ಶನಿವಾರ, ಜನವರಿ 28, 2023
24 °C

ಚುರುಮುರಿ: ಕಾಯಿನ್ ಹೆಡ್ಡು!

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

‘ಹೆಡ್ಡಲ್ಲಿ ದುಡ್ಡಿರುತ್ತಾ?’ ಕೇಳಿದ್ರು ಪದ್ದಮ್ಮನೋರು!

‘ಯಾಕೆ ಹೀಗೆ ಕೇಳ್ತಿದೀಯ?’ ಅಂದ ಪರ್ಮೇಶಿ.

‘ಅವಾಗವಾಗ ನಮ್ಮ ವಿರೋಧ ಪಕ್ಷದೋರು ಯಾವ ಹೆಡ್ಡಲ್ಲೂ ದುಡ್ಡೇ ಇಲ್ಲ ಅಂತಿರ್ತಾರೆ. ಅದಕ್ಕೆ ಕೇಳ್ದೆ’.

‘ಓ ಅದಾ? ಅವರು ಹೇಳ್ತಿರೋದು ನಮ್ ತಲೇಲಿ ದುಡ್ಡಿರಲ್ಲ ಅಂತಲ್ಲ, ಸರ್ಕಾರಿ ಖಾತೆಗಳಲ್ಲಿ ದುಡ್ಡಿರಲ್ಲ ಅಂತ’.

‘ಯಾಕ್ ದುಡ್ಡಿರಲ್ಲ?’

‘ಏನೇನೋ ಓವರ್‌ಹೆಡ್ಸ್ ಬಂದಿರುತ್ವೆ. ಜೊತೆಗೆ ಸಬ್‍ಹೆಡ್‌ಗಳನ್ನು ಮಾಡಿ ಟ್ರಾನ್ಸ್‌ಫರ್ ಮಾಡ್ಕೊಂಡಿರ್ತಾರಲ್ಲ’.

‘ಹಾಗಂದ್ರೆ ಹೇಗೆ? ಇದು ಡಬಲ್ ಹೆಡ್ ಸರ್ಕಾರ, ಕೇಂದ್ರ, ರಾಜ್ಯ, ಎರಡು ಕಡೆನೂ ಅಧಿಕಾರ ಇದೆ ಅಂದ್ಮೇಲೆ ಹೆಡ್ ಖಾಲಿ ಆಗೋದಾದ್ರೂ ಹೇಗೆ?’

‘ಹೇಗೆ ಅಂದ್ರೆ ಈಗ ಎಲೆಕ್ಷನ್ ಬರ್ತಿದೆ. ಪರ್‌ಹೆಡ್‍ಗೆ ಇಷ್ಟು ಅಂತ ದುಡ್ಡು ಹಾಕ್ಬೇಕಲ್ಲ. ನೀತಿ ಸಂಹಿತೆ ಇರುತ್ತೆ. ಸರ್ಕಾರಗಳು ಅಫಿಶಿಯಲ್ ಹೆಡ್‍ಗಳ ಮೂಲಕ ಖರ್ಚು ಮಾಡೋ ಹಾಗಿಲ್ಲ. ವಿರೋಧ ಪಕ್ಷದೋರು ಅಕೌಂಟ್ ಮೂಲಕ ಕೊಡೋ ಹಾಗಿಲ್ಲ. ಅದಕ್ಕೇ ಇಂಡಿವಿಜುಯಲ್ ಹೆಡ್ ತುಂಬಿಸೋ ಪ್ರಯತ್ನ ಶುರುವಾಗುತ್ತೆ’.

‘ಅಂದ್ರೆ ಹೆಡ್ಡಲ್ಲಿ ದುಡ್ಡು ಬೀಳೋಕೆ ಎಲೆಕ್ಷನ್ ಬರ್ಬೇಕಾ?’

‘ಹೌದು ಮತ್ತೆ? ನಮ್ಮಂತೋರಿಗೆ ಅದೂ ಇಲ್ಲ. ತಲೇಲಿ ಬುದ್ಧಿ ಇರೋರಿಗೆ ದುಡ್ಡು ಹಾಕೋದು ವೇಸ್ಟ್ ಅಂತ ನಮ್ ಹೆಡ್‍ಗೆ ದುಡ್ಡು ಹಾಕೋದೇ ಇಲ್ಲ’.

‘ಅದ್ಸರಿ, ಹೀಗೆ ಒಂದೊಂದು ಹೆಡ್‍ಗೂ ದುಡ್ಡು ಹಾಕುದ್ರೆ ಅದನ್ನ ವಾಪಸ್ ತಗಳ್ಳೋದು ಹೇಗೆ?’

ಪರ್ಮೇಶಿ ಶೋಕೇಸಲ್ಲಿದ್ದ ಪಿಂಗಾಣಿ ಕಾಯಿನ್ ಹೆಡ್ ಬೊಂಬೆ ತಗೊಂಡ. ಟೀಪಾಯ್ ಮೇಲಿದ್ದ ಕಾಫಿ ಕಪ್‍ನಿಂದ ಅದರ ತಲೆ ಒಡೆದ. ನಾಣ್ಯ, ನೋಟುಗಳು ಝಣ ಝಣ ಕೆಳಗೆ ಬಿದ್ದವು.

‘ಹೇಗೆ ವಾಪಸ್ ತಗೋತಾರೆ ಗೊತ್ತಾಯ್ತಾ? ಹೀಗೆ ನಮ್ಮನ್ನ ಹೆಡ್ಡರನ್ನಾಗಿಸಿ ಹೆಡ್ ಒಡೆದು ತಗೋತಾರೆ. ಖರ್ಚಿಗೆ ಕಾಸಿರಲಿಲ್ಲ, ಒಂದು ರೌಂಡ್ ಆಚೆ ಹೋಗ್ ಬರ್ತೀನಿ’ ಎಂದು ಚಿಲ್ಲರೆ ಆರಿಸಿಕೊಂಡು ಹೊರಹೋದ. ಪದ್ದಮ್ಮ ಅವಾಕ್ಕಾಗಿ ನಿಂತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.