ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯರನ್ನು ದ್ವೇಷಿಸಲು ಎಲ್ಲರಿಗೂ ಇಷ್ಟ

ಸಾಲ ಮರುಪಾವತಿಯ ಸಮಸ್ಯೆಗಿಂತ ಆಡಂಬರದ ಐಷಾರಾಮಿ ಜೀವನವೇ ಮುಳುವಾಯಿತೇ?
Last Updated 21 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜಯ ಮಲ್ಯ ಅವರನ್ನು ಎಲ್ಲರೂ ಪ್ರೀತಿಸುತ್ತಾರೆ. ನಿತ್ಯ ಜೀವನದ ಜಂಜಾಟಗಳಿಂದ ತಮಗೆ ತಪ್ಪಿಸಿಕೊಳ್ಳಲು ಆಗದೇ ಇದ್ದಾಗಲೂ ಮಲ್ಯ ಅವರು ಅಷ್ಟೊಂದು ಆನಂದದಿಂದ ಬದುಕಿದ್ದನ್ನು ದ್ವೇಷಿಸುವುದನ್ನು ಜನರು ಪ್ರೀತಿಸುತ್ತಾರೆ. ಅಭಿಮಾನಿಗಳು ಅವರಿಗೆ ಮುಗಿಬೀಳುತ್ತಾರೆ. ಅವರ ಟ್ವಿಟರ್ ಖಾತೆ ನೋಡಿ, ಅವರಿಗೆ ಈಗಲೂ 60 ಲಕ್ಷ ಫಾಲೋವರ್‌ಗಳಿದ್ದಾರೆ. ಸುಂದರ ಮಹಿಳೆಯರು ಈಗಲೂ ಅವರನ್ನು ಇಷ್ಟಪಡುತ್ತಾರೆ.

ಅವರಿಗೆ ನಿಷ್ಠರಾಗಿರುವ, ಅವರನ್ನು ನಂಬುವ ಗೆಳೆಯರು ಭಾರತದಾದ್ಯಂತ ಈಗಲೂ ಇದ್ದಾರೆ. ಮದ್ಯವನ್ನು ಇಷ್ಟಪಡುವ, ಕೆಲಸವನ್ನು ಗೀಳಾಗಿ ಹಚ್ಚಿಕೊಂಡಿರುವ ಅವರು ಆಕರ್ಷಕ ಮತ್ತು ಉದಾರಿ ಆತಿಥೇಯನಾಗಿ ಪ್ರಸಿದ್ಧ; ರಸಿಕನಾದ ಅವರು ಒಳ್ಳೆಯ ಆಹಾರ, ವೈನ್‌, ಸಿಗಾರ್ ಮತ್ತು ಖಂಡಿತವಾಗಿಯೂ ಸ್ಕಾಚ್‍ನ ಉತ್ಕಟ ಪ್ರೇಮಿ. ಹಳೆಯ ಕಾರು, ವಾಚು, ಮದ್ಯ ಮತ್ತು ಕಲಾಕೃತಿಗಳ ಸಂಗ್ರಹಕಾರ. ಕುದುರೆಗಳನ್ನು ಸಾಕುವ ಅವರು, ಫಾರ್ಮುಲಾ 1 ರೇಸ್‍ ಕಾರುಗಳ ಒಡೆಯ. ವಿಚಾರಣಾ ಸಂಸ್ಥೆಗಳು ಮತ್ತು ಮಾಧ್ಯಮಗಳು ಅವರನ್ನು ಬೇಟೆಯಾಡುತ್ತಿರುವಾಗಲೂ ಎಲ್ಲರೂ ಅಸೂಯೆಯಿಂದ ಮಾತ್ರ ನೋಡಬಹುದಾದ ರಾಜಸದೃಶ ಜೀವನವನ್ನೇ ಅವರು ನಡೆಸುತ್ತಿದ್ದಾರೆ.

ಯಾರೂ ಎದುರಿಸಲಾಗದ, ಯಾರಿಗೂ ಬಗ್ಗದ, ಜಂಬದ, ಆಡಂಬರದ ದೊರೆಯಂತೆತಮ್ಮ ಗಡಿಪಾರು ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಬಂದಾಗ ಅವರು ಕಂಡರು. ಬ್ರಿಟಿಷ್‍ ಅಂಗರಕ್ಷಕರ ನಡುವೆ, ತಮ್ಮ ಬೆಂಟ್ಲಿ ಕಾರಿನಿಂದ ಇಳಿದ ಅವರು ತಿಳಿ ಬೂದು ಬಣ್ಣದ ದಿರಿಸಿನಲ್ಲಿ, ಮೊಹಾಕ್‍ ಕೇಶಶೈಲಿಯಲ್ಲಿ, ಕೈಯಲ್ಲಿ ತಮ್ಮ ನೆಚ್ಚಿನ ಸಿಗಾರ್ ಹಿಡಿದು ಮಿಂಚುತ್ತಿದ್ದರು. ಪ್ರಚೋದಿಸಲು ಮಾಧ್ಯಮ ಪ್ರತಿನಿಧಿಗಳು ಎಷ್ಟೇ ಯತ್ನಿಸಿದರೂ ಅವರು ತಣ್ಣಗೆಯೇ ಇದ್ದರು.

ಈ ಎಲ್ಲ ಅಬ್ಬರ ಮತ್ತು ಬಾಣಬಿರುಸಿನ ಪ್ರದರ್ಶನದ ಹೊಗೆಯು ನಿಜವಾದ ವಿಚಾರವನ್ನು ಆವರಿಸಿಬಿಟ್ಟಿದೆ. ಈ ಚೆಲುವ ಉದ್ಯಮಿ ಈಗ ದೇಶಭ್ರಷ್ಟನಾಗಿದ್ದಾರೆ; ಅವರ ವಿಮಾನಯಾನ ಉದ್ಯಮ ದಿವಾಳಿಯಾಗಿದೆ; ವಿಚಾರಣಾ ಸಂಸ್ಥೆಗಳು ಮತ್ತು ಅವರು ಹಣ ಕೊಡಬೇಕಿರುವ ಬ್ಯಾಂಕುಗಳು ಹಿಂದೆ ಬಿದ್ದಿವೆ. ಅದು ಅವರ ಸಂಪೂರ್ಣ ಮಾಲೀಕತ್ವದ ಕಂಪನಿ ಆಗಿರಲಿಲ್ಲ. ಅದು ಪಬ್ಲಿಕ್‍ ಲಿಮಿಟೆಡ್‍ ಕಂಪನಿ ಆಗಿತ್ತು. ಆದರೆ ಅದರ ಸಂಪೂರ್ಣ ನಿಯಂತ್ರಣ ಅವರಲ್ಲಿಯೇ ಇತ್ತು. ಭಾರತದ ಇಂತಹ ಹಲವು ಕಂಪನಿಗಳು ಕುಟುಂಬದ ನಿಯಂತ್ರಣದಲ್ಲಿಯೇ ಇವೆ. ಮಲ್ಯ ಅವರೂ ತಮ್ಮ ಕಂಪನಿಯನ್ನು ಸ್ವಂತ ಕಂಪನಿಯ ತರಹವೇ ನಡೆಸಿದ್ದರು. ಸ್ವತಂತ್ರ ನಿರ್ದೇಶಕ ಮಂಡಳಿ ಹೆಸರಿಗಷ್ಟೇ ಇತ್ತು.

ಅದೊಂದು ಶಾಸನಬದ್ಧ ಅಗತ್ಯ ಎಂಬ ಕಾರಣಕ್ಕಾಗಿ ಅಥವಾ ತಾವು ಇರುವುದು ಪ್ರವರ್ತಕರ ಪ್ರತಿಷ್ಠೆ ಇನ್ನಷ್ಟು ಹೆಚ್ಚಿಸುತ್ತದೆ ಎಂಬ ಕಾರಣಕ್ಕೋ ಅವರು ಇದ್ದರು ಅಷ್ಟೆ. ಪ್ರಾಮಾಣಿಕತೆಯನ್ನು ಎತ್ತಿಹಿಡಿಯಲು ಅಥವಾ ಕಿರು ಪ್ರಮಾಣದ ಷೇರುದಾರರ ಹಿತಾಸಕ್ತಿಯನ್ನು ಕಾಪಾಡಲು ಇವರು ಧ್ವನಿ ಎತ್ತುವುದು ವಿರಳ. ಪ್ರವರ್ತಕರು ಅಥವಾ ಕಂಪನಿ ಮೇಲೆ ನಿಯಂತ್ರಣ ದೊರೆಯುವಷ್ಟು ಪ್ರಮಾಣದ ಪಾಲು ಹೊಂದಿದ್ದವರು ಅದನ್ನು ಬಯಸುವುದೂ ಇಲ್ಲ. ಲೋಪ ಇರುವುದು ಅಲ್ಲಿಯೇ. ಸ್ವತಂತ್ರ ನಿರ್ದೇಶಕರನ್ನು ಕಿರು ಷೇರುದಾರರು ನೇಮಿಸಬೇಕೇ ಹೊರತು ಪ್ರವರ್ತಕರು ಅಲ್ಲ. ನಿವೃತ್ತ ಅಧಿಕಾರಿಗಳಿಗೆ ಕೊಡುಗೆ ರೂಪದಲ್ಲಿ ನೀಡಲಾಗುವ ಸ್ಥಾನ ಇದು. ಅವರೂ ಅದನ್ನು ಸಮಯ ಕಳೆಯುವ ಹವ್ಯಾಸವಾಗಿ ಮಾತ್ರ ನೋಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸ್ವತಂತ್ರವಾಗಿ ಅವರು ವರ್ತಿಸಬಹುದು ಎಂಬ ಸಣ್ಣ ಸುಳಿವು ಸಿಕ್ಕರೂ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.

ಭಾರತದಲ್ಲಿನ ಕುಟುಂಬ ನಿಯಂತ್ರಣದ ಕಂಪನಿಗಳಲ್ಲಿ ಔಚಿತ್ಯ, ಹಿತಾಸಕ್ತಿ ಸಂಘರ್ಷ ಮತ್ತು ಕಿರು ಷೇರುದಾರರಿಗೆ ಗೌರವದಂತಹ ವಿಚಾರಗಳಿಗೆ ಕಿಂಚಿತ್ತು ಗೌರವವೂ ಇಲ್ಲ. ಮಲ್ಯ ಅವರೂ ಅದಕ್ಕೆ ಅಪವಾದ ಆಗಿರಲಿಲ್ಲ.

ಕಿಂಗ್‍ಫಿಷರ್ ಏರ್‌ಲೈನ್ಸ್‌ನ ಆಡಳಿತ ಮಂಡಳಿಯಲ್ಲಿಯೂ ನಿವೃತ್ತ ಹಣಕಾಸು ಕಾರ್ಯದರ್ಶಿ, ಸೆಬಿಯ ಮಾಜಿ ಅಧ್ಯಕ್ಷರಂತಹ ಮಹತ್ವದ ವ್ಯಕ್ತಿಗಳಿದ್ದರು. ಮಲ್ಯ ಅವರ ಕಂಪನಿಗಳ ಮೇಲೆ ಈಗ ಆರೋಪ ಹೊರಿಸಿರುವಂತೆ ಕಂಪನಿಗಳ ನಡುವೆ ಹಣಕಾಸು ವರ್ಗಾವಣೆ ವಿರಳವೇನೂ ಅಲ್ಲ. ಕುಟುಂಬ ನಿಯಂತ್ರಣದ ಒಂದು ಕಂಪನಿ ನಷ್ಟಕ್ಕೆ ಒಳಗಾದಾಗ ಮತ್ತೊಂದರಿಂದ ಹಣ ವರ್ಗಾಯಿಸುವುದು ನಡೆಯುತ್ತದೆ. ತಮಗೆ ಆಕರ್ಷಕ ಪ್ರತಿಫಲ ದೊರೆಯುವಲ್ಲಿವರೆಗೆ ಗಣನೀಯ ಪಾಲು ಹೊಂದಿರುವ ಕಿರು ಷೇರುದಾರರು ಮತ್ತು ಷೇರು ಹೊಂದಿರುವ ಸಾರ್ವಜನಿಕರು ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಇದೊಂದು ಮೌನ ಸಮ್ಮತಿಯ ಒಡಂಬಡಿಕೆ. ಪಶ್ಚಿಮದ ದೇಶಗಳಲ್ಲಾದರೆ ಇಂತಹ ಕರ್ತವ್ಯಲೋಪ ಶಿಕ್ಷಾರ್ಹ. ಆದರೆ, ಭಾರತದಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳು ಅಥವಾ ಇತರ ಶಾಸನಬದ್ಧ ಸಂಸ್ಥೆಗಳು ಇಂತಹ ಕ್ರಮ ಕೈಗೊಂಡ ನಿದರ್ಶನ ಇಲ್ಲ. ಇಂತಹ ದುಸ್ಸಾಹಸಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ ಸುಧಾರಣೆ ಪ್ರಕ್ರಿಯೆ ರೂಪುಗೊಳ್ಳುತ್ತಿದೆ ಮತ್ತು ಇನ್ನಷ್ಟು ಕೆಲಸಗಳು ಆಗಬೇಕಿವೆ.

ಜಡ್ಡುಗಟ್ಟಿದ ವ್ಯವಸ್ಥೆಯ ತೊಡಕುಗಳನ್ನು ತೆಗೆದು ಹಾಕಿ ತಮ್ಮ ಕೆಲಸವನ್ನು ತ್ವರಿತವಾಗಿ ಮಾಡಿಸಿಕೊಳ್ಳಲು ಮತ್ತು ತಮ್ಮ ಕಂಪನಿಗೆ ಅನುಕೂಲವಾಗುವ ರೀತಿಯ ಕಾನೂನುಗಳನ್ನು ಸರ್ಕಾರ ಅಂಗೀಕರಿಸುವಂತೆ ಮಾಡಲು ಅಧಿಕಾರದಲ್ಲಿರುವವರಿಗೆ ನೀಡುವುದಕ್ಕಾಗಿ ಹಣ ವರ್ಗಾಯಿಸುವ ಚಾಣಾಕ್ಷ ಪ್ರವರ್ತಕರು ನಡೆಸುವ ಉಲ್ಲಂಘನೆಗಳನ್ನು ಸಾಮಾನ್ಯ ಷೇರುದಾರರು ಅನುಮೋದಿಸುತ್ತಾರೆ. ಯಾವ ಪ್ರವರ್ತಕರಲ್ಲಿ ಇಂತಹ ಗುಣಗಳಿವೆ ಮತ್ತು ಈ ರೀತಿಯ ಅನುಕೂಲಗಳಿಗಾಗಿ ಯಾವ ಹಿಂಜರಿಕೆಯೂ ಇಲ್ಲದೆ ಕಂಪನಿಯ ಹಣವನ್ನು ಯಾರು ಬಳಸಿಕೊಳ್ಳಬಲ್ಲರು ಎಂಬುದು ಷೇರಿನಲ್ಲಿ ಹೂಡಿಕೆ ಮಾಡುವ ಸಾರ್ವಜನಿಕರಿಗೆ ಸಹಜವಾಗಿಯೇ ಗೊತ್ತಾಗಿ ಬಿಡುತ್ತದೆ. ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳ ಸಾಲಗಳು ಮರುಪಾವತಿ ಆಗುತ್ತಿದ್ದರೆ, ಶಾಸನಾತ್ಮಕ ಶುಲ್ಕಗಳು ಪಾವತಿಯಾಗುತ್ತಿದ್ದರೆ, ಕಂಪನಿಯು ಸಮೃದ್ಧಿಯತ್ತ ಸಾಗುತ್ತಿದ್ದರೆ ಮತ್ತು ಷೇರು ಬೆಲೆ ಏರುತ್ತಲೇ ಇದ್ದರೆ ಪ್ರವರ್ತಕರ ಉಲ್ಲಂಘನೆಗಳನ್ನು ಜನರು ಕ್ಷಮಿಸಿಬಿಡುತ್ತಾರೆ (ಅಷ್ಟೇ ಅಲ್ಲ, ಅವರ ಬಗ್ಗೆ ಅಭಿಮಾನ ಇರುತ್ತದೆ ಮತ್ತು ಸಾಧನೆಗಾಗಿ ಅವರಿಗೆ ಆಗಾಗ ಪ್ರಶಸ್ತಿಗಳೂ ದೊರೆಯುತ್ತವೆ). ಇವೆಲ್ಲವೂ ಬಹಿರಂಗ ರಹಸ್ಯ.

ಭಾರತದ ಕುಟುಂಬ ಮಾಲೀಕತ್ವದ ಕಂಪನಿಗಳಲ್ಲಿ ಇಂತಹ ಪ್ರವೃತ್ತಿ ವ್ಯಾಪಕವಾಗಿರುವಾಗ ಮಲ್ಯ ಅವರನ್ನು ಮಾತ್ರ ಯಾಕೆ ಗುರಿ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಏಳುತ್ತದೆ. ಅದರಲ್ಲೂ, ಕಿಂಗ್‍ಫಿಷರ್ ಏರ್‌ಲೈನ್ಸ್‌ನ ಮೂಲ ಸಾಲದ ಮೊತ್ತ ಆರು ಸಾವಿರ ಕೋಟಿ ರೂಪಾಯಿ ಮಾತ್ರ. ಆರ್‌ಬಿಐ ಇತ್ತೀಚೆಗೆ ಪ್ರಕಟಿಸಿದ ಸಾಲ ಮರುಪಾವತಿ ಮಾಡದವರ ಮತ್ತು ದಿವಾಳಿಗೆ ಅರ್ಜಿ ಸಲ್ಲಿಸಿದವರ ಪಟ್ಟಿಯ ಮುಂದೆ ಈ ಮೊತ್ತ ಏನೇನೂ ಅಲ್ಲ. ಇಂಥವರು ನಿಷ್ಪ್ರಯೋಜಕವಾಗುವುದನ್ನು ತಪ್ಪಿಸಲು ಅವರ ಸಾಲದ ಅವಧಿಯನ್ನು ವಿಸ್ತರಿಸಲು ಬ್ಯಾಂಕುಗಳು ಪ್ರಯತ್ನಿಸುತ್ತವೆ. ಮರುಪಾವತಿ ಆಗದ ಸಾಲ ಆಗಸಕ್ಕೇರಿದ್ದು ಈ ಮೊತ್ತ 30 ಸಾವಿರ ಕೋಟಿಯಿಂದ 40 ಸಾವಿರ ಕೋಟಿ ರೂಪಾಯಿಗಳಷ್ಟಿದೆ.

ಹಾಗಾದರೆ, ಮಲ್ಯ ಅವರು ಸಾಲ ಮರುಪಾವತಿ ಮಾಡದ್ದಕ್ಕಿಂತ ಆಡಂಬರ ಮತ್ತು ಅಹಂಕಾರದಿಂದ ಇದ್ದದ್ದರ ಬಲಿಪಶುವೇ? ಮಧ್ಯಮ ವರ್ಗದ ಜನರು ಜೀವನ ನಿರ್ವಹಣೆಗೇ ಒದ್ದಾಡುತ್ತಿರುವಾಗ ಮತ್ತು ಮನೆ ಸಾಲದ ಒಂದು ಕಂತು ಬಾಕಿಯಾದರೂ ಬ್ಯಾಂಕುಗಳು ಅವರ ಹಿಂದೆ ಬೀಳುವ ವ್ಯವಸ್ಥೆಯಲ್ಲಿ ಮಲ್ಯ ಅವರ ಸಂವೇದನಾಶೂನ್ಯ ನಡವಳಿಕೆಯೇ ಆಡಳಿತ ವ್ಯವಸ್ಥೆಗೆ ಮುಜುಗರ ಉಂಟುಮಾಡಿ ಅದರ ಪರಿಣಾಮವಾಗಿಯೇ ಅಧಿಕಾರಿಗಳು ಅವರ ಹಿಂದೆ ಬಿದ್ದರೇ? ಮಲ್ಯ ಅವರ ಧಾರಾಳಿ ಆತಿಥ್ಯವನ್ನು ಆನಂದಿಸಿದ್ದ ಮತ್ತು ಅವರ ಸ್ನೇಹಿತರೇ ಆಗಿದ್ದ ಹಲವು ಪ್ರಭಾವಿ ರಾಜಕಾರಣಿಗಳುಪಕ್ಷಾತೀತರಾಗಿ ಅವರನ್ನು ಕೈಬಿಟ್ಟರು. ಈ ಮಂದಿ ಮಲ್ಯ ಅವರ ಖಾಸಗಿ ವಿಮಾನದಲ್ಲಿ, ಹೆಲಿಕಾಪ್ಟರ್‌ನಲ್ಲಿ, ಐಷಾರಾಮಿ ವಿಹಾರ ನೌಕೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದವರು. ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಕೆಲ ದಿನಗಳ ಹಿಂದೆ ಮಲ್ಯ ಅವರೇ ಹೇಳಿದಂತೆ ರಾಜಕೀಯ ಲಾಭಕ್ಕಾಗಿ ಎರಡು ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಅವರು ಕಾಲ್ಚೆಂಡಾಗಿಬಿಟ್ಟರೇ?

ಸಂಕಷ್ಟಕ್ಕೆ ಸಿಲುಕಿದಾಗ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಎಂಬ ಕಂಪನಿಯನ್ನು ಎಲ್ಲರೂ ಮರೆತುಬಿಟ್ಟರು. ಅಲ್ಲಿ ಹತ್ತು ಸಾವಿರ ಉದ್ಯೋಗಿಗಳಿದ್ದರು. ಆ ಕಂಪನಿಯ ಮಾರುಕಟ್ಟೆ ಪಾಲು ಏರ್‌ಇಂಡಿಯಾದ ದೇಶೀ ವಿಭಾಗದ ಎರಡರಷ್ಟು ಇತ್ತು. 80 ವಿಮಾನ ನಿಲ್ದಾಣಗಳ ನಡುವೆ ಕಲ್ಪಿಸಿದ್ದ ಸಂಪರ್ಕ ಕೂಡ ಏರ್‌ಇಂಡಿಯಾದ ದುಪ್ಪಟ್ಟು ಇತ್ತು. ಅವುಗಳಲ್ಲಿ 30 ದೂರದ, ಸಂಪರ್ಕ ಇಲ್ಲದ ಊರುಗಳಿಗೇ ಇತ್ತು. ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಒಳ್ಳೆಯ ಹೆಸರು ಗಳಿಸಿಕೊಂಡಿತ್ತು.

ಈ ಅತಿದೊಡ್ಡ ರಾಷ್ಟ್ರೀಯ ಆಸ್ತಿ, ಮೂಲಸೌಕರ್ಯ ಮತ್ತು ಉದ್ಯೋಗಗಳನ್ನು ಉಳಿಸಿಕೊಳ್ಳಲು ಆಗಿನ ಯುಪಿಎ ಸರ್ಕಾರ ಮತ್ತು ಬ್ಯಾಂಕುಗಳು ಪ್ರಯತ್ನಿಸಬೇಕಿತ್ತು. ಈಗಿನ ಸರ್ಕಾರವು ಸಹಾಯಧನದ ಆಧಾರದಲ್ಲಿ ‘ಉಡಾನ್‌’ ಮೂಲಕ ಪುನಶ್ಚೇತನ ನೀಡಲು ಯತ್ನಿಸುತ್ತಿರುವ ದೂರದ ಊರುಗಳ ವಿಮಾನ ಸಂಪರ್ಕವನ್ನು ಉಳಿಸಿಕೊಳ್ಳಬಹುದಿತ್ತು. ಸಾಲಗಳನ್ನು ಷೇರುಗಳಾಗಿ ಪರಿವರ್ತಿಸಿ ಮಲ್ಯ ಅವರನ್ನು ಆಡಳಿತ ಮಂಡಳಿಯಿಂದ ಹೊರಗೆ ಇರಿಸಬಹುದಿತ್ತು. ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಒಂದು ನೋಂದಾಯಿತ ಕಂಪನಿ ಆಗಿದ್ದುದರಿಂದ ಅದನ್ನು ಹರಾಜು ಮಾಡುವುದು ಕೂಡ ಕಷ್ಟದ ಕೆಲಸವಾಗಿರಲಿಲ್ಲ. ಇಷ್ಟೆಲ್ಲ ಆದ ಬಳಿಕವೂ ಮಲ್ಯ ವಿರುದ್ಧ ತನಿಖೆ ನಡೆಸಬಹುದಿತ್ತು. ₹50 ಸಾವಿರ ಕೋಟಿ ಹೂಡಿಕೆ ಮಾಡಿ ಏರ್‌ ಇಂಡಿಯಾವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬಹುದು ಎಂದಾದರೆ ಕಿಂಗ್‌ಫಿಷರ್ ಏರ್‌ಲೈನ್ಸ್‌ ಅನ್ನು ಉಳಿಸುವುದು ಯಾಕಾಗಬಾರದಿತ್ತು?

ಮಲ್ಯ ಅವರು ತಮ್ಮ ತಪ್ಪುಗಳಿಗೆ ಬೆಲೆ ತೆರಬಹುದು ಅಥವಾ ತಪ್ಪಿಸಿಕೊಳ್ಳಬಹುದು. ಅವರ ವಿರುದ್ಧ ಇರುವ ಆರೋಪಗಳು ಬ್ರಿಟನ್‌ನ ನ್ಯಾಯಾಲಯದಲ್ಲಿ ಸಾಬೀತಾಗದಿದ್ದರೆ ಅವರು ಭಾರತಕ್ಕೆ ಬಾರದೆಯೇ ಇರಬಹುದು. ಮಲ್ಯ ಅವರು ವಂಚನೆ ಮಾಡಿದ್ದಾರೆ ಎಂಬುದು ಅಲ್ಲಿನ ನ್ಯಾಯಾಲಯಗಳಲ್ಲಿ ಸಾಬೀತಾದರೂ ಅವರನ್ನು ಗಡಿಪಾರು ಮಾಡದಿರುವ ಸಾಧ್ಯತೆಯೂ ಇದೆ. ಯಾಕೆಂದರೆ ಇಲ್ಲಿನ ಜೈಲುಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಳ ಕಾರಣಕ್ಕೆ ಮಲ್ಯ ಅವರಿಗಿಂತ ಗಂಭೀರ ಆರೋಪ ಹೊತ್ತಿರುವವರನ್ನೂ ಭಾರತಕ್ಕೆ ಹಸ್ತಾಂತರಿಸದ ನಿದರ್ಶನಗಳು ಇವೆ.

ಮಲ್ಯ ಅವರು ಮಾಧ್ಯಮದ ಮುಂದೆ ಹೇಳಿರುವಂತೆ ಅವರನ್ನು ಮರುಪಾವತಿಯಾಗದ ಸಾಲಗಳ ಸಂಕೇತವಾಗಿ ಚಿತ್ರಿಸಲಾಗಿದೆಯೇ?

ಮಲ್ಯ ಅವರನ್ನು ಡೊನಾಲ್ಡ್‌ ಟ್ರಂಪ್‌ ಅವರಿಗೆ ಬಹಳಷ್ಟು ಮಂದಿ ಹೋಲಿಸುತ್ತಾರೆ. ಹಲವು ಬಾರಿ ದಿವಾಳಿಯಾದ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದರು. ಆದರೆ, ಭಾರತದಲ್ಲಿ ಸಾರ್ವಜನಿಕವಾಗಿ ಅಳತೆ ಮೀರಿ ವರ್ತಿಸುವುದು ಬಹಳ ಅಪಾಯಕಾರಿ ಎಂಬುದನ್ನು ಮಲ್ಯ ಮರೆತುಬಿಟ್ಟರು. ಇಲ್ಲಿನ, ನಗರದ ಮಧ್ಯಮ ವರ್ಗಕ್ಕೆ ಮಲ್ಯ ಅವರೊಂದಿಗೆ ಪ್ರೀತಿ–ದ್ವೇಷದ ಸಂಬಂಧ ಇದೆ. ಮಲ್ಯ ಅವರಷ್ಟೇ ತಪ್ಪಿತಸ್ಥರಾಗಿರುವ ಇಲ್ಲಿನ ಹಲವು ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳೂ ಮಲ್ಯ ಅವರು ಬೀಳುವುದನ್ನೇ ಇಷ್ಟಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT