ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಏನೀ ಅವ್ವೆವಸ್ಥೆ!

Published 4 ಡಿಸೆಂಬರ್ 2023, 23:32 IST
Last Updated 4 ಡಿಸೆಂಬರ್ 2023, 23:32 IST
ಅಕ್ಷರ ಗಾತ್ರ

‘ಬೆಳಗಾವಿಯಗೆ ಇದಾನಸಭೆ ಅಧಿವೇಶನ ಸುರುವಾಗಿದದಂತೆ. ನಾವೆಲ್ಲಾ ಹೋಗಮೇನ್ಲಾ?’ ತುರೇಮಣೆ ಕೇಳಿದರು.

‘ಸಾ, ಎಲ್ಲಾ ಹೋಟೇಲು, ರೆಸಾರ್ಟುಗಳು ಫುಲ್ಲಾಗ್ಯವಂತೆ. ಫುಟ್‍ಪಾತಿನಗೆ ಮಕ್ಕಳದಾ?’ ಅಂತ ಕೇಳಿದೆ.

‘ಅಲ್ಲ ಕಲಾ, ಬೆಳಗಾವಿ ಜನ ಶಾಸಕರಿಗೆ, ಮಂತ್ರಿಗಳಿಗೆ ‘ಬಲ್ರಿ ಸಾ, ಅಧಿವೇಶನದ ಟೇಮಲ್ಲಿ ಹೋಟೇಲ್ಲು, ರೆಸಾರ್ಟಿಗೆ ಹೋಗಿ ಯಾಕೆ ಕಾಸು ಕಳೀತೀರಿ. ನಮ್ಮನೇಲೆ ಉಳುಕಂಡು ನಮ್ಮ ಕಷ್ಟ ನೋಡಿ ಪರಿಹಾರ ಮಾಡಿ’ ಅಂತ ಇನ್ನಿಲ್ಲದಂಗೆ ಕೇಳಿಕ್ಯಂಡುದ್ರು. ಆದ್ರೂ ಜನನಾಯಕರು ಅಸೆಂಬ್ಲಿಯಲ್ಲಿ ಗಲಾಟೆ ಮಾಡದು ಹ್ಯಂಗೆ ಅಂತ ಕಾರಸ್ಥಾನ ಮಾಡಕ್ಕೆ ರೆಸಾರ್ಟಿಗೆ ಹೊಂಟವ್ರೆ’ ಯಂಟಪ್ಪಣ್ಣ ಸಿಡಿಯಿತು.

‘ಅದೀಯೆ, ಮಾಡೋ ಕೆಲಸ ಬುಟ್ಟು, ‘ಪಕ್ಸಕ್ಕೆ ಬರೋರೆಲ್ಲಾ ಬರ್ರಿ’ ಅಂತ ಕೈನವು, ಕಮಲದವು ಅನೌನ್ಸ್ ಮಾಡ್ತಾ ಕುಂತವೆ’ ಚಂದ್ರು ಸಿಟುಗಂಡ.

‘ಹ್ಞೂಂಕನೇಳಪ್ಪ, ಕೈ ಸರ್ಕಾರದ 60 ತಪ್ಪು ಪಟ್ಟಿ ಮಾಡ್ಯವುರಂತೆ. ಕಮಲದ್ದು ಇನ್ನೇಟದೋ? ಭ್ರೂಣಹತ್ಯೆ 4-5 ವರ್ಸದಿಂದ ನಡೀತ್ಲೇ ಇತ್ತಂತೆ’ ತುರೇಮಣೆ ದೂರಿದರು.

‘ಡಯಾಲಿಸಿಸ್ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ ಸಂಬಳಕ್ಕೆ ಪರದಾಡತಾವ್ರೆ. ಎತ್ತಿನಹೊಳೆ ರೋಡಲ್ಲಿ ಹರೀತಾ ಅದೆ, ಉತ್ತರಕನ್ನಡದೇಲಿ ನದಿ ದಾಟಕ್ಕೆ ಅಪ್ಪಂತಾ ಸೇತುವೆಗಳಿಲ್ಲ. ಸರ್ಕಾರಿ ಶಾಲೆಗಳೆಲ್ಲ ಕುಸಿದು ಬೀಳ್ತಾವೆ! ಇವು ನಾಯಕರ ಕಣ್ಣಿಗೆ ಕಾಣ್ತಿಲ್ವಾ?’ ನಾನು ಸೇರಿಸಿದೆ.

‘ಇವು ಕಲಿತಿದ್ದು ಬುಡೀಕಿಲ್ಲ ಕಯ್ಯ. ‘ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡೋಕ್ಕೆ ನಾವು ಬದ್ಧ’ ಅಂದದೆ ಸಿದ್ದರಾಮಣ್ಣ. ಆದರೆ ವಾಣಿವಿಲಾಸ ಆಸ್ಪತ್ರೇಲಿ ಜಿರಳೆ ಸಂತೆಯಂತೆ ಕಲಾ. ಇವು ಯಾವ ಪಕ್ಸದ ಜಿರಳೆಗಳೋ ನಾನು ಕಾಣೆ!’ ಅಂದರು ತುರೇಮಣೆ.

‘ಸಿಮೆಂಟು ರೋಡು ಹತ್ತೊರ್ಸ ಬಾಳಿಕೆ ಬತ್ತದೆ ಅಂತ ಹೋದೊರ್ಸ ಪುಂಗಿದ್ರಲ್ಲಾ, ಅವು ಒಂದೊಂದಾಗಿ ಕಿಸ್ಕಂಡು ಬೀಳ್ತಾ ಅವೆ. ಯಾವ ಪಕ್ಸವೂ ಇದರ ಬಗ್ಗೆ ಉಸಿರೆತ್ತಿದ್ದೇ ಕಾಣೆ. ಏನೀ ಅವ್ವೆವಸ್ಥೆ!’ ಯಂಟಪ್ಪಣ್ಣ ಕೊರಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT