ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ವಿಶ್ಲೇಷಣೆ| ಚುನಾವಣೆಯ ಹೊಸ್ತಿಲಲ್ಲಿ ಶ್ರಮಿಕವರ್ಗ

Published 30 ಏಪ್ರಿಲ್ 2023, 22:01 IST
Last Updated 30 ಏಪ್ರಿಲ್ 2023, 22:01 IST
ಅಕ್ಷರ ಗಾತ್ರ

ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ಮತ್ತೊಂದು ಮೇ ದಿನ ಬಂದಿದೆ. ಮೇ ದಿನಾಚರಣೆಯು ಸಮಸ್ತ ಶ್ರಮಜೀವಿಗಳ ಸಂಕಲ್ಪದ ಸಂಕೇತ. 1886ರ ಮೇ ಒಂದರಂದು ಷಿಕಾಗೊವಿನಲ್ಲಿ ಎಂಟು ಗಂಟೆ ಅವಧಿಯ ಕೆಲಸದ ಮಿತಿಗಾಗಿ ಒತ್ತಾಯಿಸಿ ಬೃಹತ್ ಮುಷ್ಕರ ನಡೆಯಿತು. ಮೇ ಮೂರರಂದು ಗೋಲಿಬಾರ್ ನಡೆದು ಆರು ಜನ ಕಾರ್ಮಿಕರು ಹುತಾತ್ಮರಾದರು. 1889ರ ಅಂತರರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್, ಮೇ ಒಂದನ್ನು ಕಾರ್ಮಿಕ ದಿನವಾಗಿ ಆಚರಿಸಬೇಕೆಂದು ಕರೆಕೊಟ್ಟಿತು. 1890ರಿಂದ ಮೇ ದಿನದ ಆಚರಣೆ ಆರಂಭವಾಯಿತು.

1900ರಲ್ಲಿಯೇ ಲೆನಿನ್ ಅವರು ಕಾರ್ಮಿಕ ಚಳವಳಿಯ ಮಿತಿಗಳ ಬಗ್ಗೆ ವಿಮರ್ಶಾತ್ಮಕ ಮುನ್ನೋಟವನ್ನು ಮಂಡಿಸಿದ್ದರು: ‘ಎಂಟು ಗಂಟೆ ದುಡಿಮೆಯ ಬೇಡಿಕೆಯು ಕೆಲವು ಮಾಲೀಕರ ಎದುರು ಇಟ್ಟ ಬೇಡಿಕೆ ಮಾತ್ರವಲ್ಲ. ಕಾರ್ಮಿಕರು ಈ ಬೇಡಿಕೆಯ ಸ್ವರೂಪವನ್ನು ಪುಕ್ಕಟೆ ರೈಲು ಟಿಕೆಟ್‌, ಕಾವಲುಗಾರನ ವಜಾ ಮನ್ನಾ ಮುಂತಾದ ಒತ್ತಾಯಗಳ ಮಟ್ಟಕ್ಕೆ ಇಳಿಸಬಾರದು. ಅಂತರರಾಷ್ಟ್ರೀಯ ಸಮಾಜವಾದಿ ಆಂದೋಲನಗಳೊಂದಿಗೆ ಕಾರ್ಮಿಕರು ಒಂದಾಗಬೇಕು. ಎಲ್ಲ ದೇಶಗಳ ಕಾರ್ಮಿಕ ವರ್ಗದ ವಿಮೋಚನಾ ಹೋರಾಟಗಳೊಂದಿಗೆ ಸಂಬಂಧ ಸ್ಥಾಪಿಸಬೇಕು’. ಲೆನಿನ್ ಅವರ ಈ ನುಡಿಗಳು ಶ್ರಮಜೀವಿ ಚಳವಳಿಯ ಸೈದ್ಧಾಂತಿಕ ವಿಸ್ತಾರವನ್ನು ಸ್ಪಷ್ಟಪಡಿಸುತ್ತವೆ. ಆದರೆ ಇದು ಸಾಧ್ಯವಾಯಿತೆ?

ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

ಉತ್ತರಕ್ಕೆ 1986ರ ಮೇ ದಿನದಂದು ಕೊಟ್ಟ ಸಿಐಟಿಯು ಕಾರ್ಮಿಕ ಸಂಘಟನೆಯ ಕರೆಯನ್ನು ಗಮನಿಸಬಹುದು: ‘ಕಾರ್ಮಿಕ ವರ್ಗದ ಆಂದೋಲನವು ತಕ್ಷಣದ ಪ್ರಶ್ನೆಗಳಿಗೆ ತನ್ನ ಗಮನವನ್ನು ಕೇಂದ್ರೀಕರಿಸಿ ರೈತರು ಮತ್ತು ಕೃಷಿ ಕಾರ್ಮಿಕರಾದಿಯಾಗಿ ಅಸಂಖ್ಯಾತ ಜನಸಮೂಹದಿಂದ ತನ್ನನ್ನು ದೂರವಾಗಿಸಿಕೊಂಡು ಒಂದು ಸಂಕುಚಿತ ಶಕ್ತಿಯಾಗಿಬಿಟ್ಟಿದೆ. ರೈತವರ್ಗವನ್ನು ನಿರ್ಲಕ್ಷಿಸುವ ಸಾಂಪ್ರದಾಯಿಕ ದೃಷ್ಟಿಕೋನವನ್ನು ಬಿಟ್ಟು ಗ್ರಾಮಾಂತರ ಜನಸಮೂಹದ ರಕ್ಷಣೆಗೆ ಈ ಆಂದೋಲನವು ಮುಂದಾಗಬೇಕು’.

ಈ ಮಧ್ಯೆ ಎಲ್ಲ ಎಡಪಕ್ಷಗಳೂ ಎಡಪಂಥೀಯ ಚಳವಳಿಗಳೂ ಬಹಳಷ್ಟು ಕ್ರಿಯಾಶೀಲವಾದದ್ದು ನಿಜ. ಇದರ ಫಲವಾಗಿ ಕೆಲವು ರಾಜ್ಯಗಳಲ್ಲಿ ವಿವಿಧ ಪ್ರಮಾಣದಲ್ಲಿ ಶಾಸಕರು ಆಯ್ಕೆಯಾದರು. ಪಶ್ಚಿಮ ಬಂಗಾಳ, ತ್ರಿಪುರ, ಕೇರಳವು ಎಡಪಕ್ಷಗಳ ಸರ್ಕಾರಗಳಿಗೆ ಸಾಕ್ಷಿಯಾದವು. 2004ರಲ್ಲಿ ಲೋಕಸಭೆಗೆ ಅರವತ್ತು ಸಂಸದರು ಆಯ್ಕೆಯಾದರು. ಆದರೆ ಆನಂತರ ಏನಾಯಿತು? ಸಂಸದರ ಸಂಖ್ಯೆ ಬೆರಳೆಣಿಕೆಯಷ್ಟಾಯಿತು. ಕೇರಳ ಬಿಟ್ಟರೆ ಬೇರೆಲ್ಲೂ ಸರ್ಕಾರಗಳಿಲ್ಲ. ಇಂಥ ಪರಿಸ್ಥಿತಿಗೆ ಬಾಹ್ಯ ಕಾರಣಗಳಿರುವಂತೆ ಆಂತರಿಕ ಕಾರಣಗಳೂ ಇವೆ. ಜನರ ಮನಸ್ಸನ್ನು ಮೋಸಗೊಳಿಸುವ ಕೋಮುವಾದೀಕರಣ ಮತ್ತು ಆರ್ಥಿಕ ಸಾರ್ವಭೌಮತೆಯತ್ತ ಸಾಗಿದ ಬಂಡವಾಳಶಾಹೀಕರಣಗಳು ಬಾಹ್ಯ ಕಾರಣಗಳಾದರೆ, ಸೂಕ್ತ ಸಂಸದೀಯ ಸಂಬಂಧಗಳನ್ನು ವಿಸ್ತರಿಸಿಕೊಳ್ಳದ ಎಡ ಪಕ್ಷಗಳ ಜಡ ಕಾರ್ಯತಂತ್ರವು ಆಂತರಿಕ ಕಾರಣವಾಗಿದೆ.

ಇಲ್ಲಿಯೇ ಡಾ. ಅಂಬೇಡ್ಕರ್ ಅವರು ಒಮ್ಮೆ ಹೇಳಿದ ‘ಮಾರ್ಕ್ಸ್‌ವಾದವು ಉಲ್ಲಂಘಿಸಲಾಗದ ವೇದವಾಗಬಾರದು’ ಎಂಬ ಮಾತನ್ನು ನೆನೆಯಬಹುದು. ಮನನೀಯವಾಗಿದೆ. ಈ ಮಾತಿಗೆ ನನ್ನದೊಂದು ಮಾತು ಸೇರಿಸಬಯಸುತ್ತೇನೆ: ‘ಎಡಪಂಥೀಯತೆಯು ಜಡಪಂಥೀಯತೆಯಾಗಬಾರದು’. ಆದರೂ ಎಡಪಕ್ಷಗಳ ಪ್ರಾಮಾಣಿಕತೆಯನ್ನು ಶಂಕಿಸಲಾಗದು. ಜ್ಯೋತಿ ಬಸು ಅವರು ಪ್ರಧಾನಿಯಾಗುವುದಕ್ಕೆ ಒಪ್ಪದಿರುವ ನಿರ್ಣಯ ಮಾಡಿದ ಮಾರ್ಕ್ಸ್‌ವಾದಿ ಪಕ್ಷದ ನಡೆಯನ್ನು ಕುರಿತು ಕೆಲಕಾಲಾನಂತರ ಜ್ಯೋತಿ ಬಸು ಅವರೇ ‘ಚಾರಿತ್ರಿಕ ಪ್ರಮಾದ’ ಎಂದರು. ಆದರೆ ಪಕ್ಷದ ನಿರ್ಣಯದಿಂದ ಬೇಸರಗೊಂಡು ಪಕ್ಷವನ್ನು ಬಿಡಲಿಲ್ಲ. ಪಕ್ಷಾಂತರ ಮಾಡಲಿಲ್ಲ. ಇದು ಎಡಪಕ್ಷಗಳ ನೇತಾರರ ಪ್ರಾಮಾಣಿಕ ಬದ್ಧತೆಗೆ ಒಂದು ಉದಾಹರಣೆ.

ಈಗ ಕರ್ನಾಟಕದ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಾಂತರಗಳಿಗೆ ಬರವಿಲ್ಲ; ಸೈದ್ಧಾಂತಿಕ ಬದ್ಧತೆಗೆ ಬೆಲೆಯಿಲ್ಲ. ಇದು ಶಕ್ತಿ ರಾಜಕಾರಣದ ಮಾಮೂಲು ಎಂಬಂತಾಗಿದೆ. ವ್ಯಕ್ತಿನಿಂದೆಯ ವಿಕಾರವಂತೂ ವಾಕರಿಕೆ ಬರುವಷ್ಟು ವಿಜೃಂಭಿಸುತ್ತಿದೆ. ಇಂಥ ವಿಪರ್ಯಾಸಗಳ ನಡುವೆಯೂ ನಮ್ಮ ಶ್ರಮಿಕ ಶಕ್ತಿಯ ಹಕ್ಕೊತ್ತಾಯಗಳು ಮುನ್ನೆಲೆಗೆ ಬರಬೇಕು. ಈಗ ಶ್ರಮಜೀವಿಗಳೆಂದರೆ ಬರೀ ಕಾರ್ಖಾನೆಯ ಕಾರ್ಮಿಕರಲ್ಲ. ರೈತರು, ಕೃಷಿ ಕೆಲಸಗಾರರು, ಮಹಿಳೆಯರು, ದಲಿತರು, ಅಸಂಘಟಿತ ವಲಯದ ಶ್ರಮಿಕರು, ಎಲ್ಲಾ ಬಗೆಯ ದುಡಿಮೆಗಾರರು ಸೇರುತ್ತಾರೆ. ಬಹುಪಾಲು ದುಡಿಮೆಗಾರರಿಗೆ ಬದುಕಿನ ಭದ್ರತೆಯಿಲ್ಲ. ಶ್ರಮ ಮೂಲ ಕೆಲಸಗಳನ್ನೂ ಒಳಗೊಂಡಂತೆ ಬಹುಪಾಲು ಕೆಲಸಗಳಿಗೆ ಹೊರಗುತ್ತಿಗೆಯ ನೌಕರರನ್ನು ಪಡೆಯಲಾಗಿದೆ. ಈ ಮೂಲಕ ಸರ್ಕಾರವು ತನ್ನ ಜವಾಬ್ದಾರಿ ಮತ್ತು ಅಧಿಕಾರವನ್ನು ಖಾಸಗಿ ಕಂಪನಿಗಳಿಗೆ ಕೊಡುತ್ತಿದೆ.

ಕೇಂದ್ರ ಸರ್ಕಾರವಂತೂ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ‘ದಾನ’ ಮಾಡುತ್ತಿದೆ. ನೆಹರೂ ಅವರ ಕಾಂಗ್ರೆಸ್ ಕಾಲದಲ್ಲಿ 23 ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಗೊಂಡವು. ಇಂದಿರಾ ಗಾಂಧಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ 66 ಸಾರ್ವಜನಿಕ ಉದ್ದಿಮೆಗಳು ಸ್ಥಾಪಿತವಾದವು. ಯಾವೊಂದು ಸರ್ಕಾರಿ ಉದ್ದಿಮೆಯೂ ಖಾಸಗಿಯವರಿಗೆ ಮಾರಾಟವಾಗಲಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಯಾಗದಿದ್ದರೂ 23 ಸರ್ಕಾರಿ ಉದ್ದಿಮೆಗಳು ಖಾಸಗಿಯವರ ಪಾಲಾದ ಮಾಹಿತಿಯಿದೆ. 1992ರಲ್ಲಿ ಖಾಸಗೀಕರಣಕ್ಕೆ ಕಾರಣವಾದ ಆರ್ಥಿಕ ನೀತಿಗೆ ನಾಂದಿ ಹಾಡಿದ ಕಾಂಗ್ರೆಸ್ ಪಕ್ಷವೇ ಎದೆಬಡಿದುಕೊಳ್ಳುವಂತೆ ಇಂದು ಖಾಸಗಿ ಆರ್ಥಿಕ ಆಧಿಪತ್ಯ ವಿಜೃಂಭಿಸುತ್ತಿದೆ.

ಇದಿಷ್ಟೇ ಅಲ್ಲ, ಹಿಂದಿನ ವರ್ಷದ ಕೇಂದ್ರ ಬಜೆಟ್‍ನಲ್ಲಿ ಶ್ರಮಜೀವಿ ವಲಯದ ಅನುದಾನಕ್ಕೆ ಬಹಳಷ್ಟು ಕತ್ತರಿ ಹಾಕಲಾಗಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಶೇ 25.5, ಗ್ರಾಮೀಣ ಅಭಿವೃದ್ಧಿಗೆ ಶೇ 10.9, ಆಹಾರ ಸಬ್ಸಿಡಿಯಲ್ಲಿ ಶೇ 28.5ರಷ್ಟು ಅನುದಾನವನ್ನು ಕಡಿತ ಮಾಡಿದ್ದು, ಈ ವರ್ಷವೂ ಕೃಷಿ ವಲಯಕ್ಕೆ ₹ 84 ಸಾವಿರ ಕೋಟಿ ಮತ್ತು ಸಮಾಜ ಕಲ್ಯಾಣಕ್ಕೆ ₹ 55 ಸಾವಿರ ಕೋಟಿ ಮಾತ್ರ ಕೊಡಲಾಗಿದೆ. ಒಟ್ಟು ₹ 45 ಲಕ್ಷ ಕೋಟಿ ಮೊತ್ತದ ಬಜೆಟ್‍ನಲ್ಲಿ ಈ ಅನುದಾನ ಕಡಿಮೆಯೆಂದು ಹೇಳಬಹುದು. ಜೊತೆಗೆ ಕಾರ್ಮಿಕರಿಗೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ಒಂದು ಸಂಹಿತೆಯನ್ನು ರೂಪಿಸಲಾಗುತ್ತಿದೆ. 23 ಕೋಟಿ ಕಾರ್ಮಿಕರ ಆದಾಯವನ್ನು ಶಾಸನಬದ್ಧ ಕನಿಷ್ಠ ವೇತನ ಮಟ್ಟಕ್ಕಿಂತ ಕೆಳಗೆ ಇಳಿಸಲಾಗಿದೆ. ಈ ವಿಷಯಗಳು ಕೇಂದ್ರ ಸರ್ಕಾರದ ನೀತಿಗೆ ಸಂಬಂಧಿಸಿದ್ದರೂ ರಾಜ್ಯಗಳಿಗೂ ಅನ್ವಯಿಸುತ್ತವೆ. ಆದ್ದರಿಂದ ರಾಜ್ಯದ ಚುನಾವಣೆಗೆ ಹೊರಟಿರುವ ಪಕ್ಷಗಳ ಸಾಮಾಜಿಕ ಮತ್ತು ಆರ್ಥಿಕ ನೀತಿ ಏನು ಎಂಬ ಪ್ರಶ್ನೆ ಮುಖ್ಯವಾಗುತ್ತದೆ.

ರಾಜ್ಯ ಚುನಾವಣೆಯಲ್ಲಿ ತಾತ್ವಿಕ ಪ್ರಶ್ನೆ ಮತ್ತು ಉತ್ತರಗಳು ಮುನ್ನೆಲೆಗೆ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ಮೂಲಕ ರಾಜ್ಯಗಳ ಆರ್ಥಿಕ ಹಕ್ಕನ್ನು ಕಸಿದು ಕೇಂದ್ರೀಕರಿಸಿಕೊಂಡು ರಾಜ್ಯಗಳು ಕೈ ಒಡ್ಡಿ ಬೇಡುವಂತೆ ಮಾಡಿರುವುದನ್ನು ಯಾವ ಪಕ್ಷಗಳು ವಿರೋಧಿಸುತ್ತವೆ ಎಂಬುದು ಮುಖ್ಯ.

ಅಂತೆಯೇ ‘ನೀಟ್’ ಮತ್ತು ಹೊಸ ಶಿಕ್ಷಣ ನೀತಿ ಕೂಡ ರಾಜ್ಯಗಳ ಹಕ್ಕನ್ನು ಕಸಿಯುತ್ತಿದ್ದು ಅವುಗಳನ್ನು ಪ್ರತಿರೋಧಿಸಬೇಕು. ಎಲ್ಲರ ‘ಜಾತಿವಾದ’ ಮತ್ತು ‘ಧರ್ಮ ದ್ವೇಷವಾದ’ವನ್ನು ಧಿಕ್ಕರಿಸಬೇಕು.

ರಾಜ್ಯದ ಸ್ವಾಯತ್ತತೆಯನ್ನು ದೃಢವಾಗಿ ಸ್ಥಾಪಿಸುವ, ಎಲ್ಲ ಧರ್ಮಗಳ ಮೂಲಭೂತವಾದವನ್ನು ವಿರೋಧಿಸುವ, ಸಮಾನತೆ ಮತ್ತು ಸೌಹಾರ್ದವನ್ನು ಬೆಸೆದು ಆಡಳಿತ ನಡೆಸುವ, ಎಲ್ಲಾ ಜಾತಿ, ಧರ್ಮಗಳ ದುಡಿಮೆಗಾರರಿಗೆ, ಬಡವರಿಗೆ, ಭದ್ರತೆಯ ಬದುಕು ನೀಡುವ ಸರ್ಕಾರ ನಮಗೆ ಬೇಕು. ಇಂಥ ಸರ್ಕಾರ ಬಂದರೂ ನಮ್ಮ ವಿಮರ್ಶಾ ಪ್ರಜ್ಞೆ ಜಾಗೃತವಾಗಿರಬೇಕು. ಈಗಲಾದರೂ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಬೇಕು. ಒಂದು ಒಕ್ಕೂಟವಾಗಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ಉಳಿಸಬೇಕು. ಈ ಎಲ್ಲ ‘ಬೇಕುಗಳು’ ಶ್ರಮ ಸಂಸ್ಕೃತಿಯ ಸಂಕಲ್ಪವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT