ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಯೊಳಗೆ ಕಂಡದ್ದು

Last Updated 31 ಜನವರಿ 2019, 20:00 IST
ಅಕ್ಷರ ಗಾತ್ರ

ಹನುಮಂತನ ಎದೆಯಲ್ಲಿ ರಾಮ ಇದ್ದ ಹಾಗೆ ನನ್ನ ಎದೆ ಬಗೆದು ನೋಡಿ, ಅಲ್ಲಿ ಸಿದ್ದರಾಮಯ್ಯ ಇರುತ್ತಾರೆ ಎಂದು ಸಚಿವರೊಬ್ಬರು ಹೇಳಿದ ಮರುದಿನವೇ ಸಂಪಾದಕರ ಬಳಿ ಹಾಜರಾದ ಪತ್ರಕರ್ತ ತೆಪರೇಸಿ.

‘ಸರ್ ನನಗೊಂದು ವಿಚಿತ್ರ ಶಕ್ತಿ ಸಿದ್ಧಿಸಿದೆ. ಎರಡು ನಿಮಿಷ ಯಾರ ಎದೆಯನ್ನು ದಿಟ್ಟಿಸಿ ನೋಡುತ್ತೇನೋ ಅವರ ಎದೆಯ ಒಳಗೆ ಯಾರಿದ್ದಾರೆ ಎಂಬುದು ಗೊತ್ತಾಗಿಬಿಡುತ್ತದೆ’ ಎಂದ!

ಸಂಪಾದಕರಿಗೆ ಗಾಬರಿಯಾಯಿತು. ನಿನ್ನೆಯಿನ್ನೂ ಚೆನ್ನಾಗಿದ್ದ, ಇವತ್ತೇನಾಯಿತು... ಎಂದು ಮನಸ್ಸಿನಲ್ಲೇ ಅಂದುಕೊಂಡು ‘ಏನಯ್ಯ ಅದು ಅಂಥ ವಿಚಿತ್ರ ಶಕ್ತಿ’ ಎಂದರು.

‘ಬಾಬಾ ಒಬ್ಬರು ಅಂಥ ಶಕ್ತಿಯನ್ನು ನನಗೆ ಕೊಟ್ಟಿದ್ದಾರೆ. ನೆನ್ನೆ ನಾನು ಕೆಲವರ ಎದೆ ದಿಟ್ಟಿಸಿ ಪರೀಕ್ಷಿಸಿದೆ. ಸತ್ಯ ಅಂತ ಗೊತ್ತಾಯ್ತು...’ ತೆಪರೇಸಿ ವಿವರಿಸಿದ.

ಸಂಪಾದಕರು ತಲೆ ಕೆರೆದುಕೊಂಡರು. ‘ಆಯ್ತು ಒಂದು ಕೆಲ್ಸ ಮಾಡು. ಕಾಂಗ್ರೆಸ್, ಅತೃಪ್ತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಶಾಸಕರ ಎದೆಗಳಲ್ಲಿ ಯಾರ‍್ಯಾರಿದ್ದಾರೆ ಹೋಗಿ ನೋಡ್ಕೊಂಡು ಬಾ’ ಎಂದರು.

ತೆಪರೇಸಿ ಫಟ್ ಅಂತ ಮಾಯವಾಗಿ ಸಂಜೆ ಕಚೇರಿಗೆ ಹಾಜರಾದ. ಸಂಪಾದಕರು ಅವನನ್ನು ದಿಟ್ಟಿಸಿ ಕೇಳಿದರು ‘ಏನಯ್ಯ ಕಾಂಗ್ರೆಸ್ ಶಾಸಕರ ಎದೆಯಲ್ಲಿ ಯಾರಿದ್ರು? ಸಿದ್ದರಾಮಯ್ಯ ಕಂಡ್ರಾ?’

ತೆಪರೇಸಿ ತಲೆ ಅಲ್ಲಾಡಿಸಿದ ‘ಇಲ್ಲ ಸಾರ್’.

‘ಇಲ್ವಾ? ಹೋಗ್ಲಿ, ಅತೃಪ್ತ ಶಾಸಕರ ಎದೆಯಲ್ಲಿ ಯಡ್ಯೂರಪ್ಪ ಏನಾದ್ರು ಕಂಡ್ರಾ!’

‘ಇಲ್ಲ ಸಾರ್ ಕಾಣಲಿಲ್ಲ...’

‘ಅಲೆ ಇವ್ನ, ಮತ್ತೆ ಬಿಜೆಪಿ ಶಾಸಕರ ಎದೆಗಳಲ್ಲಿ? ಮೋದಿ ಕಂಡಿರಬೇಕು...!’

‘ಅದೂ ಇಲ್ಲ ಸಾರ್....!’

‘ಅವರೂ ಇಲ್ವಾ? ಜೆಡಿಎಸ್ ಶಾಸಕರ ಎದೆ
ಗಳಲ್ಲಿ ಕುಮಾರಸ್ವಾಮಿಯಾದ್ರೂ ಇದ್ರೋ?’

‘ಇಲ್ಲ ಸಾರ್... ’

‘ಸರಿಹೋಯ್ತು, ಯಾವ ಶಾಸಕರ ಎದೆಗಳಲ್ಲೂ ಯಾರೂ ಇರಲಿಲ್ಲವ? ಎಲ್ಲ ಖಾಲಿನಾ?’

‘ಖಾಲಿ ಇರಲಿಲ್ಲ ಸಾರ್, ಇತ್ತು. ಆದ್ರೆ ಎಲ್ಲ ಪಕ್ಷಗಳ ಶಾಸಕರ ಎದೆಗಳಲ್ಲಿ ಇದ್ದದ್ದು ಒಂದೇ...’

‘ಏನು?’
‘ಅಧಿಕಾರದ ಕುರ್ಚಿ ಸಾರ್ ಕುರ್ಚಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT