ನಮೋನಮಃ!

ಬುಧವಾರ, ಜೂನ್ 19, 2019
25 °C
ಚುರುಮುರಿ

ನಮೋನಮಃ!

Published:
Updated:
Prajavani

ಪಕ್ಕದ ಮನೆ ವೈದ್ಯನಾಥನ್ ಅಂಕಲ್ ಟಿ.ವಿ.ಯ ಹಿಂದಿ ಚಾನೆಲ್ಲೊಂದರಲ್ಲಿ ಕಿವಿ,ಕಣ್ಣುನೆಟ್ಟು ಅತ್ತಿತ್ತ ಹಂದಾಡದೇ ನಮೋನಮಃ ಭಂಗಿಯಲ್ಲಿ ಕೂತಿದ್ದರು. ಏನಿಷ್ಟೊಂದು ಭಕ್ತಿಯಿಂದ ನೋಡ್ತಿದ್ದಾರೆ ಎಂದುಕೊಂಡು ಇಣುಕಿದೆ. ಗೆದ್ದೇ ಗೆಲ್ಲುತ್ತೇವೆ ಎಂದು ಬೀಗಿದ್ದ ಘಟಾನುಘಟಿಗಳನ್ನು ತರಗೆಲೆಯಂತೆ ತೂರಿಹಾಕಿದ ನಮೋಅಲೆಯ ಕರ್ತಾರ ವಿಜಯೀ ಭಾಷಣಗೈಯುತ್ತಿದ್ದರು.

ಹಿಂದಿ ಮಾತ್ರವಲ್ಲ, ಇಷ್ಟು ವರ್ಷ ಬೆಂಗಳೂರಿನಲ್ಲಿದ್ದೂ ಹೆಚ್ಚಿನ ಕನ್ನಡವನ್ನೂ ಕಲಿಯದ ಈ ತಮಿಳಿಗ ಅಂಕಲ್‌, ಯಾವಾಗಿನಿಂದ ಹಿಂದಿ ಕಲಿತರಪ್ಪ ಎಂದು ಪರಮ ಅಚ್ಚರಿ ನನಗೆ. ‘ಹಿಂದಿ ಬರಲ್ಲ, ಆದರೆ ನಮ್ಮ ಮೋದಿ ಹಾವಭಾವ, ಮುಖಭಾವದಲ್ಲೇ ಎಲ್ಲ ಗೊತ್ತಾಗುತ್ತಮ್ಮ’ ಎಂದರು ಅಂಕಲ್. ‘ಈ ಸಲನಾದ್ರೂ ಕಪ್ಪುಹಣ ವಾಪಸು ತಂದು 15 ಲಕ್ಷ ಎಲ್ಲರ ಅಕೌಂಟಿಗೆ ಹಾಕೋ ಬಗ್ಗೆ ಏನಾದ್ರೂ ಹೇಳಿದ್ರಾ ಅಂಕಲ್... ಅಚ್ಛೇ ದಿನ್ ಬರುತ್ತಂತಾ?’

‘ಮತದಾರರು ಅದೆಲ್ಲ ಬೇಕು ಅಂತ ಎಲ್ಲಿ ಕೇಳಿದ್ರು? ಕಾಂಗ್ರೆಸ್ ಕಳೆನಾಶಕ ಸ್ಪ್ರೇ ಮಾಡ್ತೀನಿ ಅಂತ ಮೋದಿ ಮಾತು ಕೊಟ್ಟಿದ್ರು... ಬುಡಸಮೇತ ಕಿತ್ತುಹಾಕಿದ್ರು. ಅಮೇಠಿಯಂಥ ಕೈಕೋಟೆಯಲ್ಲೇ ಕಮಲ ಅರಳಿಸಿದ್ರು. ತುಮಕೂರು, ಮಂಡ್ಯದಲ್ಲೂ ನಿಂಬೆಹಣ್ಣು ವ್ಯಾಪಾರ ತಳ ಕಚ್ಚಿದೆಯಂತೆ’ ಅಂಕಲ್ ನಕ್ಕರು.

‘ಹಂಗಾರೆ ಇಲ್ಲಿ ಕುದುರೆ ವ್ಯಾಪಾರ ಶುರು ಮಾಡ್ತಾರಂತಾ’ ಕೇಳಿದೆ.

‘ತಪ್ಪೇನು... ರಾಜ್ಯ, ರಾಷ್ಟ್ರ ಎಲ್ಲ ಚೌಕೀದಾರರ ಹತ್ರನೇ ಸುಭದ್ರವಾಗಿರುತ್ತಮ್ಮ. ಅದ್ಸರಿ, ಹಾಸನದ ದೊಡ್ಡೇಗೌಡರು ಧೃತರಾಷ್ಟ್ರನೋ, ಯಯಾತಿಯೋ’ ಯಕ್ಷಪ್ರಶ್ನೆ ಮುಂದಿಟ್ಟರು. ಮಾತನಾಡುತ್ತಲೇ ನನ್ನ ಕೈಲ್ಲಿದ್ದ ಪೇಪರನ್ನು ಇಸಿದುಕೊಂಡು ಪುಟಗಳನ್ನು ತಿರುವಿ ಹಾಕಿದರು.

ಪರವಾಯಿಲ್ಲ, ನಿಮ್ಮ ಕನ್ನಡದ ಪೇಪರುಗಳೂ ಆಲ್‍ರೌಂಡ್ ನ್ಯೂಸ್ ಕವರ್  ಮಾಡುತ್ತವಲ್ಲಮ್ಮ... ಎಂಥಾ ಸ್ಪಿರುಚ್ಯುವಲ್ ಫೋಟೊ ಹಾಕಿದಾರೆ...’ ಎಂದು ಖುಷಿಯಿಂದ ಪುಟವೊಂದನ್ನು ಮುಖಕ್ಕೆ ಹಿಡಿದರು. ನೋಡಿದರೆ, ಬನಶಂಕರಿಯ ನವ ಯುವ ಸಂಸದರು ಟಾಪ್‍ಲೆಸ್ ದಿರಿಸಿನಲ್ಲಿ ಸಂಧ್ಯಾವಂದನೆಮಾಡುತ್ತಿದ್ದ ಫೋಟೊ!

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !