ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ ಉಗ್ರರಿಗೆ ಕಾನೂನಿನ ಕುಣಿಕೆ

Last Updated 2 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಇರಾಕ್, ಸಿರಿಯಾಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಐಎಸ್‌ (ISIS) ಎಂಬ ಜಿಹಾದಿ ಉಗ್ರ ಸಂಘಟನೆಯು ಅಮಾಯಕ ಜನರ ಮೇಲೆ ನಡೆಸುತ್ತಿರುವ ದುಷ್ಕೃತ್ಯಗಳು ಬಲಿಷ್ಠ ದೇಶಗಳ ನಿದ್ದೆಗೆಡಿಸಿವೆ. ಅಮೆರಿಕ, ಇಂಗ್ಲೆಂಡ್, ರಷ್ಯಾ ಸೇರಿದಂತೆ ಹಲವು ದೇಶಗಳು ಮಿಲಿಟರಿ ದಾಳಿ ನಡೆಸಿ ಐಎಸ್‌ನ ಧೂರ್ತ ನಡೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ. ಐಎಸ್ ನಡೆಸಿರುವ ದುಷ್ಕೃತ್ಯಗಳಾದರೂ ಎಂತಹವು? ಇದರಿಂದಾದ ಪರಿಣಾಮಗಳೇನು? ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಇದಕ್ಕೇನು ಪರಿಹಾರ?

ಸಿರಿಯಾ ಮತ್ತು ಇರಾಕ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ದಮನದ ಬಗ್ಗೆ 2015ರ ಡಿಸೆಂಬರ್‌ನಲ್ಲಿ  ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡ   ನಿರ್ಣಯದಲ್ಲಿ ದಿಗ್ಭ್ರಮೆ ವ್ಯಕ್ತವಾಗಿದೆ. ‘ವಾಷಿಂಗ್ಟನ್ ಪೋಸ್ಟ್’ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಸಿರಿಯಾ, ಇರಾಕ್‌ನಲ್ಲಿ ಐಎಸ್‌ನಿಂದ ನಡೆಯುತ್ತಿರುವ, ನಮ್ಮ ಕಲ್ಪನೆಗೂ ನಿಲುಕದ ಅಮಾನವೀಯ ಕೃತ್ಯಗಳನ್ನು ಉಲ್ಲೇಖಿಸಲಾಗಿದೆ.

ಐಎಸ್ ಉಗ್ರರ ಕಪಿಮುಷ್ಟಿಯಿಂದ ಹೇಗೋ ಪಾರಾಗಿ ಬಂದ ಯಜೀದಿಎಂಬ ಅಲ್ಪಸಂಖ್ಯಾತ ಪಂಗಡದ ಕೆಲವು ಮಹಿಳೆಯರು ತಮಗೊದಗಿದ ಸಂಕಷ್ಟಗಳನ್ನು ಈ ವರದಿಯಲ್ಲಿ ಕರುಳು ಹಿಂಡುವಂತೆ ಬಿಚ್ಚಿಟ್ಟಿದ್ದಾರೆ. ಇವುಗಳಲ್ಲಿ, ನೂರಾರು ಗಂಡಸರನ್ನು ಹತ್ಯೆ ಮಾಡಿ  ಅವರ ಹೆಂಡತಿಯರನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದ ಕತೆ, ಬಲವಂತವಾಗಿ ಅವರನ್ನು ಇಸ್ಲಾಂಗೆ ಮತಾಂತರಿಸಿದ್ದು, ಒತ್ತಡ ಹೇರಿ ಮದುವೆ ಮಾಡಿಕೊಂಡದ್ದು, ಅತ್ಯಾಚಾರ ವಿರೋಧಿಸಿದವರ ಬರ್ಬರ ಹತ್ಯೆ, ಇದನ್ನೆಲ್ಲ ಸಹಿಸದೆ ಕೆಲವು ಸ್ತ್ರೀಯರು, ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಮಾಹಿತಿಯಿದೆ.

‘ದ ಇಂಡಿಪೆಂಡೆಂಟ್’ ಪತ್ರಿಕೆಯು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರದಿಯನ್ನು ಉಲ್ಲೇಖಿಸಿ ಪ್ರಕಟಿಸಿರುವ ವರದಿಯ ಅನ್ವಯ, ಕೇವಲ ಇರಾಕ್‌ನಲ್ಲೇ ಐಎಸ್‌ ಉಗ್ರರು ಒಂದು ವರ್ಷದ ಅವಧಿಯಲ್ಲಿ 18,800 ಜನರನ್ನು ಅಮಾನುಷವಾಗಿ ಕೊಂದು, 32 ಲಕ್ಷ ಜನರನ್ನು ದೇಶದಿಂದ ಓಡಿಸಿ ನಿರ್ಗತಿಕರನ್ನಾಗಿಸಿದ್ದಾರೆ. 3,500 ಅಮಾಯಕ ಜನರನ್ನು ತಮ್ಮ ಚಾಕರಿ ಮಾಡಲು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.

ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಲ್ಲಿ, ಸಿರಿಯಾದ 65 ಲಕ್ಷ ನಾಗರಿಕರು ತಮ್ಮದೇ ದೇಶದಲ್ಲಿ ನಿರ್ಗತಿಕರಾಗಿರುವ ಬಗ್ಗೆಯೂ ಉಲ್ಲೇಖವಿದೆ. ಇನ್ನು, ಒತ್ತೆಯಾಳುಗಳ ಕತ್ತು ಛೇದಿಸಿ ಬರ್ಬರವಾಗಿ ಹತ್ಯೆ ಮಾಡಿದ ವಿಡಿಯೊ ಬಿಡುಗಡೆ, ರಷ್ಯಾದ ವಿಮಾನವನ್ನು ಹೊಡೆದುರುಳಿಸಿದ್ದು, ಸಾಂಸ್ಕೃತಿಕ ನಗರಿ ಪಲ್ಮೆರಾದಲ್ಲಿನ 2000 ವರ್ಷಗಳಷ್ಟು ಹಳೆಯದಾದ ಹಾಗೂ ಯುನೆಸ್ಕೊ ಪಟ್ಟಿಯಲ್ಲಿದ್ದ ಸುಂದರ ದೇವಾಲಯ ಸೇರಿದಂತೆ ಹಲವು ಸಾಂಸ್ಕೃತಿಕ ಸ್ಮಾರಕಗಳ ನಾಶ, ಫ್ರಾನ್ಸ್ ಒಳಗೊಂಡು ಹಲವು ದೇಶಗಳಲ್ಲಿ ಉಗ್ರವಾದ, ಒಂದೇ ಎರಡೇ... ಹೊರಜಗತ್ತಿಗೆ ಗೊತ್ತಾಗದೆ ಉಳಿದ ಬರ್ಬರ ಕೃತ್ಯಗಳೆಷ್ಟಿವೆಯೋ!

ಕಾನೂನಿನ ದೃಷ್ಟಿಯಲ್ಲಿ ಇವೆಲ್ಲ ಗುರುತರವಾದ ಅಪರಾಧಗಳು. ಇಂಥ ಅಪರಾಧಗಳ ತಡೆಗೆ ಹಲವಾರು ಅಂತರ ರಾಷ್ಟ್ರೀಯ ಒಪ್ಪಂದಗಳು, ರೂಢಿಗತ ತತ್ವಗಳಿದ್ದು, ಈ ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಥ ಅಪರಾಧವೆಸಗಿದ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಅಮಾಯಕರ ಹತ್ಯೆ, ಅವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವುದು, ಜನಾಂಗೀಯ ನಾಶ, ಧರ್ಮಾಧಾರಿತ ಅಪರಾಧಗಳು, ಲೈಂಗಿಕ ಶೋಷಣೆ, ನಿರಾಶ್ರಿತರನ್ನಾಗಿಸುವಿಕೆ ಇತ್ಯಾದಿಗಳೆಲ್ಲವನ್ನೂ ‘ಯುದ್ಧ ಅಪರಾಧ’ಗಳೆಂದು ಅಂತರರಾಷ್ಟ್ರೀಯ ಕಾನೂನು ಪರಿಗಣಿಸುತ್ತದೆ.

ಇವೆಲ್ಲ ಈ  ಕಾನೂನಿನ ವ್ಯಾಪ್ತಿಗೆ ಒಳಪಡಲು ಕಾರಣವೆಂದರೆ, ಇವು ಅಧಿಕಾರಕ್ಕಾಗಿ ಪೈಪೋಟಿ ನಡೆಸುವ ಎರಡು ಬಣಗಳ ನಡುವಿನ ಫಲಿತಾಂಶದಿಂದ ಉದ್ಭವವಾಗಿರುತ್ತವೆ; ಅಪರಾಧ ಘಟಿಸಿದ ದೇಶಗಳಲ್ಲಿನ ಸರ್ಕಾರಗಳು ಇವನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆಯಷ್ಟೆ ಅಲ್ಲ, ಈ ಅಪರಾಧಗಳು ಬೇರೆ ರಾಷ್ಟ್ರಗಳ ನಾಗರಿಕರ ಮೇಲೂ ಪರಿಣಾಮ ಬೀರಲಾರಂಭಿಸಿವೆ.

ಇವನ್ನು ಹೀಗೇ ಬಿಟ್ಟಲ್ಲಿ ಮಧ್ಯಪ್ರಾಚ್ಯದ ರಾಷ್ಟ್ರಗಳಷ್ಟೆ ಅಲ್ಲ, ಭಾರತವೂ ಸೇರಿದಂತೆ ವಿಶ್ವದ ಉಳಿದ ರಾಷ್ಟ್ರಗಳ ಭದ್ರತೆ, ಸಾಮರಸ್ಯದ ಮೇಲೂ ದುಷ್ಪರಿಣಾಮ ಆಗುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಒಂದು ದೇಶದಲ್ಲಿ ಅಮಾಯಕರ ಮೇಲೆ ದೌರ್ಜನ್ಯವಾಗುತ್ತಿದ್ದರೆ ಉಳಿದ ಜವಾಬ್ದಾರಿಯುತ ದೇಶಗಳು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಒಂದು ಶಕ್ತಿ ಇನ್ನೊಂದು ಶಕ್ತಿಯನ್ನು ಮಣಿಸಿ ಗೆಲುವು ಸಾಧಿಸುವುದೇ ಯುದ್ಧವಾಗಿದ್ದರೂ, ಶತ್ರುಪಡೆಯನ್ನು ನೈತಿಕ ಮಾರ್ಗದಲ್ಲೇ ಸೋಲಿಸಿ, ಅಮಾಯಕರಿಗೆ, ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಕರುಣೆ, ದಯೆ ತೋರಿಸಬೇಕೆಂದು ಅಂತರರಾಷ್ಟ್ರೀಯ ಯುದ್ಧ ಕಾನೂನು ನಿರ್ದೇಶಿಸುತ್ತದೆ.

ದ್ವಿತೀಯ ಮಹಾಯುದ್ಧದ ನಂತರ ಹಿಟ್ಲರ್‌ನ ನೇತೃತ್ವದಲ್ಲಿ ಜರ್ಮನಿಯಲ್ಲಿ ಯಹೂದಿಗಳು ಸೇರಿದಂತೆ ನಾಗರಿಕರ ಮೇಲೆ ದುಷ್ಕೃತ್ಯ ಎಸಗಿದ ಹಲವರನ್ನು 1946ರಲ್ಲಿ ‘ನೂರೆಂಬರ್ಗ್ ವಿಚಾರಣೆ’ಯ ಮೂಲಕ ಶಿಕ್ಷೆಗೆ ಒಳಪಡಿಸಲಾಯಿತು. ನಂತರ ಇದೇ ‘ನೂರೆಂಬರ್ಗ್ ತತ್ವ’ ಎಂದು ಖ್ಯಾತವಾಯಿತು. ಇದರಲ್ಲಿ, ಯುದ್ಧಾಪರಾಧ ಎಂದರೇನು ಎಂಬುದನ್ನು  ವಿವರಿಸಲಾಗಿದೆ. ಈ ಪ್ರಕಾರ ಯುದ್ಧ  ನೀತಿಗಳ ಉಲ್ಲಂಘನೆ, ನಾಗರಿಕರ ಹತ್ಯೆ, ದೇಶದಿಂದ ಹೊರ ದಬ್ಬುವಿಕೆ, ಯುದ್ಧ ಕೈದಿಗಳ ಕೊಲೆ, ಯಾತನೆ ನೀಡುವುದು ಇತ್ಯಾದಿ ಯುದ್ಧಾಪರಾಧಗಳಾಗಿದ್ದು, ಇವಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ.

1949ರಲ್ಲಿ ಯುದ್ಧಕ್ಕೆ ಸಂಬಂಧಿಸಿದ ನಾಲ್ಕು ನಿರ್ಣಯಗಳು, ಅವುಗಳ ನಿಯಮಾವಳಿಗಳು ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳ ಸಹಕಾರದಿಂದ ಜಾರಿಗೆ ಬಂದಿವೆ. ಇವನ್ನು ‘ಜಿನೀವಾ ಒಪ್ಪಂದ’ಗಳೆಂದು ಕರೆಯಲಾಗುತ್ತದೆ. ಇವುಗಳಲ್ಲಿ   ಯುದ್ಧನಿರತ ಸೈನಿಕರನ್ನು ಹೊರತುಪಡಿಸಿ ಬೇರೆಯವರ ರಕ್ಷಣೆಯನ್ನು ಹೇಗೆ ಮಾಡಬೇಕೆಂಬುದನ್ನು ಕೂಲಂಕಷವಾಗಿ ವಿವರಿಸಲಾಗಿದೆ (ಉದಾಹರಣೆಗೆ, ನಾಗರಿಕ ವಲಯವನ್ನು ಯುದ್ಧದಿಂದ ಬೇರ್ಪಡಿಸುವುದು, ಯುದ್ಧ ಕೈದಿಗಳನ್ನು ಮಾನವೀಯತೆಯಿಂದ ಕಾಣುವುದು, ಯುದ್ಧದಲ್ಲಿ ಭಾಗವಹಿಸದವರ ಮೇಲೆ ಹಲ್ಲೆ ನಡೆಸದಿರುವುದು, ಹತ್ಯೆ, ಅತ್ಯಾಚಾರ, ಹೊರ ದಬ್ಬುವಿಕೆ, ಧರ್ಮ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದಿರುವಿಕೆ, ಮಕ್ಕಳನ್ನು ಸೈನ್ಯಕ್ಕೆ ಸೇರಿಸಿಕೊಳ್ಳದಿರುವುದು ಇತ್ಯಾದಿ). ಅದರಲ್ಲೂ ಜಿನೀವಾದ ನಾಲ್ಕನೇ ಒಪ್ಪಂದವು ಯುದ್ಧದ ಸಮಯದಲ್ಲಿ ನಾಗರಿಕರನ್ನು ಹೇಗೆ ರಕ್ಷಿಸಬೇಕೆಂಬುದನ್ನು ವಿಸ್ತೃತವಾಗಿ ತಿಳಿಸಿದೆ.

ಅಲ್ಲದೆ ಐಎಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಕೃತ್ಯಗಳು ಈ ಒಪ್ಪಂದದಡಿ ನಿಷೇಧಕ್ಕೆ ಒಳಗಾಗಿವೆ. ಈ ಒಪ್ಪಂದಗಳು ಎರಡು ದೇಶಗಳ ನಡುವಿನ ಯುದ್ಧದ ಬಗೆಗಷ್ಟೆ ಹೇಳುವುದಿಲ್ಲ, ಇವು ಐಎಸ್‌ನಂಥ ಗುಂಪುಗಳಿಗೂ ಅನ್ವಯಿಸುತ್ತವೆ.

ಇಷ್ಟೇ ಅಲ್ಲದೆ, 1948ರ ಜನಾಂಗೀಯ ಹತ್ಯೆ ಕುರಿತ ನಿರ್ಣಯ (Genocide Convention) ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಅದರ ಸದಸ್ಯರ ಹತ್ಯೆ, ಅವರಿಗೆ ಮಾನಸಿಕವಾಗಿ ಅಥವಾ ದೈಹಿಕವಾಗಿ ಹಾನಿ ಉಂಟು ಮಾಡುವುದು, ಜನನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಮುಂತಾದವನ್ನು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಅಪರಾಧಗಳೆಂದು ಪರಿಗಣಿಸಲಾಗಿದೆ.

ಈ ನಿರ್ಣಯವನ್ನು ಇರಾಕ್, ಸಿರಿಯಾ, ಭಾರತ ಸೇರಿದಂತೆ 147 ದೇಶಗಳು ಅಂಗೀಕರಿಸಿವೆ. ಇನ್ನು 1984ರಲ್ಲಿ ಕೈಗೊಂಡ ಕ್ರೌರ್ಯ ವಿರೋಧಿ ನಿರ್ಣಯ ಯಾವುದೇ ವ್ಯಕ್ತಿಯ ವಿರುದ್ಧ ಹಿಂಸೆ ಅಥವಾ ಕ್ರೌರ್ಯವನ್ನು ಅಪರಾಧ ಎಂದು ಪರಿಗಣಿಸುತ್ತದೆ. ಈ ನಿರ್ಣಯವನ್ನು ಕೇವಲ 20 ದೇಶಗಳು ಅನುಮೋದಿಸಿವೆ. ಭಾರತವೂ ಸೇರಿದಂತೆ ಇತರ ಅನೇಕ ರಾಷ್ಟ್ರಗಳು ಇನ್ನಷ್ಟೆ ಅನುಮೋದಿಸಬೇಕಿದೆ. ಇಷ್ಟೇ ಅಲ್ಲದೆ ಇನ್ನೂ ಹಲವು ಬಹುಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ಐಎಸ್‌ನ ದುಷ್ಕೃತ್ಯಗಳಿಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಹಾಗಾದರೆ, ಐಎಸ್‌ನ ದುಷ್ಕೃತ್ಯಗಳನ್ನು ಎಲ್ಲಿ ಮತ್ತು ಹೇಗೆ ವಿಚಾರಣೆಗೆ ಒಳಪಡಿಸಬಹುದು?

ಅಂತರರಾಷ್ಟ್ರೀಯ ಗುರುತರ ಅಪರಾಧಗಳ ವಿಚಾರಣೆ ನಡೆಸಲು ಮತ್ತು ಶಿಕ್ಷಿಸಲು ಹಲವು ದಾರಿಗಳಿವೆ. ಅವುಗಳಲ್ಲಿ ಪ್ರಮುಖವಾದುದು,  ನೆದರ್ಲೆಂಡ್‌ನ ಹೇಗ್‌ನಲ್ಲಿ ಸ್ಥಾಪಿತವಾಗಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ). ಸಿರಿಯಾ ಹಾಗೂ ಇರಾಕ್ ಇದರ ಸದಸ್ಯ ರಾಷ್ಟ್ರಗಳಲ್ಲ. ಆದರೂ ಐಎಸ್‌ನ ಕೃತ್ಯಗಳು ಯುದ್ಧಾಪರಾಧ, ಮಾನವೀಯತೆ ವಿರುದ್ಧದ ಅಪರಾಧ ಹಾಗೂ ಜನಾಂಗೀಯ ಹತ್ಯೆ ಎಂದು ಆಪಾದಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅವುಗಳನ್ನು ಐಸಿಸಿಗೆ ಒಪ್ಪಿಸಬಹುದು.

2015ರ ಅಕ್ಟೋಬರ್ 22ರಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಸಿರಿಯಾದ ಪರಿಸ್ಥಿತಿಯ ವಿಚಾರಣೆಯನ್ನು ಐಸಿಸಿಗೆ ಒಪ್ಪಿಸಬೇಕೆಂದು ಅಭಿಪ್ರಾಯಪಟ್ಟು ವರದಿ ನೀಡಿದ್ದಾರೆ. ಇಂಥ ಪ್ರಯತ್ನವನ್ನು ಫ್ರಾನ್ಸ್ 2014ರಲ್ಲೇ ಮಾಡಿತ್ತು. ಆಗ ರಷ್ಯಾ ಇದನ್ನು ವಿರೋಧಿಸಿತ್ತು. ಆದರೆ ಪ್ಯಾರಿಸ್‌ನಲ್ಲಿನ ಭಯೋತ್ಪಾದಕ ಕೃತ್ಯದಿಂದ 130 ಅಮಾಯಕರ ಹತ್ಯೆಯಾದ ನಂತರ ಅದೇ ಫ್ರಾನ್ಸ್ ಐಎಸ್‌ ಅನ್ನು ಮಟ್ಟ ಹಾಕಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂಲಕ 2015ರ ನವೆಂಬರ್ 20ರಂದು ಒಂದು ಗೊತ್ತುವಳಿ ಅಂಗೀಕರಿಸುವಂತೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

ರವಾಂಡ,  ಯುಗೊಸ್ಲಾವಿಯಾ, ಬಾಂಗ್ಲಾ ದೇಶಗಳಲ್ಲಿನ ಯುದ್ಧಾಪರಾಧಗಳ ವಿಚಾರಣೆ ನಡೆಸಲು ತಾತ್ಕಾಲಿಕ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿದ ಮಾದರಿಯಲ್ಲೇ ಐಎಸ್‌ನ ಅಪರಾಧಗಳ ವಿಚಾರಣೆಗೂ ತಾತ್ಕಾಲಿಕ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿ ತಪ್ಪಿತಸ್ಥರನ್ನು ಶಿಕ್ಷಿಸಲು ಸಾಧ್ಯವಿದೆ. ಆದರೆ ಈ ಪ್ರಯತ್ನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದಲೇ ಆಗಬೇಕಾಗಿದೆ.

ಒಂದು ರಾಷ್ಟ್ರದ ನಾಗರಿಕರು ಬೇರೊಂದು ರಾಷ್ಟ್ರದ ನಾಗರಿಕರ ಮೇಲೆ ಅಪರಾಧ ಎಸಗಿದ್ದರೆ ನೊಂದ ನಾಗರಿಕರ ರಾಷ್ಟ್ರವೂ ಐಎಸ್‌ನ ಸದಸ್ಯರಿಗೆ ಅಂತರರಾಷ್ಟ್ರೀಯ ಕಾನೂನಿನ ಅನ್ವಯ ತಟಸ್ಥ ರಾಷ್ಟ್ರೀಯತಾ ತತ್ವದ ಅಡಿಯಲ್ಲಿ (Passive nationality principle) ಶಿಕ್ಷೆ ಕೊಡಬಹುದು. ಅಂತೆಯೇ ಅಮೆರಿಕ, ಭಾರತ ಸೇರಿದಂತೆ ಬಹುತೇಕ ದೇಶಗಳು ಐಎಸ್‌ನ ಸದಸ್ಯರನ್ನು ಶಿಕ್ಷಿಸಲು ಅವಕಾಶವಿದೆ.

ವಿಶ್ವಸಂಸ್ಥೆಯ ಹಲವಾರು ನಿರ್ಣಯಗಳಲ್ಲಿ ಐಎಸ್‌ನ ಕೃತ್ಯಗಳನ್ನು ಖಂಡಿಸಲಾಗಿದೆ ಹಾಗೂ ಸದಸ್ಯ ರಾಷ್ಟ್ರಗಳಿಗೆ ಈ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಇದರ ಪ್ರಕಾರ, ಯಾವುದೇ ದೇಶವು ಐಎಸ್‌ ಸದಸ್ಯರನ್ನು ಶಿಕ್ಷಿಸಬಹುದು. ಇವುಗಳ ಜೊತೆಗೆ ಯಾವ ರಾಷ್ಟ್ರದ ಪ್ರಜೆ ಐಎಸ್‌ನ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೋ ಆ ದೇಶವೂ ಆತನನ್ನು ಶಿಕ್ಷಿಸಬಹುದು. ಈ ಎಲ್ಲ ಮಾರ್ಗಗಳ ಮೂಲಕ ಐಎಸ್‌ ಉಗ್ರರನ್ನು  ವಿಚಾರಣೆಗೊಳಪಡಿಸಿ ಶಿಕ್ಷಿಸಲು ಸಾಧ್ಯವಿದೆ.

ಇಂದು ಐಎಸ್‌ನ ಮುಖಂಡರು, ಸದಸ್ಯರು ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿರಬಹುದು. ಆದರೆ ಈ ಸಂಘಟನೆಯ ಪ್ರಾಬಲ್ಯ ಕಡಿಮೆಯಾದಾಗ ಮುಂದೊಂದು ದಿನ ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ  ತನ್ನ ವಿರೋಧಿಗಳನ್ನು ದಮನ ಮಾಡಲು ರಾಸಾಯನಿಕ ಅಸ್ತ್ರಗಳ ಬಳಕೆ ಹಾಗೂ ಮುಗ್ಧ ಜನರ ಹತ್ಯೆಯ ಆರೋಪವೂ  ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ನ ವಿರುದ್ಧ ಕೇಳಿಬರುತ್ತಿದೆ.

ರಷ್ಯಾ, ಅಮೆರಿಕ ಹಾಗೂ ಯುರೋಪಿನ ಶಕ್ತಿಗಳು ಐಎಸ್‌ ಅನ್ನು ಮಟ್ಟ ಹಾಕುವ ಧಾವಂತದಲ್ಲಿ ಅನೇಕ ನಾಗರಿಕರ ಮೇಲೆ ದಾಳಿ ನಡೆಸಿ, ಅವರ ಸಾವಿಗೆ ಕಾರಣವಾಗಿವೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆ ಆರೋಪಿಸುತ್ತಲೇ ಇದೆ. ಇಂಥ ಆರೋಪ,  ಪ್ರತ್ಯಾರೋಪಗಳೇನೇ ಇದ್ದರೂ ಸಿರಿಯಾ,  ಇರಾಕ್‌ನಲ್ಲಿನ ನಾಗರಿಕರ ಸ್ಥಿತಿ ದಿನೇ ದಿನೇ ಹದಗೆಡುತ್ತಲೇ ಸಾಗುತ್ತಿದೆ.

ಲಕ್ಷಾಂತರ ನಿರಾಶ್ರಿತರು ಈ ದೇಶಗಳಲ್ಲಿ ಬದುಕಲಾಗದೆ ಯುರೋಪ್‌ನತ್ತ ಪಲಾಯನ ಮಾಡುತ್ತಿದ್ದಾರೆ. ಇಂಥ ವಿಫಲ ಯತ್ನಗಳಲ್ಲಿ ಸಮುದ್ರ ಪಾಲಾದವರ ಸಂಖ್ಯೆಯೇನೂ ಕಮ್ಮಿ ಇಲ್ಲ. ಈ ಬಗೆಯ ದುರ್ಗತಿಗೆ ಕಾನೂನಾತ್ಮಕ, ಮಿಲಿಟರಿ ಪರಿಹಾರಕ್ಕಿಂತಲೂ ಐಎಸ್‌ನ ಸಕ್ರಿಯ ಸದಸ್ಯರು, ಮುಖ್ಯವಾಗಿ ಅದರ ಬೆಂಬಲಿಗರು ಮಾನವೀಯತೆ ಎಂದರೇನೆಂಬುದನ್ನು ಅರಿಯಲು ಪ್ರಯತ್ನಿಸಬೇಕು.  ಆಗ ಅದು ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮವಾಗುತ್ತದೆ.
ಲೇಖಕ ವಿದೇಶಾಂಗ ಇಲಾಖೆಯಲ್ಲಿ ಕಾನೂನು ಅಧಿಕಾರಿ
(ಇಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT