ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ. ಕೇಶವ ಎಚ್. ಕೊರ್ಸೆ ಲೇಖನ | ಜಲಸುರಕ್ಷೆ: ನೀರ ಮೇಲಣ ಗುಳ್ಳೆ

ನೈಸರ್ಗಿಕ ಜಲಚಕ್ರ ಛಿದ್ರವಾಗುವುದನ್ನು ನಿಯಂತ್ರಿಸದೆ, ನೀರಿನ ಸುರಕ್ಷತೆ ಸಾಧಿಸಲಾಗದು
Published : 13 ಮಾರ್ಚ್ 2023, 22:37 IST
ಫಾಲೋ ಮಾಡಿ
Comments

ಯುಗಾದಿಗೆ ಮುನ್ನವೇ ನಾಡಿನಾದ್ಯಂತ ತಾಪಮಾನ ಏರುತ್ತಿದೆ. ಹಿಂದಿನ ನವೆಂಬರ್ ನಂತರ ಒಮ್ಮೆಯೂ ಮಳೆ ಬರದಿರುವುದರಿಂದ, ಮಣ್ಣು ಹಾಗೂ ವಾತಾವರಣದಲ್ಲಿ ತೇವಾಂಶ ತೀವ್ರವಾಗಿ ಕುಸಿಯುತ್ತಿದೆ. ಕೆರೆಗಳು ಬತ್ತಿ, ಹೊಳೆಗಳು ಒಣಗುತ್ತಿವೆ. ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರ ಕೊರತೆಯಾಗುವ ಎಲ್ಲ ಸಾಧ್ಯತೆಗಳು ಈಗಲೇ ಗೋಚರಿಸುತ್ತಿವೆ. ಮಲೆನಾಡು ಹಾಗೂ ಕರಾವಳಿಯಲ್ಲಂತೂ ಎರಡು ವಾರಗಳಿಂದ ಎಲ್ಲೆಡೆ ಕಾಡಿನಬೆಂಕಿ! ಈಗಲಾದರೂ ನೀರಿನ ನಿರ್ವಹಣೆಯ ಸವಾಲುಗಳನ್ನು ಗುರುತಿಸಿ, ನಮ್ಮ ಜವಾಬ್ದಾರಿಯನ್ನು ನೆನಪಿಸಿಕೊಳ್ಳಬೇಡವೇ? ಬೆಂಕಿ ಬಿದ್ದ ಮೇಲಾದರೂ ಬಾವಿ ತೋಡೋಣ!

ಈ ಸಮಯದಲ್ಲಿಯೇ ‘ವಿಶ್ವ ಜಲ ದಿನ’ (ಮಾರ್ಚ್ 22) ಆಚರಣೆ ನಡೆಯಲಿದೆ. ಅದರ ಅಂಗವಾಗಿ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಆಯೋಜಿಸುತ್ತಿರುವ ‘ವಿಶ್ವ ಜಲ ಸಮ್ಮೇಳನ’ದಲ್ಲಿ ಭಾರತವೂ ಭಾಗವಹಿಸಲಿದೆ. ಸುಸ್ಥಿರ ಅಭಿವೃದ್ಧಿ ಆಶಯಗಳ ಆರನೇ ಗುರಿಯ ಅನ್ವಯ, 2030ರ ವೇಳೆಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ತನ್ನ ಯೋಜನೆಗಳನ್ನು ಅದು ಜಗದ ಮುಂದಿರಿಸಲಿದೆ. ನೈಸರ್ಗಿಕ ಜಲಚಕ್ರದ ಅಂಗಗಳನ್ನೆಲ್ಲ ಪುನರುಜ್ಜೀವನಗೊಳಿಸುತ್ತ, ಅದರ ಚೌಕಟ್ಟಿನಲ್ಲಿಯೇ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಬೇಕಾದ ಅಗತ್ಯವನ್ನು ಸರ್ಕಾರವೂ ಒಪ್ಪುತ್ತಿದೆ. ವಿಪರ್ಯಾಸವೆಂದರೆ, ಆ ತಿಳಿವಳಿಕೆ ಆಡಳಿತ ನೀತಿ ಹಾಗೂ ಆಚರಣೆಯಲ್ಲಿ ಮಾತ್ರ ಕಣ್ಮರೆಯಾಗುತ್ತಿದೆ!

ಕುಡಿಯಲು, ಕೃಷಿ, ಕೈಗಾರಿಕೆ- ಈ ಎಲ್ಲಕ್ಕೂ ಬಹಳಷ್ಟು ನೀರನ್ನು ಸದಾ ಪೂರೈಸುವುದು ವರ್ತಮಾನದ ದೊಡ್ಡ ಸವಾಲು. ಏರುತ್ತಿರುವ ಜನಸಂಖ್ಯೆ ಹಾಗೂ ಕೊಳ್ಳುಬಾಕತನದಿಂದಾಗಿ ನೀರಿನ ತಲಾ ಬಳಕೆಯ ಪ್ರಮಾಣವೂ ಏರುತ್ತಿದೆ. ಇದನ್ನು ನಿಭಾಯಿಸಲು ನೀರಿನ ಬಳಕೆಯ ವಿಧಾನಗಳನ್ನು ನೈಸರ್ಗಿಕ ಜಲಚಕ್ರದ ತತ್ವಗಳಿಗೆ ಅನುಗುಣವಾಗಿ ಮರುರೂಪಿಸಲೇಬೇಕಿದೆ. ಈ ಸವಾಲನ್ನು ಮೂರು ಆಯಾಮಗಳಲ್ಲಿ ಗುರುತಿಸಬಹುದು.

ಮೊದಲಿನದು, ಜಲಮೂಲಗಳ ಸಂರಕ್ಷಣೆ. ನಾಡಿನ ನದಿಗಳೆಲ್ಲ ಪಶ್ಚಿಮಘಟ್ಟದಿಂದ ಹರಿದುಬರುವ ಅಸಂಖ್ಯ ಸಣ್ಣ ತೊರೆಗಳನ್ನೇ ಆಧರಿಸಿವೆ. ಅಲ್ಲಿನ ಕಾಡು-ಕಣಿವೆಗಳ ಮಣ್ಣು ಮಳೆನೀರನ್ನು ಹಿಡಿದಿಟ್ಟುಕೊಂಡು, ವರ್ಷವಿಡೀ ನದಿಗಳಿಗೆ ನೀರು ಸೃಜಿಸುತ್ತದೆ. ಆದರೆ, ಈ ಜಲಾನಯನಗಳೆಲ್ಲ ಕಾಡಿನ ಅತಿಕ್ರಮಣ, ಅವೈಜ್ಞಾನಿಕ ಹೆದ್ದಾರಿ ವಿಸ್ತರಣೆ, ಗಣಿಗಾರಿಕೆಯಂತಹವುಗಳಿಗೆ ಬಲಿಯಾಗುತ್ತಿರುವುದರಿಂದ, ನೀರು ಹಿಡಿದಿಡುವ ಮಣ್ಣಿನ ಸಾಮರ್ಥ್ಯ ಮಾಯವಾಗಿ, ಮಳೆನೀರೆಲ್ಲ ನೆರೆಯಾಗಿ ಹರಿಯುತ್ತಿದೆ! ಸಹ್ಯಾದ್ರಿಯಾದ್ಯಂತ ಸೂಕ್ತ ಭೂಬಳಕೆ ನೀತಿ ಜಾರಿ ಮಾಡಿ, ಸುಸ್ಥಿರ ಜಲಾನಯನ ಅಭಿವೃದ್ಧಿ ಕ್ರಮಗಳನ್ನು ಕೈಗೊಂಡರೆ ಮಾತ್ರ ಇದನ್ನು ಸರಿಪಡಿಸಲಾದೀತು. ಕೃಷಿ, ಅರಣ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಅಂಥ ಸಂತುಲಿತ ಯೋಜನೆಗಳಿಗೆ ಈಗಲಾದರೂ ಹೆಜ್ಜೆಯಿಡಬಲ್ಲವೇ?

ಒಳನಾಡಿನ ಇನ್ನೊಂದು ಬಗೆಯ ನೀರಿನ ಮೂಲವೆಂದರೆ ಬಾವಿ, ಕೆರೆ ಹಾಗೂ ಕೊಳವೆಬಾವಿ. ಅಂತರ್ಜಲ ಕುಸಿದು, ಲಾಗಾಯ್ತಿನಿಂದ ನೀರುಣಿಸುತ್ತಿದ್ದ ಬಾವಿಗಳು ಬತ್ತುತ್ತಿವೆ. ಕೆರೆಗಳು ಒತ್ತುವರಿ, ಹೂಳು ಹಾಗೂ ಮಾಲಿನ್ಯಕ್ಕೆ ಕರಗುತ್ತಿವೆ. ಮಿತಿಯಿಲ್ಲದ ಕೊಳವೆಬಾವಿಗಳಿಂದಾಗಿ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ಇವನ್ನೆಲ್ಲ ನಿಯಂತ್ರಿಸಬೇಕಿದ್ದ ಪಂಚಾಯತ್‌ ವ್ಯವಸ್ಥೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಅಂತರ್ಜಲ ಇಲಾಖೆ- ಇವೆಲ್ಲ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸೋಲುತ್ತಿವೆ. ಹೊಳೆ-ನದಿ, ಬಾವಿ-ಕೆರೆ ಈ ಜಲಮೂಲಗಳನ್ನೆಲ್ಲ ಜಲಚಕ್ರದ ನೈಸರ್ಗಿಕ ಚಲನೆಗೆ ಅನುಗುಣವಾಗಿ ಜಲಾನಯನ ಅಭಿವೃದ್ಧಿ ವಿಧಾನಗಳಿಂದ ನಿರ್ವಹಿಸಬೇಕಾದುದು ಇಂದಿನ ಮತ್ತೊಂದು ಅಗತ್ಯ.

ಎರಡನೆಯ ಅಂಶವೆಂದರೆ ನೀರಿನ ಸದ್ಬಳಕೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಶುದ್ಧ ಕುಡಿಯುವ ನೀರನ್ನು ಕ್ಷಮತೆಯಿಂದ ಒದಗಿಸುವಲ್ಲಿ ನಗರಸಭೆ ಹಾಗೂ ಪಂಚಾಯತ್‌ ವ್ಯವಸ್ಥೆಗಳು ಸೋಲುತ್ತಿವೆ. ಮಳೆನೀರು ಸಂಗ್ರಹ ಹಾಗೂ ಹನಿ ನೀರಾವರಿಯಂಥ ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಸಲು ರೈತರ ಕೈಹಿಡಿದು ಸಾಗಬೇಕಿದ್ದ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ಸಹಾಯಧನ ವಿತರಣೆಗೆ ಬೆಸೆದಿರುವ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿವೆ. ಬಟ್ಟೆ, ಕಾಗದ, ಚರ್ಮ, ಮಾಂಸದಂತಹವುಗಳ ಸಂಸ್ಕರಣೆ ಹಾಗೂ ಗಣಿಗಾರಿಕೆಯಂಥ ಅತಿಯಾಗಿ ನೀರು ಬಳಸುವ ಉದ್ಯಮಗಳು, ನೀರಿನ ಮಿತಬಳಕೆ ಹಾಗೂ ಬಳಸಿದ ನೀರನ್ನು ಸಂಸ್ಕರಿಸುವ ಕುರಿತು ವಹಿಸುವ ಕಾಳಜಿ ಕಡಿಮೆಯೆ. ಅದನ್ನು ಭವಿಷ್ಯದ ಹಿತಕ್ಕಾಗಿ ಮಾಡುವ ಹೂಡಿಕೆಯೆಂದು ಭಾವಿಸದೆ, ಸದ್ಯದ ಲಾಭ ತಗ್ಗಿಸುವ ಖರ್ಚಿನ ಬಾಬ್ತು ಎಂದು ಗ್ರಹಿಸುವುದೇ ಹೆಚ್ಚು.

ವಾಣಿಜ್ಯ ಬೆಳೆ ಕೃಷಿ, ಉದ್ಯಮ ಹಾಗೂ ಕೈಗಾರಿಕೆ- ಯಾವುದೇ ಇರಲಿ, ಅವು ತಮ್ಮ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ನೀರಿನ ಮಿತಬಳಕೆಗಾಗಿ ಕೈಗೊಂಡ ಕ್ರಮಗಳನ್ನು ಹೇಳಬೇಕು ಎನ್ನುವ ಕಾನೂನು ರೂಪಿಸಲು ಸರ್ಕಾರಕ್ಕೂ ಸಾಧ್ಯವಾಗಿಲ್ಲ. ನೀರಿನ ಮಿತಬಳಕೆ ಬರೀ ಘೋಷಣೆಯಾಗದೆ, ತಳಮಟ್ಟದಲ್ಲಿ ಅನುಷ್ಠಾನವಾಗುವ ಕಾರ್ಯಶೈಲಿ ಆಗಬೇಕಲ್ಲವೇ?

ಅಂತಿಮವಾಗಿ, ಬಳಸಿದ ನೀರಿನ ಸಂಸ್ಕರಣೆ ಹಾಗೂ ಮರುಬಳಕೆ ಕುರಿತು. ಆಧುನಿಕ ಜೀವನಶೈಲಿಯಿಂದಾಗಿ ಮನೆಬಳಕೆ ನೀರಿನ ತ್ಯಾಜ್ಯವೂ ಸಂಕೀರ್ಣ ಸ್ವರೂಪದ್ದಾಗುತ್ತಿದೆ. ಸಾವಯವ ಪದಾರ್ಥಗಳು, ಸಾರಜನಕದ ಲವಣಗಳು, ಕರಗಿದ ಅನಿಲಗಳು ಎಲ್ಲವೂ ತ್ಯಾಜ್ಯನೀರಿನಲ್ಲಿ ಇರುವುದು ಸಹಜವೇ. ಆದರೆ, ಇಂದಿನ ಗ್ರಾಮೀಣ ತ್ಯಾಜ್ಯನೀರಿನಲ್ಲೂ ಕೃತಕ ಕ್ರಿಮಿನಾಶಕಗಳು, ಸೀಸ, ಸತು, ಪಾದರಸದಂಥ ಭಾರ ಲೋಹಗಳು, ರಂಜಕ, ಪೊಟ್ಯಾಶ್, ಅಪಾಯಕಾರಿ ಸೂಕ್ಷ್ಮಾಣುಜೀವಿಗಳು– ಇವೆಲ್ಲ ಗಂಭೀರ ಪ್ರಮಾಣದಲ್ಲಿ ಕಾಣಸಿಗುತ್ತಿವೆ.

ಕೊಳಚೆಯೊಡನೆ ಮಣ್ಣು ಹಾಗೂ ಜಲಮೂಲ ಸೇರುವ ಇವೆಲ್ಲ, ನೀರು ಮತ್ತು ತರಕಾರಿಯೊಂದಿಗೆ ನಮ್ಮ ಹೊಟ್ಟೆಗೇ ವಾಪಸಾಗುತ್ತಿವೆ! ಜನಮಾನಸವು ಈ ಕುರಿತು ಎಚ್ಚರಗೊಳ್ಳಬೇಕಿದೆ.

ಹಳ್ಳಿಗಳು ಬರಿದಾಗಿ ನಗರಗಳು ಹಿಗ್ಗುತ್ತಿರುವ ಈ ಕಾಲಘಟ್ಟದಲ್ಲಿ, ನಗರ ಪ್ರದೇಶಗಳ ಕೊಳಚೆ ನೀರಿನ ನಿರ್ವಹಣೆಯಾದರೂ ಹೇಗಿದೆ? ಮಹಾನಗರಗಳನ್ನು ಬಿಟ್ಟು ನಾಡಿನ ಬಹುತೇಕ ನಗರ-ಪಟ್ಟಣಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಲ್ಲ. ಇದ್ದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನವಸತಿಯ ಹೊರವಲಯದ ಯಾವುದೋ ಕೆರೆ, ಹೊಳೆ ಅಥವಾ ಕಣಿವೆಗೆ ಅರೆಬರೆ ಸಂಸ್ಕರಿಸಿದ ನೀರನ್ನು ಹೊರಬಿಡುತ್ತಿರುವ ಘಟಕಗಳನ್ನು ರಾಜ್ಯದಾದ್ಯಂತ ನೋಡಬಹುದು. ಕೊಳಚೆ ನೀರು ಸಂಸ್ಕರಿಸಲು ಅತ್ಯುತ್ಕೃಷ್ಟ ತಂತ್ರಜ್ಞಾನಗಳು ಲಭ್ಯವಿದ್ದಾಗಲೂ, ಅವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಬೇಜವಾಬ್ದಾರಿಯುತ ಆಡಳಿತಯಂತ್ರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಈ ಬಗೆಯ ವಿದ್ಯಮಾನಗಳನ್ನು ಆಧುನಿಕ ಪರಿಸರಶಾಸ್ತ್ರವು ‘ಸರ್ಕಾರವೇ ವಿಷವುಣಿಸುವ ಪ್ರಕ್ರಿಯೆ’ ಎಂದು ಕರೆಯುತ್ತಿರುವುದು!

ನೀರಿನ ನಿರ್ವಹಣೆಯ ಈ ಮೂರೂ ಆಯಾಮಗಳನ್ನು ಸರಿದಾರಿಗೆ ತರಬೇಕಿದೆ ಈಗ. ಈ ದೃಷ್ಟಿಯಿಂದ, ರಾಜ್ಯ ಸರ್ಕಾರವು ಅಂಗೀಕರಿಸಿರುವ ‘ರಾಜ್ಯ ಜಲನೀತಿ- 2022’ ಅನ್ನು, ಮೊದಲ ಪ್ರಮುಖ ಹೆಜ್ಜೆಯೆಂದು ಸ್ವಾಗತಿಸೋಣ. ಆದರೆ, ಇದರಲ್ಲಿ ಎರಡು ಗಂಭೀರ ಮಿತಿಗಳಿವೆ. ಒಂದು, ಜಲಮೂಲಗಳ ಸಂರಕ್ಷಣೆ ಹಾಗೂ ನೀರಿನ ವಿತರಣೆ ಕಾರ್ಯದಲ್ಲಿ ಸ್ಥಳೀಯ ಜನ ಸಮುದಾಯಗಳು ಮತ್ತು ಸಂಘ-ಸಂಸ್ಥೆಗಳಿಗೆ ಸೂಕ್ತ ಆದ್ಯತೆ ನೀಡದಿರುವುದು. ಎರಡನೆಯದು, ಕಡಿಮೆ ವೆಚ್ಚ ಹಾಗೂ ಪರಿಸರಸ್ನೇಹಿಯಾದ ಹಲವಾರು ನೀರು ಶುದ್ಧೀಕರಣ ತಂತ್ರಜ್ಞಾನಗಳು ಲಭ್ಯವಿದ್ದಾಗಲೂ, ಹೆಚ್ಚು ಹಣ ಹೂಡಿಕೆಯ ಆಧುನಿಕ ತಂತ್ರ-ಯಂತ್ರಗಳತ್ತಲೇ ಮುಖ ಮಾಡಿರುವುದು. ಇವು ಗುತ್ತಿಗೆದಾರರು ಮತ್ತು ಸಿವಿಲ್ ಕಾಮಗಾರಿ ಕೇಂದ್ರಿತ ನೀರು ನಿರ್ವಹಣೆಗೆ ದಾರಿ ಮಾಡಿಕೊಡುವ ಅಪಾಯವಿದೆ. ‘ರಾಜ್ಯ ಜಲನೀತಿ’ಯ ಈ ನ್ಯೂನತೆಗಳನ್ನು ಸರಿಪಡಿಸಲು ಜನರು ಹಕ್ಕೊತ್ತಾಯ ಮಾಡಬೇಕಿದೆ.

ನದಿಯ ನೈಸರ್ಗಿಕ ಹರಿವನ್ನು ಸುಗಮಗೊಳಿಸುವ ಬದಲು, ದಡಕ್ಕೆ ಸಿಮೆಂಟ್ ಕಟ್ಟೆ ಕಟ್ಟಿ ಪ್ರವಾಸಿತಾಣ ನಿರ್ಮಿಸುವಂಥ ಥಳುಕಿನ ಯೋಜನೆಗಳೇ ಸರ್ಕಾರದ ಆದ್ಯತೆಯಾದರೆ, ಜಲಸುರಕ್ಷತೆ ಎಂಬುದು ನೀರ ಮೇಲಿನ ಗುಳ್ಳೆಯಾದೀತು. ಜನ-ಜಾನುವಾರುಗಳು ನೀರ ನೆರಳಿನ ಬೆನ್ನುಹತ್ತಿ ಓಡುತ್ತಲೇ ಇರಬೇಕಾದೀತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT