ನೀತಿ ಆಯೋಗ ಮುಂದಿಟ್ಟಿರುವ ಪ್ರಸ್ತಾವನೆಯಿಂದ ಪ್ರೇರಣೆಗೊಂಡು ಕೃಷಿ ಭೂಮಿಯ ಗುತ್ತಿಗೆಯನ್ನು ಕಾನೂನುಬದ್ಧಗೊಳಿಸಲು ಕರ್ನಾಟಕ ಸರ್ಕಾರ ಸಜ್ಜಾಗುತ್ತಿದೆ. ಬೀಳು ಬಿದ್ದಿರುವ ಭೂಮಿಯ ಪ್ರಮಾಣವನ್ನು ಕಡಿಮೆಗೊಳಿಸಿ ಕೃಷಿ ಉತ್ಪನ್ನವನ್ನು ಹೆಚ್ಚಿಸುವುದು ಭೂ ಸುಧಾರಣೆಯನ್ನು ತಿರುವು ಮುರುವಾಗಿಸುವುದಕ್ಕೆ ಇರುವ ಸಮರ್ಥನೆಯಾಗಿದೆ. ಸುಮಾರು ನಾಲ್ಕು ದಶಕಗಳಿಂದ ರಾಜ್ಯದ ಕೃಷಿ ಸಂಬಂಧಗಳನ್ನು ಅಧ್ಯಯನ ಮಾಡುತ್ತಿರುವವರಿಗೆ, ಚುನಾವಣಾ ವರ್ಷದಲ್ಲಿ ಇದೊಂದು ದೊಡ್ಡ ಜೂಜಾಟದಂತೆ ಕಾಣಿಸುತ್ತದೆ; ರಾಜ್ಯ ಸರ್ಕಾರ ಗೆಲ್ಲುವ ಸಾಧ್ಯತೆ ಬಹಳ ಕಡಿಮೆ ಇರುವ ಜೂಜಾಟ.

1970ರ ದಶಕದಲ್ಲಿ ಭೂ ಸುಧಾರಣೆಯಿಂದ ಜಮೀನು ಕಳೆದುಕೊಂಡ ಜನರ ಗಾಯಗಳು ಮತ್ತೆ ತೆರೆದುಕೊಳ್ಳುವುದು ಈ ನಿರ್ಧಾರದ ತಕ್ಷಣದ ಪರಿಣಾಮವಾಗಲಿದೆ. ಭೂ ಸುಧಾರಣೆಯಿಂದ ಪ್ರತಿಕೂಲ ಪರಿಣಾಮಕ್ಕೆ ಒಳಗಾದವರ ಜೀವನ ಸ್ಥಿತಿ ಗಣನೀಯವಾಗಿ ಬದಲಾಗಿದೆ. ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದಂತಹ ಜಿಲ್ಲೆಗಳಲ್ಲಿ ಜಮೀನು ಕಳೆದುಕೊಂಡವರು ದೊಡ್ಡ ಜಮೀನ್ದಾರರಾದರೆ ಬಡ ಗೇಣಿದಾರರಿಗೆ ಅದರ ಪ್ರಯೋಜನ ಸಿಕ್ಕಿತು. ಅತ್ಯಗತ್ಯವಾಗಿದ್ದ ಪ್ರಗತಿಪರ ಸಾಮಾಜಿಕ ನಡೆ ಎಂದು ಭೂ ಸುಧಾರಣೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಬಹುದು. ತಮ್ಮ ಪೂರ್ವಜರು ಜಮೀನು ಕಳೆದುಕೊಂಡ ಕಾರಣಕ್ಕೆ ತಾವು ಕಷ್ಟಪಡಬೇಕಾಯಿತು ಎಂದು ಭಾವಿಸಿರುವ ನಂತರದ ತಲೆಮಾರಿನವರ ಆಕ್ರೋಶವನ್ನು ‘ತಪ್ಪಿಸಲಾಗದ ಸಾಮಾಜಿಕ ಬೆಲೆ’ ಎಂದು ತಳ್ಳಿ ಹಾಕಬಹುದು.

ದುರದೃಷ್ಟವೆಂದರೆ, ಕರ್ನಾಟಕದ ಇತರ ಭಾಗಗಳಲ್ಲಿ ಪರಿಸ್ಥಿತಿ ಈ ರೀತಿ ಇರಲಿಲ್ಲ. ದಕ್ಷಿಣ ಕರ್ನಾಟಕದ ಹಳ್ಳಿಯೊಂದರಲ್ಲಿ ಭೂ ಸುಧಾರಣೆಯಿಂದಾಗಿ ತನ್ನ ಎರಡು ಎಕರೆ ಜಮೀನು ಕಳೆದುಕೊಂಡ ದಲಿತನೊಬ್ಬನನ್ನು ಭೇಟಿಯಾದ ನಂತರ 1980ರಲ್ಲಿ ಭೂ ಸುಧಾರಣೆಗೆ ಸಂಬಂಧಿಸಿ ಕೆಲಸ ಮಾಡಲು ನಿರ್ಧರಿಸಿದ್ದು ನನಗೆ ಇನ್ನೂ ನೆನಪಿದೆ. ಬೇಸಾಯ ಮಾಡಲು ತನ್ನಲ್ಲಿ ಹಣ ಇಲ್ಲದ ಕಾರಣಕ್ಕೆ ಜಮೀನನ್ನು ಬೇಸಾಯ ಮಾಡುವುದಕ್ಕಾಗಿ ಹಳ್ಳಿಯ ದೊಡ್ಡ ರೈತನೊಬ್ಬನಿಗೆ ನೀಡಿದ್ದಾಗಿ ಆ ದಲಿತ ವ್ಯಕ್ತಿ ನನಗೆ ಹೇಳಿದ್ದ. ಭೂ ಸುಧಾರಣೆ ಸಂದರ್ಭದಲ್ಲಿ ಆ ದೊಡ್ಡ ರೈತ ತಾನು ಗೇಣಿದಾರ ಎಂದು ಅರ್ಜಿ ಹಾಕಿ ಆ ಜಮೀನನ್ನು ಪಡೆದುಕೊಂಡಿದ್ದ.

ಇದು ಇಂತಹ ಏಕೈಕ ಪ್ರಕರಣ ಏನಲ್ಲ. ಸಣ್ಣ ಹಿಡುವಳಿದಾರರಿಗೆ ಭೂ ಸುಧಾರಣೆ ಕಾನೂನಿನಿಂದ ವಿನಾಯಿತಿ ನೀಡಿದರೆ ಅದು ಕಾನೂನಿನ ಲೋಪವಾಗಬಹುದು ಎಂಬ ಕಾರಣಕ್ಕೆ ದೇವರಾಜ ಅರಸು ನೇತೃತ್ವದ ಸರ್ಕಾರ ವಿನಾಯಿತಿ ನೀಡಲಿಲ್ಲ. ಹೀಗಾಗಿ ಗಣನೀಯ ಪ್ರಮಾಣದಲ್ಲಿ ಸಣ್ಣ ಹಿಡುವಳಿದಾರರು ಭೂ ಸುಧಾರಣೆಯಿಂದಾಗಿ ತಮ್ಮ ಜಮೀನು ಕಳೆದುಕೊಂಡರು.

ಜಮೀನನ್ನು ಗುತ್ತಿಗೆಗೆ ನೀಡಿದ್ದರು ಎಂಬ ಒಂದೇ ಕಾರಣಕ್ಕೆ ತಮ್ಮ ಜೀವನಕ್ಕೆ ಆಧಾರವಾಗಿದ್ದ ಜಮೀನನ್ನು ಕಳೆದುಕೊಂಡ ಸಣ್ಣ ರೈತರ ನಂತರದ ತಲೆಮಾರಿನವರಿಗೆ, ಜಮೀನು ಪಡೆದುಕೊಂಡವರು ಈಗ ಮತ್ತೆ ಅದನ್ನು ಗುತ್ತಿಗೆಗೆ ನೀಡಬಹುದು ಎಂದು ಹೇಳುವ ಸ್ಥಿತಿ ಹೊಸ ಕಾನೂನಿನಿಂದಾಗಿ ನಿರ್ಮಾಣವಾಗುತ್ತದೆ. ಭೂ ಸುಧಾರಣೆ ನಡೆದು ನಾಲ್ಕು ದಶಕಗಳಾದವು; ಹಾಗಾಗಿ ಅದರ ಪರಿಣಾಮಗಳು ಮರೆತುಹೋಗಿವೆ ಎಂದು ಸರ್ಕಾರ ಭಾವಿಸಿರಬಹುದು. 1970 ಮತ್ತು 1980ರ ದಶಕಗಳಲ್ಲಿ ತಮ್ಮ ಪೂರ್ವಜರು ಜಮೀನು ಕಳೆದುಕೊಂಡ ಕಾರಣಕ್ಕೆ ತಮ್ಮ ಜೀವನವೇ ಬದಲಾಗಿ ಹೋದ ಜನರಿಗೆ ಸುಧಾರಣೆಯನ್ನು ಮರೆಯುವುದು ಅಷ್ಟು ಸುಲಭವಲ್ಲ.

ಇವೆಲ್ಲವೂ ಭಾವನಾತ್ಮಕ ಬಡಬಡಿಕೆ ಎಂದು ನಿರ್ಲಕ್ಷಿಸಲು ಹಟಮಾರಿ ನೀತಿ ನಿರೂಪಕರಿಗೆ ಸಾಧ್ಯವಾಗಬಹುದೇನೋ. ನೀತಿ ಯಾವಾಗಲೂ ಖಚಿತ ಚಿಂತನೆಯಿಂದ ಕೂಡಿರಬೇಕು. ಗುತ್ತಿಗೆ ಪದ್ಧತಿಯನ್ನು ಮತ್ತೆ ಆರಂಭಿಸುವುದು ಹೆಚ್ಚು ಸಮಾನತೆ ಮತ್ತು ದಕ್ಷವಾದ ಗ್ರಾಮೀಣ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದಾದರೆ ಅದಕ್ಕೆ ವಿರುದ್ಧವಾದ ಭಾವನೆಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಲೇಬೇಕು. ಇಂದಿನ ಗ್ರಾಮೀಣ ಕರ್ನಾಟಕದಲ್ಲಿ ನಾವು ಕಾಣುತ್ತಿರುವ ಕೃಷಿ ಸಂಬಂಧಗಳ ಸಂದರ್ಭದಲ್ಲಿ ಪ್ರಸ್ತಾವಿತ ಗುತ್ತಿಗೆ ಕಾನೂನನ್ನು ಇರಿಸಿ ನೋಡಿದರೆ ಅದು ಸಮಾನತೆ ಮತ್ತು ದಕ್ಷತೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.

ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಅನೌಪಚಾರಿಕ ರೀತಿಯಲ್ಲಿ ಗುತ್ತಿಗೆ ಪದ್ಧತಿ ಅಸ್ತಿತ್ವದಲ್ಲಿದೆ ಎಂಬುದರ ಮೇಲೆ ಸಮಾನತೆಯ ವಾದ ಆಧಾರಿತವಾಗಿದೆ. ಗುತ್ತಿಗೆದಾರ ಬಡವನಾಗಿದ್ದು ಗ್ರಾಮೀಣ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಆತನಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಈ ನೆಲೆಯ ಮುಂದುವರಿದ ಭಾಗವಾಗಿದೆ. ಕೃಷಿ ನಾಶದ ಸಂದರ್ಭದಲ್ಲಿ ಸರ್ಕಾರ ನೀಡುವ ಯಾವುದೇ ಸೌಲಭ್ಯ ಜಮೀನು ಮಾಲೀಕನಿಗೆ ದೊರಕುತ್ತದೆಯೇ ಹೊರತು ಗುತ್ತಿಗೆದಾರನಿಗೆ ಅದು ತಲುಪುವುದಿಲ್ಲ. ಗುತ್ತಿಗೆದಾರ ಶ್ರೀಮಂತನಾಗಿದ್ದು ಜಮೀನು ಮಾಲೀಕ ಸಣ್ಣ ಹಿಡುವಳಿಯನ್ನಷ್ಟೇ ಹೊಂದಿದ್ದು ಬಡವನಾಗಿದ್ದರೆ ಈ ವಾದ ಮುರಿದು ಬೀಳುತ್ತದೆ. ಇಂತಹ ಸನ್ನಿವೇಶದಲ್ಲಿ, ಇಳುವರಿಯಿಂದ ದೊರೆಯುವ ಲಾಭದ ಹಂಚಿಕೆಯು ಜಮೀನು ಮಾಲೀಕನಿಗೆ ಹೆಚ್ಚೇನೂ ದೊರೆಯದು. ಆಗ ಬಡ ಜಮೀನು ಮಾಲೀಕನಿಗೆ ಸರ್ಕಾರ ನೀಡುವ ಜೀವನೋಪಾಯ ಬೆಂಬಲದ ಅಗತ್ಯ ಇದೆ.

ಗುತ್ತಿಗೆ ಪದ್ಧತಿ ಅನೌಪಚಾರಿಕ ಆಗಿರುವುದರಿಂದ ರಾಜ್ಯದಲ್ಲಿ ಈ ಕೃಷಿ ಸಂಬಂಧದ ಸ್ವರೂಪ ಮತ್ತು ಪ್ರಮಾಣದ ಬಗ್ಗೆ ವಿಶ್ವಾಸಾರ್ಹವಾದ ದತ್ತಾಂಶ ಲಭ್ಯ ಇಲ್ಲ. ತನ್ನಲ್ಲಿರುವ ಜಮೀನಿನಲ್ಲಿ ಬೇಸಾಯ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಮಾತ್ರ ಹಿಡುವಳಿದಾರ ಅದನ್ನು ಗುತ್ತಿಗೆಗೆ ನೀಡುತ್ತಾನೆ ಎಂಬುದನ್ನು ನಮಗೆ ಲಭ್ಯ ಇರುವ ಪುರಾವೆ ಸ್ಪಷ್ಟಪಡಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಹಿಡುವಳಿದಾರ ಬಡವನಾಗಿದ್ದು ಬೇಸಾಯಕ್ಕೆ ಬೇಕಾದ ಸಂಪನ್ಮೂಲವನ್ನು ಹೊಂದಿಸಲು ಸಾಧ್ಯವಾಗದಿರುವುದೇ ಜಮೀನನ್ನು ಗುತ್ತಿಗೆಗೆ ನೀಡಲು ಕಾರಣ. ಇಂತಹ ಪ್ರಕರಣಗಳಲ್ಲಿ ಜಮೀನು ಗುತ್ತಿಗೆಗೆ ಪಡೆದುಕೊಳ್ಳುವವರು ತಮ್ಮ ಜಮೀನಿನ ಜತೆಗೆ ಇನ್ನಷ್ಟು ಜಮೀನಿನಲ್ಲಿ ಬೇಸಾಯ ಮಾಡಲು ಬೇಕಾದಷ್ಟು ಸಂಪನ್ಮೂಲ ಹೊಂದಿರುವಷ್ಟು ಶ್ರೀಮಂತರಾಗಿರುತ್ತಾರೆ.

ಈಗ ಅಸ್ತಿತ್ವದಲ್ಲಿರುವ ಪ್ರಬಲ ವರ್ಗದ ಅನೌಪಚಾರಿಕ ಗುತ್ತಿಗೆ ಪದ್ಧತಿ ಭೂಸುಧಾರಣೆಯ ಅನುಭವಗಳಿಂದ ಗಾಢವಾಗಿ ಪ್ರಭಾವಿತವಾಗಿದೆ ಎಂಬುದು ಆಶ್ಚರ್ಯಕರ ಅಂಶವೇನೂ ಅಲ್ಲ. ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಸೌಂದರ್ಯ ಅಯ್ಯರ್ ಅವರು ಕಳೆದ ಕೆಲವು ವರ್ಷಗಳಿಂದ ಮೂರು ಹಳ್ಳಿಗಳನ್ನು ಸಾಕಷ್ಟು ವಿವರವಾಗಿ ಅಧ್ಯಯನ ಮಾಡುತ್ತಿದ್ದಾರೆ- ಹೈದರಾಬಾದ್ ಕರ್ನಾಟಕ, ಹಳೆ ಮೈಸೂರು ಪ್ರದೇಶ ಮತ್ತು ಕರಾವಳಿ ಕರ್ನಾಟಕದ ತಲಾ ಒಂದೊಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಅವರು ಅಧ್ಯಯನ ನಡೆಸುತ್ತಿದ್ದಾರೆ. ಭೂ ಸುಧಾರಣೆ ಅತ್ಯಂತ ಪರಿಣಾಮಕಾರಿಯಾಗಿದ್ದು ಭೂಮಿ ಶ್ರೀಮಂತ ಜಮೀನ್ದಾರನಿಂದ ಬಡ ರೈತನ ಕೈಗೆ ಹೋದ ಕರಾವಳಿ ಕರ್ನಾಟಕದಲ್ಲಿ ಅನೌಪಚಾರಿಕ ಗುತ್ತಿಗೆ ಪದ್ಧತಿ ಇಲ್ಲ. ಹಳೆ ಮೈಸೂರು ಪ್ರದೇಶದಲ್ಲಿ ಸ್ವಂತ ಜಮೀನು ಹೊಂದಿಲ್ಲದ ಗುತ್ತಿಗೆದಾರರು ಇಲ್ಲ. ಜಮೀನು ಹೊಂದಿರುವ ರೈತರು ತಾವು ಬೇಸಾಯ ಮಾಡುವ ಹೊಲದ ವಿಸ್ತೀರ್ಣವನ್ನು ಹೆಚ್ಚಿಸುವುದಕ್ಕಾಗಿ ಜಮೀನು ಗುತ್ತಿಗೆಗೆ ಪಡೆಯುವ ರೀತಿಯಲ್ಲಿ ಇಲ್ಲಿನ ಅನೌಪಚಾರಿಕ ಗುತ್ತಿಗೆ ಪದ್ಧತಿ ಇದೆ. ಹೈದರಾಬಾದ್ ಕರ್ನಾಟಕದಲ್ಲಿ ಭೂಸುಧಾರಣೆಗೆ ಹಿಂದಿನ ದಿನಗಳಲ್ಲಿ ಪ್ರಬಲ ವರ್ಗಗಳು ಜಮೀನು ಗುತ್ತಿಗೆಗೆ ಪಡೆಯುವ ಪದ್ಧತಿ ಅಸ್ತಿತ್ವದಲ್ಲಿತ್ತು. ಈಗಿನ ಅನೌಪಚಾರಿಕ ವ್ಯವಸ್ಥೆಯೂ ಅದೇ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ, ಬಡ ಸಣ್ಣ ಹಿಡುವಳಿದಾರನ ಬದಲಿಗೆ ಶ್ರೀಮಂತ ಗುತ್ತಿಗೆದಾರನಿಗೆ ಶಕ್ತಿ ತುಂಬುವ ರೀತಿಯಲ್ಲಿ ಗುತ್ತಿಗೆ ಪದ್ಧತಿಯನ್ನು ಕಾನೂನುಬದ್ಧಗೊಳಿಸಿದರೆ ಅಸಮಾನತೆ ಕಡಿಮೆಯಾಗುವ ಬದಲಿಗೆ ಹೆಚ್ಚಲಿದೆ.

ದಕ್ಷತೆ ಹೆಚ್ಚುತ್ತದೆ ಎಂಬ ವಾದವೇನಾದರೂ ಇದ್ದರೆ ಅದು ಇನ್ನಷ್ಟು ದುರ್ಬಲ. ಹಿಂದೆ ಭೂಮಾಲೀಕರಿಂದ ಗೇಣಿದಾರರಿಗೆ ಭೂಮಿ ವರ್ಗಾವಣೆ ಆದ ರಾಜ್ಯದಲ್ಲಿ ಜಮೀನಿನ ಮಾಲೀಕತ್ವ ಪಡೆದವರು ಜಮೀನನ್ನು ಮತ್ತೆ ಗುತ್ತಿಗೆ ನೀಡುವುದು ಅವಾಸ್ತವಿಕ ಅನಿಸುತ್ತದೆ. ಜಮೀನಿನ ಮಾಲೀಕತ್ವ ಬದಲಾಗದು ಎಂಬುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಹೊಸ ಕಾನೂನಿನಲ್ಲಿ ಸಾಕಷ್ಟು ನಿಯಮಗಳನ್ನು ರೂಪಿಸಲಾಗುವುದು ಎಂದು ಸರ್ಕಾರ ವಾದಿಸಬಹುದು. ಯಾವುದೇ ಲೋಪ ಇಲ್ಲದ ನಿಯಮಗಳನ್ನು ಜಾರಿಗೆ ತಂದರೂ ಮುಂದಿನ ಸರ್ಕಾರ ಅವುಗಳನ್ನು ಬದಲಾಯಿಸುವುದಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿಯ ನಾಯಕತ್ವದ ಕಾಂಗ್ರೆಸ್ ಸರ್ಕಾರ ದೇವರಾಜ ಅರಸು ನೇತೃತ್ವದ ಸರ್ಕಾರ ಜಾರಿಗೆ ತಂದ ಭೂಸುಧಾರಣೆ ಕಾನೂನಿನ ಮುಖ್ಯ ಲಕ್ಷಣಗಳನ್ನೇ ತಿರುವು ಮುರುವಾಗಿಸುವುದು ಸಾಧ್ಯವಾದರೆ ಮುಂದಿನ ಸರ್ಕಾರ ಗುತ್ತಿಗೆದಾರನಿಗೇ ಭೂಮಿಯ ಹಕ್ಕು ಎಂಬ ನಿಯಮ ಜಾರಿಗೆ ತರಲಿಕ್ಕಿಲ್ಲ ಎಂದು ಹೇಳಲಾಗದು. ಗುತ್ತಿಗೆ ನೀಡಿಕೆಯನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮ ಜಾರಿಗೆ ಬರುವುದರೊಂದಿಗೆ ಈಗ ಅನೌಪಚಾರಿಕವಾಗಿ ಜಮೀನು ಗುತ್ತಿಗೆ ನೀಡುತ್ತಿರುವವರು ಅದನ್ನು ನಿಲ್ಲಿಸಿಬಿಡಬಹುದು. ಇದು ಬೀಳು ಬಿದ್ದ ಜಮೀನಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬಹುದು. ಕರ್ನಾಟಕದಲ್ಲಿ ಬೀಳು ಬಿದ್ದ ಜಮೀನು ಒಂದು ಮಟ್ಟಿಗೆ ಈಗಾಗಲೇ ಸಮಸ್ಯೆಯಾಗಿ ಕಾಡುತ್ತಿದೆ. ಅದರ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಈಗಾಗಲೇ ಸಂಕಷ್ಟದಲ್ಲಿರುವ ಬೇಸಾಯ ಕ್ಷೇತ್ರವನ್ನು ಅದು ಇನ್ನಷ್ಟು ಸಂಕಟಕ್ಕೆ ದೂಡಬಹುದು.

ಒಂದು ಕಾಲದ ಚಿಂತನೆಯನ್ನು ಆವರಿಸಿಕೊಂಡಿದ್ದ ಭೂ ಸುಧಾರಣೆಯನ್ನು ತಿರುವು ಮುರುವಾಗಿಸುವುದು ರಾಜ್ಯ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟಿನಿಂದ ಹೊರಗೆ ಬರುವ ದಾರಿ ಅಲ್ಲ. ಬದಲಿಗೆ ನಮ್ಮ ಕಾಲಕ್ಕೆ ಹೆಚ್ಚು ಹೊಂದಿಕೆ ಆಗುವಂತಹ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳಬೇಕು.

ಲೇಖಕ: ಪ್ರಾಧ್ಯಾಪಕ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ನಿಯಾಸ್), ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.