ಶನಿವಾರ, ಜನವರಿ 18, 2020
19 °C

ತೆನೆ ಶಾಸ್ತ್ರ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಸಂಪುಟ ವಿಸ್ತರಣೆ ಬಗ್ಗೆ ಏನಾದರೂ ಬಿಗ್ ಬ್ರೇಕಿಂಗ್ ಸಿಗಬಹುದು ಎಂದುಕೊಂಡು ಬೆಳ್ಳಂಬೆಳಿಗ್ಗೆ ‘ರಾಜಾಹುಲಿ’ಯ ಮನೆಗೆ ಹೋದ ಪತ್ರಕರ್ತ ತೆಪರೇಸಿಗೆ ಅಲ್ಲಿ ಅರ್ಹ ಶಾಸಕರಿಗಿಂತ ಗುರೂಜಿ, ಜ್ಯೋತಿಷಿಗಳೇ ಇದ್ದದ್ದು ಕಂಡುಆಶ್ಚರ್ಯವಾಯಿತು. ‘ಏನಿವತ್ತು ವಿಶೇಷ? ಸಂಪುಟ ವಿಸ್ತರಣೆಗೆ ಮುಹೂರ್ತ ಇಟ್‍ಕೊಡೋಕೆ ಬಂದಿದೀರಾ?’ ವಿಚಾರಿಸಿದ.

‘ಸಂಪುಟ ವಿಸ್ತರಣೆ ಅಲ್ಲ, ಸಂಕಟ ನಿವಾರಣೆಗೆ, ರಾಜಾಹುಲಿ ನೆಮ್ಮದಿಗೆ ಹೋಮ, ಹವನ, ಯಜ್ಞ ಮಾಡೋಕೆ ಬಂದಿದೀವಿ’ ಅವರಲ್ಲೊಬ್ಬರು ವಿವರಿಸಿದರು.

‘ಓ ಹೌದಾ? ಏನೇನು ಮಾಡಲಿದ್ದೀರಿ?’

‘ಶಾಶ್ವತ ಶತ್ರು ನಾಶ ಹೋಮ, ಪುತ್ರ-ಪೌತ್ರ ಅಧಿಕಾರ ಪ್ರಾಪ್ತಿ ಹೋಮ, ಸಂಪುಟ ಸಂಕಟ ನಿವಾರಣಾ ಯಾಗ, ಡಿಸಿಎಂ ಡಿಶುಂ ಪರಿಹಾರ ಯಾಗ, ‘ಸಂತೋಷ’ ಹಸ್ತಕ್ಷೇಪ ತಡೆ ಶಾಂತಿ ಯಾಗ, ಸಂಪೂರ್ಣ ಹೈಕಮಾಂಡ್ ಅನುಗ್ರಹ ಪ್ರಾಪ್ತಿ ಹೋಮ... ಇತ್ಯಾದಿ’. ಇಲ್ಲಿ ಸುದ್ದಿಗಿಂತ ಹೊಗೆ ಜಾಸ್ತಿ ಎಂದುಕೊಂಡ ತೆಪರೇಸಿ ಸೀದಾ ದೊಡ್ಡಗೌಡ್ರ ದೊಡ್ಡಮಗ ಅವರ ಮನೆ ಕಡೆ ಹೊರಟ. ಅಲ್ಲಿ ಅವರ ಮನೆ ಮುಂದೆ ಒಬ್ಬ ‘ತೆನೆಶಾಸ್ತ್ರ’ ಅಂತ ಬೋರ್ಡ್ ಇಟ್ಟುಕೊಂಡು ಕೂತಿದ್ದು ಕಂಡು ಕುತೂಹಲಗೊಂಡು ‘ಅಲ್ಲರೀ, ನಾನು ಈ ಗಿಳಿಶಾಸ್ತ್ರ, ಕವಡೆಶಾಸ್ತ್ರ, ಸಂಖ್ಯಾಶಾಸ್ತ್ರ ಕೇಳಿದ್ದೆ. ಇದ್ಯಾವುದು ತೆನೆಶಾಸ್ತ್ರ?’ ಎಂದ.

‘ಇದು ಹೊಸ ಶಾಸ್ತ್ರ ಸ್ವಾಮಿ, ಬೈ ಎಲೆಕ್ಷನ್‍ನಿಂದ ಶುರು ಮಾಡಿದೀವಿ. ಇದರ ಜೊತೆಗೆ ನಿಂಬೆಹಣ್ಣು ರೀಚಾರ್ಜ್‌ ಯಂತ್ರ, ಆಪರೇಷನ್ ಕಮಲ ತಡೆ ಯಂತ್ರ, ತೆನೆ ಪುನಶ್ಚೇತನಾ ಯಂತ್ರ ಎಲ್ಲನೂ ಮಾಡಿಕೊಡ್ತೀವಿ’ ಎಂದ ಆತ.

ಅರ್ಜೆಂಟ್ ಬಿಗ್‍ಬ್ರೇಕಿಂಗ್ ಯಂತ್ರ ಮಾಡಿಕೊಡ್ತೀಯ ಅಂತ ಕೇಳಬೇಕೆಂದುಕೊಂಡ ತೆಪರೇಸಿ, ಸೀದಾ ‘ಹೌದು ಹುಲಿಯಾ’ ಮನೆ ಮುಂದೆ ಹಾಜರಾದ. ಅವರ ಮನೆ ಮುಂದೆಯೂ ಒಬ್ಬ ಹಸ್ತ ಭವಿಷ್ಯದ ಬೋರ್ಡ್ ಇಟ್ಟುಕೊಂಡು ಕೂತಿದ್ದ. ತೆಪರೇಸಿ ಆ ಬೋರ್ಡ್‌
ನಲ್ಲಿದ್ದ ಹಸ್ತವನ್ನು ದಿಟ್ಟಿಸಿ ನೋಡಿ ‘ಇದರಲ್ಲಿ ಗೆರೆಗಳೇ ಇಲ್ಲವಲ್ಲ ಸ್ವಾಮಿ?’ ಎಂದು ಪ್ರಶ್ನಿಸಿದ.

ಅದಕ್ಕೆ ಆತ ‘ಗೆರೆಗಳೆಲ್ಲ ಹೂವುಗಳಾಗಿ ಹೋಗಿದಾವೆ ಸ್ವಾಮಿ’ ಎಂದ!

ಪ್ರತಿಕ್ರಿಯಿಸಿ (+)