ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಸ ಋಷಿ’ಯಾದ ಗೋಕರ್ಣದ ‘ವಂಡರ್‌ಬಾಯ್‌’

Last Updated 30 ಜೂನ್ 2018, 19:33 IST
ಅಕ್ಷರ ಗಾತ್ರ

ಗೋಕರ್ಣದ ಸುಂದರ ಕಡಲ ತೀರ ಎಂದರೆ ಕೇಳಬೇಕೇ, ಕಡಲಿನ ರಮಣೀಯ ಸೌಂದರ್ಯ, ರೌದ್ರತೆ ನಿಸರ್ಗಪ್ರಿಯರನ್ನು ಮಂತ್ರ ಮುಗ್ಧಗೊಳಿಸದೇ ಇರದು. ಆರು– ಏಳು ದಶಕಗಳ ಹಿಂದೆ ಈ ಪಟ್ಟಣದ ಸ್ವರೂಪವೇ ಭಿನ್ನವಾಗಿತ್ತು. ಹೊರ ಜಗತ್ತಿನ ಸಂಪರ್ಕ ಕಡಿಮೆ. ಇಲ್ಲಿಗೆ ಬರುವವರಲ್ಲಿ ಹೆಚ್ಚಿನವರು ಮಹಾಬಲೇಶ್ವರನ ದರ್ಶನಕ್ಕೆ ಅಥವಾ ವೈದಿಕಕ್ಕೆ ಬರುವವರೇ ಆಗಿದ್ದರು. ಆ ಕಾಲದಲ್ಲಿ ಅಲ್ಲಿನ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಗಳ ಮಕ್ಕಳಲ್ಲಿ ವೇದಪಾರಂಗತರಾಗುವ ತುಡಿತವೇ ಹೆಚ್ಚಿದ್ದಿರಬಹುದು.

ಆದರೆ, ನಾರಾಯಣ ಸದಾಶಿವ ಹೊಸ್ಮನೆ ಎಂಬ ಬಾಲಕನ ಮನೆಯ ಸ್ಥಿತಿ ಬೇರೆಯದೇ ಆಗಿತ್ತು. ಕಿತ್ತು ತಿನ್ನುವ ಬಡತನ. ಮುರುಕಲು ಮನೆ. ದೇವಾಲಯಗಳು ಮತ್ತು ಬೇರೆಯವರ ಮನೆಗಳಲ್ಲಿ ಕಸಮುಸುರೆ ಬಳಿದು ಸೂರ್ಯ ಕಂತಿದ ಮೇಲೆ ಅಮ್ಮ ಆ ಮನೆಗಳಿಂದ ತರುತ್ತಿದ್ದ ಊಟವೇ ಮೃಷ್ಟಾನ್ನವಾಗಿತ್ತು. ನಾರಾಯಣನೂ ಸೇರಿ ಹಸಿದು ಕುಳಿತ್ತಿದ್ದ ಮಕ್ಕಳಿಗೆ ಹಳಸಿ ಹುಳಿಯಾದ ಅನ್ನ, ಸಾಂಬಾರ್‌ ಸಹ ರುಚಿಯಾಗಿರುತ್ತಿತ್ತು. ಇವುಗಳನ್ನು ತಿಂದು ಬೆಳೆದ ದೇಹಕ್ಕೆ ಹುಳಿಯೇ ಆಪ್ಯಾಯಮಾನವಾಯಿತು. ನಾರಾಯಣ ಹೊಸ್ಮನೆಯು ಈ ಸ್ಥಿತಿಗೆ ಕಣ್ಣೀರು ಹಾಕುತ್ತ ಕೂರಲಿಲ್ಲ. ಅವರ ಚೈತನ್ಯದ ತುಡಿತವೇ ಬೇರೆಯದ್ದಾಗಿತ್ತು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಪರಿಣಾಮ ಈಗ ಅವರು (ಪ್ರೊ. ನಾರಾಯಣ ಎಸ್‌. ಹೊಸ್ಮನೆ) ವಿಶ್ವದ ರಸಾಯನ ವಿಜ್ಞಾನ ಕ್ಷೇತ್ರದ ಎತ್ತರಕ್ಕೆ ತಲುಪಿದ್ದಾರೆ. ಕ್ಯಾನ್ಸರ್‌ ಚಿಕಿತ್ಸೆಗಾಗಿ ಅವರು ನಡೆಸಿದ ಸಂಶೋಧನೆ ಅವರಿಗೆ ಬಹುದೊಡ್ಡ ಕೀರ್ತಿ ತಂದುಕೊಟ್ಟಿದೆ.

ಜೂನ್‌ 30ಕ್ಕೆ ಇವರಿಗೆ 70 ವರ್ಷ ತುಂಬಿದೆ. ಲಂಡನ್‌ನ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ‘ಜರ್ನಲ್‌ ಆಫ್‌ ಆರ್ಗನೋ ಮೆಟಾಲಿಕ್‌ ಕೆಮಿಸ್ಟ್ರಿ’ ಇವರ ವೈಜ್ಞಾನಿಕ ಸಾಧನೆ, ಸಂಶೋಧನೆಗಳ ಕುರಿತು ಮುಖಪುಟದ ಲೇಖನ ಪ್ರಕಟಿಸಿದೆ. ಎಡಿನ್‌ಬರ್ಗ್‌ ಅಲ್ಯುಮ್ನಿಯಲ್ಲಿ, ಅಂದರೆ ಹಳೆ ವಿದ್ಯಾರ್ಥಿಗಳ ಸಾಲಿನಲ್ಲಿ ವಿಖ್ಯಾತ ವಿಜ್ಞಾನಿಗಳಾದ ಚಾರ್ಲ್ಸ್‌ ಡಾರ್ವಿನ್‌, ಗ್ರಹಾಂ ಬೆಲ್‌, ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ ವೆಲ್‌ ಸೇರಿದಂತೆ ಹಲವರು ಇದ್ದಾರೆ. ಈ ವಿಶ್ವವಿದ್ಯಾಲಯ ಹೊರ ತರುವ ವಿಜ್ಞಾನದ ಮ್ಯಾಗಝೀನ್‌ಗಳಲ್ಲಿ ಇವರ ಸಾಧನೆಯ ಕುರಿತು ಮುಖಪುಟ ಲೇಖನಗಳು ಪ್ರಕಟವಾಗಿದ್ದವು.

ನಾರಾಯಣ ಹೊಸ್ಮನೆ ಅವರ ವ್ಯಕ್ತಿ ಚಿತ್ರ ಕಟ್ಟಿಕೊಡಲೆಂದು ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಎಡಿನ್‌ಬರ್ಗ್‌ನಲ್ಲಿದ್ದರು. ಮಾತಿಗಿಳಿಯುತ್ತಿದ್ದಂತೆ ತಮ್ಮ ಬಾಲ್ಯದ ಮತ್ತು ಶಾಲೆಯ ದಿನಗಳಿಗೆ ಕರೆದೊಯ್ದರು. ತಾವು ಅನುಭವಿಸಿದ್ದ ಬಡತನ ಮತ್ತು ಛಲ ತೊಟ್ಟ ಸಾಧನೆಯ ಹಾದಿಯ ಚಿತ್ರಣವನ್ನು ತೆರೆದ ಪುಸ್ತಕದಂತೆ ಬಿಡಿಸಿಟ್ಟರು. ಇವರ ಜೀವನವೇ ಒಂದು ಪ್ರೇರಣೆಯ ಕಥೆ.

‘10 ವರ್ಷಗಳ ಹಿಂದೆ ಮುಂಬೈಗೆ ಭೇಟಿ ನೀಡಿದ್ದೆ. ಆಗ ಅಮ್ಮ, ‘ತಿನ್ನಲು ಇಷ್ಟವಾದದ್ದು ಏನು ಮಾಡಿಕೊಡಲಿ’ ಎಂದು ಕೇಳಿದಳು. ‘ನನಗೆ ಬಾಲ್ಯದಲ್ಲಿ ನೀಡುತ್ತಿದ್ದ ಹಳಸಿದ ಅನ್ನ– ಹುಳಿಯೇ ಬೇಕು’ ಎಂದೆ. ‘ಅದು ಆಗಿನ ಸ್ಥಿತಿ, ಅನಿವಾರ್ಯವಾಗಿತ್ತು. ಈಗ ಅದೆಲ್ಲ ಏಕೆ’ ಎಂದಳು. ಆದರೆ, ಹಳೆಯದನ್ನು ಮರೆಯಲು ಆಗುವುದಿಲ್ಲ. ಹುಳಿಯೇ ರುಚಿ ಎನಿಸಿತ್ತು. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹುಲುಸಾಗಿ ಬೆಳೆಯುವ ಚಗತೆ ಸೊಪ್ಪಿನ ತಂಬುಳಿ, ಗೋಳಿ ಸೊಪ್ಪಿನ ಸಾಸ್ಮೆ ಮರೆಯಲು ಆಗುತ್ತದೆಯೇ. ಅದನ್ನು ‘ಕೆಳ ವರ್ಗದವರು, ಬಡವರು ತಿನ್ನುವ ಆಹಾರ’ ಎಂದು ಹಣವಂತರು ಆಗ ಹೀಯಾಳಿಸುತ್ತಿದ್ದರು. ಆದರೆ, ಇದು ಪೌಷ್ಟಿಕವಾದದು. ಇವನ್ನೆಲ್ಲ ಸೇವಿಸಿದ ಜನರು ಗಟ್ಟಿಮುಟ್ಟಾಗಿ ಆರೋಗ್ಯವಂತರಾಗಿತ್ತಾರೆ’ ಎಂದು ನೆನಪಿನ ಸುರಳಿ ಬಿಚ್ಚಿದರು.

ಬಡತನ, ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಮನಸ್ಥಿತಿ ಇವರ ಯಶಸ್ಸಿನ ಮಂತ್ರಗಳು. ಗುರಿ ಸಾಧನೆಗೆ ಪರಿಶ್ರಮವನ್ನು ಬಾಲ್ಯದಲ್ಲೇ ಬೆಳೆಸಿಕೊಂಡಿದ್ದರು. ಕುಮಟದ ಭದ್ರಕಾಳಿ ಹೈಸ್ಕೂಲಿನಲ್ಲಿ ರಾತ್ರಿ ಎಂಟು ಗಂಟೆಯವರೆಗೆ ಲೈಬ್ರರಿಯಲ್ಲಿ ಉಳಿದುಕೊಂಡು ಓದುತ್ತಿದ್ದರು. ಇದಕ್ಕೆ ಮತ್ತೊಂದು ಕಾರಣವೂ ಇತ್ತು. ಅವರ ಅಮ್ಮ ಮನೆ ಕೆಲಸಗಳನ್ನು ಮುಗಿಸಿ ಬರುವಾಗ ರಾತ್ರಿ ಎಂಟಾಗುತ್ತಿತ್ತು. ಪುಸ್ತಕ, ಪೆನ್ಸಿಲ್‌ಗೆ ಹಣವಿಲ್ಲದ ಕಾರಣ ಬಳಪದಲ್ಲಿ ನೆಲದ ಮೇಲೆ ನಾಲ್ಕೈದು ಬಾರಿ ಬರೆದು ನೆನಪಿಟ್ಟುಕೊಳ್ಳುವ ಕಲೆ ಕರಗತ ಮಾಡಿಕೊಳ್ಳುತ್ತಿದ್ದರು.

‘ಜೀವನದಲ್ಲಿ ಎಂದೆಂದಿಗೂ ನಕಾರಾತ್ಮಕ ಭಾವನೆ ಮೊಳಕೆ ಒಡೆಯಲೇ ಇಲ್ಲ. ಸಕಾರಾತ್ಮಕ ಮನೋಭಾವಕ್ಕೆ ಅದ್ಭುತ ಶಕ್ತಿ ಇದೆ. ಈ ವಿಚಾರವನ್ನು ಲಂಡನ್‌ನ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಚಿನ್ನದ ಪದಕ ಪಡೆದು ಭಾಷಣ ಮಾಡಿದಾಗ ಹೇಳಿದ್ದೆ. ಅವರು ಅಚ್ಚರಿಪಟ್ಟರು. ನಕಾರಾತ್ಮಕ ಮನಸ್ಥಿತಿ ವ್ಯಕ್ತಿಯ ದೇಹದೊಳಗೆ ಕೆಲವು ಬಗೆಯ ರಾಸಾಯನಿಕ ಸ್ರವಿಕೆಗೆ ಕಾರಣವಾಗುತ್ತದೆ. ಡಿಎನ್‌ಎದಲ್ಲೂ ರೂಪಾಂತರ (ಮ್ಯುಟೇಷನ್‌) ಆಗುತ್ತದೆ. ಹೆಚ್ಚು ಹೆಚ್ಚು ನೆಗೆಟಿವ್‌ ಯೋಚನೆಗಳು ಬಂದಷ್ಟೂ ಕೆಲವು ಬಗೆಯ ಆಣ್ವಿಕಗಳು ಬಿಡುಗಡೆ ಆಗುತ್ತವೆ. ಇದು ಮತ್ತಷ್ಟು ಮ್ಯುಟೇಷನ್‌ಗೆ ಕಾರಣವಾಗಿ ಕ್ಯಾನ್ಸರ್‌ ಸೇರಿ ಹಲವು ಬಗೆಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಬೇಕು’.

ಹೊಸ್ಮನೆ ಅವರು 1970ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಇನ್ ಆರ್ಗ್ಯಾನಿಕ್‌ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪದವಿ ಪಡೆದು, ಪಿಎಚ್‌ಡಿಗಾಗಿ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ಇವರ ಪ್ರತಿಭೆಯನ್ನು ಗುರುತಿಸಿ ವಿಶ್ವವಿದ್ಯಾಲಯವು ಇವರಿಗೆ 400 ಪೌಂಡ್‌ ವಿದ್ಯಾರ್ಥಿ ವೇತನ ನೀಡಲಾರಂಭಿತು. ಅದನ್ನು ಜೋಪಾನವಾಗಿ ಬಳಸಿ, ಉಳಿದ ಹಣವನ್ನು ಅಪ್ಪ– ಅಮ್ಮನಿಗೆ ಕಳಿಸುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳು ಚಳಿ ಎಂದು ಪಬ್‌ಗೆ ಹೋದರೆ, ಹೊಸ್ಮನೆ ಮಾತ್ರ ಲ್ಯಾಬ್‌ನಲ್ಲೇ ಕಳೆಯುತ್ತಿದ್ದರು. ಹೀಗಾಗಿ ಎರಡೂವರೆ ವರ್ಷಗಳಲ್ಲೇ ಪಿಎಚ್‌ಡಿ ಮುಗಿಸಲು ಸಾಧ್ಯವಾಯಿತು. ಜಾನ್‌ ಸಾವೇಜ್‌ ಎಂಬುವರು ಪ್ರಯೋಗಾಲಯದಲ್ಲಿ ಇವರ ಸ್ನೇಹಿತರು. ಇಬ್ಬರೇ ಹೆಚ್ಚು ಹೊತ್ತು ಅಲ್ಲೇ ಕಳೆಯುತ್ತಿದ್ದರು. ಬೇಸರ ಕಳೆಯಲೆಂದು ಜಾನ್‌ ಸ್ಕ್ವಾಷ್‌ ಆಟ ಕಲಿಸಿದರು. ಅವರಿಂದ ಆಟವನ್ನು ಕಲಿತ ಹೊಸ್ಮನೆ ಒಮ್ಮೆ ಸಾವೇಜ್‌ ಅವರನ್ನೇ ಸೋಲಿಸಿದರು. ಆಗ ಅವರು ಹೊಸ್ಮನೆ ಅವರನ್ನು ‘ವಂಡರ್‌ಬಾಯ್‌’ ಎಂದು ಬಣ್ಣಿಸಿದ್ದರು.

ಹೊಸ್ಮನೆ ಈಗ ಅಮೆರಿಕದ ಇಲಿನಾಯ್ಸ್‌ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನ ಮತ್ತು ಜೀವ ರಸಾಯನಿಕ ವಿಜ್ಞಾನ ವಿಭಾಗದಲ್ಲಿ ಸಂಶೋಧಕ ಪ್ರಾಧ್ಯಾಪಕರು. ಹಿರಿಯ ವಿಜ್ಞಾನಿಗಳ ಅಪ್ರತಿಮ ಸಾಧನೆಗಾಗಿ ಜರ್ಮನಿಯ ಹಂಬಾಲ್ಟ್‌ ಪ್ರತಿಷ್ಠಾನ ಕೊಡಮಾಡುವ Humboldt Research Award ಎರಡು ಬಾರಿ ಸಿಕ್ಕಿದೆ. 25ರಾಷ್ಟ್ರಗಳಿಂದ ಇವರಿಗೆ ವಿಜ್ಞಾನದ ಬಹುಮುಖ್ಯ ಪ್ರಶಸ್ತಿಗಳು ಸಂದಿವೆ. 350ಕ್ಕೂ ಹೆಚ್ಚು ವಿಜ್ಞಾನ ಪ್ರಬಂಧಗಳನ್ನು ಇವರು ಮಂಡಿಸಿದ್ದಾರೆ. ಆರಂಭದಲ್ಲಿ ‘ಸಿಲಿಕನ್‌ ಹೈಡ್ರೈಡ್‌’ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಹೊಸ್ಮನೆ ಘನ ನೋದಕಕ್ಕಾಗಿ (ಸಾಲಿಡ್‌ ಪ್ರೊಪೆಲ್ಷನ್‌) ವರ್ಗೀಕೃತ ಸಂಶೋಧನೆ ನಡೆಸಲು (ಅಮೆರಿಕದಲ್ಲಿ) ಬೋರೇನ್‌ ಹೈಡ್ರೇಡ್‌ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದು ಇವರ ಜೀವನದ ಮಹಾನ್‌ ತಿರುವು. ಅಷ್ಟೇ ಅಲ್ಲ, ಮಾರಣಾಂತಿಕ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆಯ ಸಂಶೋಧನೆಯಲ್ಲಿ ತೊಡಗಿದರು. ಹೀಗಾಗಿ ಕ್ಯಾನ್ಸರ್‌ ಸಂಶೋಧನಾ ವಿಜ್ಞಾನಿ ಎಂದೂ ಕರೆಸಿಕೊಂಡರು. ಬೋರಾನ್ ಎಂಬುದು ಅಜೈವಿಕ ಬಿಎಚ್‌ 3 ಎಂಬ ಸೂತ್ರಕ್ಕೆ ಒಳಪಟ್ಟ ಸಂಯುಕ್ತ. ಬಣ್ಣವಿಲ್ಲದ ಅನಿಲ; ಅದು ಶುದ್ಧ ರೂಪದಲ್ಲಿ ಸೇರುವುದಿಲ್ಲ. ಬೋರಾನ್‌ 10 ಗೆ ಒಂದು ನ್ಯೂಟ್ರಾನ್‌ ಸೇರಿದಾಗ ಬಿಎಚ್‌ 11 ಆಗುತ್ತದೆ. ಇದು ಹೊಮ್ಮಿಸುವ ವಿಕಿರಣವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬಳಸಿದಾಗ ಕ್ಯಾನ್ಸರ್‌ ಕೋಶಗಳನ್ನು ಕೊಲ್ಲಬಹುದು. 35 ಮೈಕ್ರೋಗ್ರಾಂನಷ್ಟು ಬೋರಾನ್‌ ಅನ್ನು ಕ್ಯಾನ್ಸರ್‌ ಕೋಶಕ್ಕೆ ಹಾಯಿಸಿದಾಗ ಕೇವಲ ಕ್ಯಾನ್ಸರ್‌ ಕೋಶವನ್ನು ಮಾತ್ರ ಕೊಲ್ಲುತ್ತದೆ. ಆರೋಗ್ಯವಂತ ಕೋಶಕ್ಕೆ ಯಾವುದೇ ಹಾನಿ ಮಾಡದು.ಬೋರಾನ್‌ ರಸಾಯನ ವಿಜ್ಞಾನದಲ್ಲಿ ವಿಶ್ವದಲ್ಲೇ ಅಗ್ರಗಣ್ಯ ವಿಜ್ಞಾನಿ. ಕ್ಯಾನ್ಸರ್‌ ಚಿಕಿತ್ಸೆಗಾಗಿ ಇವರು ಕಂಡು ಹಿಡಿದ ವಿಧಾನಕ್ಕೆ ಬೋರಾನ್‌ ನ್ಯೂಟ್ರನ್‌ ಕ್ಯಾಪ್ಚರ್‌ ಥೆರಪಿ(ಬಿಎನ್‌ಸಿಟಿ) ಎಂದು ಕರೆಯಲಾಗುತ್ತದೆ. ಈ ಸಂಯುಕ್ತಗಳ ಸಂಶ್ಲೇಷಿತಗಳನ್ನು ಕ್ಲಿನಿಕಲ್‌ ಪ್ರಯೋಗದಲ್ಲಿ ಬಳಸಲಾಗುತ್ತಿದೆ.

ಹೊಸ್ಮನೆ ಅವರು ಹೈಸ್ಕೂಲ್‌ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು. ಕನ್ನಡದಲ್ಲಿ ಮಾತನಾಡುವುದು, ವ್ಯವಹರಿಸುವುದು ಎಂದರೆ ಇವರಿಗೆ ಬಲು ಮೆಚ್ಚು. ಗೋಕರ್ಣ, ಕರಾವಳಿ, ಕನ್ನಡ ಎಂದರೇ ಅವರ ಮನಸ್ಸು ಹೂವಿನಂತೆ ಅರಳುತ್ತದೆ. ಇವರಿಗೆ ಇಬ್ಬರು ಮಕ್ಕಳು, ಅಮೆರಿಕದಲ್ಲಿ ಸಂಶೋಧನಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT