ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಖುಷಿಗೊಂದು ಗುಂಡು!

Last Updated 22 ಆಗಸ್ಟ್ 2021, 21:00 IST
ಅಕ್ಷರ ಗಾತ್ರ

ಪೇಪರೋದುತ್ತಿದ್ದ ಬೆಕ್ಕಣ್ಣ ಬಲು ಗಂಭೀರವಾಗಿ ‘ನಂಗೂ ಒಂದು ಬಂದೂಕು ಕೊಡಿಸು’ ಎಂದಿತು.

‘ಎದಕ್ಕಲೇ... ನೀಯೇನ್ ಅಫ್ಗಾನಿಸ್ತಾನಕ್ಕೆ ಹೋಕ್ಕೀಯೇನು’, ನಾನು ಗಾಬರಿಬಿದ್ದೆ.

‘ಇಲ್ಲವಾ...’ ಎಂದು ಬಾಯಿಬಾಯಿ ಬಡಿದುಕೊಂಡಿತು. ‘ಅಲ್ಲಿಗೆ ತಪ್ಪಿನೂ ಹೋಗಂಗಿಲ್ಲ. ಅಲ್ಲೋದ್ರೆ ನಾ ಹೆಣ್ಣು ಬೆಕ್ಕುಗಳ ಜೊತಿಗಿ ಆಡೂದು, ಕುಣಿಯೂದು ಎಲ್ಲ ಬಿಡಬೇಕಾಗತೈತಿ. ಒಂದೊಂದೇ ಕುಣಿಕೆ ಬಿಗಿ ಮಾಡ್ಕೋತ ನೂರಾರು ವರ್ಷ ಹಿಂದಕ್ಕೆ ಹೋಗ್ತಾರ’ ಎಂದಿತು.

‘ಮತ್ತೆ ಬಂದೂಕು ಎದಕ್ಕೆ...’

‘ಏನರ ಭಾಳ ಖುಷಿಯಾದಾಗ ಗುಂಡು ಹಾರಿಸೂಣು ಅಂತ’.

‘ಖುಷಿಯಾದಾಗ ರಾತ್ರಿ ಕುಂತು ಗುಂಡು ಹಾಕೂದು ಗೊತ್ತೈತಿ... ಇದೇನಲೇ ಗುಂಡು ಹಾರಿಸೂದು...’ ಎಂದೆ ಅಚ್ಚರಿಯಿಂದ.

‘ನಮ್ಮ ಹೊಸಾ ಗೃಹ ಸಚಿವ್ರು ಹೇಳ್ಯಾರ. ಅಗದಿ ಭಯಂಕರ ಖುಷಿಯಾದಾಗ ಗಾಳ್ಯಾಗ ಗುಂಡು ಹಾರಿಸೂ ಸಂಪ್ರದಾಯ ಮಲೆನಾಡು, ಕೊಡಗಿನ ಕಡಿಗಿ ಐತಿ ಅಂತ. ಹಳೇ ಸಂಪ್ರದಾಯ ಬಿಡಬಾರದು’.

‘ಖುಷಿಯಾಗಾಕ ಏನು ಉಳಿದೈತಲೇ... ಅಕ್ಕಿ, ಬ್ಯಾಳಿ, ತರಕಾರಿ, ಗ್ಯಾಸು, ಪೆಟ್ರೋಲು ಎಲ್ಲಾನೂ ತುಟ್ಟಿಯಾಗೈತಿ. ಜೀವನಾ ವಜ್ಜೆಯಾಗೇದ, ಕೊರೊನಾ ಇನ್ನಾ ಪೂರಾ ಹೋಗಿಲ್ಲ. ಮಕಾಡೆ ಮಲಗಿದ್ದ ವ್ಯಾಪಾರ ವಹಿವಾಟು ಈಗೊಂಚೂರು ಎದ್ದೈತಿ ಅಷ್ಟೆ, ಎಲ್ಲಾ ಸರಿಯಾಗಾಕ ಇನ್ನಾ ಎಷ್ಟು ವರ್ಷ ಆಗತೈತಿ ಗೊತ್ತಿಲ್ಲ. ನಿಮ್ಮ ಆನಂದಮಾಮಾ ಬ್ಯಾರೆ ಕುರ್ಚಿ ಕೊಡೂತನಕ ದಗದ ಮಾಡಲ್ಲಂತ ಮೂತಿ ಉಬ್ಬಿಸ್ಯಾನ. ನಾ ಹೈಕಮಾಂಡ್ ಆಜ್ಞೆ ಕೇಳಲಾ ಅಥವಾ ಕುರ್ಚಿಕ್ಯಾತೆಗಾರರ ಪ್ರಲಾಪ ಕೇಳಲಾ ಅಂತ ಬೊಮ್ಮಾಯಿ ಅಂಕಲ್ಲಿಗೆ ಚಿಂತೆಯಾಗೈತಿ. ಯಾರಿಗಿ ಖುಷಿ ಐತಿ’ ಎಂದೆ.

‘ನೀ ಏನರ ಒಂದು ಗೋಳಿನ ಪುರಾಣ ಹಚ್ಚಬ್ಯಾಡ. ಇಷ್ಟಕೊಂದು ಶಾಸಕರು ಮಂತ್ರಿ ಕುರ್ಚಿನೇ ಬೇಕಂತ ಡಿಮ್ಯಾಂಡಿಟ್ಟಾರ ಅಂದ್ರ ಅವ್ರೆಲ್ಲಾರಿಗೂ ಜನರ ಸೇವಾ ಮಾಡಾಕೆ ಎಷ್ಟು ತುಡಿತ ಐತಿ ಅಂತ ಭಾಳ ಖುಷಿಪಡಬಕು’ ಎಂದು ಕೊನೆಗೊಂದು ಮಾತಿನ ಗುಂಡು ಎಸೆಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT