ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ನಾಗರಿಕತೆಯ ಮರುಸ್ಥಾಪನೆ

–ಸದ್ಗುರು ಜಗ್ಗಿ ವಾಸುದೇವ್‌
Published 20 ಜನವರಿ 2024, 21:54 IST
Last Updated 21 ಜನವರಿ 2024, 22:46 IST
ಅಕ್ಷರ ಗಾತ್ರ

ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಇದೀಗ ರಾಷ್ಟ್ರದಲ್ಲಿ ಸಾಕಷ್ಟು ಉತ್ಸಾಹ ಮನೆ ಮಾಡಿದೆ. ಏಕೆಂದರೆ ಇದು 500 ವರ್ಷಗಳ ಮಹತ್ವಾಕಾಂಕ್ಷೆ. ಇದಕ್ಕೆ ಕೇವಲ ಸುದ್ದಿ ವಾಹಿನಿಗಳನ್ನು ನೋಡುವ ಬಹುತೇಕ ಜನರಿಗೆ ಅರ್ಥವಾಗದ ಸಾಕಷ್ಟು ಸಂಕೀರ್ಣವಾದ ಇತಿಹಾಸವಿದೆ. ರಾಮ‌ ಮಂದಿರ ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಅನೇಕ ವಿಧಗಳಲ್ಲಿ, ಕನಿಷ್ಠಪಕ್ಷ ಉತ್ತರ ಭಾರತದಲ್ಲಿ ರಾಮ ಅವರ ಜೀವಾಳವಾಗಿದ್ದಾನೆ. ಹಾಗಾಗಿ ಇದು ಕೇವಲ ಮತ್ತೊಂದು ದೇವಸ್ಥಾನವಲ್ಲ. ರಾಮ ಮತ್ತು ರಾಮಾಯಣವು ಭಾರತೀಯ ನೈತಿಕತೆಯ ಒಂದು ಭಾಗವಾಗಿದೆ, ಇದು ಹೇಗೆಂದರೆ ಹಾನಿಗೊಳಗಾದ ರಾಷ್ಟ್ರದ ಸ್ಫೂರ್ತಿಯ ಪುನರುತ್ಥಾನದಂತೆ. ಆದರೆ ರಾಮ, ಈಗ ಏಕೆ?

ಇತಿಹಾಸದಲ್ಲಿ, ನಮ್ಮ‌ ನೆನಪಿನಲ್ಲಿ ಉಳಿಯುವ ವ್ಯಕ್ತಿಗಳು ಎಂದರೆ, ದೊಡ್ಡ ರೀತಿಯಲ್ಲಿ ಒಳಸಂಚಿಗೆ ಒಳಗಾದವರು ಮತ್ತು ದೊಡ್ಡ ದುರಂತಗಳನ್ನು ಮೆಟ್ಟಿ ನಿಂತವರು, ಅಥವಾ ಜನರು ತಮ್ಮ ಮಿತಿಗಳನ್ನು ಮೀರಿ ಬೆಳೆಯಲು ಪ್ರೇರೇಪಿಸಿದವರು. ಸರಿಸುಮಾರು 7000 ವರ್ಷಗಳ ನಂತರವೂ, ರಾಮನು ಸಾವಿರಾರು ತಲೆಮಾರುಗಳವರೆಗೆ ಜನರನ್ನು ಧರ್ಮ, ಸತ್ಯ ಮತ್ತು ಪರಸ್ಪರ ಸಹಾನುಭೂತಿಯ ಕಡೆಗೆ ಪ್ರೇರೇಪಿಸಿದ ಕಾರಣ ಸ್ಮರಿಸಲ್ಪಡುತ್ತಾನೆ.

ಹಾಗಾಗಿ, ಒಬ್ಬ ವ್ಯಕ್ತಿಯು ಹೇಗೆ ಸ್ಫೂರ್ತಿಯಾಗುತ್ತಾನೆ? ನೀವು ರಾಮನ ಜೀವನಗಾಥೆಯನ್ನು ನೋಡಿದರೆ - ಎಲ್ಲರಿಗೂ ರಾಮಾಯಣ ಗೊತ್ತಿದೆ, ಪೂರ್ತಿ ಕಥೆ ಗೊತ್ತಿಲ್ಲದಿದ್ದರೂ ಕನಿಷ್ಠಪಕ್ಷ ಮುಖ್ಯ ಘಟನೆಗಳ ಬಗ್ಗೆ ಅರಿವಿದೆ. ನೀವು ಮುಖ್ಯ ಘಟನೆಗಳನ್ನು ನೋಡಿದರೆ, ರಾಮನ ಜೀವನವು ಒಂದು ಸರಣಿ ದುರಂತವಾಗಿದೆ. ತನ್ನ ರಾಜ್ಯವನ್ನು ಕಳೆದುಕೊಳ್ಳುವುದರಿಂದ ಹಿಡಿದು ಹೆಂಡತಿಯನ್ನು ಕಳೆದುಕೊಳ್ಳುವವರೆಗೆ, ತನ್ನ ಹೆಂಡತಿಯನ್ನು ಮತ್ತೆ ಕಾಡಿಗೆ ಕಳುಹಿಸುವವರೆಗೆ, ಅವನ ಮಕ್ಕಳನ್ನು ನೋಡದೇ, ನಂತರ ಅವರು ಯಾರೆಂದು ತಿಳಿಯದೇ ಅವರನ್ನು ಯುದ್ಧಭೂಮಿಯಲ್ಲಿ ಕೊಲ್ಲಲು ಪ್ರಯತ್ನಿಸುವವರೆಗೆ, ಅದೊಂದು ಭಯಾನಕ ಜೀವನ. ಹೀಗಿದ್ದರೂ ಅವನ ಬಗ್ಗೆ ಏಕೆ ಇಷ್ಟೊಂದು ಉತ್ಸಾಹ?

ಏಕೆಂದರೆ ಅವನ ಜೀವನದಲ್ಲಿ ಇಷ್ಟೆಲ್ಲಾ ಸರಣಿ ದುರಂತಗಳು ಸಂಭವಿಸಿದರೂ ಅವನು ವಿಚಲಿತನಾಗಲಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ತನ್ನೊಳಗೆ ತಳಮಳ, ಕೋಪ ಅಥವಾ ದ್ವೇಷಗಳು ಮನೆಮಾಡಲು ದಾರಿಮಾಡಿಕೊಡಲಿಲ್ಲ ಮತ್ತು ಅಗತ್ಯವಿರುವುದನ್ನು ಮಾಡಿದ. ಅವನು ಶ್ರೀಲಂಕಾದಲ್ಲಿ ಯುದ್ಧವನ್ನು ಮುಗಿಸಿದ ನಂತರ, ಯುದ್ಧದ ಪಾಪಕ್ಕಾಗಿ ಮತ್ತು ಅದರಲ್ಲಾದ ಜೀವಹಾನಿಗಾಗಿ, ಪ್ರಾಯಶ್ಚಿತ್ತ ಮಾಡಲು ಬಯಸಿದ. ಯುದ್ಧವು ಯೋಗ್ಯವಾದದ್ದು ಎಂದು ಅವನು ಭಾವಿಸಿದ್ದರೂ, ರಕ್ತವನ್ನು ಸುರಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ - ವಿಶೇಷವಾಗಿ ರಾವಣನ ವಧೆಯಿಂದಾಗಿ, ಏಕೆಂದರೆ ಅವನು ಶಿವನ ಮಹಾನ್ ಭಕ್ತನಾಗಿದ್ದ.

ನಮ್ಮದು ಮುಕ್ತಿಯನ್ನು ಅತ್ಯುನ್ನತ ಮೌಲ್ಯವೆಂದು ಪರಿಗಣಿಸುವ ನಾಗರಿಕತೆಯಾಗಿದೆ. ಅಂದರೆ ನೀವು ಬದುಕಿರುವಾಗಲೇ ಎಲ್ಲದರಿಂದ ಮುಕ್ತರಾಗಿದ್ದೀರಿ. ನೀವು ಯಾವುದರಿಂದಲೂ ಹಿಂದೆ ಸರಿದಿಲ್ಲ; ಎಲ್ಲದರಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದೀರಿ ಆದರೂ ಮುಕ್ತರಾಗಿದ್ದೀರಿ. ನೀವು ರಕ್ಷಣೆಯ ಕೂಪದಲ್ಲಿಲ್ಲ. ಅವನು ಜಗತ್ತಿನಲ್ಲಿ ಸಕ್ರಿಯನಾಗಿದ್ದ, ಶತ್ರುವಿನ ಬಗ್ಗೆ ತಳಮಳ, ಕೋಪ, ದ್ವೇಷಗಳಿಲ್ಲದೇ, ಯುದ್ಧವನ್ನು ಸಹ ಮಾಡಿದ - ಅವನು ಪ್ರದರ್ಶಿಸಿದ್ದು ಇದನ್ನೇ. ಅವನ ಈ ಗುಣಕ್ಕಾಗಿಯೇ ನಾವು ತಲೆಬಾಗುತ್ತಿರುವುದು. ಅದಕ್ಕಾಗಿಯೇ ನಾವು ಅವನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಯುತ್ತೇವೆ. ನಾವು ಅವನನ್ನು ದೇವರು ಎಂದು ಕರೆಯುತ್ತಿಲ್ಲ, ಪುರುಷೋತ್ತಮ ಎಂದು ಕರೆಯುತ್ತಿದ್ದೇವೆ. ಎಂದರೆ, ಅತ್ಯಂತ ಶ್ರೇಷ್ಠ ಮನುಷ್ಯ ಎಂದರ್ಥ. ಮರ್ಯಾದಾ ಪುರುಷೋತ್ತಮ ಎಂದರೆ ಎಲ್ಲರ ಗೌರವಕ್ಕೆ ಪಾತ್ರನಾದವನು. ನೀವು ಅವನನ್ನು ಇಷ್ಟಪಡಬಹುದು, ಇಷ್ಟಪಡದೇ ಇರಬಹುದು, ಆದರೆ ಅವನ ಗುಣಗಳು ಹೇಗಿವೆ ಎಂದರೆ, ನೀವು ಅವನನ್ನು ಗೌರವಿಸದೇ ಇರಲಾರಿರಿ. ನಿಮ್ಮ ಜೀವನದಲ್ಲಿ ನೀವು ಸಹ ಹೀಗಿರಲು ಸಾಧ್ಯವಾದರೆ, ನೀವು ಸಹ ಮರ್ಯಾದಾ ಪುರುಷೋತ್ತಮರಾಗುತ್ತೀರಿ.

ಈ ನಾಗರಿಕತೆಯಲ್ಲಿ ಯಾರೂ ಸ್ವರ್ಗದಿಂದ ಇಳಿದು ಬಂದಿಲ್ಲ. ಇದು ಮನುಷ್ಯರು ತಮ್ಮ‌ ದೈವಿಕತೆಗೆ ವಿಕಸನಗೊಳ್ಳುವ ನಾಗರಿಕತೆಯಾಗಿದೆ. ನಾವು ನಮ್ಮ ನಡುವೆ, ನಮ್ಮೊಳಗೆ ದೈವತ್ವವನ್ನು ಪೋಷಿಸುತ್ತೇವೆ. ಇದೇ ಯೋಗ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಯ ಸಾಧ್ಯತೆಯಾಗಿದೆ. ಮತ್ತು ಇದು ಭಾರತಕ್ಕೆ ಮಾತ್ರವಲ್ಲದೇ, ಇಡೀ ಜಗತ್ತಿಗೇ ಮುಖ್ಯವಾಗಿದೆ.

ಆದ್ದರಿಂದ, ರಾಮ ಮಂದಿರವು ಮೂಲಭೂತವಾಗಿ ನಾಗರಿಕತೆಯ ಮರುಸ್ಥಾಪನೆಯಾಗಿದೆ. ‘ನಮಗಾಗಿ ಎಲ್ಲವನ್ನೂ ನೋಡಿಕೊಳ್ಳುವ ದೇವರು ಎಲ್ಲೋ ಇದ್ದಾನೆ’ ಅಥವಾ ‘ ಅವನು ನಮ್ಮನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಾನೆ’ ಎಂಬ ಮತಧರ್ಮಗಳ ನಂಬಿಕೆ ವ್ಯವಸ್ಥೆಗಳಿಂದ, ಮನುಷ್ಯರು ತಮ್ಮ ಮುಕ್ತಿಗಾಗಿ ತಮ್ಮ ಜೀವನದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದರೆಡೆಗೆ ಸಾಗುವ ಒಂದು ನಾಗರಿಕತೆಯ ಅಂಶವಾಗಿದೆ. ಇದು ನಮ್ಮ ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆಗಳ ಮಿತಿಗಳನ್ನು ಮೀರಿ ಹೋಗುವ ಒಂದು ಪ್ರಯತ್ನವಾಗಿದೆ, ಆ ಮೂಲಕ ನಾವು ಇಲ್ಲಿ ದೇಹದಲ್ಲಿದ್ದುಕೊಂಡೇ, ಅದನ್ನು ಮೀರಿ ಹೇಗೆ ಜೀವಿಸಬೇಕು ಎಂಬುದು ನಮಗೆ ತಿಳಿದಿದೆ. ನಿಮ್ಮ ಜೀವನವನ್ನೂ ನೀವು ಹೀಗೆ ಜೀವಿಸಿದರೆ ನೀವೂ ಮರ್ಯಾದಾ ಪುರುಷೋತ್ತಮರಾಗುತ್ತೀರಿ. ಈ ಗುಣವನ್ನು ಪ್ರತಿನಿಧಿಸುವ ರಾಮ ಮಂದಿರ ಮತ್ತು ಅಂತಹುದೇ ರಚನೆಗಳು ಮುಖ್ಯವಾಗಿವೆ, ಏಕೆಂದರೆ ಜನರು ಅದನ್ನು ಬಯಸಲು ಈ ರೀತಿಯ ಸಾಂಪ್ರದಾಯಿಕ ಪ್ರಾತಿನಿಧ್ಯಗಳು ಬೇಕಾಗುತ್ತವೆ.

ಲೇಖಕ: ಮುಖ್ಯಸ್ಥ, ಇಶಾ ಫೌಂಡೇಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT