ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ – ನಮಸ್ಕಾರ ಅಂಕಣ: ನವಭಾರತವನ್ನು ಎದುರಿಸಬೇಕಿದೆ ಕೆನಡಾ

Published 23 ಅಕ್ಟೋಬರ್ 2023, 0:12 IST
Last Updated 23 ಅಕ್ಟೋಬರ್ 2023, 0:12 IST
ಅಕ್ಷರ ಗಾತ್ರ

ಭಾರತದ ರಾಷ್ಟ್ರೀಯ ನಾಯಕರ ಪುಕ್ಕಲುತನದ ಕಾರಣದಿಂದಾಗಿ, ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ಭಾರತವನ್ನು ಪಶ್ಚಿಮದ ದೇಶಗಳು, ಚೀನಾ ಹಾಗೂ ಕೆಲವೊಮ್ಮೆ ಪಾಕಿಸ್ತಾನ ಸಹ ಬೆದರಿಸು ತ್ತಿದ್ದವು. ತನ್ನ ನಿಲುವನ್ನು ಗಟ್ಟಿಯಾಗಿ ಹೇಳಬೇಕಾಗಿದ್ದ ಸಂದರ್ಭದಲ್ಲಿಯೂ ಭಾರತವು ಬಹಳ ಸೌಮ್ಯವಾಗಿ ನಡೆದುಕೊಳ್ಳುತ್ತಿತ್ತು. ವಿಶ್ವದ ಇತರ ದೇಶಗಳ ಪಾಲಿಗೆ ಇದು ಭಾರತದ ಸಹಜ ನಡೆ ಎಂಬಂತಾಗಿತ್ತು. ಹೀಗಾಗಿ, ಕೆನಡಾದಂತಹ ದೇಶಗಳು ಇಂತಹ ನಿಲುವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದವು.

ಆದರೆ, ರಾಷ್ಟ್ರ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರು ಮುನ್ನೆಲೆಗೆ ಬಂದ ನಂತರದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ತಾವು ‘ನವಭಾರತ’ದ ಜೊತೆ ಸಂಬಂಧ ನಿಭಾಯಿಸಬೇಕು ಎಂಬುದು ನೆರೆಯ ಚೀನಾ ಮತ್ತು ಪಾಕಿಸ್ತಾನಕ್ಕೆ ಗೊತ್ತಾಗಿದೆ. ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಕೂಡ ಈಚಿನ ದಿನಗಳಲ್ಲಿ ಇದನ್ನು ಅರ್ಥ ಮಾಡಿಕೊಂಡಿವೆ, ತನ್ನ ಪಟ್ಟು ಬಿಟ್ಟುಕೊಡದ ಭಾರತದ ಜೊತೆ ಸಂಬಂಧಕ್ಕಾಗಿ ತಮ್ಮ ನಡೆಗಳಲ್ಲಿ ಬದಲಾವಣೆ ತಂದುಕೊಂಡಿವೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಗಂಭೀರ ಆರೋಪಗಳಿಗೆ ಭಾರತ ನೀಡುತ್ತಿರುವ ದೃಢ ಪ್ರತಿಕ್ರಿಯೆಗಳನ್ನು ‘ನವಭಾರತ’ದ ನಿಲುವುಗಳ ಸೂಚಕವಾಗಿ ನೋಡಬೇಕು.

ಕೆನಡಾದ ನೆಲದಲ್ಲಿ ‘ಖಾಲಿಸ್ತಾನ’ ಪರವಾಗಿ ನಡೆಯುತ್ತಿರುವ ಅಭಿಯಾನದ ಕುರಿತು ಭಾರತವು ಬಹಳ ಹಿಂದೆಯೇ ಕೆನಡಾ ಸರ್ಕಾರದ ಗಮನ ಸೆಳೆದಿತ್ತು. ಇಂದಿರಾ ಗಾಂಧಿ ಅವರ ಹತ್ಯೆಯನ್ನು ವೈಭವೀಕರಿಸುವ ಹಾಗೂ ಭಾರತದ ನಾಯಕರ ಹತ್ಯೆಗೆ ಕರೆ ನೀಡುವ ಕೆಲಸವು ಕೆನಡಾದ ಬ್ರಾಂಪ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಗಿತ್ತು. ಕೆನಡಾದ ಒಟ್ಟಾವಾದಲ್ಲಿ ಇರುವ ಭಾರತದ ಹೈಕಮಿಷನರ್‌, ಉಪ ಹೈಕಮಿಷನರ್ ಹಾಗೂ ಟೊರಂಟೊದಲ್ಲಿನ ಕಾನ್ಸುಲ್ ಜನರಲ್ ಹತ್ಯೆಗೆ ಕರೆ ನೀಡಲಾಗಿತ್ತು. ಆಘಾತಕಾರಿ ಸಂಗತಿಯೆಂದರೆ, ಇವೆಲ್ಲವೂ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ, ನಾವು ಮಧ್ಯಪ್ರವೇಶಿಸಲು ಆಗದು’ ಎಂದು ಟ್ರೂಡೊ ನೇತೃತ್ವದ ಸರ್ಕಾರವು ಹೇಳಿತ್ತು.

ಇವೆಲ್ಲವೂ ಒಂದೆಡೆ ನಡೆಯುತ್ತಿದ್ದಾಗ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್‌ ಹತ್ಯೆಯು ಭಾರತ–ಕೆನಡಾ ಸಂಬಂಧವು ಹಾಳಾಗಲು ಹೊಸ ಕಾರಣವಾಗಿ ಬಂತು. ಭಾರತದ ವಿರುದ್ಧ ಅಭಿಯಾನ ನಡೆಸುವ, ಭಾರತದಲ್ಲಿ ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುವ ಕೆಲಸವನ್ನು ನಿಜ್ಜರ್ ಮಾಡುತ್ತಿದ್ದ. ಬ್ರಿಟಿಷ್ ಕೊಲಂಬಿಯಾದ ಸರ್‍ರೆ ಪ್ರದೇಶದ ಗುರುದ್ವಾರವೊಂದರ ಬಳಿ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ನಿಜ್ಜರ್‌ನನ್ನು ಜೂನ್‌ 18ರಂದು ಗುಂಡಿಕ್ಕಿ ಹತ್ಯೆ ಮಾಡಿದರು.

ಹತ್ಯೆಯಾದ ಕೆಲವು ಸಮಯದ ನಂತರ, ಭಾರತದ ರಾಜತಾಂತ್ರಿಕರೊಬ್ಬರನ್ನು ಹೊರಹಾಕಲು ಕೆನಡಾ ತೀರ್ಮಾನಿಸಿತು. ಹತ್ಯೆ ಅಪರಾಧದಲ್ಲಿ  ಈ ರಾಜತಾಂತ್ರಿಕ ಒಂದು ಬಗೆಯಲ್ಲಿ ಭಾಗಿ ಎಂದು ದೂರಿತು. ಇದನ್ನು ತೀವ್ರವಾಗಿ ವಿರೋಧಿಸಿದ ಭಾರತವು ಪ್ರತಿಯಾಗಿ ಕೆನಡಾದ ರಾಜತಾಂತ್ರಿಕರೊಬ್ಬರನ್ನು ಹೊರಕಳಿಸಿತು. ಕೆನಡಿಯನ್ ವ್ಯಕ್ತಿಯನ್ನು ಕೆನಡಾದ ನೆಲದಲ್ಲಿ ಹತ್ಯೆ ಮಾಡಿದ್ದರಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರವಿದೆ ಎಂದು ನಂಬುವುದಕ್ಕೆ ವಿಶ್ವಾಸಾರ್ಹ ಕಾರಣಗಳಿವೆ ಎಂದು ಕೆನಡಾ ಪ್ರಧಾನಿ ಅಲ್ಲಿನ ಸಂಸತ್ತಿನಲ್ಲಿ ಹೇಳಿದ ನಂತರದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವು ಹದಗೆಟ್ಟಿದೆ.

ಇದಕ್ಕೆ ಬಹಳ ದೃಢವಾದ ಪ್ರತಿಕ್ರಿಯೆ ನೀಡಿದ ಭಾರತ, ಆರೋಪಗಳು ರಾಜಕೀಯಪ್ರೇರಿತ ಎಂದು ಹೇಳಿತು. ಭಾರತ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲು ಕೆನಡಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದೂ ಭಾರತ ಹೇಳಿತು. ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸುವ ಪ್ರಕಟಣೆ ಹೊರಡಿಸಿತು. ನಂತರದಲ್ಲಿ, 41 ಮಂದಿ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತವು ಕೆನಡಾಕ್ಕೆ ಸೂಚಿಸಿತು. ಇದು ಭಾರತ ನೀಡಿದ ಕಟು ಪ್ರತ್ಯುತ್ತರವೇ ಆಗಿತ್ತು. ಭಾರತದಿಂದ ಈ ಬಗೆಯ ಪ್ರತ್ಯುತ್ತರವನ್ನು ಕೆನಡಾ ಅಥವಾ ಯಾವುದೇ ಪಾಶ್ಚಿಮಾತ್ಯ ದೇಶ ಹಿಂದೆ ಕಂಡಿರಲಿಲ್ಲ. ಭಾರತದ ಪ್ರಜೆಗಳಿಗೆ ವೀಸಾ ನಿರಾಕರಿಸಿದರೆ ತನಗೇ ತೊಂದರೆ ಆಗುತ್ತದೆ ಎಂಬುದನ್ನು ಕೆನಡಾ ಅರ್ಥ ಮಾಡಿಕೊಂಡಿತು. ಏಕೆಂದರೆ ಲಕ್ಷಾಂತರ ಮಂದಿ ಭಾರತೀಯ ವಿದ್ಯಾರ್ಥಿಗಳು ಕೆನಡಾದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡದೇ ಇದ್ದಲ್ಲಿ, ಈ ವಿಶ್ವ ವಿದ್ಯಾಲಯಗಳ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಉಂಟಾಗುತ್ತದೆ.

ಎರಡನೆಯದಾಗಿ, ಭಾರತ ಮೂಲದ ಜನರ ಸಂಖ್ಯೆ ಕೆನಡಾದಲ್ಲಿ ಬಹಳ ದೊಡ್ಡದಾಗಿಯೇ ಇದೆ. ಭಾರತೀಯರಿಗೆ ವೀಸಾ ನೀಡುವ ವಿಚಾರದಲ್ಲಿ ಕೆನಡಾ ನಿರ್ಬಂಧಗಳನ್ನು ಹೇರಿದಲ್ಲಿ, ಕೆನಡಾ ನಾಗರಿಕರ ಮೇಲೆಯೇ ಕೆಟ್ಟ ಪರಿಣಾಮ ಉಂಟಾಗುತ್ತದೆ. ಅಲ್ಲಿನ ಭಾರತ ಮೂಲದ ನಾಗರಿಕರಲ್ಲಿ ಹೆಚ್ಚಿನವರು ಪಂಜಾಬ್‌ನವರು. ಅವರ ಕುಟುಂಬದ ಸದಸ್ಯರು ಪಂಜಾಬ್‌ನಲ್ಲಿ ಇದ್ದಾರೆ. ನಿಜ್ಜರ್‌ ಹತ್ಯೆಯ ವಿಚಾರವಾಗಿ ಹೇಳುವುದಾದಲ್ಲಿ, ಈ ಹತ್ಯೆ ಪ್ರಕರಣದ ತನಿಖೆಯು ಸಮರ್ಥವಾಗಿ ಆಗಿಲ್ಲ, ತನಿಖಾ ಪ್ರಕ್ರಿಯೆ ಬಹಳ ನಿಧಾನವಾಗಿ ನಡೆದಿದೆ. ನಿಜ್ಜರ್ ಹತ್ಯೆಯಾಗಿ ನಾಲ್ಕು ತಿಂಗಳುಗಳು ಕಳೆದಿದ್ದರೂ ಯಾರನ್ನೂ ಬಂಧಿಸಲಾಗಿಲ್ಲ.

ಕೆನಡಾ ಜೊತೆಗಿನ ಸಂಘರ್ಷವು ಗಂಭೀರ ಸ್ವರೂಪ ಪಡೆದುಕೊಂಡ ನಂತರದಲ್ಲಿ ವಾಷಿಂಗ್ಟನ್‌ನಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಪಾಲಿಸಿಕೊಂಡು ಬಂದಿರುವ ದೃಢವಾದ ಹಾಗೂ ಯಾವುದೇ ಅವಿವೇಕಗಳಿಂದ ಹೊರತಾಗಿರುವ ನಿಲುವನ್ನು ಸ್ಪಷ್ಟವಾಗಿ ಹೇಳಿದರು. ಭಾರತದ ರಾಜತಾಂತ್ರಿಕರು ಕೆನಡಾದಲ್ಲಿ ಬೆದರಿಕೆಯ ವಾತಾವರಣದಲ್ಲಿ ಹಾಗೂ ಹಿಂಸೆಯ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಜೈಶಂಕರ್ ಹೇಳಿದರು. ಈ ಪರಿಸ್ಥಿತಿ ಕೊನೆಗೊಳ್ಳಬೇಕಿತ್ತು. ಜಸ್ಟಿನ್ ಟ್ರೂಡೊ ಅವರು ಆರಂಭದಲ್ಲಿ ಖಾಸಗಿಯಾಗಿ ಕೆಲವು ಆರೋಪಗಳನ್ನು ಮಾಡಿದರು, ನಂತರದಲ್ಲಿ ಬಹಿರಂಗವಾಗಿ ಹೇಳಿಕೆಯೊಂದನ್ನು ನೀಡಿದರು ಎಂದೂ ಜೈಶಂಕರ್ ವಿವರಿಸಿದರು. ನಿರ್ದಿಷ್ಟವಾದ ಯಾವುದೇ ಆಧಾರ ಟ್ರೂಡೊ ಅವರಲ್ಲಿ ಇದ್ದರೆ ಭಾರತ ಅದನ್ನು ಪರಿಶೀಲಿಸುತ್ತದೆ. ಸಿಖ್ ಪ್ರತ್ಯೇಕತಾವಾದವು ಭಾರತ ಮತ್ತು ಕೆನಡಾ ನಡುವೆ ತೀವ್ರ ಸಂಘರ್ಷಕ್ಕೆ 1980ರ ದಶಕದಿಂದಲೂ ಕಾರಣವಾಗಿದೆ. ಅದು ಕೆಲವು ಕಾಲ ಸುಪ್ತವಾಗಿತ್ತು. ಆದರೆ ಭಯೋತ್ಪಾದನೆಯ ಬಗ್ಗೆ ಕೆನಡಾ ಹೊಂದಿರುವ ಧೋರಣೆಯ ಕಾರಣದಿಂದಾಗಿ ಮತ್ತೆ ದೊಡ್ಡ ಮಟ್ಟದಲ್ಲಿ ತಲೆ ಎತ್ತಿದೆ.

ಕೆನಡಾದ ರಾಜಕಾರಣದ ಒತ್ತಡಗಳ ಕಾರಣದಿಂದಾಗಿ, ಹಿಂಸೆಯ ಪರವಾಗಿರುವ ತೀವ್ರಗಾಮಿಗಳಿಗೆ ಕಾರ್ಯಾಚರಣೆ ನಡೆಸಲು ಕೆನಡಾದಲ್ಲಿ ಒಂದಿಷ್ಟು ಅವಕಾಶ ಲಭಿಸಿದೆ. ಅವರು ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ. ಇವೆಲ್ಲವೂ ಬೇರೆ ಬೇರೆ ವಿಚಾರಗಳ ಬಹಳ ವಿಷಕಾರಿ ಮಿಶ್ರಣ ಎಂದು ಜೈಶಂಕರ್ ಬಣ್ಣಿಸಿದ್ದಾರೆ.

ಭಾರತದ ಈ ಗಟ್ಟಿ ಉತ್ತರದ ನಂತರದಲ್ಲಿ ಕೆನಡಾ ಒಂದು ಹೆಜ್ಜೆ ಹಿಂದಕ್ಕೆ ಸರಿದಿದೆ. ಹತ್ಯೆಯನ್ನು ಉತ್ತೇಜಿಸುವ ಪೋಸ್ಟರ್‌ಗಳನ್ನು ತೆಗೆಯಲಾಗಿದೆ. ಇಡೀ ವಿಚಾರವನ್ನು ಇನ್ನಷ್ಟು ಬೆಳೆಸಲು ತಮಗೆ ಇಷ್ಟವಿಲ್ಲ ಎಂದು ಟ್ರೂಡೊ ಹೇಳಿದ್ದಾರೆ. ಮೋದಿ ಅವರ ದೃಢ ನಿಲುವುಗಳು ಈಗಂತೂ ಒಳ್ಳೆಯ ಫಲ ನೀಡುತ್ತಿರುವಂತೆ ಕಾಣುತ್ತಿದೆ. ಫಲಿತಾಂಶ ಏನೇ ಇದ್ದರೂ, ಭಾರತವು ತಾನು ಬೆದರಿಕೆಗೆ ಮಣಿಯುವ ರಾಷ್ಟ್ರ ಅಲ್ಲ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದೆ. ಇದು ಹಿಂದೆಯೇ ಆಗಬೇಕಿದ್ದ ಕೆಲಸ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT