ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕುದಿಯುವ ಕಾಲದಿ ಬೇಯುವ ಬದುಕು!

ಅರಣ್ಯ, ಜೀವವೈವಿಧ್ಯ, ಕಂದಾಯ ಕಾನೂನುಗಳಿಗೆ ಇತ್ತೀಚಿನ ತಿದ್ದುಪಡಿ ಅಗತ್ಯವಿತ್ತೇ?
Published 16 ಆಗಸ್ಟ್ 2023, 22:43 IST
Last Updated 16 ಆಗಸ್ಟ್ 2023, 22:43 IST
ಅಕ್ಷರ ಗಾತ್ರ

ಹಿಂದಿನ ಬೇಸಿಗೆಯಲ್ಲಿ ಧಗೆ ಅದೆಷ್ಟು ತೀವ್ರವಾಗಿತ್ತಲ್ಲವೇ? ಇಲ್ಲಷ್ಟೇ ಅಲ್ಲ, ಬಹುಪಾಲು ದೇಶಗಳಲ್ಲಿ ಏಪ್ರಿಲ್- ಮೇ ತಿಂಗಳುಗಳು ಅದೆಷ್ಟು ಬಿಸಿಯಾಗಿದ್ದವೆಂದರೆ, ಸರಾಸರಿ ತಾಪಮಾನವು ಹಲವೆಡೆ ಸಾರ್ವಕಾಲಿಕ ಏರಿಕೆ ದಾಖಲಿಸಿತು. ಬೆಚ್ಚಿಬಿದ್ದ ವಿಶ್ವಸಂಸ್ಥೆ ಮುಖ್ಯಸ್ಥರು, ‘ಹವಾಮಾನ ಬದಲಾವಣೆ ಕಾಲ ಮುಗಿದಾಯ್ತು, ಇನ್ನೇನಿದ್ದರೂ ಹವಾಮಾನ ಕುದಿಯುವ ಕಾಲ!’ ಎಂದು ಅಧಿಕೃತವಾಗಿ ಸಾರಿದರು. ಜಗತ್ತಿನೆಲ್ಲೆಡೆ ಸರ್ಕಾರಗಳು ಎದುರಿಸಲೇಬೇಕಾದ ಇಂದಿನ ಬೃಹತ್ ಸವಾಲಿದು.

ನಿಸರ್ಗದ ರಚನೆಯ ಮೂಲಭೂತ ಅಂಶಗಳೆಲ್ಲವೂ ಶಿಥಿಲವಾಗಿ ವಾತಾವರಣದ ತಾಪಮಾನ ಏರುತ್ತಿರುವುದು ಹಾಗೂ ಇದರಿಂದಾಗಿ ನೆಲ, ಜಲ, ಜನಜೀವನದ ಪರಿಸ್ಥಿತಿ ಬಿಗಡಾಯಿಸುತ್ತಿರುವ ಕುರಿತು ಸಂಶೋಧನೆ ಮತ್ತು ಸಾರ್ವಜನಿಕ ವಾಗ್ವಾದಗಳು ನಡೆಯತೊಡಗಿ ಹಲವು ದಶಕಗಳೇ ಸಂದಿವೆ. ಇದನ್ನು ಅರಿತ ಭಾರತ ಸರ್ಕಾರವು ಹವಾಮಾನ ಬದಲಾವಣೆ ಎದುರಿಸಲು ರಾಷ್ಟ್ರೀಯ ಕಾರ್ಯನೀತಿಯೊಂದನ್ನು 2008ರಲ್ಲೇ ರೂಪಿಸಿತು. ಕೃಷಿಮಣ್ಣಿನ ಪೋಷಣೆ, ಜಲಸಂವರ್ಧನೆ, ಸೌರಶಕ್ತಿ ಬಳಕೆಯಂತಹ ಎಂಟು ಪ್ರಮುಖ ಆದ್ಯತಾ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ‘ಸರ್ಕಾರಿ ಮಿಷನ್’ ಸಹ ಘೋಷಣೆಯಾಯಿತು. ದೇಶವಿರಿಸಿದ ಈ ಮಹತ್ವದ ಹೆಜ್ಜೆಗಳು ಖಂಡಿತವಾಗಿಯೂ ಜಗತ್ತಿಗೇ ಮಾದರಿಯಾಗುವಂತೆ ಇದ್ದವು.

ಕರ್ನಾಟಕದಲ್ಲೂ ಈ ದಿಸೆಯಲ್ಲಿ ಆಗಲೇ ಗಂಭೀರ ಪ್ರಯತ್ನಗಳು ಅರಂಭವಾಗಿದ್ದವು. ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಲು ರಾಜ್ಯವು ಸಾಗಬೇಕಾದ ದಾರಿ ಕಂಡುಕೊಳ್ಳಲು, ತಜ್ಞರ ಸ್ವತಂತ್ರ ಸಮಿತಿಯೊಂದು ವಿಧಾನಪರಿಷತ್ ಮಾಜಿ ಸಭಾಪತಿ ಪ್ರೊ. ಬಿ.ಕೆ.ಚಂದ್ರಶೇಖರ್ ಅವರ ಪ್ರಯತ್ನದಿಂದಾಗಿ 2008ರಲ್ಲೇ ಕಾರ್ಯಾರಂಭ ಮಾಡಿತ್ತು. ‘ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕಾರ್ಯತಂತ್ರ ನೀತಿ’ ಎಂಬ ವರದಿಯನ್ನು ಅದು 2011ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಇದರಿಂದಾಗಿ ಸರ್ಕಾರದ ಮಟ್ಟದಲ್ಲಿ ಈ ಚಿಂತನೆ ಮುನ್ನೆಲೆಗೆ ಬರುವಂತಾಯಿತು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ, ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಅ್ಯಂಡ್‌ ಎಕನಾಮಿಕ್‌ ಚೇಂಜ್‌ (ಐಸೆಕ್), ಏಟ್ರೀ ಸೇರಿದಂತೆ ರಾಜ್ಯದ ಹಲವು ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ಅದಾಗಲೇ ಜರುಗುತ್ತಿದ್ದ ಅಧ್ಯಯನಗಳ ಕಾಣ್ಕೆಗಳನ್ನು ಸರ್ಕಾರ ಗಮನಿಸುವಂತಾಯಿತು.

ವಿಶ್ವಸಂಸ್ಥೆಯು ರೂಪಿಸಿ ನಮ್ಮ ದೇಶವೂ ಒಪ್ಪಿ ಅನುಷ್ಠಾನಗೊಳಿಸುತ್ತಿರುವ ‘ಹದಿನೇಳು ಸುಸ್ಥಿರ ಅಭಿವೃದ್ಧಿ ಗುರಿ’ಗಳ ಕಾರ್ಯಕ್ರಮದಲ್ಲಿ, ಹವಾಮಾನ ಬದಲಾವಣೆ ಸಂಗತಿಗಳನ್ನು ಅಡಕಗೊಳಿಸಲು ರಾಜ್ಯ ಯೋಜನಾ ಇಲಾಖೆ ಮಾಡಿರುವ ಪ್ರಯತ್ನಗಳಂತೂ ದೇಶಕ್ಕೇ ಮಾದರಿಯಾದವು.

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಯ ಆಧಾರದಲ್ಲಿ ರೂಪಿತವಾಗಿದ್ದ ಈ ಬಗೆಯ ಮಹತ್ವದ ಅಂಶಗಳನ್ನೆಲ್ಲ ಸರ್ಕಾರಿ ಯೋಜನೆಗಳಲ್ಲಿ ಅಳವಡಿಸುವ ‘ಹಸಿರು ಬಜೆಟ್’ ಮಾದರಿಯೊಂದನ್ನು ರಾಜ್ಯ ಜೀವವೈವಿಧ್ಯ ಮಂಡಳಿಯು 2020ರಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತು. ಈ ತೆರನ ಹಲವಾರು ದಾರಿಗಳನ್ನು ಒಳಗೊಂಡ ‘ಕರ್ನಾಟಕ ಹವಾಮಾನ ಬದಲಾವಣೆ ಕಾರ್ಯತಂತ್ರ’ ಎಂಬ ಸಮಗ್ರ ವರದಿಯನ್ನು, ರಾಜ್ಯ ಸರ್ಕಾರದ ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದ ಸಂಶೋಧನಾ ಸಂಸ್ಥೆಯು (ಎಂಪ್ರಿ) 2021ರಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ.

ಹಿಂದಿನ ಒಂದೂವರೆ ದಶಕದಲ್ಲಿ ಸರ್ಕಾರದ ಮಟ್ಟದಲ್ಲಿ ಜರುಗಿದ ಈ ಎಲ್ಲ ನೀತಿ ನಿರೂಪಣಾ ಪ್ರಯತ್ನಗಳು, ಇಡೀ ದೇಶಕ್ಕೇ ಮಾದರಿಯಾಗುವಂಥವು ಎಂಬುದರಲ್ಲಿ ಸಂಶಯವೇ ಇಲ್ಲ.

ಆದರೆ, ತಳಮಟ್ಟದಲ್ಲಿ ನಾಡಿನ ಪರಿಸರ ಹಾಗೂ ಜನಜೀವನದ ಪರಿಸ್ಥಿತಿ ಮಾತ್ರ ಬಿಗಡಾಯಿಸುತ್ತಲೇ ಇದೆ! ಕರಾವಳಿಯಲ್ಲಿ ಮಾಲಿನ್ಯ, ಸಮುದ್ರದಂಡೆ ಕೊರೆತ, ಅಳಿವೆಗಳ ನಾಶ ಹೆಚ್ಚುತ್ತಿವೆ. ಸಮುದ್ರಉತ್ಪನ್ನ ಇಳುವರಿ ಶೇ 50ಕ್ಕೂ ಮೀರಿ ಕುಸಿಯುತ್ತಿದ್ದು ಮೀನುಗಾರರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಮಲೆನಾಡಿನಲ್ಲಿ ಅರಣ್ಯವು ಒತ್ತುವರಿ ಹಾಗೂ ಅಸಂಗತ ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗಿ ನೆರೆ-ಬರ ಹೆಚ್ಚುತ್ತಿವೆ. ಅವೈಜ್ಞಾನಿಕ ಭೂಸ್ವರೂಪ ಬದಲಾವಣೆಯಿಂದ ಭಾರಿ ಭೂಕುಸಿತ ಹೆಚ್ಚುತ್ತಿದ್ದು, ಹಲವೆಡೆ ಸಂಪೂರ್ಣ ಹಳ್ಳಿಗಳೇ ಮಣ್ಣಿನಡಿ ಹುಗಿದುಹೋಗುತ್ತಿವೆ!

ತೊರೆ, ಝರಿ, ಕೆರೆಗಳೆಲ್ಲ ಒಣಗಿ ಕೃಷ್ಣಾ, ಕಾವೇರಿ, ನೇತ್ರಾವತಿ, ಬೇಡ್ತಿ, ಕಾಳಿಯಂಥ ಪ್ರಮುಖ ನದಿಗಳ ಜಲಾನಯನ ಪ್ರದೇಶಗಳ ಹೃದಯಭಾಗವೇ ಬರಡಾಗುತ್ತಿದೆ, ನಾಡಿನ ಜಲಸುರಕ್ಷತೆ ಅಪಾಯಕ್ಕೆ ಸಿಲುಕುತ್ತಿದೆ. ಹವಾಮಾನ ಏರುಪೇರಿನಿಂದಾಗಿ ಹೊಸ ಹೊಸ ವೈರಸ್ ಹಾಗೂ ಶಿಲೀಂಧ್ರ ರೋಗಗಳು ತೋಟಗಾರಿಕಾ ಬೆಳೆಗಳಲ್ಲಿ ವ್ಯಾಪಿಸುತ್ತಿವೆ. ಈ ಸಂಕಷ್ಟಕ್ಕೆ ಹೆಚ್ಚುತ್ತಿರುವ ಕಾಡುಪ್ರಾಣಿ ಹಾವಳಿಯೂ ಜೊತೆಯಾಗಿ, ರೈತರು ಕಂಗಾಲಾಗುತ್ತಿದ್ದಾರೆ.

ಆಹಾರಧಾನ್ಯಗಳ ಅಂಗಳವಾದ ಒಳನಾಡಿನ ಪರಿಸ್ಥಿತಿಯೂ ಅಷ್ಟೇ ಕಳವಳಕಾರಿ. ಕೊಳವೆಬಾವಿಗಳ ಬಳಕೆ ಮಿತಿಮೀರಿ, ಅಂತರ್ಜಲ ಮಟ್ಟ ಅಪಾಯಕಾರಿಯಾಗಿ ಕೆಳಗಿಳಿಯುತ್ತಿದೆ. ಕೃಷಿಯಲ್ಲಿ ಕೃತಕ ರಾಸಾಯನಿಕಗಳ ಬಳಕೆಗೆ ಲಗಾಮು ತಪ್ಪಿ, ನೆಲ-ಜಲ ಗುಣಮಟ್ಟ ಕರಗುತ್ತಿದೆ. ರೋಗವಾಹಕ ಕೀಟಗಳ ಸಂಕುಲಗಳು ಹೆಚ್ಚಾಗಿ, ಮಲೇರಿಯಾ, ಡೆಂಗಿ, ಚಿಕೂನ್ ಗುನ್ಯ ತರಹದ ಸಾಂಕ್ರಾಮಿಕ ರೋಗಗಳು ಅಕಾಲದಲ್ಲೂ ಪಸರಿಸುತ್ತಿವೆ. ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆಯಾಗಿ, ಕೃಷಿಭೂಮಿ ಫಲವತ್ತತೆ ತೀರಾ ನಾಶವಾಗುತ್ತಿದೆ. ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ, ಈ ಸವಾಲುಗಳನ್ನೆಲ್ಲ ಎದುರಿಸುವ ವಿವೇಕದ ಮತ್ತು ದೂರದೃಷ್ಟಿಯ ಕಾರ್ಯವಿಧಾನ ಆಡಳಿತದ್ದಾಗಬೇಕಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅಳಿದುಳಿದಿರುವ ನೈಸರ್ಗಿಕ ಪರಿಸರವನ್ನೂ ಕಳೆದುಕೊಳ್ಳುವ ಆತ್ಮಾಹುತಿ ದಾರಿಯನ್ನು ತುಳಿಯುತ್ತಿರುವಂತಿದೆಯಲ್ಲ!

ಇತ್ತೀಚಿನ ಕೆಲವು ಸರ್ಕಾರಿ ನಿರ್ಧಾರಗಳನ್ನೇ ಗಮನಿಸೋಣ. ದಕ್ಷಿಣ ಭಾರತದ ಹವಾಮಾನ ಹಾಗೂ ನೀರಿನ ಸುರಕ್ಷತೆಯ ಮೂಲಾಧಾರವಾದ ಪಶ್ಚಿಮಘಟ್ಟದ ಸಂರಕ್ಷಣೆಗೆ ಕಾನೂನು ಚೌಕಟ್ಟು ರೂಪಿಸಲು ಎರಡು ದಶಕಗಳಿಂದ ಪ್ರಯತ್ನ ನಡೆದಿತ್ತು. ಆದರೆ, ಪರಿಸರಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ರಕ್ಷಿಸುವ ಆ ಕಾನೂನು ಪ್ರಕ್ರಿಯೆಯನ್ನೇ ಮರುಪರಿಶೀಲಿಸುವುದಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರು ಇತ್ತೀಚೆಗೆ ಹೇಳಿದ್ದಾರೆ. ಹಿಂದಿನ ಸಂಸತ್ ಅಧಿವೇಶನದಲ್ಲಿ ‘ಅರಣ್ಯ ಸಂರಕ್ಷಣಾ ಕಾಯ್ದೆ’ಗೆ (1980) ಮಾಡಿದ ಭಾರಿ ತಿದ್ದುಪಡಿಗಳು, ಅರಣ್ಯ ಇಲಾಖೆ ಸುಪರ್ದಿಯಲ್ಲಿರದ ಅಗಾಧ ವ್ಯಾಪ್ತಿಯ ಕಾಡನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ತೆರೆದಿಟ್ಟಿವೆ. ಇದರಿಂದಾಗಿ ರಾಜ್ಯದ ಸಹ್ಯಾದ್ರಿ ಪ್ರದೇಶವೊಂದರಲ್ಲೇ ಐದು ಲಕ್ಷ ಹೆಕ್ಟೇರಿಗೂ ಮೀರಿ ಡೀಮ್ಡ್ ಅರಣ್ಯ ಅಪಾಯದಂಚಿಗೆ ಜಾರಿದೆ. ಕಾಡಿನ ಒತ್ತುವರಿ, ಅನಧಿಕೃತ ಗಣಿಗಾರಿಕೆಯಂಥದ್ದಕ್ಕೆಲ್ಲ ಹೆಬ್ಬಾಗಿಲು ತೆರೆದಂತಾಗಿದೆ!

ಹಿಂದಿನ ಸಂಸತ್ ಅಧಿವೇಶನದಲ್ಲಿ ‘ಜೀವವೈವಿಧ್ಯ ಕಾಯ್ದೆ’–2002 ಸಹ ತಿದ್ದುಪಡಿಯಾಗಿ, ವಾಣಿಜ್ಯೋದ್ಯಮಗಳು ನೈಸರ್ಗಿಕ ಗಿಡಮೂಲಿಕಾ ಸಂಪತ್ತನ್ನು ಯಾವ ವೆಚ್ಚ, ನೀತಿ, ನಿಬಂಧನೆಗಳಿಲ್ಲದೆ ಬಳಸುವ ಮುಕ್ತ ಉದ್ಯಮಕ್ಕೆ ದಾರಿಮಾಡಿಕೊಟ್ಟಿದೆ. ಸಹ್ಯಾದ್ರಿಯ ನದಿಕಣಿವೆಗಳಲ್ಲಿ ಅಳಿದುಳಿದಿರುವ ಜೀವವೈವಿಧ್ಯವೂ ಇದರಿಂದಾಗಿ ಕರಗಿಹೋದೀತು.

ಇತ್ತ ರಾಜ್ಯ ಸರ್ಕಾರವು ಕರ್ನಾಟಕ ಭೂಕಂದಾಯ ಕಾಯ್ದೆ– 1964ಕ್ಕೆ ತಿದ್ದುಪಡಿ ಮಾಡಿ, ಯಾರು ಬೇಕಾದರೂ ಕೃಷಿಭೂಮಿಯನ್ನು ಕೊಂಡುಕೊಂಡು ಸುಲಭವಾಗಿ ಭೂಪರಿವರ್ತನೆ ಮಾಡಿ ಕೃಷಿಯೇತರ ಉದ್ದೇಶಕ್ಕೆ ಬಳಸಲು ಅವಕಾಶ ಮಾಡಿಕೊಟ್ಟಿದೆ. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಮಲೆನಾಡಿನ ಸೂಕ್ಷ್ಮಪ್ರದೇಶಗಳೆಲ್ಲ ಈಗಾಗಲೇ ರೆಸಾರ್ಟ್ ಸಂಸ್ಕೃತಿಗೆ ಬಲಿಯಾಗುತ್ತಿರುವಾಗ, ಸಹ್ಯಾದ್ರಿ ಶ್ರೇಣಿಯನ್ನೇ ಇದು ದಿಕ್ಕುದೆಸೆ ಇಲ್ಲದ ಮುಕ್ತಮಾರುಕಟ್ಟೆಗೆ ಈಗ ತೆರೆದಿಡುತ್ತಿದೆ!

ಹವಾಮಾನ ಬದಲಾವಣೆ ಎಂಬುದು ಭೂಮಿಯ ಭವಿಷ್ಯವನ್ನೇ ಬುಡಮೇಲು ಮಾಡುತ್ತಿರುವ ದೊಡ್ಡ ಅಪಾಯ. ಇದನ್ನು ನಿಭಾಯಿಸಬಲ್ಲ ಪಾರಂಪರಿಕ ವಿವೇಕ ಹಾಗೂ ವಿಜ್ಞಾನದ ಕಿವಿಮಾತು-ಎರಡನ್ನೂ ಧಿಕ್ಕರಿಸಿ ಸರ್ಕಾರಗಳು ಈಗ ಸಾಗುತ್ತಿವೆ! ಇದರಿಂದಾಗಿ ವಾತಾವರಣ ಕುದಿಯುವ ಸ್ಥಿತಿಗೆ ತಲುಪುತ್ತಿದ್ದು, ಭವಿಷ್ಯದ ಬದುಕು ಬೇಯದೆ ಇನ್ನೇನಾದೀತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT