ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ | ಮುಂದಾಗುವುದನ್ನು ಹೇಳುವ ಹಿನ್ನೋಟ!

Last Updated 14 ಏಪ್ರಿಲ್ 2023, 23:15 IST
ಅಕ್ಷರ ಗಾತ್ರ

ಕರ್ನಾಟಕದ ಮತದಾರರು ವಿಧಾನಸಭೆಗೆ ಹೊಸದಾಗಿ ಸದಸ್ಯರನ್ನು ಇನ್ನು ಕೆಲವೇ ದಿನಗಳಲ್ಲಿ ಚುನಾಯಿಸಲಿದ್ದಾರೆ. ಈ ಹೊತ್ತಿನಲ್ಲಿ ರಾಜ್ಯದ ಹಿಂದಿನ ಮೂರು ವಿಧಾನಸಭಾ ಚುನಾವಣೆಗಳ ಮತ ಚಲಾವಣೆ ಬಗೆಯನ್ನು ಗಮನಿಸುವುದು ಒಂದಿಷ್ಟು ಒಳನೋಟ
ಗಳನ್ನು ಒದಗಿಸಬಹುದು. ರಾಜ್ಯದಲ್ಲಿ ಮತದಾನ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಸಿಎಸ್‌ಡಿಎಸ್–ಲೋಕನೀತಿ ಸಮೀಕ್ಷೆಯು ಮುಖ್ಯ ಸಾಕ್ಷ್ಯಗಳನ್ನು ಒದಗಿಸುತ್ತದೆ. ಈ ಬರಹವು ಎರಡು ಪ್ರಮುಖ ವರ್ಗಗಳ ಮತದಾನದ ಬಗೆಯ ಮೇಲೆ ಗಮನಹರಿಸಿದೆ.

ಮೊದಲನೆಯದು, ಮೊದಲ ಬಾರಿಗೆ ಮತದಾನ ಮಾಡುವವರು ಮತ ಚಲಾವಣೆಯ ಬಗೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತಾರೆಯೇ ಎಂಬುದು. ಎರಡನೆಯದು, ಮತ ಚಲಾವಣೆಯ ವೇಳೆ ಯಾರ ಆಯ್ಕೆ ಯಾವುದು ಎಂಬುದನ್ನು ತೀರ್ಮಾನಿಸುವಲ್ಲಿ ಆರ್ಥಿಕ ಸ್ಥಾನಮಾನವು ಎಷ್ಟು ಮುಖ್ಯವಾದ ಪಾತ್ರ ವಹಿಸುತ್ತದೆ ಎನ್ನುವುದು. ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿ ರಾಜಕೀಯ ಪಕ್ಷಗಳು ಮತ ಯಾಚನೆ ಮಾಡುತ್ತಿರುವ ಕಾರಣ ಇದು ಪ್ರಮುಖ ಪ್ರಶ್ನೆಯಾಗುತ್ತದೆ. ಈ ಎರಡು ವಿಚಾರಗಳ ಬಗ್ಗೆ ನಡೆಸುವ ಅವಲೋಕನವು ಈ ಬಾರಿಯ ಚುನಾವಣೆಯಲ್ಲಿ ಮತದಾನ ಹೇಗೆ ನಡೆಯಬಹುದು ಎಂಬುದಕ್ಕೆ ಸೂಚನೆಗಳನ್ನು ಕೊಡಬಹುದು. ಮತದಾನಕ್ಕೆ ಇನ್ನುಳಿದಿರುವ ದಿನಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಗಮನಹರಿಸಬೇಕಾದ ಕ್ಷೇತ್ರಗಳು ಯಾವುವು ಎಂಬುದನ್ನೂ ಇದು ತಿಳಿಸಬಹುದು.

ಮೊದಲ ಬಾರಿಗೆ ಮತ ಚಲಾಯಿಸುವವರದ್ದು ಬಹುಮುಖ್ಯ ವರ್ಗ. ಕಡೆಯ ವಿಧಾನಸಭಾ ಚುನಾವಣೆ ನಡೆದ ನಂತರದಲ್ಲಿ ಇವರು ಮತದಾನದ ಹಕ್ಕು ಪಡೆಯಲು ಅರ್ಹವಾಗುವ ವಯಸ್ಸು ದಾಟಿರುವವರು, ತಮ್ಮ ಹಕ್ಕು ಚಲಾಯಿಸಲು ಇದೇ ಮೊದಲ ಬಾರಿಗೆ ಅರ್ಹತೆ ಪಡೆದಿರುವವರು. ಇವರು ಮತಗಟ್ಟೆಗಳ ಕಡೆ ಸಾಗುವ ಸಂದರ್ಭದಲ್ಲಿ ಬಹಳ ಉತ್ಸುಕರಾಗಿರುತ್ತಾರೆ ಎಂದು ಭಾವಿಸಬಹುದು. ಮೊದಲ ಬಾರಿ ಮತ ಚಲಾವಣೆ ಮಾಡುವವರು ಒಂದಿಷ್ಟು ಪರಿಣಾಮ ಉಂಟುಮಾಡುತ್ತಾರೆ ಎಂಬುದನ್ನು ಹಿಂದಿನ ಮೂರು ಚುನಾವಣೆಗಳು ತೋರಿಸಿಕೊಟ್ಟಿವೆ. 2008ರ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಮೂರು ಸ್ಥಾನಗಳ ಕೊರತೆ ಎದುರಿಸಿತು. ಆ ಚುನಾವಣೆಯಲ್ಲಿ ಪಕ್ಷವು ಮೊದಲ ಬಾರಿಗೆ ಮತ ಚಲಾಯಿಸಿದವರಿಂದ ಗಳಿಸಿದ ಮತಗಳ ಪ್ರಮಾಣವು ತಾನು ಗಳಿಸಿದ ಒಟ್ಟು ಸರಾಸರಿ ಮತಗಳಿಗೆ ಹೋಲಿಸಿದರೆ ಹೆಚ್ಚಿತ್ತು.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್, ಮೊದಲ ಬಾರಿಯ ಮತದಾರರಿಂದ ಗಳಿಸಿದ ಮತಗಳ ಪ್ರಮಾಣವು ಸರಾಸರಿ ಮತಗಳ ಪ್ರಮಾಣಕ್ಕಿಂತ ಶೇಕಡ 1ರಷ್ಟು ಹೆಚ್ಚಿತ್ತು. 2018ರಲ್ಲಿ ಬಿಜೆಪಿಯು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳಿಗಿಂತ ಒಂಬತ್ತು ಸ್ಥಾನ ಕಡಿಮೆ ಪಡೆಯಿತು. ಆ ಚುನಾವಣೆಯಲ್ಲಿ ಮೊದಲ ಬಾರಿಯ ಮತದಾರರಿಂದ ಬಿಜೆಪಿ ಪಡೆದ ಮತಗಳು, ತನ್ನ ಸರಾಸರಿ ಮತ ಗಳಿಕೆ ಪ್ರಮಾಣಕ್ಕಿಂತ ಶೇ 6ರಷ್ಟು ಕಡಿಮೆ ಆಗಿತ್ತು. ಇದು ಬಿಜೆಪಿ ಪಾಲಿಗೆ ಬಹುಮತ ಸಿಗದಂತೆ ಮಾಡಿತೇ?

2013 ಮತ್ತು 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮೊದಲ ಬಾರಿಯ ಮತದಾರರಿಂದ ಪಡೆದ ಮತಗಳ ಪ್ರಮಾಣವು ತನ್ನ ಸರಾಸರಿ ಮತ ಗಳಿಕೆಗಿಂತ ಶೇ 4ರಷ್ಟು ಹೆಚ್ಚಿತ್ತು ಎಂಬುದು ಕುತೂಹಲದ ಅಂಶ. ಈ ಮಾತು ಸಣ್ಣ ಪಟ್ಟಣಗಳಿಗೆ ಹೆಚ್ಚು
ಅನ್ವಯಿಸುತ್ತಿತ್ತು. ಯುವಕರು ಎರಡು ಪ್ರಧಾನ ಪಕ್ಷಗಳ ವಿಚಾರದಲ್ಲಿ ಭ್ರಮನಿರಸನರಾಗಿದ್ದರು ಎಂಬುದನ್ನು ಇದು ತೋರಿಸುತ್ತದೆಯೇ? ಚುನಾವಣೆಯ ಫಲಿತಾಂಶ ಏನಿರುತ್ತದೆ ಎಂಬುದನ್ನು ತೀರ್ಮಾನಿಸುವಲ್ಲಿ ಮೊದಲ ಬಾರಿಯ ಮತದಾರರು ಪ್ರಭಾವಿ ಪಾತ್ರ ವಹಿಸುತ್ತಾರೆ ಎಂದು ಅನಿಸುತ್ತದೆ.

ಮತದಾರರ ಆರ್ಥಿಕ ಸ್ಥಿತಿಯು ಅವರ ಮತದಾನದ ಆಯ್ಕೆಯ ವಿಚಾರವಾಗಿ ಏನನ್ನಾದರೂ ಸೂಚಿಸುತ್ತದೆಯೇ? ಹಿಂದಿನ ಮೂರು ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದ ಸಿಎಸ್‌ಡಿಎಸ್‌–ಲೋಕನೀತಿ ಅಂಕಿಅಂಶಗಳೂ ಒಂದಿಷ್ಟು ವಿಚಾರಗಳನ್ನು ತಿಳಿಸುತ್ತವೆ. ಸಿಎಸ್‌ಡಿಎಸ್‌–ಲೋಕನೀತಿ ವಿಶ್ಲೇಷಣೆಯು ಮತದಾರರನ್ನು ಅವರು ಹೊಂದಿರುವ ಪ್ರಮುಖ ಆಸ್ತಿಗಳ ಮಾಲೀಕತ್ವದ ಆಧಾರದಲ್ಲಿ ವರ್ಗೀಕರಿಸಿದೆ; ಅವರ ಘೋಷಿತ ಆದಾಯದ ಆಧಾರದ ಮೇಲೆ ಅಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಇರುವ ಬೆಂಬಲವನ್ನು ಪ್ರತ್ಯೇಕವಾಗಿ ವಿಶ್ಲೇಷಿಸಲಾಗಿದೆ.

ಸಮಾಜದಲ್ಲಿ ಆರ್ಥಿಕವಾಗಿ ಹೆಚ್ಚು ಸ್ಥಿತಿವಂತರಾಗಿರುವವರ ಬೆಂಬಲವು ಬಿಜೆಪಿಗೆ ಹೆಚ್ಚು ಇದೆ ಎಂದು ಮೊದಲಿನಿಂದಲೂ ನಂಬಿಕೊಂಡು ಬರಲಾಗಿದೆ. ಈ ನಂಬಿಕೆಯು 2008ರ ಚುನಾವಣೆಯ ಮಟ್ಟಿಗೆ ನಿಜವೆಂಬಂತೆ ಕಾಣುತ್ತದೆ. ಆ ಚುನಾವಣೆಯಲ್ಲಿ, ಸಮಾಜದ ಬಡ ವರ್ಗಗಳ ಕಡೆ ನೋಟ ಹರಿಸಿದಂತೆಲ್ಲ ಬಿಜೆಪಿಗೆ ಬೆಂಬಲ ಕಡಿಮೆ ಆಗುತ್ತ ಸಾಗಿದ್ದುದು ಗೊತ್ತಾಗುತ್ತದೆ. 2013ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ (ಕರ್ನಾಟಕ ಜನತಾ ಪಕ್ಷ) ನಡುವೆ ಮತಗಳು ಹಂಚಿಹೋದವು. ಹೆಚ್ಚು ಸ್ಥಿತಿವಂತರ ಮತಗಳು ಬಿಜೆಪಿಗೆ ಸಿಗುವುದು ದೊಡ್ಡಮಟ್ಟಿಗೆ ಕುಸಿಯಿತು. 2018ರ ಚುನಾವಣೆಯಲ್ಲಿ ಬಿಜೆಪಿಯು ಮಧ್ಯಮ ವರ್ಗದವರ ಮತಗಳನ್ನು ದೊಡ್ಡ ಮಟ್ಟದಲ್ಲಿ ಪಡೆಯಿತು. ಹಾಗೆಯೇ, ಆರ್ಥಿಕವಾಗಿ ದುರ್ಬಲರಾಗಿರುವವರು ಹಾಗೂ ಬಡವರ ನಡುವೆ ತನ್ನ ಮತ ಗಳಿಕೆ ಪ್ರಮಾಣವನ್ನು ಹೆಚ್ಚು ಮಾಡಿಕೊಂಡಿತು. ಆದರೆ ಆರ್ಥಿಕವಾಗಿ ಸ್ಥಿತಿವಂತರಾದವರ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳದೆ ಇದ್ದುದು ಬಿಜೆಪಿಗೆ ಬಹುಮತ ಪಡೆಯಲು ಸಾಧ್ಯವಾಗದೇ ಇದ್ದುದಕ್ಕೆ ಒಂದು ಕಾರಣವಾಗಿರಬಹುದು.

ಕಾಂಗ್ರೆಸ್ಸಿನ ವಿಚಾರವಾಗಿ ಹೇಳುವುದಾದರೆ, 2008 ಮತ್ತು 2018ರಲ್ಲಿ, ಕಡಿಮೆ ಸ್ಥಿತಿವಂತರಿಂದ ಹೆಚ್ಚು ಸ್ಥಿತಿವಂತರ ಕಡೆ ಸಾಗಿದಂತೆಲ್ಲ ಪಕ್ಷವು ಗಳಿಸಿದ ಮತಗಳ ಪ್ರಮಾಣವು ಕಡಿಮೆ ಆಗುತ್ತ ಬಂದಿದ್ದು ಸ್ಪಷ್ಟವಾಗಿ ಕಾಣುತ್ತದೆ. ಪಕ್ಷವು ಜಯ ಸಾಧಿಸಿದ 2013ರ ವಿಧಾನಸಭಾ ಚುನಾವಣೆಯಲ್ಲಿ, ಎಲ್ಲ ವರ್ಗಗಳಿಗೆ ಸೇರಿದ ಮತದಾರರಿಂದ ಬೆಂಬಲ ಸಿಕ್ಕಿತು. ಹೆಚ್ಚು ಸ್ಥಿತಿವಂತರ ಬೆಂಬಲವು 2013ರಲ್ಲಿ ಕಾಂಗ್ರೆಸ್ಸಿಗೆ ಹೆಚ್ಚು ಸಿಕ್ಕಿತು. ಬಿಜೆಪಿ–ಕೆಜೆಪಿ ಒಡಕಿನಿಂದ ಈ ವರ್ಗಕ್ಕೆ ಆದ ಭ್ರಮನಿರಸನ ಹಾಗೂ ಸ್ಥಿರ ಸರ್ಕಾರ ಬೇಕು ಎಂಬ ಹಂಬಲವು ಈ ವರ್ಗವು ಕಾಂಗ್ರೆಸ್ಸನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಮೋದಿಸಿದ್ದಕ್ಕೆ ಕಾರಣವಾಗಿರಬಹುದು.

ಬಡವರು ಹಾಗೂ ಆರ್ಥಿಕವಾಗಿ ಅಷ್ಟೇನೂ ಪ್ರಬಲವಲ್ಲದ ವರ್ಗಗಳು ಕಾಂಗ್ರೆಸ್ಸಿನ ಪಾಲಿಗೆ ಪ್ರಮುಖ ಬೆಂಬಲಿಗ ವರ್ಗಗಳು. ಬಿಜೆಪಿಯು ಜನಪ್ರಿಯತೆಯನ್ನು ಗಳಿಸಿಕೊಂಡಿರುವುದು ಮಧ್ಯಮ ವರ್ಗದವರು ಹಾಗೂ ಸ್ಥಿತಿವಂತರ ನಡುವೆ. ಈ ಬಾರಿಯ ಚುನಾವಣೆಯಲ್ಲಿ ಯಶಸ್ಸು ಎಷ್ಟರಮಟ್ಟಿಗೆ ಸಿಗುತ್ತದೆ ಎನ್ನುವುದು, ಪಕ್ಷಗಳು ತಮ್ಮ ಸಾಂಪ್ರದಾಯಿಕ ಬೆಂಬಲಿಗ ವರ್ಗದ ಆಚೆಗೆ ಎಷ್ಟು ಮತಗಳನ್ನು ಪಡೆಯುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ಆಧರಿಸಿ ಇರಲಿದೆ. ಸಾಮರ್ಥ್ಯ ಎಷ್ಟರಮಟ್ಟಿಗೆ ಇರಲಿದೆ ಎಂಬುದರ ಅರ್ಥವು ಕಾಂಗ್ರೆಸ್ಸಿಗೆ, ಮಧ್ಯಮ ವರ್ಗದ ಆಕಾಂಕ್ಷೆಗಳಿಗೆ ಅದು ಹೇಗೆ ಸ್ಪಂದಿಸುತ್ತದೆ ಎಂಬುದಾಗಿರುತ್ತದೆ. ಬಿಜೆಪಿ ಪಾಲಿಗೆ ಈ ಮಾತಿನ ಅರ್ಥವು ಬಡ ವರ್ಗಗಳಿಗೆ ಹತ್ತಿರಆಗುವುದಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT