ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವರ್ಷದ ವ್ಯಕ್ತಿ!

Last Updated 31 ಡಿಸೆಂಬರ್ 2020, 19:45 IST
ಅಕ್ಷರ ಗಾತ್ರ

‘ಎಲ್ರಿಗೂ ಹ್ಯಾಪಿ ನ್ಯೂ ಇಯರ್ ಕಣ್ರಲೆ, ಇವತ್ತು ಎಷ್ಟ್ ಬೇಕಾದ್ರು ತಿಂಡಿ ತಿನ್ರಿ, ಚಾ ಕುಡೀರಿ. ಬಿಲ್ ನಂದೇ’ ಎಂದ ತೆಪರೇಸಿ.

‘ಲೇಯ್, ಗ್ರಾಮ ಪಂಚಾತಿ ಎಲೆಕ್ಷನ್‍ನಲ್ಲಿ ಗೆದ್ದ ಮೇಲೆ ಎಣ್ಣೆ ಪಾರ್ಟಿ ಕೊಡಿಸ್ಬೇಕು... ಜುಜುಬಿ ನಿನ್ ಚಾ ಯಾವನಿಗೆ ಬೇಕು ಹೋಗಲೆ’ ದುಬ್ಬೀರ ತಲೆ ಒಗೆದ.

‘ಹೌದಾ? ಎಲೆಕ್ಷನ್ ಗೆದ್ನಾ? ನಿನಗ್ಯಾರು ವೋಟ್ ಹಾಕಿದ್ರೋ ತೆಪರಾ?’ ಗುಡ್ಡೆಗೆ ಆಶ್ಚರ್ಯ.

‘ಅದು ಗೊತ್ತಿಲ್ವ? ತೆಪರ ಎಲ್ಲರ ಮನೆಗೂ ಸಣ್ಣ ಬೆಳ್ಳಿ ದೀಪ ಕೊಟ್ಟು ‘ಇದು ಸಾಮಾನ್ಯ ಅಲ್ಲ, ದೇವರ ದೀಪ, ನಂಗೆ ವೋಟ್ ಹಾಕದಿದ್ರೆ ನಿಮ್ಮನೆ ದೀಪ ಆರಿ ಹೋಗ್ತತಿ ನೋಡ್ರಿ’ ಅಂತ ಹೆದರಿಸಿದ್ನಂತೆ. ಪಾಪ, ಜನ ಹೆದರಿ ವೋಟ್ ಹಾಕಿದ್ರು. ಇವ್ನು ಗೆದ್ದ, ಮೂಗುತಿ ಕೊಟ್ಟೋನು ಮಕಾಡೆ ಬಿದ್ದ’ ದುಬ್ಬೀರ ವರದಿ ಒಪ್ಪಿಸಿದ.

‘ಹೌದಾ? ನೀನೂ ಬಾಳ ಛತ್ರಿ ಬಿಡಲೆ ತೆಪರ. ಎಷ್ಟ್ ನಾಟ್ಕ ಮಾಡ್ತೀಲೆ? ಒಂದ್ಸಲ ಟಿ.ವಿ. ರಿಪೋಟ್ರು ಅಂತಿ, ಇನ್ನೊಂದ್ಸಲ ಗುಜರಿ ವ್ಯಾಪಾರಿ ಅಂತಿ, ಮತ್ತೊಂದ್ಸಲ ಕವಿ ಅಂತಿ, ಈಗ ರಾಜಕಾರಣಿನಾ? ನಿನ್ನ ‘ವರ್ಷದ ವ್ಯಕ್ತಿ’ ಮಾಡ್ಬೇಕು ಕಣಲೆ’ ಗುಡ್ಡೆ ಕಾಲೆಳೆದ.

‘ವರ್ಷದ ವ್ಯಕ್ತಿನಾ? ಇವನು ವರ್ಷದ ವ್ಯಕ್ತಿ ಆದ್ರೆ ‘ವರ್ಷದ ಕಾಯಿಲೆ’ ಕೊರೊನಾ ಅಲ್ವ?’

‘ಹೌದು ಮತ್ತೆ, ಮತ್ತಿನ್ಯಾವುದು? ಈಗ ನಂದೊಂದ್ ಪ್ರಶ್ನೆ, ‘ವರ್ಷದ ಸೊಪ್ಪು’ ಯಾವುದು ಹೇಳ್ರಲೆ ನೋಡಣ’ ಗುಡ್ಡೆ ಸವಾಲು ಹಾಕಿದ.

‘ಸೊಪ್ಪಾ? ಅದೆಂಥದಲೆ?’ ತೆಪರೇಸಿ ಕೇಳಿದ.

‘ಕೊತ್ತಿಮಿರಿ ಸೊಪ್ಪೋ ತೆಪರ...’ ಗುಡ್ಡೆ ಜೋರಾಗಿ ನಕ್ಕ.

‘ಓ ಅದಾ? ಹಂಗಾದ್ರೆ ನಂದೂ ಒಂದು ಪ್ರಶ್ನೆ. ಈಗ ‘ವರ್ಷದ ಪೌಡ್ರು’ ಯಾವುದು ಹೇಳ್ರಲೆ ನೋಡಣ’ ದುಬ್ಬೀರ ಸವಾಲು ಹಾಕಿದ.

‘ಗೊತ್ತು ಬಿಡಲೆ, ಮಿಣಿಮಿಣಿ ಪೌಡ್ರು ತಾನೆ?’ ಗುಡ್ಡೆ ಉತ್ತರಕ್ಕೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT