ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ನಿಷೇಧ: ಪೂರ್ಣ ಜಾರಿ ಸಾಧ್ಯವೇ?

ಕೆಟ್ಟದ್ದರಿಂದ ಪಾರಾಗುವ ಸಲುವಾಗಿ ಒಳ್ಳೆಯದಕ್ಕೂ ಎಳ್ಳು ನೀರು ಬಿಟ್ಟಂತಾಗಿದೆ
Last Updated 24 ಮಾರ್ಚ್ 2016, 11:02 IST
ಅಕ್ಷರ ಗಾತ್ರ

‘ಉದ್ಯಾನ ನಗರಿ’ ಖ್ಯಾತಿಯ ಬೆಂಗಳೂರು ಮಹಾನಗರವು ಇತ್ತೀಚಿನ ವರ್ಷಗಳಲ್ಲಿ ‘ತಿಪ್ಪೆಗುಂಡಿ ನಗರ’ ಎನ್ನುವ ಕುಖ್ಯಾತಿಗೂ ಪಾತ್ರವಾಗುತ್ತಿದೆ. ಕಸದಿಂದ ತುಂಬಿದ ಬಿಳಿ ಮತ್ತು ಕಪ್ಪು ಬಣ್ಣದ ಪ್ಲಾಸ್ಟಿಕ್‌ ಚೀಲಗಳು ನಗರದ  ಬೀದಿ, ರಸ್ತೆಗಳ ಮೂಲೆ ಮೂಲೆಗಳಲ್ಲಿ ಕಣ್ಣಿಗೆ ರಾಚುತ್ತವೆ. ಕಸದ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ಮನೆಗಳಲ್ಲಿನ ಹಸಿ ಮತ್ತು ಒಣ ಕಸವನ್ನು ಸಮರ್ಪಕವಾಗಿ ಬೇರ್ಪಡಿಸಿ ನಿರ್ವಹಿಸುವಲ್ಲಿ  ನಗರ ವಾಸಿಗಳ ನಿಷ್ಕಾಳಜಿ ಜತೆಗೆ ಘನ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಕ್ತ ಮೂಲಸೌಕರ್ಯಗಳು ಇಲ್ಲದಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಪ್ಲಾಸ್ಟಿಕ್‌ ಮತ್ತು ಇತರ ಘನ ತ್ಯಾಜ್ಯವನ್ನು ನಗರ ಮತ್ತು ನಗರ ಹೊರವಲಯದ ಗ್ರಾಮೀಣ ಪ್ರದೇಶಗಳ ನಾಗರಿಕರಿಗೆ ಹೊರೆಯಾಗದಂತೆ ವಿಲೇವಾರಿ ಮಾಡುವುದು ಸಾಧ್ಯವಾಗುತ್ತಿಲ್ಲ.

ಜನರು ಮತ್ತು ಜಾನುವಾರುಗಳ ಆರೋಗ್ಯಕ್ಕೆ ಅಪಾಯ ತಂದೊಡ್ಡುವ, ಪರಿಸರ ಮಾಲಿನ್ಯವೂ ಸೇರಿದಂತೆ ಹಲವು ಬಗೆಯ ಸಮಸ್ಯೆಗಳಿಗೆ ಕಾರಣವಾಗುವ ಪ್ಲಾಸ್ಟಿಕ್‌ ತ್ಯಾಜ್ಯದ ಸಮಸ್ಯೆಗೆ ಸರ್ಕಾರ ಅದರ ಬಳಕೆಯನ್ನೇ ಸಂಪೂರ್ಣವಾಗಿ ನಿಷೇಧಿಸುವ ಏಕೈಕ ಪರಿಹಾರ ಕಂಡುಕೊಂಡಿದೆ. ಮಳೆ ಮತ್ತು  ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗುವ, ರಸ್ತೆ ತುಂಬೆಲ್ಲ ಹೊಲಸು ಹರಡುವ, ದುರ್ವಾಸನೆ ಬೀರುವ ಮೂಲಕ ಅಸಹನೀಯ ವಾತಾವರಣ ನಿರ್ಮಿಸುವ ಪ್ಲಾಸ್ಟಿಕ್‌ ನಿಷೇಧಿಸಿ ಎನ್ನುವುದನ್ನು ಅನೇಕರು ಬೆಂಬಲಿಸುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವೈಫಲ್ಯದತ್ತ ಪ್ರತಿಯೊಬ್ಬರೂ ಬೊಟ್ಟು ಮಾಡಿ ತೋರಿಸುತ್ತಿದ್ದಂತೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಲವಾರು ಬಗೆಯ ಪ್ಲಾಸ್ಟಿಕ್‌ ಉತ್ಪನ್ನಗಳ ಮೇಲೆ ನಿಷೇಧ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ, ‘ಪರಿಸರ ಸಂರಕ್ಷಣೆ ಕಾಯ್ದೆ 1986’ರ ಸೆಕ್ಷನ್‌ 5ರ ಪ್ರಕಾರ, ಮಾರ್ಚ್‌ 11ರಂದು  ಅಧಿಸೂಚನೆ ಹೊರಡಿಸಿದೆ. ಕ್ಯಾರಿ ಬ್ಯಾಗ್‌, ಬ್ಯಾನರ್‌, ಬಂಟಿಂಗ್ಸ್‌, ಧ್ವಜ, ಫ್ಲೆಕ್ಸ್‌, ಪ್ಲೇಟ್‌, ಥರ್ಮೊಕೋಲ್‌ ಕಪ್ಸ್‌ ಮತ್ತು ಟೇಬಲ್‌ ಮೇಲೆ ಹಾಸುವ ಪ್ಲಾಸ್ಟಿಕ್‌ ಹಾಳೆಗಳ ಬಳಕೆ ಮೇಲೆ ನಿಷೇಧ ವಿಧಿಸಿದೆ.

ಮಾಲಿನ್ಯ ನಿಯಂತ್ರಿಸುವುದು,  ಹವಾಮಾನ ಬದಲಾವಣೆ ಮೇಲೆ ಪ್ರಭಾವ ಬೀರುವ ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣ ತಗ್ಗಿಸುವುದು ಮತ್ತು ಚರಂಡಿಗಳಲ್ಲಿ ನೀರಿನ ಸರಾಗ ಹರಿಯುವಿಕೆಗೆ ಉಂಟಾಗುವ ಅಡೆತಡೆ ನಿವಾರಿಸುವುದು ಪ್ಲಾಸ್ಟಿಕ್‌ ನಿಷೇಧಿಸುವ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಉದ್ದೇಶವಾಗಿದೆ. ಮೂಲ ಉದ್ದೇಶ ಸಾಧಿಸಲು ಈ ನಿಷೇಧವು ನೆರವಾಗುವುದೇ ಅಥವಾ ಮೂಲ ಆಶಯವನ್ನೇ ಬುಡಮೇಲು ಮಾಡುವುದೇ ಎನ್ನುವ ಅನುಮಾನಗಳಿಗೆ ಸದ್ಯಕ್ಕೆ ಯಾರಲ್ಲೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಇದೊಂದು ಬಗೆಯಲ್ಲಿ, ಕೆಟ್ಟದ್ದರಿಂದ ಪಾರಾಗಲು ಒಳ್ಳೆಯದಕ್ಕೂ ಎಳ್ಳು ನೀರು ಬಿಟ್ಟಂತೆ ಆಗಿದೆ.

ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಯುಪಿಎ ಅಧಿಕಾರಾವಧಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ (ನಿರ್ವಹಣೆ) ನಿಯಮದ ಕುರಿತು 2011ರಲ್ಲಿ ಅಧಿಸೂಚನೆ ಹೊರಡಿಸಿದಾಗ, ಅಂದಿನ  ಪರಿಸರ ಸಚಿವರಾಗಿದ್ದ ಜೈರಾಮ್‌ ರಮೇಶ್‌ ಅವರು, ‘ಪ್ಲಾಸ್ಟಿಕ್‌ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರುವುದು ಪ್ರಾಯೋಗಿಕವಲ್ಲದ ಮತ್ತು ಅನಪೇಕ್ಷಿತ ನಿರ್ಧಾರವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದರು. ಜೈರಾಮ್‌ ರಮೇಶ್‌ ಅವರ  ಮಾತಿನಲ್ಲಿಯೂ ಸಾಕಷ್ಟು ಹುರುಳಿತ್ತು. ಘನ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ  ಸೌಲಭ್ಯವನ್ನು ಪೌರ ಸಂಸ್ಥೆಗಳು ಗಮನಾರ್ಹವಾಗಿ ಸುಧಾರಣೆ ಮಾಡಿಕೊಳ್ಳುವುದೇ ನಿಜವಾದ ಸವಾಲಾಗಿದೆ. ತ್ಯಾಜ್ಯ ವಿಲೇವಾರಿಯನ್ನು ಖಾಸಗೀಕರಣ ಮಾಡುವುದು ಮತ್ತು ಯಾಂತ್ರೀಕರಣಗೊಳಿಸುವುದು ಸೂಕ್ತ ಪರಿಹಾರ ಒದಗಿಸಬಲ್ಲದು ಎಂದು ಅವರು ಹೇಳಿದ್ದರು. 

ಅಸಂಘಟಿತ ವಲಯದ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ ಉದ್ದಿಮೆಯಲ್ಲಿ ತೊಡಗಿರುವ ಸಾವಿರಾರು ಉದ್ಯೋಗಿಗಳ ಜೀವನೋಪಾಯದ ಬಗ್ಗೆಯೂ ನಾಗರಿಕ ಸಮಾಜ ಸಹಾನುಭೂತಿ ಮತ್ತು ಸಂವೇದನೆಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವೂ ಇದೆ. 2011ರ ನಿಯಮದಲ್ಲಿ ತ್ಯಾಜ್ಯ ಆಯುವ ಮತ್ತು ಅದನ್ನು ನಿರ್ವಹಿಸುವವರ ಪಾತ್ರದ ಬಗ್ಗೆಯೂ ವಿಶದವಾಗಿ ಉಲ್ಲೇಖಿಸಲಾಗಿದೆ.

ಪೌರ ಸಂಸ್ಥೆಗಳು ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಕಸ ಆಯುವವರನ್ನು ಹಾಗೂ ಕಸ ನಿರ್ವಹಿಸುವ ಸಂಸ್ಥೆಗಳನ್ನು ನೇಮಕ ಮಾಡಿಕೊಂಡಿರುತ್ತವೆ. ಕಸದ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ ಕಲ್ಪಿಸುವುದು ಮತ್ತು ಈ ನಿಟ್ಟಿನಲ್ಲಿ ಸಮನ್ವಯದಿಂದ ಕೆಲಸ ಮಾಡುವುದು ಪೌರ ಸಂಸ್ಥೆಗಳ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಪ್ಲಾಸ್ಟಿಕ್‌ ತ್ಯಾಜ್ಯದ ಸುರಕ್ಷಿತ ಸಂಗ್ರಹ, ಪ್ರತ್ಯೇಕಿಸುವುದು, ಸಾಗಾಣಿಕೆ, ಸಂಸ್ಕರಣೆ  ಮಾಡುವ ಪ್ರಕ್ರಿಯೆಗಳಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಪೌರ ಸಂಸ್ಥೆಗಳು ನಿರ್ವಹಿಸಬೇಕಾಗುತ್ತದೆ.

ಬಿಬಿಎಂಪಿಯು ತನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಪ್ಲಾಸ್ಟಿಕ್‌ ತ್ಯಾಜ್ಯದ ಸಂಗ್ರಹ ಮತ್ತು ಸಂಸ್ಕರಣೆಯಲ್ಲಿ ಯಶಸ್ಸು ಸಾಧಿಸುವಲ್ಲಿ, 40 ಮೈಕ್ರಾನ್ಸ್‌ಗಿಂತ ಕಡಿಮೆ ಇರುವ  ಪ್ಲಾಸ್ಟಿಕ್‌ ಚೀಲಗಳ ಮೇಲಿನ ಈ ಮೊದಲಿನ ನಿಷೇಧವನ್ನು ಫಲಪ್ರದ ರೀತಿಯಲ್ಲಿ ಜಾರಿಗೆ ತರುವಲ್ಲಿ ವಿಫಲವಾಗಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಸದ್ಯಕ್ಕೆ ಅಸ್ತಿತ್ವದಲ್ಲಿ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಬೆಂಗಳೂರಿನ  ತುಂಬೆಲ್ಲ ಕಸದ ರಾಶಿ ಬಿದ್ದಿರುವುದು, ಪ್ಲಾಸ್ಟಿಕ್‌ ತ್ಯಾಜ್ಯದಿಂದ ಚರಂಡಿಗಳು ಮುಚ್ಚಿಕೊಂಡಿರುವುದನ್ನು ಗಮನಾರ್ಹವಾಗಿ ತಗ್ಗಿಸಬಹುದಾಗಿತ್ತು. 40 ಮೈಕ್ರಾನ್ಸ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸುವುದನ್ನು ನಾವು ಕೂಡ ಬೆಂಬಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಪ್ಲಾಸ್ಟಿಕ್‌ ತಯಾರಕರ ಸಂಘದ ಸದಸ್ಯರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳು ಕೈಗೊಳ್ಳುವ ಕ್ರಮಗಳಿಗೆ ನಮ್ಮ ಬೆಂಬಲ ಇದೆ ಎಂದೂ ಸಂಘ ಹೇಳುತ್ತದೆ.

ಇಂತಹ ಬ್ಯಾಗ್‌ಗಳನ್ನು ಅಕ್ರಮವಾಗಿ ತಯಾರಿಸುವ ಸಂಸ್ಥೆಗಳ ಉಪಟಳಕ್ಕೆ ಕಡಿವಾಣ ಹಾಕುವಲ್ಲಿ ಮತ್ತು ನೆರೆ ರಾಜ್ಯಗಳಿಂದ ಅಕ್ರಮವಾಗಿ ಪೂರೈಕೆಯಾಗುವ ಇಂತಹ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಡೆಗಟ್ಟುವಲ್ಲಿ ಸರ್ಕಾರದ ವೈಫಲ್ಯದತ್ತ ಸಂಘವು ಬೊಟ್ಟು ಮಾಡಿ ತೋರಿಸುತ್ತದೆ. ‘ತಯಾರಕರ ಹೊಣೆಗಾರಿಕೆ’ಯಡಿ, ಪ್ಲಾಸ್ಟಿಕ್‌ ತ್ಯಾಜ್ಯದ ಸಂಗ್ರಹ ಮತ್ತು ಸಂಸ್ಕರಣೆಗೆ ಪೌರ ಸಂಸ್ಥೆಗಳಿಗೆ ಅಗತ್ಯ ಬೆಂಬಲ ನೀಡುವುದಾಗಿಯೂ ಸಂಘ ಭರವಸೆ ನೀಡುತ್ತದೆ.

ರಾಜ್ಯದಲ್ಲಿ ಪ್ಲಾಸ್ಟಿಕ್‌ ಸರಕುಗಳ ತಯಾರಿಕೆಯಲ್ಲಿ 700ರಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಸ್‌ಎಂಇ) ತೊಡಗಿರುವ ಅಂದಾಜಿದೆ. ಈ ಉದ್ದಿಮೆ ರಾಜ್ಯದಲ್ಲಿ 5 ರಿಂದ 7 ಸಾವಿರದಷ್ಟು ಜನರಿಗೆ ನೇರ ಮತ್ತು 70 ಸಾವಿರದಷ್ಟು ಜನರಿಗೆ ಪರೋಕ್ಷವಾಗಿ ಉದ್ಯೋಗ ಅವಕಾಶಗಳನ್ನು ಒದಗಿಸಿದೆ.

ಪ್ಲಾಸ್ಟಿಕ್‌ ಉದ್ದಿಮೆಯಲ್ಲಿ ತೊಡಗಿದ ಸಣ್ಣ ಮತ್ತು ಮಧ್ಯಮ ಘಟಕಗಳಿಗೆ ಬ್ಯಾಂಕ್‌ಗಳು ₹ 3,000 ಕೋಟಿಗಳಷ್ಟು ಸಾಲ ನೀಡಿವೆ. ಪ್ಲಾಸ್ಟಿಕ್‌ ಉತ್ಪನ್ನಗಳ ಮೇಲಿನ ಸಂಪೂರ್ಣ ನಿಷೇಧದ ಕಾರಣಕ್ಕೆ ಈ ಉದ್ದಿಮೆಯಲ್ಲಿ ಹಣ ಹೂಡಿಕೆ ಮಾಡಿದವರು ಬ್ಯಾಂಕ್‌ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದೇ ಇಲ್ಲ. ಇದು ಬ್ಯಾಂಕ್‌ಗಳಿಗೂ ವಸೂಲಾಗದ ಸಾಲದ  (ಎನ್‌ಪಿಎ) ಹೊರೆಯಾಗಿಯೂ ಪರಿಣಮಿಸಲಿದೆ.

ಜಾಗತಿಕವಾಗಿ ಉತ್ಪನ್ನಗಳ ಪ್ಯಾಕೇಜ್‌ಗೆ ಪ್ಲಾಸ್ಟಿಕ್‌ ಬಳಸಲಾಗುತ್ತಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಮತ್ತು ಸಲಹಾ ಸಂಸ್ಥೆ  ಪ್ರೈಸ್‌ ವಾಟರ್‌ ಹೌಸ್‌ನ ಸ್ಟ್ರಾಟೆಜಿ ಅಂಡ್‌ ಮ್ಯಾನೇಜ್‌ಮೆಂಟ್‌ ಕಳೆದ ವರ್ಷ ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ಬಾಳಿಕೆ ಕಾರಣಕ್ಕೆ ಭಾರತದಲ್ಲಿಯೂ ಪ್ಯಾಕಿಂಗ್‌ ಉದ್ದೇಶಕ್ಕೆ ಪ್ಲಾಸ್ಟಿಕ್‌ನ ಬಳಕೆ ವ್ಯಾಪಕವಾಗಿದೆ. ಪ್ಲಾಸ್ಟಿಕ್‌ ಉದ್ಯಮದ ಮೇಲೆ ಯಾವುದೇ ಬಗೆಯ ನಿಷೇಧ ವಿಧಿಸಿದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ  ವಲಯದಲ್ಲಿನ ಲಕ್ಷಾಂತರ ಜನರ ಜೀವನಾಧಾರದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದೂ ಅಧ್ಯಯನ ಸಲಹೆ ನೀಡಿತ್ತು.

ಪ್ಲಾಸ್ಟಿಕ್‌ ತ್ಯಾಜ್ಯದಿಂದ ಉಂಟಾಗಿರುವ ಕಸದ ಹಾವಳಿಯನ್ನು ಯುದ್ಧೋಪಾದಿಯಲ್ಲಿ ನಿವಾರಿಸಿಕೊಳ್ಳುವ ಅಗತ್ಯ ಇರುವುದರಲ್ಲಿ ಎರಡು ಮಾತಿಲ್ಲ. 40 ಮೈಕ್ರಾನ್ಸ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಉತ್ಪನ್ನಗಳ  ಮೇಲಿನ ನಿಷೇಧವನ್ನು ಬಿಬಿಎಂಪಿ ಸೇರಿದಂತೆ ವಿವಿಧ ನಗರಗಳ ಪೌರ ಸಂಸ್ಥೆಗಳು ಗಂಭೀರವಾಗಿ ಜಾರಿಗೆ ತರಬೇಕು. ತಯಾರಕರು, ಉದ್ದಿಮೆ ಸಂಘ ಸಂಸ್ಥೆಗಳು ಮತ್ತು ಜನಸಾಮಾನ್ಯರೂ ಇಂತಹ ಕಾರ್ಯಕ್ರಮಕ್ಕೆ ಬೆಂಬಲ
ನೀಡಬೇಕು.

ಈ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು. ಪಾಶ್ಚಿಮಾತ್ಯ ದೇಶಗಳಲ್ಲೂ  ಕಸ ವಿಲೇವಾರಿಗೆ ಪ್ಲಾಸ್ಟಿಕ್‌ ಚೀಲಗಳನ್ನು ಬಳಸುವುದಿಲ್ಲ. ಪ್ಲಾಸ್ಟಿಕ್‌ಗೆ ಹೊರತಾದ ವಸ್ತುಗಳಿಂದ ತಯಾರಿಸಿದ ಇಂತಹ ಚೀಲಗಳನ್ನು ಮರುಬಳಕೆ ಮಾಡುವ ವ್ಯವಸ್ಥೆ ಬಳಕೆಯಲ್ಲಿ ಇದೆ.

ಬಿಬಿಎಂಪಿ ಮತ್ತು ಇತರ ನಗರಗಳ ಪೌರ ಸಂಸ್ಥೆಗಳು ಇ–ತ್ಯಾಜ್ಯದ ಸಂಗ್ರಹ, ಸಂಸ್ಕರಣೆ ಮತ್ತು ವಿಲೇವಾರಿಗೂ ಗಮನ ಕೇಂದ್ರೀಕರಿಸಬೇಕಾಗಿದೆ. ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ರಂಗದ ಕೇಂದ್ರವಾಗಿ ಬೆಳೆದಿರುವ ಬೆಂಗಳೂರಿನಲ್ಲಿ ಸಂಗ್ರಹವಾಗುತ್ತಿರುವ ಇ–ತ್ಯಾಜ್ಯ ನಿರ್ವಹಣೆ ಬಗ್ಗೆಯೂ ಮಹಾನಗರಪಾಲಿಕೆ ಗಮನ ನೀಡಬೇಕಾಗಿದೆ. ರಾಜ್ಯ ಸರ್ಕಾರವು ಪ್ಲಾಸ್ಟಿಕ್‌ ಉತ್ಪನ್ನಗಳ ಮೇಲೆ ನಿಷೇಧ ವಿಧಿಸುವ ಮುನ್ನ, ಪ್ಲಾಸ್ಟಿಕ್‌ಗೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿತ್ತು. ಪ್ಲಾಸ್ಟಿಕ್‌ಗೆ ಬದಲಾಗಿ ಕಾಗದ ಬಳಸುವುದು ಸೂಕ್ತ ಪರ್ಯಾಯವಾಗಲಾರದು. ಕಾಗದದಿಂದ ಪರಿಸರ ಮಾಲಿನ್ಯವೇನೂ ಕಡಿಮೆಯಾಗುವುದಿಲ್ಲ. ಕೆಲ ಅಧ್ಯಯನಗಳ ಪ್ರಕಾರ, ಕಾಗದ ಉತ್ಪಾದನೆಯು ಹೆಚ್ಚಿನ ಪ್ರಮಾಣದ ಹಸಿರುಮನೆ ಅನಿಲಗಳನ್ನು ಹೊರ ಸೂಸುತ್ತದೆ, ಹೆಚ್ಚು ವಿದ್ಯುತ್‌ ಬಳಸುತ್ತದೆ ಮತ್ತು ಮರುಬಳಕೆ  ಅಷ್ಟು ಸುಲಭವಲ್ಲ  ಎಂದು ಕೆಲ ಅಧ್ಯಯನಗಳು ತಿಳಿಸಿವೆ.

ಪ್ಲಾಸ್ಟಿಕ್‌ ಮೇಲಿನ ಸಂಪೂರ್ಣ ನಿಷೇಧಕ್ಕೆ ಕೋರ್ಟ್‌ನಲ್ಲಿ ಮಾನ್ಯತೆ ಸಿಗುವುದೂ ಅನುಮಾನಾಸ್ಪದ. ಹೀಗಾಗಿ ಪ್ಲಾಸ್ಟಿಕ್‌ ತಯಾರಕರು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಸಾಧ್ಯವಾದ ಪರಿಹಾರ ಕಂಡುಕೊಳ್ಳುವುದು ಒಳಿತು. ಇದರಿಂದ ಸಮಾಜಕ್ಕೆ ಒಳಿತಾಗುವುದರ ಜತೆಗೆ ಪರಿಸರ ಮಾಲಿನ್ಯವನ್ನೂ ನಿಯಂತ್ರಿಸಬಹುದು. ಏಕಪ್ರಕಾರವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಿಲ್ಲದ ಕಠಿಣ ನಿಯಮದ ಬಗ್ಗೆ ಅಧಿಸೂಚನೆ ಹೊರಡಿಸುವುದರಿಂದ,  ಕಾನೂನು ಜಾರಿ ಸಂಸ್ಥೆಗಳ ಕಿರುಕುಳಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗಲಿದೆ. ಸಾಧ್ಯವಿರುವ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳದೆ ಅನೇಕರ  ಜೀವನಾಧಾರಕ್ಕೆ ಧಕ್ಕೆ ಒದಗಿಸಲಿದೆ.

ಪ್ಲಾಸ್ಟಿಕ್‌ ಮೇಲಿನ ಸಂಪೂರ್ಣ ನಿಷೇಧವು ತನ್ನ ಉದ್ದೇಶ ಸಾಧಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಲಿ. ಆದರೆ, ಕಾಯ್ದೆ ಜಾರಿ ನೆಪದಲ್ಲಿ ತಮಗಿಷ್ಟ ಬಂದಂತೆ ಜಾರಿಗೆ ತರುವ ಅಧಿಕಾರವನ್ನು ಅಧಿಕಾರಿಗಳಿಗೆ ಕೊಡಬಾರದಷ್ಟೆ.
-ಲೇಖಕ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT