ಸೋಮವಾರ, ಮಾರ್ಚ್ 1, 2021
19 °C

ಸೀಡಿ ಎಫೆಕ್ಟ್!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಬ್ರೇಕಿಂಗ್ ನ್ಯೂಸ್ ಚಾನೆಲ್ ಪತ್ರಕರ್ತ ತೆಪರೇಸಿ ಮೈ ಕೈಗೆಲ್ಲ ಬ್ಯಾಂಡೇಜ್ ಕಟ್ಕೊಂಡು, ತಲೆ ಮೇಲೆ ಟವೆಲ್ ಹಾಕ್ಕಂಡು ಹರಟೆಕಟ್ಟೆಯಲ್ಲಿ ಕೂತಿದ್ದ. ಸ್ನೇಹಿತರೆಲ್ಲ ‘ಯಾಕೋ ಏನಾಯ್ತೋ?’ ಎಂದು ವಿಚಾರಿಸಿದರು. ತೆಪರೇಸಿ ಮಾತಾಡಲಿಲ್ಲ. ಗುಡ್ಡೆ ಮಾತ್ರ ಒಳಗೇ ನಗುತ್ತ ‘ಇದು ಸೀಡಿ ಎಫೆಕ್ಟ್ ಕಣ್ರಲೆ’ ಅಂದ.‌

‘ತ್ರೀಡಿ ಎಫೆಕ್ಟ್ ಅಂತ ಕೇಳಿದ್ವಿ, ಇದ್ಯಾವುದಿದು ಸೀಡಿ ಎಫೆಕ್ಟು?’ ಪರ್ಮೇಶಿ ಕೇಳಿದ.

‘ಅದು ತೆಪರೇಸಿ ಸ್ಫೋಟಕ ಸೀಡಿ ತೋರ್ಸೋಕೆ ಹೋಗಿ ಆದ ಎಫೆಕ್ಟು...’

‘ಲೇಯ್, ಅದೇನ್ ಸರಿಯಾಗಿ ಬಿಡಿಸಿ ಹೇಳಲೆ’ ದುಬ್ಬೀರನಿಗೆ ಕುತೂಹಲ.

‘ಏನಿಲ್ಲ, ಮೊನ್ನೆ ಯಾರೋ ರಾಜಕಾರಣಿ ಸೀಡಿ ಬಗ್ಗೆ ಪೇಪರ್‍ನಲ್ಲಿ ಬಂದಿರ್‍ಲಿಲ್ವಾ? ಅದು ತನ್ನತ್ರ ಐತೆ ತೋರುಸ್ತೀನಿ ಅಂತ ಈ ತೆಪರ ತನ್ನ ಚಾನೆಲ್ ಟಿ.ಆರ್.ಪಿ ಹೆಚ್ಚುಸ್ಕಳಾಕೆ ನೋಡಿದ್ನಂತೆ. ‘ರಾಜ್ಯ ರಾಜಕಾರಣದ ಸ್ಫೋಟಕ ಸೀಡಿಯಲ್ಲಿ ಏನಿದೆ ಗೊತ್ತಾ? ಅದ್ರಲ್ಲಿರೋ ಮಹಿಳೆ ಯಾರು ಗೊತ್ತಾ? ನೋಡೋಕೂ ಅಸಹ್ಯಕರ ದೃಶ್ಯಗಳಿವೆ, ನಮ್ಮಲ್ಲಿ ಮಾತ್ರ ಲಭ್ಯ... ಸಂಜೆ ಏಳಕ್ಕೆ ಮಹಾಸ್ಫೋಟ...’ ಅಂತ ಇಡೀ ದಿನ ಲೈನ್ ಬಿಟ್ನಂತೆ.

ಕೆಳಗೆ ಭುಗ ಭುಗ ಬೆಂಕಿ, ರುಮ ರುಮ ಸೌಂಡು. ಜನಕ್ಕೆ ಕುತೂಹಲ. ತೆಲಿ ಕೆಟ್ಟು ಏಳು ಗಂಟೆಗೆ ಎಲ್ರೂ ಟೀವಿ ಮುಂದೆ ಕೂತ್ರಂತೆ...’

‘ಹೌದಾ? ಇವ್ನು ಸೀಡಿ ತೋರಿಸಿದ್ನಾ?’

‘ತೋರಿಸಿದ್ನಂತೆ. ಅದನ್ನ ನೋಡಿ ಜನ ಎಲ್ಲ ಇವನ ಆಫೀಸಿಗೆ ನುಗ್ಗಿ ಇಂಗೆ ಹಿಗ್ಗಾಮುಗ್ಗಾ ಇಕ್ಕಿದ್ರಂತೆ’.

‘ಯಾಕೆ?’

‘ಯಾವುದೋ ಬ್ಲರ್ ಆಗಿರೋ ಸುಳ್ಳು ಸೀಡಿ ತೋರ್ಸಿದ್ನಂತೆ. ಒಳಗಿರೋರು ಯಾರು, ಏನು ಒಬ್ರಿಗೂ ಮುಖ ತಿಳೀತಿದ್ದಿಲ್ಲಂತೆ. ಒರಿಜಿನಲ್ ಎಲ್ಲಿ ಅಂದ್ರೆ, ಇದೇ ಒರಿಜಿನಲ್ಲು ಅಂದ್ನಂತೆ...’

‘ಸರಿ ಬಿಡು, ಇವನಿಗೆ ಇಂಗೆ ಹಿಗ್ಗಾಮುಗ್ಗಾ ಇಕ್ಕಿದಾರಲ್ಲ ಇದನ್ನ ಏನಂತ ಕರೀಬಹುದು?’

‘ಇಕ್ಕಿಂಗ್ ನ್ಯೂಸ್ ಅಂತ ಕರೀಬಹುದು’ ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.