ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಧರ್ಮದೊಂದಿಗೆ ಕೈಜೋಡಿಸಿದೆ ವ್ಯಾಮೋಹ!

ಈ ಹೊತ್ತಿನ ರಾಜಕೀಯವು ಜನಕೇಂದ್ರಿತವಾಗದೆ ಧರ್ಮಕೇಂದ್ರಿತ ಚಿಂತನೆಗೆ ಮಣೆ ಹಾಕಿದೆ
Published 12 ಅಕ್ಟೋಬರ್ 2023, 23:19 IST
Last Updated 12 ಅಕ್ಟೋಬರ್ 2023, 23:19 IST
ಅಕ್ಷರ ಗಾತ್ರ

ಸನಾತನಧರ್ಮ ಕುರಿತ ಸದ್ದು ಇತ್ತೀಚಿನ ದಿನಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. ಸನಾತನಧರ್ಮ ಮತ್ತು ಹಿಂದೂಧರ್ಮ ಬೇರೆ ಬೇರೆಯಲ್ಲ ಎಂದು ಹೇಳುವವರೂ ಇದ್ದಾರೆ. ಸಹಜವಾಗಿಯೇ ಹಿಂದುತ್ವ ವರ್ಸಸ್‌ ವೈಚಾರಿಕ ಸಂಘರ್ಷ ಮುನ್ನೆಲೆಗೆ ಬಂದಿದೆ. ಇದೇನೂ ಹೊಸ ವಿದ್ಯಮಾನ ಅಲ್ಲ. ಧರ್ಮ ಮತ್ತು ವ್ಯಕ್ತಿತ್ವಗಳು ತಮ್ಮನ್ನು ಪುನರ್‌ನಿರ್ಮಿಸಿಕೊಳ್ಳಲು ಯಾವುದೇ ಧರ್ಮದಲ್ಲಿ ಇಂಥ ಚಟುವಟಿಕೆಗಳು ನಡೆಯುತ್ತವೆ.

ಆದರೆ ಈ ಹೊತ್ತಿನ ವಿದ್ಯಮಾನ ಬೇರೆಯೇ ಆಗಿದೆ. ಕೇಂದ್ರದ ರಾಜಕೀಯವು ಜನಕೇಂದ್ರಿತ ಚಿಂತನೆ
ಗಿಂತ ಧರ್ಮಕೇಂದ್ರಿತ ಚಿಂತನೆಗೆ ಮಣೆ ಹಾಕಿದೆ. ಅದರಲ್ಲೂ ಅದು ಉಗ್ರ ಸನಾತನಧರ್ಮೀಯ
ವಾಗಿದೆ. ಇದಕ್ಕೆ ಪೂರಕವೆಂಬಂತೆ, ಮುಸ್ಲಿಂ ಧಾರ್ಮಿಕ ಮೂಲಭೂತವಾದ ಕೂಡ ಕೈಜೋಡಿಸಿದೆ. ಈ ಇಬ್ಬರ ನಡಾವಳಿ ಸಮಾಜದಲ್ಲಿ ಆತಂಕ ಉಂಟುಮಾಡಿದೆ.

ಸನಾತನಿಗಳು ತಮ್ಮ ಸಮರ್ಥನೆಗಾಗಿ ಮುಸ್ಲಿಂ ಮೂಲಭೂತವಾದವನ್ನು ಮುಂದೊಡ್ಡುತ್ತಿದ್ದಾರೆ.
ಈ ನಡೆ ರಾಜಕೀಯ ಮತ್ತು ಧಾರ್ಮಿಕತೆಯನ್ನು
ಒಂದುಗೂಡಿಸಿದೆ. ಈ ಎರಡೂ ದೈತ್ಯಶಕ್ತಿಗಳ ಒಗ್ಗೂಡುವಿಕೆ ಸಮಾಜಕ್ಕೆ ಅಪಾಯಕಾರಿಯಾಗಿದೆ. ಏಕೆಂದರೆ, ಸ್ವಭಾವದಲ್ಲಿ ಈ ಎರಡೂ ಬಂಡವಾಳಶಾಹಿ ಶಕ್ತಿಗಳು.

ಹಿಂದೂ ಧರ್ಮವನ್ನು ವಿರೋಧಿಸುವವರಲ್ಲಿ ಎರಡು ಪಂಗಡಗಳಿವೆ. ಒಂದು, ಹಿಂದೂ ಧರ್ಮವನ್ನು ಸಾರಾಸಗಟು ವಿರೋಧಿಸುವವರು. ಮತ್ತೊಂದು ಗುಂಪಿನವರು, ಹಿಂದೂ ಧರ್ಮದ ಮಿತಿಗಳನ್ನು ಎತ್ತಿ ಹೇಳುತ್ತ, ಪರಿಷ್ಕೃತ ರೂಪದಲ್ಲಿ ಅದನ್ನು ಒಪ್ಪಿಕೊಳ್ಳುವವರು. ಆದರೆ ಸನಾತನಿಗಳು ಈ ಎರಡೂ ಬಗೆಯ ನಡವಳಿಕೆಯನ್ನು ಸಹಿಸಿಕೊಳ್ಳುತ್ತಿಲ್ಲ.
ತಮ್ಮ ಸನಾತನತೆಯ ಸಂರಕ್ಷಣೆಗೆ ಮುಸ್ಲಿಂ ಮೂಲಭೂತವಾದದ ಜೊತೆಗೆ ಒಟ್ಟು ಮುಸ್ಲಿಂ
ಜನವರ್ಗವನ್ನೇ ಖಳನಾಯಕ ಸ್ಥಾನದಲ್ಲಿ ಇರಿಸುತ್ತಿ
ದ್ದಾರೆ. ಇದು ಆರೋಗ್ಯಕರ ನಡವಳಿಕೆ ಅಲ್ಲ.

ಇಂದಿನ ಜಾಗತಿಕ ಸಂದರ್ಭದಲ್ಲಿ ಧರ್ಮವೆಂಬುದು ಯುದ್ಧಕ್ಕಿಂತ ಭಯಂಕರ ಅಸ್ತ್ರವಾಗಿದೆ. ಇಂಥ ಸ್ವಧರ್ಮದ ವ್ಯಾಮೋಹದ ಜೊತೆಗೆ ಪ್ರಾದೇಶಿಕ ಸ್ವಕೀಯತೆ ಮತ್ತು ಜನಾಂಗೀಯ ಅಸ್ಮಿತೆಗಳೆಂಬ ವ್ಯಾಮೋಹಗಳು ಕೈಜೋಡಿಸಿವೆ. ಈ ನಡವಳಿಕೆ ಹಿಟ್ಲರಿಸಂನ ಪುನರುತ್ಥಾನದಂತೆ ಕಾಣಿಸುತ್ತಿದೆ. ಧರ್ಮವು ಒಂದು ಸಮುದಾಯದ ಅಸ್ಮಿತೆ ಆಗುವುದಕ್ಕೆ ಬದಲಾಗಿ ಆಯುಧವಾಗುತ್ತಿದೆ. ಭಾರತವು ಪ್ರಸ್ತುತ ಇಂಥ ದುರಂತಕ್ಕೆ ಸಿಲುಕಿದೆ.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಿಂದೂಧರ್ಮದ ಬಗೆಗಿನ ವಿಮರ್ಶೆ ಕಠಿಣವಾಗಿಯೇ ಇತ್ತು. ಸ್ವಧರ್ಮೀಯರೂ ಪರಧರ್ಮೀಯರೂ ಒಟ್ಟುಗೂಡಿಯೇ ಈ ವಿಮರ್ಶೆಯ ಪಾಲುದಾರರಾಗಿದ್ದರು. ಇಂಥ ವಿಮರ್ಶೆಯನ್ನು ಒಪ್ಪುವ ಅಥವಾ ಬಿಡುವ ಮನಃಸ್ಥಿತಿ ಆರೋಗ್ಯಕರವಾಗಿಯೇ ಇತ್ತು. ಹೀಗೆ ನಾವು ಅಂಬೇಡ್ಕರ್ ಅವರನ್ನು ನಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಸ್ವೀಕರಿಸಿದೆವು. ಅವರನ್ನು ಖಳನಾಯಕ ಎಂದು ಯಾರೂ ಕರೆದಿರಲಿಲ್ಲ. ಸ್ಥಿತಿಗೆ ಪರಿಸ್ಥಿತಿಯನ್ನು ಮುಖಾಮುಖಿ ಮಾಡುವ ಸಾಂಸ್ಕೃತಿಕ ಸಂಪನ್ನತೆ ಅವರಲ್ಲಿ ಇತ್ತೇ ವಿನಾ ಅಧಾರ್ಮಿಕತೆ ಇರಲಿಲ್ಲ.

ಈ ಹೊತ್ತು ಧರ್ಮವು ಭಯಕ್ಕೆ ಕಾರಣವಾಗುತ್ತಿದೆ.
ಎಲ್ಲರ ಅಂತರಂಗ ವಿಮರ್ಶೆ ಕದಡಿ ಹೋಗುತ್ತಿದೆ. ಭವಿಷ್ಯದ ಭಾರತದ ಬಗ್ಗೆ ಕಳವಳವಾಗುತ್ತಿದೆ. ಭಾರತ
ದಲ್ಲಿ ಜಾತಿಯ ವಿನಾ ಬೇರೆ ಸಾಮಾಜಿಕ ಐಡೆಂಟಿಟಿ ಇಲ್ಲ, ಬೇರೆ ಧಾರ್ಮಿಕ ಐಡೆಂಟಿಟಿಯೂ ಇಲ್ಲ. ನಮ್ಮಲ್ಲಿ ಬೇಕಾದಷ್ಟು ಜನಪದ ಧರ್ಮಗಳಿವೆ, ವೃತ್ತಿಧರ್ಮಗ
ಳಿವೆ. ಆದರೆ ಅವು ಭಾರತವನ್ನು ಅಖಂಡವಾಗಿ ಪ್ರತಿನಿಧಿ
ಸಲಾರವು. ‘ಭಾರತ ಧರ್ಮ’ ಎಂಬುದನ್ನು ಅಖಂಡ ಧರ್ಮವಾಗಿ ಒಪ್ಪಿಕೊಂಡರೆ ಅದರೊಳಗೆ ಅಗತ್ಯವಾಗಿ ಬೇಕಾದ ಸಾಮಾಜಿಕ ವಿಂಗಡಣೆಗಳಿಲ್ಲ. ಅದೊಂದು ಅಮೂರ್ತ ಸ್ವರೂಪಿ. ಅದು ‘ಅಖಿಲ ಭಾರತ’. ಜನ ಅವರವರು ಕಂಡುಕೊಂಡ ಸಂಸ್ಕೃತಿಯೊಳಗೆ ಬದುಕಬೇಕು. ಅದೇ ಜೀವನಧರ್ಮ.

ರಾಜಕೀಯ ಸಂಸ್ಕೃತಿ ಬೇರೆ, ಜನಸಂಸ್ಕೃತಿ ಬೇರೆ. ಈಗಿರುವ ಅರ್ಥದ ಹಿಂದೂ ಧರ್ಮವನ್ನು ಒಪ್ಪಿಕೊಂಡರೆ ಜಾತಿಯನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದರೆ ಜಾತಿಯು ತಾರತಮ್ಯದ ಐಡೆಂಟಿಟಿ. ಇದನ್ನು ಒಪ್ಪಿಕೊಳ್ಳಲು ಪ್ರಜ್ಞಾವಂತರಿಗೆ ಸಾಧ್ಯವೇ ಇಲ್ಲ. ಸಾಮಾನ್ಯ ಜನರಿಗೆ ಈ ತಾರತಮ್ಯ ಏನೆಂದೂ ಗೊತ್ತಿಲ್ಲ. ನಾವು ಇರುವುದೇ ಹೀಗೆ ಎಂದು ತಿಳಿದುಕೊಂಡಿದ್ದಾರೆ. ಆರ್ಥಿಕ ಅನುಕೂಲಕ್ಕಾಗಿ ಜಾತಿಯ ಹೆಸರು ಹೇಳುತ್ತಾರೆಯೇ ವಿನಾ ಇದು ನಮ್ಮ ಧಾರ್ಮಿಕ ಐಡೆಂಟಿಟಿ ಎಂದು ತಿಳಿದುಕೊಂಡಿಲ್ಲ. ಈ ಮಧ್ಯೆ ಎಡಪಂಥೀಯ ಚಿಂತನೆ ಕಾಲಿಟ್ಟಿತು. ಅದು ಜನರ ಮಧ್ಯೆ ‘ಕಾರ್ಮಿಕ’ ಎಂಬ ಒಂದು ಐಡೆಂಟಿಟಿಯನ್ನು ಬಳಕೆಗೆ ತಂದಿತು. ಆದರೆ ಅದು ಬಹಳ ಕಾಲ ನಿರ್ದಿಷ್ಟ ಐಡೆಂಟಿಟಿಯಾಗಿ ಉಳಿಯಲಿಲ್ಲ. ಈಗಿರುವ
ಕಾರ್ಮಿಕ ಸಂಘಟನೆಗಳು ಜಾತಿ ಗುಂಪುಗಳಾಗಿ ಹಂಚಿಹೋಗಿವೆ.

ಭಾರತದಲ್ಲಿ ಬ್ರಾಹ್ಮಣ ಮತ್ತು ವೈಶ್ಯರನ್ನು ಬಿಟ್ಟರೆ ಉಳಿದವರಿಗೆ ಭದ್ರ ಜಾತಿ ತಳಪಾಯವಿಲ್ಲ. ಕ್ಷತ್ರಿಯ ಎಂಬ ಒಂದು ಶಾಶ್ವತ ಜಾತಿ ಇಲ್ಲ. ಗದ್ದುಗೆ ಏರಿದವನು ರಾಜ. ಈಗ ದುರ್ಬಲ ಜಾತಿಗಳನ್ನು ಜಾತಿಗಳಾಗಿ ಗುರುತಿಸುವುದು ಅವರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ಮಾತ್ರ. ನಿಜದಲ್ಲಿ ಅವರಿಗೆ ಜಾತಿ ಇಲ್ಲ.

ಹಾಗಿದ್ದಲ್ಲಿ ಈ ಹೊತ್ತಿನ ನಮ್ಮ ಸಾಮಾಜಿಕ ಐಡೆಂಟಿಟಿ ಯಾವುದು? ಜಾತಿಯ ಒಳಗಿರುತ್ತ ಜಾತಿಯನ್ನು ವಿರೋಧಿಸುವುದೊ ಅಥವಾ ನಾವು ಸಹಜವಾಗಿ ಬದುಕುತ್ತಿರುವ ‘ನಿರ್ಜಾತಿ’ಗೆ ನಾಮಕರಣ
ವೊಂದನ್ನು ಹುಡುಕುವುದೊ ಅಥವಾ ಜಾತಿಯನ್ನೇ ‘ನಿರ್ಜಾತೀಕರಣ’ಗೊಳಿಸಿ ಬಳಸಿಕೊಳ್ಳುವುದೊ? ದಾರಿ ಯಾವುದಯ್ಯ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT