ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬಾಹ್ಯಾಕಾಶ ಪೈಪೋಟಿಯ ಹೊಸ ಆತಂಕ

ಈ ಸಂಬಂಧದ ತಂತ್ರಜ್ಞಾನ ನಿರ್ವಹಣೆಗೆ ಬೇಕು ಹೊಸ ಒಪ್ಪಂದ
Published 2 ಅಕ್ಟೋಬರ್ 2023, 23:38 IST
Last Updated 2 ಅಕ್ಟೋಬರ್ 2023, 23:38 IST
ಅಕ್ಷರ ಗಾತ್ರ

ಲೇಖಕರು: ಎಚ್ ಆರ್ ಕೃಷ್ಣಮೂರ್ತಿ

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರನ್ನು ಮೃದುವಾಗಿ ಇಳಿಸಿ, ಜಗತ್ತಿನ ಎಲ್ಲ ಬಾಹ್ಯಾಕಾಶ ಸಂಸ್ಥೆಗಳ ಮೆಚ್ಚುಗೆಗೆ ಇಸ್ರೊ ಪಾತ್ರವಾದ ಒಂದು ತಿಂಗಳ ನಂತರ, ಚೀನಾದ ಪ್ರಧಾನ ಬಾಹ್ಯಾಕಾಶ ವಿಜ್ಞಾನಿ ವುವಾಂಗ್ ಯುವಾನ್, ವಿಕ್ರಮ್ ಲ್ಯಾಂಡರ್‌ ಚಂದ್ರಸ್ಪರ್ಶ ಮಾಡಿದ ತಾಣ ದಕ್ಷಿಣ ಧ್ರುವ ಅಲ್ಲವೇ ಅಲ್ಲ ಎಂದಿದ್ದಾರೆ! ಭಾರತದ ಈ ಅಸಾಧಾರಣ ಸಾಧನೆಗೆ ಎರಡು ದಿನಗಳ ಮುಂಚೆ, ರಷ್ಯಾದ ಲೂನಾ-25 ಲ್ಯಾಂಡರ್ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೃದುವಾಗಿ ಇಳಿಯಲು ಸಾಧ್ಯವಾಗದೆ, ನೆಲಕ್ಕೆ ಅಪ್ಪಳಿಸಿ ನಾಶವಾಗಿತ್ತು. ಭಾರತ ಮತ್ತು ಚೀನಾ ಆ ಅನಾಹುತವನ್ನು ಎತ್ತಿ ತೋರಿಸಲಿಲ್ಲ. ಆದರೆ ಕೆಲವೇ ದಿವಸಗಳಲ್ಲಿ ಅಮೆರಿಕ ಮಾತ್ರ, ಲೂನಾ-25 ಚಂದ್ರನ ನೆಲಕ್ಕಪ್ಪಳಿಸಿದ ತಾಣದಲ್ಲಿ ಉಂಟಾದ 10 ಮೀಟರ್ ವ್ಯಾಸದ ಕುಳಿಯ ಚಿತ್ರವನ್ನು ಜಗತ್ತಿಗೆ ಬಿಡುಗಡೆ ಮಾಡಿತು!

ಚೀನಾ ಮತ್ತು ಅಮೆರಿಕದ ಈ ನಡೆಯನ್ನು ಗಮನಿಸಿರುವ ವಿಜ್ಞಾನಿಗಳು ಹಾಗೂ ವ್ಯಾಖ್ಯಾನಕಾರರು, ಅವು ಬಾಹಾಕಾಶ ಪೈಪೋಟಿಯ ಭಾಗವಾದ ಕುಚೋದ್ಯ, ಅಸೂಯೆ, ನಿರಾಸೆ, ಅಪಪ್ರಚಾರವೇ ವಿನಾ ಅವುಗಳಿಗೆ ಯಾವುದೇ ಮಹತ್ವವಿಲ್ಲ ಎಂದು ತಳ್ಳಿಹಾಕಿದ್ದಾರೆ. ಆದರೆ ಅದೇ ಸಮಯದಲ್ಲಿ ಬಾಹ್ಯಾಕಾಶ ಪೈಪೋಟಿ ತರುತ್ತಿರುವ ಅಪಾಯಗಳನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದ ಅಗತ್ಯದತ್ತ ಗಮನ ಸೆಳೆದಿದ್ದಾರೆ.

1955- 75ರ ‘ಸ್ಪೇಸ್ ರೇಸ್’ ಅವಧಿಯಲ್ಲಿ ಬಾಹ್ಯಾಕಾಶದಲ್ಲಿ ಇದ್ದುದು ಅಮೆರಿಕ ಮತ್ತು ಸೋವಿಯತ್‌ ರಷ್ಯಾದ ಸೀಮಿತ ಸಂಖ್ಯೆಯ ಕೃತಕ ಉಪಗ್ರಹಗಳು ಮಾತ್ರ. ಅವುಗಳಲ್ಲೂ ನಾಗರಿಕ ಸೇವೆ ಮತ್ತು ವಾಣಿಜ್ಯೋದ್ದೇಶದ ಉಹಗ್ರಹಗಳ ಸಂಖ್ಯೆ ಬಹು ಕಡಿಮೆ. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜಾಡು ಹಿಡಿಯುವ ‘ಆರ್ಬೈಟಿಂಗ್ ನೌ’ ಜಾಲತಾಣದ ಮಾಹಿತಿಯಂತೆ, ಈ ವರ್ಷದ ಮೇ ಅಂತ್ಯದಲ್ಲಿ ಭೂಮಿಯ ಸುತ್ತ ವಿವಿಧ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿರುವ ಸಕ್ರಿಯ ಉಪಗ್ರಹಗಳ ಸಂಖ್ಯೆ 7,702. ದೂರಸಂಪರ್ಕ, ಹವಾ ಮುನ್ಸೂಚನೆ, ಸಂಚಾರ, ಉಪಗ್ರಹ ಆಧಾರಿತ ವೈದ್ಯಕೀಯ ಸೇವೆ, ಶಿಕ್ಷಣ, ರಕ್ಷಣೆ, ವಾಣಿಜ್ಯ ವ್ಯವಹಾರದಂತಹ ಅಸಂಖ್ಯ ಕ್ಷೇತ್ರಗಳಲ್ಲಿ ಉಪಗ್ರಹಗಳನ್ನು ಬಳಸುತ್ತಿದ್ದೇವೆ. ಅಂತಹ ಉಪಗ್ರಹಗಳ ಜೊತೆಗೆ ಸಂಪರ್ಕ ಕಡಿದುಹೋದರೆ ದೇಶವೊಂದರ ಸಮಸ್ತ ಚಟುವಟಿಕೆಗಳೂ ಸ್ತಬ್ಧವಾಗಿಹೋಗುತ್ತವೆ. ಈ ಸಾಧ್ಯತೆಯೇ ನಮ್ಮ ಮುಂದಿರುವ ಅತಿ ದೊಡ್ಡ ಅಪಾಯ ಎಂಬುದು ತಜ್ಞರ ಅಭಿಪ್ರಾಯ.

ವಿವಿಧ ದೇಶಗಳ ನಡುವೆ ಇರುವ ಪೈಪೋಟಿ, ಅಪನಂಬಿಕೆಯ ಕಾರಣಗಳಿಂದಾಗಿ, ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಈ ಉಪಗ್ರಹಗಳು ಶತ್ರುಗಳ ಕಾರ್ಯಾಚರಣೆಗೆ ತುತ್ತಾದರೆ, ಅಂತಹ ದೇಶದ ಪರಿಸ್ಥಿತಿ ದುರ್ಭರವಾಗುತ್ತದೆ. ಜಾಗತಿಕವಾಗಿ ದೇಶಗಳ ನಡುವಿನ ಸಂಘರ್ಷಗಳ ಅಧ್ಯಯನ ಮಾಡುವ ‘ಗ್ಲೋಬಲ್ ಕಾನ್‍ಫ್ಲಿಕ್ಟ್ ಟ್ರ್ಯಾಕರ್’ ಸಂಸ್ಥೆಯ ವರದಿಯಂತೆ, ಸದ್ಯದಲ್ಲಿ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಯುದ್ಧದಲ್ಲಿ, ಇಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್‌ ಕಮ್ಯುನಿಕೇಷನ್ ಸಿಸ್ಟಮ್’ನಿಂದ ಗರಿಷ್ಠ ಮಟ್ಟದ ತಾಂತ್ರಿಕ ನೆರವು ಉಕ್ರೇನ್‍ಗೆ ದೊರೆಯುತ್ತಿದೆ. ಆದರೆ ಯಾವುದೇ ಕಾರಣದಿಂದ ಸ್ಟಾರ್‌ಲಿಂಕ್ ಉಪಗ್ರಹ ಆಧಾರಿತ ಸೌಲಭ್ಯಗಳನ್ನು ಹಿಂತೆಗೆದುಕೊಂಡರೆ, ಉಕ್ರೇನ್‍ಗೆ ತೀವ್ರ ಆಘಾತವಾಗಲಿದೆ.

ಇದೇ ಸಮಯದಲ್ಲಿ ರಷ್ಯನ್ನರು, ಸ್ಟಾರ್‌ಲಿಂಕ್‌ ಸೇವೆಗೆ ಅಡಚಣೆ ಉಂಟುಮಾಡುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಗ್ಲೋಬಲ್ ಕಾನ್‍ಫ್ಲಿಕ್ಟ್ ಟ್ರ್ಯಾಕರ್ ಸಂಸ್ಥೆ ತಿಳಿಸಿದೆ. ಸ್ಟಾರ್‌ಲಿಂಕ್‍ನಂತಹ ಖಾಸಗಿ ಸಂಸ್ಥೆಯೊಂದು, ಎರಡು ದೇಶಗಳ ನಡುವಿನ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ಇದೇ ಮೊದಲ ಬಾರಿ. ಸೋಲಿನ ಹಿಡಿತದಲ್ಲಿರುವ ದೇಶವೊಂದು, ತೀವ್ರ ಹತಾಶೆಯ ಪರಿಸ್ಥಿತಿಯಲ್ಲಿ, ಎದುರಾಳಿಯ ಉಹಗ್ರಹಗಳನ್ನು ನಾಶ ಮಾಡಿ ಯುದ್ಧವನ್ನು ಬಾಹ್ಯಾಕಾಶಕ್ಕೆ ವಿಸ್ತರಿಸದಂತೆ ನೋಡಿಕೊಳ್ಳುವುದೇ ಇಂದಿನ ಬಹು ದೊಡ್ಡ ಸವಾಲಾಗಿದೆ.

2007ಕ್ಕಿಂತ ಮುಂಚೆ, ಬಾಹ್ಯಾಕಾಶದಲ್ಲಿರುವ ಉಪಗ್ರಹಗಳನ್ನು ನಾಶ ಮಾಡುವ ಉಪಗ್ರಹ ನಿರೋಧಕ ಕ್ಷಿಪಣಿಗಳ (ಆ್ಯಂಟಿ ಸ್ಯಾಟಲೈಟ್ ಮಿಸೈಲ್) ಪರೀಕ್ಷೆ ಮಾಡುವುದನ್ನು ತಡೆಯುವ ಅನೌಪಚಾರಿಕ ಒಪ್ಪಂದಕ್ಕೆ ಎಲ್ಲ ದೇಶಗಳೂ ಬದ್ಧವಾಗಿದ್ದವು. ಆದರೆ 2007ರ ಜನವರಿಯಲ್ಲಿ ಈ ಒಪ್ಪಂದವನ್ನು ಉಲ್ಲಂಘಿಸಿದ ಚೀನಾ, ಬಾಹ್ಯಾಕಾಶದ 893 ಕಿ.ಮೀ. ಎತ್ತರದಲ್ಲಿದ್ದ ತನ್ನದೇ ಆದ ಹವಾಮಾನ ಉಪಗ್ರಹವನ್ನು ಕ್ಷಿಪಣಿಯಿಂದ ನಾಶಪಡಿಸಿತು. 2019ರ ಮಾರ್ಚ್‌ 27ರಂದು, ‘ಮಿಷನ್ ಶಕ್ತಿ’ಯ ಭಾಗವಾಗಿ, ಒಡಿಶಾದ ಅಬ್ದುಲ್ ಕಲಾಂ ದ್ವೀಪದಿಂದ ಉಡಾಯಿಸಿದ ಭಾರತದ ಮೊದಲ ಉಪಗ್ರಹ ನಿರೋಧಕ ಕ್ಷಿಪಣಿಯು ಭೂಸಮೀಪ ಕಕ್ಷೆಯಲ್ಲಿ ನಿಷ್ಕ್ರಿಯವಾಗಿದ್ದ ನಮ್ಮದೇ ಆದ ಉಪಗ್ರಹವನ್ನು ಕರಾರುವಾಕ್ಕಾಗಿ ಹೊಡೆದುರುಳಿಸಿತು. ಇದೀಗ ಭೂಮಿಯಿಂದಲೇ ಬಿತ್ತರಿಸಿದ ಲೇಸರ್ ಕಿರಣಪುಂಜದಿಂದ ಉಪಗ್ರಹಗಳನ್ನು ನಿಷ್ಕ್ರಿಯಗೊಳಿಸುವ ತಂತ್ರಜ್ಞಾನವನ್ನು ಚೀನಾ ಪರೀಕ್ಷಿಸಿದೆ ಎಂಬ ವರದಿಗಳಿವೆ.

ಭವಿಷ್ಯದಲ್ಲಿ ಬಾಹ್ಯಾಕಾಶ ಸಮರಗಳ ಸಾಧ್ಯತೆ ಒಂದುಕಡೆ ನಿರಂತರವಾಗಿ ಹೆಚ್ಚುತ್ತಿದ್ದರೆ, ಇನ್ನೊಂದೆಡೆ, ಅಂತಹ ಅವಘಡಗಳನ್ನು ನಿಯಂತ್ರಿಸುವ, ತಪ್ಪಿಸುವ ವ್ಯವಸ್ಥೆಗಳ ಕೊರತೆ ಕಾಡುತ್ತಿದೆ. ಬಾಹ್ಯಾಕಾಶದ ಶಾಂತಿಯುತ ಬಳಕೆಯನ್ನು ಸಾಧ್ಯವಾಗಿಸುವಂತಹ ಒಪ್ಪಂದಗಳು ಇಲ್ಲವೆಂದಲ್ಲ. ಈ ಹಿಂದಿನ ಶೀತಲ ಸಮರದ ಸಮಯದಲ್ಲಿ ರೂಪುಗೊಂಡ 1967ರ ಬಾಹ್ಯಾಕಾಶ ಒಪ್ಪಂದ, ಗಗನಯಾತ್ರಿಗಳು, ಉಪಗ್ರಹ ಮುಂತಾದವುಗಳನ್ನು ರಕ್ಷಿಸಿ ಭೂಮಿಗೆ ಹಿಂತಿರುಗಿ ತರುವ 1968ರ ಒಪ್ಪಂದ, ಬಾಹ್ಯಾಕಾಶದ ಭಗ್ನಾವಶೇಷಗಳಿಂದ ಭೂಮಿಯ ಮೇಲೆ ಸಂಭವಿಸುವ ಹಾನಿಯ ಹೊಣೆಗಾರಿಕೆಯನ್ನು ನಿರ್ಧರಿಸುವ 1972ರ ಒಪ್ಪಂದ, ವಿವಿಧ ದೇಶಗಳು ಬಾಹ್ಯಾಕಾಶಕ್ಕೆ ಕಳುಹಿಸುವ ಎಲ್ಲ ಉಪಗ್ರಹ ಮತ್ತು ಇನ್ನಿತರ ನೌಕೆಗಳ ಸಮಸ್ತ ವಿವರಗಳನ್ನೂ ವಿಶ್ವಸಂಸ್ಥೆಯಲ್ಲಿ ದಾಖಲಿಸಬೇಕಾದ 1975ರ ಒಪ್ಪಂದ, ಚಂದ್ರ ಮತ್ತು ಇತರ ಆಕಾಶಕಾಯಗಳ ಅನ್ವೇಷಣೆಗೆ ಸಂಬಂಧಿಸಿದ 1979ರ ಒಪ್ಪಂದದಂತಹವುಗಳ ಜೊತೆಗೆ ಅನೇಕ ಮಾರ್ಗದರ್ಶಿ ಸೂತ್ರಗಳೂ ಇವೆ. ಆದರೆ ಇವುಗಳಲ್ಲಿ ಅನೇಕ ಕುಂದುಕೊರತೆಗಳಿವೆ. ಉದಾಹರಣೆಗೆ, 1967ರ ಬಾಹ್ಯಾಕಾಶ ಒಪ್ಪಂದದಲ್ಲಿ, ಬಾಹ್ಯಾಕಾಶದಲ್ಲಿ ಏಕಕಾಲದಲ್ಲಿ ಸಾಮೂಹಿಕ ವಿನಾಶದ ಅಸ್ತ್ರಗಳ (ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್) ಬಳಕೆಗೆ ನಿಷೇಧವಿದೆ. ಆದರೆ ಉಳಿದ ಅಸ್ತ್ರಗಳ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ. ಹೀಗಾಗಿ, ಇಂದಿನ ತಂತ್ರಜ್ಞಾನದ ಬಳಕೆ ತಂದೊಡ್ಡಿರುವ ಸವಾಲುಗಳ ನಿರ್ವಹಣೆಗೆ ಹೊಸ ಒಪ್ಪಂದಗಳು ಅಥವಾ ಈಗಿರುವ ಒಪ್ಪಂದಗಳನ್ನು ಆಧರಿಸಿದ ಕಾನೂನುಗಳಿಗೆ ತಿದ್ದುಪಡಿಗಳು ಅಗತ್ಯ.

2010 ಮತ್ತು 2019ರ ವಿಶ್ವಸಂಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಶಕ್ತಿಯುತವಾದ ಕಾನೂನುಗಳನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಬಲಿಷ್ಠ ದೇಶಗಳಿಗೆ ಅದರಲ್ಲಿ ಹೆಚ್ಚಿನ ಆಸಕ್ತಿಯಿಲ್ಲ. ಜಾಗತಿಕ ಶಾಂತಿ, ಪರಸ್ಪರ ನಂಬಿಕೆ, ಮಾನವೀಯ ಮೌಲ್ಯಗಳಂಥ ಉದಾರ ತತ್ವಗಳ ಮೇಲೆ ರೂಪುಗೊಂಡಿರುವ ಒಪ್ಪಂದಗಳು ಹಿಂದಿನ ಐದು ದಶಕಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾವುದೇ ರೀತಿಯ ಅವಘಡಗಳಾಗದಂತೆ ನೋಡಿಕೊಂಡಿರುವುದರಿಂದ ಯಾವ ಹೊಸ ಒಪ್ಪಂದ, ಕಾನೂನುಗಳ ಅಗತ್ಯವೂ ಇಲ್ಲವೆಂಬುದು ಅವುಗಳ ವಾದ. ಆದರೆ ಇದು ಬರೀ ಕಣ್ಣೊರೆಸುವ ತಂತ್ರಗಾರಿಕೆ.

ಬಾಹ್ಯಾಕಾಶ ಕಾಯಗಳು ಅಪಾರ ಸಂಪನ್ಮೂಲಗಳ ಆಗರ. ಅವುಗಳಲ್ಲಿರುವ ವಾಣಿಜ್ಯೋದ್ದೇಶದ ಅವಕಾಶಗಳೂ ಅಪಾರ. 2026ರ ಅಂತ್ಯದ ವೇಳೆಗೆ ಬಾಹ್ಯಾಕಾಶ ಕಾಯಗಳಲ್ಲಿ ಗಣಿಗಾರಿಕೆ ಪ್ರಾರಂಭವಾಗಲಿದೆ ಎನ್ನುವುದು ಪ್ಲಾನೆಟರಿ ರಿಸೋರ್ಸಸ್ ಸಂಸ್ಥೆಯ ಅಧ್ಯಕ್ಷ ಕ್ರಿಸ್ ಲ್ಯೂವಿಕಿ ಅವರ ನಿರೀಕ್ಷೆ. ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ. ಆದರೆ ಈಗಿರುವ ಬಾಹ್ಯಾಕಾಶ ಒಪ್ಪಂದಗಳಿಂದ ಆಕಾಶಕಾಯಗಳಲ್ಲಿನ ಗಣಿಗಾರಿಕೆಯ ಬಗ್ಗೆ ಸ್ಪಷ್ಟ ಕಾನೂನಾತ್ಮಕ ನಿಲುವು ತಳೆಯುವುದು ಅಸಾಧ್ಯವೆಂಬುದು ‘ಸ್ಪೇಸ್ ಲಾ’ ಪರಿಣತರ ಅಭಿಪ್ರಾಯ. ಆದರೆ ಈ ಕಾನೂನುಗಳು ರೂಪುಗೊಳ್ಳುವವರೆಗೂ ದೇಶಗಳು ಕಾಯುವ ಸ್ಥಿತಿಯಲ್ಲಿ ಇರುವುದು ಅನುಮಾನ. ಭಾರತದ ಪ್ರಜ್ಞಾನ್‌ ರೋವರ್ ಕಳುಹಿಸಿರುವ ಮಾಹಿತಿಗಳ ವಿಶ್ಲೇಷಣೆ ದಕ್ಷಿಣ ಧ್ರುವದ ನೆಲದಲ್ಲಿ ಸಲ್ಫರ್, ಅಲ್ಯೂಮಿನಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಟೈಟಾನಿಯಂ, ಕ್ರೋಮಿಯಂ ಮತ್ತು ಆಕ್ಸಿಜನ್‍ಗಳು ಇರುವುದನ್ನು ಖಚಿತಪಡಿಸಿದೆ.

ಚೀನಾ, ರಷ್ಯಾಗೆ ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆ ಅತಿ ಹೆಚ್ಚಿನ ಆದ್ಯತೆಯ ವಿಷಯವಾಗಿದೆ. 2025ರಲ್ಲಿ ಅಮೆರಿಕದ ಗಗನಯಾತ್ರಿಗಳು ದಕ್ಷಿಣ ಧ್ರುವದಲ್ಲಿ ಇಳಿದು, ಮಂಜುಗಡ್ಡೆಗಾಗಿ ಹುಡುಕಾಟ ನಡೆಸಲಿದ್ದಾರೆ.

ಈ ಎಲ್ಲ ಧಾವಂತದ ಚಟುವಟಿಕೆಗಳ ನಡುವೆ, ಆಗಸ್ಟ್ 28ರಿಂದ ಸೆಪ್ಟೆಂಬರ್ 1ರವರೆಗೆ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಕಾರ್ಯತಂಡದ ನಾಲ್ಕನೆಯ ಹಾಗೂ ಅಂತಿಮ ಸಭೆ, ‘ರೂಢಿಗತ ಸಂಪ್ರದಾಯ, ನಿಯಮಗಳು ಮತ್ತು ಜವಾಬ್ದಾರಿಯುತ ನಡವಳಿಕೆ’ಯ (ನಾರ್ಮ್, ರೂಲ್ಸ್ ಆ್ಯಂಡ್ ರೆಸ್ಪಾನ್ಸಿಬಲ್ ಬಿಹೇವಿಯರ್) ಆಧಾರದ ಮೇಲೆ ಬಾಹ್ಯಾಕಾಶ ಪೈಪೋಟಿಯಿಂದ ಆಗುವ ಅನಾಹುತಗಳನ್ನು ತಪ್ಪಿಸುವ ಕರಡು ಒಪ್ಪಂದವನ್ನು ಸಿದ್ಧಗೊಳಿಸಿದೆ ಎಂಬ ವರದಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT