ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಚುನಾವಣೆ: ಮೂರು ಸಂದೇಶ: ನಟರಾಜ್ ಹುಳಿಯಾರ್ ಲೇಖನ

ಪ್ರಜಾಪ್ರಭುತ್ವದ ಚಕ್ರ ಹಿಂದಕ್ಕೂ ಮುಂದಕ್ಕೂ ತಿರುಗುತ್ತಿರುವುದನ್ನು ಸೂಚಿಸುವ ಮೂರು ಫಲಿತಾಂಶಗಳು
Last Updated 8 ಡಿಸೆಂಬರ್ 2022, 20:12 IST
ಅಕ್ಷರ ಗಾತ್ರ

ಒಂದು ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆ ರಾಜ್ಯಗಳ ಚುನಾವಣೆಗಳಿಗಿಂತ ಹೆಚ್ಚಿಗೆ ದೇಶದ ಗಮನ ಸೆಳೆದಿದ್ದು ಇದೇ ಮೊದಲ ಸಲವಿರಬೇಕು! ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಕೇಂದ್ರ ಮಂತ್ರಿಗಳ ದಂಡಿನ ಪ್ರಚಾರ, ಧನಬಲ, ಮಾಧ್ಯಮ ಬಲದ‌‌ ನಡುವೆಯೂ ಆಮ್ ಆದ್ಮಿ ಪಕ್ಷವು ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಆಡಳಿತವನ್ನು ಬಿಜೆಪಿಯಿಂದ ಕಸಿದುಕೊಂಡಿದೆ. ಕಾಂಗ್ರೆಸ್ ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದಾಗಲೂ ಕಾರ್ಪೊರೇಷನ್ ಹಿಡಿದುಕೊಂಡಿದ್ದ ಬಿಜೆಪಿ 15 ವರ್ಷಗಳ ನಂತರ ಅಧಿಕಾರ ಕಳೆದುಕೊಂಡಿದೆ.

ಎಎಪಿ ಈ ಚುನಾವಣೆ ಗೆಲ್ಲುವ ಮೂಲಕ, ಕೊಂಚ ತಟ್ಟಾಡುತ್ತಿದ್ದ ಭಾರತೀಯ ಪ್ರಜಾಪ್ರಭುತ್ವಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ: ತಾನು ಎಂಥ ಪ್ರಚಾರವನ್ನಾ
ದರೂ ಎದುರಿಸಬಲ್ಲೆ, ಎಲ್ಲ ಕಿರುಕುಳಗಳನ್ನೂ ಎದುರಾಗ
ಬಲ್ಲೆ ಎಂಬುದನ್ನೂ ತೋರಿಸಿಕೊಟ್ಟಿದೆ. ಹಿಂದೆ ದೆಹಲಿ, ಪಂಜಾಬ್ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನಿಂದ ಅಧಿಕಾರ ಕಸಿದುಕೊಂಡಿದ್ದ ಎಎಪಿ ಈಗ ಬಿಜೆಪಿಯಿಂದಲೂ ಅಧಿಕಾರ ಕಸಿಯಬಲ್ಲೆ ಎಂಬ ಸಂದೇಶವನ್ನೂ ರವಾನಿಸಿದೆ. ದೆಹಲಿ ಸಂದೇಶದಂತೆಯೇ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗಳು ಕೂಡ ಮೂರು ಪಕ್ಷಗಳಿಗೆ ಮೂರು ವಿಭಿನ್ನ ಸಂದೇಶಗಳನ್ನು ಕೊಟ್ಟಿವೆ.

ಗುಜರಾತ್‌ನಲ್ಲಿ ಬಿಜೆಪಿಯನ್ನು ಕದಲಿಸುವುದು ತೀರಾ ಕಷ್ಟ ಹಾಗೂ ಎಎಪಿ ರೀತಿಯ ಅಬ್ಬರದ ಮಾಧ್ಯಮ ಪ್ರಚಾರದಿಂದಾಗಿ ವಿರೋಧಿ ಮತಗಳ ವಿಭಜನೆಯಷ್ಟೇ ಆಗುತ್ತದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಅತ್ತ ಹಿಮಾಚಲದಲ್ಲಿ, ಚುನಾವಣೆ
ಯುದ್ದಕ್ಕೂ ಪ್ರಿಯಾಂಕಾ ಗಾಂಧಿಯಂಥ ಯಾರಾದರೊಬ್ಬ ನಾಯಕಿ, ನಾಯಕ ಸಂಪೂರ್ಣ ಜವಾಬ್ದಾರಿ ಹೊತ್ತು ಕೆಲಸ ಮಾಡಿದರೆ ತಾನೂ ಗೆಲುವಿನ ಹಾದಿಗೆ ಮರಳಬಹುದು ಎಂಬ ಸಂದೇಶ ಕಾಂಗ್ರೆಸ್ಸಿಗೆ ಸಿಕ್ಕಿದೆ. ಪ್ರಧಾನಮಂತ್ರಿಯ ವರ್ಚಸ್ಸನ್ನು ಅತಿಯಾಗಿ ನಂಬಿದರೆ ತನಗೂ ಸೋಲಾಗಬಹುದು ಎಂಬುದು ಹಿಮಾಚಲದಲ್ಲಿ ಬಿಜೆಪಿಗೆ ಮುಟ್ಟಿರುವ ಸಂದೇಶ.

ಈ ಚುನಾವಣಾ ಫಲಿತಾಂಶಗಳ ಮತ್ತೊಂದು ಮಿಂಚಿನ ಪರಿಣಾಮ ವಿರೋಧ ಪಕ್ಷಗಳ ಏಕತೆಯ ಮೇಲೂ ಆಗಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ದಿನವೇ ತೃಣಮೂಲ ಕಾಂಗ್ರೆಸ್ ಹಾಗೂ ಎಎಪಿ ಲೋಕಸಭಾ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಕರೆದಿದ್ದ ‘ಫ್ಲೋರ್ ಕೋ-ಆರ್ಡಿನೇಶನ್ ಸಭೆ’ಗೆ ಇದೇ ಮೊದಲ ಬಾರಿಗೆ ಹಾಜರಾದವು! ‘ಯುನೈಟೆಡ್ ವಿ ಸ್ಟ್ಯಾಂಡ್, ಡಿವೈಡೆಡ್ ವಿ ಫಾಲ್’ (ಒಟ್ಟಾಗಿದ್ದರೆ ಎದ್ದು ನಿಲ್ಲುವೆವು; ಒಡೆದುಹೋದರೆ ಕೆಳಗೆ ಬೀಳುವೆವು) ಎಂಬ ಹಳೆಯ ನಾಣ್ಣುಡಿ ಈಗ ಇವೆರಡೂ ಪಕ್ಷಗಳಿಗೆ ಅರ್ಥವಾದಂತಿದೆ. ಈವರೆಗೆ ವಿರೋಧ ಪಕ್ಷಗಳ ಏಕತೆಯ ವೇದಿಕೆಗಳಿಂದ ದೂರವೇ ಉಳಿದು ಠೇಂಕಾರ ಮಾಡುತ್ತಿದ್ದ ಟಿಎಂಸಿ, ಎಎಪಿಗೆ ಗೋಡೆಯ ಮೇಲಿನ ಬರಹ ನಿಚ್ಚಳವಾಗಿ ಕಂಡಂತಿದೆ.

ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ತಂತ್ರ, ಒಗ್ಗಟ್ಟಿನ ಜೊತೆಗೆ, ಅದು ಪ್ರಧಾನಮಂತ್ರಿ-ಗೃಹಮಂತ್ರಿಗಳ ವೈಯಕ್ತಿಕ ಪ್ರತಿಷ್ಠೆಯ ಚುನಾವಣೆಯೂ ಆಗಿ, ಪಕ್ಷಕ್ಕೆ ಸತತ ಏಳನೆಯ ಗೆಲುವು ದಕ್ಕಿದೆ. ಗೆಲುವಿನ ಹೊಸ ಇತಿಹಾಸ ಸೃಷ್ಟಿಯಾಗಿದೆ. ಆದರೆ ಅದೇ ವೇಳೆಗೆ, ಈ ಚುನಾವಣೆಯಲ್ಲಿ ಎಎಪಿ-ಬಿಜೆಪಿ ನಡುವೆ ಮಾತ್ರ ಹಣಾಹಣಿ ಎಂಬ ರಾಷ್ಟ್ರೀಯ ಮಾಧ್ಯಮಗಳ ಪ್ರಚಾರಕ್ಕೂ ಮತದಾರರು ಬಲಿಯಾದಂತಿದೆ. ಈ ಧ್ರುವೀಕರಣವೇ ನಿಜವೆಂದು ನಂಬಿದ್ದ ಅರವಿಂದ ಕೇಜ್ರಿವಾಲರ ಅತಿ ಆತ್ಮವಿಶ್ವಾಸ ಕೈಕೊಟ್ಟಿದೆ. ಗುಜರಾತಿನಲ್ಲಿ ಅಧಿಕಾರ
ವಿಲ್ಲದೆ ಹತಾಶವಾಗಿರುವ ಕಾಂಗ್ರೆಸ್ಸಿನ ಜಡತೆಗೆ ಮದ್ದೇ ಕಾಣುತ್ತಿಲ್ಲ! ವಿರೋಧಿ ಮತಗಳು ಹಂಚಿಹೋಗದಂತೆ ಮಾಡದಿದ್ದರೆ ಕಾಂಗ್ರೆಸ್ ನೆಲೆ ಮತ್ತಷ್ಟು ಕುಸಿಯಬಹುದು. ಎಎಪಿಯಿಂದಾಗಿ ಕಾಂಗ್ರೆಸ್ ಮತ ಶೇಕಡ 27ಕ್ಕೆ ಇಳಿದಿದೆ; ಆದರೆ ಶೇ 12.9ರಷ್ಟು ಮತಗಳನ್ನು ಪಡೆದ ಎಎಪಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿರುವುದು ಸಣ್ಣ ಸಾಧನೆಯೇನಲ್ಲ. ಆದರೆ ಎಎಪಿ ಬಗೆಗಿನ ಭ್ರಮೆಯಿಂದಾಗಿ ಅಲ್ಪಸಂಖ್ಯಾತರ ಅರ್ಧದಷ್ಟು ಮತಗಳು ಕಾಂಗ್ರೆಸ್ಸಿನಿಂದ ದೂರ ಸರಿದಿರುವ ಸಾಧ್ಯತೆ ಕೂಡ ಕಾಂಗ್ರೆಸ್ ಮತಗಳಿಗೆ ಹೊಡೆತ ಕೊಟ್ಟಿದೆ.

ಹಿಮಾಚಲದ ಗೆಲುವು ಕಾಂಗ್ರೆಸ್ ದೇಶದಾದ್ಯಂತ ಕೊಂಚ ಎದ್ದು ನಿಲ್ಲಲು ನೆರವಾಗಬಹುದು. ಹಿಮಾಚಲದಲ್ಲಿ ಸೇಬು ಬೆಳೆಗಾರರು ಆಡಳಿತ ಪಕ್ಷದ ನೀತಿ ಮತ್ತು ಹೊಸ ಮಾರ್ಕೆಟ್ ದಲ್ಲಾಳಿಗಳ ಬಗ್ಗೆ ಕಳೆದೆರಡು ವರ್ಷಗಳಿಂದ ಕುದಿಯುತ್ತಲೇ ಇದ್ದರು. ಜೊತೆಗೆ ಹಳೆಯ ಪೆನ್ಷನ್ ಯೋಜನೆಯನ್ನು ಮರಳಿ ಜಾರಿಗೆ ತರುವ ಬಗ್ಗೆ ಎರಡು ಲಕ್ಷಕ್ಕೂ ಹೆಚ್ಚು ಇರುವ ಸರ್ಕಾರಿ ನೌಕರರು ಒತ್ತಡ ಹೇರುತ್ತಲೇ ಇದ್ದರು. ಇದಾವುದಕ್ಕೂ ಕಿವಿಗೊಡದೆ, ತಾವೇ ಅಧಿಕಾರಕ್ಕೆ ಬರುತ್ತೇವೆಂಬ ಹಮ್ಮಿನಲ್ಲಿದ್ದ ಬಿಜೆಪಿಯ ಸ್ಥಳೀಯ ನಾಯಕರ ಜಗಳವೂ ಆ ಪಕ್ಷದ ಸೋಲಿಗೆ ಕಾರಣವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಮ್ಮ ತವರು ರಾಜ್ಯದಲ್ಲಿ ಪಕ್ಷವನ್ನು ನಿಯಂತ್ರಣ
ದಲ್ಲಿ ಇಟ್ಟುಕೊಳ್ಳಲು ಮಾಡಿದ ಕಸರತ್ತು ಕೂಡ ಈ ಸೋಲಿಗೆ ಕಾರಣವಾಗಿದೆ. ಹಿಮಾಚಲದಲ್ಲಿ ಒಂದು ಸಲ ಅಧಿಕಾರದಲ್ಲಿದ್ದ ಪಕ್ಷ ಮತ್ತೊಂದು ಸಲ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.

ಈ ಮೂರೂ ಚುನಾವಣೆಗಳನ್ನು ಮತದಾರರ ದೃಷ್ಟಿಯಿಂದ ನೋಡಿದರೆ, ದೆಹಲಿ, ಹಿಮಾಚಲದಲ್ಲಿಮತದಾರರು ತಂತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಮರುಯೋಚಿಸಿ, ಹಳೆಯ ಆಯ್ಕೆಗಳನ್ನು ಬದಲಿಸುತ್ತಿರುವ ರೀತಿ ಸ್ಪಷ್ಟವಾಗಿದೆ. ಆದರೆ ಗುಜರಾತಿನಲ್ಲಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದಾಗಿ 135 ಜನ ಸತ್ತ ಮೊರ್ಬಿ ಸೇತುವೆಯ ಭೀಕರ ದುರಂತ ಮೊನ್ನೆ ತಾನೇ ನಡೆದಿದ್ದರೂ, ಮೊರ್ಬಿ ಕ್ಷೇತ್ರದ ಮತದಾರರು ಆ ಸಿಟ್ಟನ್ನು ಮತಗಳ ಮೂಲಕ ವ್ಯಕ್ತಪಡಿಸದೇ ಹೋಗಿರುವುದು ಅವರ ಜಡತ್ವಕ್ಕೆ ಸಾಕ್ಷಿಯಂತಿದೆ.

ಭಾರತದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಈ ಚುನಾವಣಾ ಫಲಿತಾಂಶಗಳು ಸಣ್ಣ ಮಟ್ಟದಲ್ಲಾದರೂ ಹೊಸ ಸಾಧ್ಯತೆಯನ್ನು ತೆರೆದಿಟ್ಟಿವೆ. ಭಾರತದಲ್ಲಿ ಇನ್ನು ಮುಂದೆ ಬರಲಿರುವ ಚುನಾವಣೆಗಳು ಏಕಮುಖವಾಗಿಇರುವುದಿಲ್ಲ ಎಂಬುದರ ಮುನ್ಸೂಚನೆಗಳೂ ಇಲ್ಲಿ ಕಾಣುತ್ತಿವೆ. ರಾಜಕೀಯ ಪಕ್ಷಗಳ ಶಕ್ತಿ, ತಂತ್ರಗಳೇನೇ ಇರಲಿ, ಆತ್ಮಸಾಕ್ಷಿಯಿರುವ ಮಾಧ್ಯಮಗಳು ಎಲ್ಲ ಪಕ್ಷಗಳಿಗೂ ಸರಿಸಮಾನವಾದ ಅಖಾಡವನ್ನು ಸೃಷ್ಟಿಸಿದಾಗ ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಬಲ್ಲದು. ಯಾವುದೇ ಪಕ್ಷದ ಅಥವಾ ವ್ಯಕ್ತಿಯ ಸರ್ವಾಧಿಕಾರವನ್ನು ತಂತಮ್ಮ ಹಿತಾಸಕ್ತಿಗಳಿಗಾಗಿ ಬೆಂಬಲಿಸುವ ಮಾಧ್ಯಮಗಳ ಹುನ್ನಾರವನ್ನು ಮತದಾರರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗಂಭೀರವಾಗಿ ಅರಿತು ಅದನ್ನು ಎದುರಿಸಲೇಬೇಕಾಗಿದೆ; ಇಲ್ಲದಿದ್ದರೆ ಈಗಾಗಲೇ
ಪ್ರಹಸನವಾಗಿರುವ ಪ್ರಜಾಪ್ರಭುತ್ವ ನಗೆಪಾಟಲಿಗೀಡಾಗುತ್ತದೆ. ಹೆಚ್ಚೆಚ್ಚು ಆಯ್ಕೆಗಳಿರುವುದೇ ಪ್ರಜಾಪ್ರಭುತ್ವವಾದಿ ರಾಜಕಾರಣದ ಮುಖ್ಯ ಲಕ್ಷಣ. ಅಂಥ ಆಯ್ಕೆಗಳೇ ಇಲ್ಲವಾದರೆ ಸರ್ವಾಧಿಕಾರಿ ವ್ಯವಸ್ಥೆ ಕಾಯಂ ಆಗುತ್ತದೆ.

ದೆಹಲಿಯಲ್ಲಿ ಹೇಳಹೆಸರಿಲ್ಲದಂತಾದರೂ, ಉಳಿದ ಎರಡು ರಾಜ್ಯಗಳಲ್ಲಿ ಒಂದನ್ನಾದರೂ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಗೆಲುವು ಹೊಸ ಜೀವ ತುಂಬಲೂಬಹುದು. ಹಿಂದೆ ಗೆದ್ದಿದ್ದ ಎರಡು ರಾಜ್ಯಗಳನ್ನು ಪಕ್ಷಾಂತರದ ದ್ರೋಹದಿಂದಾಗಿ ಕಳೆದುಕೊಂಡಿರುವ ಕಾಂಗ್ರೆಸ್
ಹಿಮಾಚಲದಲ್ಲಾದರೂ ಅಚಲವಾಗಿ ಉಳಿಯಬಹುದೆಂದು ನಿರೀಕ್ಷಿಸೋಣ! ಜೊತೆಗೆ, ಆಡಳಿತವಿರೋಧಿ ಅಲೆಯನ್ನು ನಿಖರವಾಗಿ ಅಂದಾಜು ಮಾಡುವ, ಅದನ್ನು ತಕ್ಕ ದಿಕ್ಕಿಗೆ ಕೊಂಡೊಯ್ಯುವ ಕಲೆಯನ್ನು ಕೂಡ ರಾಜಕೀಯ ಪಕ್ಷಗಳು ಕಲಿಯಬಲ್ಲವೆಂದು ಊಹಿಸೋಣ.

ಈ ಫಲಿತಾಂಶ ಕಂಡ ಮೇಲಾದರೂ, ಕರ್ನಾಟಕದಲ್ಲಿ ಅಧಿಕಾರದ ವಾಸನೆ ಸಿಕ್ಕ ತಕ್ಷಣ, ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಪಕ್ಷದ ಒಳಗೂ, ಮಾಧ್ಯಮಗಳಲ್ಲೂ ಅನಗತ್ಯ ಗುಲ್ಲೆಬ್ಬಿಸುತ್ತಿರುವ ಕಾಂಗ್ರೆಸ್ ತನ್ನ ಸಾಧ್ಯತೆಗಳ ಬಗ್ಗೆ ವಾಸ್ತವ ಪ್ರಜ್ಞೆ ಬೆಳೆಸಿಕೊಳ್ಳದಿದ್ದರೆ, ಆತ್ಮಹತ್ಯೆಯ ಹಾದಿಯಲ್ಲಿರುತ್ತದೆ.

ಇತ್ತ ಪ್ರಮುಖ ಸಾಮಾಜಿಕ- ಆರ್ಥಿಕ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನೇ ಕೈಬಿಟ್ಟು, ಗುಪ್ತ ಅಜೆಂಡಾದ ಚಾಲ್ತಿಗೆ ಟೊಂಕ ಕಟ್ಟಿ ನಿಂತಿರುವ ಕರ್ನಾಟಕದ ಮಂತ್ರಿಗಳು ಚಿಲ್ಲರೆ ಸಾಂಸ್ಕೃತಿಕ ಸಮಸ್ಯೆಗಳನ್ನು ಹುಟ್ಟು ಹಾಕುವ ಕೆಟ್ಟ ಚಾಳಿ ಕೈಬಿಟ್ಟು, ಜನರಿಗಾಗಿ ಕೆಲಸ ಮಾಡುವುದನ್ನು ಕಲಿಯಲಿ. ಗುಜರಾತಿನಲ್ಲಿ ಯಥಾಸ್ಥಿತಿಗೆ ಮತ ಹಾಕಿರುವ ಮತದಾರರು ಉಳಿದೆಡೆ ಬದಲಾವಣೆಯತ್ತ ಹಾತೊರೆಯುತ್ತಿದ್ದಾರೆ ಎಂಬುದನ್ನು ದೆಹಲಿ ಮತ್ತು ಹಿಮಾಚಲ ದನಿಯೆತ್ತಿ ಸಾರಿವೆ. ಈ ದನಿಗಳನ್ನುಅಧಿಕಾರದ ಹಮ್ಮಿನಲ್ಲಿರುವವರೂ ಸೋತು ನಿರಾಶ
ರಾಗಿರುವವರೂ ಸರಿಯಾಗಿ ಕೇಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT