ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಮೋಚ್ಚತೆ’ ಎಂಬ ಸಾಂವಿಧಾನಿಕ ಪ್ರಮಾದ

ಪ್ರಧಾನಿ, ವಿರೋಧ ಪಕ್ಷದ ನಾಯಕನನ್ನು ನಂಬಲಾರೆ ಎನ್ನುವುದು ಸಾಂವಿಧಾನಿಕ ಹುದ್ದೆಯ ಘನತೆ ಕಡಿಮೆ ಮಾಡಿದಂತೆ
Last Updated 23 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸಂವಿಧಾನದ  99ನೇ ತಿದ್ದುಪಡಿ ಅಸಾಂವಿಧಾನಿಕ ಎಂದು ಹೇಳಿ ಸುಪ್ರೀಂ ಕೋರ್ಟ್‍, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಅಸಿಂಧುಗೊಳಿಸಿದೆ. ಎನ್‌ಜೆಎಸಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ನಾನು ಅದರ ಪರ ನಿಲುವು ತಾಳಿದ್ದೆ. ಈಗಲೂ ನನ್ನ ಒಲವು ಎನ್‌ಜೆಎಸಿ ಪರವಾಗಿಯೇ ಇದೆ.

ಈ ತೀರ್ಪು ನೀಡುವ ಸಂದರ್ಭದಲ್ಲಿ, ಎನ್‌ಜೆಎಸಿ ಕಾಯ್ದೆ ಸಂವಿಧಾನದ ಮೂಲ ಸ್ವರೂಪಕ್ಕೆ ನಿಜಕ್ಕೂ ಧಕ್ಕೆ ತರುತ್ತದೆಯೇ ಎಂಬುದನ್ನು ಸೂಕ್ಷ್ಮವಾಗಿ ಗುರುತಿಸುವಲ್ಲಿ ಸಂವಿಧಾನ ಪೀಠ ಎಡವಿದೆ.  ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಅಪರಿಮಿತ ಗೌರವ ಇಟ್ಟುಕೊಂಡೇ ನಾನು ಈ ಮಾತು ಹೇಳುತ್ತಿದ್ದೇನೆ. ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರದ ನಡುವಿನ ಪ್ರಕರಣದಲ್ಲಿ ಮೈದಳೆದ ‘ಸಂವಿಧಾನದ ಮೂಲ ಸ್ವರೂಪ’ವನ್ನು, ಈ ಪ್ರಕರಣದಲ್ಲಿ ಸರಿಯಾಗಿ ವ್ಯಾಖ್ಯಾನಿಸದಿರುವುದು ಒಂದು ಸಾಂವಿಧಾನಿಕ ಪ್ರಮಾದ.

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಿಗೆ ಪ್ರತ್ಯೇಕ ಅಸ್ತಿತ್ವ ಮತ್ತು ಅವುಗಳದ್ದೇ ಆದ ಕಾರ್ಯವ್ಯಾಪ್ತಿಯನ್ನು ಸಂವಿಧಾನ ನೀಡಿದೆ. ಮೂರು ಅಂಗಗಳಿಗೆ ನೀಡಿರುವ ಪ್ರತ್ಯೇಕ ಕಾರ್ಯವ್ಯಾಪ್ತಿ ಕೂಡ ಸಂವಿಧಾನದ ‘ಮೂಲ ಸ್ವರೂಪ’ಗಳಲ್ಲಿ ಒಂದು. ‘ನ್ಯಾಯಾಂಗದ ಸ್ವಾತಂತ್ರ್ಯ’ವು ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು ಎಂಬ ಬಗ್ಗೆ ಅನುಮಾನವೇ ಇಲ್ಲ. ಆದರೆ, ‘ನ್ಯಾಯಾಂಗವೇ ಪರಮೋಚ್ಚ’ ಎಂಬುದನ್ನು ‘ಮೂಲ ಸ್ವರೂಪ’ಗಳ ಭಾಗವಾಗಿ ಅರ್ಥೈಸುವಂತಿಲ್ಲ. ನ್ಯಾಯಾಂಗದ ಪರಮೋಚ್ಚತೆ ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು ಎಂಬುದೇ ತಪ್ಪು ತಿಳಿವಳಿಕೆ. ನ್ಯಾಯಾಂಗವೇ ಪರಮೋಚ್ಚ ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ.

ನ್ಯಾಯಾಂಗದ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡುವವರು ರಾಷ್ಟ್ರಪತಿಗಳು. ಇವರು ಕಾರ್ಯಾಂಗದ ಮುಖ್ಯಸ್ಥರು. ಅವರು ನೇಮಕಾತಿ ಮಾಡುವಾಗ ಅನುಸರಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಮಾರ್ಗದರ್ಶನ ಇರಲಿಲ್ಲ. ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು. ಇದರಲ್ಲಿ ಕೆಲವು ಸ್ಪಷ್ಟ ಮಾರ್ಗಸೂಚಿಗಳು ಇರಬೇಕು ಎಂಬ ಮಾತು ಕೇಳಿಬರುತ್ತಿದ್ದ ಕಾಲದಲ್ಲಿ, ಅಂದರೆ 1992-93ರಲ್ಲಿ, ಸುಪ್ರೀಂ ಕೋರ್ಟ್‍ ಒಂದು ತೀರ್ಪು ನೀಡಿತು.

ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಪರಮೋಚ್ಚ ತೀರ್ಮಾನ ನ್ಯಾಯಾಂಗದ್ದೇ ಆಗಿರಬೇಕು, ನೇಮಕಾತಿಯನ್ನು ಮಾಡಬೇಕಿರುವುದು ಕೊಲಿಜಿಯಂ (ನ್ಯಾಯಮೂರ್ತಿಗಳ ಸಮಿತಿ) ಎಂದು ಆ ತೀರ್ಪಿನಲ್ಲಿ ಹೇಳಿತು. ಕೊಲಿಜಿಯಂ ವ್ಯವಸ್ಥೆ ಮೂಲಕ ನೇಮಕ ಆಗಬೇಕು ಎಂದು ಸಂವಿಧಾನದಲ್ಲಿ ಹೇಳಿಲ್ಲ. ಹಾಗಾಗಿ, 1992-93ರ ತೀರ್ಪು ಸಾಂವಿಧಾನಿಕ ಪ್ರಮಾದಕ್ಕೆ ತಳಹದಿ ರೂಪಿಸಿತು.

ಸಂವಿಧಾನಕ್ಕೆ ಅನುಗುಣವಾಗಿ, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಹೇಗಿರಬೇಕು ಎಂಬುದನ್ನು ಎನ್‌ಜೆಎಸಿ ಕಾಯ್ದೆ ವಿವರಿಸಿತ್ತು. ಆ ಕಾಯ್ದೆಗೆ ಅನುಗುಣವಾಗಿ ನ್ಯಾಯಮೂರ್ತಿಗಳ ನೇಮಕ ನಡೆಯುವ ಮುನ್ನವೇ, ಇದರ ಪರಿಣಾಮಗಳ ಬಗ್ಗೆ ವಿಮರ್ಶಿಸುವುದು ಅಪಕ್ವವಾಗುತ್ತದೆ. ಎನ್‌ಜೆಎಸಿಯಲ್ಲಿ ನ್ಯೂನತೆಗಳು ಕಂಡುಬಂದರೆ ಅದನ್ನು ಸರಿಪಡಿಸಲು ಅವಕಾಶ ಇದ್ದೇ ಇತ್ತು. ಎನ್‌ಜೆಎಸಿ ಪರಿಪೂರ್ಣವೇ, ಅಲ್ಲವೇ ಎಂಬುದನ್ನು ಪರಿಶೀಲಿಸಬಹುದಿತ್ತು. ಆದರೆ ಈಗ ಅದಕ್ಕೆ ಒಂದು ಅವಕಾಶ ಕೂಡ ಸಿಗದಂತಾಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಮೂವರು ನ್ಯಾಯಮೂರ್ತಿಗಳು, ಇಬ್ಬರು ಹಿರಿಯ ವ್ಯಕ್ತಿಗಳು ಮತ್ತು ದೇಶದ ಕಾನೂನು ಸಚಿವರು ಎನ್‌ಜೆಎಸಿಯಲ್ಲಿ ಇರುತ್ತಿದ್ದರು. ಇಬ್ಬರು ಹಿರಿಯ ವ್ಯಕ್ತಿಗಳು ಮತ್ತು ಕಾನೂನು ಸಚಿವರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿತ್ತು ಎಂಬ ಮಾತುಗಳಿವೆ. ಹಾಗಾದರೆ, ನ್ಯಾಯಾಂಗದ ಸ್ವಾತಂತ್ರ್ಯ ಅಂದರೆ ಏನು?

ತನ್ನ ಕರ್ತವ್ಯ ನಿರ್ವಹಿಸಲು ನ್ಯಾಯಾಂಗಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂಬುದು ನಿಜ. ಆದರೆ, ಆಡಳಿತಗಾರನ ಕೆಲಸವನ್ನು ನ್ಯಾಯಾಂಗ ಮಾಡಬಾರದು. ಎನ್‌ಜೆಎಸಿ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಒಂದು ವಾದ ಮುಂದಿಟ್ಟಿತ್ತು. ನ್ಯಾಯಮೂರ್ತಿಗಳ ನೇಮಕ ಆದ ನಂತರವಷ್ಟೇ ನ್ಯಾಯಾಂಗದ ಸ್ವಾತಂತ್ರ್ಯ ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ನೇಮಕಾತಿಗೂ ಮೊದಲಿನ ಹಂತಗಳಲ್ಲಿ ‘ನ್ಯಾಯಾಂಗದ ಸ್ವಾತಂತ್ರ್ಯ’ ಎಂಬ ಮಾತು ಅನ್ವಯವಾಗದು ಎಂದು ಕೇಂದ್ರ ಹೇಳಿತ್ತು.

ನೇಮಕಾತಿ ಪ್ರಕ್ರಿಯೆ ಸಂವಿಧಾನ ಹೇಳಿರುವಂತೆಯೇ ಆಗಬೇಕು. ನ್ಯಾಯಮೂರ್ತಿಗಳ ನೇಮಕ ಪೂರ್ಣಗೊಂಡ ನಂತರ, ಅವರ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡಚಣೆಗಳು ಇರಬಾರದು. ಆದರೆ, ನೇಮಕಾತಿಗಳನ್ನು ನಿರ್ಧರಿಸುವಲ್ಲಿ ನ್ಯಾಯಾಂಗವೇ ಪರಮೋಚ್ಚ ಎಂಬುದು ಸಂವಿಧಾನದ ಮೂಲ ಸ್ವರೂಪಕ್ಕೆ ವ್ಯತಿರಿಕ್ತವಾಗಿದೆ.

ಅಶಿಕ್ಷಿತ ಕೂಡ ಕಾನೂನು ಸಚಿವ ಆಗಲು ಸಂವಿಧಾನ ಅವಕಾಶ ಕಲ್ಪಿಸಿದೆ. ಎನ್‌ಜೆಎಸಿಯಲ್ಲಿ ಕಾನೂನು ಸಚಿವ ಇರಬೇಕು ಎಂಬುದು ಸಂಸತ್ತಿನ ತೀರ್ಮಾನವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವರಾಗಲು ಜನರ ಆದೇಶ ಅಂತಿಮವೇ ಹೊರತು, ಅವರ ವಿದ್ಯಾರ್ಹತೆಯೊಂದೇ ಮಾನದಂಡ ಅಲ್ಲ. ನ್ಯಾಯಮೂರ್ತಿಗಳ ಸ್ಥಾನಕ್ಕೆ ಅರ್ಹರು ಯಾರು ಎಂಬುದನ್ನು ತೀರ್ಮಾನಿಸುವ ಅರಿವು, ವಿವೇಕ ಕಾನೂನು ಸಚಿವರಿಗೆ ಇರುತ್ತದೆ. ದೇಶದ ಯಾವುದೋ ಮೂಲೆಯಲ್ಲಿರುವ ವಕೀಲನೊಬ್ಬನ ಪ್ರತಿಭೆ ಏನು, ಆತನನ್ನು ನ್ಯಾಯಮೂರ್ತಿ ಸ್ಥಾನಕ್ಕೆ ನೇಮಿಸಬಹುದೇ ಎಂಬ ಬಗ್ಗೆ ಮಾಹಿತಿ ಪಡೆಯುವ ಶಕ್ತಿ ಕಾನೂನು ಸಚಿವರಿಗೆ ಖಂಡಿತ ಇರುತ್ತದೆ.

ನಮ್ಮದು ಪ್ರಜಾಸತ್ತೆ. ಸಾಂವಿಧಾನಿಕ ಹುದ್ದೆಯಾದ ಸಚಿವ ಸ್ಥಾನ ಹೊಂದಿರುವರನ್ನು ‘ರಾಜಕಾರಣಿ’ ಎಂದು ಸಡಿಲ ಮಾತುಗಳಲ್ಲಿ ಕರೆದರೂ, ಕಾನೂನಿನ ಕಣ್ಣಿಗೆ ಆತ ‘ಸಾಂವಿಧಾನಿಕ ಹುದ್ದೆ ನಿರ್ವಹಿಸುತ್ತಿರುವ ವ್ಯಕ್ತಿ’. ಸಾಂವಿಧಾನಿಕ ಹುದ್ದೆ ಹೊಂದಿರುವ ವ್ಯಕ್ತಿಯ ಮೇಲೆ ಭರವಸೆ ಇಡಲು ಕೆಲವರಿಗೆ ಸಾಧ್ಯವಿಲ್ಲದಿದ್ದರೆ, ಸಂವಿಧಾನದ ಮೇಲೆ ಅವರು ಯಾವ ಬಗೆಯ ಗೌರವ ಹೊಂದಲು ಸಾಧ್ಯ?

ಇಬ್ಬರು ಹಿರಿಯ ವ್ಯಕ್ತಿಗಳಿಗೆ ನೀಡಿದ ‘ವೀಟೊ’ ಅಧಿಕಾರದ ಬಗ್ಗೆ ಅನುಮಾನಪಡುವ ಅಗತ್ಯ ಇರಲಿಲ್ಲ. ಹಿರಿಯ ವ್ಯಕ್ತಿಗಳು ಒಬ್ಬ ವ್ಯಕ್ತಿಯ ನೇಮಕವನ್ನು ತಡೆಯಬಹುದಿತ್ತು ಎಂಬುದು ನಿಜ. ಆದರೆ ವೀಟೊ ಬಳಸಿ ಅನರ್ಹರೊಬ್ಬರನ್ನು ನ್ಯಾಯಮೂರ್ತಿಯನ್ನಾಗಿ ನೇಮಿಸುವ ಅಧಿಕಾರವಂತೂ ಹಿರಿಯ ವ್ಯಕ್ತಿಗಳಿಗೆ ಇರಲಿಲ್ಲವಲ್ಲ? ಅಸಮರ್ಥರನ್ನು ನೇಮಿಸುವ ಪ್ರಕ್ರಿಯೆಗೆ ತಡೆ ನೀಡಲು ಈ ವೀಟೊ ಸದ್ಬಳಕೆ ಆಗುವ ಸಾಧ್ಯತೆ ಇತ್ತಲ್ಲವೇ?

ಇಬ್ಬರು ಹಿರಿಯ ವ್ಯಕ್ತಿಗಳನ್ನು ನೇಮಿಸುವುದು ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯಮೂರ್ತಿ (ಸಿಜೆಐ), ಪ್ರಧಾನಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಇರುವ ಸಮಿತಿ. ಅವರೆಲ್ಲ ಸಾಂವಿಧಾನಿಕ ಹುದ್ದೆ ಹೊಂದಿರುವವರು. ದೇಶದ ಉನ್ನತ ನ್ಯಾಯಾಂಗಕ್ಕೆ ನ್ಯಾಯಮೂರ್ತಿಗಳನ್ನು ನೇಮಿಸುವ ಸಮಿತಿಗೆ ‘ಹಿರಿಯ ವ್ಯಕ್ತಿ’ಗಳನ್ನಾಗಿ ಯಾರನ್ನು ನೇಮಿಸಬೇಕು ಎಂದು ತಿಳಿಯದಷ್ಟು ಪ್ರಧಾನಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ದಡ್ಡರೇ? ಹಿರಿಯ ವ್ಯಕ್ತಿ ಹೆಸರಿನಲ್ಲಿ ಅನರ್ಹರು ನೇಮಕಗೊಳ್ಳುತ್ತಿರಲಿಲ್ಲ, ನ್ಯಾಯಶಾಸ್ತ್ರ ತಜ್ಞರೇ ಅಲ್ಲಿಗೆ ಬರುತ್ತಿದ್ದರು. ದೇಶದ ಪ್ರಧಾನಿಯ ಮೇಲೆ, ಲೋಕಸಭೆಯ ವಿರೋಧ ಪಕ್ಷದ ನಾಯಕರ ಮೇಲೆ, ಅವರಿರುವ ಸಮಿತಿ ಕೈಗೊಳ್ಳುವ ತೀರ್ಮಾನದ ಮೇಲೆ ನಂಬಿಕೆ ಇಲ್ಲದಿದ್ದರೆ ಹೇಗೆ? ಪ್ರಧಾನಿಯನ್ನು, ಲೋಕಸಭೆ ವಿರೋಧ ಪಕ್ಷದ ನಾಯಕನನ್ನು ನಂಬಲಾರೆ ಎನ್ನುವುದು ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕಡಿಮೆ ಮಾಡುವುದಕ್ಕೆ ಸಮ.

1993ರಲ್ಲಿ ಸುಪ್ರೀಂ ಕೋರ್ಟ್‍ ನೀಡಿದ ತೀರ್ಪು, ಆನಂತರ ಬಂದ ಕೆಲವು ತೀರ್ಪುಗಳ ಗೊಡವೆಗೆ ಹೋಗದೆ ಒಮ್ಮ ಸಂವಿಧಾನವನ್ನು ಓದಿ. ನ್ಯಾಯಮೂರ್ತಿಗಳನ್ನು ನೇಮಿಸುವ ಅಧಿಕಾರವನ್ನು ಸಂವಿಧಾನ ನೀಡಿರುವುದು ಯಾರಿಗೆ? ರಾಷ್ಟ್ರಪತಿಯವರಿಗೆ. ಅವರು ನ್ಯಾಯಾಂಗಕ್ಕೆ ಸೇರಿದ ವ್ಯಕ್ತಿ ಅಲ್ಲ. ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆಯಲ್ಲಿ ರಾಷ್ಟ್ರಪತಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ.

ಪದಚ್ಯುತಗೊಳಿಸುವಲ್ಲಿ ಇರುವಂಥ ಸ್ವಾತಂತ್ರ್ಯ ನೇಮಕಾತಿ ಪ್ರಕ್ರಿಯೆಯಲ್ಲಿ ಶಾಸಕಾಂಗ ಅಥವಾ ಕಾರ್ಯಾಂಗಕ್ಕೆ ಇಲ್ಲ ಎನ್ನುವುದು ವಿಪರ್ಯಾಸವಲ್ಲವೇ? ಎನ್‌ಜೆಎಸಿಯಿಂದ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ಆಗುವುದಾದರೆ, ಈಗಿರುವ ‘ನ್ಯಾಯಮೂರ್ತಿಗಳ ಪದಚ್ಯುತಿ ಪ್ರಕ್ರಿಯೆ’ಯೂ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಿದೆ, ಅಲ್ಲವೇ? ಇದರ ಬಗ್ಗೆ ಚಿಂತನೆ ಅಗತ್ಯ.

ಸಂವಿಧಾನದ ಆಶಯಗಳನ್ನೆಲ್ಲ ಕಾಯುವ ಹೊಣೆ ಇರುವುದು ನ್ಯಾಯಾಂಗಕ್ಕೆ ಮಾತ್ರವಲ್ಲ. ಕಾರ್ಯಾಂಗ ಮತ್ತು ಶಾಸಕಾಂಗ ತಮ್ಮ ಕೆಲಸ ಮಾಡಲು ವಿಫಲವಾದಾಗ, ಪ್ರಜೆಗಳ ಮೂಲಭೂತ ಹಕ್ಕುಗಳು ಮೊಟಕಾದ ಸಂದರ್ಭದಲ್ಲಿ ಮಾತ್ರ ನ್ಯಾಯಾಂಗ ಮುಂದೆ ಬರಬಹುದು. ಕಾನೂನು ಮಾಡುವ ಅಧಿಕಾರ ಕೂಡ ನ್ಯಾಯಾಂಗಕ್ಕೆ ಇಲ್ಲ. ಸುಪ್ರೀಂ ಕೋರ್ಟ್‍ ಬಗ್ಗೆ ಗೌರವ ಭಾವನೆ ಇಟ್ಟುಕೊಂಡೇ ಒಂದು ಮಾತು ಹೇಳುವೆ: ಈ ತೀರ್ಪಿನ ಮೂಲಕ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ಆಗಿದೆ. ತೀರ್ಪು ಸಾಂವಿಧಾನಿಕ ಸಂಸ್ಥೆಯೊಂದನ್ನು ದುರ್ಬಲಗೊಳಿಸುವಂತಿದೆ.

ಕಾನೂನುಗಳನ್ನು ರೂಪಿಸುವುದು ಶಾಸಕಾಂಗದ ಕೆಲಸ. ಅದು ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು. ಈ ತೀರ್ಪು ಅದಕ್ಕೇ ಧಕ್ಕೆ ತಂದಿದೆ. ಕೊಲಿಜಿಯಂ ವ್ಯವಸ್ಥೆ ಹೋಗಿ, ಎನ್‌ಜೆಎಸಿ ಜಾರಿಗೆ ಬಂದಿದ್ದರೆ ಆಗುವುದೇನಿತ್ತು ಎಂಬ ಪ್ರಶ್ನೆಗಳಿದ್ದವು. ಕೊಲಿಜಿಯಂ ಮೂಲಕ ಆಗುವ ಕೆಲವು ನೇಮಕಾತಿಗಳು ತಮಗೇ ಗೊತ್ತಾಗುತ್ತಿರಲಿಲ್ಲ ಎಂಬ ಮಾತನ್ನು, ಸಂವಿಧಾನ ಪೀಠದಲ್ಲಿದ್ದ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಹೇಳಿದ್ದಾರೆ. ಹಾಗಿರುವಾಗ, ನೇಮಕಾತಿ ಬಗ್ಗೆ ಜನಸಾಮಾನ್ಯನಿಗೆ ಎಲ್ಲಿಂದ ತಿಳಿಯುತ್ತದೆ? ಆದರೆ, ಎನ್‌ಜೆಎಸಿಯ ಚಟುವಟಿಕೆಗಳು ಅದರಲ್ಲಿನ ಎಲ್ಲ ಸದಸ್ಯರ ಅರಿವು, ಪ್ರಜ್ಞೆಯ ಆಧಾರದಲ್ಲಿ ನಡೆಯುತ್ತಿದ್ದವು. ಅದರಲ್ಲಿ ಪಾರದರ್ಶಕತೆ ಕಾಣಬಹುದಿತ್ತು.

ಕೊಲಿಜಿಯಂ ಎಂಬುದು ನ್ಯಾಯಾಲಯದ ಸೃಷ್ಟಿ. ಎನ್‌ಜೆಎಸಿ ಜನರ ಸೃಷ್ಟಿ. ನೇಮಕಾತಿ ಪ್ರಕ್ರಿಯೆಯಲ್ಲಿ ಇಂತಿಂಥ ನಿಯಮಗಳನ್ನು ಪಾಲಿಸಬೇಕು ಎಂದು ಎನ್‌ಜೆಎಸಿ ಹೇಳಿತ್ತು. ಈ ತೀರ್ಪಿನಲ್ಲೂ ಒಂದಿಷ್ಟು ಒಳ್ಳೆಯ ಅಂಶಗಳು ಬೆಳಕಿಗೆ ಬಂದಿವೆ. ಕೊಲಿಜಿಯಂ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇರಲಿಲ್ಲ ಎಂಬುದನ್ನು ಕೋರ್ಟ್‍ ಮನಗಂಡಿರುವಂತಿದೆ. ಹಾಗಾಗಿ, ಅದರ ಸುಧಾರಣೆಗೆ ಸಲಹೆಗಳನ್ನು ನೀಡಿ ಎಂದು ಸರ್ಕಾರಕ್ಕೆ, ವಕೀಲ ಸಮುದಾಯಕ್ಕೆ ಸೂಚಿಸಿ, ನವೆಂಬರ್ 3ಕ್ಕೆ ವಿಚಾರಣೆ ನಿಗದಿ ಮಾಡಿದೆ.

ನಿಜ, ಹಿಂದೆ ಸೇವಾ ಹಿರಿತನ ಕಡೆಗಣಿಸಿ ಕೆಲವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಿಸಿದ ನಿದರ್ಶನ ಇದೆ. ಎಪ್ಪತ್ತರ ದಶಕದಲ್ಲಿ ಇಂಥ ವಿದ್ಯಮಾನಗಳನ್ನು ದೇಶ ಕಂಡಿದೆ. ಆದರೆ ಅಂದಿನ ಸ್ಥಿತಿಗೂ, ಇಂದಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಆಗ, ನ್ಯಾಯಮೂರ್ತಿಗಳ ನೇಮಕ, ಬಡ್ತಿಗೆ ಸ್ಪಷ್ಟ ನಿಯಮ ಇರಲಿಲ್ಲ. ಎನ್‌ಜೆಎಸಿ ಹಾಗಲ್ಲ. ಇಲ್ಲಿ ನಿಯಮಗಳು ನಿರೂಪಣೆಗೊಂಡಿದ್ದವು.

1970ರ ದಶಕದಲ್ಲಿ ಆದ ಬೆಳವಣಿಗೆಗಳು ಎನ್‌ಜೆಎಸಿ ನೆವದಲ್ಲಿ ಮರುಕಳಿಸುವ ಸಾಧ್ಯತೆಯೇ ಇರಲಿಲ್ಲ. ಎಪ್ಪತ್ತರ ದಶಕದಲ್ಲಿ ಕಾರ್ಯಾಂಗ ಪರಿಸ್ಥಿತಿಯ ಲಾಭ ಪಡೆದು ನ್ಯಾಯಾಂಗದ ನೇಮಕದಲ್ಲಿ ವಿವೇಚನಾರಹಿತವಾಗಿ ಕಾರ್ಯ ನಿರ್ವಹಿಸಿತ್ತು. ಆದರೆ ಎನ್‌ಜೆಎಸಿ ಸಾಮೂಹಿಕ ವಿವೇಕದ ನೆಲೆಯಲ್ಲಿ ಕೆಲಸ ಮಾಡುತ್ತಿತ್ತು. ಪಾರದರ್ಶಕತೆ, ಉತ್ತರದಾಯಿತ್ವ, ಇತಿಮಿತಿಗಳ ವ್ಯಾಖ್ಯಾನ ಇತ್ತು. ಸಾಂವಿಧಾನಿಕ ವ್ಯವಸ್ಥೆ ಬಲಪಡಿಸುವ ದಿಟ್ಟ ಹೆಜ್ಜೆಯಾಗಿತ್ತು.

ಕಾನೂನು ಯಾವತ್ತಿಗೂ ಹರಿಯುವ ನೀರಿನಂತೆ ಇರಬೇಕು. ಅದು ನಿಂತ ನೀರಾಗಬಾರದು. ಜನರ ಸಂವೇದನೆಗಳನ್ನು ಗುರುತಿಸಿ ಕಾನೂನು ಮಾಡುವ ಅಧಿಕಾರ ಇರುವುದು ಸಂಸತ್ತು ಮತ್ತು ವಿಧಾನಸಭೆಗಳಿಗೆ. ಸಂಸತ್ತಿನಲ್ಲಿ ಎಲ್ಲ ಪಕ್ಷಗಳೂ ಬೆಂಬಲಿಸಿದ್ದ, ಬಹುತೇಕ ರಾಜ್ಯಗಳ ವಿಧಾನಸಭೆಗಳು ಅನುಮೋದಿಸಿದ್ದ ಕಾಯ್ದೆಯನ್ನು ‘ಅಸಾಂವಿಧಾನಿಕ’ ಎಂದು ಹೇಳುವುದು ಪ್ರಜಾಸತ್ತೆಯ ಆಶಯಗಳಿಗೆ ವಿರುದ್ಧವಲ್ಲವೇ?

ಈ ಕಾಯ್ದೆಯನ್ನು ರೂಪಿಸುವಾಗ ಸಂಸತ್ತಿನ ಆಶಯ (ಅಂದರೆ ಜನರ ಆಶಯ) ಸಂವಿಧಾನದ ಆಶಯಗಳಿಗೆ ಪೂರಕವಾಗಿ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್‍ ಅರ್ಥೈಸಿದೆ. ಆದರೆ ನನ್ನ ಅಭಿಪ್ರಾಯದಲ್ಲಿ, ಸಂಸತ್ತಿನ ಆಶಯ ಸಂವಿಧಾನದ ಆಶಯಗಳಿಗೆ ಪೂರಕವಾಗಿಯೇ ಇತ್ತು. ಇಡೀ ದೇಶ ಒಂದು ಬದಲಾವಣೆ ಬಯಸಿತ್ತು. ಸಂಸತ್ತು ಅನುಮೋದಿಸಿದ ತಿದ್ದುಪಡಿಯನ್ನು ರಾಷ್ಟ್ರಪತಿಯರೂ ಒಪ್ಪಿದ್ದರು. ತಿದ್ದುಪಡಿ ತರುವಾಗ ತನ್ನ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸಂವಿಧಾನವೇ ರೂಪಿಸಿಕೊಂಡಿದೆ.

ಸಾಂವಿಧಾನಿಕ ನೇಮಕಾತಿಗಳನ್ನು ನಡೆಸುವುದು ಶಾಸಕಾಂಗದ ಕೆಲಸವೇ ಹೊರತು ನ್ಯಾಯಾಂಗದ ಕೆಲಸ ಅಲ್ಲ. ಮುಂದೊಂದು ಕಾಲಘಟ್ಟದಲ್ಲಿ ಎನ್‌ಜೆಎಸಿ ಕೂಡ ವಿಫಲವಾಗುವ ಸಾಧ್ಯತೆ ಇತ್ತು. ಆದರೆ ಈ ವ್ಯವಸ್ಥೆಗೆ ಒಂದು ಅವಕಾಶ ಸಿಗಬೇಕಿತ್ತು. ಭಾರತದ ಪ್ರಜಾಸತ್ತೆಯ ‘ಅಂತಃಸತ್ವ’ ಬಹಳ ಗಟ್ಟಿಯಾಗಿದೆ. ಈ ತೀರ್ಪಿನ ಕಾರಣದಿಂದ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಂಘರ್ಷ ಖಂಡಿತ ತಲೆದೋರದು. ಆದರೆ ತೀರ್ಪಿನ ಪರಿಣಾಮ ಏನಾಗಲಿದೆ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು.

ಲೇಖಕ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT