ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಂತ್ರಸ್ತೆಯರ ಸ್ಥಿತಿ ಮತ್ತು ವಿಕೃತ ಮನಃಸ್ಥಿತಿ

ಪೆನ್‌ಡ್ರೈವ್‌ ಕಂಡಕಂಡವರಿಗೆ ತಲುಪಲು ಕಾರಣರಾದವರಲ್ಲಿ ಸಂವೇದನಾಶೀಲತೆಯ ಕೊರತೆ ಎದ್ದು ಕಾಣುತ್ತದೆ
Published 7 ಮೇ 2024, 0:26 IST
Last Updated 7 ಮೇ 2024, 0:26 IST
ಅಕ್ಷರ ಗಾತ್ರ

ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ದೃಶ್ಯಗಳನ್ನುಳ್ಳ ವಿಡಿಯೊ ಪ್ರಕರಣವು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ನಾಡಿನ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಅಂತೆಯೇ ಕಾನೂನಾತ್ಮಕವಾಗಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ವಿಚಾರಗಳು ಸಾರ್ವಜನಿಕರಲ್ಲಿ ಆಕ್ರೋಶ ಉಕ್ಕಿಸುವುದು ಸಹಜ. ಆದರೆ, ಅದರಲ್ಲಿ ಮಹಿಳೆಯರ ಘನತೆ ಹಾಗೂ ಖಾಸಗಿತನದ ಹಕ್ಕು ಕೊಚ್ಚಿಹೋಗಬಾರದಲ್ಲವೇ?

ಈ ಪ್ರಕರಣದಲ್ಲಿ ಕೆಲವರು ನಡೆದುಕೊಂಡಿರುವ ಹಾಗೂ ನಡೆದುಕೊಳ್ಳುತ್ತಿರುವ ರೀತಿ, ಈ ನೆಲದ ಕಾನೂನು
ಬರೀ ಹೊಗೆಯ ನೆರಳಿನ ರೀತಿಯಲ್ಲಿ ಭಾಸವಾಗುವಂತೆ ಮಾಡಿರುವುದು ಕಣ್ಣಿಗೆ ರಾಚುತ್ತಿದೆ. ಸರ್ಕಾರವು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿರುವುದು ಸಕಾಲಿಕ ನಿರ್ಧಾರ. ವಿಸ್ತೃತ ತನಿಖೆ ಆಗಿ ಸತ್ಯಾಂಶ ಹೊರಬೀಳುವವರೆಗೂ ಸಂಯಮ ಕಾಯ್ದುಕೊಳ್ಳಬೇಕಾದುದು ಸಾಮಾಜಿಕವಾಗಿ ಪ್ರತಿಯೊಬ್ಬರ ಕರ್ತವ್ಯ. ನಮ್ಮ ಸಂವಿಧಾನದ 21ನೇ ವಿಧಿಯು ಜೀವಿಸುವ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಅದರ ಅನ್ವಯ, ಐಪಿಸಿಯ ಸೆಕ್ಷನ್‌ 228ಎ ಅನ್ನು 1983ರಲ್ಲಿ ಅಳವಡಿಸಿಕೊಳ್ಳಲಾಯಿತು. ಈ ಸೆಕ್ಷನ್‌ ಪ್ರಕಾರ, ಒಬ್ಬ ಮಹಿಳೆಯ ವಿರುದ್ಧ ಗುಪ್ತವಾಗಿ ಅಪರಾಧ ಎಸಗುವವನು ಅಥವಾ ಆ ಅಪರಾಧಿಯ ಮಾತು ಕೇಳುವವನು, ಸಾಮಾನ್ಯವಾಗಿ ಆ ಕೃತ್ಯವನ್ನು ಯಾರೂ ನೋಡುತ್ತಿಲ್ಲವೆಂದು ಭಾವಿಸಿರುವ ಆ ಮಹಿಳೆಯನ್ನು ಗಮನಿಸುತ್ತಿರುವವನು, ಕೃತ್ಯದ ಛಾಯಾ ಚಿತ್ರ ತೆಗೆಯುವವನು, ಅದನ್ನು ಪ್ರಸಾರ ಮಾಡುವವನು ಎಲ್ಲರೂ ಅಪರಾಧ ಎಸಗಿದಂತೆಯೇ ಆಗುತ್ತದೆ.

ಅಷ್ಟೇಅಲ್ಲದೆ, ಸಂತ್ರಸ್ತೆಯು ತನ್ನ ಛಾಯಾಚಿತ್ರ ತೆಗೆಯಲು ಅಥವಾ ತನಗೆ ಸಂಬಂಧಿಸಿದ ಯಾವುದೇ ಕೃತ್ಯವನ್ನು ಸೆರೆಹಿಡಿಯಲು ಸಮ್ಮತಿಸಿದ್ದರೂ ಅವುಗಳನ್ನು ಪ್ರಸರಣ ಮಾಡಲು ಒಪ್ಪಿಗೆ ಕೊಟ್ಟಿರದೇ ಇರಬಹುದು. ಆಗ ಅದನ್ನು ಪ್ರಸರಣ ಮಾಡಿದಾಗಲೂ ಅದು ಶಿಕ್ಷಾರ್ಹ ಅಪರಾಧವೇ ಆಗುತ್ತದೆ. ಮಹಿಳೆಯೊಬ್ಬಳು ಗುಪ್ತ ಲೈಂಗಿಕ ಕ್ರಿಯೆಯಲ್ಲಿ ಪ್ರಜ್ಞಾಪೂರ್ವಕ ಸಮ್ಮತಿಯಿಂದ ಭಾಗವಹಿಸಿದ್ದರೂ ಆಕೆಯ ಭಾವಚಿತ್ರವನ್ನಾಗಲೀ ವಿಡಿಯೊವನ್ನಾಗಲೀ ಪ್ರಸರಣ ಮಾಡುವಂತಿಲ್ಲ.

ಈ ಕುರಿತಂತೆ ಆರ್.ರಾಜಗೋಪಾಲ್ ವರ್ಸಸ್ ಸ್ಟೇಟ್ ಆಫ್ ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಗೋಪ್ಯತೆಯ ಹಕ್ಕುಗಳ ಬಗ್ಗೆ ನಿರ್ಧರಿಸುತ್ತಾ, ‘ಸಂವಿಧಾನದ 21ನೇ ವಿಧಿಯು ಈ ದೇಶದ ನಾಗರಿಕರಿಗೆ ಗೋಪ್ಯತೆಯ ಹಕ್ಕನ್ನು ಖಾತರಿಪಡಿಸುತ್ತದೆ. ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನಲ್ಲಿ ಅದು ಅಡಗಿದೆ’ ಎಂದು ವಿವರಿಸಿದೆ.

ಒಬ್ಬ ನಾಗರಿಕ ತನ್ನ ಮತ್ತು ತನ್ನ ಕುಟುಂಬದ ಬಗ್ಗೆ, ಮದುವೆ, ಸಂತಾನ, ತಾಯ್ತನ, ಮಗುವನ್ನು ಹಡೆಯುವುದು, ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಜೊತೆಗೆ ಇತರ ವಿಷಯಗಳ ಬಗ್ಗೆ ಗೋಪ್ಯತೆಯನ್ನು ಕಾಯ್ದುಕೊಳ್ಳುವ ಹಕ್ಕನ್ನು ಉಳ್ಳವನಾಗಿರುತ್ತಾನೆ. ಈ ವಿಷಯಗಳ ಬಗ್ಗೆ ಆತನ ಒಪ್ಪಿಗೆಯಿಲ್ಲದೆ ಯಾರೂ ಏನನ್ನೂ ಪ್ರಕಟಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದು ಆ ವ್ಯಕ್ತಿಯ ಗೋಪ್ಯತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಹಾಗೂ ಅದರಿಂದ ಉಂಟಾಗುವ ಹಾನಿಗಳಿಗೆ ಅದನ್ನು ಪ್ರಕಟಿಸಿದಾತನೇ ಜವಾಬ್ದಾರನಾಗುತ್ತಾನೆ.

‘ಒಂದು ವೇಳೆ ಯಾವುದೇ ಪ್ರಕಟಿತ ವಿಷಯವು ಸಾರ್ವಜನಿಕ ದಾಖಲೆ ಅಥವಾ ನ್ಯಾಯಾಲಯದ ದಾಖಲೆಗಳಿಗೆ ಸಂಬಂಧಪಟ್ಟಿದ್ದರೆ ಗೋಪ್ಯತೆಯ ಉಲ್ಲಂಘನೆಯಾಗುವುದಿಲ್ಲ ಹಾಗೂ ಪತ್ರಿಕೋದ್ಯಮ ಅಥವಾ ಇತರ ಯಾವುದೇ ಮಾಧ್ಯಮದವರು ಗೋಪ್ಯತೆಯ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ’ ಎಂಬ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಸಭ್ಯತೆಯ ಹಿತಾಸಕ್ತಿಗೆ ಸಂಬಂಧಿಸಿದಂತೆ 19(2)ನೇ ವಿಧಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ; ‘ಲೈಂಗಿಕ ದೌರ್ಜನ್ಯ, ಅಪಹರಣ ಅಥವಾ ಅಂತಹ ಅಪರಾಧಕ್ಕೆ ಗುರಿಯಾದ ಮಹಿಳೆಯ ಹೆಸರನ್ನಾಗಲೀ ಪ್ರಕರಣವನ್ನಾಗಲೀ ಯಾವುದೇ ಮಾಧ್ಯಮದಲ್ಲಿ ಪ್ರಚಾರ ಅಥವಾ ಪ್ರಸಾರ ಮಾಡಬಾರದು’ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದೆ.

ದುರಂತವೆಂದರೆ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿನ ವಿಡಿಯೊಗಳು ಈವರೆಗೂ ಯಾರ ಸುಪರ್ದಿಯಲ್ಲಿ ಇದ್ದವೋ ಆ ವ್ಯಕ್ತಿ ತನ್ನ ಬಳಿ ಇದ್ದ ವಿಡಿಯೊವನ್ನು ಪೊಲೀಸರಿಗೆ ನೀಡದೆ ಬೇರೆಯವರಿಗೆ ದೊರಕುವಂತೆ ಮಾಡಿದ್ದು ಮತ್ತು ಈ ವಿಡಿಯೊ ದೃಶ್ಯಗಳ ಸರಣಿಯನ್ನು ಒಳಗೊಂಡ ಪೆನ್‌ಡ್ರೈವ್‌ಗಳು ರಾಜಾರೋಷವಾಗಿ ಎಲ್ಲೆಂದರಲ್ಲಿ ಜನರ ಕೈಗೆ ಸಿಕ್ಕಿರುವುದರ ಪರಿಣಾಮ ಅನೂಹ್ಯವಾಗಿದೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುವಂತಾಗಿದ್ದು, ಇದು ವಿಡಿಯೊದಲ್ಲಿ ಇರಬಹುದಾದ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯುಂಟಾಗಲು ಕಾರಣವಾಗಿದೆ. ಗೋಪ್ಯವಾಗಿ ಇರಬೇಕಾದ ಸಂತ್ರಸ್ತೆಯರ ವಿಷಯವನ್ನು ಹಾದಿಬೀದಿಯಲ್ಲಿ ಹರಾಜು ಹಾಕುತ್ತಾ, ಜೋರಾಗಿ ಚರ್ಚೆ ಮಾಡುತ್ತಾ, ಬಾಯಿಚಪಲ ತೀರಿಸಿಕೊಳ್ಳುತ್ತಿರುವ ಜನರ ವಿಕೃತ ಮನಃಸ್ಥಿತಿಯೂ ಈಗ ಅನಾವರಣಗೊಂಡಿದೆ.

ವಿಡಿಯೊದಲ್ಲಿರುವ ಮಹಿಳೆಯರ ಗುರುತು ಬಹಿರಂಗ ಆಗುವಂತೆ ಮಾಡಿರುವುದು ಮಹಿಳೆಯರ ಘನತೆ ಹಾಗೂ ಖಾಸಗಿತನದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೂ ಸಮಾಜಕ್ಕೆ ಹೆದರಿ ಸುಮ್ಮನಿದ್ದ ಮಹಿಳೆಯರ ಗುರುತು ಈಗ ಬಹಿರಂಗವಾಗಿರುವುದರಿಂದ, ಆ ನೊಂದ ಮಹಿಳೆಯರು ತಮ್ಮ ಯಾತನೆ ಅಥವಾ ಮಾನಸಿಕ ತುಮುಲದ ತೀವ್ರತೆಯನ್ನು ಮತ್ತೊಮ್ಮೆ ಅನುಭವಿಸುವಂತೆ ಆಗಿದೆ. ತಮ್ಮ ತಪ್ಪಿಲ್ಲದಿದ್ದರೂ ಎಲ್ಲರ ಮುಂದೆ ತಲೆತಗ್ಗಿಸಿ ನಿಲ್ಲುವಂತಹ ಪರಿಸ್ಥಿತಿಗೆ ಅವರು ದೂಡಲ್ಪಟ್ಟಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆ ಮಾತ್ರ ಅವಮಾನಕ್ಕೆ ಗುರಿಯಾಗುವುದಿಲ್ಲ, ಆಕೆಯ ಕುಟುಂಬದವರೂ ಅದೇ ಪ್ರಮಾಣದಲ್ಲಿ ನೋವನ್ನು ಅನುಭವಿಸುತ್ತಾರೆ. ಪುರುಷನೊಬ್ಬನ ಆಕರ್ಷಣೆಗೆ ಒಳಗಾಗುವುದು, ಬಲವಂತ, ಅಧಿಕಾರದ ದರ್ಪ, ಆಮಿಷಕ್ಕೆ ಬಲಿಯಾದ ಸಂತ್ರಸ್ತೆಯಾಗಿ ಅನುಭವಿಸುವ ಯಾತನೆ ಅವಳಿಗೆ, ಅವಳ ಕುಟುಂಬಕ್ಕೆ ಮಾತ್ರ ತಿಳಿದಿರುತ್ತದೆ. ವಿಡಿಯೊ ಸಂಸದನಿಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಆತನನ್ನು ಗುರಿಯಾಗಿಸಿಕೊಂಡು ಅದನ್ನು ಹರಿಯಬಿಟ್ಟಿದ್ದರೂ ಅದರಿಂದ ಅಪಾರ ಅವಮಾನ, ತೀವ್ರ ಯಾತನೆ ಅನುಭವಿಸುವವರು ಅದರಲ್ಲಿ ಕಂಡುಬರುವ ಮಹಿಳೆಯರು. ಪೆನ್‌ಡ್ರೈವ್‌ಗಳು ಕಂಡಕಂಡವರಿಗೆ ತಲುಪಲು ಕಾರಣರಾದವರಲ್ಲಿ ಇದರ ಕನಿಷ್ಠ ಅರಿವೂ ಇಲ್ಲವಾಗಿದೆ.

ಇಂತಹ ಪ್ರಕರಣಗಳಲ್ಲಿ, ಮಹಿಳೆಯರು ತಾವು ಎದುರಿಸಿದ ದೌರ್ಜನ್ಯದಿಂದ ಆಘಾತಕ್ಕೆ ಒಳಗಾಗುತ್ತಾರೆ, ಅವರ ಮಾನಸಿಕ ಸ್ಥೈರ್ಯ ಕುಂದುತ್ತದೆ. ಸಮಾಜವನ್ನು ಎದುರಿಸಲಾಗದೆ, ತಮ್ಮನ್ನು ತಾವೇ ಎಲ್ಲಕ್ಕೂ ಹೊಣೆಗಾರರನ್ನಾಗಿ ಮಾಡಿಕೊಂಡು ದುಃಖಿಸುತ್ತಾರೆ. ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಮಹಿಳೆಯರ ಹೆಸರು, ಚಹರೆ ಅಥವಾ ವಿವರಗಳು ಬಹಿರಂಗಗೊಂಡರೆ, ಇನ್ನಿಲ್ಲದಂತೆ ಕುಗ್ಗಿಹೋಗಿ ಬಲಹೀನರಾಗುತ್ತಾರೆ. ಇದನ್ನು ತಡೆಯುವುದೇ ನಮ್ಮ ಕಾನೂನು ರಚನೆಕಾರರ ಮುಖ್ಯ ಉದ್ದೇಶ ಹಾಗೂ ಎಲ್ಲ ನಾಗರಿಕರ ಜವಾಬ್ದಾರಿ.

ಹಾಲಿ ಪ್ರಕರಣದಲ್ಲಿ ಸಾಮಾಜಿಕ ಹೊಣೆಗಾರಿಕೆಯ ಕಡೆಗೆ ಗಮನಕೊಡದೆ, ವಿಡಿಯೊಗಳಲ್ಲಿರುವ ಮಹಿಳೆ
ಯರು ಹಾಗೂ ಅವರ ಕುಟುಂಬದವರ ಮೇಲೆ ಆಗಬಹುದಾದ ದುಷ್ಪರಿಣಾಮದ ಬಗ್ಗೆ ಆಲೋಚಿಸದೆ
ಬೇಜವಾಬ್ದಾರಿತನ ಮೆರೆದಿರುವವರು ಐಪಿಸಿಯ ಸೆಕ್ಷನ್ 354ಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ, 67, 67ಎ ಅಡಿಯಲ್ಲಿ ಶಿಕ್ಷಾರ್ಹರಾಗುತ್ತಾರೆ. ಸಂತ್ರಸ್ತೆಯ ನೋವಿಗೆ ದನಿಯಾಗಬೇಕಿದ್ದ ನಮ್ಮ ಸಮಾಜ ಇಂತಹುದೊಂದು ಪ್ರಕರಣವನ್ನು ಚರ್ಚೆಯ ವಿಷಯವಾಗಿಸಿರುವುದು, ರಾಜಕೀಯ ಪಕ್ಷಗಳು ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು, ರಾಜಕಾರಣವೂ ಸಮಾಜದ ಸೃಷ್ಟಿ ಎಂಬ ಮಾತನ್ನು ಧ್ವನಿಸುವಂತಾಗಿದೆ.

ಖಾಸಗಿತನದ ಹಕ್ಕಿಗೆ ಸಂಬಂಧಿಸಿದಂತೆ ಕೆ.ಎಸ್.ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ, ‘ಒಬ್ಬ ವ್ಯಕ್ತಿಯ ಮಾನಕ್ಕೆ ಧಕ್ಕೆಯಾಗುವಂತಹ ವಿಷಯಗಳು ಗಾಳಿಗಿಂತ ವೇಗವಾಗಿ ಹರಡುತ್ತವೆ. ಜನರು ಈ ವಿಷಯದ ಬಗ್ಗೆ ಕೆಲವು ದಿನಗಳ ಕಾಲ ಚರ್ಚಿಸಿ, ಮತ್ತೊಂದು ಸುದ್ದಿ ಸಿಕ್ಕಾಗ ಚರ್ಚೆಯನ್ನು ನಿಲ್ಲಿಸಲೂಬಹುದು. ಆದರೆ, ಅಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೊ, ಅದರಲ್ಲಿನ ಸಂತ್ರಸ್ತರಿಗೆ ಆ ಕರಾಳ ದಿನದ ನೆನಪು ಪದೇಪದೇ ಕಾಡುವಂತೆ ಮಾಡುತ್ತದೆ’ ಎಂಬ ಅಂಶವನ್ನು ಒತ್ತಿ ಹೇಳಿದೆ.

ಇಷ್ಟೆಲ್ಲಾ ಗಂಭೀರ ಪರಿಣಾಮಗಳನ್ನು ಉಂಟು ಮಾಡುವ ಸೂಕ್ಷ್ಮ ವಿಷಯದ ಕುರಿತು ಕಿಂಚಿತ್ತೂ ಯೋಚಿ
ಸದೆ ವಿಡಿಯೊಗಳನ್ನು ತೇಲಿಬಿಟ್ಟಿರುವುದು ಅನಾಗರಿಕ ನಡೆ ಮತ್ತು ಬೇಜವಾಬ್ದಾರಿತನದ ಪರಮಾವಧಿ.

ಲೇಖಕ: ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT