ನುವುದು ಅವರು ಹುಟ್ಟುಹಾಕಿದ ಸಂಸ್ಥೆ ಗಳನ್ನು ಕಂಡಾಗ ಅರ್ಥವಾಗುತ್ತದೆ. ಆ ಸಂಸ್ಥೆಗಳ ಮುಖ್ಯಸ್ಥರನ್ನು ಕಂಡಾಗ, ತಮ್ಮ ಜೀವಿತಾವಧಿಯಲ್ಲಿಯೇ ತಮ್ಮಂತಹ ಹತ್ತಾರು ಮಹಿಳೆಯರನ್ನು ಆಕೆ ಬೆಳೆಸಿದರು ಎನ್ನುವುದೂ ಕಾಣುತ್ತದೆ. ಅದೊಂದು ದೊಡ್ಡ ವಿಷಯ.

ಇಳಾ ಅವರ ಅನುಭವಕಥನ ಕನ್ನಡಕ್ಕೆ ಬರಬೇಕು ಎನ್ನುವುದು ನನ್ನ ಬಹುಕಾಲದ ಆಸೆ. ಅದು ಸಾಧ್ಯವಾದರೆ ನಮ್ಮ ಪ್ರಪಂಚವೂ ಸಮೃದ್ಧಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ.

ಇಳಾ ಅವರ ಭೌತಿಕ ಪಯಣ ಮುಗಿದಿದೆ, ಆದರೆ ಆಕೆಯ ಬದುಕಿನ ಮೌಲ್ಯಗಳನ್ನು ನಮ್ಮ ಪಯಣದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅದನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಳಾ ಅವರಲ್ಲಿ ಗಾಂಧಿ ಇದ್ದರು. ನಮ್ಮಲ್ಲಿ ತುಸು ಮಟ್ಟಿಗಾದರೂ ಇಳಾ ಇದ್ದರೆ ಸೌಜನ್ಯ ಮತ್ತು ಮೌಲ್ಯಾಧಾರಿತ ಪ್ರಪಂಚದಲ್ಲಿ ನಾವು ಬದುಕುತ್ತೇವೆ. ಹೀಗೆ ಅವರ ಆತ್ಮ ಜೀವಂತವಾಗಿ ರುವುದು ಮುಂದಿನ ತಲೆಮಾರುಗಳು ಅವರ ಮೌಲ್ಯ ಗಳನ್ನು ಅಂತರ್ಗತ ಮಾಡಿಕೊಳ್ಳುವ ಮೂಲಕ. ಅವರ ಆತ್ಮ ನಮ್ಮ ನಡುವೆ ಇರಬೇಕೆನ್ನುವ ಬಯಕೆ ಮತ್ತು ನಂಬಿಕೆ ಎರಡೂ ನನ್ನಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT