ಮಂಗಳವಾರ, ಮಾರ್ಚ್ 9, 2021
30 °C
ಚುರುಮುರಿ

ಮುದ್ದೆ- ಸೊಪ್ಸಾರು

ಎಲ್. ಗಿರಿಜಾರಾಜ್ Updated:

ಅಕ್ಷರ ಗಾತ್ರ : | |

Prajavani

ಮಗಳ ಬಾಣಂತನಕ್ಕೆಂದು ಅಮೆರಿಕೆಗೆ ಹೋಗಿದ್ದ ಸುಬ್ಬಮ್ಮ ಹಿಂದಿರುಗಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ದೇಶಪ್ರೇಮ ಜಾಗೃತವಾಗಿ ಪುಳಕಿತರಾದರು. ಹೆಂಡತಿ ಇಲ್ಲದಾಗ ಸದಾ ಮುದ್ದೆ-ಸೊಪ್ಸಾರು ತಿಂದು ಬೇಸತ್ತಿದ್ದ ಪತಿ ಸುಂದರರಾಯರಿಗೆ, ಆಕೆ ಬಂದ ಕೂಡಲೇ ಜೊತೆಯಲ್ಲಿ ಹೋಟೆಲಿಗೆ ಹೋಗಿ ಪಿಜ್ಜಾ-ಬರ್ಗರ್ ತಿಂದು ಬರಬೇಕು ಎಂಬ ಆಸೆ. ಆದರೆ ಸುಬ್ಬಮ್ಮ ಮಾತ್ರ ಮುದ್ದೆ-ಸೊಪ್ಸಾರು ಯಾವಾಗ ತಿಂದೇನೋ ಎಂದು ಕಾಯುತ್ತಿದ್ದರು.

ಕಾರು ಮನೆಯ ದಾರಿ ಹಿಡಿಯುತ್ತಿದ್ದಂತೆ ಕಿಟಕಿಯಿಂದಾಚೆ ಇಣುಕಿದ ಸುಬ್ಬಮ್ಮ ‘ಅಬ್ಬಾ! ಎಷ್ಟು ದಿನಗಳಾಗಿತ್ತು ರಸ್ತೆಯ ಹಳ್ಳಕೊಳ್ಳ, ಕಸದ ರಾಶಿ ನೋಡಿ’ ಎಂದರು ಖುಷಿಯಿಂದ. ರಾಯರು ‘ಏನಾಯ್ತೇ ನಿಂಗೆ, ನಮ್ಮ ದೇಶದ ಅವ್ಯವಸ್ಥೆಯನ್ನು ಹೊಗಳುತ್ತಿದ್ದೀಯಲ್ಲೇ?’ ಎಂದರು. ‘ಅದೇರೀ ದೇಶಪ್ರೇಮ’ ಅನ್ನುವ ಹೊತ್ತಿಗೆ ಸರಿಯಾಗಿ ಲಾರಿಯೊಂದು ಯಮನಂತೆ ಧಾವಿಸಿ ಬಂತು. ಇನ್ನೇನು ಎಲ್ಲ ಮುಗಿದೇ ಹೋಯಿತು ಅಂದು ಕೊಳ್ಳುವ ಹೊತ್ತಿಗೆ ರಾಯರು ಚಾಕಚಕ್ಯತೆಯಿಂದ ಕಾರನ್ನು ಪಕ್ಕಕ್ಕೆ ಚಲಾಯಿಸಿ ಪಾರು ಮಾಡಿದರು. ‘ಸುಬ್ಬಿ, ದೇಶಪ್ರೇಮದ ಸುದ್ದಿ ತೆಗೆದ್ರೆ ಹೀಗೇ ಆಗೋದು ನೋಡು. ಇವತ್ತು ದೇಶಪ್ರೇಮ ತುಂಬ ಆಯಾಮಗಳನ್ನು ಪಡೆದುಕೊಂಡಿದೆ’ ಎಂದಾಗ, ಢವಗುಟ್ಟುತ್ತಿದ್ದ ಎದೆ ಹಿಡಿದುಕೊಂಡು ನಿಟ್ಟುಸಿರು ಬಿಟ್ಟರು ಸುಬ್ಬಮ್ಮ.

ಮನೆ ಸೇರಿದ ಮೇಲೆ ಬಿಸಿಬಿಸಿ ಮುದ್ದೆ, ಸೊಪ್ಸಾರು ಮಾಡಿ, ಗಂಡನಿಗೆ ಅಂಗಡಿಯಿಂದ ‘ಪಿಜ್ಜಾ- ಬರ್ಗರ್’ ತರಿಸಿಕೊಟ್ಟು ‘ನಿಮ್ಮ ಗ್ರಹಚಾರ, ತಿನ್ನಿ’ ಎಂದರು ಸುಬ್ಬಮ್ಮ. ‘ಅಲ್ಲಾರೀ ಮುಖ್ಯಮಂತ್ರಿಗಳ ಜೊತೆಗೆ ಗ್ರಾಮ ವಾಸ್ತವ್ಯಕ್ಕೆ ಹೋಗಿರುವವರದು ಎಂಥಾ ಅದೃಷ್ಟ ಅಲ್ವೇ? ಅವರ ಪರಿವಾರದ ಜೊತೆ ಇದ್ದವ್ರಿಗೂ ಮೊಳಕೆ ಕಾಳು, ಹುರುಳಿ ಸಾರು, ಬಸ್ಸಾರು, ಮಸೊಪ್ಪು, ಮುದ್ದೆ ಎಲ್ಲ ಸ್ಪೆಷಲ್ ಆಗಿ ಸಿಕ್ತದೆ’ ಎಂದರು.

‘ಅಯ್ಯೋ ಪೆದ್ದಿ, ಅಮೆರಿಕದಲ್ಲಿ ಸೇರ್ಕೊಂಡು ಯಾವ ಸುದ್ದಿಯೂ ನಿನಗೆ ಗೊತ್ತಾಗಲಿಲ್ವೇ? ಅಲ್ಲೇ ನಿನಗೆ ಸಿಕ್ತಿದ್ರು ಮುಖ್ಯಮಂತ್ರಿ. ಈಗ ಗ್ರಾಮ ವಾಸ್ತವ್ಯ ಮುಗಿಸಿ ಸೀದಾ ವಿದೇಶಕ್ಕೆ ಹೋಗಿದಾರೆ’ ಎಂದಾಗ ‘ಹೌದೇ? ಆದರೆ...’ ಎಂದು ಏನೋ ಹೇಳಲು ಹೊರಟ ಸುಬ್ಬಮ್ಮ, ಅಚ್ಚರಿಯಿಂದ ತೆರೆದ ಬಾಯಿಯನ್ನು ಬಹಳ ಹೊತ್ತುಮುಚ್ಚಲೇ ಇಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.