
ರಾಜ್ಯಪಾಲರು ಬಾರದೇ ಇದ್ದರೆ ಅಥವಾ ಭಾಷಣ ಮಾಡದೆ ಇದ್ದರೆ ಅಧಿವೇಶನ ನಡೆಸುವಂತಿಲ್ಲ ಎಂದು ಎಲ್ಲಿ ಹೇಳಲಾಗಿದೆ? ಇಂತಹ ವಿಷಯಗಳು ಹೆಚ್ಚಾಗಿ ಕೋರ್ಟ್‌ಗೆ ಬಂದಿಲ್ಲ. ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಪ್ರಕರಣಗಳು ಇವೆಯಾದರೂ ಅವುಗಳನ್ನು ಪೂರ್ವನಿದರ್ಶನ ಎನ್ನಲಾಗುವುದಿಲ್ಲ. ಒಂದು ವೇಳೆ ಸರ್ಕಾರ ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಅಧಿವೇಶನ ನಡೆಸಿಬಿಟ್ಟರೆ ಅದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗುವವರು ಯಾರು? ಇದರಲ್ಲಿ ಕಾನೂನನ್ನು ಒರೆಗೆ ಹಚ್ಚಿ ನೋಡುವ ಮೊದಲು ಢಾಳಾಗಿ ಕಾಣುತ್ತಿರುವ ರಾಜಕೀಯವನ್ನು ಗಮನಿಸಬೇಕಿದೆ.-ಉದಯ ಹೊಳ್ಳ, ಮಾಜಿ ಅಡ್ವೊಕೇಟ್ ಜನರಲ್, ಪದಾಂಕಿತ ಹಿರಿಯ ವಕೀಲರು
ರಾಜ್ಯಪಾಲರು ಭಾಷಣ ಓದದೆಯೇ ಅಧಿವೇಶನ ಆರಂಭಿಸುವುದು ಕಾನೂನುಬದ್ಧವಲ್ಲ. ಪಶ್ಚಿಮ ಬಂಗಾಳದಲ್ಲಿ 1966ರಲ್ಲಿ ನಡೆದಿದ್ದ ವಿಧಾನಸಭೆ ಅಧಿವೇಶನದ ಪ್ರಸಂಗ ಈ ಕಾನೂನು ಚೌಕಟ್ಟಿಗೆ ತಳಹದಿ. ಕೇಂದ್ರ ಸರ್ಕಾರವನ್ನು ರಾಜ್ಯಪಾಲರ ಬಾಯಲ್ಲಿ ದೂಷಿಸುವ, ರಾಜಕೀಯಕ್ಕೆ ಬಳಸಿಕೊಳ್ಳುವ ನಿಲುವು ಸರಿಯಲ್ಲ. ರಾಜ್ಯ ಸರ್ಕಾರ ತನ್ನ ನೀತಿಗಳು ಏನೆಂದು ಹೇಳಲಿ. ಆದರೆ, ಅವರ ಬಾಯಲ್ಲಿ ಹೇಳಿಸಿ ಯಾಕೆ ಮುಖಭಂಗ ಮಾಡಬೇಕು? ಈ ವಿಷಯವನ್ನು ಪ್ರತಿಷ್ಠೆಯ ಪ್ರಶ್ನೆ ಮಾಡುವುದು ತರವಲ್ಲ. ರಾಜ್ಯಪಾಲರು ತೆಗೆಯಬೇಕೆಂದು ಸೂಚಿಸಿರುವ ಪ್ಯಾರಾಗಳನ್ನು ತೆಗೆದು ಓದಿಸಬೇಕು. ಈ ನಿಟ್ಟಿನಲ್ಲಿ ಅವರ ಮನವೊಲಿಸಿ ರಾಜಕೀಯ ಮಾಡುವ ಪ್ರಯತ್ನವನ್ನು ನಿಲ್ಲಿಸಬೇಕು.-ಅಶೋಕ ಹಾರನಹಳ್ಳಿ, ಮಾಜಿ ಅಡ್ವೊಕೇಟ್ ಜನರಲ್, ಪದಾಂಕಿತ ಹಿರಿಯ ವಕೀಲರು
ಗುರುವಾರ ಬೆಳಿಗ್ಗೆ 11ಕ್ಕೆ ಅಧಿವೇಶನ ಆರಂಭವಾಗಲಿದೆ. ಭಾಷಣದಲ್ಲಿರುವ 11 ಪ್ಯಾರಾಗಳನ್ನು ಬದಲಾವಣೆ ಮಾಡಲು ರಾಜ್ಯಪಾಲರು ಹೇಳಿದ್ದರು. ಶಬ್ದಗಳ ತಿದ್ದುಪಡಿಯಷ್ಟೆ ಮಾಡುತ್ತೇವೆ. ಆದರೆ, ಎಲ್ಲವನ್ನೂ ಬದಲಾವಣೆ ಮಾಡಲು ಸಾಧ್ಯ ಇಲ್ಲ. ಬಡವರ ಪರವಾಗಿ ಇರುವ ಭಾಷಣ ಇದಾಗಿದೆ. ಅದನ್ನು ಓದಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ.-ಎಚ್.ಕೆ. ಪಾಟೀಲ, ಕಾನೂನು ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.