ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬಡದೇಶಗಳಿಗೆ ಸಾಲದ ಉರುಳು

ಬಡದೇಶಗಳ ಸಂಕಷ್ಟಕ್ಕೆ ಮುಕ್ತ ಮನಸ್ಸಿನಿಂದ, ತ್ವರಿತವಾಗಿ ಮಿಡಿಯುವ ಅವಶ್ಯಕತೆ ಇಂದಿನ ತುರ್ತು
Published 3 ಆಗಸ್ಟ್ 2023, 0:26 IST
Last Updated 3 ಆಗಸ್ಟ್ 2023, 0:26 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಇಂದು ಐದು ಜನರಲ್ಲಿ ಒಬ್ಬರು ಸಾಲದ ವಿಪತ್ತಿನಲ್ಲಿರುವ ದೇಶದಲ್ಲಿದ್ದಾರೆ. ಮೂರರಲ್ಲಿ ಎರಡು ದೇಶಗಳು ಸಾಲದ ವಿಪತ್ತಿನಲ್ಲಿವೆ. ತೀವ್ರ ಸಂಕಷ್ಟದಲ್ಲಿರುವ 9 ದೇಶಗಳಲ್ಲಿ 8 ಆಫ್ರಿಕಾದಲ್ಲಿವೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಅಂದಾಜಿನ ಪ್ರಕಾರ ಒಟ್ಟು 72 ದೇಶಗಳು ಸಾಲದ ಸಂಕಷ್ಟದಲ್ಲಿವೆ. ಸಾಲ ತೀರಿಸಲಾಗದೇ ಹೋದಾಗ ಅಥವಾ ನೆರವಿಗಾಗಿ ಜಿ20ಯನ್ನೋ ಐಎಂಎಫ್ ಅನ್ನೋ ಮನವಿ ಮಾಡಿಕೊಂಡಾಗ ಮಾತ್ರ ಸುದ್ದಿಯಾಗುತ್ತದೆ.

ಈಗ ಜಾಂಬಿಯಾ, ಘಾನಾ ದೇಶಗಳು ಸುದ್ದಿಯಲ್ಲಿವೆ. ಸಾಲ ತೀರಿಸಲಾಗುವುದಿಲ್ಲ ಎಂದು ಘೋಷಿಸಿವೆ. ಜಾಂಬಿಯಾವು ಆಫ್ರಿಕಾದಲ್ಲೇ ಅತಿಹೆಚ್ಚು ತಾಮ್ರ ತಯಾರಿಸುವ ಎರಡನೇ ದೇಶ. ಸಾಲ ತೀರಿಸಲಾಗುವುದಿಲ್ಲ ಎಂದು ತಿಳಿಸಿದ ಮೊದಲ ದೇಶ. ಚಾಡ್ ಹಾಗೂ ಇಥಿಯೋಪಿಯಾ ಸಾಲದ ಮರು ಹೊಂದಾಣಿಕೆಗೆ ಮನವಿ ಮಾಡಿಕೊಂಡಿವೆ. ಶ್ರೀಲಂಕಾ ಹಲವು ತಿಂಗಳಿನಿಂದ ಸಾಲ ಪಾವತಿಗಾಗಿ ತಿಣುಕುತ್ತಿದೆ. ಪಾಕಿಸ್ತಾನದ ಹಣಕಾಸು ಸಚಿವರು ‘ದೇವರೇ ಕಾಪಾಡಬೇಕು’ ಎಂದು ಕೈಚೆಲ್ಲಿ ಕೂತಿದ್ದಾರೆ. ಪಟ್ಟಿ ಬೆಳೆಯುತ್ತದೆ.

ಸಂಕಷ್ಟದ ಸ್ಥಿತಿಗೆ ಹಲವು ವಿವರಣೆಗಳು ಸಾಧ್ಯ. ಈ ದೇಶಗಳು ಖರ್ಚನ್ನು ನಿಭಾಯಿಸಲಾಗದೆ ಸಾಲ ಮಾಡಿಕೊಂಡಿದ್ದವು. ಆಗ ಬಡ್ಡಿದರ ಕಡಿಮೆ ಇತ್ತು. ಈಗ ಬಡ್ಡಿದರ ಏರಿದೆ. ಮರುಪಾವತಿ ದುಬಾರಿಯಾಗಿದೆ. ಕೋವಿಡ್- 19, ಉಕ್ರೇನ್ ಯುದ್ಧ, ಹದಗೆಡುತ್ತಿರುವ ಹವಾಮಾನದಂತಹವು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿವೆ. ಅಮೆರಿಕ, ಯುರೋಪ್ ಇವೆಲ್ಲಾ ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರವನ್ನು ಏರಿಸಿವೆ. ಹಾಗಾಗಿ ಬಂಡವಾಳವು ಬಡ ದೇಶಗಳಿಂದ ಅಲ್ಲಿಗೆ ಹರಿದುಹೋಗುತ್ತಿದೆ. ಈ ದೇಶಗಳ ಕರೆನ್ಸಿ ಮೌಲ್ಯ ಕುಸಿದಿದೆ. ಆಮದು ದುಬಾರಿಯಾಗಿದೆ. ರಫ್ತಿನಿಂದ ಬರುತ್ತಿದ್ದ ವರಮಾನ ಕಮ್ಮಿಯಾಗಿದೆ. ವಿದೇಶಿ ವಿನಿಮಯದ ಮೀಸಲು ಕರಗಿದೆ. ಮರುಪಾವತಿಯನ್ನು ಬಹುತೇಕ ಡಾಲರಿನಲ್ಲಿ ಮಾಡಬೇಕಾಗಿರುವುದರಿಂದ ಹೆಚ್ಚು ಹಣ ತೆರಬೇಕಾಗುತ್ತದೆ.

2010ರಲ್ಲಿ ಮರುಪಾವತಿಗಾಗಿ ಆಫ್ರಿಕಾದ ದೇಶಗಳು 1,700 ಕೋಟಿ ಡಾಲರ್ ಕಟ್ಟುತ್ತಿದ್ದವು, 2024ರಲ್ಲಿ ಅದು 7,400 ಕೋಟಿ ಡಾಲರ್ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಬಹುತೇಕ ಬಡದೇಶಗಳು ಉಳಿದ ಖರ್ಚುಗಳಿಗಿಂತ ಸಾಲದ ಮರುಪಾವತಿಗೆ ಹೆಚ್ಚು ವೆಚ್ಚ ಮಾಡುತ್ತಿವೆ. ಕೆನ್ಯಾ ತನ್ನ ವರಮಾನದ ಶೇ 60ರಷ್ಟನ್ನು ಸಾಲಕ್ಕಾಗಿ ಕಟ್ಟುತ್ತಿದೆ. ಐಎಂಎಫ್ ಪ್ರಕಾರವೇ 2021ರಲ್ಲಿ ಬಡರಾಷ್ಟ್ರಗಳು ತಮ್ಮ ಒಟ್ಟು ಖರ್ಚಿನ ಶೇ 33ರಷ್ಟನ್ನು ಸಾಲದ ಮರುಪಾವತಿಗಾಗಿ ಖರ್ಚು ಮಾಡಿವೆ. ಈ ದೇಶಗಳು ಶಿಕ್ಷಣ, ಆರೋಗ್ಯ, ಆಹಾರ ಹಾಗೂ ಸಾಮಾಜಿಕ ರಕ್ಷಣೆಗೆ ಖರ್ಚು ಮಾಡುವುದಕ್ಕಿಂತ ಎರಡರಷ್ಟನ್ನು ಸಾಲದ ಮರುಪಾವತಿಗೆ ಖರ್ಚು ಮಾಡುತ್ತಿವೆ. ಇವೆಲ್ಲಾ ಬಡದೇಶಗಳು. ಬಹುತೇಕ ಹಸಿದ ಜನರೇ ಇರುವ ದೇಶಗಳು. ಹವಾಮಾನವೂ ಕೈಕೊಡುತ್ತಿದೆ. ಈ ದೇಶಗಳಿಗೆ ಮೂಲ ಸೌಕರ್ಯ ಒದಗಿಸುವುದಕ್ಕೆ ಬಂಡವಾಳ ಹೂಡುವ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ.
 
ಇವು ಬರೀ ಮಾನವೀಯತೆಯ ಪ್ರಶ್ನೆಗಳಲ್ಲ. ಇದರಿಂದಾಗುವ ಸಾಮಾಜಿಕ ಹಾಗೂ ರಾಜಕೀಯ ಪರಿಣಾಮಗಳು ದೇಶಕ್ಕೆ ಸೀಮಿತವಾಗಿ ಇರುವುದಿಲ್ಲ. ಅವು ಜಗತ್ತನ್ನೂ ಕಾಡುತ್ತವೆ. ಹಾಗಾಗಿ ಜಗತ್ತು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮೊದಲಿಗೆ, ಸಾಲ ಕೊಟ್ಟವರಲ್ಲಿ ಒಮ್ಮತ ಮೂಡಬೇಕಾಗಿದೆ.

ಹಿಂದುಳಿದ ದೇಶಗಳು ಒಂದೆರಡು ದಶಕಗಳ ಹಿಂದಿನವರೆಗೂ ಮುಂದುವರಿದ ಪಾಶ್ಚಾತ್ಯ ದೇಶಗಳ ಪ್ಯಾರಿಸ್ ಕ್ಲಬ್ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿದ್ದವು. ಈಗ ಚೀನಾ ಸಾಲ ನೀಡುತ್ತಿದೆ. ಖಾಸಗಿಯವರೂ ಸಾಲ ಕೊಡುತ್ತಿದ್ದಾರೆ. ಖಾಸಗಿಯವರು ಕೊಡುತ್ತಿರುವ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ, ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂದಾಗ ಖಾಸಗಿಯವರ ಹಿತಾಸಕ್ತಿ ಮುಖ್ಯವಾಗುತ್ತದೆ. ಸಾಲದ ಮರು ಹೊಂದಾಣಿಕೆಯ ಮಾತುಕತೆಯಲ್ಲಿ ಒಮ್ಮತ ಕಷ್ಟವಾಗುತ್ತದೆ.

ಘಾನಾದ ಉದಾಹರಣೆ ಇದನ್ನು ಸ್ಪಷ್ಟಪಡಿಸುತ್ತದೆ. 2022ರ ಮೂರನೆಯ ತ್ರೈಮಾಸಿಕದಲ್ಲಿ ಅದರ ವಿದೇಶಿ ಸಾಲ ಒಟ್ಟು 28.4 ಬಿಲಿಯನ್ ಡಾಲರ್ (ಅಂದಾಜು ₹ 2.32 ಲಕ್ಷ ಕೋಟಿ) ಇತ್ತು. ಅದರಲ್ಲಿ 190 ಕೋಟಿ ಡಾಲರ್ ಪ್ಯಾರಿಸ್ ಕ್ಲಬ್ ದೇಶಗಳಿಂದ, 170 ಕೋಟಿ ಡಾಲರ್ ಚೀನಾದಿಂದ ಬಂದಿದ್ದು. ಆದರೆ ಖಾಸಗಿಯವರಿಂದ 1,630 ಕೋಟಿ ಡಾಲರ್ ಅಂದರೆ ಶೇಕಡ 57ರಷ್ಟು ಸಾಲ ತೆಗೆದುಕೊಂಡಿತ್ತು. ಘಾನಾವು ಸಾಲದ ಮರುಹೊಂದಾಣಿಕೆಗಾಗಿ ಅಂದರೆ ರಿಯಾಯಿತಿಗಾಗಿ ಸಾಲದಾತರನ್ನು ಮನವಿ ಮಾಡಿಕೊಂಡಾಗ ಸಮಸ್ಯೆಯಾಗಿದ್ದು ಖಾಸಗಿಯವರಿಂದ. ದೊಡ್ಡ ಸಾಲದಾತರ ನಡುವೆ ಒಮ್ಮತ ಸಾಧ್ಯವಾಗಲಿಲ್ಲ ಅನ್ನುವ ಕಾರಣಕ್ಕೆ ಜಗತ್ತಿನ ಬಡವರು ಬೆಲೆ ತೆರುವಂತೆ ಆಗಬಾರದು. ಪರಿಹಾರ ಸಿಗುವುದಷ್ಟೇ ಅಲ್ಲ ಬೇಗ ಸಿಗುವುದು ಮುಖ್ಯವಾಗುತ್ತದೆ.

ಸಾಲದ ಬಿಕ್ಕಟ್ಟನ್ನು ಪರಿಹರಿಸುವ ಕೆಲಸ ಹೆಚ್ಚು ಸಂಕೀರ್ಣವಾದದ್ದು. ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕೆಲವು ದೇಶಗಳಿಗೆ 2021ರ ಡಿಸೆಂಬರ್‌ವರೆಗೆ ಸಾಲದ ಮರುಪಾವತಿಯನ್ನು ಸ್ಥಗಿತಗೊಳಿಸಲು ಜಿ20 ಅವಕಾಶ ಮಾಡಿಕೊಟ್ಟಿತು. ಅದು ಬರೀ ತಾತ್ಕಾಲಿಕ ಉಪಶಮನವಾಗಿತ್ತು, ಪರಿಹಾರವಾಗಿರಲಿಲ್ಲ. ನಂತರ ಅದಕ್ಕೆ ಪೂರಕವಾಗಿ ಸಾಲದ ಬಿಕ್ಕಟ್ಟಿನ ಪರಿಹಾರಕ್ಕೆ ಒಂದು ಸಮಾನ ಚೌಕಟ್ಟನ್ನು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಜಿ20 ಸೂಚಿಸಿತು. ಅತ್ಯಂತ ಹಿಂದುಳಿದ ದೇಶಗಳು ಸಾಲದ ಮರುಹೊಂದಾಣಿಕೆಗೆ ಮನವಿ ಸಲ್ಲಿಸಬಹುದಿತ್ತು. ದೇಶಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವುಗಳಿಗೆ ಸಾಲದಲ್ಲಿ ರಿಯಾಯಿತಿಯನ್ನು ತೋರಿಸುವ, ಅವಶ್ಯಕ ಖರ್ಚುಗಳಿಗೆ ಅವಕಾಶ ಮಾಡಿಕೊಡುವ, ಖಾಸಗಿಯವರೂ ಸೇರಿದಂತೆ ಸಾಲ ಕೊಟ್ಟವರನ್ನೆಲ್ಲಾ ಒಂದೆಡೆ ಸೇರಿಸಿ ಒಂದು ನಿರ್ಧಾರಕ್ಕೆ ಬರುವ ಹಾಗೂ ಅದನ್ನು ಜಾರಿಗೆ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಚಾಡ್, ಜಾಂಬಿಯಾ ಹಾಗೂ ಇಥಿಯೋಪಿಯಾ ಪರಿಹಾರಕ್ಕಾಗಿ 2021ರಲ್ಲೇ ಮನವಿ ಮಾಡಿಕೊಂಡಿದ್ದವು. ಆದರೆ ಇಲ್ಲಿಯವರೆಗೂ ಅವಕ್ಕೆ ಪರಿಹಾರ ಸಿಕ್ಕಿಲ್ಲ. ನಿಜ, ಒಮ್ಮತಕ್ಕೆ ಬರುವ ಪ್ರಕ್ರಿಯೆ ಕಷ್ಟಕರದ್ದು. ಆದರೆ ಅಮೆರಿಕದಲ್ಲಿ ಬ್ಯಾಂಕುಗಳು ಇತ್ತೀಚೆಗೆ ಬಿಕ್ಕಟ್ಟಿನಲ್ಲಿ ಸಿಲುಕಿದಾಗ ಅವುಗಳಿಗೆ ಪರಿಹಾರವನ್ನು ತಕ್ಷಣದಲ್ಲೇ ಕೊಡುವುದಕ್ಕೆ ಸಾಧ್ಯವಾಗಿದೆ. ಅಲ್ಲೂ ತೀರಾ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ದೇಶಗಳು ಅಂತಹುದೇ ಪರಿಹಾರವನ್ನು ಕೇಳುತ್ತಿವೆ. ಇವೂ ಅಂತಹುದೇ ಕಾಳಜಿಯನ್ನು ಬೇಡುತ್ತವೆ.

ಸಾಲಗಾರ ದೇಶಗಳು ಸಂಕಷ್ಟದಲ್ಲಿದ್ದಾಗ ನೆರವಿಗಾಗಿ ಐಎಂಎಫ್ ಮೊರೆ ಹೋಗುತ್ತವೆ. ಐಎಂಎಫ್ ಸಾಲ ಕೊಡುವಾಗ ಕೆಲವು ಷರತ್ತುಗಳನ್ನು ಹಾಕುತ್ತದೆ. ಉದಾಹರಣೆಗೆ, ಸರ್ಕಾರಗಳು ವಿತ್ತೀಯ ಕ್ರೋಡೀಕರಣ ಮಾಡಬೇಕು ಅಂದರೆ ಖರ್ಚನ್ನು ಕಡಿಮೆ ಮಾಡುವ ಮೂಲಕ ಬಜೆಟ್ ಕೊರತೆಯನ್ನು ಕಡಿಮೆ ಮಾಡಬೇಕೆಂದು ಸೂಚಿಸುತ್ತದೆ. ಇದರಿಂದ ಆ ದೇಶಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಾಲ- ಜಿಡಿಪಿಯ ಅನುಪಾತ ಕಡಿಮೆಯಾಗುತ್ತದೆ ಎನ್ನುವುದು ಅದರ ನಿಲುವು. ಆದರೆ ಈ ಬಗ್ಗೆ ಬಹಳಷ್ಟು ಟೀಕೆಗಳಿವೆ. ಹಲವು ದೇಶಗಳು ಇಂದು ದುಃಸ್ಥಿತಿಯಲ್ಲಿ ಇರುವುದಕ್ಕೆ ಸರ್ಕಾರಗಳ ವೆಚ್ಚದ ಕಡಿತವೇ ಕಾರಣ ಎನ್ನಲಾಗಿದೆ. ಐಎಂಎಫ್‌ನ ಇತ್ತೀಚಿನ ಸಂಶೋಧನಾ ವರದಿಯೂ ಇದೇ ನಿಲುವಿಗೆ ಬಂದಿದೆ.

ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವುದರಿಂದ ಸಾಲ–ಜಿಡಿಪಿ ಅನುಪಾತ ಕಡಿಮೆಯಾಗುವುದಿಲ್ಲ. ಯಾಕೆಂದರೆ ಅದು ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಬದಲಿಗೆ, ಜಿಡಿಪಿ ಹೆಚ್ಚಳಕ್ಕೆ ಗಮನ ಕೊಟ್ಟರೆ ಸಾಲದ ಅನುಪಾತ ಕಡಿಮೆಯಾಗುತ್ತದೆ ಎಂದು ಆ ವರದಿ ಹೇಳಿದೆ. ಆದರೆ ಈ ಸಂಶೋಧನೆಯು ಐಎಂಎಫ್ ನೀತಿಯ ಮೇಲೆ ಏನೂ ಪರಿಣಾಮ ಬೀರಿದಂತೆ ಕಾಣುವುದಿಲ್ಲ. ಅದು ಇನ್ನೂ ತನ್ನ ಹಿಂದಿನ ನಿಲುವಿಗೇ ಅಂಟಿಕೊಂಡಿದೆ. ಇತ್ತೀಚೆಗೆ ಅದು ಶ್ರೀಲಂಕಾದೊಂದಿಗೆ ಸಾಲದ ಮರುಹೊಂದಾಣಿಕೆಗೆ ಮಾಡಿಕೊಂಡ ಒಪ್ಪಂದದಲ್ಲಿ ವಿತ್ತೀಯ ಕ್ರೋಡೀಕರಣಕ್ಕೆ ಒತ್ತಾಯಿಸಿದೆ. ಆ ಮೂಲಕ ಉಳಿತಾಯ ಬಜೆಟ್ಟನ್ನು ಸಾಧಿಸಬೇಕೆಂದು ಸೂಚಿಸಿದೆ. ಘಾನಾ ಹಾಗೂ ಜಾಂಬಿಯಾದಲ್ಲೂ ಐಎಂಎಫ್ ವಿತ್ತೀಯ ಸಮತೋಲನ ಸಾಧಿಸಬೇಕೆಂದು ಬಯಸುತ್ತದೆ. ಇಂಧನದ ಮೇಲೆ ತೆರಿಗೆ, ಸಬ್ಸಿಡಿ ಕಡಿತದಂತಹ ಹಳೆಯ ಸಲಹೆಗಳಿಗೆ ಜೋತುಬಿದ್ದಿದೆ.

ಬದಲಾದ ನಿಲುವು ಬರೀ ಸಂಶೋಧನಾ ವಿಭಾಗಕ್ಕೆ ಸೀಮಿತವಾಗಿದೆ. ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುವುದು ಅನವಶ್ಯಕ ಮಾತ್ರವಲ್ಲ ಹಾನಿಕಾರಕವೂ ಹೌದು. ವಿತ್ತೀಯ ಕ್ರೋಡೀಕರಣದಂತಹ ಕ್ರಮಗಳು ವಿಫಲವಾಗುತ್ತಿವೆ ಎಂದು ತಿಳಿದ ಮೇಲೆ ಅದಕ್ಕಾಗಿ ಒತ್ತಾಯಿಸದಿರುವುದು ಒಳ್ಳೆಯದು. ಬಡದೇಶಗಳ ಸಂಕಷ್ಟಕ್ಕೆ ಮುಕ್ತ ಮನಸ್ಸಿನಿಂದ, ತ್ವರಿತವಾಗಿ ಮಿಡಿಯುವ ಅವಶ್ಯಕತೆ ಇಂದಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT