ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಚಾಲುಜ್ಞಾನ

Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

‘ಕಷ್ಟ ಅನ್ನೋದು ಯಾವಾಗಲೂ ನಮ್ಮ ಬಡ್ಡೇಗೆ ಬಂದು ಅಮರಿಕ್ಯತದಲ್ಲಾ’ ಯಂಟಪ್ಪಣ್ಣ ನಿಟ್ಟುಸಿರು ಬುಟ್ಟಿತು.

‘ಸತುವಂತ್ರೆಲ್ಲಾ ಸತ್ಯಯುಗದೇಲಿ, ತ್ರೇತಾಯುಗದೇಲಿ, ದ್ವಾಪರಯುಗದೇಲಿ ಇದ್ದು ಕಡೆದು ಹೊಂಟೋದ್ರು. ಇದು ಕಲಿಗಾಲ ಕನಣೈ’ ತುರೇಮಣೆ ವಿವರಿಸಿದರು.

‘ರಾಜಕೀಯದ ಸುಳ್ಳಿನ ಅಸತ್ಯಯುಗ, ಜನರನ್ನು ಕಾಡಿಸೋ ಪ್ರೇತಾಯುಗ, ರಾಜಕೀಯದಲ್ಲೂ ಬಿಜಿನೆಸ್ ಮಾಡೋ ವ್ಯಾಪಾರಯುಗ, ಜನರನ್ನ ಸುಲಿಯೋ ಸುಲಿಯುಗ ದಿನಪರ್ತಿ ನಡೆಯುತ್ತೆ ಕನ್ರೋ’ ಅಂತು ಯಂಟಪ್ಪಣ್ಣ.

‘ಅಲ್ಲಾ ಕನಣೈ, ನೀವೇನು ಕಾಲಜ್ಞಾನ ಹೇಳ್ತಿದೀರ ಹ್ಯಂಗೆ?’ ಅನುಮಾನದೇಲಿ ಕೇಳಿದೆ.

‘ಹ್ಞೂಂ ಕಯ್ಯಾ, ಇದು ರಾಜಕೀಯದ ಕಾಲುಜ್ಞಾನ! ಎಲೆಕ್ಷನ್ ಹತ್ತಿರಾಯ್ತಿದ್ದಂಗೇ ಅತ್ಲಿಂದ ಇತ್ಲಗೆ ಇತ್ಲಿಂದ ಅತ್ಲಗೆ ಕಾಲಾಡೋ ಪಕ್ಷಾಂತರದ ಕಾಲುಜ್ಞಾನ’ ಅಂತ ತುರೇಮಣೆ ಬುಸುಗರೆದರು.

‘ಇದು ಕಾಲುಜ್ಞಾನ ಮಾತ್ರವಲ್ಲ, ಚಾಲುಜ್ಞಾನವೂ ಹೌದು ಕನ್ರೋ. ಪಕ್ಷಾಂತರಿಗಳು ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಅನ್ನೋ ಚಾಲುಗಲಿತವ್ರೆ’ ಅಂತು ಯಂಟಪ್ಪಣ್ಣ.

‘ಹೌದು ಕನಣೈ, ವ್ಯವಸ್ಥೆ ಜಡ್ಡು ಹಿಡಿದು ಹೋಗ್ಯದೆ. ಮೂರು ಸಾರಿ ಶಾಸಕರಾಗಿ ಗೆದ್ದೋರು, ಅವರ ಸಂತಾನ ಮತ್ತೆ ಎಲೆಕ್ಷನ್ನಿಗೆ ನಿಲ್ಲಂಗುಲ್ಲ, ನಿಗಮ-ಮಂಡಲಿಗಳಲ್ಲಿ ಕಾರ್ಯಕರ್ತರಿಗೆ ಮಾತ್ರ ಅಂತ ಕಾನೂನು ಮಾಡಬಕು’ ಚಂದ್ರು ಸಿಟ್ಟಾದ.

‘ಪಕ್ಷಾಂತರದ ಕಾಲುಜ್ಞಾನದ ಅಡಾವುಡೀಲಿ ಬಡಭರತರ ಹೆಸರುಬಲಕ್ಕೆ ಗೋಚಾರಫಲ ಯಂಗದೆ ಸಾ?’ ಅಂತ ತುರೇಮಣೆಗೆ ಪ್ರಶ್ನಿಸಿದೆ.

‘ಅಧಿಕಾರದಲ್ಲಿರೋರ ಸ್ವಂತ ಅಭಿವೃದ್ಧಿ ಬುಟ್ರೆ ಬೇರೆ ಏನೂ ನಡೀತಿಲ್ಲ. ಎಲ್ಲ ಪಕ್ಷಗಳೂ ಅಧಿಕಾರ ತಕ್ಕಂಡೇ ತಕ್ಕಬೇಕು ಅಂತ ಜನಕ್ಕೆ ಮಂಕುಬೂದಿ ಎರಚಲು ಕಾದು ನಿಂತವೆ. ಈ ಹುನ್ನಾರ ಅರೀದ ಜನ ಪುಗಸಟ್ಟೆ ಸಿಕ್ಕೋ ಫಾಯ್ದೆಗಳ ಬೆಲ್ಲದನ್ನದ ಖುಷಿ ಅನುಭವಿಸೋದ್ರಲ್ಲೇ ಬಿಜಿಯಾಗವ್ರೆ’ ಅಂತ ವಿವರಣೆ ಕೊಟ್ಟರು.

‘ಹೌದೇಳ್ರಿ ಸಾ, ರಾಜಕೀಯದ ಚಾಲುಜ್ಞಾನದೇಲಿ ನ್ಯಾಯ-ನೀತಿ ಗೈರುವಿಲೆ ಆಗೋಗ್ಯದೆ, ಯಾವುದೂ ಊರ್ಜಿತ ಆಯ್ತಿಲ್ಲ’ ಅಂತ ನಿಟ್ಟುಸಿರುಬುಟ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT