ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಏಕವ್ಯಕ್ತಿ ಸೇನೆಯ ದಿಟ್ಟ ನಾಯಕತ್ವ

ದುಷ್ಟ ವ್ಯವಸ್ಥೆಗೆ ಮುಖಾಮುಖಿಯಾಗುವ ಗಟ್ಟಿಗರು ಎಲ್ಲ ಕಾಲದಲ್ಲೂ ಮೈದಾಳುತ್ತಾರೆ
Published 22 ಮಾರ್ಚ್ 2024, 23:14 IST
Last Updated 22 ಮಾರ್ಚ್ 2024, 23:14 IST
ಅಕ್ಷರ ಗಾತ್ರ

ಈಚೆಗೆ ಶಾಂತವೇರಿ ಗೋಪಾಲಗೌಡರ ಹುಟ್ಟುಹಬ್ಬದ ದಿನ ‘ಇಂಥ ಏಕವ್ಯಕ್ತಿ ಸೇನೆಯಂತಿದ್ದ ನಾಯಕರ ಕಾಲ ಮುಗಿದುಹೋಯಿತೇ?’ ಎಂದು ಪತ್ರಕರ್ತರೊಬ್ಬರು ಕೇಳಿದರು. ಗೋಪಾಲಗೌಡರ ಸಮಾಜವಾದಿ ಗುರುಗಳಾದ ರಾಮಮನೋಹರ ಲೋಹಿಯಾರ ಹುಟ್ಟು ಹಬ್ಬದ (ಮಾರ್ಚ್‌ 23) ಆಸುಪಾಸಿನಲ್ಲಿ ಇದೇ ಪ್ರಶ್ನೆ ಮತ್ತೆ ಎದುರಾದಾಗ, ಸ್ವಾತಂತ್ರ್ಯಾನಂತರದ ದಿಟ್ಟ ರಾಜಕೀಯ ನಾಯಕರ ಹೆಸರುಗಳು ತೇಲಿಬರತೊಡಗಿದವು: ಎ.ಕೆ.ಗೋಪಾಲನ್, ಸೋಮನಾಥ ಚಟರ್ಜಿ, ಭೂಪೇಶ್ ಗುಪ್ತಾ, ಇಂದ್ರಜಿತ್ ಗುಪ್ತಾ, ಮಧು ಲಿಮಯೆ, ಫಿರೋಜ್ ಗಾಂಧಿ, ಪೀಲೂ ಮೋದಿ, ಎನ್.ಜಿ.ಗೋರೆ...

ನಿಜಕ್ಕೂ ಏಕವ್ಯಕ್ತಿ ಸೇನೆಯಂತಿದ್ದ ನಾಯಕರು ಇವರು. ಒಬ್ಬೊಬ್ಬರೇ ಸರ್ಕಾರಗಳನ್ನು ತುದಿಗಾಲಲ್ಲಿ ನಿಲ್ಲಿಸ ಬಲ್ಲವರಾಗಿದ್ದವರು. ಇಂಥ ದಿಟ್ಟ ನಾಯಕರು ಸ್ವಾತಂತ್ಯ್ರ ಚಳವಳಿಯ ಕಾಲದಲ್ಲಿ ರೂಪುಗೊಂಡಿದ್ದರಿಂದ ಇದರಲ್ಲಿ ಕಾಲದ ಕೊಡುಗೆಯೂ ಇದೆ, ನಿಜ. ಆದರೆ ಇವರನ್ನು ದಿಟ್ಟ ನಾಯಕರನ್ನಾಗಿಸಿದ ಗುಣಗಳನ್ನು ಗಮನಿಸಿ: ವ್ಯಕ್ತಿತ್ವದ ಪಾರದರ್ಶಕತೆ, ಅಧ್ಯಯನ, ತಾತ್ವಿಕ ಸ್ಪಷ್ಟತೆ, ಸಿದ್ಧತೆ, ರಾಜಿಯಿಲ್ಲದ ಮನೋಭಾವ, ತಮ್ಮ ಒಳಶಕ್ತಿಯ ಬಗ್ಗೆ ನಂಬಿಕೆ, ಜನಪರ ಕಾಳಜಿ... ಇವುಗಳಿಂದ ರೂಪುಗೊಂಡ ನಾಯಕರಿವರು. ತಾವು ರಾಜಕಾರಣಕ್ಕೆ ಇಳಿದಿರುವುದೇ ಜನರಿಗಾಗಿ ಎಂದು ಆಳವಾಗಿ ನಂಬಿದ್ದವರು. ಗೋಪಾಲಗೌಡರು ಶಾಸನಸಭೆಗೆ ಅಥವಾ ಲೋಹಿಯಾ, ಜಾರ್ಜ್‌ ಫರ್ನಾಂಡಿಸ್ ಪಾರ್ಲಿಮೆಂಟಿಗೆ ಹೋಗುವ ಮುನ್ನ ದಾಖಲೆಗಳನ್ನು ಓದಿಕೊಂಡು, ಬರೆದು ಸಿದ್ಧ ಮಾಡಿಕೊಳ್ಳುತ್ತಿದ್ದ ಟಿಪ್ಪಣಿಗಳೂ ಅವರ ವ್ಯಕ್ತಿತ್ವಕ್ಕೆ ಖಚಿತ ಆತ್ಮವಿಶ್ವಾಸ ಕೊಟ್ಟಿದ್ದವು. ವೃತ್ತಿ ರಾಜಕಾರಣ ಎಂದರೆ ಇದೇ ವಿನಾ ಇಪ್ಪತ್ನಾಲ್ಕು ಗಂಟೆಯೂ ರಾಜಕೀಯ ಒದರುತ್ತಿರುವುದಲ್ಲ!

ಐವತ್ತರ ದಶಕದ ಮೈಸೂರು ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ ಏಕಮಾತ್ರ ಶಾಸಕರಾಗಿದ್ದ ಗೋಪಾಲಗೌಡರು ಎಲ್ಲ ಥರದ ಬಡವರ ಪ್ರಶ್ನೆಗಳನ್ನೂ ಮಂಡಿಸುತ್ತಿದ್ದರು. ನೇರ ಮಾತಿನಿಂದ ಸರ್ಕಾರವನ್ನು ನಡುಗಿಸುತ್ತಿದ್ದರು. ರೈತಸಂಘದ ಎಂ.ಡಿ.ನಂಜುಂಡ ಸ್ವಾಮಿ, ಬಾಬಾಗೌಡ ಪಾಟೀಲ ರಾಜ್ಯದ ರೈತರು, ಗ್ರಾಮಗಳ ಪ್ರಶ್ನೆಗಳನ್ನು ಸದನಕ್ಕೆ ತರುತ್ತಿದ್ದರು. ಒಮ್ಮೆ ಸಭಾಧ್ಯಕ್ಷರು ನಂಜುಂಡಸ್ವಾಮಿಯವರನ್ನು ‘ವಿರೋಧ ಪಕ್ಷದವರು’ ಎಂದಾಗ, ನಂಜುಂಡಸ್ವಾಮಿ ಹೇಳಿದ ಮಾತು: ‘ನಾನು ವಿರೋಧ ಪಕ್ಷ ಅಲ್ಲ, ಇಡೀ ಕರ್ನಾಟಕದ ಬಗ್ಗೆ ಮಾತಾಡತಕ್ಕಂಥವನು’.

ಇಂಥ ನಾಯಕರ ಕಾಲ ಮುಗಿಯಿತು ಎಂದು ಹಳಹಳಿಸುವುದರಲ್ಲಿ ಅರ್ಥವಿಲ್ಲ. ಇಂಥ ಸ್ಪಿರಿಟ್ಟಿನ ನಾಯಕ, ನಾಯಕಿಯರು ದೇಶದ ವಿರೋಧ ಪಕ್ಷಗಳಲ್ಲಿ ಯಾವಾಗಲೂ ರೂಪುಗೊಂಡಿದ್ದಾರೆ. ಎ.ಕೆ.ಸುಬ್ಬಯ್ಯ ಕರ್ನಾಟಕ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸೆಣಸುತ್ತಿ ದ್ದರು. ಬಿಜೆಪಿಗೆ ನೆಲೆಯೇ ಇಲ್ಲದಿದ್ದಾಗ ಯಡಿಯೂರಪ್ಪ ಗಟ್ಟಿ ದನಿಯಾಗಿದ್ದರು. ಎಚ್.ಡಿ.ದೇವೇಗೌಡರು ಸುಲಭ ವಾಗಿ ಮಣಿಸಲಾಗದ ವಿರೋಧಿ ನಾಯಕರಾಗಿದ್ದರು. ಮೊನ್ನೆ ಮೊನ್ನೆಯವರೆಗೂ ಸಿದ್ದರಾಮಯ್ಯನವರು ಖಚಿತ ನಿಲುವಿನ ವಿರೋಧಿ ನಾಯಕರಾಗಿದ್ದರು.

ದಶಕಗಳ ಕೆಳಗೆ ಪಾರ್ಲಿಮೆಂಟಿನಲ್ಲಿ ಸೀತಾರಾಂ ಯೆಚೂರಿ, ಅರುಣ್ ಜೇಟ್ಲಿ, ಸುಶ್ಮಾ ಸ್ವರಾಜ್ ಸರ್ಕಾರ ಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಕಳೆದ ವರ್ಷದವರೆಗೂ ಪಾರ್ಲಿಮೆಂಟಿನಲ್ಲಿದ್ದ ಟಿಎಂಸಿಯ ಮಹುವಾ ಮೊಯಿತ್ರಾ ಗಂಭೀರವಾಗಿ ಹೋಂವರ್ಕ್‌ ಮಾಡಿಕೊಂಡು ಬಂದು ಪಾರ್ಲಿಮೆಂಟಿನಲ್ಲಿ ಸ್ಪಷ್ಟವಾಗಿ, ದಿಟ್ಟವಾಗಿ ಮಾತನಾಡಿ ಎನ್‌ಡಿಎ ಸರ್ಕಾರವನ್ನು ವಿಮರ್ಶಿಸುತ್ತಿದ್ದರು, ಡಿಜಿಟಲ್ ಮಾಧ್ಯಮಗಳಲ್ಲಿ ಜನಪ್ರಿಯರಾಗಿದ್ದರು. ಮಹುವಾರ ಬಾಯಿ ಮುಚ್ಚಿಸುವಂತೆ ಅವರ ಪಾರ್ಲಿಮೆಂಟ್ ಸದಸ್ಯತ್ವ ರದ್ದಾಗಿದ್ದರ ಹಿನ್ನೆಲೆ ನಿಗೂಢವಾಗಿದೆ, ಸಿಬಿಐ ತನಿಖೆಯೂ ಶುರುವಾಗಿದೆ. ಒಂದು ಕಾಲಕ್ಕೆ ವಿರೋಧ ಪಕ್ಷದ ದೊಡ್ಡ ದನಿಗಳಾಗಿದ್ದ ವಾಜಪೇಯಿ, ಅಡ್ವಾಣಿ ಸರ್ಕಾರದಲ್ಲಿ ಇದ್ದಿದ್ದರೆ, ಮಹುವಾ ತಮ್ಮನ್ನು ವಿರೋಧಿಸಿದ್ದರೂ ಅವರ ವಾದವನ್ನು ಮೆಚ್ಚಿಕೊಳ್ಳುವ ಸಾಧ್ಯತೆಯಿತ್ತು.

ರಾಜ್ಯಸಭೆಯಲ್ಲಿರುವ ಡೆರಿಕ್ ಓಬ್ರಿಯನ್‌ರ ದಕ್ಷ ವಿಶ್ಲೇಷಣೆಗಳಿಗೆ, ಹಿಂದಿನ ಹತ್ತು ವರ್ಷಗಳಿಂದ ಜವಾರಿ ಹಿಂದಿ-ಉರ್ದುವಿನಲ್ಲಿ ಸರ್ಕಾರವನ್ನು ಕುಟುಕಿ, ವಿಮರ್ಶಿಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ
ಮಾಧ್ಯಮಗಳಲ್ಲಿ ತಕ್ಕ ಪ್ರಚಾರವೇ ಸಿಕ್ಕಲಿಲ್ಲ. ಖರ್ಗೆಯವರಂತೆ ರಾಹುಲ್‌ ಗಾಂಧಿ ಪಾರ್ಲಿಮೆಂಟನ್ನು ಗಂಭೀರವಾಗಿ ಬಳಸಿಕೊಂಡಿದ್ದರೆ ಮತ್ತಷ್ಟು ದೊಡ್ಡ ನಾಯಕರಾಗಿ ಬೆಳೆಯಬಹುದಿತ್ತು.

ಹಿಂದಿನ ಐದಾರು ವರ್ಷಗಳಲ್ಲಿ ರಾಹುಲ್ ಗಾಂಧಿಯವರಿಗೂ ಏಕವ್ಯಕ್ತಿ ಸೇನೆಯ ಇಮೇಜ್ ಬೆಳೆದಿದೆ. ಅರವಿಂದ ಕೇಜ್ರಿವಾಲ್ ಇಂಥ ನಾಯಕರಾಗಿ ಹೊಮ್ಮಿದ್ದಾರೆ. ಈ ಇಬ್ಬರ ಬಾಯಿ ಮುಚ್ಚಿಸಲು ಮಾಡುತ್ತಿರುವ ಹೀನ ತಂತ್ರಗಳನ್ನು ಜನ ನೋಡುತ್ತಿದ್ದಾರೆ. ಕೇಜ್ರಿ ವಾಲ್ ಬಂಧನವು ವಿರೋಧಿ ರಾಜಕಾರಣಕ್ಕೇ ಹೊಸ ತಿರುವು ನೀಡಲಿದೆ. ಬಿಹಾರದ ತರುಣ ತೇಜಸ್ವಿ ಯಾದವ್ ಸ್ಪಷ್ಟ ಗುರಿಯುಳ್ಳ ಗಡಸು ನಾಯಕನಾಗಿ ಬೆಳೆಯುತ್ತಿದ್ದಾರೆ. ಎಲ್ಲ ಕಾಲದಲ್ಲೂ ಜನರ ಒಳಗಿರುವ ದಿಟ್ಟತನಕ್ಕೆ ದನಿಯಾಗುವ ನಾಯಕರು ಸೃಷ್ಟಿಯಾಗುತ್ತಲೇ ಇರುತ್ತಾರೆ ಎಂಬುದನ್ನು ಇವೆಲ್ಲ ಸೂಚಿಸುತ್ತವೆ.

ಒಂದು ಕಾಲಕ್ಕೆ ದಿಟ್ಟ ರಾಜಕೀಯ ನಾಯಕರನ್ನು ಪತ್ರಿಕೆಗಳು ಬೆಂಬಲಿಸಿ, ಬೆಳೆಸಿದ ಆದರ್ಶ ರೀತಿ ಇವತ್ತು ಗತಕಾಲದ ಕತೆಯಂತೆ ಕಾಣುತ್ತಿದೆ. ಒಮ್ಮೊಮ್ಮೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗಿಂತ ದಿಟ್ಟ ವಿರೋಧಿ ನಾಯಕರಿಗೇ ಹೆಚ್ಚು ಪ್ರಚಾರ ಕೊಟ್ಟ ಪತ್ರಿಕೆಗಳು ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿವೆ. ಏಕವ್ಯಕ್ತಿ ಸೇನೆ ಗಳನ್ನು ಜನರೆದುರು ಮತ್ತೆ ಮತ್ತೆ ಬಿಂಬಿಸಿ, ಇಂಥ ವ್ಯಕ್ತಿತ್ವಗಳ ಆತ್ಮವಿಶ್ವಾಸ ಬೆಳೆಯಲು ನೆರವಾಗಿವೆ. ವಿಚಿತ್ರವೆಂದರೆ, ಇವತ್ತು ಜಾಹೀರಾತುಗಳಲ್ಲೂ ಆಳುವ ಪಕ್ಷವೇ, ಮಾಧ್ಯಮ ಗಳು ಪ್ರಕಟಿಸುವ, ಬಿತ್ತರಿಸುವ ಸುದ್ದಿಯಲ್ಲೂ ಆಳುವ ಪಕ್ಷವೇ! ಇನ್ನು ಆಳುವ ಪಕ್ಷದಲ್ಲಂತೂ ಏಕವ್ಯಕ್ತಿ ಪ್ರದರ್ಶನವೇ! ಇಂಥ ಅನೈತಿಕ ಪ್ರಚಾರ ನೀತಿಯನ್ನು ತಮ್ಮ ಮೇಲೆ ತಾವೇ ಹೇರಿಕೊಂಡ ಮಾಧ್ಯಮಗಳು ಪ್ರಜಾಪ್ರಭುತ್ವದ ಹತ್ಯೆಯ ಪಾಲುದಾರರಾಗುತ್ತವೆ.

ಎಂಥ ಸರ್ವಾಧಿಕಾರ, ನಿರಾಶೆಯ ಸ್ಥಿತಿಯಲ್ಲೂ ಬದಲಾವಣೆಯ ಸಾಧ್ಯತೆ ಇದೆಯೆನ್ನುವುದೇ
ಪ್ರಜಾಪ್ರಭುತ್ವದ ಅದ್ಭುತ ಗುಣ. ಕಾಲಕಾಲದ ಸವಾಲುಗಳನ್ನು ಎದುರಿಸದೆ, ಇದು ಪ್ರಜಾಪ್ರಭುತ್ವದ ಕೊನೆಯ ಚುನಾವಣೆ ಎಂದು ವಿರೋಧಿ ನಾಯಕರೇ ವಿಧಿವಾದಿಯಂತೆ ಮಾತಾಡುವುದು ವಿರೋಧ ಪಕ್ಷಗಳ ದಿಟ್ಟ ಪರಂಪರೆಗೆ ಅವಮಾನ ಮಾಡಿದಂತೆ. ಯಾಕೆಂದರೆ ದಿಟ್ಟ ನಾಯಕತ್ವವೂ ದಿಟ್ಟ ಮತದಾರ, ಮತದಾರ್ತಿಯ ರನ್ನು ಸೃಷ್ಟಿಸಬಲ್ಲದು. ಆಧುನಿಕ ಭಾರತದಲ್ಲಿ ಜನರ ಮನಃಸ್ಥಿತಿ ಬದಲಿಸಲು ಗಾಂಧೀಜಿ, ನೆಹರೂ, ಅಂಬೇಡ್ಕರ್‌, ಪೆರಿಯಾರ್‌, ಲೋಹಿಯಾ, ಜೆ.ಪಿ., ನಂಬೂದಿರಿಪಾಡ್ ಎಲ್ಲರೂ ಪ್ರಾಥಮಿಕ ಹಂತದಿಂದ ಕೆಲಸ ಮಾಡಿದ್ದಾರೆ, ನಂತರದ ದಿಟ್ಟ ನಾಯಕರು ಅದನ್ನು ಬೇರೆ ಸ್ತರಗಳಲ್ಲಿ ಮುಂದುವರಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಧಿಕಾರಕ್ಕೆ ಕುತ್ತು ಬಂದಾಗಲೆಲ್ಲ ಜನರನ್ನು ಎಚ್ಚರಿಸಿ, ದಾರಿ ತೋರುವ ದಿಟ್ಟರು ಎಲ್ಲ ರಾಜಕೀಯ ಪಕ್ಷಗಳಲ್ಲೂ ಪಕ್ಷಗಳಾಚೆಗೂ ಹುಟ್ಟುತ್ತಿರುತ್ತಾರೆ. ಎಲ್ಲ ಕಾಲಕ್ಕೂ ಇಂಥ ರಾಜಕಾರಣಕ್ಕೆ ಸ್ಫೂರ್ತಿಯಾಗಬಲ್ಲ ಏಕವ್ಯಕ್ತಿ ಸೇನೆಗಳಂಥ ದಿಟ್ಟ ನಾಯಕರು ತಮ್ಮೊಳಗಿನ ಚಾಲಕ ಶಕ್ತಿಯಿಂದಲೂ ಕಾಲದ ಒತ್ತಾಯದಿಂದಲೂ ಸೃಷ್ಟಿಯಾಗುತ್ತಿರುತ್ತಾರೆ. ಪಕ್ಷ, ಸಂಘಟನೆಗಳ ಬೆಂಬಲ ಇರಲಿ, ಇಲ್ಲದಿರಲಿ, ಇಂಥ ದಿಟ್ಟರು ಬದ್ಧತೆ, ಗಡಸುತನ, ನೈತಿಕತೆ, ನ್ಯಾಯಪರತೆಯ ಫಲವಾಗಿ ಪುಟಿಯುತ್ತಲೇ ಇರುತ್ತಾರೆ. ದೇಶದ ಇಂಥ ಏಕವ್ಯಕ್ತಿ ಸೇನೆಯ ಪರಂಪರೆಯ ಮಾದರಿಗಳನ್ನು ಜನರಿಗೆ ಮತ್ತೆ ಮತ್ತೆ ನೆನಪಿಸುವ, ಮರು ರೂಪಿಸುವ ಮೂಲಕವೇ ಹೊಸ ರಾಜಕಾರಣ ಸೃಷ್ಟಿಯಾಗಬಲ್ಲದು.

ಇಂಥ ದಿಟ್ಟ ರಾಜಕಾರಣ ಮಾಡುವವರ ಬೆಂಬಲಕ್ಕೆ ಕೊನೆಯ ಪಕ್ಷ ಮಾನಸಿಕವಾಗಿಯಾದರೂ ನಿಲ್ಲಬೇಕಾದ ಹೊಣೆ ಸಮಾಜ, ಸಂಸ್ಕೃತಿ, ರಾಜಕಾರಣದಲ್ಲಿ ಕಾಳಜಿಯಿರುವ ಇತರರಿಗೂ ಇರಬೇಕಾಗುತ್ತದೆ. ಹಿಂದಿನ ನೂರು ವರ್ಷಗಳಲ್ಲಿ ಜನರ ಕನಸುಗಳನ್ನು ನನಸಾಗಿಸಲು ಹೋರಾಡಿದ, ಹೋರಾಡುತ್ತಿರುವ ಏಕವ್ಯಕ್ತಿ ಸೇನೆಯಂಥ ರಾಜಕೀಯ ಮಾದರಿಗಳು ನಶಿಸದಂತೆ ರಕ್ಷಿಸುವ ಹೊಣೆ ಮತದಾರ ವಲಯದ ಮೇಲೂ ಇರುತ್ತದೆ. ಮತದಾರ ವಲಯಕ್ಕೆ ಸತ್ಯ ಏನೆಂದು ತಲುಪಿಸಿ ಅವರನ್ನು ತಿದ್ದುವ ಜವಾಬ್ದಾರಿ ರಾಜಕೀಯ ವಲಯಗಳಾಚೆಗಿರುವ ಎಲ್ಲ ಜವಾಬ್ದಾರಿಯುತ ವ್ಯಕ್ತಿಗಳಿಗೂ ಇರುತ್ತದೆ. ಇಂಥ ಮತದಾರ ವಲಯ- ಸಾಮಾಜಿಕ ವಲಯವು ರಾಜಕೀಯ ವಲಯದ ಜೊತೆ ಕೈ ಜೋಡಿಸಿದರೆ
ಏಕವ್ಯಕ್ತಿ ಸೇನೆಯಂಥ ದಿಟ್ಟರು ಎಲ್ಲ ಕಾಲದಲ್ಲೂ ಮೂಡುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT