ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದಿ ಮತ್ಸರ!

Last Updated 29 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

‘ಗುರೂ, ಸವತಿ ಮತ್ಸರಕ್ಕೂ ಸವದಿ ಮತ್ಸರಕ್ಕೂ ಏನು ವ್ಯತ್ಯಾಸ?’

‘ಎರಡೂ ಒಂದೇ ಕಣಲೆ, ಈಗ ಗಂಗೇನ ಶಿವ ತಲೆ ಮೇಲೆ ಕೂರಿಸ್ಕಂಡ ಅಂತ ಗೌರಿಗೆ ಸವತಿ ಮತ್ಸರ. ಕೃಷ್ಣನು ರುಕ್ಮಿಣಿಗೆ ಪಾರಿಜಾತ ಮರ ತಂದುಕೊಟ್ಟ ಅಂತ ಸತ್ಯಭಾಮೆಗೆ ಸವತಿ ಮತ್ಸರ. ಹಂಗೆ ಗೆದ್ದವರನ್ನೆಲ್ಲ ಬಿಟ್ಟು ಸೋತ ಲಕ್ಷ್ಮಣ ಸವದಿ ಅವರಿಗೆ ಪಟ್ಟ ಕಟ್ಟಿದ್ರಲ್ಲ ಅಂತ ಉಳಿದವರಿಗೆಲ್ಲ ಮತ್ಸರ, ಸರೀನಾ?’

‘ಅಲ್ಲ, ಇಬ್ಬರ ನಡುವೆ ಸವತಿ ಮತ್ಸರ ಇರೋದು ಕೇಳಿದ್ದೆ. ಇದೇನಿದು ಒಬ್ಬರ ಮೇಲೆ ಇಷ್ಟೊಂದು ಜನರ ಮತ್ಸರ?’

‘ಅಧಿಕಾರ ಕಣಯ್ಯ. ಸಿಂಹಾಸನ ಸಿಗಲಿಲ್ಲ ಅಂದ್ರೆ ಎಲ್ಲರೂ ಅಷ್ಟೆ. ತಿರುಗಿ ಬೀಳ್ತಾರೆ, ಮತ್ಸರ ಪಡ್ತಾರೆ. ಈಗ ಯಡ್ಯೂರಪ್ಪ ರಾಮ ಆದ್ರೆ ನಾನು ಹನುಮಂತ ಅಂತ ಹೇಳ್ತಿದ್ದ ‘ಹೊನ್ನಾಳಿ ಹುಲಿ’ ಏನ್ಮಾಡ್ತು? ರಾಮನಿಗೇ ತಿರುಗಿ ಬೀಳಲಿಲ್ವಾ? ನನ್ನ ಎದೆ ಬಗೆದ್ರೆ ಅಲ್ಲಿ ಸಿದ್ದರಾಮಯ್ಯ ಕಾಣ್ತಾರೆ ಅಂದಿದ್ದೋರೊಬ್ರು ರಾತ್ರೋರಾತ್ರಿ ಓಡಿ ಹೋಗಿ ಈಗ ಅನರ್ಹರಾಗಿ ಕೂತಿಲ್ವ? ಇದೂ ಹಂಗೇ... ಅಧಿಕಾರ ಮತ್ಸರ!’

‘ನೀ ಹೇಳೋದು ನಿಜ ಅನ್ನು. ಶ್ರೀರಾಮನಿಗೆ (ಶ್ರೀರಾಮುಲು) ಪಟ್ಟ ಕಟ್ತೀನಿ ಅಂತ ಮಾತು ಕೊಟ್ಟು ಈಗ ಲಕ್ಷ್ಮಣನಿಗೆ (ಸವದಿ) ಪಟ್ಟ ಕಟ್ತಾರೆ ಅಂದ್ರೆ ಇದೆಂಥ ರಾಮಾಯಣ?’

‘ಹೊಸ ರಾಮಾಯಣ! ಅಂಥ ಶ್ರೀರಾಮನಿಗೇ ಪಟ್ಟ ತಪ್ಪಿದ ಮೇಲೆ ಮತ್ಸರ ಪಡೋದ್ರಲ್ಲಿ ಯಾವ ತಪ್ಪಿಲ್ಲ ಬಿಡು’.

‘ಗೊತ್ತಾಯ್ತು? ಇದಕ್ಕೇ ಸವದಿ ಮತ್ಸರ ಅನ್ನೋದು. ಆದ್ರೆ ನನ್ನ ಪ್ರಕಾರ ಇದಕ್ಕಿಂತ ಸವತಿ ಮತ್ಸರ ದೊಡ್ಡದು. ಹೆಂಡ್ತೀರ ಕಾಟ ಕಷ್ಟ ಕಷ್ಟ...’

ಅಷ್ಟರಲ್ಲಿ ಒಳಗಿನಿಂದ ಹೆಂಡತಿ ಕೂಗು ‘ರೀ... ಏನ್ರೀ ಅದೂ ಸವತಿ ಗಿವತಿ ಅಂತಿದೀರಾ? ಏನ್ಸಮಾಚಾರ?’

‘ಏನಿಲ್ಲ ಕಣೆ, ತೆಪರೇಸಿ ಬಂದಿದ್ದ, ಶ್ರೀರಾಮಚಂದ್ರ ನನ್ನ ಹಾಗೆ ಏಕಪತ್ನೀವ್ರತಸ್ಥ, ಸೀತೆಗೆ ಯಾರೂ ಸವತಿಯರಿರಲಿಲ್ಲ ಅಂತ ಹೇಳ್ತಿದ್ದೆ ಅಷ್ಟೇ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT