ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞರ ನಾನ್‘ಸೈನ್ಸ್’!

Last Updated 7 ಜನವರಿ 2019, 20:15 IST
ಅಕ್ಷರ ಗಾತ್ರ

‘ಅಯ್ಯೋ, ನಾವು ಟೆಸ್ಟ್ ಟ್ಯೂಬ್ ಬೇಬಿಗಳಂತೆ...’ ಶತ ಕೌರವರು ಏಕಸ್ವರದಲ್ಲಿ ರೋದಿಸತೊಡಗಿದರು. ‘ಅದ್ಯಾರೋ ಆಂಧ್ರ ವಿ.ವಿ. ಕುಲಪತಿ ಅಂತೆ, ತಮಿಳುನಾಡಿನ ವಿಜ್ಞಾನಿಯಂತೆ... ನಮ್ ವಂಶದ ಬಗ್ಗೆ ಹೊಸ ಸಂಶೋಧನೆ ಮಾಡವ್ರೆ’ ಸಿಟ್ಟಲ್ಲಿ ಹೇಳ್ದ ದುರ್ಯೋಧನ.

‘ಕುಲಪತಿ ಅಂದ್ರೆ ಎಲ್ಲರ ಕುಲದ ಬಗ್ಗೆ ಮಾತಾಡೋನು ಇರಬೇಕಣ್ಣ’ ಭೂಮಿ ಕಡೆ ನೋಡ್ತಾ ಹೇಳ್ದ ದುಶ್ಯಾಸನ. ತನ್ನ ‘ಸಂತಾನ ಸಾಮರ್ಥ್ಯ’ಕ್ಕೆ ಕುಂದುಂಟಾದ ಚಿಂತೆಯಲ್ಲಿ ಧೃತರಾಷ್ಟ್ರ ನಿಂತಿದ್ದ.

ಡಾರ್ವಿನ್ ಕೂಡ ಡಲ್ ಆಗಿದ್ರು. ತಾವು ಮಂಡಿಸಿದ ವಿಕಾಸವಾದದ ಸಿದ್ಧಾಂತಕ್ಕೆ ಭಾರತೀಯ ಪುರಾಣದ ದಶಾವತಾರ ಕಲ್ಪನೆ ಸಡ್ಡು ಹೊಡೆದ ಬೇಸರದಲ್ಲಿ ಅವರಿದ್ದರು. ‘ಮಂಗನಿಂದ ಮಾನವ ಎಂಬುದಕ್ಕೆ ಬದಲು ಮಾನವನಿಂದ ಮಂಗ’ ಎಂಬ ಹೊಸ ಸಿದ್ಧಾಂತ ರೂಪಿಸಿದರೆ ಹೇಗೆ ಎಂಬ ಹೊಸ ಐಡಿಯಾ ಅವರ ಮನದಲ್ಲಿ ಗೂಡು ಕಟ್ಟತೊಡಗಿತು.

ಆದರೆ, ಯಾವಾಗಲೂ ನಸುನಗುತ್ತಲೇ ಇರುತ್ತಿದ್ದ ಅಬ್ದುಲ್ ಕಲಾಂ ಅವರ ಮೊಗವೂ ಕಳಾಹೀನವಾಗಿತ್ತು. ‘ಶ್ರೀರಾಮನ ಅಸ್ತ್ರ- ಶಸ್ತ್ರ
ಗಳು, ವಿಷ್ಣುವಿನ ಚಕ್ರವೇ ಕ್ಷಿಪಣಿಗಳು’ ಎಂಬ ಕುಲಪತಿಯ ಹೇಳಿಕೆ ಅವರನ್ನೂ ಬೇಸರಕ್ಕೆ ನೂಕಿತ್ತು. ತಮ್ಮ ‘ಭಾರತದ ಕ್ಷಿಪಣಿ ಪಿತಾಮಹ’ ಬಿರುದನ್ನು ಶ್ರೀರಾಮನಿಗೇ ಹಿಂದಿರುಗಿಸಲು ನಿರ್ಧರಿಸಿದವರೇ, ಭಗವಂತನನ್ನು ಹುಡುಕತೊಡಗಿದರು.

ಮೊದಲ ಬಾರಿಗೆ ಇಡೀ ಸ್ವರ್ಗ ಸ್ಯಾಡ್ ಮೂಡ್‌ನಲ್ಲಿದ್ದರೆ, ನಾರದ ಮುನಿಗಳು ಮಾತ್ರ ಹ್ಯಾಪಿಯಾಗಿದ್ರು. ಅವರನ್ನು ಗೂಗಲ್‌ಗೆ ಹೋಲಿಸಿದ್ದಕ್ಕೆ ಅವರ ಮುಖದಲ್ಲಿ ಖುಷಿ ಕುಣಿಯುತ್ತಿತ್ತು.

‘ಎದ್ದೇಳೋ, ನಿದ್ದೆಯಲ್ಲೇ ನಾರಾಯಣ, ನಾರಾಯಣ ಅಂತಿದ್ದೀಯಾ’ ಎಂದು ಅಮ್ಮ ಮುಖಕ್ಕೆ ನೀರು ಹಾಕಿ ಗದರಿಸಿದ್ರು. ಏಳ್ತಿದ್ದಂತೆ
ಟಿ.ವಿ. ಆನ್ ಮಾಡ್ದೆ. ಗ್ರಹಣದ ದಿನವೇ ಮಡಿವಾಳ ಮಾಚಿದೇವ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ನಡೆಯುತ್ತಿದ್ದ ಸುದ್ದಿ ಪ್ರಸಾರವಾಗುತ್ತಿತ್ತು. ಪುರಾಣ- ವಿಜ್ಞಾನವನ್ನು ಬೆರೆಸುವ ‘ತಜ್ಞರ’ ನಡುವೆ ಸ್ವಾಮೀಜಿ ವಿಭಿನ್ನವಾಗಿ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT