ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಮಕ್ಕಳ ಅಭಿವೃದ್ಧಿಗೆ ಸೂತ್ರಗಳೇನು?

Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ  ಎನ್‌ಡಿಎ ಸರ್ಕಾರದ ಜಯಭೇರಿಯ ಹಿಂದೆ ಕೃಷಿಗೆ ಸಂಬಂಧಿಸಿದ ವಿಚಾರಗಳು ಗಟ್ಟಿಯಾಗಿ ಕೆಲಸ ಮಾಡಿವೆ. ಆಹಾರ, ಕೃಷಿ ಉತ್ಪನ್ನಗಳ ಧಾರಣೆ ಏರಿಕೆ ಅತಿಯಾಗಿ, ಹಣದುಬ್ಬರಕ್ಕೆ ಕಾರಣವಾದ ವಿಚಾರಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿದೆ. ಆದರೆ ಕೃಷಿ ವಲಯದ ಬಿಕ್ಕಟ್ಟು ಮತ್ತು ಆ ಮೂಲಕ ರೈತಾಪಿ­ವರ್ಗ ಪಟ್ಟಿರುವ ಯಾತನೆಯನ್ನೂ ಗಮನಿಸ­ಬೇಕು.

ಅಧಿಕಾರದ ಗದ್ದುಗೆ ಹಿಡಿದಿರುವ ಮೋದಿ ನೇತೃತ್ವದ ಸರ್ಕಾರ ಬೆಲೆ ಏರಿಕೆ ನಿಯಂತ್ರಣದತ್ತ ಮಾತ್ರ ಗಮನಹರಿಸಿ ರೈತರ ಸಮಸ್ಯೆಗಳನ್ನು ಕಡೆಗಣಿಸಬಾರದು. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಕುರಿತ ಪ್ರಸ್ತಾಪ ಎರಡು ಪುಟಗಳಿಗೆ ಸೀಮಿತ. ಇಲ್ಲಿ ಎತ್ತಿರುವ ವಿಚಾರಗಳಲ್ಲಿ, ಕೊಟ್ಟಿರುವ ಭರವಸೆ­ಗಳಲ್ಲಿ ಹೊಸತೇನೂ ಇಲ್ಲ.

ಗುಜರಾತ್‌ ಕೃಷಿ ಅಭಿವೃದ್ಧಿ ಮಾದರಿಯನ್ನು ಎತ್ತಿ ಹಿಡಿದು   ಮೋದಿಯವರ ನಿಕಟ ವಲಯ­ದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ‘ಕೃಷಿ ಬೆಲೆ ಆಯೋಗದ’ ಹಿಂದಿನ ಅಧ್ಯಕ್ಷ, ಅರ್ಥಶಾಸ್ತ್ರಜ್ಞ ಡಾ. ಅಶೋಕ್‌ ಗುಲಾಟಿ ಅವರು ಕೇಂದ್ರ ಸರ್ಕಾರಕ್ಕೆ ಕೃಷಿ ವಿಚಾರದಲ್ಲಿ ನೀಡಿರುವ ಸಲಹೆ ಚರ್ಚಾಸ್ಪದ.

ಆಹಾರ ವಸ್ತುಗಳ ಧಾರಣೆಗಳನ್ನು ನಿಯಂತ್ರಿಸಿ ನೂರು ದಿನಗಳೊಳಗೆ ಹಣದುಬ್ಬರಕ್ಕೆ ಕಡಿವಾಣ ಹಾಕಲು ಡಾ. ಗುಲಾಟಿಯವರು ಹಣ್ಣು, ತರಕಾರಿ, ಹಾಲು, ಮಾಂಸ ಇತ್ಯಾದಿಗಳ ಆಮದು ಸುಂಕವನ್ನು ಗಮನಾರ್ಹವಾಗಿ ಇಳಿಸಿ ಇವುಗಳು ಹೊರಗಿನಿಂದ ಮುಕ್ತವಾಗಿ ಹರಿದು ಬರುವಂತೆ ತಕ್ಷಣ ಮಾಡಬೇಕು ಎಂದಿದ್ದಾರೆ. ಹಾಗೇ ರೈತ­ರಿಂದ ಆಹಾರ ಧಾನ್ಯಗಳ ನೇರವಾದ ಖರೀದಿಗೆ ಕಡಿವಾಣ ಹಾಕಿ, ಸರ್ಕಾರ ತನ್ನ ದಾಸ್ತಾನನ್ನೂ ಕಡಿತ ಗೊಳಿಸಬೇಕೆಂಬುದು ಮತ್ತೊಂದು ಸಲಹೆ.

ಭಾರತೀಯ ರೈತರು ಆಹಾರ, ಕೃಷಿ ಉತ್ಪನ್ನ­ಗಳ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿ­ರುವಂತೆ  ಮಾಡಿರುವುದು ಮಾತ್ರವಲ್ಲ ಈ ನಿಟ್ಟಿನಲ್ಲಿ  ದಾಖಲೆಯನ್ನೂ  ನಿರ್ಮಿಸಿದ್ದಾರೆ.  25 ಕೋಟಿ ಟನ್‌ಗಳಿಗಿಂತ ಅಧಿಕ ಆಹಾರ ಧಾನ್ಯ, 16.2 ಕೋಟಿ ಟನ್‌ ತರಕಾರಿ, 13.4 ಕೋಟಿ ಟನ್‌ ಕ್ಷೀರ ಉತ್ಪನ್ನ, 8.1 ಕೋಟಿ ಟನ್‌ ಹಣ್ಣು­ಗಳು, 1.7 ಕೋಟಿ ಟನ್‌ ಸಕ್ಕರೆ ಮತ್ತು ಇಷ್ಟೇ ಪ್ರಮಾಣದ  ಹತ್ತಿ.

ಇವೆಲ್ಲಾ ನಮ್ಮ ಇತ್ತೀಚಿನ ವರ್ಷಗಳ ದಾಖಲೆ ಉತ್ಪಾದನೆ. ಈ ಎಲ್ಲದರ ನಡುವೆಯೂ ಈ ದೇಶದಲ್ಲಿ ಹಸಿವು, ಬೆಲೆ ಏರಿಕೆಗಳಿದ್ದರೆ ಅದು ಉತ್ಪಾದನೆಯ ಕೊರತೆ­ಯಿಂದಲ್ಲ. ಹಂಚಿಕೆಯ ವಿಚಾರದಲ್ಲಿ ನಮ್ಮ ಮಹಾ ವೈಫಲ್ಯದಿಂದ ಎನ್ನಬಹುದು. ನಮ್ಮ ಉತ್ಪಾದನೆಯನ್ನು ಸಮನಾಗಿ ಹಂಚಿಕೆ ಮಾಡಿದ್ದೇ ಆದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಆಹಾರಧಾನ್ಯಗಳು, ಹಣ್ಣು, ಹಾಲು, ತರಕಾರಿ, ಸಕ್ಕರೆ ಮಾತ್ರವಲ್ಲದೆ ಉಡಲು ಬಟ್ಟೆ ಕೂಡ ಅಗತ್ಯಕ್ಕೆ ತಕ್ಕಷ್ಟು ಸಿಗಬಹುದು.

ಕೆಲ­ವೊಮ್ಮೆ ಅಧಿಕವಾಗಿಯೂ ಸಿಗಬಹುದಾಗಿದೆ. ನಮ್ಮ ತಲಾವಾರು ಆಹಾರಧಾನ್ಯದ ಲಭ್ಯತೆ ದಿನ ಒಂದಕ್ಕೆ 425 ಗ್ರಾಂನಷ್ಟಿದ್ದರೆ, ತರಕಾರಿ ಹಣ್ಣುಗಳ ಒಟ್ಟಾರೆ ಪೂರೈಕೆ ಕೂಡ ಇಷ್ಟೇ ಪ್ರಮಾಣ­ದಲ್ಲಿರಲಿದೆ. ಕ್ಷೀರ ಕ್ರಾಂತಿಯಿಂದಾಗಿ  ಪ್ರತಿ ಭಾರತೀಯನೂ ದಿನಕ್ಕೆ ಸರಾಸರಿ ಕಾಲು ಲೀಟರ್‌ (250 ಮಿ.ಲೀ) ಹಾಲು ಪಡೆಯಬಹುದಾಗಿದೆ. ಈ ಪ್ರಮಾಣ ಪಂಜಾಬ್ ನಂತಹ ರಾಜ್ಯಗಳಲ್ಲಿ ಒಂದು ಲೀಟರ್ ದಾಟಿರುತ್ತದೆ. 

ಹಾಗೇ ಪ್ರತಿ ಭಾರತೀಯನೂ ವರ್ಷ ಒಂದಕ್ಕೆ 44 ಮೀಟರ್‌ ಬಟ್ಟೆ ಪಡೆಯುವಷ್ಟು ಹತ್ತಿ ಉತ್ಪಾದನೆ  ನಮ್ಮಲ್ಲಾಗುತ್ತಿದೆ. ತಿಂಗಳೊಂದಕ್ಕೆ  ಒಂದು ಕೆ.ಜಿ. ಸಕ್ಕರೆ ಪ್ರತಿಯೊಬ್ಬರಿಗೂ  ಸಿಗ­ಬಹುದಾಗಿದೆ. ಇನ್ನು ಆಗಾಗ್ಗೆ ಧಾರಣೆ ಗಗನಕ್ಕೇರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸುತ್ತಿರುವ ಈರುಳ್ಳಿಯ ಅಗತ್ಯ ವರ್ಷಕ್ಕೆ 1 ರಿಂದ 1.2  ಕೋಟಿ ಟನ್‌ಗಳು. ಆದರೆ ನಮ್ಮ ಉತ್ಪಾದನೆ ಸರಾಸರಿ 1.5 ಕೋಟಿ ಟನ್‌ಗಳು. ಹೀಗೆ ಸಮೃದ್ಧಿ­ಯನ್ನೇ ನೀಡಿರುವ ನಮ್ಮ ರೈತರ ಸ್ಥಿತಿ ಹೇಗಿದೆ?

ಸರ್ಕಾರವೇ ಹೊರತಂದಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಇತ್ತೀಚಿನ ವರ್ಷದಲ್ಲಿ 14 ಪ್ರಮುಖ  ಬೆಳೆಗಳನ್ನು ಬೆಳೆದ ರೈತರು ದುಬಾರಿ ಕೂಲಿ, ಭೂಮಿಯ ಗೇಣಿ ಇತ್ಯಾದಿ ವೆಚ್ಚಗಳನ್ನು ಲೆಕ್ಕ ಹಾಕಿದರೆ ಮಾಡಿದ ಖರ್ಚು ಕೂಡ ಗಿಟ್ಟದೆ  ನಷ್ಟ ಅನುಭವಿಸುತ್ತಿದ್ದಾರೆ. ನಮ್ಮ ರೈತರು ಈ ರೀತಿ ಒಟ್ಟಾರೆ ಭರಿಸಿದ  ನಷ್ಟದ ಪ್ರಮಾಣ ಏನಿಲ್ಲ ಅಂದರೂ ₨ 3000 ಕೋಟಿ ಮೀರುತ್ತದೆ! ಇದರ ಪರಿಣಾಮವಾಗಿ ಕೆಲ ರೈತರು ಇಂದು ಕೃಷಿಗೆ ಬೆನ್ನು ಮಾಡಿ ಪಟ್ಟಣಗಳತ್ತ ವಲಸೆ ಹೋಗು­ತ್ತಿದ್ದಾರೆ.

ಹಲವು ರೈತರು ಆತ್ಮಹತ್ಯೆಯ ದಾರುಣ ಹಾದಿ ಹಿಡಿದಿದ್ದಾರೆ. ಇಂಥ ಅಂಕಿ ಅಂಶಗಳು ನಮ್ಮ ಮುಂದಿದ್ದರೂ ಆಳುವ ವರ್ಗಕ್ಕೆ ಮಾತ್ರ ಇನ್ನೂ ಪಶ್ಚಾತ್ತಾಪ ಮತ್ತು  ಮುಜುಗರವೇ ಇಲ್ಲ  ಎಂದು ಆಶ್ಚರ್ಯವಾಗುತ್ತದೆ. ಯಾರೂ ಗಮನ ಹರಿಸದ ಇನ್ನೊಂದು ವಿಚಾರ­ವೆಂದರೆ ಈರುಳ್ಳಿ, ಆಲೂಗಡ್ಡೆ, ತೊಗರಿ, ಹಣ್ಣು, ತರಕಾರಿ ಇತ್ಯಾದಿಗಳ ಬೆಲೆ ಗಗನಕ್ಕೇರಿ ಗ್ರಾಹಕರು ಪರದಾಡುತ್ತಿರುವ ದಿನಗಳಲ್ಲೂ ಇವು­ಗಳನ್ನು ಬೆಳೆದ ರೈತರು ಬವಣೆ ಪಡುತ್ತಿದ್ದಾರೆ.

ದವಸ, ಧಾನ್ಯ, ತರಕಾರಿಗಳಿಗೆ ಗ್ರಾಹಕರು ನೀಡು­ತ್ತಿರುವ ಬೆಲೆಯಲ್ಲಿ ಮೂರನೇ ಒಂದಂಶ ಕೂಡ ಯಾವತ್ತೂ  ರೈತರಿಗೆ ತಲುಪಿಲ್ಲ. ಕೃಷಿ ವಲಯದ ಈ ನಿರಂತರ ಲೂಟಿಯಲ್ಲಿ  ಭ್ರಷ್ಟ ವ್ಯವಸ್ಥೆಯೂ  ಪಾಲಾಗಿರುವುದರಿಂದ ಈ ಬಗ್ಗೆ ಜಾಣ ಕುರುಡುತನ ಎದ್ದು ಕಾಣುತ್ತಲಿದೆ.
ಕಳೆದ ವರ್ಷ ಈರುಳ್ಳಿ ಬೆಲೆ ಗಗನಕ್ಕೇರಿದ ಸಮಯದಲ್ಲಿ ದೇಶದ ಅತಿದೊಡ್ಡ ಮಾರು­ಕಟ್ಟೆಯಾದ ಮಹಾರಾಷ್ಟ್ರದ ಲಸಾನ್‌ಗಾನ್‌ನಲ್ಲಿ ಕೆಲ ಪ್ರಭಾವಿ ವ್ಯಾಪಾರಸ್ಥರು ನಾಲ್ಕೇ ದಿನಗಳಲ್ಲಿ ಗಳಿಸಿದ ಲಾಭ  ₨ 150 ಕೋಟಿ ದಾಟಿತ್ತಂತೆ!

ಹೀಗೆ ಗ್ರಾಹಕರು ಮತ್ತು ರೈತರು ಏಕಕಾಲದಲ್ಲಿ ವಂಚಿತರಾಗುತ್ತಿದ್ದರೂ ಬೆಲೆ ಏರಿಕೆಯ ಬಗ್ಗೆ ಮಾತ್ರ ಇಂದು ಎಲ್ಲರೂ ಗಮನ ಹರಿಸುತ್ತಿ­ರುವುದು ವಿಪರ್ಯಾಸ. ಸಾಲದ್ದಕ್ಕೆ ಮುಕ್ತ ಆಮದು ಮಾಡಿಕೊಳ್ಳುವಂತಹ  ಪ್ರಸ್ತಾಪ ಬೇರೆ! ಗ್ರಾಹಕರ ಹಿತ ಕಾಯುವ ಜೊತೆಗೆ ಮಣ್ಣಿನ ಮಕ್ಕಳ ಯೋಗಕ್ಷೇಮಕ್ಕೆ ಮೋದಿಯವರು ಮನಸ್ಸು ಮಾಡುವುದೇ  ಆದಲ್ಲಿ ಉತ್ಪಾದಕತೆ ಮತ್ತು ಪೂರೈಕೆಗಳಿಗಿಂತಲೂ ಹೆಚ್ಚಿನ ಆದ್ಯತೆ­ಯನ್ನು ವಿತರಣೆ ಮತ್ತು ಹಂಚಿಕೆಗಳಿಗೆ ಕೊಡ­ಬೇಕಾಗುತ್ತದೆ. ಇದಕ್ಕೆ ಸಣ್ಣಪುಟ್ಟ ಬದಲಾವಣೆ­ಗಳು ಸಾಲದು. ಆಳವಾದ ಸಾಂಸ್ಥಿಕ ಸ್ವರೂಪದ ಮಾರ್ಪಾಡೇ ಬೇಕಾಗುತ್ತದೆ.

ಮಧ್ಯವರ್ತಿಗಳ ಕಪಿಮುಷ್ಟಿಗೆ ಸಿಲುಕಿರುವ ಅರ್ಥ­ವ್ಯವಸ್ಥೆಯೊಂದರಲ್ಲಿ ಮುಕ್ತ ಮಾರುಕಟ್ಟೆ ತತ್ವಗಳು ಕೆಲಸ ಮಾಡಿ ರೈತರು ಮತ್ತು ಗ್ರಾಹಕ­ರಿಗೆ ನ್ಯಾಯ ದೊರೆಯುತ್ತದೆ  ಎನ್ನುವುದು ವಿಪರ್ಯಾಸವಾಗುತ್ತದೆ. ಮಾರುಕಟ್ಟೆ ವ್ಯವಹಾ­ರ­ದಲ್ಲಿ ರೈತ ಏಕಾಂಗಿಯಾಗಿರುವುದರಿಂದ ಯಾವತ್ತೂ ಹಿಂದೆ ಬೀಳುತ್ತಲೇ ಬಂದಿದ್ದಾನೆ. ಇದಕ್ಕೆ ಪರಿಹಾರವೆಂದರೆ ತಾತ್ವಿಕವಾಗಿ ರೈತರ ಸಾಂಘಿಕಶಕ್ತಿ ಗಟ್ಟಿಮಾಡುವುದು.  ಜತೆಗೆ  ವ್ಯಾವಹಾರಿಕವಾಗಿ ಭಾರತದಂತಹ ಅಭಿವೃದ್ಧಿ­ಶೀಲ ರಾಷ್ಟ್ರದಲ್ಲಿ ಸರ್ಕಾರ ಕೃಷಿ ಉತ್ಪನ್ನ ಬೆಲೆ, ಸಂಗ್ರಹ ಮತ್ತು ವಿತರಣೆ ವಿಚಾರಗಳಲ್ಲಿ ನೇರ ಮಧ್ಯಪ್ರವೇಶ ಮಾಡುವುದು ಅತ್ಯಂತ ಯೋಗ್ಯಕ್ರಮ.

ಪರಿಹಾರ ಇದೆ: ರೈತರು ಕಷ್ಟಪಟ್ಟು ಬೆಳೆದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿ­ಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಜನಪರ ಸರ್ಕಾರದ  ಲಕ್ಷಣವಾಗಲಾರದು. ಒಂದು ಗಂಟೆ ಕೂಡ ಪೆಟ್ರೋಲ್‌, ಡೀಸೆಲ್‌ಗಳು ಕೊರತೆ ಕಂಡುಬರದಂತಹ  ಅತ್ಯಂತ ವ್ಯವಸ್ಥಿತ ರೀತಿಯ ವಿತರಣೆ ವ್ಯವಸ್ಥೆ ನಮ್ಮಲ್ಲಿದೆ. ಅದೂ ಸರ್ಕಾರದ ಪೂರ್ಣ ಮಧ್ಯಪ್ರವೇಶದಿಂದ. ಅಂದ ಮೇಲೆ ಇಂಥದೇ ಪದ್ಧತಿ ಜೀವನಾವಶ್ಯಕ ಆಹಾರ ವಸ್ತುಗಳ ವಿತರಣೆಯಲ್ಲಿ ಅಸಾಧ್ಯದ ಮಾತೇನೂ ಅಲ್ಲ.

ಅಕ್ಕಿ, ಗೋಧಿ, ರಾಗಿ, ತೊಗರಿಯಂತಹ ದ್ವಿದಳ ಧಾನ್ಯಗಳು, ಈರುಳ್ಳಿ, ಆಲೂಗಡ್ಡೆ, ಮೆಣಸಿನಂ­ತಹ ವರ್ಷವಿಡೀ ಅಗತ್ಯವಿರುವ ತರಕಾರಿ, ಖಾದ್ಯ ತೈಲ, ಸಕ್ಕರೆ ಹೀಗೆ ಹತ್ತು ಹನ್ನೆರಡು ಅತ್ಯಗತ್ಯ ಕೃಷಿ ಉತ್ಪನ್ನಗಳನ್ನು ಅಗತ್ಯ ಪ್ರಮಾಣದಲ್ಲಿ ಬೆಳೆಸಿ, ಯೋಗ್ಯ ಬೆಲೆ ಕೊಟ್ಟು ಕೊಂಡು, ಸಂಗ್ರಹಿಸಿ ದೇಶದಾದ್ಯಂತ ವಿತರಿಸುವ ಕುರಿತು ಸರ್ಕಾರದ ಪಾತ್ರವೇನೆಂಬುದರ ಬಗ್ಗೆ ಈಗ ತೀವ್ರ ಗಮನ ಅಗತ್ಯವಾಗಿದೆ.

ಆಯಾ ಪ್ರದೇಶದಲ್ಲಿ ವಿಕೇಂದ್ರೀಕೃತವಾಗಿ ಖರೀದಿಸಿ, ಸರ್ಕಾರದ ಅಂಗಸಂಸ್ಥೆಗಳ ಜೊತೆಗೆ ಸಹಕಾರ ಸಂಸ್ಥೆಗಳು, ಖಾಸಗಿ ವಲಯ, ಸ್ವಯಂ­ಸೇವಾ ಸಂಸ್ಥೆಗಳು, ಸಮುದಾಯದ ಗುಂಪುಗಳೆಲ್ಲ­ವನ್ನು ಒಳಗೊಂಡು ಒಂದು ವಿತರಣಾ ವ್ಯವಸ್ಥೆ­ಯನ್ನು ಹುಟ್ಟುಹಾಕಿದ್ದೇ ಆದಲ್ಲಿ ಅದು ರೈತರು ಮತ್ತು ಗ್ರಾಹಕರ ಹಿತ ಕಾಯುತ್ತದೆ. ಅಷ್ಟೇ ಅಲ್ಲದೆ ಆಹಾರ ಭದ್ರತೆ ವಿಚಾರದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಬಹುದಾಗಿದೆ.

ಆಂಧ್ರದ ಮೆದಕ್‌ ಜಿಲ್ಲೆಯಲ್ಲಿ ‘ಡೆಕ್ಕನ್‌ ಡೆವಲಪ್‌­ಮೆಂಟ್‌ ಸಂಸ್ಥೆಯ’ ನೇತೃತ್ವದಲ್ಲಿ ತೃಣಧಾನ್ಯಗಳ ಉತ್ಪಾದನೆ ಮತ್ತು ವಿತರಣೆ ವಿಚಾರದಲ್ಲಿ ಈ ರೀತಿಯ ಪ್ರಯೋಗ  ಅತ್ಯಂತ ಯಶಸ್ವಿಯಾಗಿರುತ್ತದೆ.  ಬಿಜೆಪಿ  ತನ್ನ ಪ್ರಣಾಳಿಕೆ­ಯಲ್ಲಿ ತಿಳಿಸಿರುವ ‘ರಾಷ್ಟ್ರಮಟ್ಟದ ಏಕ ಕೃಷಿ ಮಾರಾಟ ವ್ಯವಸ್ಥೆ’ಯನ್ನು ಈ ನಿಟ್ಟಿನಲ್ಲಿ ಯೋಚಿಸಿ ಗಟ್ಟಿ ಮಾಡಬೇಕಾಗಿದೆ.

ಈಗಾಗಲೇ ಜಾರಿಗೆ ಬಂದಿರುವ ‘ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ’ಗೆ ಸೂಕ್ತ ತಿದ್ದುಪಡಿ ತಂದು, ಕೇಂದ್ರದ ನಾಗರಿಕ ಸರಬರಾಜು ಸಚಿವಾಲಯಕ್ಕೆ ಮೇಲೆ ತಿಳಿಸಿದಂತೆ ವಿಕೇಂದ್ರೀಕೃತ ವಿತರಣೆಯ ಸಂಪೂರ್ಣ ಜವಾಬ್ದಾರಿ ವಹಿಸು­ವುದು ಕೃಷಿ ವಿಚಾರದಲ್ಲಿ ಮೋದಿಯವರ ಆದ್ಯತೆ­ಯಾಗಬೇಕಾಗಿದೆ.

ಅಗತ್ಯ ಆಹಾರ ವಸ್ತುಗಳ ಕೊರತೆ ಹಲವು ಬಾರಿ ಪಟ್ಟಭದ್ರ ಹಿತಾಸಕ್ತಿಗಳ ಕೃತಕ ಸೃಷ್ಟಿ­ಯಾದರೆ  ಅದಕ್ಕೆ ಸರ್ಕಾರದ ನಿರ್ಲಕ್ಷ್ಯವೂ ಅಷ್ಟೇ ಕಾರಣವಾಗಿದೆ. ನಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವ್ಯಾವ ಬೆಳೆಗಳನ್ನು ಎಲ್ಲೆಲ್ಲಿ ಎಷ್ಟು ಪ್ರದೇಶದಲ್ಲಿ ಬೆಳೆಯಬೇಕೆಂಬ ಸೂಕ್ತ ಬೆಳೆ ಯೋಜನೆಯೇ ನಮ್ಮಲ್ಲಿಲ್ಲ. ಅದರ ಬಗ್ಗೆ ಸಕಾಲ­ದಲ್ಲಿ ಸರಿಯಾದ ಮಾಹಿತಿ ಕೂಡ ಇಂದು ಸಿಗದಾಗಿದೆ.

ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ­ಯನ್ನೇ ಸಾಧಿಸಿದ್ದೇವೆ ಎಂದು ಬೀಗುತ್ತಿರುವ ದೇಶದಲ್ಲಿ ಕೃಷಿ ಉತ್ಪನ್ನಗಳ ಪೂರೈಕೆ, ಬೆಲೆ, ಬೇಡಿಕೆಗಳ ವಿಚಾರದಲ್ಲಿ ಕನಿಷ್ಠ ಮುನ್ಸೂಚನೆ ಕೂಡ ದೊರೆಯದೇ ಇರುವುದು ಸರಿಯಲ್ಲ. ಬಿಜೆಪಿ  ಪ್ರಣಾಳಿಕೆಯಲ್ಲಿ ಈ ವಿಚಾರ ಕೂಡ ಪ್ರಸ್ತಾಪಿಸಲಾಗಿದೆ. ಆದರೆ ಸೂಕ್ತ ಅನುಷ್ಠಾನದ ದಾರಿ ಹುಡುಕಬೇಕಾಗಿದೆ.

ರೈತರ ನೆಮ್ಮದಿ ಅತ್ಯಗತ್ಯ: ಭಾರತದಂತಹ ಒಂದು ಅರ್ಥವ್ಯವಸ್ಥೆ ಸದೃಢವಾಗಿರಬೇಕಾದರೆ ರೈತಾಪಿ ವರ್ಗ ನೆಮ್ಮದಿಯಾಗಿರಬೇಕು. ಇದಕ್ಕೆ ರೈತರಿಗೆ ನೀರು, ಬೀಜ, ರಸಗೊಬ್ಬರ, ಸಾಲ ಇತ್ಯಾದಿಗಳು ಸಕಾಲದಲ್ಲಿ ಸಿಕ್ಕಿ ಬೆಳೆದ ಬೆಳೆಗೆ ಒಳ್ಳೆ ಮಾರುಕಟ್ಟೆ, ಯೋಗ್ಯಬೆಲೆ ಇವೆಲ್ಲಾ ಬೇಕೇ ಬೇಕು.

ಇವೆಲ್ಲವುಗಳ ಮೂಲಕ ಅಂತಿಮವಾಗಿ ಅವರಿಗೆ ಅಧಿಕ ಆದಾಯ ಮತ್ತು ಜೀವನ ಭದ್ರತೆ ಸಿಗುವಂತಾಗಬೇಕು.
ಒಂದು ಅಧ್ಯಯನದ ಪ್ರಕಾರ ಕೃಷಿ ಮೂಲದ ಆದಾಯವನ್ನು ಮಾತ್ರ ಪರಿಗಣಿಸಿದಲ್ಲಿ ಕರ್ನಾಟಕ­ದಂತಹ ರಾಜ್ಯದಲ್ಲಿ ಶೇ 75 ರಷ್ಟು ರೈತರು ಬಡತನ ರೇಖೆಗಿಂತ ಕೆಳಗೆ ಬದುಕು­ತ್ತಿದ್ದಾರೆ. ಈ ಬಗ್ಗೆ ಯಾರೂ, ಎಲ್ಲೂ ಪ್ರಸ್ತಾಪಿಸ­ದಿರುವುದು ಪರಮಾಶ್ಚರ್ಯ!
ಈ ಎಲ್ಲಾ ವಿಚಾರಗಳು ಸಾಕಾರಗೊಳ್ಳಲು ಸರ್ಕಾರಕ್ಕೆ ಸೂಕ್ತ ಸಲಹೆ, ಸೂಚನೆಗಳು ಸಕಾಲ­ದಲ್ಲಿ ಸಿಗುವಂತಾಗಬೇಕು.

ಇದಕ್ಕಾಗಿ ಈಗಿರುವ ಕೇಂದ್ರದ ‘ಕೃಷಿ ವೆಚ್ಚ ಮತ್ತು ಬೆಲೆ ಆಯೋಗ’ಕ್ಕೆ ಆಮೂಲಾಗ್ರ ಬದಲಾವಣೆ ತಂದು, ಸಾಂವಿಧಾನಿಕ ಸ್ವರೂಪ ನೀಡಬೇಕು. ಅದನ್ನು ‘ಕೃಷಿ ವೆಚ್ಚ, ಲಾಭದಾಯಕ ಬೆಲೆ ಮತ್ತು ರೈತ ಆದಾಯ ಆಯೋಗ’,  (Agricultural Cost Remunerative Price and Farmers Income Commission) ಎಂದು ಪುನರ್‌ ನಾಮಕರಣ ಮಾಡಬೇಕು.

ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಈಗಲೇ ದಿಟ್ಟ ಹೆಜ್ಜೆ ಇಟ್ಟು ರಾಜ್ಯಕ್ಕೆ ಒಂದು ಪ್ರತ್ಯೇಕ ‘ಕೃಷಿ ಬೆಲೆ ಆಯೋಗ’ ರಚಿಸಲು ಮುಂದಾಗಿದೆ. ಮಾರುಕಟ್ಟೆ ಸುಧಾರಣೆ, ಆಹಾರ ಉತ್ಪಾದನೆ­ಯಲ್ಲಿ ಸ್ವಾವಲಂಬನೆಗಳಿಂದ ಹಿಡಿದು ಗ್ರಾಹಕರ ಬೆಲೆಯಲ್ಲಿ ನ್ಯಾಯಯುತ ಪಾಲು ರೈತರಿಗೆ ಸಿಗು­ವಂತಾಗಲು ಸಾಂಘಿಕ ಪ್ರಯತ್ನ ಗಟ್ಟಿ ಮಾಡು­ವಂತಹ ಗುರುತರ ಜವಾಬ್ದಾರಿಗಳನ್ನು ಈ ಆಯೋಗ ಭರಿಸಲಿದೆ.

ಇಂತಹ ಪ್ರಯತ್ನಗಳು ಬೇರೆ ಬೇರೆ ರಾಜ್ಯಗಳಲ್ಲೂ ಅತ್ಯಗತ್ಯ. ಈ ಎಲ್ಲಾ ಕ್ರಮಗಳ ಅನುಷ್ಠಾನದತ್ತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನವಾದದ್ದೇ ಆದಲ್ಲಿ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣವಾಗುವುದು ಮಾತ್ರವಲ್ಲ ರೈತಾಪಿ­ವರ್ಗದ ಮೋಕ್ಷ ಕೂಡ ಸಾಧ್ಯ­ವಾಗುವುದು. ಇದು ನರೇಂದ್ರ ಮೋದಿಯವರು ಕೃಷಿ ವಿಚಾರದಲ್ಲಿ ಕೈಗೊಳ್ಳಬಹುದಾದ ಕ್ರಮ­ಗಳನ್ನಾಧರಿಸಿದೆ.

(ಲೇಖಕರು ಕೃಷಿ ಆರ್ಥಿಕ ತಜ್ಞರು)
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT